ವಿಕಾಸದ ಕಲ್ಪನೆಯೂ, ವಿನಾಶದ ಮಾರ್ಗಗಳೂ

ವಿಕಾಸದ ಕಲ್ಪನೆಯೂ, ವಿನಾಶದ ಮಾರ್ಗಗಳೂ

2019 ರ ಬಹುನಿರೀಕ್ಷಿತ ಚುನಾವಣೆಗಳು ಅಚ್ಚರಿಯ ಫಲಿತಾಂಶವನ್ನೇನೂ ನೀಡಿಲ್ಲ. ಆದರೆ ದೇಶದ ಒಂದು ವರ್ಗದ ಜನರಲ್ಲಿ ಗೊಂದಲವನ್ನಂತೂ ಸೃಷ್ಟಿಸಿದೆ. ಸಂವಿಧಾನ, ಪ್ರಜಾತಂತ್ರ ಮತ್ತು ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆಗಾಗಿ ಹಗಲಿರುಳು ಜಪಿಸುತ್ತಿದ್ದ ಪ್ರಜ್ಞಾವಂತ ಜನತೆಗೆ ಆಘಾತವೂ ಆಗಿದೆ. ಚುನಾವಣಾ ರಾಜಕಾರಣದ ಸೂಕ್ಷ್ಮತೆಗಳನ್ನು ಈ ಬಾರಿಯ ಚುನಾವಣೆ ಸ್ಪಷ್ಟವಾಗಿ ಹೊರಹಾಕಿದೆ. ಭಾರತದ ರಾಜಕಾರಣದಲ್ಲಿ ಸದಾ ಪ್ರವಹಿಸುತ್ತಿದ್ದ ಜಾತೀಯತೆ, ಪ್ರಾದೇಶಿಕತೆ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ರಾಷ್ಟ್ರೀಯವಾದದ ಅಲೆ ತೊಡೆದುಹಾಕಿದೆ. ದುರಂತ ಎಂದರೆ ಮತದಾರರ ಗಮನ ಸೆಳೆದಿರುವ ರಾಷ್ಟ್ರೀಯವಾದದ ಚೌಕಟ್ಟು ಪ್ರಜಾತಂತ್ರ ಮೌಲ್ಯಗಳನ್ನು ಧಿಕ್ಕರಿಸಿ, ಸಂವಿಧಾನದ ಆಶಯಗಳನ್ನೂ ಮೂಲೆಗುಂಪುಮಾಡಿ ಧರ್ಮ ನಿರಪೇಕ್ಷ ಭಾರತವನ್ನು ಧರ್ಮ ಕೇಂದ್ರಿತ ರಾಷ್ಟ್ರವನ್ನಾಗಿಸುವ ಕಾರ್ಯಸೂಚಿಯನ್ನು ಹೊಂದಿದೆ. ಇರಲಿ, ಭಾರತದ ಸಾರ್ವಭೌಮ ಜನತೆ ಈ ಚೌಕಟ್ಟಿಗೆ ಮಾನ್ಯತೆ ನೀಡಿದ್ದಾರೆ. ಅಧಿಕಾರ ದುರುಪಯೋಗವಾಗಿದೆ, ವಿದ್ಯುನ್ಮಾನ ಮತಯಂತ್ರ ದುರ್ಬಳಕೆಯಾಗಿದೆ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಾಗಿದೆ ಈ ಎಲ್ಲ ಆರೋಪಗಳ ನಡುವೆಯೇ ನರೇಂದ್ರ ಮೋದಿ ಭಾರತದ ರಾಜಕಾರಣಕ್ಕೆ ಒಂದು  ಹೊಸ ತಿರುವು ನೀಡಿರುವುದು ಸತ್ಯ.


ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ತಮ್ಮ ಮಹಾ ಮೈತ್ರಿಕೂಟಗಳ ಹೊರತಾಗಿಯೂ ಸೋತದ್ದೇಕೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರಗಳನ್ನು ಶೋಧಿಸಲಾಗುತ್ತಿದೆ. 1990 ರ ದಶಕದಲ್ಲಿ ಮೊಳಕೆಯೊಡೆದ ಎರಡು ಬೀಜಗಳ ಪೈಕಿ ಒಂದು ಹೆಮ್ಮರವಾಗಿ ಬೆಳೆದಿದೆ ಮತ್ತೊಂದು ಅವಸಾನ ಹೊಂದುವತ್ತ ಸಾಗುತ್ತಿದೆ ಎನ್ನುವುದನ್ನು ಪ್ರಸ್ತುತ ಸಂದರ್ಭದಲ್ಲಿ ಗಮನಿಸಬೇಕಿದೆ. ರಾಮಮಂದಿರ ವಿವಾದ ಮತ್ತು ಅಯೋಧ್ಯೆಯ ಚೌಕಟ್ಟಿನಲ್ಲಿ ಎಲ್ ಕೆ ಅಡ್ವಾಣಿ ಮತ್ತು ಸಹವರ್ತಿಗಳು ನೆಟ್ಟ ಕೋಮುವಾದಿ ಮತ್ತು ಸಾಂಸ್ಕಂತಿಕ ರಾಜಕಾರಣದ ಬೀಜಗಳು ಇಂದು ಹೆಮ್ಮರವಾಗಿ ಬೆಳೆದಿದ್ದು ಪ್ರಪ್ರಥಮ ಬಾರಿಗೆ ಭಯೋತ್ಪಾದನೆಯ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಕ್ರಿಮಿನಲ್ ಅರೋಪ ಹೊತ್ತಿರುವವರು ಸಚಿವರೂ ಆಗುತ್ತಿದ್ದಾರೆ. ಈ ಸಂಸದೆಯನ್ನು ಹಿಂದೂಗಳ ಸಂಕೇತ ಎಂದೂ ಬಿಂಬಿಸಲಾಗಿದೆ. ಸಾಧ್ವಿ ಪ್ರಜ್ಞಾ ಸಿಂಗ್ ಏಕಾಏಕಿ ಉದಯಿಸಿದ ವ್ಯಕ್ತಿಯಲ್ಲ.  