ಸಾಧಕರ ʼಸರಳತೆʼ ಎಂಬ ಸಮ್ಮೋಹನಾಸ್ತ್ರ

ಸಾಧಕರ ʼಸರಳತೆʼ ಎಂಬ ಸಮ್ಮೋಹನಾಸ್ತ್ರ

ಭಾರತ ಕಂಡ ಅಪೂರ್ವ ಕ್ರಿಕೆಟ್ ಪ್ರತಿಭೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಬಿ.ಎಸ್.ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ ನೆನಪು, ಆಟದ ಶೈಲಿ ಮತ್ತು ಸರಳತೆ ಬಗ್ಗೆ ಪಿ.ಎಂ.ವಿಜಯೇಂದ್ರರಾವ್  ಇಲ್ಲಿ ಆತ್ಮೀಯವಾಗಿ ವಿವರಿಸಿದ್ದಾರೆ.

 

1989 ಕೊನೆ. ಬೆಂಗಳೂರಿನಲ್ಲಿ ಲೀಗ್ ಮ್ಯಾಚ್ ಆಡುತ್ತಿದ್ದೆ. ನಮ್ಮ ತಂಡದ ಐದು ಸದಸ್ಯರು ಸಾಮೂಹಿಕವಾಗಿ ಕೈ ಕೊಟ್ಟಿದ್ದರು. ಅನಿರೀಕ್ಷಿತವಾಗಿ ಇನ್ನಿಂಗ್ಸ್ ಆರಂಭಿಸುವ ಹೊಣೆ ನನ್ನ ಹೆಗಲಿಗೆ ಬಿದ್ದಿತ್ತು. ನಾನು ಆರಂಭಿಕ ಬ್ಯಾಟ್ಸಮನ್ ಅಲ್ಲ, ಜತೆಗೆ ಸಮರ್ಥ ಎದುರಾಳಿಗಳು. ಮೊದಲ ಓವರ್‌ನಲ್ಲೇ ಹೊಸ ಬಾಲ್ ಬೆರಳಿಗೆ ಬಿತ್ತು. ಗ್ಲೋವ್ ಧರಿಸಿದ್ದರೂ, ಪೆಟ್ಟು ಜೋರಾಗೆ ಬಿದ್ದು, ಕ್ಷಣಕಾಲ ಅಧೀರನಾದೆ. ಹಿಂಬಡ್ತಿ ಪಡೆಯದಿರಲು ನಮಗೆ ಡ್ರಾ ಸಾಕಾಗಿತ್ತು. ಇದ್ದ ಆರು ಜನ ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕ್ರೀಸ್ ಬಳಿ ನಿಲ್ಲಬೇಕೆಂಬ ಸಂಕಲ್ಪ ತೊಟ್ಟಿದ್ದೆವು. ಆ ಕ್ಷಣ ನನಗೆ ಸ್ಫೂರ್ತಿ ತುಂಬಿದ್ದು ಆಗ ತಾನೇ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸಚಿನ್ ತೆಂಡುಲ್ಕರ್.  ಪಾಕಿಸ್ತಾನದ ಅಸಾಧಾರಣ ವೇಗಿಗಳಾದ ವಸೀಮ್ ಅಕ್ರಮ್ ಮತ್ತು ವಕಾರ್ ಯೂನಿಸ್ರನ್ನು ಎದುರಿಸುವಲ್ಲಿ ಸಚಿನ್‌ಗೆ ಅಂತರ ರಾಷ್ಟ್ರೀಯ ಅನುಭವ ಇರಲಿಲ್ಲ. ಹದಿನಾರರ ಪೋರನ ಚೊಚ್ಚಲ ಟೆಸ್ಟ್ ಸರಣಿ. ಸಿಯಾಲ್ಕೋಟ್ ಟೆಸ್ಟ್‌ನಲ್ಲಿ ಆಡುವಾಗ, ನೆಲದಿಂದ ಬಾಂಬ್ ನಂತೆ ಸಿಡಿದ ವಕಾರ್‌ನ ಎಸೆತ ಬಡಿದದ್ದು ಸಚಿನ್‌ನ ಮೂಗಿಗೆ. ಚಿಮ್ಮಿದ ರಕ್ತವನ್ನು ಒರೆಸಿಕೊಂಡು ಸೈನಿಕನಂತೆ ಸೆಣಸಿ ಅರ್ಧ ಶತಕ ಗಳಿಸಿದ ಬಾಲಕ ಕ್ರಿಕೆಟ್ ಜಗತ್ತನ್ನು ಬೆರಗಾಗಿಸಿದ್ದ. ಬಿದ್ದ ಪೆಟ್ಟಿನಿಂದ ಸಣ್ಣ ಹುಡುಗ ಪಾಕ್ ದೈತ್ಯರನ್ನು ಎದುರಿಸಿ ತನ್ನ ತಂಡವನ್ನು ರಕ್ಷಿಸಿರಬೇಕಾದರೆ, ಅವನಿಗಿಂತ ಹಿರಿಯನಾದ ನಾನು ಕ್ಲಬ್ ಮಟ್ಟದ ಒಂದು ಮ್ಯಾಚ್‌ನಲ್ಲಿ ನಿಲ್ಲಲಾರೆನೇ ಎಂದು ಧೈರ್ಯದಿಂದ ಆಡಿದೆ. ಹೆಚ್ಚು ಹೊತ್ತು ನಿಲ್ಲಲಿಕ್ಕಾಗಲಿಲ್ಲ, ಆ ಮಾತು ಬೇರೆ. 

