ಐಪಿಎಲ್ ತಂದ ಬಹುರೂಪಿತ್ವ

ಐಪಿಎಲ್ ತಂದ ಬಹುರೂಪಿತ್ವ

ಐಪಿಎಲ್ ಪಂದ್ಯಗಳಲ್ಲಿ ಕ್ರಿಕೇಟಿಗರು ಪರಸ್ಪರ ಒಬ್ಬರನೊಬ್ಬರು ಟೀಕಿಸಿವ ಭರದಲ್ಲಿ ಬಳಸುವ ಭಾಷೆಯು ಸಜ್ಜನಿಕೆಯನ್ನು ಮರೆತಿದ್ದರೂ, ಅದು ತನ್ನದೇ ಆದ ವೈಶಿಷ್ಠ್ಯಗಳನ್ನು ಒಳಗೊಂಡಿದೆ. ಎಲ್ಲಾ ದೇಶದ ಆಟಗಾರರು ಇಲ್ಲಿರುವ ಎಲ್ಲಾ ತಂಡಗಳಲ್ಲೂ ಬೆರೆತಿದ್ದು, ಪ್ರತಿ ತಂಡದಲ್ಲೂ ಪ್ರತಿ ಅಭಿಮಾನಿಯ ಮೆಚ್ಚುಗೆಯ ಒಬ್ಬ ಆಟಗಾರನಾದರೂ ಇದ್ದಾನೆ. ತಮ್ಮ ಅಭಿಮಾನವನ್ನು ಒಂದು ತಂಡಕ್ಕೆ ಮಾತ್ರ ಸೀಮಿತಗೊಳಿಸಲಾಗದಂಥ ಸಂದರ್ಭ ಸೃಷ್ಟಿಸಿರುವುದು ಬಹುರೂಪಿತ್ವದ ಸಂಕೇತವಾಗಿದೆ. ಈ ರೀತಿ ಬಹುರೂಪಿತ್ವದ ಆರಾಧನೆಯ ಶಕೆ ಭಾರತದಲ್ಲೂ ಪ್ರಾರಂಭವಾಗಲಿ ಎನ್ನುತ್ತಾರೆ ಪಿ.ಎಂ.ವಿಜಯೇಂದ್ರ ರಾವ್.

 

ಬಂಧಿತ ಆರೋಪಿಯಿಂದ ತಪ್ಪೊಪ್ಪಿಗೆ ಪಡೆಯಲು ಪೊಲೀಸರು ಹದ್ದುಬಸ್ತಿನಲ್ಲಿ ಬಲಪ್ರಯೋಗ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಆದ್ರೆ ರಣೋತ್ಸಾಹದಿಂದಲೋ, ಹಿಂಸಾವಿನೋದಕ್ಕಾಗೋ ಅವರು ಆ ಲಕ್ಷ್ಮಣರೇಖೆಯನ್ನು ದಾಟುತ್ತಲೇ ಇರುತ್ತಾರೆ. ನಾಗರಿಕ ಹಕ್ಕಿನ ಕಾನೂನನ್ನು ಅನುಷ್ಠಾನಗೊಳಿಸುವಲ್ಲಿ ಗಣನೀಯ ಎಚ್ಚರ ಮೂಡುತ್ತಿರುವ ಹಿನ್ನೆಲೆಯಲ್ಲಿ ಕಸ್ಟಡಿ ಸಾವುಗಳು ಕಡಿಮೆಯಾಗುತ್ತಿವೆ. ಕೃತಿಯಲ್ಲಿ ಕೊರತೆ ಹೆಚ್ಚಾದಂತೆ ಮಾತಿನಲ್ಲಿ ಒರಟುತನವೂ ಹೆಚ್ಚಾಗುತ್ತಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಉನ್ನತ ಪೊಲೀಸ್ ಅಧಿಕಾರಿಗಳನ್ನೂ ಸೇರಿದಂತೆ ನಾನು ಹಲವು ಪೊಲೀಸರಿಂದ ಈ ನನ್ನ ಸಂದೇಹವನ್ನು ನಿವಾರಿಸಿಕೊಳ್ಳಲು ಯತ್ನಿಸಿದ್ದೇನೆ: "ಶಂಕಿತ ಆರೋಪಿಯನ್ನು ಕಂಡಾಕ್ಷಣ ನಿಮಗೆ ಆಕ್ರೋಶ ಉಕ್ಕುವುದಾದರೂ ಹೇಗೆ? ಸಮಾಜ ಪೀಡಕರನ್ನು ನೋಡಿದಾಗ ಸ್ವಾಭಾವಿಕವಾಗಿಯೇ ಕೋಪ ಬರುತ್ತದೆ ಅನ್ನುವುದಾದರೆ, ನಿಮಗೆ ಸಾಮಾಜಿಕ ಕಳಕಳಿ ಇದೆ ಎಂದು ತಾನೇ ಅರ್ಥ? ಅಂತಹ ಪ್ರಜ್ಞೆ ಇರುವ ನೀವುಗಳು ಅದು ಹೇಗೆ ಲಂಚ ತೆಗೆದುಕೊಳ್ಳುತ್ತೀರಿ?"

