ಮೀಸಲು ಹೆಚ್ಚಳ ಈಗ ಪರಿಶಿಷ್ಟ ಜಾತಿಗಳ ಹಕ್ಕೊತ್ತಾಯ

ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ತನ್ನ ಆಡಳಿತ ವಿಸ್ತರಣೆಯಿಂದ ಬೇಕಾಗುವ ಸಿಬ್ಬಂದಿ, ನಿವೃತ್ತಿಯಿಂದ ಹಾಗು ರಾಜೀನಾಮೆ ಪ್ರಕರಣಗಳಿಂದ ಖಾಲಿ ಬೀಳುವ ಹುದ್ದೆಗಳಿಗೆ ಯಾವ ಸಬೂಬೂ ನೀಡದೆ ನಿರಂತರವಾಗಿ ನೇಮಕ ಪ್ರಕ್ರಿಯೆಗಳು ನಡೆಯಬೇಕು. ಮೀಸಲಾತಿ ನೀತಿಯನ್ನು ಗಾಳಿಗೆ ತೂರುವ ತಾತ್ಕಾಲಿಕ ನೇಮಕ ಮತ್ತು ಹೊರಗುತ್ತಿಗೆ ಪದ್ಧತಿ ರದ್ದಾಗಬೇಕು. 

ಮೀಸಲು ಹೆಚ್ಚಳ ಈಗ ಪರಿಶಿಷ್ಟ ಜಾತಿಗಳ ಹಕ್ಕೊತ್ತಾಯ

ಮೀಸಲಾತಿ ಹೆಚ್ಚಿಸಬೇಕೆನ್ನುವ ಬೇಡಿಕೆ ಈಗ ನೂರೊಂದು ಸಣ್ಣಪುಟ್ಟ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವವರದ್ದು. ಎಲ್ಲರನ್ನೂ ಒಳಗೊಳ್ಳುವ ಹೋರಾಟಕ್ಕೆ ಯಾರ ಕರೆ ಮತ್ತು ಆಮಂತ್ರಣವಿಲ್ಲದೆ ಜನರು ಸ್ವತಃ ಭಾಗವಹಿಸುತ್ತಾರೆ ಎನ್ನುವುದಕ್ಕೆ ನವೆಂಬರ್ 20ರಂದು ಬೆಂಗಳೂರಿನ ಗಾಂಧೀ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಜನರ ಮೀಸಲಾತಿ ಹೆಚ್ಚಳದ ಹಕ್ಕೋತ್ತಾಯದ ಸಭೆ ಸಾಕ್ಷಿ. ಈ ಸಭೆಯಲ್ಲಿ ಬಹುತೇಕ ಜಾತಿಗಳ ಜನರು ಸೇರಿ ತಮಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆನ್ನುವ ಬೇಡಿಕೆಗಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಕಳೆದ ವರ್ಷದ ಜೂನ್ ನಲ್ಲಿ ವಾಲ್ಮೀಕಿ ಜನರ ಬೃಹತ್ ಜಾಥಾ ಮತ್ತು ಸಮಾವೇಶದ ಒತ್ತಾಯಕ್ಕೆ ಮಣಿದಿದ್ದ ಜನತಾ-ಕಾಂಗ್ರೆಸ್ ಮೈತ್ರಿ ಸರ್ಕಾರ ಮೀಸಲಾತಿ ಹೆಚ್ಚಳದ ಬೇಡಿಕೆಗಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗವನ್ನು ರಚಿಸಿದ್ದು ಅದೀಗ ಬಿರುಸಿನಿಂದ ಕಾರ್ಯನಿರತವಾಗಿದೆ.

ಪರಿಶಿಷ್ಟ ಪಂಗಡಕ್ಕೆ ಈಗಿರುವ ಮೀಸಲಾತಿ ಪ್ರಮಾಣ ಶೇ 3 ರಷ್ಟನ್ನು ಕೇಂದ್ರ ಸರ್ಕಾರದಲ್ಲಿರುವಂತೆ ಶೇ 7.5ಕ್ಕೆ ಹೆಚ್ಚಿಸಬೇಕೆನ್ನುವ ಬೇಡಿಕೆ ವಾಲ್ಮೀಕಿ ಜನಾಂಗದ ಒತ್ತಡ. ಸಾಮಾನ್ಯವಾಗಿ ಸರ್ಕಾರಗಳು ಜಾತಿ ಮತ್ತು ಧರ್ಮದ ಒತ್ತಡಗಳಿಗೆ ಮಣಿಯುವುದು ಸಾಮಾನ್ಯ. ಪರಿಶಿಷ್ಟ ಪಂಗಡಗಳಿಗೆ ಈಗಿನ ಜನಸಂಖ್ಯಾನುಸಾರು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದು ಸ್ವಾಗತಾರ್ಹ. ಆದರೆ ಅದೇ ಸ್ಥಿತಿಯಲ್ಲಿರುವ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕೆನ್ನುವುದು ಈಗ ಈ ಪಟ್ಟಿಯಲ್ಲಿರುವ 101 ಜಾತಿಗಳ ಬೇಡಿಕೆ.

ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚು ಮೀರಬಾರದೆನ್ನುವ ಸುಪ್ರೀಂ ಕೋರ್ಟಿನ ಮಾನದಂಡವಾದ್ದರಿಂದ ಈ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ 7.5ಕ್ಕೆ ಹೆಚ್ಚಿಸಿ ನ್ಯಾಯಾಲಯ ಹಾಕಿರುವ ಮಿತಿಯನ್ನು ಹೇಗೆ ಕಾಯ್ದುಕೊಳ್ಳುವುದು ಎನ್ನುವ ಪ್ರಶ್ನೆ ನ್ಯಾ. ನಾಗಮೋಹನ ದಾಸ್ ಅವರದ್ದು. ಆದರೆ ಪರಿಶಿಷ್ಟ ಜಾತಿ ಮೀಸಲಾತಿಯನ್ನೂ ಹೆಚ್ಚಿಸಬೇಕೆನ್ನುವ ಮತ್ತು ಬೀದಿ ಹೋರಾಟಕ್ಕೆ ತಾವೂ ಸಿದ್ಧ ಎಂದಿರುವವರು ಮುಂದಿಡುವ ವಾದವೇ ಬೇರೆ. 

ಪರಿಶಿಷ್ಟ ಜಾತಿಯ ಪಟ್ಟಿಗೆ ಅಧಿಕಾರಕ್ಕೆ ಬರುವ ಎಲ್ಲ ಪಕ್ಷಗಳ ಸರ್ಕಾರವೂ ಹೊಸ ಹೊಸ ಜಾತಿಗಳನ್ನು ಸೇರಿಸುತ್ತಾ ಬಂದಿವೆ. ಆದರೆ ಮೀಸಲಾಗಿ ಪ್ರಮಾಣ ಮಾತ್ರ ಹೆಚ್ಚಿಲ್ಲ. ವಸ್ತುಸ್ಥಿತಿ ಹೀಗಿರುವುದರಿಂದ ಮೀಸಲಾತಿ ವಿಷಯದಲ್ಲಿ ಈ ಪಟ್ಟಿಯಲ್ಲಿರುವ ಜಾತಿಗಳ ಜನರ ನಡುವೆಯೇ ವೈಷಮ್ಯ, ಒಳಜಗಳ ಮತ್ತು ಅಸೂಯೆ ಹೆಚ್ಚುತ್ತಿದೆ. ಜೊತೆಗೆ ಸರ್ಕಾರವು ತನ್ನ ಖಾಲಿ ಹುದ್ದೆಗಳಿಗೆ ಹೊಸ ನೇಮಕ ಮಾಡದೆ ಹೊರಗುತ್ತಿಗೆ ಹೆಸರಿನಲ್ಲಿ ಮೀಸಲಾತಿಯ ಉದ್ದೇಶವನ್ನೇ ನಾಶ ಮಾಡುತ್ತಾ ಬಂದಿದೆ. ಈ ಮೋಸ ಮತ್ತು ವಂಚನೆಗೆ ಕೊನೆ ಹಾಡಬೇಕು ಎನ್ನುವುದು ಈ ಜಾತಿಗಳ ಜನರ ಬೇಡಿಕೆ.
ಇಂದ್ರಾಸಾಹ್ನಿ ಮತ್ತು ಭಾರತ ಸರ್ಕಾರದ ಮೀಸಲಾತಿ ಪ್ರಕರಣಗಳಲ್ಲಿ ಸುಪ್ರೀಂ ಕೋಟ್ ್ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಹಾಗು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ ಪ್ರಕರಣ ಶೇ 50ನ್ನು ಮೀರಬಾರದೆಂಬ ಮಿತಿ ಹಾಕಿದೆ. ಈ ಮಿತಿಯೊಳಗೇ ಸರ್ಕಾರಗಳು ಏನು ಬೇಕಾದರೂ ಬದಲಾವಣೆ ಮಾಡಿಕೊಳ್ಳಬಹುದು ಎನ್ನುವುದು ನ್ಯಾಯಾಲಯಗಳ ಅಭಿಪ್ರಾಯ. ಈ ಮಿತಿ ಇದ್ದರೂ ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಜಾರಿಯಲ್ಲಿದೆ. ಇತ್ತೀಚೆಗೆ ಚತ್ತೀಸ್ ಗಢ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ 71ಕ್ಕೆ ಹೆಚ್ಚಿಸಿದೆ. ಆದರೆ ಇದಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದೆ.
ಸುಪ್ರೀಂ ಕೋಟ್ ್ ಇಂದ್ರಾಸಾಹ್ನಿ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣದ ಮಿತಿಯನ್ನು ಶೇ 50ಕ್ಕೆ ಹೆಚ್ಚಿಸಿದ್ದರೂ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಇತರೆ ಪ್ರಮುಖ ಜಾತಿಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಶೇ. 10ರಷ್ಟು ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿ ನೀತಿಗೆ ತಡೆ ಆಜ್ಞೆ ಇದ್ದರೂ ಅದರ ಜಾರಿಗೆ ಮಾತ್ರ ತಡೆ ಇಲ್ಲ. ಅದು ಸುಲಲಿತವಾಗಿ ಯಾವ ಅಡೆತಡೆ ಇಲ್ಲದೆ ನಡೆಯುತ್ತಿದೆ.

