ಶಾಸಕರಿಬ್ಬರ ರಾಜೀನಾಮೆ ಪ್ರಸಂಗ ಮತ್ತು ಸ್ಪೀಕರ್ ರಮೇಶ್ ಕುಮಾರ್ ನಿಲುವು

ಶಾಸಕರಿಬ್ಬರ ರಾಜೀನಾಮೆ ಪ್ರಸಂಗ ಮತ್ತು ಸ್ಪೀಕರ್ ರಮೇಶ್ ಕುಮಾರ್ ನಿಲುವು

ಓರ್ವ ಶಾಸಕ ಒಮ್ಮೆ ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರು ಯಾವುದೇ ಪಕ್ಷಕ್ಕೆ ಸೇರಿರುವುದಿಲ್ಲ. ಈ ನಿಯಮವನ್ನು ಹೌಸ್ ಆಫ್ ಕಾಮನ್ಸ್ ಮತ್ತು ಹೌಸ್ ಆಫ್ ಲಾರ್ಡ್ಸ್ ನಿಂದ ನಾವು ಎರವಲು ಪಡೆದಿದ್ದೇವೆ. ಸಭಾಧ್ಯಕ್ಷರ ಪಾತ್ರದ ಬಗ್ಗೆ May’s Parliamentary Practiceನಲ್ಲಿ ಉಲ್ಲೇಖಿಸಲಾಗಿದೆ. ಇದೇ ಪದ್ಧತಿಯನ್ನು ಸಂಸತ್ ಹಾಗೂ ಭಾರತದ ಎಲ್ಲ ವಿಧಾನಮಂಡಲಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಲೋಕಸಭೆಯಲ್ಲಿ ಸಭಾಧ್ಯಕ್ಷರ ಪೀಠದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದಂಥ ಮಾವಲಂಕರ್, ಕರ್ನಾಟಕದಲ್ಲಿ ವೈಕುಠ ಬಾಳಿಗಾ, ಕೆ.ಎಸ್.ನಾಗರತ್ನಮ್ಮ, ಕೆ.ಎಚ್.ರಂಗನಾಥ್, ಬಿ.ಜಿ.ಬಣಕಾರ್,ಡಿ.ಬಿ.ಚಂದ್ರೇಗೌಡ ಅಂಥವರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದವರು. 

ಈಗ ಸ್ಪೀಕರ್ ಆಗಿರುವ ರಮೇಶ್ ಕುಮಾರ್ ಅವರು 1994 ರಿಂದ 99 ರವರೆಗೆ ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿಯೂ ಅನುಭವ ಇರುವವರು. ಈ ನಿಯಮಗಳ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ. ಅವರ ಜನಪರ ನಿಲುವುಗಳು, ಪಾಂಡಿತ್ಯಪೂರ್ಣ ಭಾಷಣ, ಸದನದಲ್ಲಿ ವಿಪಕ್ಷಗಳ ಸದಸ್ಯರಿಗೂ ಮಾತನಾಡಲು ಸಮಾನ ಕಾಲಾವಕಾಶ, ಹೊಸ ಸದಸ್ಯರಿಗೆ ನೀಡುವ ಪ್ರೋತ್ಸಾಹ ಎಲ್ಲವೂ ಮೆಚ್ಚುಗೆಗೆ ಅರ್ಹವೇ. ರಮೇಶ್ ಕುಮಾರ್ ಅವರು ದೇವರಾಜ ಅರಸು ವಿಚಾರಧಾರೆಯ ಪ್ರಭಾವದಿಂದ ರೂಪುಗೊಂಡಿರುವುದಾಗಿ ಆಗಿಂದಾಗ್ಗೆ ಹೇಳುತ್ತಿರುತ್ತಾರೆ. ಅವರು ಓರ್ವ ವಿಭಿನ್ನ ನಿಲುವಿನ ಜನಪ್ರತಿನಿಧಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೂ ಕೆಲವು ಸಲ ಎಡವಿದ್ದಾರೇನೋ ಅನ್ನಿಸುತ್ತದೆ. ಇದಕ್ಕೆ ಉದಾಹರಣೆ ಆನಂದ್ ಸಿಂಗ್ ಮತ್ತು ರಮೇಶ್ ಜಾರಕೀಹೊಳಿ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ತಿಳಿಸಿರುವ ಸಂದರ್ಭ. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ರಮೇಶ್ ಕುಮಾರ್ ಅವರನ್ನು ಭೇಟಿಯಾದಾಗ, ‘ನನಗೆ ಯಾವುದೇ ರಾಜೀನಾಮೆ ಪತ್ರವೂ ಬಂದಿಲ್ಲ. ನನ್ನನ್ನು ಯಾರೂ ಭೇಟಿ ಮಾಡಿಲ್ಲ. ನಾನು ಯಾರದೇ ಸಂಪರ್ಕದಲ್ಲೂ ಇಲ್ಲ’ ಎಂದು ಖಾರವಾಗಿಯೇ ನುಡಿದರು. ‘ಹಾಗಾದರೆ ಪ್ರಭಾರಿ ಕಾರ್ಯದರ್ಶಿ ವಿಶಾಲಾಕ್ಷಿ ಅವರು ರಾಜೀನಾಮೆ ಪತ್ರ ಬಂದಿದೆ ಅಂತ ಹೇಳ್ತಾರಲ್ಲಾ?’ ಎಂದು ಪ್ರಶ್ನಿಸಿದಾಗ’ ಹಾಗಾದರೆ ಅವರನ್ನೇ ಕೇಳಿ’ ಕೋಪೋದ್ರಿಕ್ತರಾಗಿ ಉತ್ತರಿಸಿದರು. 

ರಮೇಶ್ ಜಾರಕೀಹೊಳಿ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ಸಭಾಧ್ಯಕ್ಷರಿಗೆ ಕಳಿಸಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ‘ಸ್ಪೀಕರ್ ಕಚೇರಿ ಪೋಸ್ಟಲ್ ಡಿಪಾರ್ಟ್ಮೆಂಟ್ ಅಲ್ಲ. ದನಗಳ ರೀತಿಯಲ್ಲಿ ವರ್ತನೆ ಮಾಡಲು ಆಗುವುದಿಲ್ಲ. ಶಾಸಕರು ಮೊದಲು ನೀತಿ ನಿಯಮಗಳನ್ನು ಅರಿತುಕೊಳ್ಳಬೇಕು’ ಅಂತ ಸಿಡುಕಿನಿಂದಲೇ ಪ್ರತಿಕ್ರಿಯಿಸಿದ್ದಾರೆ.  

ಸ್ಪೀಕರ್ ಸ್ಥಾನದಲ್ಲಿರುವ ಅವರು ವಾಚ್ಯಾರ್ಥದಲ್ಲೂ ಮಾತುಗಾರರಾಗಿದ್ದಾರೆಂದರೆ? ಸ್ಪೀಕರ್ ಸ್ಥಾನದಲ್ಲಿರುವವರು ಮಾತು ಕಡಿಮೆ ಮತ್ತು ತಾಳ್ಮೆ ಇರಬೇಕು. ಯಾರು ಏನು ಹೇಳುತ್ತಾರೆ ಎಂದು ಆಲಿಸುವ ತೆರೆದ ಕಿವಿಗಳಿರಬೇಕು. ಇದು ಅವರಿಗೆ ತಿಳಿದಿರದ ವಿಷಯವೇನಲ್ಲ. ಆದರೆ ಮಾಧ್ಯಮಗಳ ಪ್ರಶ್ನೆಗೆ ರಮೇಶ್ ಕುಮಾರ್ ಸಮರ್ಪಕ ಉತ್ತರ ನೀಡಲಿಲ್ಲ. ‘ಹತ್ತು ಮಂದಿ ರಾಜೀನಾಮೆ ಕೊಡ್ತಾರಂತಲ್ಲಾ?’ ಎಂಬ ಮಾಧ್ಯಮದ ಪ್ರಶ್ನೆಗೆ ಅವರು ‘ಬಿಜೆಪಿಯವರಾದ್ರೂ ರಾಜೀನಾಮೆ ಕೊಡ್ಲಿ, ಕಾಂಗ್ರೆಸ್ನವ್ರಾದ್ರೂ ರಾಜೀನಾಮೆ ಕೊಡ್ಲಿ, ಇಪ್ಪತ್ತು ಜನ ಸದಸ್ಯರಾದ್ರೂ ರಾಜೀನಾಮೆ ಕೊಡ್ಲಿ’ ಎಂದು  ಸ್ವಲ್ಪ ಒರಟಾಗಿಯೇ ಉತ್ತರಿಸಿದರು. 