ಒಬ್ಬ ಐಜಿ ದರ್ಜೆಯ ಅಧಿಕಾರಿ "ಬಹಳಷ್ಟು ಸಮಯದಲ್ಲಿ ನಾವು ಕೋಪಗೊಳ್ಳುವುದಿಲ್ಲ, ಕೋಪಗೊಂಡಂತೆ ನಟಿಸುತ್ತೇವೆ" ಎಂದು ಉತ್ತರಿಸಿದ್ದರು. ಅದೇಕೋ ಅದು ಸಂಪರ್ಕ ಉತ್ತರ ಅನ್ನಿಸಲಿಲ್ಲ. ರೇಪ್, ಕೊಲೆ, ಡಕಾಯಿತಿ, ದೊಂಬಿ, ಲೂಟಿ ತರಹದ ಪ್ರಕರಣಗಳಲ್ಲಿ ಅವರು ಉದ್ರಿಕ್ತರಾಗಿ ಆರೋಪಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದನ್ನು ಕೊನೆಯ ಪಕ್ಷ ಸಂತ್ರಸ್ತರೋ, ನೊಂದ ಕುಟುಂಬವೋ ಅಪೇಕ್ಷಿಸುತ್ತದೆ, ಒಪ್ಪುತ್ತದೆ. ಆದರೆ ಸಣ್ಣಪುಟ್ಟ ಪ್ರಕರಣಗಳಲ್ಲಿನ ಆರೋಪಿಗಳನ್ನೂ ಸದೆಬಡಿಯುವುದೋ, ಅಪ್ಪಟ ಸಂಸ್ಕೃತ  ಬೈಗುಳಗಳಿಗೆ ಅವರನ್ನು ಈಡುಮಾಡುವುದೋ ಅವ್ಯಾಹತವಾಗಿ ನಡೆದುಕೊಂಡುಬಂದಿದೆ.

