ಎದುರಾಗುತ್ತಿದೆ ಆರ್ಥಿಕ ಹಿಂಜರಿಕೆ

ಎದುರಾಗುತ್ತಿದೆ ಆರ್ಥಿಕ ಹಿಂಜರಿಕೆ

ನಮ್ಮ ರಾಷ್ಟ್ರದ ಜಿಡಿಪಿ ಕೂಡ ಶೇ. 5.1 ಕ್ಕೆ ಕುಸಿದು, ವಿತ್ತೀಯ ಕೊರತೆ 4.32 ಲಕ್ಷ ಕೋಟಿ ರು.ಗೇರಿದೆ. ಒಂದು ಅಮೆರಿಕನ್ ಡಾಲರ್ ಗೆ ನಮ್ಮ ರುಪಾಯಿ ಮೌಲ್ಯ 69 ರು.50 ಪೈಸೆಗೆ ಕುಸಿದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಆರ್ಥಿಕ ಹಿಂಜರಿತ ಎದುರಾಗಲಿದೆ ಎಂದು ಜಿ.ಆರ್.ಸತ್ಯಲಿಂಗರಾಜು ಎಚ್ಚರಿಸುತ್ತಿದ್ದಾರೆ. 

ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಮೂರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿರುವ ಭಾರತ ಈಗಿನ ತ್ರೈಮಾಸಿಕದ ಗತಿಯಲ್ಲೇ ನಡೆದರೆ, ಮುಂದೆ ಕಾದಿದೆ ಆರ್ಥಿಕ ಹಿಂಜರಿಕೆಯ ಗಂಡಾಂತರ ಎಂಬ ಎಚ್ಚರಿಕೆ ಗಂಟೆಗಳು ಮೊಳಗುತ್ತಿವೆ.

ಹನ್ನೊಂದು ವರ್ಷದ ಹಿಂದೆ ಅಂದರೆ 2008 ರಲ್ಲಿ ಆರ್ಥಿಕ ಹಿಂಜರಿತ ಅಮೆರಿಕಾದಂಥ ದೈತ್ಯ ರಾಷ್ಟ್ರವನ್ನೇ ಅಲುಗಾಡಿಸಿತ್ತು. ಭಾರತದಲ್ಲಿ ಅಂಥ ಸೋಂಕು ತಗುಲದಂತಾಗಿದ್ದರಲ್ಲಿ ಪ್ರಧಾನಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ದೂರದಷ್ಟಿಯೂ ಇತ್ತು, ನಮ್ಮಲ್ಲಿದ್ದ ಉಳಿತಾಯಗಳು ಸುಭದ್ರತೆಯನ್ನೊದಗಿಸಿದ್ದವು. ಆದರೆ ಇತ್ತೀಚಿನ ಆರ್ಥಿಕತೆಯ ಧಾಟಿ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ತಂದೊಡ್ಡುವ ಎಲ್ಲಾ ಸಾಧ್ಯತೆಗಳನ್ನೂ ಸಾರಿಹೇಳುತ್ತಿವೆ.