ಉಮಾಭಾರತಿ, ಸಾಧ್ವಿ ರೀತಾಂಬರ ಮುಂತಾದವರ ಹೆಜ್ಜೆ ಗುರುತುಗಳಲ್ಲೇ ಬೆಳೆದು ಬಂದು, ಬದಲಾದ ಸಂದರ್ಭದಲ್ಲಿ ಹೊರಹೊಮ್ಮಿರುವ ಪ್ರಜ್ಞಾ ಸಿಂಗ್ ಭಯೋತ್ಪಾದನೆ ಮತ್ತು ಮತಧರ್ಮಗಳ ನಡುವಿನ ಸೂಕ್ಷ್ಮ ಸಂಬಂಧಗಳನ್ನು ದೃಢೀಕರಿಸುವ ಶಕ್ತಿಯಾಗಿ ಬೆಳೆದು ಸಂಸದರಾಗಿ ಆಯ್ಕೆಯಾಗಿದ್ದಾರೆ. ಹಿಂದೂಗಳು ಭಯೋತ್ಪಾದಕರಾಗಲು ಸಾಧ್ಯವೇ ಇಲ್ಲ ಎಂಬ ಮೋದಿಯವರ ಹೇಳಿಕೆಗೂ, ಗಾಂಧಿ ಹಂತಕ ಗೋಡ್ಸೆ ಒಬ್ಬ ದೇಶಭಕ್ತ ಎಂಬ ಪ್ರಜ್ಞಾಸಿಂಗ್ ಅವರ ಹೇಳಿಕೆಗೂ ವ್ಯತ್ಯಾಸವೇನೂ ಇಲ್ಲ ಎನ್ನುವುದನ್ನು ಗಮನಿಸಬೇಕಿದೆ.


1980-90 ರ ದಶಕದಲ್ಲಿ ಮೊಳೆತ ಮತ್ತೊಂದು ಬೀಜ ಜಾತಿ ರಾಜಕಾರಣ ಅಥವಾ ಮಂಡಲ ರಾಜಕಾರಣದ್ದು. ಭಾರತದ ಸಾಮಾಜಿಕ ಹಾಗೂ ಸಾಂಸ್ಕøತಿಕ ಜೀವನದಲ್ಲಿ ಜಾತಿ ಪ್ರಧಾನ ಪಾತ್ರ ವಹಿಸುತ್ತದೆ. ಹಾಗೆಯೇ ಚುನಾವಣಾ ರಾಜಕಾರಣದಲ್ಲೂ ಸಹ ಜಾತಿ ಲೆಕ್ಕಾಚಾರಗಳು ಆಳುವ ವರ್ಗಗಳ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಆದರೆ ಯಾವುದೇ ನಿರ್ದಿಷ್ಟ ಜಾತಿಯೂ ಸಹ ಸಮಗ್ರ ಭಾರತದ ಅಸ್ತಿತ್ವವನ್ನು ಹೊಂದಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ತಮ್ಮ ಸಾಮುದಾಯಿಕ ಅಸ್ಮಿತೆಯನ್ನು ಜನಸಮುದಾಯಗಳ ಅಭಿವೃದ್ಧಿಗಾಗಿ ಬಳಸುವ ಬದಲು ಸ್ವಾರ್ಥ ರಾಜಕಾರಣ ಮತ್ತು ಅಧಿಕಾರ ಲಾಲಸೆಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತಿರುವ ಹಲವಾರು ಪ್ರಾದೇಶಿಕ ಪಕ್ಷಗಳು ಇಂದು ಉಗ್ರ ರಾಷ್ಟ್ರೀಯವಾದದ ಚಂಡಮಾರುತಕ್ಕೆ ಸಿಲುಕಿ ಕೊಚ್ಚಿಹೋಗಿವೆ. ಬಿಜೆಪಿ ಬೆಂಬಲಿಗರಿಗೆ ಮತ್ತು ಸಂಘಪರಿವಾರದ ಕಾರ್ಯಕರ್ತರಿಗೆ 2019 ರ ಚುನಾವಣಾ ಫಲಿತಾಂಶಗಳು ಮೋದಿ ಅಲೆಯಂತೆ ಕಂಡುಬಂದರೂ ಇಲ್ಲಿ ಮೂಲತಃ ವ್ಯಕ್ತವಾಗಿರುವುದು ರಾಷ್ಟ್ರೀಯವಾದದ ಮತಾಂಧ ಸ್ವರೂಪ ಎನ್ನುವುದನ್ನು ಗುರುತಿಸಬಹುದು.  ಹಾಗಾಗಿಯೇ ಮುಲಾಯಂ, ಮಾಯಾವತಿ, ಲಾಲೂ ಪ್ರಸಾದ್ ಯಾದವ್ , ಮಮತಾ ಬ್ಯಾನರ್ಜಿ ಅವರ ಪ್ರಾದೇಶಿಕ-ಜಾತೀಯ ರಾಜಕಾರಣಕ್ಕೆ ಹಿನ್ನಡೆಯಾಗಿದೆ.