ವಾಸ್ತವವಾಗಿ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೇ ಮಿತಿಗೊಳಿಸಬೇಕೆಂದು ಸಂವಿಧಾನದಲ್ಲಿ ಇಲ್ಲ. ಈ ಮಿತಿ ವಿಧಿಸಿರುವುದು ಸುಪ್ರೀಂ ಕೋರ್ಟ್ ಆದ್ದರಿಂದ ಈ ಮಿತಿಯನ್ನು ಅಂತ್ಯಗೊಳಿಸಿ ಪರಿಸ್ಥಿತಿಗೆ ಅನುಕೂಲವಾಗುವಂತೆ ಸಹಾಯವಾಗಲು ಸಂವಿಧಾನಕ್ಕೆ ತಿದ್ದುಪಡಿ ತಂದು ಸಂಸತ್ತಿನ ಒಪ್ಪಿಗೆ ಪಡೆಯಬೇಕು. ಈ ದಿಶೆಯಲ್ಲಿ ಕೇಂದ್ರ ಸರ್ಕಾರ ಗಮನ ನೀಡಬೇಕೆನ್ನುವುದು ಈಗ ಪರಿಶಿಷ್ಟ ಜಾತಿ ಮೀಸಲು ಪ್ರಮಾಣವನ್ನು ಶೇ 15ರಿಂದ ಶೇ 20ಕ್ಕೆ ಹೆಚ್ಚಿಸಬೇಕೆನ್ನುವವರ ವಾದ. 

ಈ ವಾದಕ್ಕೆ ಪುಷ್ಟಿ ನೀಡುವಂತೆ 1983ರಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗಳಲ್ಲಿನ ಎಂಜಿನಿಯರುಗಳ ಸಂಖ್ಯಾ ಪ್ರಮಾಣ ಮತ್ತು ಅಲ್ಲಿ ಮೀಸಲಾತಿಯನ್ನು ಸರಿಯಾಗಿ ಜಾರಿಗೆ ತರಲಾಗಿದೆಯೇ ಎನ್ನುವ ಬಗೆಗೆ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತದೆ. ಆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಮೇಲೆ ಕಣ್ಣಿಡಲು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರ ಮಟ್ಟದ ಸಮಿತಿಯೊಂದನ್ನು ರಚಿಸಲಾಗುತ್ತದೆ. ಅದರ ಸರ್ಕಾರಿ ಆದೇಶ ಜಿ.ಒ ನಂ.ಡಿಪಿಎಆರ್ 9 ಎಸ್ ಬಿ ಸಿ 83, ದಿನಾಂಕ 7 ಅಕ್ಟೋಬರ್ 1983ರಂತೆ ಪ್ರತಿಯೊಂದು ಇಲಾಖೆಯಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆಯೇ ಎನ್ನುವುದನ್ನು ಪರಿಶೀಲಿಸುವುದು ಈ ಸಮಿತಿಯ ಉದ್ದೇಶವಾಗಿರುತ್ತದೆ. ಆದರೆ ಇಲಾಖೆಗಳಿಂದ ಕಾಲ ಕಾಲಕ್ಕೆ ವರದಿ ಬಾರದ ಕಾರಣ ಈ ಉನ್ನತ ಮಟ್ಟದ ಸಮಿತಿ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತದೆ.

