ಕೃಷಿ ಚಟುವಟಿಕೆಗಳಿಗೆ ರಾಜ್ಯ ಸರ್ಕಾರಕ್ಕೆ ಬೇಕಂತೆ 1 ಲಕ್ಷ ಕೋಟಿ ರೂ. ಸಾಲ!

ಬೆಳೆ ಸಾಲ ಸೇರಿ ಕೃಷಿಗೆ ಪೂರಕವಾಗಿರುವ ಚಟುವಟಿಕೆಗಳಿಗೆ ಸಾಲದ ಬೇಡಿಕೆ ಹೆಸರಿನಲ್ಲಿ ರಾಜ್ಯ ಸರ್ಕಾರ ಮಾಡಿರುವ ಅಂದಾಜು 1 ಲಕ್ಷ ಕೋಟಿ ರು. 

ಕೃಷಿ ಚಟುವಟಿಕೆಗಳಿಗೆ ರಾಜ್ಯ ಸರ್ಕಾರಕ್ಕೆ ಬೇಕಂತೆ 1 ಲಕ್ಷ ಕೋಟಿ ರೂ. ಸಾಲ!

ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ಹಲವೆಡೆ ಅಪ್ಪಳಿಸಿರುವ ಪ್ರವಾಹಕ್ಕೆ ಸಣ್ಣ ಮತ್ತು ಮಧ್ಯಮ ಕೃಷಿ ಚಟುವಟಿಕೆಗಳು ನೆಲಕಚ್ಚಿ ಹೋಗಿವೆ. ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಬರ ಪರಿಸ್ಥಿತಿಯಿಂದಾಗಿ, ಕೃಷಿ ಉತ್ಪಾದನೆಯಲ್ಲಿ ಇಳಿಮುಖವಾಗಿದೆ.

ಇದೆಲ್ಲದರಿಂದ ಚೇತರಿಸಿಕೊಂಡು ಪುನಶ್ಚೇತನಗೊಳ್ಳಬೇಕಾದ ಹೊತ್ತಿನಲ್ಲೇ ನೆರೆ ಹಾವಳಿಯಿಂದಾಗಿ ಕೃಷಿ ಚಟುವಟಿಕೆಗಳು ಇನ್ನಷ್ಟು ಅಧೋಗತಿಗಿಳಿದಿವೆ. ಇದೇ ಪರಿಸ್ಥಿತಿ ಮುಂದುವರೆದಿದ್ದೇ ಆದಲ್ಲಿ 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶ ಈಡೇರದು.

ಇದರ ಬೆನ್ನಲ್ಲೇ ಬೆಳೆ ಸಾಲವನ್ನೂ ಒಳಗೊಂಡಂತೆ ಇನ್ನಿತರ ಕೃಷಿ ಸಾಲದ ಬೇಡಿಕೆ ಮೇಲೆ ರಾಜ್ಯ ಸರ್ಕಾರ ಲೆಕ್ಕಚಾರ ಆರಂಭಿಸಿದೆ. 2019-20ನೇ ಸಾಲಿನ ಒಂದೇ ಹಣಕಾಸು ವರ್ಷದಲ್ಲಿ ಬೆಳೆ ಸಾಲವನ್ನೂ ಒಳಗೊಂಡಂತೆ ಕೃಷಿಯ ಇನ್ನಿತರ ಸಾಲ ವಿತರಣೆಗೆ 81,565 ಕೋಟಿ ರು.ಗಳ ಬೇಡಿಕೆ ಇದೆ ಎಂದು ಅಂದಾಜಿಸಿದೆ.

ಸಾಲಮನ್ನಾ ಯೋಜನೆ ಅಡಿಯಲ್ಲಿ ಬ್ಯಾಂಕ್ ಗಳಿಗೆ ಹಣ ಬಿಡುಗಡೆ ಆಗದಿರುವುದು ಮತ್ತು ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸದಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರ 81,565 ಕೋಟಿ ರು. ಸಾಲಕ್ಕೆ ಬೇಡಿಕೆ ಇರಿಸಿರುವುದು ಬ್ಯಾಂಕ್ ಗಳಿಗೆ ತಲೆ ನೋವಾಗಿ ಪರಿಣಿಮಿಸುವ ಸಾಧ್ಯತೆಗಳಿವೆ.