ಭಾರತ ವಿಕಾಸ ಪಥದಲ್ಲಿದೆ, ನಿಜ. ಆದರೆ “ ಎಲ್ಲರಿಗಾಗಿ ಎಲ್ಲರೊಡನೆ ಎಲ್ಲರ ವಿಕಾಸ ” ಎನ್ನುವ ಘೋಷಣೆಯನ್ನು ಬಗೆದು ನೋಡಿದಾಗ ಭಾರತದ ಆಡಳಿತ ವ್ಯವಸ್ಥೆಯ ಚಿಂತನೆಗಳ ವಿಕಾರ-ವಿನಾಶಕಾರಿ ಪಥವನ್ನೂ ಗುರುತಿಸಲು ಸಾಧ್ಯ. 2019ರ ಜನಾದೇಶ ಒಂದೆಡೆ ಭಾವನಾತ್ಮಕ ಅಭಿವ್ಯಕ್ತಿಯಾಗಿದ್ದರೆ ಮತ್ತೊಂದೆಡೆ ಭ್ರಮಾತ್ಮಕ ಸನ್ನಿವೇಶಕ್ಕೆ ಬಲಿಯಾದಂತೆ ತೋರುತ್ತದೆ. ಭೌಗೋಳಿಕ ಭಾರತವನ್ನೇ ರಾಷ್ಟ್ರೀಯತೆಯ ಭೂಮಿಕೆಯನ್ನಾಗಿ ಪರಿವರ್ತಿಸಿದ ಚಾಣಾಕ್ಷ ನೀತಿಯನ್ನು ಕಳೆದ ಐದು ವರ್ಷಗಳಲ್ಲಿ ಗಮನಿಸಿದ್ದೇವೆ.  ಬಹುಮುಖಿ ಸಂಸ್ಕøತಿಯನ್ನು ಪ್ರತಿನಿಧಿಸುವ ಬೌದ್ಧಿಕ ಭಾರತದ ಪರಿಕಲ್ಪನೆಯನ್ನು ಏಕಮುಖಿ ಸಂಸ್ಕಂತಿಯ ಹರಿಕಾರರು ಅಡ್ಡಡ್ಡಲಾಗಿ ಸೀಳಲು ಸಿದ್ಧತೆ ನಡೆಸಿದ್ದಾರೆ. ಈ ಸಿದ್ಧತೆಯ ಪ್ರಯೋಗಾಲಯದಲ್ಲಿ ಸಾವಿರಾರು ಜೀವಗಳು ನಲುಗಿ ಹೋಗಿವೆ. ಸಾವು, ಹತ್ಯೆ, ಅಪರಾಧ, ಭಯೋತ್ಪಾದನೆ, ಉಗ್ರವಾದ ಇವೆಲವೂ ಮರು ವ್ಯಾಖ್ಯಾನಕ್ಕೊಳಗಾಗಿವೆ. ಎಲ್ಲವೂ ಸಾಪೇಕ್ಷವೂ ಆಗಿವೆ. ಹಾಗಾಗಿಯೇ ಶಾಸನ ಸಭೆಯಲ್ಲಿನ ಸ್ಥಾನಗಳು ತಮ್ಮ ನೈತಿಕ ಪಾವಿತ್ರ್ಯತೆಯನ್ನು ಕಳೆದುಕೊಂಡು ಬೆತ್ತಲಾಗಿಬಿಟ್ಟಿದೆ. 


ಒಂದೆಡೆ ಈ ದೇಶದ ಜನಸಾಮಾನ್ಯರು ಸಂವಿಧಾನದ ರಕ್ಷಣೆಗಾಗಿ ಹೋರಾಡಲು ಸಜ್ಜಾಗುತ್ತಿದ್ದಾರೆ. ಸಂವಿಧಾನ ಕೇವಲ ಒಂದು ಸ್ಥಾವರ ಗ್ರಂಥ ಎಂದು ಭಾವಿಸಿದಲ್ಲಿ ರಕ್ಷಣೆ ಎನ್ನುವ ಪದಕ್ಕೂ ಅರ್ಥ ಬರುತ್ತದೆ. ಆದರೆ ಸಂವಿಧಾನ ಸ್ಥಾವರವಲ್ಲ. ಅದೊಂದು ಚಿಂತನೆ ಮತ್ತು ಮಾನವೀಯ ಬೌದ್ಧಿಕ ಚಿಂತನೆಯ ಅಭಿವ್ಯಕ್ತಿ ಎಂದು ಪರಿಗಣಿಸಿದಾಗ ರಕ್ಷಣೆಯ ಆಯಾಮಗಳೇ ಬದಲಾಗುತ್ತವೆ. ಕಳೆದ ಮೂರು ದಶಕಗಳಿಂದಲೂ ಸಂವಿಧಾನದ ನೆತ್ತಿಯ ಮೇಲೆ ತೂಗುಗತ್ತಿ ಕಾಣುತ್ತಲೇ ಇದೆ. ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿರುವ ರಾಜಕೀಯ ಬೆಳವಣಿಗೆಗಳು ಈ ತೂಗುಗತ್ತಿಯನ್ನು ನಿರ್ವಹಿಸುತ್ತಿವೆ. ದುರಂತ ಎಂದರೆ ಈ ಸಂವಿಧಾನ ಏಕೆ ಶ್ರೇಷ್ಠ , ದೇಶದ ಜನಸಾಮಾನ್ಯರ, ಅವಕಾಶವಂಚಿತರ, ಶೋಷಿತರ ಆತ್ಮರಕ್ಷಣೆಗೆ ಸಂವಿಧಾನ ಹೇಗೆ ನೆರವಾಗುತ್ತದೆ ಎಂದು ತಳಮಟ್ಟದ ಜನತೆಗೆ ತಿಳಿಸಿ ಹೇಳುವವರೇ ಇಲ್ಲ. ಆಳುವವರಿಗೆ ಸಂವಿಧಾನದ ಓದು ಬೇಕಿಲ್ಲ ಆಳ್ವಿಕೆಯ ದಬ್ಬಾಳಿಕೆಗೆ ಬಲಿಯಾದ ಅಮಾಯಕರಿಗೆ ಓದಿನ ಅರಿವಿಲ್ಲ. ನಡುವೆ ಏರ್ಪಡುವ ಭ್ರಮಾಲೋಕದಲ್ಲಿ ಸಂವಿಧಾನ ಮಾರುಕಟ್ಟೆಯ ಸರಕಿನಂತೆ ಬಳಕೆಯಾಗಿಬಿಡುತ್ತದೆ. ಹಾಗಾಗಿಯೇ ಭಯೋತ್ಪಾದನೆಯ ಆರೋಪ ಹೊತ್ತವರೂ ಸಂಸದರಾಗಿಬಿಡುತ್ತಾರೆ, ಸಚಿವರೂ ಆಗುತ್ತಾರೆ. ಸಂವಿಧಾನದಲ್ಲಿ ಇದು ನಿಷಿದ್ಧವೇ ? ಉತ್ತರ ಶೋಧಿಸಬೇಕಿದೆ. 


ಗೆಲುವಿನ ಸಂಭ್ರಮ ಮತ್ತು ಸೋಲಿನ ಪರಾಮರ್ಶೆಯ ನಡುವಿನ ಸೂಕ್ಷ್ಮ ತಂತುಗಳು ಆತ್ಮಾವಲೋಕನದ ಭೂಮಿಕೆಯಾಗಿ ಪರಿಣಮಿಸಿದಲ್ಲಿ ಮಾತ್ರ ಮುಂದಿನ ಹೆಜ್ಜೆಗಳ ಒಳಸುಳಿಗಳನ್ನು ಗ್ರಹಿಸಲು ಸಾಧ್ಯ. ಬಹುಶಃ ಭಾರತದ ಶ್ರಮಿಕ ಸಮುದಾಯಗಳಿಗೆ, ಶೋಷಿತ ವರ್ಗಗಳಿಗೆ ಮತ್ತು ದಮನಿತ ದನಿಗಳಿಗೆ ರಾಜಕೀಯ ಪರ್ಯಾಯಕ್ಕಿಂತಲೂ ಹೆಚ್ಚಾಗಿ ಸಾಂಸ್ಕøತಿಕ-ಸಾಮಾಜಿಕ ಪರ್ಯಾಯದ ಅವಶ್ಯಕತೆ ಹೆಚ್ಚಾಗಿದೆ. ಕಳೆದ ಐದು ವರ್ಷಗಳ ಆಳ್ವಿಕೆಯಲ್ಲಿ ದೇಶ ಮುನ್ನಡೆದಿದೆ, ಜಾಗತಿಕ ಮಟ್ಟದಲ್ಲಿ ಒಂದು ಪ್ರತಿಷ್ಠಿತ ಸ್ಥಾನ ಪಡೆದಿದೆ, ನವ ಉದಾರವಾದಿ ಮಾರುಕಟ್ಟೆಯಲ್ಲಿ ಭಾರತದ ಸರಕಿನ ಬುಟ್ಟಿ ತುಂಬಿ ಹೋದಂತೆ ಕಾಣುತ್ತಿದೆ. ಆದರೆ ತಲೆಯ ಮೇಲೆ ಬುಟ್ಟಿಯನ್ನು ಹೊತ್ತವರ ದೃಷ್ಟಿ ನೆಲದ ಮೇಲೆ ನೆಟ್ಟಿಲ್ಲ. ನೋಟು ಅಮಾನ್ಯೀಕರಣ ಇಂತಹ ಸಂದಿಗ್ಧತೆಯ ಸಂಕೇತವಾಗಿ ಜಾರಿಗೊಂಡ ಯೋಜನೆ. ಅಮಾನ್ಯೀಕರಣವನ್ನು ವಿರೋಧಿಸುವ ಸ್ಥೈರ್ಯ ಮತ್ತು ಸಾಮಥ್ರ್ಯ ಮುಖ್ಯವಾಹಿನಿಯ ಯಾವುದೇ ಪಕ್ಷಗಳಲ್ಲಿ ಕಾಣದೆ ಹೋದದ್ದು ಅಚ್ಚರಿಯೇನಲ್ಲ. ಏಕೆಂದರೆ ನವ ಉದಾರವಾದವನ್ನು ನಿರಾಕರಿಸುವುದಿರಲಿ, ವಿರೋಧಿಸಲೂ ರಾಜಕೀಯ ಪಕ್ಷಗಳು ಸಿದ್ಧವಾಗಿಲ್ಲ. ಫಲಾನುಭವಿಗಳು ಫಲ ನೀಡುವ ಕಾಮಧೇನುವನ್ನು ಪೂಜಿಸದಿರುತ್ತಾರೆಯೇ ?


