ಸ್ವಚ್ಚ ಭಾರತದ ನಿಜವಾದ ರೂವಾರಿಗಳು ಪೌರ ಕಾರ್ಮಿಕರು

ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಸರಿಯಾದ ಕೂಲಿ ಕೊಡದೆ ಇದ್ದರೂ ಭಾರತ ಮಾತ್ರ ಡಿಜಿಟಲ್ ಇಂಡಿಯಾದತ್ತ ಸಾಗಬೇಕೆಂದು  ನಮ್ಮ ನಾಯಕರು ಒದರುತ್ತಿರುತ್ತಾರೆ

ಸ್ವಚ್ಚ ಭಾರತದ ನಿಜವಾದ ರೂವಾರಿಗಳು ಪೌರ ಕಾರ್ಮಿಕರು

ಸ್ವಚ್ಛ ಭಾರತ  ಅಭಿಯಾನ ಎಂಬ ಘೋಷಣೆ ದೇಶಾಂದ್ಯತ ಮೊಳಗಿದ್ದು ಕೇಳಿದ್ದೇವೆ. ಆ ಸ್ವಚ್ಛ ಭಾರತದ ಗಾಳಿ ದೇಶದೆಲ್ಲೆಡೆಯೂ ಬೀಸಿತ್ತು.  ಇಡೀ ಭಾರತವನ್ನು ಗುಡಿಸಿ ಸ್ವಚ್ಛವಾಗಿಟ್ಟ ನಿಜವಾದ ಕಾಯಕ ಜೀವಿಗಳಿಗೆ ಈ ದೇಶದಲ್ಲಿ ಯಾವ ಸ್ಥಾನಮಾನವಿದೆ, ಅವರ ಆ ಕಾಯಕಕ್ಕೆ ಅವರಿಗೆ ಕೊಡುತ್ತಿರುವ ಸಂಬಳವೆಷ್ಟು.. ಆ ಸಂಬಳ ಅವರ ಕೈಗೆ ಸರಿಯಾದ ಸಮಯಕ್ಕೆ ತಲುಪುತ್ತಿದೆಯಾ…?  ಈ ಎಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ದೇಶವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.  ಪೌರ ಕಾರ್ಮಿಕ ಮಹಿಳೆಯರು ಪ್ರತಿ ದಿನ ಮುಂಜಾನೆ 5 ಗಂಟೆಗೆ  ತಮ್ಮ ಹಸುಗೂಸುಗಳನ್ನು ಬಿಟ್ಟು  ಮನೆಯಿಂದ ಹೋರಗಾದ್ರೆ ಮತ್ತೆ ಮನೆ ಸೇರುವುದು ಮಧ್ಯಾಹ್ನದ ಹೊತ್ತು. ಆ ಮಕ್ಕಳು ಅಜ್ಜಿ ಆಶ್ರಯದಲ್ಲೊ ಇಲ್ಲ ಅಪ್ಪನ ಅಕ್ಕರೆಯಲ್ಲೊ ಬೆಳೆಯುತ್ತಾರೆ.  ಅಥವಾ 7, 8 ವರ್ಷದ ಹಿರಿಯ ಅಕ್ಕನೆ  ಅಮ್ಮನಾಗುತ್ತಾಳೆ.  ಗಂಡ, ಮಕ್ಕಳನ್ನು ಸೂರ್ಯ ಮೂಡುವ ಹೊತ್ತಿಗೆ ಕಣ್ಣ್ ತುಂಬಿಕೊಂಡು ಹೋಗುತ್ತಾರೆ.   ಭಾರತ ಸ್ವಚ್ಛವಾಗಿಡಲು ಬೀದಿ ಗುಡಿಸುವ ಇವರು ಕಾಯಕವೇ ಕೈಲಾಸವೆಂದು ನಂಬಿದವರು. ಈ ಪೌರ ಕಾರ್ಮಿಕರ ಕಾಯಕಕ್ಕೆ  ಸಿಕ್ಕ ಪ್ರಶಸ್ತಿ ಯಾವುದು..?  ಶ್ರಮವು ಯಾರದೊ ಫಲವು ಯಾರಿಗೊ ಎಂಬ ಹಾಡು ಇವರ ಜೀವನಕ್ಕೆ ಅರ್ಥ ಪೂರ್ಣವಾಗಿ ಹೊಂದಿಕೆ ಆಗುತ್ತೆ.

ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಸರಿಯಾದ ಕೂಲಿ ಕೊಡದೆ ಇದ್ದರೂ ಭಾರತ ಮಾತ್ರ ಡಿಜಿಟಲ್ ಇಂಡಿಯಾದತ್ತ ಸಾಗಬೇಕೆಂದು  ನಮ್ಮ ನಾಯಕರು ಒದರುತ್ತಿರುತ್ತಾರೆ.  