ಆನಂದ್ ಸಿಂಗ್ ರಾಜೀನಾಮೆ ಕೊಟ್ಟ ದಿನ ಪತ್ರ ಬಂದಿಲ್ಲ, ಅದನ್ನು ನೋಡಿಲ್ಲ ಎಂದು ಹೇಳಿದ್ದ ಸ್ಪೀಕರ್, ಎರಡನೇ ದಿನ ‘ಎರಡು ಗಂಟೆಗೆ ನಮ್ಮ ಆಪ್ತ ಸಿಬ್ಬಂದಿ ಕಚೇರಿಗೆ ಪತ್ರ ಬಂದಿದೆ’ ಎಂದರು. ಸ್ಪೀಕರ್ ಅವರು ಮೊದಲ ದಿನವೇ ವಿಶಾಲಾಕ್ಷಿ ಅವರಿಗೆ ಫೋನ್ ಮಾಡಿ ರಾಜೀನಾಮೆ ಪತ್ರ ಬಂದಿದೆಯೇ ಎಂದು ವಿಚಾರಿಸಿ ನಿಮಗೆ ತಿಳಿಸುತ್ತೇನೆ’ ಎಂದು ಹೇಳಬಹುದಿತ್ತು. ರಾಜೀನಾಮೆ ನೀಡಿರುವುದಾಗಿ ಹೇಳುತ್ತಿರುವ ಶಾಸಕರ ಹೇಳಿಕೆಗಳ ಒಂದೊಂದು ಮಾತಿನ ಕುರಿತು ಪ್ರತಿಕ್ರಿಯಿಸುವ ಬದಲು ‘ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದ್ದರೂ ಸಾಕಿತ್ತು. ಮಾಧ್ಯಮ ಬಯಸಿದಂತೆ ರಮೇಶ್ ಕುಮಾರ್ ಉತ್ತರಿಸಬೇಕಿಲ್ಲ ನಿಜ. ಆದರೆ ಅವರ ಮನುಷ್ಯ ಸಹಜ ವರ್ತನೆ  ಸ್ಪೀಕರ್ ಸ್ಥಾನಕ್ಕೆ ಹೊಂದಿಕೊಳ್ಳುವಂತಿರುವುದಿಲ್ಲ. ತುಂಬ ಭಾವುಕ ವ್ಯಕ್ತಿಯಾದ ರಮೇಶ್ ಕುಮಾರ್,’ನಾನು ಗೌರವಯುತವಾಗಿಯೇ ಸಾಯಬೇಕೆಂದಿದ್ದೇನೆ. ಒಳ್ಳೆ ಕೆಲಸಗಳನ್ನು ಮಾಡಬೇಕೆಂದಿದ್ದೇನೆ. ಸಾರ್ವಜನಿಕ ಜೀವನದಲ್ಲಿರುವವರಿಗೆ ಮೂರು ಕಾಸಿನ ಬೆಲೆಯೂ ಇಲ್ಲವಾಗಿದೆ’ ಎಂದೂ ಹೇಳುತ್ತಾರೆ. ಅವರು ಸ್ಪೀಕರ್ ಆಗಿ ಈ ಮಾತುಗಳನ್ನು ಆಡುತ್ತಿದ್ದಾರೆ. ಕೇವಲ ರಮೇಶ್ ಕುಮಾರ್ ಆಗಿ ಈ ಮಾತುಗಳನ್ನು ಹೇಳುತ್ತಿಲ್ಲ.ಈ ಮಾತುಗಳನ್ನೆಲ್ಲ ಅವರು ಹೇಳುವ ಅಗತ್ಯ ಇದೆಯೇ? ಕೆಲವು ಇಕ್ಕಟ್ಟಿನ ಸಂದರ್ಭಗಳು ಇಂಥ ಮಾತುಗಳನ್ನೂ ಆಡಿಸಬಲ್ಲವು. ಆತ್ಮಸಾಕ್ಷಿ ಮತ್ತು ಒತ್ತಡಗಳ ನಡುವೆ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿಯಲ್ಲೂ ಈ ರೀತಿ ಭಾವುಕರಾಗಿ ಮಾತನಾಡಬಹುದು. ರಮೇಶ್ಡ ಕುಮಾರ್ ಅವರಂಥ ಸೂಕ್ಷ್ಮ ಸಂವೇದನೆಯ ವ್ಯಕ್ತಿಗಳ ಸಮಸ್ಯೆಯೇ ಇಂಥದ್ದು.ನಂಬಿಕೊಂಡ ತತ್ವಗಳು ಮತ್ತು ವೈಯಕ್ತಿಕವಾಗಿ ಕಾಡುವ ಭಾವನೆಗಳ ಸಂಘರ್ಷದಿಂದಲೂ ಉತ್ತಮ ವ್ಯಕ್ತಿಗಳೂ ಎಡವುವುದು ಸಾಧ್ಯವಿದೆ.   ಹೀಗಾಗಿಯೇ ಅವರಿಗೇ ಅರಿವಾಗದಂತೆ ಕೆಲವು ತಪ್ಪು ನಿರ್ಧಾರಗಳೂ ಹೊರಹೊಮ್ಮುತ್ತವೆ.   ಕೆಲವು ಸಲ ಅವರ ನಿಲುವು ಇಷ್ಟವಾಗುವಂತೆಯೇ ಅವರ ದ್ವಂದ್ವ, ಗೊಂದಲ, ಅನಗತ್ಯ ಮಾತುಗಳು ನಿರಾಶೆಯನ್ನೂ ಉಂಟು ಮಾಡುತ್ತದೆ.