ಆದರೆ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಬುಟ್ಟಿಯಲ್ಲಿ ಹೊತ್ತು ಕಾರ್ಪೋರೇಟ್ ಉದ್ಯಮಿಗಳ ಹೊಸ್ತಿಲಿಗೆ ತಲುಪಿಸುವ ಆಡಳಿತ ವ್ಯವಸ್ಥೆಯನ್ನು ಜನಸಾಮಾನ್ಯರು, ಶ್ರಮಜೀವಿಗಳು, ಫಲಾನುಭವಿಗಳಲ್ಲದವರೂ ಸಹಿಸಿಕೊಂಡಿರುವುದೇಕೆ ? ಈ ಪ್ರಶ್ನೆ ದೇಶದ ಸುಶಿಕ್ಷಿತ ನಾಗರಿಕ ಸಮಾಜವನ್ನು ಕಾಡಬೇಕಿದೆ. ಬಂಡವಾಳ ವ್ಯವಸ್ಥೆ ಪ್ರಚೋದಿಸುವ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ದೇಶ ಕೇವಲ ನಾಲ್ಕೂದಿಕ್ಕಿನ ಗಡಿ ರೇಖೆಗಳಿಗೆ ಸೀಮಿತವಾಗಿರುತ್ತದೆ. ಈ ಗಡಿರೇಖೆಗಳನ್ನು ಅಳಿಸಿಹಾಕಿದರೆ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳು ವಿನಾಶದತ್ತ ಸಾಗುತ್ತವೆ. ಜಾಗತೀಕರಣದ ಪರಿಣಾಮ ಇಡೀ ವಿಶ್ವವೇ ಒಂದು ಪುಟ್ಟ ಗ್ರಾಮದಂತಾಗುತ್ತದೆ ಎನ್ನುವ ಬಣ್ಣದ ಮಾತುಗಳ ಆಂತರ್ಯದಲ್ಲಿ, ಈ ಗಡಿ ರೇಖೆಗಳು ಮತ್ತು ಇವುಗಳ ರಕ್ಷಣೆಗಾಗಿ ಹಂಬಲಿಸುವ ಯುದ್ಧೋನ್ಮಾದದ ಮನಸುಗಳು ಅಡಗಿರುವುದನ್ನು ಗಮನಿಸಬೇಕಿದೆ.  ಶಾಂತಿ ಮತ್ತು ಸೌಹಾರ್ದತೆ ಮಾರುಕಟ್ಟೆಯನ್ನು ನಿಯಂತ್ರಿಸುವ ಅಸ್ತ್ರವಾಗಿ ಪರಿಣಮಿಸಿರುವುದನ್ನು ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ನೀತಿಗಳಲ್ಲಿ ಕಾಣಲು ಸಾಧ್ಯ. ಇದರ ಮತ್ತೊಂದು ಆಯಾಮವನ್ನು ಭಾರತದಲ್ಲಿ ಕಾಣುತ್ತಿದ್ದೇವೆ. 


ಮುಂಬರುವ ದಿನಗಳಲ್ಲಿ ಎರಡು ವಿದ್ಯಮಾನಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ ಕುಸಿತದ ಹಾದಿಯಲ್ಲಿರುವ ಭಾರತದ ಅರ್ಥವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ನವ ಉದಾರವಾದಿ ನೀತಿಗಳನ್ನು ಶೀಘ್ರಗತಿಯಲ್ಲಿ ಜಾರಿಗೊಳಿಸಬಹುದು. ಸಾರಿಗೆ, ಸಂಪರ್ಕ, ವಿಮೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಪೂರ್ಣ ಮತ್ತು ಅರೆ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ದೊರೆಯಬಹುದು. ಮತ್ತೊಂದೆಡೆ ಹೊರಗುತ್ತಿಗೆ ಪದ್ಧತಿಗೆ ಅಧಿಕೃತ ಮೊಹರು ದೊರೆಯಬಹುದು. ಮಾರುಕಟ್ಟೆ ಬಂಡವಾಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಪೋರೇಟ್ ಉದ್ಯಮಿಗಳಿಗೆ ನೈಸರ್ಗಿಕ ಸಂಪನ್ಮೂಲಗಳ ಒಡೆತನವನ್ನು ವಹಿಸಿಕೊಡಲು ಇರುವ ಎಲ್ಲ ರೀತಿಯ ಕಾನೂನಾತ್ಮಕ ತೊಡಕುಗಳನ್ನು ತೆಗೆದುಹಾಕಬಹುದು. ಕಾರ್ಮಿಕ ಕಾಯ್ದೆ ಮತ್ತು ಕೈಗಾರಿಕಾ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಪ್ರತಿರೋಧದ ದನಿಗಳನ್ನು ದಮನಿಸಲು ನೂತನ ಶಾಸನಗಳನ್ನು ರೂಪಿಸಬಹುದು. ರೈಲ್ವೆ ಮತ್ತು ವಿಮಾನಯಾನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳಕ್ಕೆ ಮುಕ್ತ ಅವಕಾಶ ನೀಡಬಹುದು. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ರತ್ನಗಂಬಳಿಯ ಸ್ವಾಗತ ದೊರೆಯಬಹುದು. ಹಣಕಾಸು ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯ ಕ್ಷೀಣಿಸಿ ಖಾಸಗಿ ಬಂಡವಾಳ ಹೆಚ್ಚಾಗಬಹುದು. ಬ್ಯಾಂಕುಗಳ ವಿಲೀನ ಇದರ ಒಂದು ಹೆಜ್ಜೆಯಷ್ಟೆ ಎಂದು ಹೇಳಬೇಕಿಲ್ಲ. ಕೃಷಿ ಉತ್ಪನ್ನ, ಮಾರುಕಟ್ಟೆ ಮತ್ತು ಮೂಲ ಸೌಕರ್ಯಗಳ ನಿರ್ವಹಣೆಯನ್ನು ಕಾರ್ಪೋರೇಟ್ ಕ್ಷೇತ್ರಗಳಿಗೆ ಒಪ್ಪಿಸಿ ಕೃಷಿ ಭೂಮಿಯನ್ನು ಖಾಸಗಿ ಬಂಡವಾಳ ಹೂಡಿಕೆಗೆ ಮುಕ್ತಗೊಳಿಸಬಹುದು. ಸ್ಮಾರ್ಟ್ ಸಿಟಿ ಮುಂತಾದ ಯೋಜನೆಗಳನ್ನು ವಿಸ್ತರಿಸಿ ವಾಲ್‍ಮಾರ್ಟ್, ಆಪಲ್ ಮುಂತಾದ ಬೃಹತ್ ಚಿಲ್ಲರೆ ಮಳಿಗೆಗಳಿಗೆ ಮುಕ್ತ ಅವಕಾಶ ನೀಡಬಹುದು. ಇದು ನರೇಂದ್ರ ಮೋದಿ ಸರ್ಕಾರದ ಮುಂದೆ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ವಾರಸುದಾರರು ಮಂಡಿಸಿರಬಹುದಾದ ನೀಲನಕ್ಷೆಯಾಗಿರುತ್ತದೆ.