 

ನಾನು ಸಚಿನ್‌ನ ಬ್ಯಾಟಿಂಗ್ ಪೌರುಷ, ನೈಪುಣ್ಯವನ್ನು ಮೆಚ್ಚಿಕೊಳ್ಳುವಷ್ಟೇ ಆತನ ಫೀಲ್ಡಿಂಗ್ ಕೂಡ ನೋಡಿ ಮೂಕನಾಗಿದ್ದೇನೆ. ಮ್ಯಾಚ್‌ನಲ್ಲಿ ಶತಕ ಗಳಿಸಿದ ದಿನದಂದೂ, ಸಚಿನ್ ಸಂಜೆಯ ನೆಟ್ಸ್ಗೆ ಹಾಜರಾಗಿ ಮತ್ತೆ ತಾಲೀಮಿನಲ್ಲಿ ತೊಡಗುತ್ತಿದ್ದುದು ಆತನ ಕ್ರಿಕೆಟ್ ಪ್ರೇಮಕ್ಕೆ, ಕ್ರಿಕೆಟ್ ಮೋಹಕ್ಕೆ, ಕ್ರಿಕೆಟ್ ಹಸಿವಿಗೆ, ಕ್ರಿಕೆಟ್ ಬದ್ಧತೆಗೆ ಸಾಕ್ಷಿ. ಕ್ರಿಕೆಟ್ ಜಗತ್ತಿನಲ್ಲಿ ಆತನ ಹೆಸರು ಕೇಳಿಲ್ಲದವರು ಯಾರೂ ಇಲ್ಲ ಎಂಬ ಸ್ಥಿತಿ ತಲುಪಲಿಕ್ಕೆ ಸಚಿನ್‌ಗೆ ಹೆಚ್ಚು ದಿನ ಬೇಕಾಗಲಿಲ್ಲ. ವಿನೋದ್ ಕಾಂಬ್ಳಿ ಜತೆ ಆತ ಶಾಲಾ ದಿನಗಳಲ್ಲೇ ಗಳಿಸಿದ ಖ್ಯಾತಿ ಎಷ್ಟಿತ್ತೆಂದರೆ ಆತ ರಣಜಿ ಆಡುವುದಕ್ಕೆ ಮುಂಚೆಯೇ ಮುಂಬೈ ಜನ ಆತನ ಬ್ಯಾಟಿಂಗ್ ನೋಡಲು ಕಿಕ್ಕಿರಿದು ನಿಲ್ಲುತ್ತಿದ್ದರು. ಅಂತಹ ಸಚಿನ್ ತನ್ನ ಸಾಧನೆ ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿಯೂ, ಫೀಲ್ಡ್ ಮಾಡುವಾಗ ಹಸಿದ ಹುಲಿ ತನ್ನ ಬೇಟೆಯನ್ನು ಬೆನ್ನಟ್ಟುವಂತೆ ಚೆಂಡನ್ನು ಬೆನ್ನಟ್ಟುದ್ದಿದ್ದರು. ಅದೆಲ್ಲಿ, ಕೈತಪ್ಪಿ ಚೆಂಡು ಬೌಂಡರಿ ಮುಟ್ಟಿದರೆ, ಆ ಮಿಸ್ಫೀಲ್ಡ್ ಕಾರಣಕ್ಕೆ ಮುಂದಿನ ಮ್ಯಾಚ್‌ನಲ್ಲಿ ತನಗೆ ಅವಕಾಶ ಸಿಗಲಾರದೇನೋ ಎಂಬಂತೆ ಹುಮ್ಮಸ್ಸಿನಿಂದ ಕ್ಷೇತ್ರ ಸಂರಕ್ಷಿಸುತ್ತಿದ್ದರು. ಆ ಕ್ರೀಡೋತ್ಸಾಹ ಅವರಲ್ಲಿ ಎಂದಿಗೂ ಕುಗ್ಗಲಿಲ್ಲ. ಅಂತಹ ಮನೋಭೂಮಿಕೆಯ ಸಚಿನನ್ನು ದಾಖಲೆಗಳು ಅರಸಿದ್ದು ಸ್ವಾಭಾವಿಕವೇ. 

