ಮುರಿದ ಬಾಳಿನ ಸಂಕಟ ಮತ್ತು My Ordinary Love Story

ಮುರಿದ ಬಾಳಿನ ಸಂಕಟ ಮತ್ತು My Ordinary Love Story

ಒಮ್ಮೊಮ್ಮೆ ಹೀಗೂ ಆಗಿಬಿಡುತ್ತದೆ: ಏನೂ ಬರೆಯಲಾಗದ, ಓದಿದರೂ ಜೀವ ಸ್ಪಂದಿಸದ,ಮಾತುಗಳು ಒಳಕ್ಕಿಳಿಯದ ಸ್ಥಿತಿ. ಅಂತಹ ಘಳಿಗೆಯಲ್ಲಿ ನೆನಪುಗಳಿಗೆ ತಲೆಯಾನಿಸಿ ಸುಮ್ಮನಿರ ಬೇಕೆನ್ನಿಸುತ್ತದೆ. ಹೌದು ನೆನಪುಗಳು ಆ ಸಮಯದಲ್ಲಿ ಮುಲಾಮಿನಂತೆ ಸಂತೈಸ ಬಲ್ಲವು ಅಥವಾ ಮಂಕಾದ ಮನಸ್ಸಿನ ಕೆಂಡ ಉರುಬಿ ಕಾಂತಿಗೊಳಿಸಬಲ್ಲವು.

'ನನ್ನ ನೆನಪು ಬೇಗ ಬರಲಿ' ಎಂಬ ನನ್ನ ಕವಿತೆ ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ನನ್ನ ಮೊಬೈಲ್ ನಂಬರ್ ಸಹಿತ ಪ್ರಕಟವಾಗಿತ್ತು. ಯಾರೋ ಅಪರಿಚಿತರು ಕರೆ ಮಾಡಿ ಮುರಿದ ಬದುಕಿನ ಕಣ್ಣೀರ ಒರೆಸುವಂತಿದೆ ನಿಮ್ಮ ಕವಿತೆ ಎಂದರು.ನಿಜ, ಈ ಅತ್ಯಾಧುನಿಕ ಜೀವನಕ್ರಮ ನಮಗೆ ಕೊಟ್ಟಿರುವ ದೊಡ್ಡ ಬಳುವಳಿಯೆಂದರೆ ಮುರಿಯುವುದು.

ಹದಿ ವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ಈ ಅತ್ಯಾಧುನಿಕತೆ ಕಾಮನಬಿಲ್ಲಾಗಿ ಕಣ್ಣೆದುರು ಕುಣಿಯ ತೊಡಗುತ್ತದೆ.ಯಂತ್ರಗಳ ವೇಗದ ಜೊತೆಗೆ ಮನಸ್ಸಿನ ವೇಗವೂ ಸೇರಿ ಎಳಮೆಯಲ್ಲೇ ಬದುಕು ಬೇಟೆಯಾಗಿಬಿಡುತ್ತದೆ. ಒಪ್ಪೊತ್ತಿನ ಸಣ್ಣ ಪ್ರಶಾಂತತೆಗೂ ಮನಸ್ಸು ಕೊಡದೆ; ಒಳಗಿನ ಆಸೆ ಅಪೇಕ್ಷೆಗಳ ನೈಜತೆ ಅರಿಯದೆ ಸಾಮಾಜಿಕ ಮಾಧ್ಯಮಗಳ ತೆಳು ಲಹರಿಗಳಲ್ಲೇ ತೇಲಿ ಅಸೂಕ್ಷ್ಮತೆಯನ್ನೇ ರಗಡು ಬೆಳೆಯುತ್ತಿರುವ ಕಾಲವಿದು. ಯಾರದೋ ಬಿಟ್ಟಿ ಹಾಡಿನಲ್ಲೋ ಅಥವಾ ಡೈಲಾಗ್ ನಲ್ಲೋ ತಮ್ಮೊಳಗನ್ನು ಸೇರಿಸಿ, ಟಿಕ್ ಟಾಕ್ ವಿಡಿಯೋದಲ್ಲಿ ಕಣ್ಣರಳಿಸಿ,ಮುಖ ತಿರುಗಿಸಿ ಪಡೆಯಲೆತ್ನಿಸುವ ಜನಪ್ರಿಯತೆಯ ಹುಚ್ಚು ಮೋಹ ನೋಡುವಾಗೆಲ್ಲಾ ಆವರಿಸುವ ವಿಷಾದದ ಛಾಯೆ ಏನು ಮಾಡಿದರೂ ತೊಲಗುವುದಿಲ್ಲ.

ನಿನ್ನೆ ಮೊನ್ನೆ ಪ್ರೇಮಿಗಳಂತೆ ಕಂಡ ಯೌವ್ವನಿಗರು ಕೆಲ ತಿಂಗಳಲ್ಲೇ ಮಂಕು ಬಡಿದವರಾಗಿ ಮತ್ತೊಂದು ಪ್ರಯತ್ನಕ್ಕೆ ಸಿದ್ಧಗೊಳ್ಳುತ್ತಿರುತ್ತಾರೆ. ಮೊದಲ ಅನುಭವದಲ್ಲೇ ಮೆದುಳಿಗೆ ಬಿದ್ದ ಅನುಮಾನದ ಬೀಜ ಅರಿವಿಲ್ಲದಂತೆ ಮೊಳೆತು ನಿರ್ಲಕ್ಷಿಸಬಹುದಾದ ಸಂಗತಿಗಳನ್ನು ಅತಿಯಾಗಿ ಭಾವಿಸಿ ಖಿನ್ನರಾಗುತ್ತಾರೆ. ನಿರಂತರ ಅಸಮಾಧಾನ ಮತ್ತು ಅತೃಪ್ತಗೊಂಡ ಇಂತಹ ಲೋಕ ಕಾಣುವಾಗೆಲ್ಲ  "ಈ ಜಗತ್ತು ಒಂದು ಆಸ್ಪತ್ರೆ. ಇಲ್ಲಿಯ ರೋಗಿಗಳಿಗೆಲ್ಲ ತಮ್ಮ ಹಾಸಿಗೆ ಬದಲಿಸುವ ಆಸೆ. ಒಬ್ಬ ರೋಗಿಗೆ ಒಲೆಯ ಹತ್ತಿರ ಹೋದರೆ ಒಳ್ಳೆಯದನ್ನಿಸುತ್ತದೆ. ಇನ್ನೊಬ್ಬನಿಗೆ ಕಿಟಕಿಯ ಸಮೀಪದಲ್ಲಾದರೆ ಕಾಯಿಲೆ ಗುಣವಾಗುತ್ತದೆನ್ನಿಸುತ್ತದೆ.ನಾವೆಲ್ಲಿ ಇಲ್ಲವೋ ಆ ಜಾಗ ಸುಖಕರವೆಂದು ನನಗೆ ಅನ್ನಿಸುತ್ತದೆ" - ಬೋದಿಲೇರನ ಈ ಸಾಲುಗಳು ನೆನಪಾಗುತ್ತವೆ.

