ಮಾರುಕಟ್ಟೆಯ ಸೌಧವೂ, ಸರಕು ಮಾರುವ ವಿಧಾನವೂ

ಮಾರುಕಟ್ಟೆಯ ಸೌಧವೂ, ಸರಕು ಮಾರುವ ವಿಧಾನವೂ

ಕರ್ನಾಟಕದ ಜನತೆ ಬಯಸುವುದು ದಕ್ಷ, ಪ್ರಾಮಾಣಿಕ, ಪಾರದರ್ಶಕ ,ಜನಪರ ಆಡಳಿತ ನಡೆಸುವ ಒಂದು ಸರ್ಕಾರವನ್ನು. ಬಹುಶಃ ಇಂದಿನ ಪರಿಸ್ಥಿತಿಯಲ್ಲಿ ಇದು ಕನಸಾಗಿಯೇ ಉಳಿಯುತ್ತದೆ. ಬಳ್ಳಾರಿಯ ಗಣಿಯಿಂದ ಕೋಲಾರದ ಗಣಿಯವರೆಗೆ , ಬೀದರ್ ಕೋಟೆಯಿಂದ ಮಲೆನಾಡಿನ ದಟ್ಟ ಕಾಡುಗಳವರೆಗೆ ಸಂಪನ್ಮೂಲಗಳ ಲೂಟಿಗಾಗಿ ಹಾತೊರೆಯುತ್ತಿರುವ ಜೀವಗಳು ಅಧಿಕಾರ ಪೀಠಗಳಿಗಾಗಿ ಕೈಚಾಚಿ ನಿಂತಿವೆ ಎನ್ನುತ್ತಾರೆ ನಾ. ದಿವಾಕರ.

ಕರ್ನಾಟಕದ ವಿಧಾನಸಭೆ ಮತ್ತೊಮ್ಮೆ ಮಾರುಕಟ್ಟೆಯಂತಾಗಿದೆ. ಮೀನಿನ ಮಾರುಕಟ್ಟೆಯಲ್ಲಿ ತರಾವರಿ ಮೀನುಗಳು ನಿಸ್ತೇಜವಾಗಿ ಬಿದ್ದುಕೊಂಡಿರುವಂತೆ ಕರ್ನಾಟಕದ ಶಾಸಕ ಮಹಾಶಯರು ತಮ್ಮನ್ನು ಯಾರು ಬೇಕಾದರೂ ಕೊಂಡುಕೊಳ್ಳಲಿ ಎಂದು ಬುಟ್ಟಿಗಳಲ್ಲಿ ಕುಳಿತುಕೊಂಡಿದ್ದಾರೆ. ಬಿಕರಿಯಾಗುವ ವಸ್ತುಗಳು ಹೇರಳವಾಗಿ ಲಭ್ಯವಿದ್ದರೂ ಕೊಳ್ಳುವವರಲ್ಲಿನ ಆತಂಕ ಮತ್ತು ಅನುಮಾನಗಳು ಮಾರುಕಟ್ಟೆ ಪ್ರಕ್ರಿಯೆಗೆ ತಡೆಯೊಡ್ಡಿವೆ. ಹರಾಜು ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೆಲೆ ತೆತ್ತು ಶಾಸಕರೆಂಬ ಸರಕುಗಳನ್ನು ಕೊಳ್ಳುವ ಸಾಮರ್ಥ್ಯ ಇರುವ ಬಿಜೆಪಿ ಏಕೋ ಬಂಡವಾಳ ಹೂಡಲು ಹಿಂಜರಿಯುತ್ತಿದೆ. ಏಕೆಂದರೆ ಕೊಂಡುಕೊಳ್ಳಬೇಕಿರುವುದು ಕುರಿಗಳನ್ನಲ್ಲ, ಜನತಾ ಜನಾರ್ಧನರೆಂಬ ಕುರಿಗಳಿಂದ ಆಯ್ಕೆಯಾಗಿರುವ ಬಿಳಿ ಆನೆಗಳನ್ನು. ಸಚಿವ ಹುದ್ದೆ, ನಿಮಗ ಮಂಡಳಿ ಅಧ್ಯಕ್ಷ ಹುದ್ದೆ, ಅಧ್ಯಕ್ಷ-ಉಪಾಧ್ಯಕ್ಷ-ಕಾರ್ಯಾಧ್ಯಕ್ಷ ಹುದ್ದೆ ಹೀಗೆ ಈ ಬಿಳಿಯಾನೆಗಳಿಗೆ ಸೂಕ್ತ ಸ್ಥಾನಗಳನ್ನು ಕಲ್ಪಿಸದೆ ಹರಾಜಿನಲ್ಲಿ ಬೆಲೆ ಕಟ್ಟಲಾಗುವುದಿಲ್ಲ ಎಂಬ ವಾಸ್ತವವನ್ನು ಆಪರೇಷನ್ ಕಮಲದ ನುರಿತ ಸರ್ಜನ್ ಗಳು ಅರಿತಿದ್ದಾರೆ. ಹಳ್ಳಿ ಹಕ್ಕಿ ಹಾಡು ಮತ್ತು ಮತಸಂತೆ ಎಂಬ ಕೃತಿಗಳನ್ನು