ಸಮವಸ್ತ್ರ ತೊಟ್ಟವರು ಅಶ್ಲೀಲವಾಗಿ ಮಾತಾಡುವ ಮತ್ತೊಂದು ಸ್ಥಳವೆಂದರೆ  ಕ್ರೀಡಾರಂಗ. ಉದಾಹರಣೆಯ ರೂಪದಲ್ಲಿ ಕ್ರಿಕೆಟ್ ಮತ್ತು ಟೆನ್ನಿಸ್ ಅನ್ನು ನೀಡಬಹುದು. ಒಮ್ಮೆ ನಾವು ಮಾಧ್ಯಮದವರು ಕ್ರಿಕೆಟ್  ಪಂದ್ಯವನ್ನಾಡುತ್ತಿದ್ದೆವು. ಸಾಕಷ್ಟು ಆಟಗಾರರು ಕ್ರೀಡಾ ವರದಿಗಾರರಿದ್ದರು. ಪೆವಿಲಿಯನ್ನಲ್ಲಿ ಕುಳಿತಾಗ ಮ್ಯಾಚ್ ವೀಕ್ಷಿಸಲು ಬಂದಿದ್ದ ಹಿರಿಯ ಪತ್ರಕರ್ತರೊಬ್ಬರು "ಏನ್ರಯ್ಯಾ, ಊರೋರ ಬಗ್ಗೆ ಎಲ್ಲಾ ಬರೀತೀರಿ, ನನ್ನ ಮಗ ಟೆನ್ನಿಸ್ ಆಡ್ತಾನೆ, ಅವನ್ ಬಗ್ಗೆನೂ ಒಸೀ ಬರೀರಯ್ಯ" ಎಂದರು. "ರೀ ಸ್ವಾಮಿ, ನಾವಿರೋದು ಗೆದ್ದೋರ ಬಗ್ಗೆ ಬರೀಲಿಕ್ಕೆ" ಎಂದು ಒಂದು ಉತ್ತರ ಬಂತು. ಎಲ್ಲರೂ ನಗುವಾಗಲೇ ಮತ್ತೊಬ್ಬರು "ಟೆನ್ನಿಸ್ ಆಡೋದು ಮುಖ್ಯ ಅಲ್ಲ, ಫಸ್ಟು ಟೆನ್ನಿಸ್ ಪ್ಲೇಯರ್ ಥರ ಕಾಣಬೇಕು. ಮೊದಲು ನಿಮ್ಮ ಮಗನಿಗೆ f..k ಮತ್ತು  s..t ಅಂತಾ ಒದರೋದನ್ನ ಕಲಿಸ್ರಿ, ಅವಾಗ್ಲೇ ಅವನಿಗೊಂದು ಬೆಲೆ ಬರೋದು" ಎಂಬ ಅಮೂಲ್ಯ ಸಲಹೆ ನೀಡಿದರು.

ಇದು ತಮಾಷೆಯಾಗಿ ಕಂಡುಬರುತ್ತದಾದರೂ ಕ್ರೀಡಾ ಜಗತ್ತಿನ ಕಡು ವಾಸ್ತವ. ಗ್ರಾಮೀಣ ಮೂಲದಿಂದ ಕ್ರೀಡಾರಂಗವನ್ನು ಪ್ರವೇಶಿಸಬಯಸುವ ಪ್ರತಿಭೆಗಳಿಗೆ ಇರುವ ತೊಡಕುಗಳಲ್ಲಿ ಆರ್ಥಿಕ ಮುಗ್ಗಟ್ಟು, ಕ್ರೀಡಾಸೌಲಭ್ಯಗಳ ಕೊರತೆ ಮುಂತಾದವುಗಳ ಜತೆ ಈ ಭಾಷಾ ನೈಪುಣ್ಯದ ಕೊರತೆಯೂ ಗಣನೀಯ ಸವಾಲೇ. ಹಳ್ಳಿಗರಿಗೆ ಬೈಗುಳ ಬರುವುದಿಲ್ಲವೆಂದಲ್ಲ, ಮಾತೃಭಾಷೆಯಲ್ಲಿ ಬೈಯ್ಯುವ ಬೈಗಳಿಗೆ ಎಲೀಟಿಸ್ಟ್ ಸೋಂಕಿರುವುದಿಲ್ಲ. ಟೀಮ್ ಆಟಗಳಾದ ಕ್ರಿಕೆಟ್ನಲ್ಲಿ ಎಲೀಟ್ ಮೌಲ್ಯಗಳ ಪ್ರಾಬಲ್ಯ ತುಸು ಹೆಚ್ಚೇ. ಅದಕ್ಕೆ ಹೊಂದುಕೊಳ್ಳಲಿಕ್ಕೆ ಗ್ರಾಮೀಣ ಪ್ರತಿಭೆಗಳು ಪಡುವ ಯಾತನೆಯೂ ಹೆಚ್ಛೇ.  ಈ ಸಮಸ್ಯೆ ಅವರ ವ್ಯಕ್ತಿತ್ವ ಮತ್ತು ನಡವಳಿಕೆಯ ಮೇಲಷ್ಟೇ ಅಲ್ಲದೆ ಅವರ ಆಟದ ಮೇಲೂ ಅನಪೇಕ್ಷಿತ ಪರಿಣಾಮವನ್ನುಂಟುಮಾಡುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ದೇಶಗಳೊಂದಿಗೆ ಸಾಂಸ್ಕೃತಿಕ ಸಾಮ್ಯತೆ ಹೊಂದಿರುವ ಭಾರತದ ಆಟಗಾರರಿಗೆ ಆ ದೇಶಗಳ ವಿರುದ್ಧ ಆಡಬೇಕಾದರೆ ಅಂತಹ ಹೊಂದಾಣಿಕೆಯ ಸವಾಲುಗಳು ಎದುರಾಗುವುದಿಲ್ಲ. ಇಂಗ್ಲಿಷ್ ಬಾರದ ಪಾಕಿಸ್ತಾನಿ ಆಟಗಾರನೊಬ್ಬ ಇಂಗ್ಲಿಷ್ ಬಾರದ (ಹಿಂದಿ ಬರುವ) ಭಾರತೀಯ ಆಟಗಾರನೊಟ್ಟಿಗೆ ಬಾಂಧವ್ಯ ಮೂಡಿಸಿಕೊಳ್ಳುವುದೋ, ಅಥವಾ ತಕರಾರು/ಜಗಳ ಮಾಡುವುದೋ ಸಾಧ್ಯ. ಅದೇ ಸಾಧ್ಯತೆ ತಮಿಳು ಕಲಿತ ಲಂಕಾ ಆಟಗಾರ ಮತ್ತು ತಮಿಳು ಬರುವ ದಕ್ಷಿಣ ಭಾರತೀಯ ಆಟಗಾರನ ನಡುವೆಯೂ ಇದೆ.

ಜಗಳವಾಡಲು ಬೇರೆ ವಿದೇಶ ತಂಡದವನೇ ಆಗಬೇಕೆಂದೇನಿಲ್ಲ. 2008ರಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯಾವಳಿಯ ಸಂದರ್ಭದಲ್ಲಿ ಮುಂಬೈನ ಹರ್ಭಜನ್ ಸಿಂಗ್ ಪಂಜಾಬ್ ನ  ಶ್ರೀಶಾಂತ್ ಕೆನ್ನೆಗೆ ಬಾರಿಸಿದ್ದು - ಅದು ಕ್ಯಾಮೆರಾ ಕಣ್ಣಿಗೆ ಬೀಳಲಿಲ್ಲ - ಸುದ್ದಿಯಾಯಿತು. ಮಗು ಅತ್ತಂತೆ - ಅಳು ಬಂದಂತೆ ನಟಿಸಿದನೆಂಬ ಸುದ್ದಿಯೂ ಹರಿದಾಡಿತು – ಶ್ರೀಶಾಂತ್  ಗಳಗಳನೆ ಅತ್ತಿದ್ದೂ ಉಂಟು. ಆ ಘಟನೆಯನ್ನು ಮರೆತುಬಿಡದ ಶ್ರೀಶಾಂತ್ ಐದು ವರ್ಷಗಳ ತರುವಾಯ ಅಷ್ಟೇ ಧಾರಾಕಾರವಾಗಿ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಅವನಿಗೆ ಕಡಿವಾಣ ಹಾಕಬೇಕಾಯಿತು. ಈ ಪ್ರಕರಣದಲ್ಲಿ ಹೊಡೆಸಿಕೊಂಡವನು ದಕ್ಷಿಣ ಭಾರತೀಯ, ಹೊಡೆದವನು ಉತ್ತರ ಭಾರತೀಯ ಎಂಬುದನ್ನು ಗಮನಿಸಬೇಕಾದ ಅಂಶ. ಅಷ್ಟೇ ಮುಖ್ಯವಾದ ಮತ್ತೊಂದು ಅಂಶವೆಂದರೆ ಇವರಿಬ್ಬರೂ ಒಂದೇ ಕಾಲಘಟ್ಟದಲ್ಲಿ ಭಾರತ ತಂಡದ ಸಹಸದಸ್ಯರಾಗಿದ್ದುದು.