ಮುಗ್ಧತೆ,ಮುಂಗೋಪ,ಹತಾಶೆ,ಸೇಡು,ಕನಸು,ದುಃಖವನ್ನೊಳಗೊಂಡ ಈ ಕ್ರಿಯಾಶೀಲ ಮನುಷ್ಯನಲ್ಲಿ ಸಾಯುವವರೆಗೂ ಪ್ರೇಮ ಮತ್ತು ಕಾಮದ ಹಸಿವು ಹಿಂಗಲಾರದು. ಹಾಗಾಗಿಯೇ ನೋವಿನಲ್ಲಿ ಸುಖದಲ್ಲಿ ನೋವು! ಕೆಲವರದಂತೂ ಪಡೆದ ಒಂದೇ ಒಂದು ಬದುಕು ಗಾಯಗೊಂಡ ಚರಿತ್ರೆಯಾಗಿರುತ್ತದೆ. ಹೀಗೇ ಓಡುತ್ತಿರುವ ಲಹರಿಯಲ್ಲಿ ನಾನೆಂದೂ ನೋಡಿರದ ಕೊರಿಯನ್ ಭಾಷೆಯ ಸಿನಿಮಾ ನೋಡಿದೆ. ಆ ಸಿನಿಮಾ ನೋಡಿ ಮುಗಿಸಿ ಅದರ ಗುಂಗಿನಲ್ಲೇ ಇದ್ದಾಗ ಥಟ್ಟನೇ ನೆನಪಾದದ್ದು ಲಂಕೇಶರ 'ವಾಸ್ತವ' ಎಂಬ ಕತೆ.

ತನ್ನನ್ನು ಕಿತ್ತು ತಿನ್ನುತ್ತಿರುವ ಹಿಂಸೆಯಿಂದ ತುಸು ಬಿಡುಗಡೆ ಪಡೆಯಲು ಕತೆಯ  ನಿರೂಪಕರ ಬಳಿ ಬಂದ ವನಜಾ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಗುಮಾಸ್ತಳಾಗಿದ್ದಳು. ಅಲ್ಲಿದ್ದ ಸೊಣಕಲು ಬಾಸ್ ಪ್ರೇಮಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಕ್ಕೆ ಆತನ ವಿರುದ್ಧ ಮಂತ್ರಿಗೆ ಪತ್ರ ಬರೆದು ಅವನ ಕೆಲಸ ಕಳೆದಳು. ನಂತರ ಮತ್ತೊಬ್ಬ ಪ್ರಸಾದ್ ಎಂಬ ಬಾಸ್ ಬಂದ. ಆಕೆಯ ದೃಷ್ಟಿಯಲ್ಲಿ ಮತ್ತು ಕಚೇರಿಯ ಇತರ ಉದ್ಯೋಗಿಗಳ ದೃಷ್ಟಿಯಲ್ಲಿ ತುಂಬಾ ಸಭ್ಯ. ಮೆಲುಮಾತಿನ ಭ್ರಷ್ಟನಲ್ಲದ ಅವನ ಮೇಲೆ ಎಲ್ಲರಿಗೂ ಗೌರವ. ಆಂಧ್ರಮೂಲದವನಾದ ಆತ ತನ್ನ ಮನೆಯಲ್ಲಿನ ಶಾಸ್ತ್ರವೊಂದಕ್ಕೆ ವನಜಾಳನ್ನು ಆಹ್ವಾನಿಸಿ ಆಕೆಯನ್ನು ಎರಡನೇ ಪತ್ನಿಯಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆ ಪರಿಸ್ಥಿತಿಯಿಂದ ಹೇಗೋ ನುಣುಚಿಕೊಂಡು ಬಂದ ವನಜಾಳನ್ನು ಇಲ್ಲಸಲ್ಲದ್ದು ಸೃಷ್ಟಿಸಿ ಡಿಸ್ ಮಿಸ್ ಮಾಡಿಸುತ್ತಾನೆ. 

ವನಜಾಳ ತಂದೆ ವಕೀಲ.ದಾರಿ ಕಾಣದೆ ಹಣ ಒಡವೆ ಸೈಟು ಕೊಟ್ಟು ಒಬ್ಬ ಶ್ರೀಮಂತ ಫರ್ಟಿಲೈಸರ್ ವ್ಯಾಪಾರಿಗೆ ಮದುವೆ ಆಕೆಯನ್ನು ಮದುವೆ ಮಾಡುತ್ತಾನೆ. ಆಕೆ ಅವನ ಎರಡನೆಯ ಹೆಂಡತಿಯೆಂಬುದು ಮದುವೆಯಾದ ಮೇಲೆ ಗೊತ್ತಾಗುತ್ತದೆ. ಮದುವೆಯಾದ ಮೂರು ವರ್ಷದಲ್ಲೇ ಆಕೆಯ ಬಾಳು ನರಕವಾಗುತ್ತದೆ.ಗಂಡ ಕುಡಿದು ಬಂದು ಗಲಾಟೆ ಮಾಡುತ್ತಿರುತ್ತಾನೆ. ತನ್ನ ಮಗು,ಕೆಲಸದ ಹುಡುಗಿ ಸಣ್ಣಿಯ ಆಸರೆಯಲ್ಲಿ ನೆಮ್ಮದಿ ಕಂಡುಕೊಳ್ಳಲೆತ್ನಿಸುತ್ತಾಳೆ. ದುಃಖದಲ್ಲಿ ಜೊತೆಗಿದ್ದ ಸಂತೈಸುತ್ತಿದ್ದ ಸಣ್ಣಿಯ ಬಗ್ಗೆ ತೀರಾ ಒಳ್ಳೆಯದಾಗಿ ಯೋಚಿಸುತ್ತಾಳೆ. ತನ್ನ ಆಸ್ತಿ ಒಡವೆ ಮುಂದೆ ಆಕೆಗೇ ಕೊಟ್ಟರಾಯ್ತು ಎಂದುಕೊಳ್ಳುತ್ತಾಳೆ. ಗಂಡನೊಂದಿಗೆ ಎಷ್ಟೋ ವರ್ಷಗಳಿಂದ ಮಾತು ಬಿಟ್ಟಿದ್ದ ವನಜಾಳ ಬಳಿ ಒಂದು ಮಧ್ಯಾಹ್ನ ಬಂದ ಗಂಡ ಆಕೆ ಒಳ್ಳೆಯವಳೆಂದು ಒರಗಿದ್ದ ಸಣ್ಣಿಗೂ ಆತನಿಗೂ ಸಂಬಂಧವಿದೆ ಎಂದು ಹೇಳುತ್ತಾನೆ. ವನಜಾ ನಂಬದಿದ್ದಾಗ ಸಣ್ಣಿಯನ್ನೇ ಕರೆದು ಕೇಳುವಂತೆ ಮಾಡುತ್ತಾನೆ.ಸಣ್ಣಿ ಹೌದೆಂದಾಗ ಕತ್ತಲುಗವಿದಂತಾಗಿ ಆಕೆಯನ್ನು ಹೊಡೆಯಬೇಕೆನ್ನಿಸುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನಿಸುತ್ತದೆ. ಆದರೆ ಏನೂ ಮಾಡಿಕೊಳ್ಳದೆ ಈಗಲೂ ಸಣ್ಣಿಯೊಂದಿಗೆ,ಅದೇ ಗಂಡನೊಂದಿಗೆ ಇರುವುದಾಗಿ ಹೇಳುತ್ತಾಳೆ. ಇಡೀ ನೋವಿನ ಭಾರ ಆಕೆಯ ದನಿಯ ಮೇಲಿರುತ್ತದೆ. ಹೀಗೆ ಯಾವ ತಾಣದಲ್ಲೂ ನೆಮ್ಮದಿ ಕಾಣದ ಕಠೋರ ವಾಸ್ತವ ವನಜಾಳದ್ದು.

