ಹಂದಿ ರಕ್ತ ಮನುಷ್ಯರಿಗೆ ಕೊಡ್ತಾರಂತೆ! ವೈದ್ಯಕೀಯ ವಿಜ್ಞಾನದಲ್ಲಿದು ಹೊಸತಲ್ಲ

ಹಂದಿ ರಕ್ತ ಮನುಷ್ಯನಿಗೆ ಹೊಂದಿಕೊಳ್ಳುತ್ತದೆ ಎಂದು ವೈದ್ಯ ಲೋಕ ಸಾಬೀತು ಪಡಿಸಿದೆ

ಹಂದಿ ರಕ್ತ ಮನುಷ್ಯರಿಗೆ ಕೊಡ್ತಾರಂತೆ! ವೈದ್ಯಕೀಯ ವಿಜ್ಞಾನದಲ್ಲಿದು ಹೊಸತಲ್ಲ

ಇತರ ಪ್ರಾಣಿಗಳಿಗೆ ಹೋಲಿಸಿಕೊಂಡರೆ ಹಂದಿಯ ರಕ್ತದಲ್ಲಿ ಆಮ್ಲಜನಕವನ್ನ ಸಾಗಿಸುವ ಕೆಂಪು ಕಣಗಳು(ಹಿಮೋಗ್ಲೊಬಿನ್) ಉಳಿದೆಲ್ಲ ಪ್ರಾಣಿಗಳಿಗಿಂತ ಮನುಷ್ಯನಿಗೆ ಹೊಂದಿಕೊಳ್ಳುತ್ತವೆ ಎಂಬುದು ಸಾಬೀತಾಗಿದೆ.ಈ ಹಿನ್ನೆಲೆಯಲ್ಲಿ ವೈದ್ಯಕೀಯ ಲೋಕದ ಕೆಲವು ಅಚ್ಚರಿಗಳನ್ನು ಜಿ.ಆರ್.ಸತ್ಯಲಿಂಗರಾಜು ಇಲ್ಲಿ ದಾಖಲಿಸಿದ್ದಾರೆ.

ಹಂದಿ ರಕ್ತ ಮನುಷ್ಯರಿಗೆ ಕೊಡ್ತಾರೆ, ಹಾಗಾದ್ರೆ ಮುಂದೇನು?

ಇಂಥ ಪ್ರಶ್ನೆಗಳನ್ನ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಜತೆಗೆ, ಅಲ್ಪಸಂಖ್ಯಾತ ಮುಸಲ್ಮಾನರನ್ನ ವ್ಯಂಗ್ಯವಾಗಿ ಕೆಣಕುವಂತಾಗುತ್ತಿದೆ. ಈ ಹಿನ್ನೆಲೆಯಲ್ಲೇ ವೈದ್ಯಕೀಯ ವಿಜ್ಞಾನದತ್ತ ಕಣ್ಣು ಹೊರಳಿಸಿದರೂ, ಕ್ಸೆನಾನ್ ಟ್ರಾನ್ಸ್ ಫ್ಯೂಷನ್(ಎಕ್ಸ್ ಟಿಎಫ್) , ಕ್ಸೆನಾನ್ ಟ್ರಾನ್ಸ್ ಪ್ಲಾಂಟೇಷನ್(ಎಕ್ಸ್ ಟಿ), ಕ್ಸೆನಾನ್ ಎಕ್ಸ್ ಪೀರಿಮೆಂಟ್(ಎಕ್ಸ್ ಇ) ಎಂಬುದು ಆರಂಭವಾಗಿದ್ದು 1665 ರಲ್ಲಿ. ಗ್ರೀಕ್ ನಲ್ಲಿ ಕ್ಸೆನಾನ್ ಎಂದರೆ ಅಪರಿಚಿತ, ವಿದೇಶಿ ಎಂಬರ್ಥ. ಮನುಷ್ಯನಿಗೆ ಮನುಷ್ಯನಲ್ಲದ ಪ್ರಾಣಿಗಳಿಂದ ರಕ್ತ, ಆವಯವಗಳನ್ನ ಕೊಡುವಂಥದ್ದು ಎಂಬುದು ಇದರ ಒಟ್ಟಾರೆ ಸಾರ.


