ಭಾರತ ಅಥವಾ ಪಾಕಿಸ್ತಾನದೊಂದಿಗೆ ವಿಲೀನಕ್ಕೆ ಇರಲಿಲ್ಲ ಅವಸರ :ಸಮಾನ ದೂರ ಕಾಯ್ದುಕೊಂಡಿತ್ತು  ಕಾಶ್ಮೀರ

ಭಾರತದೊಂದಿಗೆ ಕಾಶ್ಮೀರ ವಿಲೀನ ಸಂಬಂಧ ಕೈಗೊಂಡ ಒಪ್ಪಂದಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆಯೇ?

ಭಾರತ ಅಥವಾ ಪಾಕಿಸ್ತಾನದೊಂದಿಗೆ ವಿಲೀನಕ್ಕೆ ಇರಲಿಲ್ಲ ಅವಸರ :ಸಮಾನ ದೂರ ಕಾಯ್ದುಕೊಂಡಿತ್ತು  ಕಾಶ್ಮೀರ

ಭಾರತ ಮತ್ತು ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯ ಪಡೆದು 72 ವರ್ಷಗಳೇ ಕಳೆದಿವೆ. 1947 ರ ಅಕ್ಟೋಬರ್ ತಿಂಗಳಲ್ಲಿ ನವದೆಹಲಿ, ಹಾಗೂ ಪಾಕಿಸ್ತಾನದ ಅಂದಿನ ರಾಜಧಾನಿಯಾಗಿದ್ದ ಕರಾಚಿ ಮತ್ತು ಜಮ್ಮು ಕಾಶ್ಮೀರದ ಶ್ರೀ ನಗರ ಭಾರೀ ರಾಜತಾಂತ್ರಿಕ, ಮತ್ತು ಮಿಲಿಟರಿ ಚಟುವಟಿಕೆಗಳಿಗೆ ಸಾಕ್ಷಿಯಾಗಿತ್ತು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳೂ ಕೂಡ ಜಮ್ಮು ಮತ್ತು ಕಾಶ್ಮೀರವನ್ನು ತಮ್ಮ ದೇಶದ ಭಾಗವನ್ನಾಗಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದವು. ಆದರೆ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿಸಿಂಗ್ ಎರಡು ದೇಶಗಳ ಭಾಗವಾಗಲೂ ನಿರಾಕರಿಸಿದ್ದ. ರಾಜನ ಈ ನಿರ್ಧಾರದಿಂದ  ಮುಖ್ಯವಾಗಿ ಪೂಂಚ್ ಮತ್ತು ಶ್ರೀ ನಗರದಲ್ಲಿ ರಾಜ ವಿರೋಧಿ ಧಂಗೆಗಳು ನಡೆದಿದ್ದವು.

ಸ್ಥಗಿತ ಒಪ್ಪಂದ

1947 ರ ಭಾರತೀಯ ಸ್ವಾತಂತ್ರ್ಯ ಕಾಯ್ದೆಯು ಬ್ರಿಟಿಷರು ಭಾರತದಿಂದ ನಿರ್ಗಮನ ಮತ್ತು ದೇಶದ ವಿಭಜನೆ ಖಾತರಿ ಪಡಿಸಿತು. ದೇಶದ ಮೇಲೆ ತಾನು ಹೊಂದಿದ್ದ ಆಡಳಿತಾತ್ಮಕ ಅಧಿಕಾರವನ್ನು ಸ್ಥಗಿತಗೊಳಿಸುವು ನಿರ್ಧಾರವನ್ನು ಬ್ರಿಟಿಷ್ ಸರ್ಕಾರ ಮಾಡಿತ್ತು.  ಆದರೆ ಅಧಿಕಾರದ ವರ್ಗಾವಣೆಯನ್ನು ಸುಗಮವನ್ನಾಗಿಸಲು ಭಾರತ ಮತ್ತು ಪಾಕಿಸ್ತಾನದಲ್ಲಿ ಎಲ್ಲಾ ಆಡಳಿತಾತ್ಮಕ ವ್ಯವಸ್ಥೆ ಸಿದ್ದವಾಗುವ ವರೆಗೂ ಬ್ರಿಟೀಷ್ ಸರ್ಕಾರ ತನ್ನ ಆಡಳಿತವನ್ನು ಮುಂದುವರೆಸಲು ನಿರ್ಧರಿಸಿತ್ತು.