ಒಂದೇ ಕ್ಲಬ್ಬನ್ನು ಪ್ರತಿನಿಧಿಸಿ, ಆ ನಂತರವೂ ದೆಹಲಿ ರಣಜಿ ತಂಡ ಮತ್ತು ಉತ್ತರ ಝೋನ್ ಗಳನ್ನು ಒಟ್ಟಿಗೆ ಪ್ರತಿನಿಧಿಸಿದ ಕೋಲ್ಕೊತಾ (ಕೆಕೆಆರ್) ತಂಡದ ಗೌತಮ್ ಗಂಭೀರ್ ಮತ್ತು ಬೆಂಗಳೂರಿನ (ಆರ್ಸಿಬಿ) ವಿರಾಟ್ ಕೊಹ್ಲಿ 2013ರ ಪಂದ್ಯವೊಂದರಲ್ಲಿ ಕಿತ್ತಾಡಿದ್ದೂ ಉಂಟು. ನಯವಂತಿಕೆಗೆ ಕೊಹ್ಲಿ ಮತ್ತೊಂದು ಹೆಸರೇನಲ್ಲ.

ಒಂದೇ ನಾಡಿನ ಇಬ್ಬರು ಆಟಗಾರರು ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸುವಾಗ ಕಿರೀಕ್ ಮಾಡಿಕೊಳ್ಳಲು ಅವಕಾಶ ನೀಡಿದ ಕೀರ್ತಿಯೂ ಐಪಿಎಲ್ ಗೆ ಸೇರುತ್ತದೆ. ಮುಂಬೈನ ಪೊಲ್ಲಾರ್ಡ್ ನನ್ನು ಔಟ್ ಮಾಡಿದ ಅದೇ ವಿಂಡೀಸ್ ಸಂಜಾತ ದ್ವೈನ್ ಬ್ರಾವೊ, ವಿಮಾನ ಹಾರಿ ವಾಪಸ್ ಸ್ವದೇಶಕ್ಕೆ ಮರಳೆಂದು ಪೊಲ್ಲಾರ್ಡ್ ಗೆ ಕೈ ಸನ್ನೆ ಮಾಡಿ ತಿಳಿಸಿ, ಪೊಲ್ಲಾರ್ಡ್ ಅದಕ್ಕೆ ಕುಪಿತನಾದದ್ದೂ ಉಂಟು (2012).

ಈ ರೀತಿಯ ಹಲವು ಬೇರೆ ಪ್ರಕರಣಗಳನ್ನೂ ದಶಕ ಮೀರಿದ ಐಪಿಎಲ್ ಪಂದ್ಯಾವಳಿಯಲ್ಲಿ ನಾವು ಕಂಡಿದ್ದೇವೆ. 

ಐಪಿಲ್ ಹೊರಗಿನ ಕ್ರಿಕೆಟ್ ನಲ್ಲಿ ಈ ಥರದ ಪ್ರಸಂಗಗಳು ತಾರಕ ಮುಟ್ಟಿದ್ದೂ ಉಂಟು. ಆ ಕುರಿತು ಮುಂದೆ ಪ್ರಸ್ತಾಪಿಸೋಣವಂತೆ. ಸಭ್ಯತೆಯನ್ನು ಮೀರದ, ಚಮತ್ಕಾರದ ಮಾತುಗಳಿಗೇ ಸೀಮಿತವಾದ, ಹಲವಾರು ಪ್ರಸಂಗಗಳೂ ಉಂಟು. ಅಂಥವುಗಳಲ್ಲಿ ಮುಖ್ಯವಾದ ಒಂದು ಪ್ರಸಂಗವನ್ನಷ್ಟೇ ಇಲ್ಲಿ ಉದ್ಧರಿಸುತ್ತಿದ್ದೀನಿ.