ರಚಿಸುವ ಮೂಲಕ ರಾಜಕೀಯ ಮಾರುಕಟ್ಟೆಯ ಆಂತರ್ಯವನ್ನು ಬಿಚ್ಚಿಟ್ಟ ಜೆಡಿಎಸ್ ಶಾಸಕ ಎ ಹೆಚ್ ವಿಶ್ವನಾಥ್ ಈಗ ಸ್ವತಃ ಮತಸಂತೆಯಿಂದ ಹೊರಬಂದು ರಾಜಕೀಯ ಸಂತೆಯಲ್ಲಿ ಬಿಕರಿಯಾಗಲು ಸಿದ್ಧನಾಗಿರುವ ಸಂತನಂತೆ ನಿಂತಿರುವುದು ವಿಪರ್ಯಾಸ.

ಅತ್ಯಂತ ಕಡಿಮೆ ಸ್ಥಾನ ಗಳಿಸಿರುವ ಪಕ್ಷವೊಂದು ಜಾತ್ಯಾತೀತ ಮತ್ತು ಕೋಮುವಾದದ ಸಂಘರ್ಷದ ಲಾಭ ಪಡೆದು ಅಧಿಕಾರ ರಾಜಕಾರಣದಲ್ಲಿ ತನ್ನ ಅಧಿಪತ್ಯ ಸಾಧಿಸಲು ಯತ್ನಿಸಿದರೆ ಏನಾಗಬಹುದು ಎನ್ನುವುದಕ್ಕೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಸ್ಪಷ್ಟ ಉದಾಹರಣೆಯಾಗಿದೆ.  ನಿಜ, ಕಳೆದ ಚುನಾವಣೆಗಳಲ್ಲಿ ಕರ್ನಾಟಕದ ಜನತೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಮನ್ನಣೆ ನೀಡಲಿಲ್ಲ. ಆದರೆ ಮೂರನೆಯ ಸ್ಥಾನ ಪಡೆದ ಪಕ್ಷ ಅಧಿಕಾರ ನಡೆಸಲಿ ಎಂದೂ ಜನತೆ ಬಯಸಿರಲಿಲ್ಲ. ಈ ಬಯಕೆ ಚಿಗುರೊಡೆಯುವುದಕ್ಕೆ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಮತ್ತು ಸಿದ್ಧರಾಮಯ್ಯನವರನ್ನು ಬದಿಗಿರಿಸುವ ಹುನ್ನಾರಗಳಿಂದ ಚಿಗುರಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಇಂತಹ ಒಂದು ಸರ್ಕಾರದಲ್ಲಿ ಅಧಿಕಾರದಾಹ ಮತ್ತು ಪದವಿ ವ್ಯಾಮೋಹವೇ ಮುಖ್ಯವಾಗುತ್ತದೆ ಎನ್ನುವುದು ಮತಸಂತೆಯಲ್ಲಿ ಅಂಗಡಿ ಇಡುವ ಎಲ್ಲ ವರ್ತಕರಿಗೂ ತಿಳಿದೇ ಇರುತ್ತದೆ. ದುರಂತ ಎಂದರೆ ಜನಪ್ರತಿನಿಧಿಗಳು ಬಿಕರಿಯಾಗುವ ವಸ್ತುಗಳಂತೆ ಬುಟ್ಟಿಗಳಲ್ಲಿ ಕುಳಿತಾಗ, ಮತಸಂತೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮತದಾರರು ಕಂಗಾಲಾಗುತ್ತಾರೆ, ಭ್ರಮನಿರಸನರಾಗುತ್ತಾರೆ. ಇಂತಹುದೇ ಒಂದು ಪ್ರಹಸನವನ್ನು ಕರ್ನಾಟಕದ ವಿಧಾನಸಭೆಯಲ್ಲಿ ಮತ್ತೊಮ್ಮೆ ಕಾಣುತ್ತಿದ್ದೇವೆ. ಜೆಡಿಎಸ್ ನ ಮೂವರು, ಕಾಂಗ್ರೆಸ್ ಪಕ್ಷದ 9 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರದವರೆಗೆ ಕುದುರೆ ವ್ಯಾಪಾರಕ್ಕೆ ಸಮಯ ನೀಡಿದ್ದಾರೆ. ಅಷ್ಟರೊಳಗೆ ರೆಸಾರ್ಟ್ ರಾಜಕಾರಣ ಯಶಸ್ವಿಯಾಗದಿದ್ದರೆ, ಸರಕುಗಳು ಬಿಕರಿಯಾಗುವುದನ್ನು ತಪ್ಪಿಸಲಾಗದಿದ್ದರೆ, ಕರ್ನಾಟಕದ ವಿಧಾನಸಭೆ ಮತ್ತೊಂದು ಸರ್ಕಸ್ ಎದುರಿಸಬೇಕಾಗುತ್ತದೆ. 

ಕರ್ನಾಟಕದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಿದ್ದಾದರೂ ಏಕೆ ? ಜಾತ್ಯಾತೀತತೆಯನ್ನು ಕಾಪಾಡಲು ಎಂದು ಹೇಳುವುದು ಹಾಸ್ಯಾಸ್ಪದ ಎನಿಸುತ್ತದೆ.  ಭಾರತದ ರಾಜಕಾರಣದಲ್ಲಿ ಜಾತ್ಯಾತೀತತೆ ಇನ್ನೂ ಉಳಿದಿದೆಯೇ ಎಂಬ ಪ್ರಶ್ನೆಯೊಂದಿಗೇ ಕುಮಾರಸ್ವಾಮಿ ಸರ್ಕಾರದ ಸಾಧನೆಯನ್ನು ಪರಾಮರ್ಶಿಸಿದರೆ ಅಧಿಕಾರ ರಾಜಕಾರಣದ ಮಾರುಕಟ್ಟೆ ವ್ಯವಹಾರಗಳು ಕಣ್ಮುಂದೆ ನಿಲ್ಲುತ್ತವೆ. ರಾಜೀನಾಮೆ ನೀಡಿರುವ ಶಾಸಕರಿಗೆ ತಮ್ಮದೇ ಆದ ಸಮಸ್ಯೆಗಳಿವೆ. ಗಣಿಗಾರಿಕೆ, ಔದ್ಯಮಿಕ ಹಿತಾಸಕ್ತಿ, ಪದವಿಯ ಲಾಲಸೆ, ಬಾಚಿಕೊಳ್ಳಲಿರುವ ಅವಕಾಶ ಇತ್ಯಾದಿ. ಸರ್ಕಾರದ ಮುಂದಿರುವ ಸವಾಲು ಈ ಹಿತಾಸಕ್ತಿಗಳನ್ನು ಸಮಗ್ರವಾಗಿ ಕಾಪಾಡುವುದು. ಸಮನ್ವಯ ಸಮಿತಿ ಎಂದರೆ ಈ ಹಿತಾಸಕ್ತಿಗಳ ನಿರ್ವಹಣೆ ಎನ್ನುವುದೇ ವಾಸ್ತವವಾದರೆ ಈ ಸರ್ಕಾರ ಆಡಳಿತ ನಡೆಸುವ ಯೋಗ್ಯತೆಯನ್ನು ಕಳೆದುಕೊಂಡಿದೆ ಎಂದೇ ಅರ್ಥ.  ಬರಪೀಡಿತ ಪ್ರದೇಶಗಳು, ಕುಡಿಯುವ ನೀರಿನ ಕೊರತೆ, ರೈತರ ಬಿಕ್ಕಟ್ಟು, ಕೃಷಿ ಸಮಸ್ಯೆ, ಸಾಲ ಮನ್ನಾ, ನಿರುದ್ಯೋಗ ಹೀಗೆ ಜನಸಾಮಾನ್ಯರನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳು ಸಮ್ಮಿಶ್ರ ಸರ್ಕಾರದ ಆದ್ಯತೆಯಾಗಿಯೇ ಇಲ್ಲ ಎನ್ನುವುದನ್ನು ಗಮನಿಸಿದಾಗ, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಗಣೇಶ್ ಮುಂತಾದ ಶಾಸಕರ ರಾಜೀನಾಮೆಯ ಪ್ರಹಸನ ಕಾರ್ಪೋರೇಟ್ ಹಿತಾಸಕ್ತಿ ಮತ್ತು ಆಡಳಿತ ವ್ಯವಸ್ಥೆಯ ನಡುವಿನ ಸೂಕ್ಷ್ಮ ಸಂಬಂಧಗಳನ್ನು ಹೊರಗೆಡಹುತ್ತದೆ.

