ಗುಂಡ್ಲುಪೇಟೆಯಲ್ಲಿ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ: ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ

ಗುಂಡ್ಲುಪೇಟೆಯಲ್ಲಿ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ: ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ

ಗುಂಡ್ಲಪೇಟೆ: ದೇವಸ್ಥಾನ ಅಪವಿತ್ರಗೊಳಿಸಿದ ಎಂಬ ಕಾರಣಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕ ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ದ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಿಎಂ ಕುಮಾರಸ್ವಾಮಿ ಸೂಚಿಸಿದ್ದಾರೆ.  

ಈ ಘಟನೆ ಕುರಿತು ಟ್ವೀಟ್‍ ಮಾಡಿರುವ ಸಿಎಂ ಕುಮಾರಸ್ವಾಮಿ, ‘ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಸಮಾಜದಲ್ಲಿ ಜಾತಿ ವೈಷಮ್ಯ ಇನ್ನೂ ಮುಂದುವರಿದಿರುವುದು ದುರದೃಷ್ಟಕರ. ಇಂಥ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಗುಂಡ್ಲಪೇಟೆ ತಾಲ್ಲೂಕಿನಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಸಮಾಜದಲ್ಲಿ ಜಾತಿ ವೈಷಮ್ಯ ಇನ್ನೂ ಮುಂದುವರಿದಿರುವುದು ದುರದೃಷ್ಟಕರ. ಇಂಥ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು.

— H D Kumaraswamy (@hd_kumaraswamy) June 12, 2019

ಜೂನ್ 3ರಂದು ಗುಂಡ್ಲುಪೇಟೆಯ ಶ್ಯಾನಾಡ್ರಹಳ್ಳಿಯ ಪ್ರತಾಪ್ ಎಂಬುವರು ಶನೇಶ್ವರ ದೇವಸ್ಥಾನದ ಆವರಣಕ್ಕೆ ಬಂದು ವಿಶ್ರಾಂತಿ ಪಡೆಯಲು ಮಲಗಿದ್ದರು. ಇದನ್ನು ಕಂಡ ದೇವಸ್ಥಾನದ ಪೂಜಾರಿ ಇವನು ಹೊಲೆಯ ಜಾತಿಯವನು, ದೇವಸ್ಥಾನದ ಒಳಗೆ ಕುಳಿತು ಅಪವಿತ್ರಗೊಳಿಸಿದ್ದಾನೆ, ಇವನನ್ನು ಬೆತ್ತಲೆಗೊಳಿಸಿ ತೆಂಗಿನ ಮರಕ್ಕೆ ಕಟ್ಟಿಹಾಕಿ ಹೊಡೆಯಿ‌ರಿ ಎಂದು ಹೇಳಿದ್ದರು. ಅಲ್ಲದೇ ಪ್ರತಾಪ್‌ನ ಎರಡು ಕೈಗಳನ್ನು ಹಿಂದಕ್ಕೆ ಸೇರಿಸಿ ಹಗ್ಗದಿಂದ ಕಟ್ಟ ಬೆತ್ತಲೆ ಮೆರವಣಿಗೆ ಮಾಡಲಾಗಿತ್ತು.