ಭಾರತ ಪಾಕಿಸ್ತಾನಗಳ ನಡುವೆ ನಡೆಯುವ ಯಾವುದೇ ಪಂದ್ಯ ನಿರ್ಮಿಸುವ ವಾತಾವರಣದ ಗಮ್ಮತ್ತನ್ನು ಕುರಿತು ವಿಶೇಷವಾಗಿ ಹೇಳಬೇಕಾದ್ದೇನಿಲ್ಲ. ಅದೇ ತರಹದ ಪೈಪೋಟಿಯ ವಾತಾವರಣ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಪಂದ್ಯಗಳು, ಅದರಲ್ಲೂ ಆಶಸ್ ಸರಣಿ ನಿರ್ಮಿಸುತ್ತದೆ. ತನ್ನ ಆಲ್ರೌಂಡ್ ಪ್ರತಿಭೆಗಷ್ಟೇ ಅಲ್ಲದೇ ಮನರಂಜನೆಗೂ ಹೆಸರಾದ ಇಯನ್ ಬೋಥಮ್ ಬ್ಯಾಟ್ ಮಾಡಲು ಕಣಕ್ಕಿಳಿಯುತ್ತಾನೆ. "ನಿನ್ನ ಹೆಂಡತಿ ಮತ್ತು ನನ್ನ ಮಕ್ಕಳು ಚೆನ್ನಾಗಿದ್ದಾರಾ?" - ವಿಖ್ಯಾತ ಕೀಪರ್ ರಾಡ್ ಮಾರ್ಷ್ ಆತನನ್ನು ಕಣಕ್ಕೆ ಆಹ್ವಾನಿಸುವ ಪರಿ ಇದು. ಕೆಣಕುವ ಅಂಥ ಪ್ರಶ್ನೆಗೆ "ಆಕೆ ಸೌಖ್ಯವಾಗಿದ್ದಾಳೆ. ಮಕ್ಕಳು ಬುದ್ಧಿಮಾಂದ್ಯರಾಗಿದ್ದಾರೆ" ಎಂಬ ಮರ್ಮಾಘಾತದ ಉತ್ತರ ಬೋಥಮ್ ನೀಡುತ್ತಾನೆ.

ಇಂತಹ ಸಂದರ್ಭಗಳು ಇಂಗ್ಲಿಷ್ ಮಾತೃಭಾಷೆಯಲ್ಲದ, ಇಂಗ್ಲಿಷ್ ಪರಿಸರದ ಪರಿಚಯವಿಲ್ಲದ ಭಾರತೀಯ ಕ್ರಿಕೆಟಿಗರಷ್ಟೇ ಅಲ್ಲ, ಪಾಕಿಸ್ತಾನ, ಬಾಂಗ್ಲಾದೇಶ, ಆಘಾನಿಸ್ತಾನ, ಶ್ರೀಲಂಕಾ ಮೊದಲಾದ ದೇಶಗಳ ಆಟಗಾರರನ್ನು ಕಾಡಿರುವ ಸಾಧ್ಯತೆ ಇದೆ. ಒಂದು ಸಮಾಧಾನಕರ ಅಂಶವೆಂದರೆ, ಅಂತಹ ಕುಚೋದ್ಯ, ಲೇವಡಿಗಳಿಗೆ ಪ್ರತ್ಯುತ್ತರ ನೀಡುವುದಿರಲಿ, ಆ ಕೆಣಕುವಿಕೆ ಕೆಣಕಲ್ಪಟ್ಟವನಿಗೆ ಅರ್ಥವೇ ಆಗದ ಸಾಧ್ಯತೆಯೂ ಇದೆ. ಉದಾಹರಣೆಗೆ, ಜಿಆರ್ ವಿಶ್ವನಾಥ್, ಉಮೇಶ್ ಯಾದವ್, ಇಂಜಮಾಮ್ ಉಲ್ ಹಕ್ ಥರದವರಿಗೆ ಭಾಷಾ ತೊಡಕು ಕಾಡಿದ್ದಿದೆ. ಆದರೆ ಅವರ್ಯಾರನ್ನೂ ಇಂಗ್ಲಿಷ್ ಮಾತನಾಡುವ ಪ್ರತಿಸ್ಪರ್ಧಿಗಳು ಗೇಲಿ ಮಾಡಿದ ಪ್ರಸಂಗಗಳು ದಾಖಲಾಗಿಲ್ಲ. ಒಂದು ವೇಳೆ ಅಂತಹ ಪ್ರಸಂಗಗಳು ನಡೆದಿದ್ದರೂ ಅದಕ್ಕೆ ಅವರವರ ದೈತ್ಯ ಪ್ರತಿಭೆಯೇ ಉತ್ತರ ಕೊಟ್ಟಿರಲೂ ಸಾಧ್ಯ. ಭಾರತ ಕಂಡ ಮೊದಲ ಸಭ್ಯ ದೈತ್ಯ ವಿಶಿ, ಅದರ ಬಗ್ಗೆ ಎರಡು ಮಾತಿಲ್ಲ.

