ಹಿಂದೂ ಸಮೂಹ ಸನ್ನಿಯ ವಿಷಯಗಳಿಗೆ ಒತ್ತು: ಬೇಕಿಲ್ಲ ಉದ್ಯಮಗಳಿಗೆ ಎರಗಿರುವ ಆಪತ್ತು 

ಗೋಹತ್ಯೆ ನಿಷೇಧ, ರಾಮಮಂದಿರ ನಿರ್ಮಾಣ ಇವೇ ಮೊದಲಾದ ವಿಷಯಗಳು ಹಿಂದೂಗಳ ಆಗ್ರಹ ಎಂಬಂತೆ ಬಿಂಬಿಸುವ ಮಂದಿಗೆ ಆರ್ಥಿಕ ಹಿಂಜರಿತದಿಂದ ಮುಚ್ಚುತ್ತಿರುವ ಅನೇಕ ಕಾರ್ಖಾನೆಗಳಲ್ಲೂ ಹಿಂದೂಗಳಿದ್ದಾರೆ, ಕಾರ್ಖಾನೆಗಳನ್ನೂ ಕಾಪಾಡಬೇಕು ಎಂದು ಏಕೆ ಅರ್ಥವಾಗುವುದಿಲ್ಲ ಎಂದು ನಾ ದಿವಾಕರ ಪ್ರಶ್ನಿಸುತ್ತಾರೆ

ಹಿಂದೂ ಸಮೂಹ ಸನ್ನಿಯ ವಿಷಯಗಳಿಗೆ ಒತ್ತು: ಬೇಕಿಲ್ಲ ಉದ್ಯಮಗಳಿಗೆ ಎರಗಿರುವ ಆಪತ್ತು 

ನಮ್ಮ ಸಮಸ್ಯೆಗಳು ಬೆಟ್ಟದಷ್ಟಿವೆ. ಆಳುವವರ ದೃಷ್ಟಿ ಮಸುಕಾಗಿದೆ. ಏನು ಮಾಡುವುದು ? ಅಧಿಕಾರ ರಾಜಕಾರಣ ಎಂದರೆ ಹೀಗೆಯೇ. ಜನಸಾಮಾನ್ಯರು ಅನ್ನಕ್ಕಾಗಿ ಹಾತೊರೆಯುತ್ತಿರುವಾಗ ಚಿನ್ನದ ವ್ಯಾಪಾರಕ್ಕೆ ಉತ್ತೇಜನ ನೀಡುತ್ತಾರೆ. ಈ ದೇಶದ ಸಮಸ್ಯೆ  ಏನು ? ಇಡೀ ದೇಶದ ಗಮನ ಕಾಶ್ಮೀರದತ್ತ ಸಾಗುವಂತೆ ಮಾಡಿದ ಪ್ರಭುತ್ವ ಅರ್ಥವ್ಯವಸ್ಥೆ ಅಧೋಗತಿಗೆ ಇಳಿಯುತ್ತಿರುವುದನ್ನು ಗಮನಿಸುತ್ತಲೇ ಇಲ್ಲ.  ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷರೊಡನೆ ಎಷ್ಟೇ ಸಮಾಲೋಚನೆ ನಡೆಸಿದರೂ ಅದು ಭಾರತದ ದುಡಿಯುವ ವರ್ಗಗಳ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ. ಭಾರತದ ಪ್ರಧಾನಿಗೆ ಹೊರ ದೇಶದವರು ನೀಡುವ ಪ್ರಶಸ್ತಿ, ಸನ್ಮಾನ, ಬಿರುದು ಇವೆಲ್ಲವೂ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುತ್ತವೆ. ಆದರೆ ಇಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕಾರ್ಮಿಕರ ಸಮಸ್ಯೆ, ರೈತರ ಸಮಸ್ಯೆ ಭಾರತದ ಘನತೆಯನ್ನು ಮಣ್ಣುಪಾಲು ಮಾಡುತ್ತದೆ. ಕರ್ನಾಟಕದಂತಹ ದೊಡ್ಡ ರಾಜ್ಯದಲ್ಲಿ ರಚಿಸಲಾಗುವ ಸರ್ಕಾರ ಒಂದು ತಿಂಗಳ ಕಾಲ ಸಚಿವ ಸಂಪುಟ ಇಲ್ಲದೆಯೇ ಕಾರ್ಯ ನಿರ್ವಹಿಸುತ್ತದೆ. ಒಂದೆಡೆ ಬರ, ಒಂದೆಡೆ ಪ್ರವಾಹ, ನೆರೆ ಹಾವಳಿ, ನೈಸರ್ಗಿಕ ವಿಕೋಪಕ್ಕೆ ಬಲಿಯಾದ ನೂರಾರು ಜೀವಗಳು, ತಮ್ಮ ಸೂರು ಕಳೆದುಕೊಂಡು ನಿರ್ಗತಿಕರಾಗಿರುವ ಸಾವಿರಾರು ಕುಟುಂಬಗಳು ಇವೆಲ್ಲದರ ನಡುವೆ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶ ಅವಸಾನದತ್ತ ಸಾಗುತ್ತಿರುವ ದೃಶ್ಯ.

