ಐಪಿಎಲ್ ಸಾಧನೆಯಲ್ಲಿ ದೇಶೀಯತೆಯ ಪಾತ್ರ

ಐಪಿಎಲ್ ಸಾಧನೆಯಲ್ಲಿ ದೇಶೀಯತೆಯ ಪಾತ್ರ

ಐಪಿಎಲ್‌ನಲ್ಲಿ ಹೆಸರಾಂತ ವಿದೇಶಿ ಆಟಗಾರಿದ್ದರೂ, ಅಂಕಿ ಅಂಶಗಳ ದೃಷ್ಟಿಯಲ್ಲಿ ಭಾರತದ ಆಟಗಾರರು ಒಂದು ಕೈ ಮೇಲೇ ಇದ್ದಾರೆ. ಈ ಕುರಿತು ಪಿ.ಎಂ.ವಿಜಯೇಂದ್ರ ರಾವ್‌ ಅವರ ವಿಶ್ಲೇಷಣೆ ಇಲ್ಲಿದೆ.

ನಾನು ಅಂಕಿ-ಅಂಶಗಳ ಪ್ರಿಯನಲ್ಲ ಎಂಬುದನ್ನು ಈಗಾಗಲೇ ಹೇಳಿಕೊಂಡಿದ್ದೇನೆ. ಮ್ಯಾಚ್‌ ಅನ್ನು ನೇರವಾಗಿ ವರದಿ ಮಾಡುವಾಗ ಅಥವಾ ದಿನಪತ್ರಿಕೆಗೆ ಆ ದಿನದ ಮ್ಯಾಚ್ ಬಗ್ಗೆ ಬರೆಯುವಾಗ ಅಂಕಿ-ಅಂಶಗಳ ಉಲ್ಲೇಖ ಅನಿವಾರ್ಯ. ಅಂಕಣಕ್ಕಾಗಿ ಬರೆಯುವ ಲೇಖನದ ಸಾರ್ಥಕತೆಯನ್ನು ಅಂಕಿ ಅಂಶಗಳು ಕೊಲ್ಲುತ್ತವೆ.  ನನ್ನ ಇಂದಿನ ಲೇಖನ ದಾಖಲೆಗಳನ್ನಾಧರಿಸಿದ್ದು, ಆ ಕಾರಣಕ್ಕೆ ಅಂಕಿ ಅಂಶಗಳು ಲೇಖನದ ಆಶಯಕ್ಕೆ ಪೂರಕವಾಗಿವೆಯಾದರೂ, ಅವುಗಳ ಬಳಕೆಯನ್ನು ತಪ್ಪಿಸುತ್ತಿದ್ದೇನೆ. 

ಐಪಿಎಲ್ ಅಂದರೇನೇ ದಾಖಲೆಗಳ ಮಹಾಪೂರ. ಜೊಂಪೆ-ಜೊಂಪೆಯಾಗಿ ಪಂದ್ಯಗಳು ಆಡಲ್ಪಡುತ್ತವೆ. ಜತೆಗೆ ಟಿ-20 ಪಂದ್ಯಗಳ ಗುಣವೇ ಜಡಿ-ಮಡಿ ಎಂಬ ತತ್ವಾಧಾರವಾಗಿದ್ದು.  ಪವರ್ ಪ್ಲೇ ಓವರ್‌ಗಳಲ್ಲಿ ಎರಡೂ ಮೂರೋ ವಿಕೆಟ್‌ಗಳು ಬಿದ್ದ ಸ್ವಲ್ಪ ಹೊತ್ತಷ್ಟೆ, ಆಟದ ಸಂದರ್ಭಕ್ಕನುಸಾರವಾಗಿ "ಹೊಡಿ-ಬಡಿ" ಬಿಟ್ಟು ಸ್ವಲ್ಪ ತಡಿ ಎಂಬ ಅತಿ-ತಾತ್ಕಾಲಿಕ ಕಾರ್ಯವಿಧಾನಕ್ಕೆ ಆಸ್ಪದ. 