ಅದೆಷ್ಟೋ ಪೌರ ಕಾರ್ಮಿಕರು ಮ್ಯಾನ್ ಹೋಲ್  ಶುಚಿಗೊಳಿಸಲು ಹೋಗಿ ವಿಷಾನಿಲದಿಂದ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಲೆಕ್ಕವಿಲ್ಲದಷ್ಟಿದೆ. ಇಂತಹ  ಘಟನೆಗಳು ದೇಶದಲ್ಲಿ  ಹೆಚ್ಚುತ್ತಲೇ ಇವೆ. ಮ್ಯಾನ್ ಹೋಲ್ ಶುಚಿಗೊಳಿಸಲು ಆಧುನಿಕ ತಂತ್ರಜ್ಞಾನದ ಯಂತ್ರಗಳಿದ್ದರೂ ಅವುಗಳನ್ನು ಬಳಸದೆ ಮನುಷ್ಯರನ್ನೇ ಯಂತ್ರಗಳಂತೆ ಬಳಸಿಕೊಳ್ಳುತ್ತಿದ್ದಾರೆ.   

ಬಡತನದಲ್ಲಿ ಬೆಂದು ಬೆಂಡಾದ ಪೌರ ಕಾರ್ಮಿಕರು ದುಡ್ಡಿನ 500 ಅಥವಾ 1000 ರೂ ಆಸೆಗೆ ಪ್ರಾಣದ ಭಯ ತೊರೆದು ಮ್ಯಾನ್ ಹೋಲ್ ನಂತಹ ಯಮರಾಯನ ಮನೆಗೆ ಹೋಗಲು ಸಿದ್ಧರಾಗಿ ಪ್ರಾಣ ಕಳೆದುಕೊಂಡು. ಕೊನೆಗೆ ಹೆಂಡತಿ ಮಕ್ಕಳನ್ನು ಅನಾಥ ಮಾಡಿ ಜೀವನದ ಕಡೆಯ ಯಾತ್ರೆಯನ್ನು ಮುಗಿಸಿಕೊಂಡು ಮಣ್ಣಲ್ಲಿ ಮಣ್ಣಾಗುತ್ತಾರೆ.

ಇತ್ತ ಕಡೆ ನಮ್ಮ ದೇಶ ಆಳುವ ನಾಯಕ ಎಲ್ಲರ ಚಿತ್ತ ತಮ್ಮತ್ತ ಸೆಳೆಯಲು ಪೌರ ಕಾರ್ಮಿಕರ ಕಾಲು ತೊಳೆದು ಮಿಂಚುತ್ತಾರೆ.  ಪೌರ ಕಾರ್ಮಿಕ ತಾಯಂದಿರ ಸೇವೆ ಅನನ್ಯವಾದದ್ದು ಎಂದು ಹಾಡಿ ಹೊಗಳಿ ಮರುದಿನ ಮರೆತು ಬಿಡುತ್ತಾರೆ.  ಪೌರ ಕಾರ್ಮಿಕರಿಗೆ  ಸಿಗಬೇಕಿರುವ  ಸೌಲಭ್ಯಗಳನ್ನು ಒದಗಿಸದೆ. ತಮ್ಮ ಬಣ್ಣದ ಮಾತುಗಳಿಂದಲೆ ಮನಸಿಗೆ ಮುಟ್ಟುವ ಮಾತುಗಳನ್ನಾಡಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಬಹಳ ವ್ಯವಸ್ಥಿತವಾಗಿಯೇ ಮಾಡಿಕೊಂಡು ಬರುತ್ತಾರೆ.

ಸ್ವಚ್ಛ ಭಾರತ ಅಭಿಯಾನದಲ್ಲಿ” ಬಯಲು ಮುಕ್ತ ಶೌಚಾಲಯ” ಎಂಬ ಯೋಜನೆ ಎಷ್ಟು ಜನರ ಮನೆಯ ಬಾಗಿಲಿಗೆ ತಲುಪಿವೆ? ಎಷ್ಟು ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣವಾಗಿ.  ಎಷ್ಟರ ಮಟ್ಟಿಗೆ ಜನರು ಶೌಚಾಲಯವನ್ನು ಬಳಸುತ್ತಿದ್ದಾರೆ. ಶೌಚಾಲಯಕ್ಕೆ ಬೇಕಾದ  ಪ್ರಮಾಣದಲ್ಲಿ ನೀರು ಆ ಪ್ರದೇಶಗಲ್ಲಿ ದೊರೆಯುತ್ತದೆಯೇ.  ಶೇಕಡ ಎಷ್ಟು ಶೌಚಾಲಯಗಳು ಬಳಕೆಯಾಗುತ್ತಿದೆ. ಹೀಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಪೌರಕಾರ್ಮಿಕರ ಆರೋಗ್ಯ, ವಸತಿ ಸೌಲಭ್ಯ, ಅವರ ಮಕ್ಕಳ ವಿಧ್ಯಾಭ್ಯಾಸ ಇವೆಲ್ಲವುಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಸರ್ಕಾರ ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ನಿಜವಾದ ಸ್ವಚ್ಛ ಭಾರತದ ರೂವಾರಿಗಳು ಪೌರ ಕಾರ್ಮಿಕರೇ ಹೊರತು ಕ್ಯಾಮರಾ ಮುಂದೆ ಫೋಜ್ ಕೊಡುವ ರಾಜಕಾರಣಿಗಳಲ್ಲ.