ನಾಯಿಯಿಂದ ನಾಯಿಗೆ, ಕೋತಿಯಿಂದ ಕೋತಿಗೆ ರಕ್ತ ಕೊಡುವಂಥ ಪ್ರಯೋಗ 1665 ರಲ್ಲೇ ಆಗಿತ್ತು. ರಿಚರ್ಡ್ ಲೋವರ್ ಎಂಬಾತ 1667 ರಲ್ಲಿ ಕುರಿಯ ರಕ್ತವನ್ನ 22 ವರ್ಷದ ವ್ಯಕ್ತಿಯೊಬ್ಬನಿಗೆ ಕೊಟ್ಟಿದ್ದರು. ನಂತರದಲ್ಲಿ ಹಂದಿ ಮೂತ್ರಪಿಂಡವನ್ನ 1902 ರಲ್ಲಿ ಮಹಿಳೆಗೆ, ಮೊಲದ ಮೂತ್ರಪಿಂಡವನ್ನ ಮಗುವಿಗೆ 1905 ರಲ್ಲಿ, ಹಂದಿ ಮತ್ತು ಮೇಕೆಯ ಆವಯವಗಳನ್ನ ಮನುಷ್ಯನಿಗೆ 1906 ರಲ್ಲಿ, ಕಪಿಯ ಮೂತ್ರಪಿಂಡವನ್ನ ಮನುಷ್ಯನಿಗೆ 1910 ರಲ್ಲಿ ಕೊಟ್ಟಿರುವ ಪ್ರಯೋಗಗಳು ನಡೆದಿದೆ.


1900 ರಲ್ಲಿ ಅಲೆಕ್ಸ್ ಕಾರ್ರೆಲ್ ಎಂಬಾತ ಶಸ್ತ್ರಚಿಕಿತ್ಸೆಯಲ್ಲಿ ಆಧುನಿಕ ಸಂಸ್ಕರಣೆಯನ್ನ ಅಳವಡಿಸಿದ ಬಳಿಕ, ಪ್ರಾಣಿಗಳ ರಕ್ತ, ಆವಯವವನ್ನ ಮನುಷ್ಯನಿಗೆ ಕೊಡುವಂಥ ಪ್ರಯೋಗಗಳು ಮತ್ತಷ್ಟು ಹೆಚ್ಚಿತು, ಇದಕ್ಕೆ ಇದೇ ಸಮಯದಲ್ಲಿ ಕಾರ್ಲ್ ಲ್ಯಾಂಡ್‍ ಸ್ಟೀನರ್ ರಕ್ತ ಗುಂಪನ್ನ ಪರಿಶೋಧಿಸಿದ್ದರಿಂದ ರಕ್ತ ವರ್ಗಾವಣೆಯಲ್ಲಿ ಪ್ರಗತಿಗಳಾದವು.