  

ಸಚಿನನ್ನು ನಾನು ಮುಖತಃ ಭೇಟಿ ಮಾಡಿದ್ದು 2008 ರಲ್ಲಿ. ನಾನು 1999 ವಿಶ್ವ ಕಪ್ ಕ್ರಿಕೆಟ್‌ಗೆ ನಿರ್ಮಿಸಿ ಬಿಡುಗಡೆ ಮಾಡಲಿಕ್ಕಾಗದ ಐದು ಕ್ರಿಕೆಟ್ ಹಾಡುಗಳ ಸಿಡಿಯ ಪ್ರತಿಯೊಂದನ್ನು ನೀಡಲು ಅವರನ್ನು ಭೇಟಿ ಮಾಡಿದಾಗ ನನಗೆ ಅತೀವ ಮೆಚ್ಚುಗೆ ಆದದ್ದು ಆತನ ಸರಳತೆ ಮತ್ತು ವಿನಯ. ಆ ಸನ್ನಡತೆ ಅವರನ್ನು ಟಿವಿಯಲ್ಲಿ ನೋಡಿದಾಗ ಕೂಡ ಎದ್ದು ಕಾಣುತ್ತದೆ. ಕ್ರಿಕೆಟ್ ಜಗತ್ತಿನ ಅತಿ ಹೆಚ್ಚು ದಾಖಲೆಗಳನ್ನು ನಿರ್ಮಿಸಿದ ದಾಖಲೆಯೂ ಸಚಿನ್‌ರದ್ದೇ. ದಾಖಲೆಗಳಿಂದ ತುಂಬಿದ ಅಂತಹ ಕೊಡದ ಸಜ್ಜನಿಕೆ ಆತನ ಮುಖವನ್ನು ಆವರಿಸಿದೆ. ನಾನು ಭೇಟಿ ನೀಡಿದ ಸಂದರ್ಭದಲ್ಲಿ ತೆಗೆಯಲಾದ ಫೋಟೊವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಕಾರಣ ನಾಳಿದ್ದು ಬುಧವಾರ ಸಚಿನ್‌ಗೆ 46 ವರ್ಷ ತುಂಬುತ್ತದೆ.  ಆತನಂತಹ ಪ್ರತಿಭಾವಂತ, ಮೋಹಕ ಕ್ರಿಕೆಟಿಗ ನಮ್ಮ ತಲೆಮಾರಿನಲ್ಲೇ, ನಮ್ಮ ದೇಶದಲ್ಲೇ ಮತ್ತೊಬ್ಬ ಹುಟ್ಟಿಬರಲಿ ಎಂಬ ಹಾರೈಕೆ ಸಚನ್‌ರನ್ನು ಖುಷಿಗೊಳಿಸುತ್ತದೆ ಎಂಬ ನಂಬಿಕೆ ನನ್ನದು.  ನನ್ನ ಹಾರೈಕೆ ಸಚಿನ್ ತೆಂಡುಲ್ಕರ್‌ನ ಜನುಮ ದಿನಕ್ಕೆ ಎರಡು ದಿನ ಮುಂಚಿತವಾಗಿ ತಲುಪುತ್ತಿದೆ. ಬುಧವಾರ ಭಾರತ ರತ್ನನಿಗೆ 46 ವರ್ಷ ತುಂಬುತ್ತದೆ. 

 

ನನಗೆ ಪ್ರಸಿದ್ಧ ವ್ಯಕ್ತಿಗಳ ಜತೆ ನಿಂತು ಫೋಟೊ/ಸೆಲ್ಫಿ ತೆಗೆಸಿ/ತೆಗೆದು ಕೊಳ್ಳುವುದು ಪ್ರಿಯವಲ್ಲ. ನಾನೇ ನಾನಾಗಿ ಫೋಟೊ ತೆಗೆಸಿಕೊಳ್ಳಲು ಹಾತೊರೆದಿದ್ದು ಮಾಜಿ ಟೆಸ್ಟ್ ಬೌಲರ್ ಬಿ ಎಸ್ ಚಂದ್ರಶೇಖರ್ ಅವರೊಂದಿಗೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಮೈಸೂರಿನ ಹೊಟೆಲ್ ಒಂದಕ್ಕೆ ಡಿನ್ನರ್ಗಾಗಿ ಕುಟುಂಬದೊಂದಿಗೆ ಹೋಗಿದ್ದೆ. ನಾನು ಕಾರಿಂದ ಇಳಿಯುವ ಹೊತ್ತಿಗೆ ಸರಿಯಾಗಿ ಚಂದ್ರರ ಕಾರೂ ನನ್ನ ಪಕ್ಕದಲ್ಲಿ ಬಂದು ನಿಂತು ಅವರು ನಿಧಾನವಾಗಿ ಇಳಿದು ರೆಸ್ಟುರಾ ಹೊಕ್ಕರು. ಅವರ ಸ್ನೇಹಿತರಿಬ್ಬರು ಉದ್ಯಾನವನದಲ್ಲಿದ್ದ ಟೇಬಲ್‌ನಲ್ಲಿ ಅವರನ್ನು ಕೂಡಿಕೊಂಡರು. ಅವರು ಸೆಟ್ಲ್ ಆದ ನಂತರ ಹೋಗಿ ಚಂದ್ರರನ್ನು ಭೇಟಿ ಮಾಡಿದೆ. ಪಕ್ಕದಲ್ಲಿ ಕುಳಿಸಿಕೊಂಡು ಬಿಯರ್ ನೀಡಿದರು. ಅವರ ಅನುಮತಿ ಪಡೆದು ಅವರೊಂದಿಗೆ ಫೋಟೊ ತೆಗೆಸಿಕೊಂಡೆ. ನಾನು ಪತ್ರಕರ್ತ ಎಂದು ಹೇಳಿದ್ದರಿಂದ ದಯವಿಟ್ಟು ಫೋಟೊವನ್ನು ಪ್ರಕಟಿಸದಿರಲು ಕೋರಿಕೊಂಡರು. ಫೋಟೊ ತೆಗೆದ ನನ್ನ ಪತ್ನಿ ಫೋಟೊಗಾಗಿ ಕೂಡಲಿಲ್ಲ ಎಂಬ ಸೂಕ್ಷ್ಮವನ್ನರಿತ ಚಂದ್ರ ಆಕೆಗೂ ಕೂರಲು ಹೇಳಿ ಮತ್ತೊಂದು ಫೋಟೊ ತೆಗೆಸಿದರು. 