ಆದರೆ ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಎಂದರೆ ಸ್ವೇಚ್ಚಾಚಾರದ ಮುಕ್ತ ಪರವಾನಗಿ ಅಲ್ಲ ಎನ್ನುವುದನ್ನು ಇತಿಹಾಸ ನಿರೂಪಿಸಿದೆ. ಕಳೆದ ಐದು ವರ್ಷಗಳಲ್ಲಿ ದೇಶದ ಲಕ್ಷಾಂತರ ಕಾರ್ಮಿಕರು, ರೈತರು, ಕೃಷಿಕಾರ್ಮಿಕರು, ಗ್ರಾಮೀಣ ಬಡಜನತೆ, ಶೋಷಿತ ವರ್ಗಗಳು, ಆದಿವಾಸಿಗಳು, ಮಹಿಳೆಯರು ಮತ್ತು ಸಣ್ಣ ವ್ಯಾಪಾರಿಗಳು ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ. ಲಕ್ಷಾಂತರ ರೈತರು ಎರಡು ಬಾರಿ ತಮ್ಮ ಹಕ್ಕೊತ್ತಾಯಗಳಿಗಾಗಿ ಮೈಲುಗಟ್ಟಲೆ ಪಾದಯಾತ್ರೆ ನಡೆಸಿದ್ದಾರೆ. ಈ ಹೋರಾಟ ಚುನಾವಣೆಗಳ ನಂತರ ತಣ್ಣಗಾಗುತ್ತದೆ, ರಾಷ್ಟ್ರೀಯತೆಯ ಅಮಲು ಶ್ರಮಿಕರನ್ನು ಮೆತ್ತಗಾಗಿಸುತ್ತದೆ ಎಂಬ ಭ್ರಮೆ ಇರಬೇಕಿಲ್ಲ. ಭಾರತದಂತಹ ದೇಶದಲ್ಲಿ, ದೇಶದ ಶೇ 70ರಷ್ಟು ಸಂಪತ್ತನ್ನು ಶೇ 1ರಷ್ಟು ಜನರು ಹೊಂದಿರುವಾಗ ಅವಕಾಶವಂಚಿತ ಸಮುದಾಯಗಳ ಆಕ್ರೋಶ ಹೆಚ್ಚುಕಾಲ ಸುಪ್ತವಾಗಿರುವುದಿಲ್ಲ. ಡಿಜಿಟಲೀಕರಣ ಸೃಷ್ಟಿಸುತ್ತಿರುವ ಉದ್ಯೋಗಗಳು ಜನರ ನಿತ್ಯ ಜೀವನವನ್ನು ಸುಗಮವಾಗಿಸಬಹುದು ಆದರೆ ಜನಸಾಮಾನ್ಯರಿಗೆ ಸುಭದ್ರ ನೆಲೆಯನ್ನು ಒದಗಿಸುವುದಿಲ್ಲ. ಈ ವಾಸ್ತವ ಅರಿವಾದಾಗ ಆಕ್ರೋಶ ಸ್ಫೋಟಿಸುತ್ತದೆ. ಏಕೆಂದರೆ ಮಧ್ಯಮ ವರ್ಗಗಳು ಕೆಲ ಕಾಲ ಮಾತ್ರ ಭ್ರಮೆಗೊಳಗಾಗುತ್ತಾರೆ. ತಮ್ಮ ನೆಲೆ ಕುಸಿಯಲಾರಂಭಿಸಿದಾಗ ಸಿಡಿದೇಳುತ್ತಾರೆ. ಆಗ ಮಧ್ಯಮ ವರ್ಗಗಳಿಗೂ ಶ್ರಮಜೀವಿಗಳ ಬಗ್ಗೆ ಅನುಕಂಪವೂ ಮೂಡುತ್ತದೆ. ರಸ್ತೆಗಿಳಿದು ಹೋರಾಡಲು ಜನಬೆಂಬಲವೂ ಬೇಕಲ್ಲವೇ ?