ಸರ್ಕಾರ ಬಿದ್ದುಹೋದರೆ ಬಿಜೆಪಿ ಅಧಿಕಾರಕ್ಕೆ ಬಂದುಬಿಡುತ್ತದೆ ಎಂಬ ಭೂತ ಸೃಷ್ಟಿಸುವ ಮೂಲಕ, ಜನಸಾಮಾನ್ಯರ ಬವಣೆಯ ಬಗ್ಗೆ ಕಿಂಚಿತ್ತೂ ಯೋಚಿಸದ ಸ್ವಾರ್ಥ ರಾಜಕಾರಣಿಗಳಿಗೆ ಮಣೆ ಹಾಕುತ್ತಾ ಹೋಗುವುದನ್ನು ಆಡಳಿತ ಎನ್ನಲಾಗುವುದಿಲ್ಲ.  ರಾಷ್ಟ್ರ ಮಟ್ಟದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆ. ಕರ್ನಾಟಕದ ಜನತೆಗೆ ಪ್ರಾಮಾಣಿಕವಾದ ಒಂದು ಆಡಳಿತ ವ್ಯವಸ್ಥೆಯನ್ನು ನೀಡಲಾಗದಿದ್ದರೆ ಕುಮಾರಸ್ವಾಮಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕು ಇರುವುದಿಲ್ಲ. ಸಾಂವಿಧಾನಿಕ ಹಕ್ಕೂ ಇರುವುದಿಲ್ಲ.  ಅಧಿಕಾರ ಲಾಲಸೆಗೆ ಬಲಿಯಾಗಿ, ಕೋಟ್ಯಂತರ ರೂಗಳ ಆಮಿಷಕ್ಕೆ ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಪಕ್ಷದಿಂದ ಪಕ್ಷಕ್ಕೆ ಹಾರಲು ಸಿದ್ಧವಾಗಿರುವ ಜನಪ್ರತಿನಿಧಿಗಳನ್ನು ಸಾಂವಿಧಾನಿಕ ಮೌಲ್ಯಗಳಿಂದ ಕಟ್ಟಿಹಾಕಲಾಗುವುದಿಲ್ಲ. ನೈತಿಕ ಮೌಲ್ಯಗಳಿಂದಲೂ ಬಂಧಿಸಲಾಗುವುದಿಲ್ಲ. ಈ ಮೌಲ್ಯಗಳು ನಮ್ಮ ರಾಜ್ಯದಲ್ಲಿ ಎಂದೋ ಸಮಾಧಿ ಸ್ಥಿತಿ ತಲುಪಿದೆ. ಶಾಸಕರು ಎಂದರೆ ಸದಾ ಬಿಕರಿಗೆ ಸಿದ್ಧವಾಗಿರುವ ಸರಕುಗಳು ಎಂದು ತಮ್ಮ ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ನಿರೂಪಿಸಿರುವ ಕುರಿಗಾಹಿಗಳು ಈಗಾಗಲೇ ಸಿದ್ಧಪಡಿಸಿರುವ ಖೆಡ್ಡಾದಲ್ಲಿ 12 ಶಾಸಕರು ಬಿದ್ದಿದ್ದಾರೆ ಎನಿಸುತ್ತದೆ. ಬಿಕರಿಯಾಗದಿದ್ದರೂ, ಮಾರುಕಟ್ಟೆಯಲ್ಲಿ ಲಭ್ಯವಿರುವುದು ಕಂಡುಬಂದಾಗ, ಆಡಳಿತಾರೂಢ ಸರ್ಕಾರ ತಲ್ಲಣಗೊಳ್ಳುತ್ತದೆ.