ಅದೇನೆಂದರೆ ಸರ್ಕಾರಿ ಆಜ್ಞೆ 4 ಮಾರ್ಚ್ 1977ರ ಸಂಬಂಧಿಸಿದ ಆಜ್ಞೆಯನ್ನು ಮಾರ್ಪಡಿಸಲು ಈ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡುತ್ತದೆ. ಅದರಂತೆ ಸರ್ಕಾರಿ ಆಜ್ಞೆ  ನಂ. ಡಿ ಪಿ ಎ ಆರ್ 27 ಎಸ್ ಬಿ ಸಿ84, 25 ಸೆಪ್ಟೆಂಬರ್1984ರ ಆದೇಶದಂತೆ ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ 20ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 5ಕ್ಕೆ ಹೆಚ್ಚಿಸಬೇಕೆಂದು ತಿಳಿಸಲಾಗಿದೆ.

ಆದರೆ ಸರ್ಕಾರದ ಈ ಆದೇಶವಿದ್ದರೂ ಇದನ್ನು ಅಕ್ಷರಶಃ ಜಾರಿಗೆ ತಂದಿಲ್ಲದಿರುವುದು ವಿಪರ್ಯಾಸ. ಈಗ ಇಂತಹ ವಾದಕ್ಕೆ ಈಗ ಮತ್ತೆ ಮರುಜೀವ ಬರುತ್ತಿದೆ. ಮೀಸಲಾತಿ ಹೆಚ್ಚಳ ಮತ್ತು ಇತರೆ ವಿಷಯಕ್ಕೆ ಸಂಬಂಧಿಸಿದಂತ ಡಿಸೆಂಬರ್ 10ರವರೆಗೆ ಸಾರ್ವಜನಿಕರು ಅಹವಾಲು ಸಲ್ಲಿಸಬಹುದೆಂದು ಆಯೋಗ ಸೂಚಿಸಿದೆ.

ಸಾಮಾನ್ಯವಾಗಿ ಇಂತಹ ವಿಷಯದಲ್ಲಿ ಏಕಸದಸ್ಯ ಆಯೋಗ ನೇಮಕವಾದಾಗಲೆಲ್ಲ ಮತ್ತು ಈಗ ನೀಡಿರುವ ಅವಧಿ ಕಡಿಮೆ ಆಗಿದೆ. ಈ ಅವಧಿಯನ್ನು ಹೆಚ್ಚಿಸುವುದರ ಜೊತೆಗೆ ಆಯೋಗಕ್ಕೆ ಮತ್ತಿಬ್ಬರನ್ನು ನೇಮಕ ಮಾಡಿ ಮೀಸಲಾತಿಯ ಸಮಸ್ಯೆಯನ್ನು ಹಲವು ಮುಖಗಳಿಂದ ಚರ್ಚಿಸಿ ತೀರ್ಮಾನಿಸುವುದು ಒಳಿತು ಎನ್ನುವ ಬೇಡಿಕೆ ಹಲವರದ್ದು. ಈ ವಾದದಲ್ಲಿ ಸತ್ಯ ಇಲ್ಲ ಎನ್ನಲಾಗದು. ಆಗಾಗ್ಗೆ ತಲೆದೋರುವ ಈ ಮೀಸಲಾತಿ ಸಮಸ್ಯೆಗೆ ಒಂದು ಪರಿಹಾರ ನೀಡಲು ಸರ್ಕಾರ ಗಂಭೀರವಾಗಿ ತನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದು ಒಳಿತು. ನಿಧಾನವಾದರೂ ಕರಾರುವಕ್ಕಾಗಿ ಈ ಸಮಸ್ಯೆಗೆ ಪರಿಹಾರ ದೊರೆಯಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಒಪ್ಪಿಗೆ ಆಗುವಂತೆ ಆಯೋಗ ವರದಿ ನೀಡುವುದು ಒಳಿತು. ಇಲ್ಲವಾದರೆ ಈ ಆಯೋಗದ ಹಣೆಬರಹ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣ ಮಾಡಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗಕ್ಕೆ ಬಂದಂತಾಗುವ ಸಂಭವವೇ ಹೆಚ್ಚು.

