ಮಕ್ಕಳನ್ನು ನುಂಗುತ್ತಿರುವ ’ಚಮಕಿ ಜ್ವರ” ದ ಮಹಾಮಾರಿ

ಮಕ್ಕಳನ್ನು ನುಂಗುತ್ತಿರುವ ’ಚಮಕಿ ಜ್ವರ” ದ ಮಹಾಮಾರಿ

ಬಿಹಾರದಲ್ಲಿ ಇದುವರೆಗೂ 132 ಮಕ್ಕಳು ಅಕ್ಯೂಟ್ ಎನ್ಸೆಫಲೈಟಿಸ್ ಸಿಂಡ್ರೋಮ್ ರೋಗಕ್ಕೆ ಬಲಿಯಾಗಿದ್ದನ್ನು ನೆನೆದರೆ ಎದೆಯೊಡೆಯುತ್ತದೆ. ಕರುಳಕುಡಿಗಳನ್ನು ಕಳೆದುಕೊಂಡ ಹೆತ್ತವರ ನೋವು ಚಿಟಕುಮುಳ್ಳಾಡಿಸುತ್ತಿದೆ.  ’ಚಮಕಿ ಜ್ವರ’ ಎಂದು ಕರೆಯಲ್ಪಡುವ ಈ ರೋಗ ಹಲವಾರು ವರ್ಷಗಳಿಂದ ಬಿಹಾರದ ಮುಜಪ್ಪರಪುರ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಪ್ರತಿವರ್ಷ ಮಹಾಮಾರಿಯಂತೆ ಎರಗಿ ಹತ್ತು ವರ್ಷದ ಒಳಗಿನ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. 

ಮಕ್ಕಳಲ್ಲಿ ತೀವ್ರ ಜ್ವರ, ಅಂಗಾಂಗಗಳು ಸೆಟೆಯುವುದು, ಗಂಟಲನೋವು ಈ ಲಕ್ಷಣಗಳು ತೋರಿದ ತಕ್ಷಣ ಚಿಕಿತ್ಸೆ ಕೊಡಿಸದೇ ಹೋದರೆ ಇದು ಮಾರಣಾಂತಿಕವಾಗಿ ಪರಿಣಮಿಸಬಹುದಾದ ಮಾರಿಜ್ವರ. ಕೆಲವರ್ಷಗಳ ಮೊದಲು ಈ ರೋಗ ಜಲಜನ್ಯ ವೈರಸ್‍, ಫಂಗಸ್, ಕೊಳಚೆಯಲ್ಲಿ ಹುಟ್ಟುವ ಸೊಳ್ಳೆಗಳಿಂದ ಬರುತ್ತದೆ ಎಂಬ ಅನುಮಾನವಿತ್ತು. ಈಗ ಬಿಹಾರದಲಿ ಬೆಳೆಯುವ ಲೀಚಿ ಹಣ್ಣಿನಿಂದಾಗಿ ಎಂದು ಗುಲ್ಲೆದ್ದಿದೆ. ಆದರೆ ತಜ್ಞರ ಪ್ರಕಾರ ಲೀಚಿ ಹಣ್ಣೊಂದೆ ಸಾವಿಗೆ ಕಾರಣವಲ್ಲ. ಖಾಲಿ ಹೊಟ್ಟೆಯಲ್ಲಿ ಲೀಚಿಯನ್ನು ತಿಂದಾಗ ಲೀಚಿ ಹಣ್ಣಿನಲ್ಲಿರುವ ಮಿಥೆಲಿನ್ ಸೈಕ್ಲೊಪ್ರೊಫಿಲ್ ಗ್ಲೈಸಿನ್‍ನಂಥ ಟಾಕ್ಸಿನ್ ದೇಹದ ಸಕ್ಕರೆ ಪ್ರಮಾಣವನ್ನು ತಗ್ಗಿಸುವುದರಿಂದ ಸಾವು ಸಂಭವಿಸಬಹುದು. ತಕ್ಷಣ  ಗ್ಲೂಕೋಸ್ ಡ್ರಿಪ್ ಕೊಟ್ಟು ರೋಗಿಯನ್ನು  ಬದುಕಿಸಬಹುದು.