ಕರ್ನಾಟಕದ ಜನತೆ ಬಯಸುವುದು ದಕ್ಷ, ಪ್ರಾಮಾಣಿಕ, ಪಾರದರ್ಶಕ ,ಜನಪರ ಆಡಳಿತ ನಡೆಸುವ ಒಂದು ಸರ್ಕಾರವನ್ನು. ಬಹುಶಃ ಇಂದಿನ ಪರಿಸ್ಥಿತಿಯಲ್ಲಿ ಇದು ಕನಸಾಗಿಯೇ ಉಳಿಯುತ್ತದೆ. ಬಳ್ಳಾರಿಯ ಗಣಿಯಿಂದ ಕೋಲಾರದ ಗಣಿಯವರೆಗೆ , ಬೀದರ್ ಕೋಟೆಯಿಂದ ಮಲೆನಾಡಿನ ದಟ್ಟ ಕಾಡುಗಳವರೆಗೆ ಸಂಪನ್ಮೂಲಗಳ ಲೂಟಿಗಾಗಿ ಹಾತೊರೆಯುತ್ತಿರುವ ಜೀವಗಳು ಅಧಿಕಾರ ಪೀಠಗಳಿಗಾಗಿ ಕೈಚಾಚಿ ನಿಂತಿವೆ. ಈ ಕೈಗಳ ಬಣ್ಣ ಭಿನ್ನ ಆದರೆ ಧ್ಯೇಯವೊಂದೇ. ಇಡೀ ದೇಶವನ್ನೇ ಕಾರ್ಪೋರೇಟ್ ಭದ್ರಕೋಟೆಯನ್ನಾಗಿ ಮಾಡುವ ಕೇಂದ್ರ ಸರ್ಕಾರದ ಯೋಜನೆಗೆ ನಿನ್ನೆ ತಾನೇ ವಿತ್ತ ಸಚಿವರು ನೀಲನಕ್ಷೆ ನಮ್ಮ ಮುಂದಿರಿಸಿದ್ದಾರೆ. ಇನ್ನು ಕರ್ನಾಟಕವನ್ನು ಹೇಗೆ ಉಳಿಸುವುದು. ಈ ಪ್ರಕ್ರಿಯೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಆಡಳಿತ ವ್ಯವಸ್ಥೆ ಇಲ್ಲಿಯೂ ಬೇಕಿದೆ. ಹಾಗಾಗಿಯೇ ಮಾರುಕಟ್ಟೆ ಚುರುಕಾಗಿದೆ. ಸರಕುಗಳು ಸಿದ್ಧವಾಗಿವೆ. ಮತ್ತೊಂದು ಚುನಾವಣೆ ಮತ್ತಷ್ಟು ಪಕ್ಷಾಂತರಗಳು ಮತ್ತಷ್ಟು ಖರ್ಚು. ರಾಜಕೀಯ ಮೌಲ್ಯಗಳ ಮಸಣದಲ್ಲಿ ಬದುಕುತ್ತಿದ್ದೇವೆ. ಭವನ ಯಾರು ನಿರ್ಮಿಸಿದರೇನು ? ಬಿಕರಿಯಾಗುವುದನ್ನು ತಪ್ಪಿಸಲಾಗುವುದಿಲ್ಲ. ರೆಸಾರ್ಟ್ ಗಳತ್ತ ನೋಡುತ್ತಿರೋಣ. ಕಾವೇರಿ, ಕಪಿಲಾ, ತುಂಗೆ, ಭದ್ರೆ, ಕಪಿಲೆ, ನೇತ್ರಾವತಿ, ಮಲಪ್ರಭಾ, ಘಟಪ್ರಭಾ ಎಲ್ಲವೂ ಬರಿದಾಗಲಿ, ರಾಜಕಾರಣದಲ್ಲಿ ಹರಿವ ಹಣದ ಹೊಳೆ ಬರಿದಾಗುವುದಿಲ್ಲ. ನಾವು ಬದುಕಲು ನದಿಗಳು ಬೇಕು, ಅವರ ಬದುಕಿಗೆ ಹಣದ ಥೈಲಿಯ ದನಿಯಷ್ಟೇ ಸಾಕು.