ಬಿಎಸ್ ಚಂದ್ರಶೇಖರ್ ಬೌಲಿಂಗ್ ನಲ್ಲಿ ಸುನಿಲ್ ಗವಾಸ್ಕರ್ ಒಮ್ಮೆ ಬೀಟ್ ಆಗುತ್ತಾರೆ. ಬೌಲಿಂಗ್ ಓಟವನ್ನು ಮುಂದುವರಿಸುವ ಚಂದ್ರ, ಗವಾಸ್ಕರನ್ನು ಪ್ರಶ್ನಿಸುತ್ತಾರೆ: "ಕೇಳ್ತಾ?" ಕಿವಿಗೆ ಬಿತ್ತಾ ಅಂತ ಅವರು ಪ್ರಶ್ನಿಸಿದ್ದು ಯಾವುದೇ ಬೈಗುಳವನ್ನಲ್ಲ. ಪ್ರೇಕ್ಷಕರ ಪೈಕಿ ಯಾರೋ ಟ್ರಾನ್ಸಿಸ್ಟರ್ ಹಾಕಿರುತ್ತಾರೆ. ಗಟ್ಟಿಯಾಗಿ ಮುಖೇಶನ ಒಂದು ಹಾಡು ಗಾಳಿಯಲ್ಲಿ ಅಲೆಅಲೆಯಾಗಿ ತೇಲಿಬರುತ್ತಿರುತ್ತದೆ.

ಏಕದಿವಸೀಯ ಪಂದ್ಯಗಳೂ, ಐಪಿಎಲ್ ಪಂದ್ಯಾವಳಿಯೂ ತಂದ ಸದ್ದುಗದ್ದಲದಲ್ಲಿ ಅಂತಹ ಸಜ್ಜನಿಕೆ ತೆರೆಮರೆಯಾಗಿವೆ. ಹಾಗಂತ ಹಿಂದಿನ ದಿನಗಳ ಹಾಡು ಹಾಡುತ್ತಾ, ಐಪಿಎಲ್ ಸೃಷ್ಟಿಸಿರುವ ಕೆಲವು ವೈಶಿಷ್ಠ್ಯಗಳನ್ನು ಮರೆಮಾಚಲಾಗದು. ಐಪಿಎಲ್ ಎಂದರೆ  ಅಂತರ್ಮತೀಯ ವಿವಾಹದಂತೆ. ಮತ, ದೇಶ, ವರ್ಣ, ಸಂಕೃತಿಗಳನ್ನು ಮೀರಿದ ಜಗತ್ತನ್ನು ಅದು ಸೃಷ್ಟಿಸಿದೆ. ಯಾವುದೇ ಕ್ರಿಕೆಟ್ ಅಭಿಮಾನಿ ಒಂದು ತಂಡಕ್ಕಷ್ಟೇ ತನ್ನ ಅಭಿಮಾನ ಬೆಂಬಲಗಳನ್ನು ಸೀಮಿತಗೊಳಿಸಲಾಗದ ಸಂದರ್ಭವನ್ನು ಐಪಿಎಲ್ ನಿರ್ಮಿಸಿದೆ. ಏಕೆಂದರೆ, ಎಲ್ಲಾ ತಂಡಗಳಲ್ಲಿ ಅವನ ಮೆಚ್ಚುಗೆಯ ಒಬ್ಬ ಕ್ರಿಕೆಟಿಗನಾದರೂ ಇರುತ್ತಾನೆ. ಕ್ರಿಕೆಟ್ಟೇ ಉಸಿರಾಗಿರುವ ಭಾರತದಲ್ಲಿ ಇದೇ ರೀತಿಯ ಬಹುರೂಪಿತ್ವದ ಆರಾಧನೆಯ ಶಖೆ ಆರಂಭವಾಗಲಿ. ಹೊಡೆದಾಟ, ಜಗಳಗಳು ನಿಂತು ಗೇಲಿ ಲೇವಡಿ, ಕುಚೋದ್ಯಗಳು ಮುಂದುವರೆಯಲಿ.