ಭಾಗೋಳಿಕವಾಗಿ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಕ್ಕೆ ಹತ್ತಿರವಾಗಿರುವ ಪ್ರದೇಶ. ಪಾಕಿಸ್ತಾನದ ಭಾಗವಾಗಿರುವ  ಪಶ್ಚಿಮ ಪಂಜಾಬ್ ಮತ್ತು ವಾಯವ್ಯ ಗಡಿನಾಡು ಪ್ರಾಂತ್ಯ ಸಿಯಾಲ್ಕೋಟ್ ನಲ್ಲಿ ಜಮ್ಮುವಿಗೆ ಸಂಪರ್ಕ ಕಲ್ಪಿಸುವ ಏಕೈಕ ರೈಲು ಮಾರ್ಗವಿದೆ. ಈ ರೈಲು ಮಾರ್ಗದ ಮೂಲಕವೇ ಪೆಟ್ರೊಲ್, ಸೀಮೆಎಣ್ಣೆ, ಹಿಟ್ಟು, ಸಕ್ಕರೆ, ಇತ್ಯಾದಿಗಳ ಹೆಚ್ಚಿನ ವ್ಯಾಪಾರ ನಡೆಯುತ್ತಿತ್ತು.

1947 ರ ಅಗಸ್ಟ್ 12 ರಂದು ಜಮ್ಮು ಮತ್ತು ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಒಂದು ಸ್ಥಾಯಿ ಒಪ್ಪಂದವನ್ನು ಕೋರಿತು. ದೇಶದಿಂದ ಹೊರನಡೆಯುತ್ತಿರುವ ಬ್ರಿಟಿಷ್-ಭಾರತ ಸರ್ಕಾರದೊಂದಿಗೆ ಜಮ್ಮು ಮತ್ತು ಕಾಶ್ಮೀರ ಹೊಂದಿದ್ದ ಎಲ್ಲಾ ಒಪ್ಪಂದವನ್ನು ಮುಂದುವರೆಸುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಮತ್ತು ಈ ಮನವಿಗೆ ಪಾಕಿಸ್ತಾನ ಮೊದಲನೆಯದಾಗಿ ಒಪ್ಪಿಗೆ ಸೂಚಿಸಿ ಸಂದೇಶವನ್ನು ಕಳುಹಿಸಿ ಕೊಟ್ಟಿತು.

ಆದರೆ ಭಾರತ ಈ ಒಪ್ಪಂದಕ್ಕೆ ಸಹಿಹಾಕಲು ನಿರಾಕರಿಸಿತು. ಮತ್ತು ರಾಜ ತನ್ನ ಪ್ರತಿನಿಧಿಯನ್ನು ಮಾತುಕತೆಗೆ ದೆಹಲಿಗೆ ಕಳಿಸಿಕೊಡಲು ಕೇಳಿಕೊಂಡಿತು. ಭಾರತವು ಜಮ್ಮು ಮತ್ತು ಕಾಶ್ಮೀರದ ರಾಜನಿಗೆ ಕಳುಹಿಸಿದ ತನ್ನ ಸಂದೇಶದಲ್ಲಿ ಹೀಗೆ ಬರೆದುಕೊಂಡಿತ್ತು. ”ಕಾಶ್ಮೀರ ಸರ್ಕಾರ ಮತ್ತು ಭಾರತ ಪ್ರಭುತ್ವದ ನಡುವಿನ ಸ್ಥಾಯಿ ಒಪ್ಪಂದದ ಮಾತುಕತೆಗಾಗಿ ನೀವು ಅಥವಾ ನಿಮ್ಮ ಪರವಾಗಿ ಅಧಿಕಾರ ಹೊಂದಿರುವ ಯಾರನ್ನಾದರೂ ದೆಹಲಿಗೆ ಕಳುಹಿಸಿ ಕೊಟ್ಟರೆ ಭಾರತ ಸರ್ಕಾರಕ್ಕೆ ಸಂತೋಷವಾಗುತ್ತದೆ. ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ಆಡಳಿತಾತ್ಮಕ ವ್ಯವಸ್ಥೆಗಳನ್ನು ಕಾಪಾಡಿಕೊಳ್ಳಲು ಈ ಆರಂಭಿಕ ಕ್ರಮ ಅಪೇಕ್ಷಣೀಯವಾಗಿದೆ.” ಆದರೆ ಜಮ್ಮು ಮತ್ತು ಕಾಶ್ಮೀರದ ಪರವಾಗಿ ರಾಜ ಆಗಲೀ ಅಥವಾ ರಾಜನ ಪರವಾದ ಯಾವುದೇ ಪ್ರತಿನಿಧಿಗಳು ದೆಹಲಿಗೆ ಭೇಟಿ ನೀಡಿಲ್ಲ.