 

ಚಂದ್ರರನ್ನು ನೀವು ಭೇಟಿಮಾಡಿದ್ದರೆ ನಿಮಗೆ ವಿನಯವಂತಿಕೆಯ ಪಾಠ ಅಗತ್ಯವಿಲ್ಲ. ಅಷ್ಟು ಅಸಾಧಾರಣ ಪ್ರತಿಭೆಯ ಅಷ್ಟು ಸರಳ ವ್ಯಕ್ತಿಯನ್ನು ನಾನು ಕಂಡಿಲ್ಲ. ಚಂದ್ರರನ್ನು ಭೇಟಿ ಮಾಡಿದ ಕೆಲವು ಕ್ಷಣಗಳು ಅವರ ಸರಳತೆಯನ್ನು ಪರಿಚಯ ನಿಜ, ಆದರೆ ಸರಳತೆಯ ವಿವಿಧ ಮಜಲುಗಳನ್ನು ಶ್ರೇಷ್ಠ, ಸಹೃದಯಿ ಕ್ರಿಕೆಟ್ ಬರಹಗಾರ ಸುರೇಶ್  ಮೆನನ್ ರೋಚಕವಾಗಿ ಚಿತ್ರಿಸಿದ್ದಾರೆ.  ಚಂದ್ರರ ಸಮಗ್ರ ಪರಿಚಯವಾದರೆ ಸುರೇಶ್ ಅವರನ್ನು ಕುರಿತು ಬರೆದ ಒಂದು ಲೇಖನ ನೀವು ಓದಿದರೆ ಸಾಕು. 

 

ಮೈಸೂರು ಮೂಲದ ಚಂದ್ರರಿಗೆ ಮೈಸೂರಿಗರ ಸದ್ಗುಣಗಳೆಲ್ಲವೂ ಮೈಗೂಡಿವೆ. ಆರನೇ ವರ್ಷಕ್ಕೆ ಪೋಲಿಯೊ ಪೀಡಿತರಾದ ಅವರು ತದನಂತರ ಕುಟುಂಬದೊಂದಿಗೆ ಬೆಂಗಳೂರಿಗೆ ಸ್ಥಳಾಂತರಿಸುತ್ತಾರೆ. ಬೆಂಗಳೂರಿನ ರಸ್ತೆಗಳಲ್ಲಿ ರಬ್ಬರ್ ಚೆಂಡಿನಲ್ಲಿ ಕ್ರಿಕೆಟ್ ಆಡಲಾರಂಭಿಸುವ ಅವರು ಕೆಲ ವರ್ಷಗಳಲ್ಲಿ ಕ್ರಿಕೆಟ್ ಉತ್ತೇಜಕ ಯಜ್ಞ ನಾರಾಯಣ್ ಕಣ್ಣಿಗೆ ಬೀಳುತ್ತಾರೆ.  ಸಿಟಿ ಕ್ರಿಕೆಟರ್ಸ್ ತಂಡವನ್ನು ಸೇರಲೆಂದು ನಾರಾಯಣ್ ಸಲಹೆ ನೀಡುತ್ತಾರೆ, ಆದರೆ ತಿಂಗಳು-ತಿಂಗಳು ಕೊಡಬೇಕಾದ ಎರಡು ರೂಪಾಯಿ ಹೊರೆಯೆಂಬ ಕಾರಣಕ್ಕೆ ಚಂದ್ರ ದೂರ ಉಳಿಯುತ್ತಾರೆ. 