ಈ ಕತೆ ನೆನಪಾಗಿದ್ದು ಒಂದು ಕೊರಿಯನ್ ಸಿನಿಮಾ ನೋಡಿದ ಮೇಲೆ ಎಂದೆ. My Ordinary Love Story ಆ ಸಿನಿಮಾದ ಹೆಸರು.Lee Kwon  ಎಂಬ ದಕ್ಷಿಣ ಕೊರಿಯಾದ ತರುಣ ನಿರ್ದೇಶಕನ ನಿರ್ದೇಶನದಲ್ಲಿ ಬಂದ ಈ ಸಿನಿಮಾ 2014 ರಲ್ಲಿ  ತೆರೆ ಕಂಡದ್ದು. ಆಧುನಿಕ ಜಗತ್ತಿನ ನಗರವೊಂದರ ಮಧ್ಯಮ ವರ್ಗದ ಕುಟುಂಬದ ಹುಡುಗಿ Park Eun-Jin

ಚಿತ್ರ ಕತೆಯ ನಾಯಕಿ. ಈಕೆಯವು ಬರೋಬ್ಬರಿ ಆರು ಭಗ್ನ ಪ್ರೇಮ ಪ್ರಕರಣಗಳು.ಈಕೆ ಒಮ್ಮೆ ಮುಗ್ಧೆ ಮತ್ತೊಮ್ಮೆ ಮಹಾ ತರಲೆ: ಕೋಮಲೆ ಮತ್ತೊಮ್ಮೆ ಕೋಪಿಷ್ಠೆ. ಸ್ವಚ್ಛಂದ ಸ್ವಭಾವದ  Eun-jin ತನ್ನ ಹದಿನೆಂಟನೇ ವಯಸ್ಸಿನಲ್ಲಿ ಮೊದಲ ಪ್ರೀತಿ ಮಾಡುತ್ತಾಳೆ.ತನ್ನದು ಮೊದಲ ಪ್ರೀತಿ ಎಂದು ಈಕೆ ಹೇಳುವುದನ್ನೇ ಆ ಅಯೋಗ್ಯ ಹುಡುಗ ಲೈಂಗಿಕವಾಗಿ ಅವಹೇಳನ ಮಾಡಿ ಪೋಲಿಯಂತೆ ಕೈಕೊಡುತ್ತಾನೆ. ಎರಡನೆಯವನು ಕಾಲೇಜು ಹುಡುಗ. ಅವನ ಜೊತೆ ಸುತ್ತಾಡುತ್ತ ಕ್ಯಾಂಪಸ್ ಕಪಲ್ ರೀತಿ ಇದ್ದಾಗ ಅವನು ಮಿಲಿಟರಿ ಸೇರಲು ಹೋಗುತ್ತಾನೆ. ಅವನಿಗಾಗಿ ಎರಡು ವರ್ಷ ಈಕೆ ಕಾದರೂ ಆ ಪ್ರಕರಣವೂ ಮುರಿದು ಬೀಳುತ್ತದೆ. ದಯೆ ಪ್ರೀತಿ ಪ್ರಬುದ್ಧತೆ ಇರುವವನೆಂದು ತೋರಿದವನು ಈಕೆಯ ಪ್ರೊಫೆಸರ್. ಮದುವೆಯಾಗಿರುವುದನ್ನು ಮುಚ್ಚಿಟ್ಟಿದ್ದ ಅವನು ಮೂರನೆಯ ಪ್ರಿಯಕರ.ಅದು ಹೇಗೋ ಆತನ ಹೆಂಡತಿಗೆ ತಿಳಿದು ಕೂದಲು ಹಿಡಿದೆಳೆದಾಡಿದ ರಂಪವಾಗಿ ಮುರಿದು ಬೀಳುತ್ತದೆ. ಇನ್ನು ನಾಲ್ಕನೆಯವನು ಈಕೆಗಿಂತಲೂ ಕಿರಿಯವನಾದ ರಾಕ್ ಬ್ಯಾಂಡ್ ನುಡಿಸುವ ಹುಡುಗ. ಅವನೊಂದಿಗೆ ಕಿರಿಯಳಾಗಿ ಹಾಡಿ ಕುಣಿದು ಸಂಭ್ರಮದಲ್ಲಿದ್ದಾಗಲೇ ಅದೂ ಹೇಗೋ ಮುರಿಯುತ್ತದೆ. ಐದನೆಯವನು ಸಿನಿಮಾ ನಿರ್ದೇಶಕ. ತುಂಬಾ ಮುದ್ದಾಗಿದ್ದ ಅವನೊಂದಿಗೆ ಒಂದು ಬೌದ್ಧಿಕ ಪ್ರಣಯ ಸಾಧ್ಯವಾಗುವುದೆಂದುಕೊಂಡಿದ್ದಳು.ಕಿಮ್ ಎಂಬ ನಟಿ ಆತನನ್ನು ಬಾಯ್ ಫ್ರೆಂಡ್ ಮಾಡಿಕೊಂಡಳು. ನಂತರ  Eun-jin ಕರೆಗಳಿಗೆ ಅವನು ನಿರುತ್ತರನಾದ.ಹುಚ್ಚು ಹಿಡಿದಂತಾಗಿ ಉಳಿದ ಜೀವನವನ್ನು ಒಬ್ಬಂಟಿಯಾಗಿಯೇ ಕಳೆಯಲು ನಿರ್ಧರಿಸಿದಳು. ಒಬ್ಬಂಟಿ ಬದುಕಿನಿಂದ ಈಕೆ ನರಳುವುದನ್ನು  ತಾಯಿ ಒಪ್ಪಲಿಲ್ಲ.

ಐದು ಪ್ರೇಮ ಭಗ್ನತೆಯಲ್ಲಿ ರೋಸಿ ಹೋಗಿದ್ದ Eun-jin ಗೆ  ಇಪ್ಪಂತೊಂಬತ್ತು ವರ್ಷಗಳಾಗಿದ್ದವು. ಈಕೆಯ ಅನೇಕ ಗೆಳತಿಯರು ಮದುವೆಯಾಗಿ, ಮಕ್ಕಳ ಹಡೆದು,ಗಂಡಂದಿರೊಂದಿಗೆ ಸುಖ ಸಂಸಾರದಲ್ಲಿದ್ದರು. ಅದನ್ನೆಲ್ಲ ನೋಡಿ ಪ್ರೇಮದಾಟಕ್ಕೆ ಮತ್ತೆ ಮರಳಬೇಕೆನ್ನಿಸಿತು.