ಇತರೆ ಪ್ರಾಣಿಗಳಿಗೆ ಹೋಲಿಸಿಕೊಂಡರೆ ಹಂದಿಯ ರಕ್ತದಲ್ಲಿ ಆಮ್ಲಜನಕವನ್ನ ಸಾಗಿಸುವ ಕೆಂಪು ಕಣಗಳು(ಹಿಮೋಗ್ಲೊಬಿನ್) ಉಳಿದೆಲ್ಲ ಪ್ರಾಣಿಗಳಿಗಿಂತ ಮನುಷ್ಯನಿಗೆ ಹೊಂದಿಕೊಳ್ಳುತ್ತವೆ ಎಂಬುದು ಸಾಬೀತಾಗಿದೆ. ಆದರೆ ಹಂದಿ ರಕ್ತವನ್ನ ಮನುಷ್ಯನಿಗೆ ಕೊಡುವುದೆಂದರೆ ಅದು ಇನ್ನೊಂದು ಪ್ರಾಣಿಯ ಜೀವಕ್ಕೆ, ಆರೋಗ್ಯಕ್ಕೆ ತೊಂದರೆ ಕೊಡುವಂಥದ್ದಲ್ಲವೇ ಎಂಬ ಆಕ್ಷೇಪಗಳು ಎದ್ದಿವೆ. (ತದ್ರೂಪು ಅಥವಾ ಕ್ಲಾನಿಂಗ್, ಪ್ರನಾಳ ಶಿಶು ಅಥವ ಟೆಸ್ಟ್ ಟ್ಯೂಬ್ ಬೇಬಿ ಕುರಿತಂತೆಯೂ ಇಂಥದ್ದೇ ಆಕ್ಷೇಪಗಳಿವೆ) ನಾಲ್ಕು ಶತಮಾನಗಳ ಹಿಂದಿನಿಂದಲೂ ನಾನಾ ವರ್ಗದ ಪ್ರಾಣೀಗಳ ರಕ್ತ, ದೇಹದ ಭಾಗಗಳನ್ನ ಮನುಷ್ಯನಿಗೆ ಅಳವಡಿಸುವಂಥ ಪ್ರಯೋಗಗಳೂ ಆಗುತ್ತಿವೆ, ಇದರಲ್ಲೆಲ್ಲ ಹಂದಿ ರಕ್ತ ಮಾನವನಿಗೆ ಹೊಂದುತ್ತೆ ಎಂಬ ನಿಲುವಿಗೂ ಬರಲಾಗಿದೆ. ಕೆಲವಾರು ನೈತಿಕತೆ ಪ್ರಶ್ನೆಯಂಥವುಗಳಿಂದಾಗಿ ಇಂಥದ್ದನ್ನ ಅನುಷ್ಠಾನಕ್ಕೆ ತಂದಿಲ್ಲ.


ಇಷ್ಟು ಸಾರಾಂಶ ಇತಿಹಾಸವಿರುವ, ಕ್ಸೆನೊನ್ ಟ್ರಾನ್ಸ್ ಫ್ಯೂಷನ್ ಈಗ ಜಾಲತಾಣಗಳಲ್ಲಿ ಹಂದಿ ರಕ್ತ ಮನುಷ್ಯನಿಗೆ ಕೊಡ್ತಾರಂತೆ ಎಂಬ ಚರ್ಚೆಯನ್ನೆತ್ತಲಾಗಿದೆ. ಹಾಗೆ ನೋಡುವುದಾದರೆ ರಕ್ತದ ಅಂಶ ಹೆಚ್ಚಾಗಲಿ ಎಂದು ತೆಗೆದುಕೊಳ್ಳುವಂಥ ಅನೇಕ ಮಾತ್ರೆಗಳ ಮೂಲ ಕೋಣಗಳು, ಹಸುಗಳ ಕರುಳುಗಳನ್ನ ಸಂಸ್ಕರಣೆಗೊಳಪಡಿಸಿ ತೆಳುವಾದ ಹಾಳೆ ಮಾಡಿ ಸಿಹಿತಿಂಡಿ ಹಾಗು ಇತ್ಯಾದಿಯ ಮೇಲೆ ಫಳಫಳನೆ ಹೊಳೆಯುವಂತಾಗಲು ಹಚ್ಚುವಂಥದ್ದೆಲ್ಲ ದಿನ ನಿತ್ಯದಲ್ಲಿ ಹಾಸುಹೊಕ್ಕಾಗಿದೆ. ಅಂಥದ್ದರಲ್ಲೀಗ ಹಂದಿ ರಕ್ತ ಮನುಷ್ಯನಿಗಾ, ಇನ್ನು ಅವರ  ಕತೆ ಏನು ಎಂಬ ವ್ಯಂಗ್ಯವನ್ನಾಡುತ್ತಿರುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಹಿಂದುಗಳಿಗೆ ನಿಷಿದ್ದವಾಗಿರುವ ಪ್ರಾಣಿಗಳಿಂದಲೇ ಹಲವಾರು ಔಷಧಿ ಮಾತ್ರೆಗಳು ತಯಾರಾಗುತ್ತಿವೆ ಎಂಬುದನ್ನ ಮರೆಯಬಾರದು.