ಸಮರ ಸಂಭ್ರಮದಲ್ಲಿ ಬ್ಯಾಟನ್ನು ಬೀಸುವ ಆಂಡ್ರೆ ರಸ್ಸೆಲ್ ನಿನ್ನೆ ಆಡಿದ ರೀತಿ ನೋಡಿದರೆ, ಬೆಕ್ಕಸ ಬೆರಗಾಗುವುದಕ್ಕೆ ಕೊನೆಯೇ ಇಲ್ಲವೇನೋ ಅನ್ನಿಸುತ್ತಿತ್ತು. ಸತತವಾಗಿ ಸೋತ ಮೇಲೆ ಬುದ್ಧಿ ಬಂದೋ ಏನೋ ಕೆಕೆಆರ್ ತಂಡ ರಸ್ಸೆಲ್‌ನ್ನು ಮೊದಲ ವಿಕೆಟ್ ಪತನದ ನಂತರ ಆಡಿಸಿತು. ಇದುವರೆವಿಗೂ ರಸ್ಸೆಲ್  ಬ್ಯಾಟ್ ಮಾಡಲು ಬರುವ ಹೊತ್ತಿಗೆ ಕೇವಲ ಮೂರೋ ನಾಲ್ಕೋ ಓವರ್‌ಗಳು ಉಳಿದಿರುತ್ತಿದ್ದವು. ಬಹಳಷ್ಟು ಸಂದರ್ಭಗಳಲ್ಲಿ ಬ್ಯಾಟ್ಸ್ಮನ್ಗಳ ರಣೋತ್ಸಾಹ ಉತ್ತುಂಗವನ್ನು ಮುಟ್ಟುವುದೇ ಆ ಕೊನೆಯ ಓವರ್‌ಗಳಲ್ಲಿ. ರಸ್ಸೆಲ್ ಕೂಡ ಅದಕ್ಕೆ ಹೊರತಲ್ಲ. ಆದರೆ ಹಬ್ಬದೂಟ ಮಾಡಲು ಆತನಿಗೆ ಸಿಕ್ಕಿದ್ದು ಎಂದಿಗಿಂತ ಮೂರು ಪಟ್ಟು ಹೆಚ್ಚಿನ ಅವಕಾಶ. ಮಿಗಿಲಾಗಿ ಆರಂಭಿಕ ಆಟಗಾರರು ವಿಜೃಂಭಿಸಿ ರಸ್ಸೆಲ್‌ನ ರಸಗವಳಕ್ಕೆ ಭೂಮಿಕೆ ನಿರ್ಮಿಸಿದ್ದರು. ಸ್ವನಿಯಂತ್ರಣದ ಅರ್ಥವೇ ಗೊತ್ತಿರದ ಆತ 40 ಎಸೆತಗಳಲ್ಲಿ ಅದರ ದುಪ್ಪಟ್ಟು ರನ್ ಗಳಿಸಿ ಧಾರಾಕಾರವಾಗಿ  ಸೋಲನುಭವಿಸಿದ್ದ ತನ್ನ ತಂಡ ಉತ್ತಮ ತಂಡ ಪೇರಿಸುವುದಕ್ಕೆ ಮುಖ್ಯ ಕಾರಣವಾದರು. 

ಆಯ್ಕೆದಾರರು ವಿಂಡೀಸ್‌ನ ವಿಶ್ವ ಕಪ್ ತಂಡಕ್ಕೆ ತನ್ನನ್ನು ಆಯ್ಕೆ ಮಾಡಿದ್ದನ್ನು ರಸ್ಸೆಲ್ ಆಚರಿಸಿದ್ದು ಹೀಗೆ. 

ಗಮನಿಸಬೇಕಾದ ಅಂಶವೆಂದರೆ ರಸ್ಸೆಲ್‌ನ ದಾಳಿಗೆ ಬಲಿಯಾದದ್ದು ಉತ್ತಮ ಬೌಲಿಂಗ್ ಘಟಕವಿರುವ ಮುಂಬೈ ತಂಡ. ಡೆತ್ ಓವರ್ ಪರಿಣತರಲ್ಲಿಬ್ಬರಾದ ಜಸ್ಪ್ರೀತ್ ಭುಮ್ರ ಮತ್ತು ಮನಸೋ ಇಚ್ಛೆ ಯಾರ್ಕರ್‌ಗಳನ್ನು ಉಡಾಯಿಸಬಲ್ಲ ಲಸಿತ್ ಮಲಿಂಗ. ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ರಾಹುಲ್ ಚಾಹರ್ ಕೂಡ ರಸ್ಸೆಲ್‌ರ ದಾಳಿಗೆ ಉತ್ತರ ನೀಡಲಾಗಲಿಲ್ಲ. ಇದ್ದುದರಲ್ಲಿ ರನ್ ನಿಯಂತ್ರಿಸುವಲ್ಲಿ ಸಫಲರಾದವರು ಪಾಂಡ್ಯ ಸಹೋದರರು. 