ಡೋಗ್ರಾಗಳು ಮತ್ತು ಶೇಖ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರವನ್ನು ಡೋಗ್ರಾ ರಾಜರು ಬಿಗಿ ಹಿಡಿತದಿಂದ ಆಳಿದರು. ಆದರೆ ಇವರ ಆಡಳಿತದಲ್ಲಿ ಮುಸ್ಲಿಮರು ಎರಡನೇ ದರ್ಜೆಯ ಪ್ರಜೆಗಳಾಗಿದ್ದರು. ಮುಸ್ಲಿಮರಿಗೆ ಹಿಂದೂಗಳಿಗಿಂತ ಕಡಿಮೆ ಹಕ್ಕುಗಳಿದ್ದವು.

ಕಾಶ್ಮೀರದ ಲೇಖಕ ಪಿ.ಎನ್.ಬಜಾಜ್ ತನ್ನ ‘ಇನ್ ಸೈಡ್ ಕಾಶ್ಮೀರ’ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ. “ ಡೋಗ್ರಾ ರಾಜರು ಹಿಂದೂ ರಾಷ್ಟ್ರದ ಕಲ್ಪನೆಯಿಂದ ರಾಜ್ಯವನ್ನು ಆಳುತ್ತಿದ್ದರು. ಇಲ್ಲಿ ಮುಸ್ಲಿಮರನ್ನು ಹಿಂದುಗಳಂತೆ ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಕೇವಲ ಮುಸ್ಲಿಮರು ಎಂಬ ಕಾರಣಕ್ಕೆ ಡೋಗ್ರಾ ರಾಜಪ್ರಭುತ್ವ ಅವರ ಜೊತೆ ಕಠಿಣವಾಗಿ ವರ್ತಿಸುತಿತ್ತು. ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ”

ಡೋಗ್ರಾ ರಾಜ ಮನೆತನದ ವಿರುದ್ದ ಮುಖ್ಯವಾಗಿ 1865, 1924, 1931ರಲ್ಲಿ ಅನೇಕ ದಂಗೆಗಳು ನಡೆದಿದ್ದವು

ಆದರೆ 1931ರ ನಂತರ ‘ರೀಡಿಂಗ್ ರೂಮ್ ಪಾರ್ಟಿ’ ಹೆಸರಲ್ಲಿ ಎಡಪಂಥೀಯ ಮುಸ್ಲಿಂ ಬುದ್ಧಿಜೀವಿಗಳ ಸಣ್ಣ ಗುಂಪೊಂದು ರಾಜಪ್ರಭುತ್ವದ ವಿರುದ್ದ ತನ್ನ ಅಸಮಾಧಾನವನ್ನು ಹೊರಹಾಕಲು ಪ್ರಾರಂಭಿಸಿತ್ತು. ಮುಂದೆ ಇದೇ ಸಣ್ಣ ಪಕ್ಷ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ ಮುಸ್ಲಿಂ ಕಾನ್ಪರೆನ್ಸ್ ಆಗಿ, ನಂತರ ನ್ಯಾಷನಲ್ ಕಾನ್ಪರೆನ್ಸ್ ಆಗಿ ಬದಲಾಯಿತು. ಉತ್ತಮ ಆಡಳಿತಕ್ಕಾಗಿ ಅಬ್ದುಲ್ಲಾ ಅವರು ನಡೆಸುತ್ತಿದ್ದ ಆಂದೋಲನಗಳ ಕಾರಣಕ್ಕಾಗಿ 1931 ಮತ್ತು 1947ರ ನಡುವೆ ರಾಜನಿಂದ ಅವರು ಪದೇ ಪದೇ ಬಂಧನಕ್ಕೊಳಗಾಗತಿದ್ದರು.

 ರಾಜನಿಗೆ ಯಾವ ದೇಶಕ್ಕೆ ಸೇರಬೇಕೆಂಬ ಗೊಂದಲ

ಭಾರತದಿಂದ ಬ್ರಿಟಿಷರ ನಿರ್ಗಮನವು ಜಮ್ಮು ಮತ್ತು ಕಾಶ್ಮೀರದ ಮೇಲೆ ಎರಡು ಪ್ರಮುಖ ಪರಿಣಾಮವನ್ನು ಬೀರಿತ್ತು.