 

ಚಂದ್ರ ಸದಾ ಧರಿಸುತ್ತಿದ್ದುದು ಪೂರ್ಣ ತೋಳಿನ ಅಂಗಿ. ಆದರೆ, ಅವರನ್ನು ಅವರ ಮನೆಯಲ್ಲಿ ಶರ್ಟ್-ರಹಿತವಾಗಿ ನೋಡಿದ ಸುರೇಶ್ ಆಶ್ಚರ್ಯಚಕಿತರಾಗುತ್ತಾರೆ. ಬಲಗೈಯ್ಯಲ್ಲಿ ಚಂದ್ರ ಚೆಂಡನ್ನು ಹಿಡಿಯುವುದಿರಲಿ, ಪೆನ್ನನ್ನಾದರೂ ಹೇಗೆ ಹಿಡಿದಾರು ಎಂಬಷ್ಟು ಬಲಹೀನ ಅವರ ಕೈ. ಆ ದುರ್ಬಲ ಕೈಯೇ ಅದೆಷ್ಟು ಸಮರ್ಥ ಬ್ಯಾಟ್ಸ್ಮನ್ಗಳ ಬಾಳನ್ನು ಕಂಗೆಡೆಸಿತೋ! ಬ್ಯಾಟಿಂಗ್ ದೈತ್ಯ ವಿವ್ ರಿಚರ್ಡ್ಸ್ ಅನ್ನು ತಬ್ಬಿಬ್ಬಾಗಿಸಿದ್ದು ಚಂದ್ರರ ವಿಭಿನ್ನ ಶೈಲಿಯ ಬೌಲಿಂಗ್. 

ಕ್ರಿಕೆಟ್ ಆಡದ ಸಮಯದಲ್ಲಿ ಬಲಗೈನಲ್ಲಿ ತ್ರಾಣವಿಲ್ಲದಿದುರಿಂದ ಅದನ್ನು ಎಡಗೈಯಲ್ಲಿ ಹಿಡಿದುಕೊಳ್ಳಬೇಕಾದಂತಹ ಪರಿಸ್ಥಿತಿಯಲ್ಲಿದ್ದರೆಂದರೆ, ಅವರು ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡಿ ಮಟ್ಟಿನ ಸಾಧನೆ ಮಾಡಿದ್ದಾದರೂ ಹೇಗೆ ಎಂಬ ಆಶ್ಚರ್ಯಕರ ಪ್ರಶ್ನೆ ಮೂಡುತ್ತದೆ. ಓವರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದೇಶದಲ್ಲೇ ಮೊದಲ ಬಾರಿಗೆ ಭಾರತ ಟೆಸ್ಟ್ ಗೆದ್ದು, ಸರಣಿಯನ್ನೂ ಬುಟ್ಟಿಗೆ ಹಾಕಿಕೊಳ್ಳಲಿಕ್ಕೆ ಕಾರಣ ಚಂದ್ರ. 1971 ಚರಿತ್ರಾರ್ಹ ಪಂದ್ಯದಲ್ಲಿ ಕೇವಲ 38 ರನ್ ನೀಡಿ ಚಂದ್ರ ಪಡೆದ ಆರು ವಿಕೆಟ್ಗಳಲ್ಲಿ ಕಾಟ್ ಅಂಡ್ ಬೌಲ್ಡ್ ಆದದ್ದು ಆತಿಥೇಯ ತಂಡದ ನಾಯಕ ರೇ ಇಲ್ಲಿಂಗ್ವರ್ತ್ ಮತ್ತು ಜಾನ್ ಸ್ನೋ. 1967 ರಿಂದ 1971 ರವರೆಗೂ ಚಂದ್ರ ಅಂತರ ರಾಷ್ಟ್ರೀಯ ಕ್ರಿಕೆಟ್ ಆಡಲಿಲ್ಲ. ಅವರಿಗೆ ಸ್ಕೂಟರ್ ಅಪಘಾತ ಆಗಿದ್ದೂ ಅವಧಿಯಲ್ಲೇ. ಅವರು ಭಾರತವನ್ನು  ಪ್ರತಿನಿಧಿಸಿದ 58 ಟೆಸ್ಟ್ಗಳಲ್ಲಿ 10ಕ್ಕೂ ಹೆಚ್ಚು ಮ್ಯಾಚುಗಳಲ್ಲಿ ತಂಡದ ಗೆಲುವಿಗೆ ಕಾರಣರಾದರು. 

 