ಒಂದು ಕಂಪನಿಯ ಉದ್ಯೋಗಿಯಾದಳು.ಅಲ್ಲಿನ ಡೇಟಿಂಗ್ ಕಿರಿಕಿರಿಯೆನಿಸಿದರೂ ತಾಳಿಕೊಂಡಳು.ಆ ವಿಚಿತ್ರ ಯಾತನೆಯಲ್ಲಿ Eun-jin  ಗೆ ಒಬ್ಬ ಒಳ್ಳೆಯ ಗಂಡ,ಅಂದವಾದ ಕುಟುಂಬ, ಒಳ್ಳೆಯ ಮನೆ ಬೇಕೆನಿಸತೊಡಗಿತು. ಈಕೆಯ ಜೊತೆಗೆ ಹೊತ್ತು ಮೀರಿದ ಸಮಯದಲ್ಲಿ ಪ್ರಣಯವಾಡುತ್ತಿದ್ದ ಕಂಪನಿಯ ಬಾಸ್ ಬಳಿ ಮದುವೆಯ ಪ್ರಸ್ತಾಪ ಎತ್ತಿದಾಗ ಮತ್ತೊಬ್ಬಳೊಂದಿಗೆ ನಿಶ್ಚಿತವಾಗಿರುವುದಾಗಿ ಹೇಳಿದ. ಉಡುಗೊರೆ ನೀಡಿ ಈಕೆಯನ್ನು ಕಾಮಿಸಿದ್ದಾಗಿ ನಿಂದಿಸಿದ. ಕೋಪೋದ್ರಿಕ್ತಳಾಗಿದ್ದ Eun-jin   ಅವನ ಉಡುಗೆಯ ಮೇಲೆ ಅಲ್ಲಿದ್ದ ನೀರು ಚೆಲ್ಲಿ, ತುಚ್ಛ ಶಬ್ದಗಳಿಂದ ಬೈದು ಹೊರಬಂದಳು. ವಿಪರೀತ ಕುಡಿದಳು.ಹುಡುಗರೊಂದಿಗೆ ಕಂಡ ಹುಡುಗಿಯರನ್ನು ಅಮಲಿನಲ್ಲೇ ಎಚ್ಚರಿಸ ಹೋಗಿ ಅವರ ತಿರಸ್ಕಾರಕ್ಕೂ ಗುರಿಯಾದಳು. ಕುಡಿದು ತಡರಾತ್ರಿ ಮನೆಗೆ ಹೊರಡಲು ಟ್ಯಾಕ್ಸಿ ಕೇಳುವ ಸಮಯದಲ್ಲಿ ಮತ್ತೊಬ್ಬ ಪರಿಚಯವಾದ. ಗಂಡಸರ ಬಗ್ಗೆ, ಅವರ ವಂಚನೆಯ ಬಗ್ಗೆ ಅಸಹ್ಯ ಪಟ್ಟುಕೊಂಡಿದ್ದ ಈಕೆಯ ಜೀವನ ಪಯಣ ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡಿತು.

ಇಲ್ಲಿಯತನಕ ವೇಗವಾಗಿ ಘಟನೆಗಳನ್ನು ನಿರೂಪಿಸಿಕೊಂಡು ಬಂದ ನಿರ್ದೇಶಕ  Lee-Kwon  ಮುಂದೆ ಉಸಿರು ಬಿಗಿ ಹಿಡಿದು ನೋಡುವಷ್ಟು ತಿರುವುಗಳನ್ನಿಟ್ಟು ಕತೆಯ ಬಂಧ ಸಡಿಲಿಸದೇ ನಿರೂಪಣೆಯನ್ನು ಕೊಂಚ ನಿಧಾನಗೊಳಿಸುತ್ತಾನೆ.

Eun-jin ಟ್ಯಾಕ್ಸಿ ಕೇಳುವಾಗ ಪರಿಚಯವಾದ ಪಯಣಿಗನ ಹೆಸರು Hyun-suk.. ಇಬ್ಬರೂ ಆ ನಗರದ Gwacheon ಕಡೆಗೇ ಹೋಗಬೇಕಿದ್ದರಿಂದ ಟ್ಯಾಕ್ಸಿಗೆ ತೆರಬೇಕಾದ ಹಣವನ್ನು ಹಂಚಿಕೊಳ್ಳಲು ಒಪ್ಪಿ ಹೊರಟರು. ಹೊರಡುವ ಮುನ್ನ ಟ್ಯಾಕ್ಸಿಯಲ್ಲಿ ತನ್ನೊಂದಿಗೆ ಏನೂ ಮಾತಾಡಕೂಡದೆಂಬ ಷರತ್ತು ವಿಧಿಸಿದ್ದ Eun-jin ತನ್ನ ಒತ್ತಡ ತಾಳಲಾರದೆ  Hyun-suk ನೊಂದಿಗೆ ಮಾತಿಗಿಳಿದಳು. ತನ್ನ ಕಚೇರಿಯ ಬಾಸ್ ನೊಂದಿಗಾದ breakup ಬಗ್ಗೆ ಹೇಳುತ್ತಾ ನಿರ್ಭಿಡೆಯಾಗಿ ಲೈಂಗಿಕ ವಿಚಾರವನ್ನೂ ಪ್ರಸ್ತಾಪಿಸಿದಳು. ಮುಕ್ತ ಮತ್ತು ಮುಗ್ಧ ಮನಸ್ಸಿನ ಹುಡುಗಿಗೆ ಟ್ಯಾಕ್ಸಿ ಅಪಘಾತದಲ್ಲಿ ತನ್ನ ತಂದೆ ಸತ್ತಿದ್ದ; ತಾಯಿ ಅನಿವಾರ್ಯ ಕಷ್ಟಕ್ಕೆ ಸಿಲುಕಿ ನವೆದು ತೀರಿಹೋದ ವಿಷಯವನ್ನು Hyun-suk ಹೇಳಿದ. ಆ ಕಾರಣವಾಗಿ ಟ್ಯಾಕ್ಸಿ ಡ್ರೈವರ್ ಕಂಡರೆ ಕೊಲ್ಲುವಷ್ಟು ಕೋಪ ಬರುವುದಾಗಿಯೂ ತಿಳಿಸಿದ. ಅಷ್ಟೊತ್ತಿಗೆ ಇಳಿಯಬೇಕಾದ ಸ್ಥಳ ಬಂದು ಇಬ್ಬರೂ ಇಳಿದು ಮತ್ತೊಂದಿಷ್ಟು ಮಾತಾಡ ತೊಡಗಿದರು.ಆಗ ತನ್ನ ತಂದೆ ತಾಯಿ ಸತ್ತಿರುವುದಾಗಿ ಹೇಳಿದ್ದು ಸುಳ್ಳು, ಟ್ಯಾಕ್ಸಿ ಡ್ರೈವರ್ ಮನಸ್ಸಿನಲ್ಲಿ ಅಂಥ ಕೃತ್ಯದ ಬಗ್ಗೆ ವಿಷಾದವಾದರೂ ಮೂಡಲೆಂಬ ಕಾರಣಕ್ಕಾಗಿಯೇ ಹಾಗೆ ಹೇಳಿದ್ದಾಗಿ Hyun-suk   ಅಂದ.

