ಕರ್ನಾಟಕವನ್ನು ಮರುಭೂಮಿ ಮಾಡಲು ಹೊರಟಿದೆ ರಾಜ್ಯ ಸರ್ಕಾರ :  ಸಮೃದ್ಧ ಹಸಿರು ನೆಲ ಆಗಲಿದೆ ‘ಸಹರಾ’  

ಕರ್ನಾಟಕವನ್ನು ಮರುಭೂಮಿ ಮಾಡಲು ಹೊರಟಿದೆ ರಾಜ್ಯ ಸರ್ಕಾರ :  ಸಮೃದ್ಧ ಹಸಿರು ನೆಲ ಆಗಲಿದೆ ‘ಸಹರಾ’  

ದಿವಾಳಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಸಹರಾ ಸಮೂಹಕ್ಕೆ ರಾಜ್ಯ ಸರ್ಕಾರ, ಕೆಐಎಡಿಬಿ ಮೂಲಕ ಅರಣ್ಯ ಇಲಾಖೆಗೆ ಸೇರಿರುವ ಭೂಮಿ ಪರಭಾರೆ ಆಗಿರುವ ಪ್ರಕರಣ ಮುನ್ನೆಲೆಗೆ ಬಂದಿದೆ.ಇಲ್ಲಿಯೂ ಕೂಡ ಸಹರಾ ಸಮೂಹದ ಕಂಪನಿಗಳು ಗುತ್ತಿಗೆ ಹಕ್ಕನ್ನು ವರ್ಗಾವಣೆ ಮಾಡಿಸಿಕೊಳ್ಳಲು ಈಗಲೂ ಸರ್ಕಾರದ ಮಟ್ಟದಲ್ಲಿ ಲಾಬಿ ಮುಂದುವರೆಸಿವೆ. ಜಿಂದಾಲ್‌ ಸಂಸ್ಥೆಗೆ ಭೂಮಿ ನೀಡುವ ವಿಚಾರವನ್ನು ಮರು ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿರುವ ಬೆನ್ನಲ್ಲೇ ಈ ಪ್ರಕರಣವನ್ನು ಜಿ.ಮಹಂತೇಶ್ ದಾಖಲೆಗಳ ಸಮೇತ ಬಯಲು ಮಾಡಿದ್ದಾರೆ. 
 

ಜಿಂದಾಲ್‌ ಸಂಸ್ಥೆಗೆ ಭೂಮಿ ನೀಡುವ ಬಗ್ಗೆ ಎದ್ದಿರುವ ವಿವಾದ ತಣ್ಣಗಾಗಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ ಕೆ ಪಾಟೀಲ್‌ ಮತ್ತು ಸಚಿವ ಕೆ ಜೆ ಜಾರ್ಜ್ ಮಧ್ಯೆ ಎದ್ದಿರುವ ಭಿನ್ನಾಭಿಪ್ರಾಯವೂ ಬೂದಿ ಮುಚ್ಚಿದ ಕೆಂಡದಂತಿದೆ. ಈ ವಿವಾದಕ್ಕೆ ಸರ್ಕಾರದ ಮಟ್ಟದಲ್ಲಿ  ತೇಪೆ ಹಾಕುವ ಕೆಲಸವೂ ನಡೆದಿದೆ. ಭೂಮಿ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿ ಅಹೋರಾತ್ರಿ ಧರಣಿ ನಡೆಸಿ ಹೋರಾಟವನ್ನು ರಾಜಕೀಯಕರಣಗೊಳಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅವರು ಇದೇ ವಿವಾದವನ್ನು ಬಳಸಿಕೊಳ್ಳುವ ಮೂಲಕ ರಾಜಕಾರಣದಲ್ಲಿ ಮುಖ್ಯವಾಹಿನಿಗೆ ಬಂದಿದ್ದಾರೆ.

ವಿವಾದದ ಸುತ್ತ ನಡೆದಿರುವ ರಾಜಕೀಯ ಚಟುವಟಿಕೆಗಳ ನಡುವೆಯೇ ಕರ್ನಾಟಕ ಅರಣ್ಯ ಇಲಾಖೆ ವಶದಲ್ಲಿರುವ ಜಮೀನನ್ನು ದಿವಾಳಿ ಆಗಿರುವ ಆರೋಪಕ್ಕೆ ಗುರಿಯಾಗಿರುವ ಸಹರಾ ಸಮೂಹದ ಕಂಪನಿಗಳಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ ) ಪರಭಾರೆ ಮಾಡಿರುವುದನ್ನು 'ಡೆಕ್ಕನ್‌ ನ್ಯೂಸ್‌' ಇದೀಗ ದಾಖಲೆಗಳ ಸಮೇತ ಹೊರಗೆಡವುತ್ತಿದೆ.