ಆರ್ಥಿಕತೆ ಕುಸಿಯುತ್ತಿದೆ ಎಂದರೆ , ಇದು ಜಾಗತಿಕ ವಿದ್ಯಮಾನ ಎಲ್ಲರಿಗೂ ತಟ್ಟುತ್ತದೆ ನಮಗೂ ತಟ್ಟಿದೆ ಎಂದು ವಾದಿಸುವ ಅನರ್ಥಶಾಸ್ತ್ರಜ್ಞರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರಧಾನಿ ಮೋದಿಯವರ ವರ್ಚಸ್ಸನ್ನು ಕಾಪಾಡುವುದನ್ನೇ ತಮ್ಮ ಕಾರ್ಯಸೂಚಿಯನ್ನಾಗಿ ಮಾಡಿಕೊಂಡಿರುವ ಮಧ್ಯಮ ವರ್ಗಗಳ ಒಂದು ಬೃಹತ್ ಪಡೆಯೇ ಸಿದ್ಧವಾಗಿಬಿಟ್ಟಿದೆ. ಈ ಪಡೆಗೆ ಮಾರುಕಟ್ಟೆ, ಬಂಡವಾಳ ಮತ್ತು ಅರ್ಥ ವ್ಯವಸ್ಥೆಯ ನಡುವೆ ಇರುವ ಸೂಕ್ಷ್ಮ ಸಂಬಂಧಗಳ ಪರಿವೆಯೂ ಇಲ್ಲ ಮತ್ತು ಇವುಗಳ ಪರಿಜ್ಞಾನವೂ ಇರುವುದಿಲ್ಲ. ಹಾಗಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಉಂಟಾಗಿರುವ ಕುಸಿತಕ್ಕೆ ಮೋದಿ ಸರ್ಕಾರ ಸೋಲಾರ್ ಚಾಲಿತ/ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಿರುವುದೇ ಕಾರಣ ಎಂದು ವಾದಿಸುತ್ತಾರೆ. ಇರಲಿ ಈ ಅಪ್ರಬುದ್ಧತೆಯನ್ನು ಬದಿಗಿಟ್ಟು ಅಧಿಕಾರದಲ್ಲಿರುವವರತ್ತ ನೋಡೋಣ.