ಹೀಗೆ ಪರಿಚಯವಾಗಿ, ಫೋನ್ ನಂಬರ್ ವಿನಿಮಯವಾಗಿ Eun-jin ಬದುಕಿನಲ್ಲಿ ಪ್ರೇಮದ ಏಳನೇ ಅಧ್ಯಾಯ ಶುರುವಾಯಿತು. ಆಕೆಯ ಮುಗ್ಧ ಮತ್ತು ಪ್ರಾಮಾಣಿಕ ಸ್ವಭಾವ ಮೆಚ್ಚಿ ಪ್ರೀತಿಸುತ್ತಿರುವುದಾಗಿ  Hyun-suk ಹೇಳಿದ.  ಸ್ವಲ್ಪ ಮಂದ ಮತ್ತು ಗೊಂದಲವುಳ್ಳವನಂತೆ Hyun-suk  ಕಂಡರೂ ಈಕೆಗೆ ಇಷ್ಟವಾದ. ಆದರೆ ಗಂಡಸರ ಬಗೆಗಿನ ಅನುಮಾನದ ಸ್ವಭಾವ ಈಕೆಯ ಮನಸ್ಸಿನಿಂದ ದೂರವಾಗಿರಲಿಲ್ಲ.ತೀರಾ ಮೊದಮೊದಲೇ ಅವನ ಮೊಬೈಲ್ ನೋಡಿ; ಯಾವುದೋ ನಂಬರ್ ನೊಂದಿಗಿನ ನಿರಂತರ ಸಂಪರ್ಕ ಹಾಗೂ ಸಂದೇಶ ಅದು ಹೆಣ್ಣೇ ಆಗಿರಬೇಕೆಂದು, ಅದನ್ನು ದೃಢೀಕರಿಸಿಕೊಳ್ಳಬೇಕೆಂದು ನಿಶ್ಚಯಿಸಿಕೊಂಡಳು. ಅವನು ಬ್ಯುಸಿನೆಸ್ ಟ್ರಿಪ್ ಗೆಂದು ಹೋದಾಗಲೆಲ್ಲ ಮೊಬೈಲ್ ಆಫ್ ಆಗಿರುತ್ತಿದ್ದದ್ದು ಮತ್ತಷ್ಟೂ ಸಂಶಯವನ್ನು ಬಲಗೊಳಿಸಿತು.ತನ್ನ ಗೆಳತಿ ಹಾಗೂ ಪೊಲೀಸ್ ಅಧಿಕಾರಿಯಾದ Soyeong ಜೊತೆಗೆ ಇದನ್ನು ಹಂಚಿಕೊಂಡಳು. ಆಕೆಯ ಸಲಹೆಯಂತೆ ಗೂಗಲ್ ನಲ್ಲಿ ಅವನ ಮೊಬೈಲ್ ನಂಬರ್ ಇಟ್ಟು ಹುಡುಕಿದಳು. ಸೋಫಾಗಳ ಚಿತ್ರ ಮತ್ತು ಹರ್ಮ್ಸ್ ಬಾರ್ ನ ಸ್ಥಳ ದೊರಕಿತು. ಸೋಫಾ ನೋಡಲು ನಾಳೆ ಬರುವುದಾಗಿ ತಿಳಿಸಲು ಕರೆ ಮಾಡಿದಾಗ Eun-jin ಳೊಂದಿಗೆ ಮಾತಾಡಿದವಳು ಹೆಣ್ಣೇ ಆಗಿದ್ದಳು. Soyeong ಳನ್ನು ಕರೆದುಕೊಂಡು ಹರ್ಮ್ಸ್ ಬಾರ್ ಗೆ ಹೋದಾಗ ಅದೊಂದು ನಿಗೂಢ ಸ್ಥಳವೆಂಬಂತೆ ತೋರಿತು. ಸೋಫಾ ತೋರಿಸುತ್ತಾ ಆ ಹೆಣ್ಣುಮಗಳು ಇವರೊಂದಿಗೆ ಬಲು ರಸಿಕತೆಯಿಂದ ಮಾತಾಡಿದಳು. ತನಗೇ ಅರಿವಿಲ್ಲದಂತೆ ತನ್ನ ಗಂಡ ಚಿಕ್ಕ ವಯಸ್ಸಿನಲ್ಲೇ ತೀರಿ ಹೋದದ್ದಾಗಿಯೂ, ಜೀವನದ ಅನಿವಾರ್ಯತೆಗೆ ಈ ಬಾರ್ ಮತ್ತು ಸೋಫಾ ಮಾರಾಟದ ವ್ಯಾಪಾರವನ್ನು ತನ್ನ ಪ್ರಿಯಕರನೊಂದಿಗೆ ನಡೆಸುತ್ತಿರುವುದಾಗಿಯೂ ಹೇಳಿದಳು.ತನ್ನ ವಯಸ್ಸು ನಲವತ್ತೊಂದಾಗಿದ್ದರೆ , ಪ್ರಿಯಕರ ತನಗಿಂತ ಒಂಬತ್ತು ವರ್ಷ ಕಿರಿಯವನೆಂದಳು.
 

Eun-jin ನಲವತ್ತೊಂದರಲ್ಲಿ ಒಂಬತ್ತು ಕಳೆದು ನೋಡಿದಳು. ಅದು  Hyun-suk ವಯಸ್ಸಿಗೆ ಸರಿಹೊಂದಿತು. ಅದಲ್ಲದೆ ಆ ಹೆಣ್ಣು ಪ್ರಿಯಕರನೊಂದಿಗೆ ನಾಳೆ Macau ಎಂಬಲ್ಲಿಗೆ ಟ್ರಿಪ್ ಹೋಗುತ್ತಿರುವುದಾಗಿ ಹೇಳಿದ್ದು ಉರಿಸಿತು.Hyun-suk ಕೂಡ ನಾಳೆ ತನ್ನ ಬಾಸ್ ಜೊತೆಗೆ ಹಾಂಗ್ ಕಾಂಗ್ ಗೆ ಬ್ಯುಸಿನೆಸ್‌ ಟ್ರಿಪ್ ಹೋಗುತ್ತಿರುವುದಾಗಿ ತಿಳಿಸಿದ. ಇದೆಲ್ಲವೂ Hyun-suk ಬಗೆಗಿನ ಅನುಮಾನದ ಬೇರನ್ನು ಮತ್ತಷ್ಟೂ ಆಳಕ್ಕಿಳಿಸಿದವು. ಪೊಲೀಸ್ ಗೆಳತಿ ನೋಡಿದ್ದ ಹರ್ಮ್ಸ್ ಬಾರ್ ಬಳಿಯ ಸಿ.ಸಿ.ಕೆಮರಾ ದೃಶ್ಯದಲ್ಲಿ Hyun-suk ಕಂಡಿದ್ದಂತೂ ಬಲವಾದ ಪುಷ್ಠಿಯೊದಗಿಸಿತ್ತು.

ಕೋಪಿಷ್ಠಳಾದ  Eun-jin ಅವನು ಕೆಲಸ ಮಾಡುತ್ತಿರುವ ಕಚೇರಿಯಲ್ಲೇ ಅವನ ವಂಚನೆಯನ್ನು ಬಯಲುಗೊಳಿಸಲು ಪೊಲೀಸ್ ಗೆಳತಿಯೊಂದಿಗೆ  ತೆರಳಿದಳು. ಅಲ್ಲಿಂದಲೇ ಅವನಿಗೆ ಕರೆ ಮಾಡಿದಳು.ಅವನು ಕಚೇರಿಯಿಂದ ಬಾಸ್ ಜೊತೆಗೆ ಈಗ ಹೊರಡುತ್ತಿರುವುದಾಗಿ ಹೇಳಿದ. ಕಚೇರಿಯ ಬಾಸ್ ಗೆ ಬ್ಯುಸಿನೆಸ್ ಕಾರ್ಡ್ ತೋರಿಸಿ Hyun-suk ಬಗ್ಗೆ ವಿಚಾರಿಸಿದಾಗ ಮತ್ತೊಂದು ಆಘಾತವಾಯಿತು. ಒಂದು ವರ್ಷದ ಹಿಂದೆಯೇ ಒಂದು ತಿಂಗಳು ಮಾತ್ರ ಕೆಲಸ ಮಾಡಿ ಅವನು ಬಿಟ್ಟು ಹೋಗಿರುವುದಾಗಿ ತಿಳಿಯಿತು. ಸಂಶಯದ ಹೊಡೆತಗಳಿಂದ ಉರಿಯುವ ಜ್ವಾಲಾಮುಖಿಯಾದಳು Eun-jin.ವಿಪರೀತ ಕುಡಿದಳು. ಮರುದಿನ ತಾಯಿಯಿಂದ ಕೂಗಾಡಿಸಿಕೊಂಡು ತಡವಾಗಿ ಎದ್ದಳು.ಗಂಡಸರ ನಂಬಿಕೆ ದ್ರೋಹದಿಂದ ಪಾತಾಳ ತಲುಪಿದ್ದ Eun-jin. ಅಮ್ಮನೊಂದಿಗೆ ತನ್ನ  ಅಪ್ಪನ ಪ್ರೀತಿ,ನಂಬಿಕೆಯ ಸ್ತರಗಳನ್ನು ಪ್ರಶ್ನಿಸಿ  ಮನ ಕಲಕುವಂತೆ ಮಾತಾಡಿದಳು.