ಹೂಡಿಕೆದಾರರಿಗೆ ₹ 25,700 ಕೋಟಿ ರು. ಹಿಂದಿರುಗಿಸಲು ವಿಫಲವಾಗಿರುವ ಸಹರಾ ಸಮೂಹಕ್ಕೆ ಬೆಂಗಳೂರಿನ ಕಾಡಗೋಡಿ ಪ್ಲಾಂಟೇಷನ್‌ನಲ್ಲಿನ 25 ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶ ಸದ್ದಿಲ್ಲದೆ ಪರಭಾರೆ ಆಗಿದೆ. ಕಾಡುಗೋಡಿ ಪ್ಲಾಂಟೇಷನ್‌ಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್‌ ಅಪೀಲು ಅರ್ಜಿ ವಿಚಾರಣೆ ಬಾಕಿ ಇದ್ದರೂ ಪರಭಾರೆ ಆಗಿರುವುದು ಸಂಶಯಗಳಿಗೆ ಕಾರಣವಾಗಿದೆ. 

ಸಹರಾ ಸಮೂಹದ ಆಂಬಿ ವ್ಯಾಲಿ ಹೋಟೆಲ್‌ ಮತ್ತು ರೆಸಾರ್ಟ್ಸ್‌ ಲಿಮಿಟೆಡ್‌ ಗೆ ಅರಣ್ಯ ಇಲಾಖೆಗೆ ಸೇರಿರುವ 25 ಎಕರೆ ವಿಸ್ತೀರ್ಣದ ಪ್ರದೇಶವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಪರಭಾರೆ ಮಾಡಿರುವುದು

ವಿಶೇಷ.  ಕಾಡುಗೋಡಿ ಪ್ಲಾಂಟೇಷನ್‌ ಸರ್ವೆ ನಂಬರ್‌ 1ರಲ್ಲಿ ಒಟ್ಟು 711 ಎಕರೆ ಇದೆ. ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 23ರ ಅನ್ವಯ ರಾಜ್ಯ ಅರಣ್ಯವು ಮೀಸಲು/ಕಾಯ್ದಿಟ್ಟ ಅರಣ್ಯವಾಗಿದೆ. ಕಾಡುಗೋಡಿ ಪ್ಲಾಂಟೇಷನ್‌ ಸರ್ವೆ ನಂ 1ರಲ್ಲಿನ 711 ಎಕರೆ ಅರಣ್ಯ ಪ್ರದೇಶದಲ್ಲಿ ಯಾವುದೇ ಭಾಗವನ್ನೂ ಮೀಸಲು ಅರಣ್ಯವಲ್ಲವೆಂದು ಯಾವುದೇ ಅಧಿಸೂಚನೆ ಆಗಿಲ್ಲ. ಹಾಗೆಯೇ ಅದಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಇಲ್ಲವಾದ ಕಾರಣ ಈ ಪ್ರದೇಶ ಇಂದಿಗೂ ಮೀಸಲು ಅರಣ್ಯವಾಗಿಯೇ ಮುಂದುವರೆದಿದೆ ಎಂಬ ಅಂಶ ಅರಣ್ಯ ಇಲಾಖೆಯ ದಾಖಲೆಯಿಂದ ಗೊತ್ತಾಗಿದೆ.

ಮೀಸಲು ಅರಣ್ಯ ಎಂಬುದಕ್ಕೆ ಆರ್‌ಟಿಸಿ ದಾಖಲೆಗಳಿದ್ದರೂ ದಿವಾಳಿ ಆಗಿರುವ ಆರೋಪಕ್ಕೆ ಗುರಿಯಾಗಿರುವ ಸಹರಾ ಸಮೂಹಕ್ಕೆ ಪರಭಾರೆ ಆಗಿರುವುದರ ಹಿಂದೆ ಹಣದ ವ್ಯವಹಾರ ನಡೆದಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು. ಇನ್ನೂ ವಿಶೇಷ ಸಂಗತಿ ಎಂದರೆ ಸಹರಾ ಸಮೂಹಕ್ಕೆ ಪರಭಾರೆ ಆದ ಹಲವು ವರ್ಷಗಳ ನಂತರ ಅರಣ್ಯ ಇಲಾಖೆ ಇದು ಅರಣ್ಯ ಪ್ರದೇಶ ಎಂದು ಹಕ್ಕು ಸಾಧಿಸಿರುವುದು. 