1.1931 ರಲ್ಲಿ ಯಾವುದೇ ಧಂಗೆ ಅಥವಾ ಆಕ್ರಮಣಗಳು ನಡೆದಲ್ಲಿ ತಮ್ಮ ಸಹಾಯಕ್ಕೆ ಬರುತ್ತಿದ್ದ ಬ್ರಿಟಿಷರ ಸಹಾಯವನ್ನು ಮಹಾರಾಜರು ಕಳೆದುಕೊಂಡಿದ್ದರು.

2. ಯಾವುದೇ ಬಾಹ್ಯ ಆಕ್ರಮಣದ ಸಂದರ್ಭದಲ್ಲಿ ಹರಿಸಿಂಗ್ ಅವರಿಗೆ ಕಾಶ್ಮೀರದ ಸುರಂಗ ಗಡಿಯ ಮೇಲೆ ಕಣ್ಣಿಡಲು ಸಾಧ್ಯವಾಗಲಿಲ್ಲ.

ಅಗಸ್ಟ್ 15 ರ ನಂತರ ಕಾಶ್ಮೀರದ ಮಹಾರಾಜ ತುಂಬಾ ಗೊಂದಲಕ್ಕೆ ಒಳಗಾಗಿದ್ದ, ಆತನಿಗೆ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಭಾಗವಾಗವುದು  ಬೇಕಿರಲಿಲ್ಲ. ಮತ್ತು ಪಾಕಿಸ್ತಾನ ಮುಸ್ಲಿಂ ರಾಷ್ಟ್ರ ಎಂಬ ಕಾರಣಕ್ಕೆ ಪಾಕಿಸ್ತಾನದ ಭಾಗವಾಗುವುದು ಅವನಿಗೆ ಇಷ್ಟವಿರಲಿಲ್ಲ.

ಆದರೆ ಮಹಾರಜನ ಮೇಲೆ ಒತ್ತಡ ಏರುತ್ತಲೇ ಹೋಯಿತು. ಶೇಖ್ ಅಬ್ದುಲ್ಲಾ ಅವರನ್ನು ಮಹಾರಾಜ ಬಂಧನದಲ್ಲಿಟ್ಟಿದ್ದಾನೆ ಎಂಬ ಸುದ್ದಿಯು ರಾಜನ ವಿರುದ್ದ ಜನರು ದಂಗೆಯನ್ನೇ ನಡೆಸಲು ಪ್ರೇರಣೆಯಾಯಿತು. ಅಬ್ದುಲ್ಲಾ ಅವರನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ಜವಹರ್ ಲಾಲ್ ನೆಹರು, ವಲ್ಲಭಭಾಯ್ ಪಟೇಲ್ ಮತ್ತು ವೈಸರಾಯ್  ಲಾರ್ಡ್ ಮೌಂಟ್ ಬ್ಯಾಟನ್  ವಿನಂತಿಸಿದ್ದರು ಮಹಾರಾಜ ತಲೆಕೆಡಿಸಿಕೊಂಡಿರಲಿಲ್ಲ.

ಇದರ ನಡುವೆ “ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ನಡುವಿನ ಒಪ್ಪಂದವು ನಿರುಪಯುಕ್ತವಾಗಿದೆ, ಮತ್ತು ಜಮ್ಮು ಮತ್ತು ಕಾಶ್ಮೀರ ಅಂತಿಮವಾಗಿ ಪಾಕಿಸ್ತಾನಕ್ಕೆ ಸೇರುತ್ತದೆ” ಎಂದು ಪಾಕಿಸ್ತಾನವು ಹೇಳಿತು. ಮತ್ತು ಪಾಕಿಸ್ತಾನಕ್ಕೆ ಸೇರುವ ಕುರಿತು ಒಪ್ಪಂದಕ್ಕೆ ಸಹಿಹಾಕುವಂತೆ ಭರವಸೆನೀಡಲು ಪಾಕಿಸ್ತಾನದ ಗವರ್ನರ್ ಜನರಲ್ ಮೊಹಮ್ಮದ್ ಅಲಿ ಜಿನ್ನಾ ತನ್ನ ಖಾಸಗಿ ಕಾರ್ಯದರ್ಶಿ ಖುರ್ಷಿದ್ ಹಸನ್ ಖುರ್ಷಿದ್ ಅವರನ್ನು ಶ್ರೀನಗರಕ್ಕೆ ಕಳುಹಿಸಿದ್ದರು.