ಕೊಲ್ಕೊತ್ತಾದ ಬೃಹತ್ ಸ್ಕೋರನ್ನು ಬೆನ್ನಟ್ಟಿದ ಮುಂಬೈ ತಂಡದ ಹಾರ್ದಿಕ್ ಪಾಂಡ್ಯ  ರಸ್ಸೆಲ್‌ನ ಪ್ರಭಾವಳಿಯನ್ನು ಮಂಕು ಮಾಡುವಂಥ ಪ್ರದರ್ಶನ ನೀಡಿದರು. ಯಾವುದನ್ನು ನಾವು ಬೃಹತ್ ಹೊಡೆತಗಳೆಂದುಕೊಂಡಿದ್ದೆವೋ, ಅವು ನಿಜವಾದ ಹೊಡೆತಗಳಲ್ಲ ಎಂದು ಸಾಬೀತುಪಡಿಸುವಂಥ ಉನ್ಮಾದ ಪಾಂಡ್ಯರ ಬ್ಯಾಟಿಂಗ್‌ನಲ್ಲಿತ್ತು. ವಿಶ್ವ ಕಪ್ ಪಂದ್ಯಾವಳಿಯಲ್ಲೂ ಅವರ ಈ ಉನ್ಮಾದ ಮುಂದುವರೆಯುವುದೆಂದು ನಿರೀಕ್ಷಿಸೋಣ. ಅವರ ರಂಜನೀಯ ಆಟಕ್ಕೆ ತಾರ್ಕಿಕ ಅಂತ್ಯವಾಗಿ ಶತಕ ದೊರೆಯಬೇಕಿತ್ತು, ಮುಂಬೈ ಗೆಲ್ಲಬೇಕಿತ್ತು, ಆದರೆ ಜೀವನಕ್ಕಾಗಲೀ, ಅದರ ಏರುಪೇರುಗಳನ್ನು ಧಾರಾಳವಾಗಿ ಪ್ರತಿನಿಧಿಸುವ ಕ್ರಿಕೆಟ್‌ಗಾಗಲೀ ತರ್ಕವೆಂದರೆ ರೇಜಿಗೆ.

ಕ್ರಿಕೆಟ್ ಜಗತ್ತಿನ ವಿವಿಧ ಭಾಗಗಳಿಂದ ಜಮಾಯಿಸುವ ವರ್ಣರಂಜಿತ ಐಪಿಎಲ್ ನಡೆದಿರುವುದು ಕ್ರಿಕೆಟ್ ಕಾಶಿಯಾದ ಭಾರತದಲ್ಲೇ. ಎಂತಲೇ ವಿದೇಶಿ ಕ್ರಿಕೆಟಿಗರಿಗೆ ಸ್ಥಳೀಯ ವಾತಾವರಣಕ್ಕೆ ಹೊಂದುಕೊಳ್ಳುವುದು ಒಂದು ಸವಾಲೇ. ಯಾವುದೇ ತಂಡ ವಿದೇಶ ಪ್ರವಾಸದಲ್ಲಿ ಎದುರಿಸುವ ಸವಾಲದು, ಅದರಲ್ಲೇನು ವಿಶಿಷ್ಟ ಅನ್ನಬಹುದು. ನಿಜ, ಭಾರತ ಇಂಗ್ಲೆಂಡ್ ಅಥವಾ ನ್ಯೂಜಿ ಲ್ಯಾಂಡ್‌ಗೆ ತೆರಳಿದಾಗ, ಅಥವಾ ಅಲ್ಲಿಯ ತಂಡಗಳೇ ನಮ್ಮಲ್ಲಿಗೆ ಬಂದಾಗ ಪ್ರವಾಸೀ ತಂಡ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಅದು ಬಹುತೇಕ ಪ್ರವಾಸಿ ತಂಡಗಳಿಗೂ ಅನ್ವಯಿಸುತ್ತದೆ. ಭಾರತ ಪಾಕಿಸ್ತಾನದಲ್ಲೋ, ಪಾಕಿಸ್ತಾನ ಭಾರತದಲ್ಲೋ, ಆಸ್ಟ್ರೇಲಿಯಾ ಇಂಗ್ಲೆಂಡಿನಲ್ಲೋ, ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲೋ ಆಡಬೇಕಾದರೆ ಎದುರಾಗುವ ಮತ್ತೊಂದು ಸವಾಲು ಪ್ರೇಕ್ಷಕರು ಒಡ್ಡುವ ಮಾನಸಿಕ ಒತ್ತಡ. ಇವುಗಳ ಜತೆ ಸ್ಥಳೀಯ ಆಹಾರ-ಪದ್ಧತಿಗೂ, ಶಿಷ್ಟಾಚಾರಗಳಿಗೂ ಹೊಂದಿಕೊಳ್ಳುವ ಸವಾಲುಗಳಿರುತ್ತವೆ.