ಸಂತೋಷ್ ಅವರಂತಹ ಬಿಜೆಪಿ ನಾಯಕರಿಗೆ ಹಿಂದೂಗಳ ಸಮಸ್ಯೆ ಎಂದರೆ ಗೋ ಹತ್ಯೆ, ಮಂದಿರ ಇವುಗಳೇ ಗೋಚರಿಸುತ್ತವೆ. ಪೀಣ್ಯದಲ್ಲಿ ನೌಕರಿ ಕಳೆದುಕೊಳ್ಳುತ್ತಿರುವ ಸಾವಿರಾರು ನೌಕರರು, ಆಟೋ ಮೊಬೈಲ್ ಕ್ಷೇತ್ರದಲ್ಲಿ ಬೀದಿಪಾಲಾಗುತ್ತಿರುವ ಕಾರ್ಮಿಕರು, ಮುಚ್ಚಲಾಗುತ್ತಿರುವ ನೂರಕ್ಕೂ ಹೆಚ್ಚು ಸಾರ್ವಜನಿಕ ಉದ್ದಿಮೆಗಳಲ್ಲಿನ ದುಡಿಮೆಗಾರರು, ಬರಪೀಡಿತ-ನೆರೆ ಪೀಡಿತ ಕೃಷಿ ಸಮುದಾಯ ಇವರಾರೂ ಹಿಂದೂಗಳಂತೆ ಕಾಣುವುದೇ ಇಲ್ಲ. ಬೆಂಕಿ ಹಚ್ಚಲು ಸಿದ್ಧರಾಗುತ್ತಿರುವ ಈ ನಾಯಕರಿಗೆ, ಹೊತ್ತಿ ಉರಿಯುತ್ತಿರುವ ಸಮಸ್ಯೆಗಳ ಜ್ವಾಲೆ ಕಾಣುತ್ತಲೇ ಇಲ್ಲ. ಏಕೆಂದರೆ ಕಾಶ್ಮೀರದಲ್ಲಿ ಭಾರತದ ಉಜ್ವಲ ವದನ  ಮಿನುಗುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದರೆ ಹೆಚ್ಚು ಹೆಚ್ಚು ಜನರು ಸ್ವತಃ ಉದ್ಯೋಗದಾತರಾಗುತ್ತಿದ್ದಾರೆ ಎಂದರ್ಥ ಎಂದು ಕೇಂದ್ರ ಸಚಿವರು ಹೇಳುವುದನ್ನು ನೋಡಿದರೆ ನಾವು ಎಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಖೇದವಾಗುತ್ತದೆ.  ಸುಷ್ಮಾ ಸ್ವರಾಜ್, ಅರುಣ್ ಜೈಟ್ಲಿ, ಅನಂತಕುಮಾರ್ ಅವರ ಸಾವಿಗೆ ವಿರೋಧ ಪಕ್ಷಗಳ ಮಾಂತ್ರಿಕ ಶಕ್ತಿಯೇ ಕಾರಣ ಎಂದು ಹೇಳುವ ಸಂಸದೆ ನಮ್ಮ ನಡುವೆ ಇದ್ದಾರೆ. ಇಂತಹವರ ಕಣ್ಣಿಗೆ ಲಕ್ಷಾಂತರ ರೈತರ ಸಾವಿಗೆ ಕಾರಣವಾದ ನವ ಉದಾರವಾದದ ಮಾಂತ್ರಿಕ ಶಕ್ತಿ ಕಾಣುವುದೇ ಇಲ್ಲ. ಏಕೆಂದರೆ ಇವರಿಗೆ ಅರ್ಥಶಾಸ್ತ್ರದ ಅರಿವೂ ಇಲ್ಲ ಜನಪರ  ಕಾಳಜಿಯೂ ಇಲ್ಲ. ಸಾವುಗಳು ಎಲ್ಲಿಯವರೆಗೆ ಲಾಭದಾಯಕವೋ ಅಲ್ಲಿಯವರೆಗೂ ಸ್ವಾಗತಾರ್ಹವೇ.

ಸಚಿವ ಸಂಪುಟವೇ ಇಲ್ಲದೆ ಒಂದು ತಿಂಗಳ ಆಡಳಿತ ನಡೆಸಿದ ರಾಜ್ಯ ಬಿಜೆಪಿ ಸರ್ಕಾರ ಹಠಾತ್ತನೆ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿಬಿಟ್ಟಿದೆ. ಈ ನೇಮಕ ಆಡಳಿತ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮಾಡಿದ್ದಲ್ಲ. ಅಧಿಕಾರ ಪೀಠವನ್ನು ರಕ್ಷಿಸಲು ಮಾಡಿದ್ದು. ಈ ಉಪಮುಖ್ಯಮಂತ್ರಿಗಳ ನಿತ್ಯ ಭೋಗ ಜೀವನಕ್ಕೆ ತೆರಿಗೆದಾರರು ದಂಡ ತೆರಬೇಕಾಗುತ್ತದೆ. ಯಾವ ಪುರುಷಾರ್ಥಕ್ಕೆ ? ಉತ್ತರವೇ ಇಲ್ಲ. ಇಷ್ಟರ ನಡುವೆ ಆರೆಸ್ಸೆಸ್ ಅಧ್ಯಕ್ಷರಿಗೆ ಮೀಸಲಾತಿಯೇ ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಮೀಸಲಾತಿ ಕುರಿತು ಚರ್ಚೆ ಮಾಡಬೇಕು ಎನ್ನುತ್ತಾರೆ. ಈ ಮಾತುಗಳ ಹಿಂದಿನ ಹುನ್ನಾರವನ್ನು ತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡುವ ಮೂಲಕ  ಬಿಚ್ಚಿಡುತ್ತಾರೆ.