ತಮ್ಮನಿಂದ ಕಾರ್ ತರಿಸಿಕೊಂಡು ಪೊಲೀಸ್ ಗೆಳತಿಯೊಂದಿಗೆ ಹರ್ಮ್ಸ್ ಬಾರ್ ಬಳಿ ಬಂದು ಅವನಿಗಾಗಿ ಕಾದಳು. ಅಲ್ಲಿ Hyun-suk ಸಿಕ್ಕ. ಮೊದಲ ಭೇಟಿಯ ವೇಳೆಯಲ್ಲಿಯೇ ತಾನು ನಿರುದ್ಯೋಗಿಯಾಗಿದ್ದುದಾಗಿ ಒಪ್ಪಿಕೊಂಡ.ತಾನೊಬ್ಬ ದಿವಾಳಿಯಾಗಿ ಕಾಣಿಸಬಾರದೆಂದು ಸುಳ್ಳು ಹೇಳಿದ್ದಾಗಿ ಹೇಳಿದ.ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ  ಕಳೆದುಕೊಂಡ ಕತೆ ವಿವರಿಸಿದ. ಹಣಕ್ಕಾಗಿ ಪ್ರೀತಿಸಬಲ್ಲ ನೀಚ ಮಟ್ಟಕ್ಕೆ Eun-jin. ಳನ್ನು ಇಳಿಸಿ ಮಾತಾಡಿದ್ದು ಕೆರಳಿಸಿತು. ಸೋಫಾ ಮಾರುವ ಹೆಂಗಸಿನೊಂದಿಗಿನ ನಂಟನ್ನೂ ಕೆದಕಿದಳು. Hyun-suk ನಿಜಕ್ಕೂ ಆಗ ಮಂಡಿಯೂರಿ ಕ್ಷಮೆಯಾಚಿಸಿದ I love you ಎಂದು ಹೇಳಿ ಉದ್ವೇಗವನ್ನು ಕಡಿಮೆ ಮಾಡಿದ. ಅಪ್ಪಿಕೊಂಡು ಬೆನ್ನು ನೀವ ತೊಡಗಿದ.ಎಲ್ಲವೂ ಅಪಾರ್ಥಗಳಿಂದ ಆಗಿದೆ. ಮುಚ್ಚಿಟ್ಟ ನಿಜವೆಲ್ಲವನ್ನೂ ಹೇಳುವುದಾಗಿ ಮಾತು ಕೊಟ್ಟ.

Eun-jin. ಮತ್ತೆ ಅವನೊಂದಿಗೆ ಮೃದುವಾದ ದೃಶ್ಯ ಪೊಲೀಸ್ ಗೆಳತಿಗೆ ಅಸಹ್ಯವೆನಿಸಿತು. ಆಕೆ Eun-jin. ತಮ್ಮನೊಂದಿಗೆ ಊಟಕ್ಕೆ ತೆರಳಿದಳು.

ಇತ್ತ Hyun-suk ತನ್ನ ವಾಹನದಲ್ಲಿ Eun-jin ಳನ್ನು ಕರೆದುಕೊಂಡು ಹೊರಟ. ಅನುಮಾನವೆಂಬುದು ಆ ಕತ್ತಲಲ್ಲಿ ಇನ್ನೂ ದಟ್ಟವಾಗುತ್ತಲೇ ಇತ್ತು. ಬಂಕ್ ಬಳಿ ಇಂಧನಪೂರಣಕ್ಕಾಗಿ ವಾಹನ ನಿಲ್ಲಿಸಿದ. ಇಂಧನ ತುಂಬುವಷ್ಟರಲ್ಲಿ ವಿಶ್ರಾಂತಿ ಕೊಠಡಿಗೆ ಹೋಗಿ ಬರುವುದಾಗಿ ಹೊರಟ. ಬಿಟ್ಟು ಹೋಗಿದ್ದ ಮೊಬೈಲ್ ನೆನಪಿಸಿಕೊಂಡು ಮತ್ತೆ ಬಂದು ಹೊರಟ. ಈಕೆಗೆ ಮತ್ತೆ ಅನುಮಾನದ ಹುಳುವಿನ ಕಡಿತ. ಕರೆ ಮಾಡಿದಳು. ಆ ನಂಬರಿನ ಮೊಬೈಲ್ ವಾಹನದ ಡಿಕ್ಕಿಯಲ್ಲೇ ಸದ್ದು ಮಾಡಿತು.ಅವನಲ್ಲಿ ಬೇರೊಂದು ಮೊಬೈಲ್ ಇರುವ ಸಂಶಯ ಬಂತು. ಡಿಕ್ಕಿಯಲ್ಲಿದ್ದ ಸೂಟ್ ಕೇಸ್ ಬಗ್ಗೆ ಮುಂದಿನ ಪ್ರಯಾಣದಲ್ಲಿ ಪ್ರಶ್ನಿಸಿದಳು. ಅವನು ಗೃಹ ಬಳಕೆಯ ವಸ್ತು ತುಂಬಿರುವುದಾಗಿ ಹೇಳಿದ. ಅಷ್ಟೊತ್ತಿಗೆ ಊಟಕ್ಕೆಂದು ಹೋಗಿದ್ದ ಪೊಲೀಸ್ ಗೆಳತಿ ಮತ್ತು Eun-jin ತಮ್ಮ ಹರ್ಮ್ಸ್ ಬಾರ್ ಗೆ ಹೋಗಿದ್ದರು. ಅಲ್ಲಿದ್ದ ಸೂಟ್ ಕೇಸ್ ನಲ್ಲಿ ಕೊಲೆಗೈದು ತುಂಬಿಟ್ಟಿದ್ದ ವ್ಯಕ್ತಿಯ ಅಂಗಾಗದ ತುಂಡುಗಳನ್ನು ನೋಡಿ ಪೊಲೀಸ್ ಗೆಳತಿEun-jin ಗೆ ಕರೆ ಮಾಡಿ ತಿಳಿಸಿದಳು.

ಸುಳ್ಳುಗಳ ಜೊತೆಗೆ ಕೊಲೆಪಾತಕತನವೂ ಬೆರೆತು ಕ್ಷಣ ಕ್ಷಣಗಳೂ ನಿಶ್ಶಬ್ದದಲ್ಲಿ ಭಯ ಸ್ಫೋಟಿಸತೊಡಗಿದವು. ಹಸಿವೆಂದಳು Eun-jin .Hyun-suk ಒಂದು ಅಂಗಡಿಯ ಬಳಿ ವಾಹನ ನಿಲ್ಲಿಸಿ ತಿನ್ನಲು ತರಹೋದ. ಆಗ ಈಕೆ ಮತ್ತೆ ಇಳಿದು, ಡಿಕ್ಕಿ ತೆರೆದು, ಭೀಕರ ಭೀತಿಯಿಂದ ಸೂಟ್ ಕೇಸ್ ತೆರೆದರೆ ಇದರಲ್ಲೂ ಶವದ ತುಂಡುಗಳು! ಚೀರಿ ನೆಲಕ್ಕೆ ಬಿದ್ದಳು. ಅದನ್ನು Hyun-suk ನೋಡಿದ್ದ. ಮುಂದಿನ ಪ್ರಯಾಣದಲ್ಲಿ ಹಾಡೊಂದನ್ನು ಹಾಕಿ, ಈ ಹಾಡು ತಮ್ಮ ಮೊದಲ ಭೇಟಿಯಲ್ಲಿ ಟ್ಯಾಕ್ಸಿಯಲ್ಲಿ ಕೇಳಿದ್ದ ಹಾಡಲ್ಲವೆ? ಎಂದು ಮೌನ ಮುರಿಯಲೆತ್ನಿಸಿದ. ಅವನ ಪ್ರತೀ ವರ್ತನೆಗಳು ಈಕೆಯನ್ನು ಭೀತಿಯ ಸಮುದ್ರದಲ್ಲಿ ಮುಳುಗೇಳಿಸುತ್ತಿದ್ದವು.