ಮೀಸಲಾತಿ ಕೇವಲ ಅನುಕಂಪದಿಂದ ನೀಡಲಾಗುತ್ತಿದೆ ಎನ್ನುವ ಮನಃಸ್ಥಿತಿ ಬದಲಾಗಬೇಕು. ಮೀಸಲಾತಿ ಯಾವುದೇ ಸರ್ಕಾರ ಜಾರಿಗೆ ತರಬೇಕಾದುದು ತನ್ನ ಅದ್ಯ ಕರ್ತವ್ಯ. ಅದಕ್ಕೆ ಸಂವಿಧಾನದ ಬೆಂಬಲವಿದೆ. ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾದ ಜನರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಮೇಲೆತ್ತಲು ಇರುವ ಏಕೈಕ ಮಾರ್ಗ ಇದೆ. ಇದನ್ನು ಬಿಟ್ಟು ಬೇರೆ ಮಾರ್ಗಗಳು ಅಷ್ಟಾಗಿ ಕಾಣುತ್ತಿಲ್ಲ. ಆದರೂ ಸಂವಿಧಾನ ಬದ್ಧವಾಗಿ ಇರುವ ಮೀಸಲು ಸೌಲಭ್ಯವನ್ನು ಸರಿಯಾಗಿ ಜಾರಿ ಮಾಡದೆ ಈ ಶೋಷಿತ ವರ್ಗಗಳನ್ನು ವಂಚಿಸಿಕೊಂಡೇ ಬರುತ್ತಿರುವುದು ಸಮಾಜ ಮತ್ತು ಸರ್ಕಾರದ ಇಬ್ಬಂದಿತನವನ್ನು ತೋರುತ್ತದೆ.

ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ತನ್ನ ಆಡಳಿತ ವಿಸ್ತರಣೆಯಿಂದ ಬೇಕಾಗುವ ಸಿಬ್ಬಂದಿ, ನಿವೃತ್ತಿಯಿಂದ ಹಾಗು ರಾಜೀನಾಮೆ ಪ್ರಕರಣಗಳಿಂದ ಖಾಲಿ ಬೀಳುವ ಹುದ್ದೆಗಳಿಗೆ ಯಾವ ಸಬೂಬೂ ನೀಡದೆ ನಿರಂತರವಾಗಿ ನೇಮಕ ಪ್ರಕ್ರಿಯೆಗಳು ನಡೆಯಬೇಕು. ಮೀಸಲಾತಿ ನೀತಿಯನ್ನು ಗಾಳಿಗೆ ತೂರುವ ತಾತ್ಕಾಲಿಕ ನೇಮಕ ಮತ್ತು ಹೊರಗುತ್ತಿಗೆ ಪದ್ಧತಿ ರದ್ದಾಗಬೇಕು. 

ಈಗೀಗ ಸರ್ಕಾರದ  ನೀತಿಯಿಂದಾಗಿ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುವ ಮತ್ತು ಅವುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಸರ್ಕಾರದಿಂದ ಸಿಗಬಹುದಾದ ಉದ್ಯೋಗಾವಕಾಶವನ್ನು ತಪ್ಪಿಸಲಾಗುತ್ತಿದೆ. ಇದು ನಿಜಕ್ಕೂ ಜನರಿಗೆ ಮಾಡುವ ಮೋಸ. ಈ ಹಿನ್ನೆಲೆಯಲ್ಲಿ ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರಬೇಕೆನ್ನುವ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಖಾಸಗಿಯವರಿಗೆ ಸರ್ಕಾರವು ಭೂಮಿ, ನೀರು, ವಿದ್ಯುತ್, ತೆರಿಗೆ ವಿನಾಯಿತಿ ಮತ್ತು ಸಾಲಸೌಲಭ್ಯ ಹಾಗು ಸಬ್ಸಿಡಿ ನೀಡುವುದರಿಂದ ಅಲ್ಲಿಯೂ ಮೀಸಲಾತಿ ಜಾರಿಗೆ ತರುವುದರಲ್ಲಿ ಯಾವ ತಪ್ಪೂ ಇಲ್ಲ. ಇದೆಲ್ಲ ಸರ್ಕಾರ ನಡೆಸುವವರಿಗೆ ಗೊತ್ತಿಲ್ಲ ಎಂದೇನೂ ಅಲ್ಲ. ಆದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರುವ ಗುರಿ ಮತ್ತು ಬದ್ಧತೆ ಯಾವುದೇ ಪಕ್ಷದ ಸರ್ಕಾರ ನಡೆಸುವ ಜನರಿಗೆ ಇಲ್ಲದಿರುವುದೇ ಕಾರಣ.