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ 202 ನೇ ನಿಯಮದ ಅನ್ವಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿರುವ ಸದಸ್ಯರು ಖುದ್ದಾಗಿ ಸ್ಪೀಕರ್ ಎದುರು ಹಾಜರಾಗಿ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿಯೂ, ರಾಜೀನಾಮೆ ನೈಜವಾದುದೆಂದೂ, ತಮಗೆ ಯಾವುದೇ ಒತ್ತಡ ಇಲ್ಲ,ಬೆದರಿಕೆ ಇಲ್ಲ ಎಂದು ಮನವರಿಕೆ ಮಾಡಿದರೆ ಸಭಾಧ್ಯಕ್ಷರು. ವಿಳಂಬ ಮಾಡದೇ ರಾಜೀನಾಮೆಯನ್ನು ಅಂಗೀಕರಿಸಲು ಅವಕಾಶ ಇರುತ್ತದೆ. 

ಆನಂದ್ ಸಿಂಗ್ ರಾಜೀನಾಮೆ ಪತ್ರ ಬಂದಿದೆ. ಆದರೆ ರಮೇಶ್ ಜಾರಕೀಹೊಳಿ ರಾಜೀನಾಮೆ ಪತ್ರ ಬಂದಿಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ಕುರಿತು ಕ್ಷೇತ್ರದ ಜನಾಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಕೇವಲ ಪಕ್ಷಾಂತರಕ್ಕಾಗಿ ರಾಜೀನಾಮೆ ನೀಡುವ ವ್ಯಾವಹಾರಿಕ ಚಾಳಿ ಬೆಳೆಸಿಕೊಂಡಿರುವ ಶಾಸಕರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಮೇಶ್ ಕುಮಾರ್ ನಿಲುವು ನೈತಿಕವಾಗಿ ಸಮರ್ಥನೀಯವೇ ಆಗಿದೆ.  ರಾಜಕಾರಣ ನೈತಿಕ ಅಧಃಪತನದತ್ತ ಸಾಗಿರುವ ಈ ದಿನಗಳಲ್ಲಿ ಸ್ಪೀಕರ್ ಅವರು ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಜನಾಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದು ಜನಮೆಚ್ಚುಗೆಯ ಕ್ರಮವೇ ಆಗುತ್ತದೆ. ಓರ್ವ ಶಾಸಕ ಫ್ಯಾಕ್ಸ್ ಮೂಲಕ ರಾಜೀನಾಮೆ ಕಳಿಸಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳುವುದು ಬೇಜವಾಬ್ದಾರಿ ನಿಲುವೇ ಆಗುತ್ತದೆ. ಸ್ಪೀಕರ್ ಎಂಬ ಹುದ್ದೆಗೆ ಅದರದ್ದೇ ಆದ ಮಹತ್ವ, ಘನತೆ ಇದೆ. ಅದನ್ನು ಕಾಪಾಡಿಕೊಳ್ಳಬೇಕಾದ್ದು ಸದಸ್ಯರ ಜವಾಬ್ದಾರಿಯೂ ಹೌದು. ಆದರೆ ಸ್ಪೀಕರ್ ಅವರೇ ನೇರವಾಗಿ ಜನಾಭಿಪ್ರಾಯ ಪಡೆಯುವುದಕ್ಕೆ ನಿಯಮಗಳಲ್ಲಿ ಅವಕಾಶ ಇದೆಯೇ? ಸ್ಪೀಕರ್ ಅವರು ಈ ಪ್ರಕರಣ ಸಂಬಂಧ ಒಂದು ಸಮಿತಿ ರಚಿಸಿ ಆ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಬಹುದು. ಆದರೆ ರಮೇಶ್ ಕುಮಾರ್ ಅವರು ಪ್ರಾಮಾಣಿಕವಾಗಿಯೇ ಈ ನಿರ್ಧಾರಕ್ಕೆ ಬಂದಿದ್ದರೂ ಅವರು ಕಾಂಗ್ರೆಸ್ ಪರವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಕಳಂಕವನ್ನೂ ಹೊತ್ತುಕೊಳ್ಳುವ ಸಾಧ್ಯತೆ ಇದೆ.  

ಈ ಬಗ್ಗೆ ಗೋವಾ ವಿಧಾನಸಭೆಯ ಮಾಜಿ ಕಾರ್ಯದರ್ಶಿ ಹಾಗೂ ಕರ್ನಾಟಕ  ವಿಧಾನಸಭೆಯ ಕಾರ್ಯದರ್ಶಿ-2 ಆಗಿ ನಿವೃತ್ತಿ ಹೊಂದಿದ್ದ ಟಿ.ಎನ್, ಧೃವಕುಮಾರ್ ಅವರನ್ನು ‘ಡೆಕ್ಕನ್ ನ್ಯೂಸ್’ ಸಂದರ್ಶಿಸಿದಾಗ ಒಂದು ಸ್ವಾರಸ್ಯಕರ ಮಾಹಿತಿ ಒದಗಿಸಿದರು. 

ಅವರು ಗೋವಾ ವಿಧಾನಸಭೆಯ ಕಾರ್ಯದರ್ಶಿ ಆಗಿದ್ದ ಸಂದರ್ಭದಲ್ಲಿ 2007 ನೇ ಸಾಲಿನಲ್ಲಿ ಅಟೆನ್ಸಿಯೋ ಮಾನ್ಸುರೇಟ್(ಬಾಬುಶ್) ಎಂಬವರು ಯುನೈಟೆಡ್ ಗೋವಾ ಡೆಮಾಕ್ರಟಿಕ್ ಪಾರ್ಟಿ(ಯುಜಿಡಿಪಿ) ಸದಸ್ಯರಾಗಿದ್ದರು.  ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಲುವಾಗಿ ಅಂದಿನ ಸಭಾಧ್ಯಕ್ಷರಾಗಿದ್ದ ಹಾಗೂ  ಸಂಸತ್ ಸದಸ್ಯರಾಗಿರುವ ಫ್ರಾನ್ಸಿಸ್ಕೋ ಸರ್ದೀನಾ ಅವರನ್ನು ಭೇಟಿಯಾಗಲು ಬಂದಿದ್ದರು. ಅವರು ಕಚೇರಿಯಲ್ಲಿಲ್ಲದ ಕಾರಣ ಧೃವಕುಮಾರ್ ಅವರನ್ನು ಭೇಟಿಯಾಗಿ ‘ಸ್ಪೀಕರ್ ಇಲ್ಲದ ಕಾರಣ ನೀವು ರಾಜೀನಾಮೆ ಪತ್ರ ತೆಗೆದುಕೊಳ್ಳಿ’ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಧೃವಕುಮಾರ್ ‘ನೀವು ಸಭಾಧ್ಯಗಕ್ಷರನ್ನು ಖುದ್ದಾಗಿ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿ. ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು. ‘ಸ್ಪೀಕರ್ ಇಲ್ಲ. ನೀವು ಪತ್ರ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಿ’ ಎಂದು ಬಾಬುಶ್ ಮತ್ತೆ ಒತ್ತಾಯಿಸಿದರು. ಆನಂತರ ಧೃವಕುಮಾರ್ ದೂರವಾಣಿ ಮೂಲಕ ಗೋವಾ ವಿಧಾನಸಭೆಯ ಸ್ಪೀಕರ್ ಸರ್ದೀನಾ ಅವರನ್ನು ಸಂಪರ್ಕಿಸಿ ಈ ವಿಷಯವನ್ನು ಪ್ರಸ್ತಾಪಿಸಿದರು. ಆಗ ಸ್ಪೀಕರ್, ಬಾಬುಶ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, ‘ನಾನು ಈಗ ಆಫೀಸಿನಲ್ಲಿಲ್ಲ. ನಾನು ಸ್ವಕ್ಷೇತ್ರದಲ್ಲಿದ್ದೇನೆ. ಕಚೇರಿಗೆ ಬರುವುದಕ್ಕೆ ತಡವಾಗುತ್ತದೆ’ ಎಂದು ಧೃವಕುಮಾರ್ ಅವರ ಜತೆ ಮಾತುಕತೆ ಮುಂದುವರಿಸಿ,’ಈ ವಿಷಯದಲ್ಲಿ ನಿಯಮಗಳು ಏನು ಹೇಳುತ್ತವೆ? ‘ ಎಂದು ಪ್ರಶ್ನಿಸಿದರು.’ನಿಮ್ಮನ್ನು ಖುದ್ದಾಗಿ ಭೇಟಿಯಾಗಿ ರಾಜೀನಾಮೆ ನೈಜತೆಯಿಂದ ಕೂಡಿದೆ ಎಂದು ಮನವರಿಕೆ ಮಾಡಿಕೊಟ್ಟರೆ ಅಥವಾ ಸಚಿವಾಲಯದ ಮೂಲಕ ಮನವರಿಕೆ ಮಾಡಿಕೊಟ್ಟರೆ ರಾಜೀನಾಮೆ ಅಂಗೀಕರಿಸಬಹುದು’ ಎಂದರು. ‘ಅವರು ನಿಮ್ಮ ಮುಂದೆ ಇದ್ದಾರಾ?’ ಎಂದು ಸ್ಪೀಕರ್ ಪ್ರಶ್ನಿಸಿದರು. ‘ಹೌದು ಇದ್ದಾರೆ. ಅವರು ನಿಮ್ಮನ್ನು ಭೇಟಿಯಾಗಬೇಕು ಅಂತ ಇದ್ದಾರೆ’ ಎಂದು ಧೃವಕುಮಾರ್ ಹೇಳಿದರು. ಬಾಬುಶ್ ಅವರು ಅಲ್ಲಿಂದ ತೆರಳಿ ಸಭಾಧ್ಯಕ್ಷರನ್ನು ಖುದ್ಧಾಗಿ ಭೇಟಿಯಾಗಲು ಹೋಗುತ್ತೇನೆ ಎಂದು ಹೊರಟರು. ‘ಸಂಬಂಧಪಟ್ಟ ಕಡತ ಸಲ್ಲಿಸಿ’ ಎಂದು ಸ್ಪೀಕರ್ ಅವರು ಧೃವಕುಮಾರ್ ಅವರಿಗೆ ಸೂಚಿಸಿದರು. ಕಡತ ಸಲ್ಲಿಕೆಯೂ ಆಯಿತು.  ಅದೇ ದಿನ ರಾಜೀನಾಮೆ   ಅಂಗೀಕಾರಗೊಂಡು, ‘ಪ್ರಕಟಣೆಗೆ ಕ್ರಮ ಕೈಗೊಳ್ಳಿ; ಎಂದು ಸ್ಪೀಕರ್ ಧೃವಕುಮಾರ್ ಅವರಿಗೆ ಸೂಚಿಸಿದರು. ರಾಜೀನಾಮೆ ಕುರಿತು ಪ್ರಕಟಣೆಯೂ ಆಯಿತು. ನಂತರ ಬಾಬುಶ್ ಅವರು ಅದೇ ದಿನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸಾಂತಾಕ್ರೂಝ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ ಸಚಿವರೂ ಆದರು. ಈಗ ಅವರು ಮನೋಹರ್ ಪರಿಕ್ಕರ್ ನಿಧನದ ನಂತರ ತೆರವಾದ ಪಣಜಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಒಂದೇ ದಿನದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗಿರುವ ಇನ್ನೊಂದು ನಿದರ್ಶನ ಭಾರತದ ಸಂಸದೀಯ ಇತಿಹಾಸದಲ್ಲಿ ಕಂಡಿಲ್ಲ ಎನ್ನುತ್ತಾರೆ ಧೃವಕುಮಾರ್. 