 ಆದಾಗ್ಯೂ ಸಹಿಹಾಕಿದ 12 ದಿನಗಳಲ್ಲಿ ಪಾಕಿಸ್ತಾನವು ಅಗಸ್ಟ್ 24 ರಂದು ಮಹಾರಾಜರಿಗೆ ಎಚ್ಚರಿಕೆ ಟಿಪ್ಪಣಿ ಬರೆದಿತ್ತು. “ಕಾಶ್ಮೀರದ ಮಹಾರಾಜರಿಗೆ ಅವರು ತಮ್ಮ ಆಯ್ಕೆಯನ್ನು ತೆಗೆದುಕೊಂಡು ಪಾಕಿಸ್ತಾನವನ್ನು ಆರಿಸಿಕೊಳ್ಳಬೇಕಾದ ಸಮಯ ಬಂದಿದೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಲು ವಿಫಲವಾದರೆ ಸಂಭವನೀಯ ತೊಂದರೆ ಅನಿವಾರ್ಯವಾಗಿ ಉಂಟಾಗುತ್ತದೆ” ಎಂದು ಈ ಪತ್ರದಲ್ಲಿ ಬರೆಯಲಾಗಿತ್ತು.  ಈ ಎಚ್ಚರಿಕೆ ಪತ್ರ ಮಹಾರಾಜರನ್ನು ಗಾಬರಿಗೊಳಿಸಿತು ಮತ್ತು ಪಾಕಿಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರದ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರೆಯಿತು.

ಮತ್ತೊಂದೆಡೆ ಜವಹರ್ ಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಕಾಶ್ಮೀರವನ್ನು ಭಾರತಕ್ಕೆ ಸೇರುವಂತೆ ಒತ್ತಾಯಿಸುತ್ತಿದ್ದರು. ಕಾಶ್ಮೀರದಲ್ಲಿದ್ದ ನೆಹರೂ ಅಭಿಮಾನಿಗಳು ಮತ್ತು ಶೇಖ್ ಅಬ್ದುಲ್ಲ ಜೊತೆಯಲ್ಲಿ ನೆಹರುವಿಗಿದ್ದ ಒಡನಾಟ ಮಹರಾಜನ ಮೇಲೆ ಹೆಚ್ಚಿನ ಒತ್ತಡವನ್ನು ಬೀರಲು ಆರಂಭಿಸಿತ್ತು. ಅದೇ ಸಂದರ್ಭದಲ್ಲಿ ಪಾಕಿಸ್ತಾನವನ್ನು ಸೇರಲು ಬಯಸಿದ್ದ ಹೈದರಾಬಾದ್ ನಿಜಾಮನ ಮೇಲೆ ನೆಹರೂ ಸರ್ಕಾರ ತನ್ನ ಗಮನವನ್ನು ಹರಿಸಬೇಕಾಯಿತು.

ಬುಡಕಟ್ಟು ಆಕ್ರಮಣ

ಜೂನ್ 1947 ರಲ್ಲಿ ಸುಮಾರು 60000 ಮಾಜಿ ಸೈನಿಕರು (ಹೆಚ್ಚಿನವರು ಪೂಂಚ್ ಮುಸ್ಲಿಮರು) ಮಹಾರಾಜರ ವಿರುದ್ಧ ತೆರಿಗೆ ರಹಿತ ಅಭಿಯಾನವನ್ನು ಆರಂಭಿಸಿದ್ದರು. ಅಗಸ್ಟ್ 14 ಮತ್ತು 15ರ ನಂತರ ಈ ಪೂಂಚ್ ಮುಸ್ಲಿಮರು ಪಾಕಿಸ್ತಾನ ಧ್ವಜವನ್ನು ಹಾರಿಸಿದಾಗ ಈ ಅಭಿಯಾನವು ಪ್ರತ್ಯೇಕತಾವಾದಿ ಚಳವಳಿಯಾಗಿ ಬದಲಾಯಿತು. ಮಹಾರಾಜರು ಪೂಂಚ್ ನಲ್ಲಿ ಯುದ್ಧ ಕಾನೂನು ಹೇರಿದ್ದು ಅಲ್ಲಿನ ಮುಸ್ಲಿಮರನ್ನು ಮತ್ತಷ್ಟು ಕೆರಳಿಸಿ ಬಿಟ್ಟಿತು. ಮತ್ತು ಪಾಕಿಸ್ತಾನದ ವಾಯವ್ಯ ಪ್ರಾಂತ್ಯ(ಎನ್.ಡಬ್ಲ್ಯು.ಎಫ್.ಪಿ.)ದ ಬುಡಕಟ್ಟು ಜನರು ಒದಗಿಸಿದ ಮದ್ದುಗುಂಡುಗಳು ಮತ್ತು ಅವರ ವೈಯಕ್ತಿಕ ಬೆಂಬಲದೊಂದಿಗೆ  ಅಲ್ಲಿನ ಪರಿಸ್ಥಿತಿ ಹೆಚ್ಚು ಸಂಕೀರ್ಣವಾಯಿತು. ಆದರೆ ಈ ಸಮಯದಲ್ಲಿ ಸುಮಾರು 2,37,000 ಮುಸ್ಲಿಮರನ್ನು ವ್ಯವಸ್ಥಿತವಾಗಿ ಮಹರಾಜರ ನೆತೃತ್ವದ ಡೋಗ್ರಾ ಸೈನಿಕರು ಮತ್ತು ಹಿಂದೂಗಳು, ಸಿಖ್ಖರು ಸೇರಿಕೊಂಡು ಕೊಲೆಮಾಡಿದ್ದರು.