ಅರ್ಥಶಾಸ್ತ್ರದಲ್ಲಿ `ಕುದುರೆ ಹಿಂದಕ್ಕೆ ಗಾಡಿ ಕಟ್ಟಿದ್ದರೇನೇ ಪ್ರಗತಿಯತ್ತ ಎಳೆದುಕೊಂಡು ಹೋಗುತ್ತೆ. ಆದರೆ ಗಾಡಿಯ ಹಿಂದಕ್ಕೆ ಕುದುರೆ ಕಟ್ಟಿದರೆ ಪ್ರಗತಿಯ ಗತಿ ಉಲ್ಟಾ ಹೊಡೆಯುತ್ತೆ'. ಪ್ರಸ್ತುತದ ಪ್ರಾಪಂಚಿಕ ಆರ್ಥಿಕತೆಯನ್ನೇ ನೋಡಿದರೂ ಅಮೆರಿಕ ಮತ್ತು ಚೀನಾ ಪರಸ್ಪರ ಎದುರಾಳಿಯಾಗಲು ಟೊಂಕ ಕಟ್ಟಿ ನಿಂತಂತಿವೆ. ಆದರೆ ಕಳೆದ ಎರಡು ತ್ರೈಮಾಸಿಕದಲ್ಲಿ ಚೀನಾ ಮತ್ತು ಅಮೆರಿಕದ ಜಿಡಿಪಿ, ಉತ್ಪಾದಕತೆ ಕುಸಿದಿದೆ. ಮುಂದಿನ ತ್ರೈಮಾಸಿಕದಲ್ಲೂ ಇದೇ ಮುಂದುವರಿದರೆ ಆರ್ಥಿಕ ಜಂಜಾಟಕ್ಕೆ ಸಿಲುಕುವುದು ನಿಶ್ಚಿತ, ಜರ್ಮನಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ನಮ್ಮ ರಾಷ್ಟ್ರದ ಜಿಡಿಪಿ ಕೂಡ ಶೇ. 5.1 ಕ್ಕೆ ಕುಸಿದು, ವಿತ್ತೀಯ ಕೊರತೆ 4.32 ಲಕ್ಷ ಕೋಟಿ ರು.ಗೇರಿದೆ. ಒಂದು ಅಮೆರಿಕನ್ ಡಾಲರ್ ಗೆ ನಮ್ಮ ರುಪಾಯಿ ಮೌಲ್ಯ 69 ರು.50 ಪೈಸೆಗೆ ಕುಸಿದಿದೆ. ವಿದೇಶೀ ವಿನಿಮಯ ಸಂಗ್ರಹ ಕುಸಿಯುತ್ತಿದೆ. ವಿನಿಮಯ ಮೀಸಲು ಸಂಗ್ರಹದಲ್ಲಿ 5 ಸಾವಿರ ಕೋಟಿ(ಜುಲೈ 26) ವಿದೇಶೀ ಕರೆನ್ಸಿಗಳ ಸಂಗ್ರಹದಲ್ಲಿ 11, 730 ಲಕ್ಷ ಕೋಟಿ, ಐಎಂಎಫ್ ನಿಧಿಯಲ್ಲಿ ಭಾರತೀಯ ಕರೆನ್ಸಿ ಸಂಗ್ರಹ 108 ಕೋಡಿಯಷ್ಡು ಕಡಿಮೆಯಾಗಿದೆ.( ಚಿನ್ನದ ಮೀಸಲು ಸಂಗ್ರಹದಲ್ಲಿ ಮಾತ್ರ 7,038 ಕೋಟಿ ಹೆಚ್ಚಳವಾಗಿದೆ)

ಕಳೆದ ಆಯವ್ಯಯದಲ್ಲಿ ತೆರಿಗೆ ಹೆಚ್ಚಿಸಿದ್ದರ ಪರಿಣಾಮವಾಗಿ ಷೇರು ಮತ್ತು ಬಾಂಡ್‍ಗಳಲ್ಲಿ ತೊಡಗಿಸಿದ್ದನ್ನ ವಾಪಸ್ ಪಡೆಯುವ ಪ್ರಮಾಣ ಏರಿಕೆಯಾಗಿದ್ದು, ವಿದೇಶೀ ಹೂಡಿಕೆದಾರರು ಜುಲೈ ನಲ್ಲಿ 14,383 ಕೋಟಿ ಮೌಲ್ಯದ ಷೇರು ಮಾರಿದ್ದಾರೆ.

ತೆರಿಗೆ ಕಾನೂನು, ಸರ್‍ಚಾರ್ಜ್ ವಿಧಿಕೆಯಂಥ ಕ್ರಮಗಳು ಹೂಡಿಕೆ ಮೇಲೆ ಭಾರೀ ಹೊಡೆತ ಬಿದ್ದಿದೆ. ಷೇರು ಪೇಟೆಯಲ್ಲಿ ಏಕಮುಖ ಇಳಿಕೆ ದಾಖಲಾಗುತ್ತಿದೆ. ಇದು ಕಳೆದ 5 ತಿಂಗಳಲ್ಲಿ ಅತಿ ಕನಿಷ್ಟ ಮಟ್ಟಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆಯ ಲಕ್ಷಣವೇನಲ್ಲ. ಕಳೆದ ಜುಲೈ 1 ರಿಂದ ಆಗಸ್ಟ್ 2 ರ ಅವಧಿಯಲ್ಲಿ 152.55 ಲಕ್ಷ ಕೋಟಿ ಇದ್ದ ಷೇರು ಪೇಟೆ ಬಂಡವಾಳ 139.98 ಲಕ್ಷ ಕೋಟಿ ರು.ಗೆ ಇಳಿದು ಹೋಗಿದೆ. ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ 13 ಲಕ್ಷ ಕೋಟಿ ರು. ಸಂಪತ್ತು ಇನ್ನಿಲ್ಲದಂತಾಗಿ ಹೋಗಿದೆ.