ಹದಿನೈದು ಬಾರಿ ಸತತವಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ ಬಾಂಬೆ ತಂಡವನ್ನು ಸೆಮಿಫೈನಲ್‌ನಲ್ಲಿ ಮಣಿಸಿ, ನಂತರ ರಾಜಸ್ಥಾನವನ್ನು ಫೈನಲ್‌ನಲ್ಲಿ ಸೋಲಿಸಿ ಪ್ರಥಮ ಬಾರಿಗೆ ರಣಜಿ ಪ್ರಶಸ್ತಿ ಗೆದ್ದುಕೊಂಡ 1973-74ರ ಕರ್ನಾಟಕ ತಂಡವನ್ನು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು. ವಿಜೇತ ತಂಡದ ಸದಸ್ಯರಿಗೆ ಮುಖ್ಯಮಂತ್ರಿಗಳು ತಲಾ 1000 ರೂಗಳ ಬಹುಮಾನ ವಿತರಿಸಿದರು. ವಿಜೇತ ತಂಡದ ನಾಯಕ ಎರ್ರಪಲ್ಲಿ ಪ್ರಸನ್ನ, ಚಂದ್ರ, ಮತ್ತಿತರು ನಮ್ಮ (ನ್ಯಾಷನಲ್) ಶಾಲೆ/ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿದ್ದರಿಂದ ಅವರನ್ನು ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ  ಡಾ ಎಚ್ ನರಸಿಂಹಯ್ಯ ಚಂದ್ರ ತನ್ನ ವಿದ್ಯಾರ್ಥಿ ದೆಸೆಯಲ್ಲಿ ಚಕ್ಕರ್ ಹೊಡೆಯುತ್ತಿದ್ದನ್ನು ಸ್ಮರಿಸಿದರು. ಸಮಾರಂಭದ ಮುಗಿಯುತ್ತಿದ್ದಂತೆ ವೇದಿಕೆಗೆ ಧಾವಿಸಿ ನಮ್ಮ ಕ್ರಿಕೆಟ್ ಹೀರೊಗಳನ್ನ ಹತ್ತಿರದಿಂದ ನೋಡಿದವರಲ್ಲಿ ನಾನೂ ಒಬ್ಬ. ಜತೆಗೆ ಪ್ರಸನ್ನ ಧರಿಸಿದ್ದ ಮೆಜೆನ್ತಾ ಬಣ್ಣದ ಮೇಲೆ ಬಿಳಿ ಚುಕ್ಕಿಗಳಿದ್ದ ಶರ್ಟನ್ನೂ ಮೆಚ್ಚಿಕೊಂಡು ಅವರ ಬೆನ್ನ ಮೇಲೆ ಮೆಚ್ಚುಗೆಯ ಗುದ್ದು ಗುದ್ದಿದ್ದೆ. 

 

ಚಂದ್ರ ತಮ್ಮ ಟೆಸ್ಟ್ ಡೆಬ್ಯು ಮಾಡಿದ ನಂತರ, ಭಾರತ ಕಂಡ ಅಪ್ರತಿಮ ನಾಯಕ ಪಟೌಡಿ "ನೀನೆ ನಮ್ಮ ಪ್ರಮುಖ ಅಸ್ತ್ರ" ಎಂದು ಚಂದ್ರರಿಗೆ ಹೇಳುತ್ತಾರೆ. ಪಟೌಡಿ ಒಕ್ಕಣ್ಣು ಎಂದು ನಾವೆಲ್ಲ ಬಲ್ಲೆವು. ಚಂದ್ರ ಆರೋಗ್ಯಕರ ಹಾಸ್ಯ ಮಾಡುತ್ತಾ (ಮಾಡಿಕೊಳ್ಳುತ್ತಾ) ಹೇಳುವುದು: ಒಬ್ಬನಿಗೆ ಒಂದು ಕಣ್ಣು ಊನ, ಮತ್ತೊಬ್ಬನಿಗೆ ಒಂದು ಕೈಯೇ ಊನ. 

ಆದರೆ ಅವರಿಬ್ಬರನ್ನೂ ವೀಕ್ಷಿಸಿದ ಯಾವುದೇ ಕ್ರಿಕೆಟ್ ಅಭಿಮಾನಿಗೆ ಊನದ ಬಗ್ಗೆ ಗಮನವೇ ಇರಲಿಲ್ಲ, ಎನ್ನುತ್ತಾರೆ ಸುರೇಶ್. 

 