ದೇಶದ ಎಲ್ಲ ಸಮಸ್ಯೆಗಳಿಗೆ ಭಯೋತ್ಪಾದನೆಯೇ ಕಾರಣ – ಭಯೋತ್ಪಾದನೆಗೆ ಕಾಶ್ಮೀರ-ವಿಧಿ 370 ಕಾರಣ- ಆರ್ಥಿಕ ಹಿನ್ನಡೆಗೆ ನೆಹರೂ ಕಾರಣ- ನಿರುದ್ಯೋಗ ಹೆಚ್ಚಳಕ್ಕೆ ಮೀಸಲಾತಿ ಕಾರಣ ಹೀಗೆ ಉಪಕಥೆಗಳನ್ನು ರಚಿಸುತ್ತಲೇ ಹೋಗುತ್ತಿರುವ ಸಮಾಜಕ್ಕೆ ಎಸ್ ಎಲ್ ಭೈರಪ್ಪನವರಂತಹ ಸಾಹಿತಿಗಳು ಚರಿತ್ರೆಯ ಗಾಯಗಳನ್ನು ಕೆರೆಯುವ ಮೂಲಕ ಮತ್ತಷ್ಟು ಕಾಣಿಕೆ ಸಲ್ಲಿಸುತ್ತಾರೆ. ಸರ್ದಾರ್ ಪಟೇಲ್ ಮತ್ತು ನೆಹರೂ ನಡುವೆ, ಪಟೇಲ್ ಮತ್ತು ಗಾಂಧಿ ನಡುವೆ ಗೋಡೆ ನಿರ್ಮಿಸುವ ಮೂಲಕ ಸಮಕಾಲೀನ ರಾಜಕಾರಣದ ಕೋಟೆಯನ್ನು ಭದ್ರಪಡಿಸುವ ಮೇಸ್ತ್ರಿ ಕೆಲಸವನ್ನು ಸಾಹಿತಿಯೊಬ್ಬರು ವಹಿಸಿಕೊಳ್ಳುವುದು ವಿಡಂಬನೆಯೇ ಸರಿ. ಈ ಚರ್ಚೆಗಳನ್ನು ಏಕೆ ಹುಟ್ಟುಹಾಕಲಾಗುತ್ತದೆ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.

ಸಾರ್ವಜನಿಕ ಚರ್ಚೆಗಳಲ್ಲಿ, ಅಂದರೆ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಬೌದ್ಧಿಕ ವಲಯದ ಚರ್ಚೆಗಳು ಬಿಂಬಿಸುತ್ತಿರುವ ಸಮಸ್ಯೆಗಳನ್ನು ನೋಡಿ. ಕಾಶ್ಮೀರ, ವಿಧಿ 370, ಭಯೋತ್ಪಾದಕರ ದಾಳಿಯ ಶಂಕೆ, ರೆಡ್ ಅಲರ್ಟ್, ನಗರಗಳಲ್ಲಿ ಕಟ್ಟೆಚ್ಚರ, ಮೀಸಲಾತಿಯ ಸಮಸ್ಯೆ, ತ್ರಿವಳಿ ತಲಾಖ್, ಗೋ ರಕ್ಷಣೆ, ಪಟೇಲ್ ಮತ್ತು ಗಾಂಧಿ ನಡುವಿನ ಸಂಘರ್ಷ, ನೆಹರೂ ಮತ್ತು ಪಟೇಲ್ ನಡುವಿನ ಕಲಹ ಇವೆಲ್ಲದರ ನಡುವೆ ಪೀಣ್ಯದ ಕೈಗಾರಿಕೆಗಳು ಹೇಗೆ ಕಾಣಲು ಸಾಧ್ಯ ? ಬಿಹೆಚ್ಇಎಲ್, ಬಿಇಎಂಎಲ್, ಹೆಚ್ಎಎಲ್, ಬಿಎಸ್ಎನ್ಎಲ್, ಏರ್ ಇಂಡಿಯಾ, ಭಾರತೀಯ ರೈಲ್ವೆ ಹೀಗೆ ನೆಹರೂ ಕಾಲದ ಪ್ರಮಾದಗಳನ್ನು(?) ಸರಿಪಡಿಸುವ ನಿಟ್ಟಿನಲ್ಲಿ ಈ ದೇಶದ ಆಡಳಿತ ವ್ಯವಸ್ಥೆ ದಾಪುಗಾಲು ಹಾಕುತ್ತಿದೆ.  ಕಾರ್ಮಿಕರು ಬೀದಿ ಪಾಲಾದಷ್ಟೂ ಅವರಲ್ಲಿನ ಬದುಕುವ ಛಲ ಉಲ್ಬಣಿಸಿ ಸ್ವತಃ ಉದ್ಯೋಗದಾತರಾಗುವ ಆತ್ಮವಿಶ್ವಾಸ ಮೂಡುತ್ತದೆ ಎನ್ನುವ ಕುತರ್ಕವನ್ನು ರಾಜಕೀಯ ನಾಯಕರ ಮಾತುಗಳಲ್ಲಿ ಗುರುತಿಸಬಹುದು.