ಆದರೆ ಐಪಿಎಲ್ ಆಟಗಾರರು ಎದುರಿಸುವ ಮತ್ತೊಂದು ಮುಖ್ಯ ಸಮಸ್ಯೆ ಎಂದರೆ ಬಹುರಾಷ್ಟ್ರೀಯ-ಸದಸ್ಯ ವಾತಾವರಣಕ್ಕೆ ಹೊಂದಿಕೊಳ್ಳುವುದು. ನಿಜ, ಇಂಗ್ಲೆಂಡ್ ದೇಶದಲ್ಲಿ ಕೌಂಟಿ ಪಂದ್ಯಗಳನ್ನಾಡುವ ಆಟಗಾರರಿಗೂ ಈ ಸಮಸ್ಯೆ ಇತ್ತು, ಆದರೆ ಐಪಿಲ್ ಪಂದ್ಯಾವಳಿ ಕಲ್ಪಿಸಿರುವ ಬಹುಸಂಸ್ಕೃತಿಯ ವಾತಾವರಣಕ್ಕೆ ಹೋಲಿಸಿದರೆ ಕೌಂಟಿ ಕ್ರಿಕೆಟ್‌ನ ಬಹುಸಂಸ್ಕೃತಿ ಏನೇನೂ ಅಲ್ಲ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ, ಮದುವೆಯಾದ ಹೆಣ್ಣು ಅತ್ತೆಯ ಮನೆಯ ಪರಿಸರಕ್ಕೆ ಹೊಂದಿಕೊಳ್ಳುವ ಸವಾಲಿನಂತೆ ಈ ಐಪಿಎಲ್ ಪರಿಸರ ವಿದೇಶಿ ಆಟಗಾರರ ಮೇಲಷ್ಟೇ ಅಲ್ಲ ಭಾರತೀಯ ಆಟಗಾರರ ಮೇಲೂ ಪ್ರಭಾವ ಬೀರುತ್ತದೆ. ಇದರ ಬಗ್ಗೆ ಸುದೀರ್ಘವಾಗಿ ಮುಂದೆ ಬರೆಯುತ್ತೇನೆ. 

ಈ ಒಂದು ಸವಾಲಿನ ಹಿನ್ನೆಲೆಯಲ್ಲಿ ಈ ಕೆಲವು ಐಪಿಎಲ್ ದಾಖಲೆಗಳನ್ನು ಪರಿಶೀಲಿಸಿದಾಗ 

ಪ್ರಸಕ್ತ ಲೇಖನದ ವಾದಕ್ಕೆ ಪುಷ್ಟಿ ಸಿಗಬಹುದು. 

1. ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿರುವ ಐದು ಬ್ಯಾಟ್ಸ್‌ಮನ್‌ಗಳು:  ಕ್ರಿಸ್ ಗೇಲ್, ಬಿ ಮ್ಯಾಕಲ್ಲಮ್, ಡಿ ವಿಲಿಯರ್ಸ್, ಡಿ ವಿಲಿಯರ್ಸ್, ಕ್ರಿಸ್ ಗೇಲ್.