ಚಂದ್ರರ ಸರಳತೆ ಪ್ರಕಟವಾಗಿದ್ದು ಪತ್ರಕರ್ತನಾದ ನನ್ನ ಮುಂದಲ್ಲ. ಅವರ ವಿನಯ ತೋರ್ಪಡಿಕೆಯದ್ದಲ್ಲ. ಅದರ ಪುರಾವೆಯಾಗಿ ಪ್ರಸಂಗವನ್ನು ಪರಿಗಣಿಸಿ. ಯಾವ ವ್ಯಕ್ತಿಗೆ ತಾನೇ ತನ್ನ ತಂಡದ ನಾಯಕನಾಗುವ ಬಯಕೆ ಇರುವುದಿಲ್ಲ. ಅದೂ ಭಾರತದಂತಹ ಕ್ರಿಕೆಟ್ ಪ್ರೇಮಿ ದೇಶದ ತಂಡವನ್ನು ಮುನ್ನಡೆಸುವ ಹೆಬ್ಬಯಕೆ ಆಟಗಾರನಿಗೆ ಸಹಜವಾಗಿಯೇ ಇರುತ್ತದೆ. ಆದರೆ ಚಂದ್ರ ಅದಕ್ಕೆ ಹೊರತು. ಕರ್ನಾಟಕವನ್ನು ಪ್ರತಿನಿಧಿಸುವ ಸದವಕಾಶ ಅವರಿಗೆ ಒದಗಿ ಬರುತ್ತದೆ. ತಮ್ಮ ಓವರ್ ಮುಗಿಸಿದ ಚಂದ್ರ ಎಂದಿನಂತೆ (ನಾಯಕನೆಂಬುದನ್ನು ಮರೆತು) ಥರ್ಡ್ ಮ್ಯಾನ್ ಜಾಗಕ್ಕೆ ಹೋಗಿ ನಿಲ್ಲುತ್ತಾರೆ. ತಂಡದ ಇತರೆ ಸದಸ್ಯರು ಅವರಿಗೆ ನೆನಪಿಸುತ್ತಾರೆ, ಯಾರು ಮತ್ತೊಂದು ತುದಿಯಿಂದ ಬೌಲ್ ಮಾಡಬೇಕು ಎಂಬುದನ್ನು ಚಂದ್ರ ಹೇಳಬೇಕು ಎನ್ನುವುದನ್ನು. ಒಬ್ಬ ಕ್ರಿಕೆಟಿಗ ಇದಕ್ಕಿಂತ ಸರಳವಾಗುವ ಸಾಧ್ಯತೆ ಇದೆಯೇ? (ನಮ್ಮ ರಾಜಕಾರಣಿಗಳು ಇಷ್ಟು ನಿಸ್ವಾರ್ಥಿಗಳಾಗಿಬಿಟ್ಟಿದ್ದಾರೆ!) 

 

ಚಂದ್ರ ಬಾಲನ್ನು ಸ್ಪಿನ್ನರ್ ಹಿಡಿಯುವಂತೆ ಹಿಡಿಯುತ್ತಿರಲಿಲ್ಲ. ಮಾಧ್ಯಮವೇಗದ ಬೌಲರ್ನಂತೆ ಅವರ ಹಿಡಿ ಇತ್ತು. ಆ ದಿನಗಳಲ್ಲಿ ಭಾರತ ವೇಗದ ಬೌಲಿಂಗ್ ಗೆ ಅಂಥಾ ಹೆಸರೇನೂ ಮಾಡಿರಲಿಲ್ಲ. ವಿಚಿತ್ರವಾದ ಆಕ್ಷನ್ ಇದ್ದ ಚಂದ್ರ ಭಾರತದ ಅತಿ ವೇಗದ ಬೌಲರ್ ಎಂದು ಹಾಸ್ಯ ಮಾಡಲಾಗುತ್ತಿತ್ತು. ಆದರೆ ಮಾತು ಹಾಸ್ಯಕ್ಕೆ ಸೀಮಿತವಾಗಿರಲಿಲ್ಲ. ಅವರು ಲೆಗ್-ಬ್ರೇಕ್ ಮಾಡುತ್ತಿದ್ದುದು ಕಡಿಮೆಯೇ. ವಿಕೆಟ್ ಬೀಳುತ್ತಿದ್ದುದು ಅವರ ಗೂಗ್ಲಿಗೆ. ಅವರ ಟಾಪ್-ಸ್ಪಿನ್ನರ್ಗೆ. 

 

ನಿಗರ್ವಿ ಚಂದ್ರ ಹೇಳಿಕೊಂಡಿದ್ದಾರೆ: "ನಾನು ಬೌಲ್ ಮಾಡಬೇಕಾದರೆ ಇಬ್ಬರು ಫೀಲ್ಡರ್ಗಳಿದ್ದರೆ ಸಾಕು. ಒಬ್ಬ ಸ್ಲಿಪ್ನಲ್ಲಿ, ಮತ್ತೊಬ್ಬ ಶಾರ್ಟ್ ಲೆಗ್ನಲ್ಲಿ. ಅದು ನಾನು ಕರಾರುವಕ್ಕಾಗಿ ಬೌಲ್ ಮಾಡುವಾಗ. ಎರ್ರಾ ಬಿರ್ರಿ ಬೌಲ್ ಮಾಡುವಾಗ ಇಪ್ಪತ್ತೆರಡು ಜನ ಫೀಲ್ಡರ್ಗಳಿದ್ದರೂ ಸಾಕಾಗುತ್ತಿರಲಿಲ್ಲವೇನೋ"!