ಆಪರೇಷನ್ ಗುಲ್ಮಾರ್ಗ್

1997ರ ಅಕ್ಟೋಬರ್ 22 ರಂದು ಪಾಕಿಸ್ತಾನವು ಎನ್.ಡಬ್ಲ್ಯೂ.ಎಫ್.ಪಿ ಯಿಂದ ಬುಡಕಟ್ಟು ಜನರನ್ನು ಸಜ್ಜುಗೊಳಿಸುವ ಮೂಲಕ ‘ಆಪರೇಷನ್ ಗುಲ್ಮಾರ್ಗ್’ ಅನ್ನು ಪ್ರಾರಂಭಿಸಿತ್ತು. ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಮತ್ತು ಪಾಕಿಸ್ತಾನ ಸೇನಾಜನರಲ್ ಗಳ ನೇರ ನಿಯಂತ್ರಣದಲ್ಲಿ ಸುಮಾರು 2000 ಬುಡಕಟ್ಟು ಜನರು ಮೋಟಾರು ಬಸ್ ಗಳಲ್ಲಿ ಮತ್ತು ಕಾಲ್ನಡಿಗೆಯಲ್ಲಿ ಮುಜಾಫರಾಬಾದ್ ಗೆ ಪ್ರವೇಶಿಸಿದ್ದರು.

ಆಕ್ರಮಣಕಾರರು ಮಹಾರಾಜರ ಪಡೆಗಳ ಅಲ್ಪ ಪ್ರತಿರೋಧದೊಂದಿಗೆ ಉರಿ ಮತ್ತು ಬಾರಾಮುಲ್ಲಾವನ್ನು ವಶಪಡಿಸಿಕೊಂಡು ಬಿಟ್ಟರು. ಶ್ರೀನಗರದ ಪತನ ಸನ್ನಿಹಿತವಾಗಿರುವಂತೆಯೇ ಅಕ್ಟೋಬರ್ 24 ರಂದು ಮಹಾರಾಜ ಹರಿಸಿಂಗ್ ಆಕ್ರಮಣವನ್ನು ತಡೆಯಲು ಮಿಲಿಟರಿ ಸಹಾಯಕ್ಕಾಗಿ ಭಾರತಕ್ಕೆ ಮನವಿ ಮಾಡಿದ್ದ. ಅಕ್ಟೋಬರ್ 25 ರಂದು ಭಾರತವು ಈ ಮನವಿಯನ್ನು ಪರಿಗಣಿಸಿತು. ಆದರೆ ಮೌಂಟ್ ಬ್ಯಾಟನ್ ಕಾಶ್ಮೀರವು ಭಾರತವನ್ನು ಸೇರಲು ಮುಂದಾಗದಿದ್ದರೆ ಯಾವುದೇ ಸೈನ್ಯವನ್ನು ಕಳುಹಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧಕ್ಕೆ ಕಾರಣವಾಗಬಹುದೆಂದು ವಾದಿಸಿದ್ದರು. ಮತ್ತು ಕಾಶ್ಮೀರದ ಭವಿಷ್ಯಕ್ಕೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹ ನಡೆಸಬೇಕೆಂದು ಸಲಹೆ ನೀಡಿದ್ದರು. ಆದರೆ ಭಾರತ ಸರ್ಕಾರದ ರಕ್ಷಣಾ ಸಮಿತಿಯು ರಾಜ್ಯ ಸಚಿವಾಲಯದ ಕಾರ್ಯದರ್ಶಿ ವಿ.ಪಿ.ಮೆನನ್ ಅವರನ್ನು ಶ್ರೀನಗರಕ್ಕೆ ಕಳುಹಿಸಿತು. ಮತ್ತು ಅವರು ತಮ್ಮ ಅನಿಸಿಕೆಗಳೊಂದಿಗೆ ದೆಹಲಿಗೆ ಮರಳಿದರು. ಮತ್ತು ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸುವಂತೆ ಸೂಚಿಸಿದರು.

ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ನೂತನ ಪ್ರಧಾನಿ ಮೆಹರ್ ಚಂದ್ ಮಹಾಜನ್ ನಮಗೆ ವಿಮಾನವನ್ನು ನೀಡಿದರೆ ನಾವು 25 ಕ್ಕೆ ಭಾರತಕ್ಕೆ ಬರಲು ನಿರ್ಧರಿಸಿದ್ದೇವೆ ಇಲ್ಲವಾದರೆ ಪಾಕಿಸ್ತಾನಕ್ಕೆ ಶರಣಾಗುತ್ತೇವೆ ಎಂದು ಎಚ್ಚರಿಸಿದ್ದರು.  ಭಾರತ ಸರ್ಕಾರ ಕೂಡಲೇ ತನ್ನ ದೃಷ್ಟಿಕೋನದ ಬಗ್ಗೆ ಮಹಾರಾಜರಿಗೆ ಸಲಹೆ ನೀಡಲು ಮೆನನ್ ಅವರನ್ನು ಮತ್ತೆ ಜಮ್ಮುವಿಗೆ ಕಳುಹಿಸಿತು, ಮತ್ತು ಅಕ್ಟೋಬರ್ 26 ರಂದು ಮಹರಾಜ ಅಂತಿಮವಾಗಿ ಭಾರತ ಪ್ರವೇಶ ಒಪ್ಪಂದಕ್ಕೆ ಸಹಿ ಹಾಕಿದ್ದ. ನಂತರ ಮೆನನ್ – ಕಾಶ್ಮೀರ ಪ್ರಧಾನಿಯವರೊಂದಿಗೆ ದೆಹಲಿಗೆ ಹಿಂತಿರುಗಿದರು.

ಮಹರಾಜನ ಷರತ್ತುಗಳು

  • ಷರತ್ತು 4 ರಲ್ಲಿ, ಮಹಾರಾಜರು ರಾಜ್ಯವನ್ನು ಭಾರತಕ್ಕೆ ಒಪ್ಪಿಸುವುದನ್ನು ಘೋಷಿಸಿದರು.
  • ಷರತ್ತು 5ರಲ್ಲಿ ಜಮ್ಮು ಮತ್ತು ಕಾಶ್ಮೀರ ಶಾಸಕಾಂಗವನ್ನು ಅಂಗೀಕರಿಸದೆ ಯಾವುದೇ ಕಾನೂನು / ಕಾಯ್ದೆ ಇತ್ಯಾದಿಗಳನ್ನು ತಿದ್ದುಪಡಿ ಮಾಡುವ ಮೂಲಕ ಬದಲಾಯಿಸಲಾಗುವುದಿಲ್ಲ.
  • ರಾಜ್ಯದಲ್ಲಿ ಕಾನೂನುಗಳನ್ನು ರೂಪಿಸಲು ಭಾರತ ಒಕ್ಕೂಟಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಷರತ್ತು 6 ರಲ್ಲಿ ಘೋಷಿಸಲಾಯಿತು. ಭಾರತ ಒಕ್ಕೂಟವು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.
  • ಮಹಾರಾಜರು ಭವಿಷ್ಯದ ಭಾರತೀಯ ಸಂವಿಧಾನವನ್ನು ಒಪ್ಪಿಕೊಳ್ಳಬೇಕಾಗಿಲ್ಲ ಮತ್ತು ಭಾರತ ಸರ್ಕಾರವು ಮಹಾರಾಜರನ್ನು ಹಾಗೆ ಮಾಡಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಷರತ್ತು 7 ರಲ್ಲಿ ವಿವರಿಸಲಾಗಿದೆ.
  • ಈ ಒಪ್ಪಂದ ಮಹಾರಾಜರ ಸಾರ್ವಭೌಮತ್ವದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಷರತ್ತು 8 ಸ್ಪಷ್ಟವಾಗಿ ಹೇಳಿದೆ. ಆದರೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪರವಾಗಿ ಅವರು ಆ ದಾಖಲೆಗೆ ಸಹಿ ಹಾಕುತ್ತಿದ್ದಾರೆ ಎಂದು ಷರತ್ತು 9 ಸ್ಪಷ್ಟವಾಗಿ ಸ್ಪಷ್ಟಪಡಿಸಿದೆ.