ನಟ್ಟಿರುಳಿನಲ್ಲಿ ಒಂದು ಮನೆಗೆ ಕರೆತಂದ. ಅಲ್ಲೂ ಭೀತಿಯೇ! ಮುಚ್ಚಿಟ್ಟಿದ್ದ ಎಲ್ಲವನ್ನೂ Hyun-suk ಹೇಳಿದ. ತನ್ನ ತಂದೆ ಟ್ಯಾಕ್ಸಿ ಹೊಡೆದು ಸತ್ತದ್ದು ನಿಜವೆಂದ.ತಂದೆ ನರಳಿ ಸಾಯುವುದನ್ನು ಸಮೀಪದಲ್ಲೇ ನೋಡಿ ನಿರ್ಲಕ್ಷಿಸಿದ್ದ ಡ್ರೈವರ್ ನನ್ನು ಗುರುತಿಟ್ಟುಕೊಂಡು ಮಾಡಿದ ಮೊದಲ ಕೊಲೆಯ ಬಗ್ಗೆ ತಿಳಿಸಿದ. ಎಂದೂ ಹೊರಹೋಗದಿದ್ದ ತನ್ನ ತಾಯಿ,ತಂದೆಯ ಸಾವಿನ ಬಳಿಕ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗಿದ್ದು;ಕಾಲು ನೋಯಿಸಿಕೊಂಡದ್ದು; ನಂತರ ಬಾರೊಂದರಲ್ಲಿ ಕೆಲಸ ಮಾಡುತ್ತಾ ಅನೇಕ ಗಂಡಸರಿಂದ ಕಿರುಕುಳ ಅನುಭವಿಸಿ ಕೊನೆಗೆ ಸತ್ತದ್ದು....ಹೀಗೆ ಎಲ್ಲದನ್ನೂ ಹೇಳಿ ಅಮಾಯಕನಾದ ತನ್ನ ಬಾಳು ದಿಕ್ಕೆಟ್ಟದ್ದನ್ನು ವಿವರಿಸಿದ. ತಾಯಿಯ ಅವಹೇಳನಕ್ಕೆ, ನೋವಿಗೆ ಕಾರಣರಾದವರ ನೆನಪಿಟ್ಟುಕೊಂಡು ಪ್ರತಿಯೊಬ್ಬರನ್ನೂ ಹುಡುಕಿ ಕೊಂದ ದೃಶ್ಯಗಳನ್ನು ಸಚಿತ್ರವಾಗಿಸಿದ.

Eun-jin ಳಲ್ಲಿ ಭೀತಿ! ಅವನಿಗೆ ನಿಜ ಹೇಳಿದ ನಿರಾಳತೆ! 

ಈಗಲಾದರೂ ತನ್ನ ಜೊತೆಗೂಡಿ ಸಹಜ ಜೀವನ ಮಾಡಬೇಕು ಇಲ್ಲವೇ ಇಬ್ಬರೂ ಈಗಲೇ ಸಾಯಬೇಕೆಂದ!

ಆ ಸನ್ನಿವೇಶದಿಂದ ಹೊರಬರಲು ಒಪ್ಪಿದಂತೆ ಮಾತಾಡಿದಳು Eun-jin

Hyun-suk ಕುರ್ಚಿಯ ಕೈಗೆ ಕಟ್ಟಿದ್ದ ಕಟ್ಟುಗಳ ಬಿಚ್ಚಿ ತನ್ನ ಕೋಣೆಗೆ ಕರೆದೊಯ್ದ. ಕ್ರೂರನಂತೆ ಕಂಡ ಅವನ ಮತ್ತೊಂದು ಆರ್ದ್ರ ಮುಖ ಅಲ್ಲಿದ್ದ ಫೋಟೋಗಳಿಂದ ಕಾಣುತ್ತಿತ್ತು. ತಂದೆ ತಾಯಿಯ ಜೊತೆಗಿನ, Eun-jin ಜೊತೆಗಿನ ಫೋಟೊಗಳು ಅವನೊಳಗಿನ ಮನುಷ್ಯನನ್ನು ತೋರಿಸುತ್ತಿದ್ದವು. 

Eun-jin ಅಲ್ಲಿದ್ದ ಕೆಮೆರಾ ಎತ್ತಿಕೊಂಡು Hyun-suk ಮುಖಕ್ಕೆ ಚಚ್ಚಿ ಓಡಿದಳು. ಹಿಂಬಾಲಿಸಿದ ಅವನ ಹಿಡಿತಕ್ಕೆ ಮತ್ತೆ ಸಿಕ್ಕಳು. ಹಿಂದಿನಿಂದ ಬಿಗಿ ಹಿಡಿದಾಗ ಹೇಗೆ ತಪ್ಪಿಸಿಕೊಳ್ಳಬೇಕೆಂದು ಹೇಳಿದ್ದ ಪೊಲೀಸ್ ಗೆಳತಿಯ ಪಾಠ ನೆನೆದಳು. ಹಾಗೆಯೇ ಅವನ ಹೊಡೆದು ಮತ್ತೆ ತಪ್ಪಿಸಿಕೊಂಡು ಭಯ ತುಂಬಿದ ರಾತ್ರಿಯಲ್ಲಿ ಓಡಿದಳು. ಕಿರುಚಿದಳು. ಅಲ್ಲೇ ಹತ್ತಿರದಲ್ಲೇ ಈಕೆಯನ್ನು ಹುಡುಕಿ ಬಂದ ಪೊಲೀಸ್ ಗೆಳತಿ ಮತ್ತು ತಮ್ಮ ಕಂಡರು. ಭೀತಿಯಿಂದ ಕಾರು ಚಾಲನೆ ಮಾಡಿದರು.ಹೆಡ್ ಲೈಟ್‌ ಹಾಕಿದಾಗ ಅಡ್ಡಲಾಗಿ Hyun-suk ನಿಂತಿದ್ದ. ಅವನಿಗೆ ಢಿಕ್ಕಿ ಹೊಡೆದು ತಪ್ಪಿಸಿಕೊಂಡರು.

Hyun-suk ಸತ್ತನೋ! ಏನಾದನೋ! ಅದು ಮಾತ್ರ ನಿಗೂಢ. ಅಥವಾ ಸತ್ತಿರಲೂಬಹುದು. 

ಕೊನೆಯ ದೃಶ್ಯದಲ್ಲಿ ಮಾತ್ರ Eun-jin ಆಸ್ಪತ್ರೆಯ ಕೋಣೆಯಲ್ಲಿ ಸುಧಾರಿಸಿಕೊಳ್ಳುತ್ತ, ಮೊಬೈಲ್ ತೆಗೆದು Hyun-suk ನೊಂದಿಗಿನ ಪೋಟೋ ನೋಡುತ್ತ ಮೃದುವಾಗುತ್ತಿರುತ್ತಾಳೆ. ಆಗ ಅವನ "Excuse me" ಎಂಬ ದನಿ ಮಾತ್ರ ಕೇಳಿ ಕತೆ ನೋಡುಗರ ಊಹೆಗೆ ಎಲ್ಲಾ ಬಿಟ್ಟು ಮತ್ತಷ್ಟೂ ಬೆಳೆಯುತ್ತದೆ....