 

ಭಾರತೀಯ ಬೌಲರ್ಗಳ ಪೈಕಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಗಳಿಸಿದ ಕೀರ್ತಿ ಹೊಂದಿರುವ ಕರ್ನಾಟಕದವರೇ ಆದ ಮತ್ತೊಬ್ಬ ಕ್ರಿಕೆಟಿಗ ಅನಿಲ್ ಕುಂಬ್ಳೆ. ಅವರಿಗೆ ಸಕಾಲದಲ್ಲಿ ಕಿವಿಮಾತು ಹೇಳಿ ಅವರ ದಾಖಲೆಗೆ ಪರೋಕ್ಷವಾಗಿ ಕಾರಣವಾದದ್ದು ಚಂದ್ರ. ಚೆಂಡನ್ನು ಫ್ಲೈಟ್ ಮಾಡು, ಇನ್ನೂ ಹೆಚ್ಚು ತಿರುಗುವಂತೆ ಮಾಡು, ಸ್ವಲ್ಪ ನಿಧಾನವಾಗಿ ಬೌಲ್ ಮಾಡು... ಇವೆಲ್ಲಾ ಕ್ರಿಕೆಟ್ ಕೋಚ್ ಹೊಸಬನಿಗೆ ನೀಡುವ ಬುದ್ಧಿವಾದ. "ಅದಾವುದನ್ನೂ ಕಿವಿಗೆ ಹಾಕಿಕೊಳ್ಳಬೇಡ," ಅಂತ ಕುಂಬ್ಳೆಗೆ ಹೇಳಿದ್ದು ಚಂದ್ರ. "ನಿನ್ನ ಬೌಲಿಂಗ್ ರನ್-ಅಪ್ ಸ್ವಲ್ಪ ಜಾಸ್ತಿ ಮಾಡಿಕೊ" ಅಂತ ಕುಂಬ್ಳೆಗೆ ಕಿವಿಮಾತು ಹೇಳಿದ್ದು ಕುಂಬ್ಳೆಯ ಬೃಹತ್ ಯಶಸ್ಸಿಗೆ ಕಾರಣವಾಗಿರಬಹುದೇ?

 

ಅಂದ ಹಾಗೆ, ನಾನು ಕ್ರಿಕೆಟ್ ಆಡುವಾಗ ಫ್ರಾನ್ಸಿಸ್ ಕ್ಸೇವಿಯರ್ ಎಂಬ ಅದ್ಭುತ ಲೆಗ್-ಸ್ಪಿನ್ನರ್ ಇದ್ದ. ಚಂದ್ರನಂತೆ ಬೌಲ್ ಮಾಡುತ್ತಿದ್ದ, ಬಾಲ್ ಹೆಚ್ಚು ತಿರುಗುತ್ತಿರಲಿಲ್ಲ, ಆದರೆ ಅಸಾಧಾರಣ ವೇಗದಲ್ಲಿ ಬ್ಯಾಟ್ಸ್ಮನ್ನತ್ತ ಧಾವಿಸುತ್ತಿತ್ತು. ಒಮ್ಮೆ, ನಾನು ಆತನನ್ನು ಬೆಂಗಳೂರು ಪ್ರೆಸ್ ಕ್ರಿಕೆಟ್ ತಂಡದಲ್ಲಿ ಆಡಲು ಆಮಂತ್ರಿಸಿದ್ದೆ. ಅವನ ಪ್ರತಿಭೆಯನ್ನು ಗುರುತಿಸಿದ ನಮ್ಮ ತಂಡದ ನಾಯಕ ಜೈ ಶಂಕರ್ ಅವನನ್ನು ಉತ್ತೇಜಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಫ್ರಾನ್ಸಿಸ್ ಕರ್ನಾಟಕ ತಂಡಕ್ಕೆ ಆಯ್ಕೆಯಾಗಬೇಕಿತ್ತು. ಅದೇನು ದುರಾದೃಷ್ಟವೋ ಕಾಣೆ, ಯಾವತ್ತೂ ಕರಾರುವಕ್ಕಾಗಿ ಬೌಲ್ ಮಾಡುತ್ತಿದ್ದ ವ್ಯಕ್ತಿ ಅಂದು ಮಾತ್ರ ಫುಲ್ಟಾಸ್ ಮಾಡಿದನಂತೆ, ಆಯ್ಕೆ ಆಗಲಿಲ್ಲ. ಬದಲಾಗಿ ಆಯ್ಕೆ ಆಗಿದ್ದು ಅನಿಲ್ ಕುಂಬ್ಳೆ. ಅದರ ಬಗ್ಗೆ ದೂರಿಲ್ಲ!

 

ಮೇ 17 ಬಂದರೆ ಚಂದ್ರ 74 ಮುಟ್ಟುತ್ತಾರೆ. ಅವರಿಗೂ ನನ್ನ ಮತ್ತು ಡೆಕ್ಕನ್ ನ್ಯೂಸ್ ಪರವಾಗಿ ಮುಂಗಡ ಶುಭಾಶಯಗಳು. 

ಸಚಿನ್ ಅಂಥ ಬ್ಯಾಟ್ಸ್ಮನ್ ಜತೆಗೆ ಚಂದ್ರರಂಥ ಅದ್ವಿತೀಯ ಬೌಲರ್ ಕೂಡ ಜನುಮ ತಾಳಲಿ. ಅವರಿಬ್ಬರ ನಯವಿನಯ, ಅನುಕರಣೀಯ ನಡವಳಿಕೆ ಬರಲಿರುವ ಕ್ರಿಕೆಟಿಗರಿಗಿರಲಿ. 

https://ssl.gstatic.com/ui/v1/icons/mail/images/cleardot.gif