ವಾಹನ ಮಾರಾಟದಲ್ಲೂ ಅತೀವ ಇಳಿಕೆ ದಾಖಲಾಗಿದ್ದು, ವಾಣಿಜ್ಯ ವಾಹನಗಳಲ್ಲಿ ಶೇ.14, ನಾಲ್ಕು ಚಕ್ರವಾಹಗಳಲ್ಲಿ ಶೆ.12, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ. 10 ರಷ್ಟು ಇಳಿಕೆಯಾಗಿದೆ. ಕಳೆದ 18 ತಿಂಗಳಲ್ಲಿ 286 ಕಾರು ಮಾರಾಟ ಮಳಿಗೆ ಮುಚ್ಚಿವೆ, ಮಾರುತಿ, ಟಾಟಾ, ಮಹೀಂದ್ರ ಮತ್ತು ಮಹೀಂದ್ರದಂಥ ಉದ್ಯಮಗಳು ಉತ್ಪಾದನೆಯನ್ನೇ ಸ್ಥಗಿತಗೊಳಿಸಿವೆ. ಆಟೋಮೊಬೈಲ್ ಕ್ಷೇತ್ರ ನೇರ ಅನೇಕವಾಗಿ 35 ಮಿಲಿಯನ್ ಜನರಿಗೆ ಉದ್ಯೋಗ ಕೊಟ್ಟಿರುವಂಥದ್ದು. ರಾಷ್ಟ್ರದ ಜಿಡಿಪಿಗೆ ಶೇ. 7 ರಷ್ಟು, ಉತ್ಪಾದಕಾ ಜಿಡಿಪಿಯಲ್ಲಿ ಶೇ 49 ರಷ್ಟು ಈ ಕ್ಷೇತ್ರದಿಂದಲೇ ಇದೆ. ಬಿಡಿಭಾಗಗಳ ಮಾರಾಟ, ಸೆಕೆಂಡ್ ಹ್ಯಾಂಡ್ ವಾಹನ ಮಾರಾಟದಲ್ಲೂ ಗಣನೀಯ ಇಳಿಕೆ ದಾಖಲಾಗಿದ್ದು ಈ ವಲಯ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ.

ಗೃಹಕೃತ್ಯದ ಸರಕುಗಳ ಖರೀದಿಯೂ ಶ್ರೇಷ್ಠ ಮಟ್ಟದಲ್ಲಿಲ್ಲ. ನಿರ್ಮಾಣ ಕ್ಷೇತ್ರ ಸುಗಮವಾಗಿಲ್ಲ. ಮಳೆಯ ಅಭಾವದಿಂದಾಗಿ ಕೃಷಿ ವಲಯವೂ ಕಂಗೆಟ್ಟು ಆಹಾರ ಧಾನ್ಯಗಳ ಕೊರತೆ ಎಂಬ ಭೂತಕೋಲ ಎದುರಿಗಿದೆ.