 Lee-kwonಇಲ್ಲಿ ಸಮಕಾಲೀನ ಬದುಕಿನ ಸಂಕಟಗಳನ್ನು ಮೂರು ಪಾತ್ರಗಳ ಮೂಲಕ ಕಟ್ಟಿಕೊಡುತ್ತಾನೆ. 

ಹದಿ ವಯಸ್ಸಿನ ಪ್ರೇಮ ಮತ್ತು ಕಾಮದ ಹಂಬಲ Eun-jin ಳನ್ನು ಆಕೆಯ ನಿಯಂತ್ರಣ ಮೀರಿ ಸಾವಿನ ಅಂತಿಮ ಕ್ಷಣವನ್ನು ಭೇಟಿ ಮಾಡಿಸಿ ಭೀತಿ ಮತ್ತು ನಿರೀಕ್ಷೆಯ ದ್ವಂದ್ವಗಳನ್ನು ಮುಂದೊಡ್ಡುತ್ತದೆ. 

ಹಾಗೆಯೇ ಬಾಲಕನಾಗಿದ್ದಾಗಲೇ ತನ್ನ ತಂದೆ ತಾಯಿಯನ್ನು ಬಲಿ ತೆಗೆದುಕೊಂಡ ಅಕಾರಣ ಕ್ರೌರ್ಯ Hyun-suk ನಲ್ಲಿ  ಸೇಡು ಬೆಳೆಸುತ್ತದೆ. ಸರಣಿ ಕೊಲೆಗಳಿಗೆ ನೂಕುತ್ತದೆ. ಆ ಅವಿಶ್ರಾಂತ ಒತ್ತಡ ದಾಟಿ Eun-jin ಳ ಪ್ರೀತಿ ಗಳಿಸಿ ಒಳ್ಳೆಯ ದಾರಿಯಲ್ಲಿ ಬದುಕಬೇಕೆನ್ನುವ ಅವನ ಇಚ್ಛೆಗೆ ಸರಳವಾಗಿ ಸತ್ಯ ಹೇಳಿಕೊಳ್ಳಲಾಗದ ಸಂಕೋಚ ಹಾಗೂ ಗೊಂದಲಗಳೇ ಶತ್ರುವಾಗುತ್ತವೆ. ಎಲ್ಲವೂ ಕೈಮೀರಿ ಮತ್ತೇನೋ ಆಗುತ್ತದೆ.

ತಂದೆಯ ಕೊಂದ ಸೇಡಿಗೆ ಟ್ಯಾಕ್ಸಿ ಡ್ರೈವರ್ ನನ್ನು ಕೊಂದು,ತನ್ನ ತಾಯಿಗೊದಗಿದ ಸಂಕಷ್ಟವನ್ನೇ ಆತನ ಹೆಂಡತಿಯಲ್ಲೂ ಊಹಿಸಿ ಆಕೆಯ ವರ್ತುಲಕ್ಕೆ ಸಿಕ್ಕಿಕೊಳ್ಳುತ್ತಾನೆ. ಅದಾಗಲೇ ಒಬ್ಬ ಗ್ಯಾಂಬ್ಲರ್ ನ ಪ್ರೇಮ ಮತ್ತು ಆಕ್ರಮಣಕ್ಕೆ ಸಿಲುಕಿದ್ದ ಆ ಹೆಣ್ಣನ್ನು ಪಾರು ಮಾಡುವ ಸಲುವಾಗಿ ಅವನನ್ನು ಕೊಲ್ಲುತ್ತಾನೆ. ಅದನ್ನು ನೋಡಿದ ಆಕೆ ಈ ಸತ್ಯ ಬಹಿರಂಗಪಡಿಸಿ ತನ್ನ ಪ್ರೀತಿಯನ್ನೂ ಹಾಳುಮಾಡಿಬಿಡಬಹುದೆಂಬ ಆತಂಕದಿಂದ ಅವಳನ್ನೂ ಮುಗಿಸಿಬಿಡುತ್ತಾನೆ.

ಹೀಗೆ ಯಾವುದೇ ವ್ಯಕ್ತಿ ವೈಭವೀಕರಿಸುವ ಸಂಭಾಷಣೆಗಳಿಲ್ಲದೆ ಅತ್ಯಂತ ಸರಳವಾಗಿ ಅಷ್ಟೇ ಕುತೂಹಲವಾಗಿ ಮನುಷ್ಯನಾಳದ ವಿಪ್ಲವಗಳನ್ನು ಹೇಳುತ್ತಾನೆ Lee-kwon.

'ವಾಸ್ತವ' ಕತೆಯ ವನಜಾ ತನ್ನ ಅಸಹಾಯಕತೆಯ ಅಗ್ನಿಕುಂಡಕ್ಕೊಡ್ಡಿಕೊಂಡು ಬೇಯುತ್ತಿರುವಂತೆ, ತನ್ನ ವಯಸ್ಸಿನ ಎಲ್ಲ ಸಾಮರ್ಥ್ಯವನ್ನು ಹಿಂಡಿಸಿಕೊಂಡು ಭ್ರಾಂತಳಾಗಬಹುದಾದ ಅಥವಾ ಅದರಿಂದ ಬಿಡುಗಡೆ ಪಡೆಯಬಹುದಾದ Eun-jin ಸದ್ಯಕ್ಕಂತೂ ದ್ವೀಪವಾಗಿದ್ದಾಳೆ.


      "ಮತ್ತೆ ವಿರಹದ ಸುದೀರ್ಘ ಅಂತ್ಯವಿಲ್ಲದ ರಾತ್ರಿ;
       ದೀಪವಿಲ್ಲದ ದೀವಿಯಲ್ಲಿ ಸೆರಮನೆಯೊಳಗೆ
       ಕಂಭಸುತ್ತುವ ಪುರೋಗಮನಸ್ಥಿತಿ;
       ಅಲ್ಲಲ್ಲಿ ಏನನ್ನೋ ಹುಡುಕುತ್ತ ಕಂಡಂತಾಗಿ ಕಾಣದೇ ಬೇಯುವ ಫಜೀತಿ.
       ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,
       ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ
       ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು
       ಬದುಕಿಗೂ ಈ ಕರಿ ನೀರಲ್ಲಿ
       ಜನ್ಮ ಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ
       ಅತ್ತಿತ್ತ ದೋಣಿ ಸಂಚಾರ. ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ
       ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ
       ರಿದ್ದರೂ ಸಿಕ್ಕುವುದೆಲ್ಲ ಪರಕೀಯ.ಅಕಸ್ಮಾತ್ತಾಗಿ
       ತನ್ನ ಇನ್ನೊಂದರ್ಧ ಎಲ್ಲಾದರೂ ಕ್ಷಣಾರ್ಧ 
       ಸಿಕ್ಕಿದವನೆ ಕೃತಾರ್ಥ,ಭಾಗ್ಯವಂತ.
       ಮತ್ತೆ ಯಾವಾಗ ಮರು ಭೇಟಿ? ಕಣ್ಣು ಕಣ್ಣುಗಳ ಸಮ್ಮಿಲನ,
       ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ?

       ಆತ್ಮೀಯ ದೀವಿಗೆ ಮತ್ತೆ ಬರಬಲ್ಲೆನೇ, ಏಳು        

        ಕಡಲುಗಳ ದಾಟಿ?"

      ( ಚಿಂತಾಮಣಿಯಲ್ಲಿ ಕಂಡ ಮುಖ-ಗೋಪಾಲಕೃಷ್ಣ ಅಡಿಗ)