ಕಾಡುಗೋಡಿ ಪ್ಲಾಂಟೇಷನ್‌ ವ್ಯಾಪ್ತಿಯೊಳಗಿರುವ ಈ ಜಮೀನು ನೇರವಾಗಿ ಸಹರಾ ಸಮೂಹಕ್ಕೆ ಹಂಚಿಕೆಯಾಗಿಲ್ಲ. ಸಹರಾ ಸಮೂಹದ ಕಂಪನಿಗಳಿಗೆ ಪರಭಾರೆ ಆಗುವ ಮುನ್ನ ಈ  ಜಮೀನು ಬಿಪಿಎಲ್‌ ಸಮೂಹದ ಕಂಪನಿಗಳಿಗೆ ಹಂಚಿಕೆಯಾಗಿತ್ತು.  ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಒಟ್ಟು 711 ಎಕರೆ ಪ್ರದೇಶದ ಪೈಕಿ 305 ಎಕರೆ 23 ಗುಂಟೆ ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ಕಾಯ್ದೆ ಅನುಸಾರ ಕಾಡುಗೋಡಿ ಕೈಗಾರಿಕೆ ಪ್ರದೇಶಕ್ಕಾಗಿ 1985 ಮತ್ತು 1987ರಲ್ಲಿ  ಭೂಸ್ವಾಧೀನಪಡಿಸಿಕೊಂಡಿತ್ತು. 

ಕಾಡುಗೋಡಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಗೊಂಡ ನಂತರ ಸರ್ವೆ ನಂಬರ್‌ 1ರಲ್ಲಿನ 25 ಎಕರೆ ಭೂಮಿಯನ್ನು ಬಿಪಿಎಲ್‌ ರೆಫ್ರಿಜರೇಟರ್‌, ಬಿಪಿಎಲ್‌ ಸ್ಯಾನ್ಯೋ ಯುಟಿಲಿಟೀಸ್‌ ಮತ್ತು ಅಪ್ಲಯನ್ಸ್‌ ಮತ್ತು ಬಿಪಿಎಲ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಕಂಪನಿಗಳಿಗೆ ಗುತ್ತಿಗೆ ಕ್ರಯ ಕರಾರು ಪತ್ರಗಳನ್ನು 1999ರ ಜುಲೈ 31, 1999ರ ಏಪ್ರಿಲ್‌ 20, 1991ರ ಫೆ.8ರಂದು ನೀಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಬಿಪಿಎಲ್ ಸಮೂಹದ ಕಂಪನಿಗಳಿಗೆ ಜಮೀನು ಮಂಜೂರು ಆಗಿರುವ ಪ್ರತಿ

ಬಿಪಿಎಲ್‌ ಸಮೂಹಕ್ಕೆ ಸೇರಿರುವ ಈ ಮೂರು ಕಂಪನಿಗಳು ತಮ್ಮ ಯೋಜನೆಗಾಗಿ ಐಸಿಐಸಿಐ, ಐಐಬಿ(INDSUTRIAL INVESTMENT BANK OF INDIA), ಏಎನ್‌ ಝಡ್‌ ಗ್ರಿಂಡ್ಲೇಸ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಯುಟಿಐ ಬ್ಯಾಂಕ್‌ನಿಂದ ಸಾಲ ಪಡೆದಿತ್ತು. ಸಾಲ ಪಡೆಯಲು 1999ರ ಜೂನ್‌ 7ರಂದು ಕೆಐಎಡಿಬಿ ಈ ಮೂರು ಕಂಪನಿಗಳಿಗೆ ನಿರಕ್ಷೇಪಣಾ ಪತ್ರ(ಎನ್‌ಓಸಿ) ನೀಡಿರುವುದು ದಾಖಲೆಯಿಂದ ಗೊತ್ತಾಗಿದೆ. ಆ ನಂತರದ ವರ್ಷಗಳಲ್ಲಿ ಈ ಕಂಪನಿಗಳು ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಮುಂಬೈನ ಆಸ್ತಿ ಪುನರ್‌ ನಿರ್ಮಾಣ ಕಂಪನಿ  (ASSET RECONSTRUCTION COMPANY INDIA LTD)  ಸಾರ್ವಜನಿಕ ಹರಾಜಿನ ಮೂಲಕ ನಿವೇಶನ ಖರೀದಿಸಿತ್ತು. 