ಇಂದಿನ ಪ್ರಮುಖ ಪತ್ರಿಕೆಯೊಂದರ ವರದಿಯಂತೆ  ಯುನೈಟೆಡ್ ಸ್ಟೇಟ್ ನ ಅಟ್ಲಾಂಟಾ ಮೂಲದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು, (ಸಿಡಿಸಿ); ಹೊಸದಿಲ್ಲಿ ಮೂಲದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ವೈರಾಣುಗಳ ಮಾದರಿಗಳನ್ನು ಅಧ್ಯಯನ ಮಾಡಿದ ನಂತರ ಎಇಎಸ್‌ಗೆ ಕಾರಣವೇನು ಎಂಬುದನ್ನು ಗುರುತಿಸುವಲ್ಲಿ ವಿಫಲವಾಗಿದೆಯೆಂದು ಹೇಳಿದೆ. ಮುಖ್ಯವಾಗಿ ಇದನ್ನು ಬಿಹಾರ ಸರಕಾರದ ವೈಫಲ್ಯವೆನ್ನಬಹುದು. 

ಸಧ್ಯ ನಾವು ಗಮನ ಹರಿಸಬೇಕಾದ ಸಂಗತಿ ಏನೆಂದರೆ ಈ ಏಇಎಸ್ ರೋಗ ಕೆಲವೇ ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಯಾಕೆ ಸೀಮಿತವಾಗಿದೆ. ಅದರಲ್ಲೂ ಶೇಕಡಾ 80ರಷ್ಟು ಸಾವುಗಳು ಮುಜಪ್ಪರಪುರವೇ ಏಕಾಗಬೇಕು? ಈ ಗಂಭೀರ ಸಮಸ್ಯೆಯನ್ನು ವೈಜ್ಞಾನಿಕ ಮತ್ತು ವೈದ್ಯಕೀಯ ರೀತಿಯಲ್ಲಿ ಕೂಲಂಕಷವಾಗಿ ಶೋಧಿಸಿ, ಬೇರುಮಟ್ಟದ ತನಿಖೆ ಅಧ್ಯಯನಗಳ ಮೂಲಕ  ಬಗೆಹರಿಸಬೇಕಾಗಿದೆ. ಸಧ್ಯ ನಮ್ಮ ಮುಂದಿರುವ ವಸ್ತುನಿಷ್ಠ ಅಂಶಗಳ ಮೂಲಕ ನಾವು ಚರ್ಚಿಸಬಹುದು.

ಅಕ್ಯೂಟ್ ಎನ್ಸೆಫಲೈಟಿಸ್ ರೋಗದಿಂದ ಅಸುನೀಗಿದ ಮಕ್ಕಳು  ಉಣ್ಣಲು ತಿನ್ನಲು ಕೊರತೆಯಿರದ ಉಳ್ಳವರ ಮಕ್ಕಳಲ್ಲ.  ಶ್ರೀಮಂತರ ಮಕ್ಕಳ ನೆಗಡಿಗೂ ಅವರಿಗಾಗಿ ದೊಡ್ದ ದೊಡ್ದ  ಮಲ್ಟಿಸ್ಪೆಷಾಲಿಟಿ ಆಸ್ಪೆತ್ರೆಗಳು ಸದಾ ತೆರೆದಿರುತ್ತವೆ.  ಈ ರೋಗ ಬರುವುದಾದರೂ ಯಾರಿಗೆ ? 

ಎನ್ಸೆಫಲೈಟಿಸ್ ರೋಗ ಅಸುನೀಗಿದ ಕಂದಮ್ಮಗಳು ಬಡತನ ಮತ್ತು ಬಡತನದ ರೇಖೆಗಿಂತಲೂ ಕೆಳಸ್ತರದಲ್ಲಿ ಬದುಕುತ್ತಿರುವ ದಲಿತ ಮತ್ತು ಮಹಾದಲಿತರ ಕರುಳಕುಡಿಗಳು. ತುತ್ತು ಕೂಳಿಗೂ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಿಸಿಲು ಚಳಿಯೆನ್ನದೇ ದುಡಿವ ಬಡವರ ಮಕ್ಕಳು. ವರದಿಯಂತೆ ಎಲ್ಲ ಮಕ್ಕಳಲ್ಲಿ ಕಂಡು ಬಂದ ಸಾಮಾನ್ಯ ಅಂಶ ಪೌಷ್ಟಿಕ ಆಹಾರದ ಕೊರತೆ. ರೋಗನಿರೋಧ ಶಕ್ತಿ ಇಲ್ಲದ್ದು. ಬಾಲ್ಯದಲ್ಲಿ ಲಸಿಕೆ ಹಾಕುವ, ಪೌಷ್ಟಿಕ ಆಹಾರವನ್ನು ನೀಡುವ ನೂರಾರು ಯೋಜನೆಗಳನ್ನು ಕೇಂದ್ರ  ಸರ್ಕಾರ ಅನುಷ್ಠಾನಗೊಳಿಸಿದ್ದರೂ ಆ ಯೋಜನೆಗಳು ಭ್ರಷ್ಟರಿಂದಾಗಿ ನಾಗರಿಕರಿಗೆ ಸರಿಯಾಗಿ ತಲುಪದೆ ನಡುವೆ ಸೋರಿಹೋಗುವುದೇ ಹೆಚ್ಚು.  