ಸಾರ್ವಜನಿಕ ಸಂಸ್ಥೆಗಳ ಅವಸಾನಕ್ಕೆ 1998 ರಲ್ಲೇ ಬುನಾದಿ ಹಾಕಿದ್ದ ವಾಜಪೇಯಿ ಸರ್ಕಾರ ಪೂರೈಸದೆ ಬಿಟ್ಟ ಶ್ರಾದ್ಧ ಕರ್ಮ ವಿಧಿ ವಿಧಾನಗಳನ್ನು ಮುಂದಿನ ಸರ್ಕಾರ ಪೂರೈಸುವುದು ಖಚಿತ. ಈಗಾಗಲೇ 45ಕ್ಕೂ ಹೆಚ್ಚು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲು ಅಥವಾ ಖಾಸಗೀಕರಣಗೊಳಿಸಲು ನೀತಿ ಆಯೋಗ ಸಜ್ಜಾಗಿದೆ. ಬಿಎಸ್‍ಎನ್‍ಎಲ್ ತನ್ನ ಚರಮಗೀತೆಯ ನೋಂದಣಿಗಾಗಿ ಕಾಯುತ್ತಿದೆ. ಬ್ಯಾಂಕುಗಳು ವಿಲೀನ ಎನ್ನುವ ಖಾಸಗೀಕರಣದ ಮೊದಲ ಹೆಜ್ಜೆಯೂರಲು ತವಕಿಸುತ್ತಿವೆ. ಏರ್ ಇಂಡಿಯಾದ ಶವಪೆಟ್ಟಿಗೆ ಸಿದ್ಧವಾಗಿದೆ. ಇಂತಹ ಒಂದು ವಿಷಮ ಸಂದರ್ಭದಲ್ಲಿ ನಾವು ಮುನ್ನಡೆದಿದ್ದೇವೆ. ಐದು ದಶಕಗಳ ಕಾಲ ಆರ್ಥಿಕತೆಯ ಫಲಾನುಭವಿಗಳಾಗಿ, ಕೆಂಬಾವುಟದಡಿ ಹೋರಾಡಿ ತಮ್ಮ ಸುಭದ್ರ ನೆಲೆ ಕಂಡುಕೊಂಡಿರುವ ಸಂಘಟಿತ ಕಾರ್ಮಿಕರ ಒಂದು ವರ್ಗ ರಾಷ್ಟ್ರೀಯತೆಯ ಸಮೂಹ ಸನ್ನಿಗೆ ಬಲಿಯಾಗಿ ಸ್ವಂತಿಕೆ ಕಳೆದುಕೊಂಡಿದ್ದರೂ ಜಂತಿಗೆ ಎಣಿಸುವ ತಪ್ಪು ಮಾಡಿದ್ದನ್ನು ಸ್ಮರಿಸುವ ಸಂದರ್ಭ ಎದುರಾಗುತ್ತದೆ.  ಮಧ್ಯಮ ವರ್ಗಗಳಂತೆ ಈ ವರ್ಗವೂ ಸಿಡಿದೆದ್ದರೆ ಅಚ್ಚರಿಯೇನಿಲ್ಲ. ಏಕೆಂದರೆ ಜೀವನ ಸುಲಭವಾಗಿದ್ದರೂ ಬದುಕು ದುರ್ಬರವಾಗಿರುತ್ತದೆ.


ಸಾಮಾಜಿಕ ನೆಲೆಯಲ್ಲಿ 2019 ರ ಚುನಾವಣೆಗಳನ್ನು ವಿಶ್ಲೇಷಿಸುವಾಗ ಜಾತಿ ರಾಜಕಾರಣಕ್ಕೂ ಈ ದೇಶದ ಸಾಮಾಜಿಕ-ಸಾಂಸ್ಕøತಿಕ ಜೀವನದಲ್ಲಿ ಅಂತರ್ಗತವಾಗಿರುವ ಜಾತಿ ಸೂಕ್ಷ್ಮತೆಗಳಿಗೂ ಇರುವ ಅಂತರವನ್ನು ಗಮನಿಸಬೇಕಾಗುತ್ತದೆ. ಉಗ್ರ ರಾಷ್ಟ್ರೀಯತೆ ಮತ್ತು ಭೌಗೋಳಿಕ ದೇಶ ರಕ್ಷಣೆಯ ಉನ್ಮಾದಕ್ಕೆ ಬಲಿಯಾಗಿದ್ದ ಶೋಷಿತ ವರ್ಗಗಳು, ದಲಿತ ಸಮುದಾಯಗಳು ಬಹುಶಃ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಮತ್ತೊಮ್ಮೆ ಮುಖಾಮುಖಿಯಾಗಬಹುದು. ಏಕೆಂದರೆ ಆಡಳಿತ ನಡೆಸುವ ನಾಯಕರಿಗೂ ತಳಮಟ್ಟದ ಕಾರ್ಯಕರ್ತರಿಗೂ ನಡುವೆ ಇರುವ ಕಂದಕಗಳಲ್ಲಿ ಕ್ರೌರ್ಯದ ಮುಖವಾಡಗಳು ಸಾಕಷ್ಟು ಅಡಗಿವೆ. ಈ ಕ್ರೌರ್ಯದ ಅನಾವರಣ ಹಂತಹಂತವಾಗಿ ಆಗುತ್ತದೆ. ಅಂಬೇಡ್ಕರರನ್ನು ಅಪ್ಪಿಕೊಂಡ ಮಾತ್ರಕ್ಕೆ ಜಾತಿ ವಿನಾಶವೂ ಆಗುವುದಿಲ್ಲ, ಜಾತಿ ಪ್ರಜ್ಞೆಯೂ ಅಂತ್ಯವಾಗುವುದಿಲ್ಲ ಎಂಬ ವಾಸ್ತವವನ್ನು ಈ ದೇಶದ ದಲಿತ ಸಮುದಾಯಗಳು ಗ್ರಹಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಹಿಂದುತ್ವ ಮತ್ತು ರಾಮಮಂದಿರ ಎಂಬ ಮಿಥ್ಯೆಗಳನ್ನೆದುರಿಟ್ಟು ಜಾತಿ ಸೂಕ್ಷ್ಮತೆಯ ಕ್ರೌರ್ಯಗಳನ್ನು ಮರೆಮಾಚುವ ಚಾಣಕ್ಯ ತಂತ್ರಗಳು ಸದಾಕಾಲ ಫಲಿಸದು.  ಆದರೆ ಈ ದೇಶದ ದಲಿತ ಸಮುದಾಯಗಳ ನಿತ್ಯ ಜೀವನದ ಸುತ್ತ ನಿರ್ಮಾಣವಾಗಿರುವ ಸೂಕ್ಷ್ಮ ಸಂವೇದನೆಗಳೇ ಇಲ್ಲಿನ ಬಹುಮುಖಿ ಸಂಸ್ಕಂತಿಯನ್ನೂ ರಕ್ಷಿಸುತ್ತದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈಗಾಗಲೇ 2019 ರ ಚುನಾವಣೆಗಳು ಮುಸ್ಲಿಂ ಮತದಾರರ ಪ್ರಸ್ತುತತೆಯನ್ನೇ ಪ್ರಶ್ನಿಸುವಂತಾಗಿರುವ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಜಾಗೃತರಾಗುವ ಅನಿವಾರ್ಯತೆಯೂ ಎದುರಾಗಿದೆ. 

"ಎಲ್ಲರಿಗಾಗಿ ಎಲ್ಲರೊಡನೆ ಎಲ್ಲರ ವಿಕಾಸ ” ಎನ್ನುವ ಘೋಷಣೆಯಲ್ಲಿ ಎಲ್ಲರು ಎನ್ನುವ ಪದವೇ ಸಾಪೇಕ್ಷವಾಗಿ ಕಾಣುತ್ತಿದೆ. ಈ ಸಾಪೇಕ್ಷತೆಯ ಸೂಕ್ಷ್ಮ ತಂತುಗಳು ಮುಂಬರುವ ದಿನಗಳ ಆಡಳಿತ ವ್ಯವಸ್ಥೆಯಲ್ಲಿ ಅನಾವರಣವಾಗುತ್ತಾ ಹೋಗುತ್ತದೆ. ಎಲ್ಲರನ್ನೂ ಒಳಗೊಳ್ಳುವ ಆಡಳಿತ ನೀತಿಯನ್ನು ಅನುಸರಿಸುವುದಾಗಿ ಭರವಸೆ ನೀಡಿದ್ದರೂ ಇಲ್ಲಿ ಎಲ್ಲರೂ ಎಲ್ಲರಾಗುವುದಿಲ್ಲ. ಕೆಲವರು ಹೊರಗುಳಿಯುವುದು ನಿಶ್ಚಿತ. ಹೊರಗುಳಿಯುವವರು ಯಾರು ಎನ್ನುವುದಕ್ಕಿಂತಲೂ ಏಕೆ ಹೊರಗುಳಿಯುತ್ತಾರೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡಿದರೆ ಈ ಹೊರಗುಳಿಯುವಿಕೆಯನ್ನು ತಡೆಗಟ್ಟುವುದಾದರೂ ಹೇಗೆ ಎಂದು ಯೋಚಿಸಲು ಸಾಧ್ಯ. ಭಾರತದ ನಾಗರಿಕ ಸಮಾಜದ ಮುಂದಿರುವ ಸವಾಲು ಇದು. ದೇಶಕಟ್ಟಲು ರಾಜಕೀಯ ಅಧಿಕಾರ ಒಂದು ಮಾರ್ಗವಷ್ಟೆ. ಭೌಗೋಳಿಕ ರಾಷ್ಟ್ರದ ಸೀಮಿತ ಚೌಕಟ್ಟನ್ನು ಭಗ್ನಗೊಳಿಸಿ ಬೌದ್ಧಿಕ ಭಾರತದ ನಿರ್ಮಾಣಕ್ಕೆ ಶ್ರಮಿಸಲು ಮುಂದಾದಲ್ಲಿ ಯಾವುದೇ ಸುನಾಮಿ ಅಲೆ ಎದುರಾದರೂ ಎದೆಗುಂದದೆ ನಿಲ್ಲಬಹುದು. ಇಂತಹ ಅವಕಾಶ ಸದಾ ನಮ್ಮ  ಮುಂದಿರುತ್ತದೆ. ಮತ್ತೊಮ್ಮೆ ಇಂತಹ ಸಂದಿಗ್ಧತೆಗೆ ಮುಖಾಮುಖಿಯಾಗಿದ್ದೇವೆ. ಹೆಜ್ಜೆ ಇಡೋಣ. ಸುರಂಗದ ಆ ಕೊನೆಯಲ್ಲೊಂದು ಪ್ರಣತಿ ಉರಿಯುತ್ತಲೇ ಇರುತ್ತದೆ.