ಆದ್ದರಿಂದ, ಜಮ್ಮು ಮತ್ತು ಕಾಶ್ಮೀರದ ಜನರ ಕಾನೂನು ಪ್ರತಿನಿಧಿಯಾಗಿ ಮಹಾರಾಜರನ್ನು ಭಾರತ ಸರ್ಕಾರ ಒಪ್ಪಿಕೊಂಡಿತ್ತು ಎಂಬುದು ಸ್ಪಷ್ಟವಾಗಿದೆ.

ಒಪ್ಪಂದದ ನಂತರ

ಬುಡಕಟ್ಟು ಆಕ್ರಮಣವನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆಯನ್ನು ಅಂತಿಮವಾಗಿ ಶ್ರೀನಗರಕ್ಕೆ ಕಳುಹಿಸಲಾಯಿತು. ಶೇಖ್ ಅಬ್ದುಲ್ಲಾ ನೇಮಕ ಮಾಡಿದ ಸೈನಿಕರಿಗೆ ಭಾರತೀಯ ಸೈನ್ಯದಿಂದ ತರಬೇತಿ ನೀಡಲಾಯಿತು.  1948 ರ ಜನವರಿ 1 ರಂದು ನೆಹರೂ, ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತೆಗೆದುಕೊಂಡು ಹೋದರು.

1948 ರ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಯುದ್ಧವು ಭಾರತೀಯ ಸೇನೆ ಮತ್ತು “ಆಜಾದ್ ಕಾಶ್ಮೀರದ ಸೈನಿಕರ” ನಡುವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಮೇ 1948 ರ ಹೊತ್ತಿಗೆ, ಭಾರತೀಯ ಸೈನ್ಯವು ಹೋರಾಟದಲ್ಲಿ ಮೇಲುಗೈ ಸಾಧಿಸುತ್ತಿತ್ತು ಮತ್ತು ಪೂಂಚ್-ಪಶ್ಚಿಮ ಪಂಜಾಬ್ ಗಡಿಯಲ್ಲಿ ಜಯ ಗಳಿಸಿತು. ಇದೇ ಸಮಯದಲ್ಲಿ "ಆಜಾದ್ ಕಾಶ್ಮೀರ ಸೈನ್ಯ" ಕ್ಕೆ ಸಹಾಯ ಮಾಡಲು ಪಾಕಿಸ್ತಾನವು ಕೂಡ ತನ್ನ ಸೈನ್ಯವನ್ನು ಬಹಿರಂಗವಾಗಿ ಸಜ್ಜುಗೊಳಿಸಿತ್ತು.

ಆದರೆ  1948 ರ ಆಗಸ್ಟ್ 13 ರಂದು, ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಘೋಷಿಸುವ ನಿರ್ಣಯ ಅಂಗೀಕರಿಸಿತು. ಅದರ ಪ್ರಕಾರ ಪಾಕಿಸ್ತಾನ ಮತ್ತು ಬುಡಕಟ್ಟು ಸೈನ್ಯವನ್ನು ಹಿಂತೆಗೆದುಕೊಳ್ಳುವುದು, ನಂತರ ಭಾರತೀಯರ ವಾಪಸಾತಿ ಮತ್ತು ಕಾಶ್ಮೀರದ ಜನಾಭಿಪ್ರಾಯ ಸಂಗ್ರಹಕ್ಕೆ ಇಲ್ಲಿ ನಿರ್ಧರಿಸಲಾಯಿತು. ಆದರೆ ಕದನ ವಿರಾಮದ ನಂತರ, ಎರಡೂ ಕಡೆಯವರು ತಮ್ಮ ಸೈನ್ಯವನ್ನು ಹಿಂತೆಗೆದುಕೊಂಡಿಲ್ಲ, ಮತ್ತು ಜನಾಭಿಪ್ರಾಯ ಸಂಗ್ರಹವಂತೂ ಇಂದಿನವರೆಗೂ ನಡೆದಿಲ್ಲ ಎನ್ನುವುದೇ ದುರದೃಷ್ಟಕರ ಸಂಗತಿಯಾಗಿದೆ.