ಭಾರತದ ಜನಸಾಮಾನ್ಯರ ಕೊಳ್ಳುವ ಸಾಮರ್ಥ್ಯ ಕುಸಿಯುತ್ತಿದೆ. ಆದರೆ ಆಳುವವರ ಮಾರುವ ಸಾಮರ್ಥ್ಯ ಹೆಚ್ಚಾಗುತ್ತಿದೆ. ನೀವು ಕೊಳ್ಳದಿದ್ದರೆ ಏನಂತೆ ನಿಮ್ಮನ್ನೂ ಕೊಳ್ಳುವ ಸಾಮರ್ಥ್ಯ ನಮ್ಮ ದೇಶದ ಕೋಟ್ಯಧಿಪತಿಗಳಿಗೆ ಇದೆ ಎಂದು ಪದೇ ಪದೇ ಘೋಷಿಸಲಾಗುತ್ತಿದೆ. ಹಾಗಾಗಿ ಈ ದೇಶದ ಕಾರ್ಮಿಕರು ಕೂಳಿಲ್ಲದೆ ಸತ್ತರೆ ನಷ್ಟವೇನೂ ಆಗುವುದಿಲ್ಲ. ರೈತರು ಸತ್ತಿಲ್ಲವೇ ? ಉಳಿದವರನ್ನು ಬದುಕುಳಿಸಲು ಹೊಸ ಒಡೆಯರು ಸಜ್ಜಾಗುತ್ತಿದ್ದಾರೆ. ಈ ಒಡೆಯರಿಗೆ ಅಂಬೇಡ್ಕರ್ ಪ್ರತಿಮೆ ಅದೇಕೋ ಅಪಾಯಕಾರಿಯಾಗಿ ಕಾಣುತ್ತದೆ. ಸುತ್ತಿಗೆ ಕುಡುಗೋಲಿನ ಚಿಹ್ನೆ ಭೀತಿ ಮೂಡಿಸುತ್ತದೆ. ಎಲ್ಲವೂ ತಮಗೇ ಮೀಸಲು ಎಂದು ಬೀಗುತ್ತಿರುವ ಈ ಒಡೆಯರಿಗೆ  ನೌಕರಿಯಲ್ಲಿನ ಮೀಸಲಾತಿ ಬೃಹತ್ ಸಮಸ್ಯೆಯಾಗಿ ಕಾಣುತ್ತದೆ. ಇನ್ನು ತಮ್ಮ ದಾಳಿಗೆ ಮಣಿಯದೆ ಸೆಟೆದು ನಿಲ್ಲುವವರು ನಿದ್ದೆಗೆಡಿಸುತ್ತಾರೆ. ಹಾಗಾಗಿಯೇ ಬಾಲಕ್ಕೆ ಬೆಂಕಿ ಹಚ್ಚುವ ಪಡೆ ಸಿದ್ಧವಾಗುತ್ತಿದೆ.

ತ್ರಿಪುರಾದ ಲೆನಿನ್ ತಮಿಳುನಾಡಿನ ಅಂಬೇಡ್ಕರ್ ಎರಡರ ನಡುವೆ ಸಾವಿರಾರು ಮೈಲುಗಳ ಅಂತರ ಇದೆ. ಆದರೆ ಈ ಪ್ರತಿಮೆಗಳನ್ನು ಧ್ವಂಸ ಮಾಡಿದವರ ನಡುವೆ ಒಂದು ಇಂಚಿನಷ್ಟೂ ಅಂತರವಿಲ್ಲ. ಮಸೀದಿಯ ಮೇಲೆ ಹತ್ತಿ ಕುಣಿದವರೇ ಅಂಬೇಡ್ಕರ್ ತಲೆ ಎಗರಿಸಿ ಕುಣಿದಿದ್ದಾರೆ. ಲೆನಿನ್ ಪ್ರತಿಮೆ ಉರುಳಿಸಿ ನಲಿದಿದ್ದಾರೆ. ದುರಂತ ಎಂದರೆ ಎರಡೂ ಪ್ರತಿಮೆಗಳು ಸಾಂಕೇತಿಕವಾಗಿ ಪ್ರತಿನಿಧಿಸುವ ಜನಸಮೂಹ, ಕಾರ್ಮಿಕರು ಮತ್ತು ದಲಿತರು, ವಿಧ್ವಂಸಕರೊಡನೆಯೇ ಗುರುತಿಸಿಕೊಳ್ಳುತ್ತಿದೆ. ಈಗ ಹೇಳಿ ಸಮಸ್ಯೆ ಎಲ್ಲಿದೆ ? ಪರಿಹಾರ ಎಲ್ಲಿದೆ ?  ನಮ್ಮ ಚಿಂತನೆಗಳು ಮಾತ್ರ ಸಾಲುತ್ತಿಲ್ಲ ಎನಿಸುವುದಿಲ್ಲವೇ ?