ಭದ್ರತಾ ಸಾಲ, ವೈಯಕ್ತಿಕ ಸಾಲದಂಥದ್ದಕ್ಕೆ ಬದಲಾಗಿ ಕ್ರೆಡಿಟ್ ಕಾರ್ಡುಗಳನ್ನ ಬಳಸಿ ತೆಗೆದಿರುವ ಸಾಲ 93,600 ಕೋಟಿ ರು.ಗೆ ಏರಿಕೆಯಾಗಿದೆ. ಇದಕ್ಕೆ ತದ್ವಿರುದ್ದವಾಗಿ ಭದ್ರತೆ ಮೇಲೆ ಪಡೆಯುವ ಸಾಲದಲ್ಲಿ ಕುಸಿತವಾಗಿದೆ. ಇದ್ದ ಉದ್ಯೋಗವೇ ಕಿತ್ತುಕೊಂಡು ಹೋಗುತ್ತಿದೆ, ಹೊಸ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಹೂಡಿಕೆ, ಉತ್ಪನ್ನ, ರಫ್ತು ಎಲ್ಲ ಕುಸಿತದ ಹಾದಿಯಲ್ಲಿದ್ದೂ ಶ್ರೀಸಾಮಾನ್ಯನ ಖರೀದಿ ಶಕ್ತಿಯೇ ಕುಂದಿದೆ. ತೆರಿಗೆ ರಾಜಸ್ವ ವಸೂಲಿಯಲ್ಲಿ ಮಂದಗಾಮಿತನವೇ ಇದೆ.

ಇದೇ ಸ್ಥಿತಿ ಮುಂದಿನ ತ್ರೈಮಾಸಿಕದಲ್ಲೂ ಮುಂದುವರಿದರೆ ಆರ್ಥಿಕ ಹಿಂಜರಿಕೆಗೆ ಒಡ್ಡಿಕೊಳ್ಳಬೇಕಾಗುತ್ತೆ. ಇದರ ಜತೆಯಲ್ಲೇ ಜಮ್ಮು ಕಾಶ್ಮೀರದಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿರುವಂಥದ್ದು ಯುದ್ದದತ್ತ ಒಯ್ಯುತ್ತದೆಯೇ, ಕಣಿವೆ ರಾಜ್ಯವನ್ನ ಮೂರುಭಾಗ ಮಾಡಲಾಗುವುದೇ ಎಂಬ ಕೌತುಕತೆಯೆಡೆಗೆ ಹೊರಳಿಸಿದೆ. ಕಣಿವೆ ರಾಜ್ಯದಲ್ಲಿ ಯುದ್ದದಂಥ ಸ್ಥಿತಿ ಬಂದೊದಗಿದರೆ ಅದು ಆರ್ಥಿಕತೆಯ ಮೇಲೆ ಮತ್ತಷ್ಟು ಮೋಡ ಕವಚುವಂತೆ ಮಾಡಲ್ಲ ಎಂಬುದಕ್ಕೆ ಪುರಾವೆಗಳಿಲ್ಲ. ಜಾಗತಿಕ ಆರ್ಥಿಕ  ವಿದ್ಯಾಮಾನಗಳೂ ಆಶಾದಾಯಕವಾಗಿಲ್ಲದ ಈ ವೇಳೆಯಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಕುಸಿತ ಕಂಡಿರುವ ನಮ್ಮ ರಾಷ್ಟ್ರವೂ ಆರ್ಥಿಕ ಜಂಜಡಕ್ಕೆ ಸಿಲುಕುತ್ತೆ ಎಂಬ ಅಪಾಯದ ಹೊಸ್ತಿಲಲ್ಲೇ ಇದೆ. ಹೊಸ್ತಿಲು ದಾಟಿ ಆರ್ಥಿಕ ಹಿಂಜರಿತ ಮನೆಯೊಳಕ್ಕೆ ಪ್ರವೇಶಿಸುವುದೋ, ದಾಟದೆಯೇ ಹಿಂಜರಿತದ ಮನೆಯಿಂದ ಆಚೆಯೇ ಉಳಿದು ಬಿಡುವುದೋ ಎಂಬ ಲೆಕ್ಕಾಚಾರಗಳು ಆರ್ಥಿಕ ತಜ್ಞರಿಂದ ವಿಮರ್ಶೆಗಳಾಗುತ್ತಿವೆ. ಭಾರತೀಯರು ಮಾತ್ರ ಎಂಥದ್ದಕ್ಕೂ ಸಜ್ಜಾಗಿರಲೇಬೇಕಿದೆ.  ಏಕೆಂದರೆ ಕಾಲ ಅಡಿಯಲ್ಲೇ ಆರ್ಥಿಕ ಹಿಂಜರಿತದ ಕಮರಿ ಇದೆ.