ಸಹರಾ ಸಮೂಹದ ಎವಿಎಲ್‌ ಹೋಟೆಲ್‌, ರೆಸಾರ್ಟ್ಸ್‌ ಲಿಮಿಟೆಡ್‌ ಈ ಸ್ವತ್ತುಗಳ ಗುತ್ತಿಗೆ ಹಕ್ಕನ್ನು ಎಆರ್‌ಸಿಐಎಲ್‌ ಮೂಲಕ ಖರೀದಿಸಿದೆ. 2016ರ ಡಿಸೆಂಬರ್‌ 5 ಮತ್ತು 2017ರ ಮೇ 2ರಂದು ಗುತ್ತಿಗೆ ಹಕ್ಕು  ವರ್ಗಾವಣೆ ಮಾಡಿಸಿಕೊಳ್ಳಲು ಎವಿಎಲ್‌ ಹೋಟೆಲ್‌, ರೆಸಾರ್ಟ್ಸ್‌ ಲಿಮಿಟೆಡ್‌ , ಕೆಐಎಡಿಬಿಗೆ ಪತ್ರ ಮುಖೇನ 2 ಬಾರಿ  ಮನವಿ ಸಲ್ಲಿಸಿತ್ತು. 

ಎವಿಎಲ್ ಸಲ್ಲಿಸಿದ ಮನವಿಯ ಪ್ರತಿ 

ಈ ಮನವಿಯನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ತಾಂತ್ರಿಕ ಕೋಶ) ಪರಿಗಣಿಸಿತ್ತು.quot;ಅನುಮೋದಿತ ವೆಚ್ಚ ಶೇ.50ಕ್ಕಿಂತ ಹೆಚ್ಚಿನ ಬಂಡವಾಳ ಹೂಡಿದ್ದು, ತದನಂತರ ಸ್ಥಗಿತಗೊಂಡಿದೆ.  ಹಂಚಿಕೆಯಾದ ಭೂಮಿ ವರ್ಗಾವಣೆ ಸಂಬಂಧ ಹೊಸ ಉದ್ದಿಮೆದಾರರು ಖರೀದಿಸಿದಲ್ಲಿ ಈ ಹಿಂದೆ ಒಟ್ಟು ಪಾವತಿಸಿದ ಭೂ ಮೌಲ್ಯದಲ್ಲಿ ಶೇ.20ರಂತೆ ದಂಡ ಹಾಗೂ ಶೇ.10ರ ವರ್ಗಾವಣೆ ಮೊಬಲಗು ಅಂದರೆ ಒಟ್ಟು 12,75,55,982 ರು.ಗಳನ್ನು ಪಡೆದು ಮಂಡಳಿಯ ಹಂಚಿಕೆ ಮತ್ತು ಷರತ್ತುಗಳನ್ವಯ ಮುಂದಿನ ಕ್ರಮ ವಹಿಸಬಹುದು,& quot; ಎಂದು  ಮಂಡಳಿಯ ಆಂತರಿಕ ಲೆಕ್ಕ ಪರಿಶೋಧನೆ ವಿಭಾಗ 2017ರ ಜೂನ್‌ 23ರಂದು ಅಭಿಪ್ರಾಯ ನೀಡಿರುವುದು ಲಭ್ಯವಿರುವ ದಾಖಲೆಯಿಂದ ಗೊತ್ತಾಗಿದೆ.

ಈ ಪ್ರಕರಣ ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿ(ಅರ್ಜಿ ಸಂಖ್ಯೆ;191/2017) ಮುಂದೆಯೂ ಪ್ರಸ್ತಾಪವಾಗಿದೆ. ಸಮಿತಿ ಅಧ್ಯಕ್ಷರಾಗಿದ್ದ  ಎನ್‌ ಎಚ್‌ ಶಿವಶಂಕರರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 2017ರ ಜುಲೈ 27ರಂದು ನಡೆದಿದ್ದ ಅರ್ಜಿ ಸಮಿತಿ ಸಭೆಯಲ್ಲಿ ಹಾಲಿ ಸಚಿವ  ಪಿ ಟಿ ಪರಮೇಶ್ವರ್‌ ನಾಯಕ್‌, ಹಿಂದಿನ ಶಾಸಕ ಜಿ ಎಚ್‌ ಶ್ರೀನಿವಾಸ್‌ ಮತ್ತಿತರರು ಈ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ಆ ನಂತರ ಅರ್ಜಿಗಳ ಸಮಿತಿ ಈ ಕುರಿತು ವರದಿಯನ್ನು ಬಾಕಿ ಇಟ್ಟಿದೆ ಎಂದು ತಿಳಿದು ಬಂದಿದೆ.