ರಾಜೀನಾಮೆ ಪತ್ರ ಹಿಂತೆಗೆದುಕೊಂಡ ಪ್ರಕರಣದ ಕುರಿತು ಅವರು ಒಂದು ನಿದರ್ಶನವನ್ನೂ ನೀಡಿದ್ದಾರೆ. ಹನ್ನೆರಡನೇ ಲೋಕಸಭೆಯಲ್ಲಿ ಸದಸ್ಯರೊಬ್ಬರು 15-2-1999 ರಲ್ಲಿ ಸಭಾಧ್ಯಕ್ಷರಿಗೆ ಪತ್ರ ಬರೆದು ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸುತ್ತಾರೆ. ಆ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿರುತ್ತದೆ. ರಾಜೀನಾಮೆ ನೀಡಿದ್ದ ಅದೇ ಸದಸ್ಯರು 26-2-1999 ರಂದು ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಅದನ್ನು ಸಭಾಧ್ಯಕ್ಷರು ಪೀಠದಿಂದ ಗಮನಿಸಿ, ಕಾರ್ಯದರ್ಶಿ ಮೂಲಕ ತಮ್ಮ ಚೇಂಬರ್ಗೆ ಕರೆಸಿದರು. ‘ಸ್ವ ಇಚ್ಛೆಯಿಂದ ನೈಜವಾಗಿ ರಾಜೀನಾಮೆ ನೀಡಿದ್ದೇನೆ ಎಂದವರು ಈಗ ಏಕೆ ಸದನದಲ್ಲಿ ಹಾಜರಾಗಿದ್ದೀರಾ?’ ಎಂದು ಪ್ರಶ್ನಿಸಿದಾಗ ಅವರು, ‘ ಸರ್ಕಾರ ನಾನು ಹೇಳಿದ್ದ ಒಂದು ಸಮಸ್ಯೆಯನ್ನು ಪರಿಹರಿಸಿದೆ. ಹೀಗಾಗಿ ನನ್ನ ರಾಜೀನಾಮೆ ವಿಷಯವನ್ನು ಮುಂದುವರಿಸುವುದು ಬೇಡ’ ಎಂದರು. ‘ರಾಜೀನಾಮೆ ಹಿಂಪಡೆಯುವ ಪತ್ರ ಕೊಡಿ’ ಎಂದು ಅದನ್ನು ಪಡೆದು ಸಂಸದರಾಗಿ ಮುಂದುವರಿದರು. 

ಈ ನಿದರ್ಶನದ ರೀತಿಯಲ್ಲಿ ಜಿಂದಾಲ್ ಕಂಪನಿಗೆ ಸಂಬಂಧಿಸಿದಂತೆ ಆನಂದ್ ಸಿಂಗ್ ಅವರ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದರೆ ಅವರ ರಾಜೀನಾಮೆ ಹಿಂಪಡೆಯುವುದಕ್ಕೆ ವಿಪುಲ ಅವಕಾಶಗಳಿವೆ. ಇದೇ ನಿರ್ದಿಷ್ಟ ಕಾರಣವಲ್ಲದಿದ್ದರೆ ಅವರು ರಾಜೀನಾಮೆ ಹಿಂಪಡೆಯದಿರುವ ಸಾಧ್ಯತೆಯೂ ಇದೆ. ಮಾಧ್ಯಮಗಳಲ್ಲಿ ಬಂದಿರುವ ಅವರ ಹೇಳಿಕೆಗೂ ರಾಜೀನಾಮೆ ಪತ್ರದಲ್ಲಿರುವ ಮಾತುಗಳೂ ಒಂದೇ ರೀತಿಯಲ್ಲಿದೆಯಾ ಎನ್ನುವುದನ್ನೂ ನೋಡಬೇಕಿದೆ.