2. ಅತಿ ಹೆಚ್ಚು ರನ್ ಪೇರಿಸಿರುವ ಐವರು: ವಿರಾಟ್ ಕೊಹ್ಲಿ, ಸುರೇಶ ರೈನಾ, ರೋಹಿತ್ ಶರ್ಮ, ಡೇವಿಡ್ ವಾರ್ನರ್ 

3. ಸರಣಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಐವರು: ಕ್ರಿಸ್ ಗೇಲ್, ಬಿ ಮ್ಯಾಕಲ್ಲಂ, ಕ್ರಿಸ್ ಗೇಲ್, ಕ್ರಿಸ್ ಗೇಲ್, ಡಿ ವಿಲಿಯರ್ಸ್

4. ಒಟ್ಟಾರೆ ಐಪಿಲ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಐವರು: ಕ್ರಿಸ್ ಗೇಲ್, ಡಿ ವಿಲಿಯರ್ಸ್, ಎಂಎಸ್ ಧೋನಿ, ಸುರೇಶ ರೈನಾ, ರೋಹಿತ್ ಶರ್ಮ

5. ಅತಿ ಹೆಚ್ಚು ಬೌಂಡರಿ ಬಾರಿಸಿರುವ ಐವರು: ಶಿಖರ್ ಧಾವನ್, ಗೌತಮ್ ಗಂಭೀರ್, ಸುರೇಶ ರೈನಾ, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್

6. ಹ್ಯಾಟ್-ಟ್ರಿಕ್ ಪಡೆದಿರುವ 18 ಬೌಲರ್‌ಗಳ ಪೈಕಿ ಐದು ಬೌಲರ್‌ಗಳಷ್ಟೇ ಅನ್ಯ ದೇಶೀಯರು. ಹತ್ತು ಜನ ಭಾರತೀಯ ಬೌಲರ್‌ಗಳ ಪೈಕಿ ಅಮಿತ್ ಶರ್ಮ ಮೂರು ಬಾರಿ ಹಾಗೂ ಯುವರಾಜ್ ಸಿಂಗ್ ಎರಡು ಬಾರಿಯೂ ಹ್ಯಾಟ್-ಟ್ರಿಕ್ ಪಡೆದಿದ್ದಾರೆ. ಅವರಿಬ್ಬರೂ ಸ್ಪಿನ್ನರ್‌ಗಳು ಎಂಬುದು ಕುತೂಹಲಕರ

7. ಅತಿ ಹೆಚ್ಚು ಮೇಡನ್ ಓವರ್ಗಳನ್ನ ಬೌಲ್ ಮಾಡಿರುವ ಐವರಲ್ಲಿ ಒಬ್ಬರಷ್ಟೇ ಅನ್ಯರಾಷ್ಟ್ರೀಯರು 

8. ಅತಿ ಹೆಚ್ಚು ರನ್ ನೀಡಿರುವ ಐವರು ಬೌಲರ್‌ಗಳೂ ಭಾರತೀಯರೇ

9. ಐದು ಅಗ್ರ ಜಿಪುಣ ಬೌಲರ್‌ಗಳಲ್ಲಿ ಒಬ್ಬರು ಭಾರತೀಯರು

10. ಅತಿ ಹೆಚ್ಚು ವಿಕೆಟ್ ಉರುಳಿಸಿರುವ ಐವರು ಬೌಲರ್‌ಗಳಲ್ಲಿ ಮೂವರು ಭಾರತೀಯರು. 

ವಿ.ಸೂ. (ನಿಯಮಾನುಸಾರ ಐಪಿಲ್ ತಂಡಗಳಲ್ಲಿ ಭಾರತೀಯರೇ ಹೆಚ್ಚು ಸದಸ್ಯರಿರುತ್ತಾರೆ ಅನ್ನುವ ಅಂಶವನ್ನು ಕಡೆಗಣಿಸಿಲ್ಲ. ಆ ಹಿನ್ನೆಲೆಯಲ್ಲಿ, ವಿದೇಶ ಆಟಗಾರರ ಸಾಧನೆಗೆ ಇನ್ನೂ ಹೆಚ್ಚಿನ ಮೆರಗಿರುತ್ತದೆ ಎಂಬ ಅಂಶವನ್ನು ಮರೆಯಲಾಗದು. ರಸ್ಸೆಲ್ ಮತ್ತು ಪಾಂಡ್ಯರ ನೆನ್ನೆಯ ಆಟದ ವೈಖರಿಯನ್ನು ಲೇಖನದ ಮೂಲ ಆಶಯವನ್ನು ಗಮನದಲ್ಲಿಟ್ಟುಕೊಂಡು ತುಲನೆ ಮಾಡಬಹುದೇನೋ).