ಈ ಮಧ್ಯೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಎಂ ಮತ್ತು ಐಐಟಿಗಳಲ್ಲಿ ಮೀಸಲಾತಿ ಜಾರಿಯಾಗಿದಿರುವ ಬಗೆಗೆ ಬುಧವಾರ ಸರ್ಕಾರ ರಾಜ್ಯಸಭೆಗೆ ನೀಡಿರುವ ಮಾಹಿತಿ ಅಚ್ಚರಿಗೊಳಿಸುತ್ತದೆ. ಕೇಂದ್ರ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ನೀಡಿರುವ ಮಾಹಿತಿಯಂತೆ ದೇಶದ 12 ಉನ್ನತಮಟ್ಟದ ಐಐಎಂ ಸಂಸ್ಥೆಗಳಲ್ಲಿ ಅಹಮದಾಬಾದ್ ಮತ್ತು ಕೋಲ್ಕತ್ತಾದ ಸಂಸ್ಥೆಗಳಲ್ಲಿ ಒಬ್ಬರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬೋಧನಾ ಸಿಬ್ಬಂದಿಲ್ಲ. ಬೆಂಗಳೂರು ಮತ್ತು ಲಖನೌದ ಐಐಎಂ ಗಳಲ್ಲಿ ತಲಾ ಒಬ್ಬರು ಈ ವರ್ಗದ ಪ್ರೊಫೆಸರುಗಳಿದ್ದಾರೆ. ಹಾಗೆಯೇ ಕೋಯಿಕೋಡ್, ಶಿಲ್ಲಾಂಗ್ ಮತ್ತು ಜಮ್ಮುವಿನ ಐಐಎಂಗಳಲ್ಲಿ ತಲಾ ಇಬ್ಬರು ಈ ವರ್ಗದ ಪ್ರೋಫೆಸರುಗಳಿದ್ದಾರೆ. 

ದೀಪದ ಕೆಳಗೇ ಕತ್ತಲು ಎನ್ನುವಂತೆ ಕೇಂದ್ರ ಸರ್ಕಾರದ ಸಚಿವಾಲಯದ ಕಾರ್ಯದರ್ಶಿ ಮಟ್ಟದಲ್ಲಿ ಒಟ್ಟು 82 ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಕೇವಲ ನಾಲ್ಕು ಮಂದಿ ಮಾತ್ರ ಇದ್ದಾರೆ ಎಂಬುದಾಗಿ ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂದಿನ ದಿನಗಳಲ್ಲಿ ಈ ವರ್ಗಗಳಲ್ಲಿ ಉನ್ನತ ಶಿಕ್ಷಣ ಪಡೆದವರಿಗೆ ಕೊರತೆ ಇಲ್ಲ. ಕಳದೆರಡು ವರ್ಷಗಳ ಹಿಂದೆ ಐಎಎಸ್ ಪರೀಕ್ಷೆಯಲ್ಲಿ ನಿರಂತರವಾಗಿ ಮೊದಲ ರ್ಯಾಂಕ್ ಗಳಿಸಿದವರು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು. ನಿಜ. ಒಂದು ಕಾಲದಲ್ಲಿ ಅರ್ಹ ಅಭ್ಯರ್ಥಿಗಳು ಸಿಗುತ್ತಿರಲಿಲ್ಲ. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಎಲ್ಲ ಶೈಕ್ಷಣಿಕ ನಿಕಾಯದಲ್ಲೂ ಉನ್ನತ ಶಿಕ್ಷಣ ಪಡೆದ ಪರಿಶಿಷ್ಟರು ಸಿಗುತ್ತಾರೆ. ಆದರೆ ಸರ್ಕಾರ ಅವರಿಗೆ ಅವಕಾಶ ನೀಡುವ ಸಂವಿಧಾನಬದ್ಧ ಕರ್ತವ್ಯವನ್ನು ಪಾಲಿಸಬೇಕಿದೆ. ಅದನ್ನು ಮಾಡಿದರೆ ಸಾಕು ಸಾಮಾಜಿಕ ನ್ಯಾಯ ಸಹಜವಾಗಿಯೇ ಈ ವಂಚಿತ ವರ್ಗಗಳಿಗೆ ದೊರೆಯಲಿದೆ. ಆ ಬದ್ಧತೆ ಈಗಿನ ಸರ್ಕಾರಗಳಿಗೆ ಬೇಕಾಗಿದೆ.