ಇದಲ್ಲದೆ, ಕೃಷಿ ಮೂಲಭೂತ ಸೌಕರ್ಯಗಳಿಗೆ ಒಟ್ಟು 7,010 ಕೋಟಿ ರು., ಕೃಷಿ ಯಾಂತ್ರೀಕರಣಕ್ಕೆ 4,899 ಕೋಟಿ ರು., ಜಲ ಮೂಲಗಳ ನಿರ್ವಹಣೆಗೆ 5,774 ಕೋಟಿ ರು., ಹೈನು ಮತ್ತು ಹಾಲು ಉತ್ಪನ್ನಗಳ ಅಭಿವೃದ್ಧಿಗೆ 5,582 ಕೋಟಿ ರು., ತೋಟಗಾರಿಕೆ ಉತ್ಪನ್ನಗಳ ಹೆಚ್ಚಳ ಮತ್ತು ಅಭಿವೃದ್ಧಿಗೆ 7,276 ಕೋಟಿ ರು.ಸೇರಿದಂತೆ ಒಟ್ಟು 1,05,103 ಕೋಟಿ ರು.ಸಾಲದ ಬೇಡಿಕೆ ಇದೆ ಎಂದು ಅಂದಾಜಿಸಿದೆ.

ಈ ಸಂಬಂಧ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರು ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಜಲ ಸಂಪನ್ಮೂಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರತ ಗುಂಪುಗಳನ್ನು ಸೃಜಿಸಿದ್ದಾರೆ. ಈ ಗುಂಪಿನಲ್ಲಿ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿಯ ವ್ಯವಸ್ಥಾಪಕ ನಿರ್ದೇಶಕರು, ಕೃಷಿ ಇಲಾಖೆ, ಜಲ ಸಂಪನ್ಮೂಲ, ತೋಟಗಾರಿಕೆ, ಪಶು ಸಂಗೋಪನೆ, ಸಣ್ಣ ನೀರಾವರಿ, ಮೀನುಗಾರಿಕೆ ಇಲಾಖೆಯ ನಿರ್ದೇಶಕರು,  ನಬಾರ್ಡ್ ನ ವ್ಯವಸ್ಥಾಪಕ ನಿರ್ದೇಶಕರು, ಕೆನರಾ ಮತ್ತು ಅಪೆಕ್ಸ್ ಬ್ಯಾಂಕ್ ನ ಸದಸ್ಯರೂ ಇದ್ದಾರೆ.

ಫಸಲ್ ಬಿಮಾ ಯೋಜನೆಯ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಹಣ ವಿತರಿಸಲು ಬ್ಯಾಂಕ್ ಗಳು ಖಾತ್ರಿ ನೀಡಬೇಕು ಎಂದು ಷರತ್ತು ವಿಧಿಸಿರುವ ರಾಜ್ಯ ಸರ್ಕಾರ, ನೈಸರ್ಗಿಕ ವೈಪರಿತ್ಯಗಳಿಂದ ಹಾನಿಗೀಡಾಗಿರುವ ಪ್ರದೇಶಗಳಿಗೂ ಕ್ರಮಬದ್ಧವಾಗಿ ಪರಿಹಾರ ವಿತರಿಸಬೇಕು ಎಂದು ಸೂಚಿಸಿದೆ.

ಅದೇ ರೀತಿ ಕೃಷಿ ಯಾಂತ್ರೀಕರಣಕ್ಕಾಗಿ 2019-20ನೇ ಸಾಲಿಗೆ 4,899 ಕೋಟಿ ರು.ಸಾಲದ ಬೇಡಿಕೆ ಇದೆ ಎಂದು ಅಂದಾಜಿಸಿದೆ. ಟ್ರಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಉಪಕರಣಗಳ ಬ್ಯಾಂಕ್ ನ್ನು ಸ್ಥಾಪಿಸಲು ಉತ್ತೇಜಿಸಲು ಮುಂದಾಗಿದೆ. ಕೃಷಿ ಮೂಲಭೂತ ಸೌಕರ್ಯಗಳಿಗೆ 7,010 ಕೋಟಿ ರು.ಸಾಲದ ಬೇಡಿಕೆಯಿರಿಸಿರುವ ರಾಜ್ಯ ಸರ್ಕಾರ, ವೈಜ್ಞಾನಿಕ ಮಾದರಿಯಲ್ಲಿ ಉಗ್ರಾಣ ಮತ್ತು ಶೀತಲೀಕರಣ ಘಟಕಗಳನ್ನು ಹೆಚ್ಚಿನ ಸ್ಥಳಗಳಲ್ಲಿ ಸ್ಥಾಪಿಸಲು ಚಿಂತಿಸಿದೆ. ಈಗಾಗಲೇ ನಬಾರ್ಡ್ ಇದೇ ಉದ್ದೇಶಕ್ಕೆ ಬಿಡುಗಡೆ ಮಾಡಿರುವ 437.92 ಕೋಟಿ ರು.ಗಳನ್ನು ಬಳಕೆ ಮಾಡಿಕೊಂಡು ರಾಜ್ಯದ 10 ಜಿಲ್ಲೆಗಳಲ್ಲಿ 1,094 ಶೀತಲೀಕರಣ ಘಟಕ ನಿರ್ಮಾಣ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದೆ.

ಉಗ್ರಾಣ ಮೂಲಭೂತ ಸೌಕರ್ಯ ನಿಧಿಯಡಿ ಈಗಾಗಲೇ 1,523.37 ಕೋಟಿ ರು.ಗಳನ್ನು ಕೃಷಿ ಮಾರುಕಟ್ಟೆ ನಿಗಮ ಮತ್ತು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ಬಿಡುಗಡೆ ಮಾಡಿದೆ. ಅದೇ ರೀತಿ ಹೈನೋದ್ಯಮಕ್ಕೆ ಒತ್ತು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಪ್ರಸಕ್ತ ಆರ್ಥಿಕ ಸಾಲಿಗೆ 5,582 ಕೋಟಿ ರು.ಸಾಲದ ಅಂದಾಜು ಪಟ್ಟಿ ತಯಾರಿಸಿದೆ. ವೈಜ್ಞಾನಿಕ ಮಾದರಿಯಲ್ಲಿ ಪಶು ಸಂಗೋಪನೆ ಮತ್ತು ಹಾಲಿನ ಉತ್ಪನ್ನಗಳ ಯಾಂತ್ರೀಕರಣ, ಹೈನೋದ್ಯಮವನ್ನು ವಾಣಿಜ್ಯ ಉದ್ದೇಶದಡಿಯಲ್ಲಿ ಪುನರ್ರೂಪಿಸಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಿದೆ.

ಜಲ ಸಂಪನ್ಮೂಲ ನಿರ್ವಹಣೆ ಒಟ್ಟು 5,774 ಕೋಟಿ ರು. ಅಂದಾಜಿಸಿರುವ ಸರ್ಕಾರ, ನೀರಾವರಿ ಪ್ರದೇಶಗಳನ್ನು ವಿಸ್ತರಿಸಿ 2022ರ ಹೊತ್ತಿಗೆ ಕೃಷಿಕರ ಆದಾಯಯನ್ನು ದ್ವಿಗುಣಗೊಳಿಸುವ ಉದ್ದೇಶವನ್ನೂ ಹೊಂದಿದೆ. ನೀರಾವರಿಯನ್ನು ದಕ್ಷತೆ ಮತ್ತು ಸುಸ್ಥಿರವಾಗಿ ಬಳಸಲು ರೈತರನ್ನು ಉತ್ತೇಜಿಸಲು ಮುಂದಾಗಿದೆಯಲ್ಲದೆ ಮಣ್ಣು ಮತ್ತು ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರೇರೇಪಿಸುವ ಕಾರ್ಯಕ್ರಮ ರೂಪಿಸಲು ಸೂಚಿಸಿದೆ.