ಇಂಟಿಗ್ರೇಟೆಡ್ ಚೈಲ್ಡ್ ಡೆವೆಲಪಮೆಂಟ್ ಸರ್ವಿಸಸ್ (ICDS) ಎಂಬುದು ಕಳೆದ 43 ವರ್ಷಗಳಿಂದಲೂ ಜಾರಿಯಲ್ಲಿದೆ.  ICDS) ಆಹಾರ, ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ರಕ್ಷಣೆ, ಲಸಿಕೆ ಹಾಕುವಿಕೆ ಮತ್ತು ಆರೋಗ್ಯ ತಪಾಸಣೆಗಳಂಥ ಕಾರ್ಯಗಳನ್ನು ನಿರ್ವಹಿಸುತ್ತದೆ. ಹತ್ತನೇ ಪಂಚವಾರ್ಷಿಕ ಯೋಜನೆಯಲ್ಲಿ ಅಂಗನವಾಡಿಗಳನ್ನು ಸ್ಥಾಪಿಸುವುದರ ಮೂಲಕ ಈ ಯೋಜನೆಗಳು ಕಾರ್ಯರೂಪಕ್ಕೆ ಬಂದವು. 

ಅಂದರೆ ಅಂಗನವಾಡಿಯ ಮೂಲಕ ಮಕ್ಕಳಿಗೆ ಗರ್ಭಿಣಿಯರಿಗೆ ತಲುಪಬೇಕಾಗಿದ್ದ “ಮಿಡ್ ಡೇ ಮೀಲ್” ಯೋಜನೆ ಸರಿಯಾಗಿ ಕೆಲಸಮಾಡುತ್ತಿಲ್ಲ ಅಥವಾ ತಲುಪುತ್ತಿಲ್ಲ ಎನ್ನುವುದರತ್ತ ಬೆರಳು ತೋರುತ್ತದೆ. ಅದಕ್ಕೆ ಸಂಬಂಧಿಸಿದ ಅಧಿಕಾರವರ್ಗ, ಪರಿವೀಕ್ಷಕರ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಮೂಡುತ್ತದೆ. ಪ್ರಖ್ಯಾತ ಮಕ್ಕಳ ತಜ್ಞ ಡಾ. ನಿಗಮ್ ಪ್ರಕಾಶ್ ಅವರೂ ಎಇಎಸ್ ರೋಗಕ್ಕೆ ಪೌಷ್ಟಿಕ ಆಹಾರದ ಕೊರತೆಯೇ ಮೂಲ ಕಾರಣವಿರಬೇಕೆಂದು ಅಭಿಪ್ರಾಯಪಡುತ್ತಾರೆ. ಮಧ್ಯಪ್ರದೇಶದಲ್ಲಿ ಅನೇಕ ಅಂಗನವಾಡಿಗಳಿಗೆ ಕಾಲಕಾಲಕ್ಕೆ ಅನುದಾನದ ಹಣ ಪಾವತಿಯಾಗದೇ, ಆಹಾರದ ದವಸ ಧಾನ್ಯ ಸಾಮಗ್ರಿಗಳು ತಲುಪದೇ ಮತ್ತು ಕಾರ್ಯಕರ್ತರಿಗೆ ಸಂಬಳವೂ ದಕ್ಕದೇ ಮುಚ್ಚುವ ಹಂತಕ್ಕೆ ತಲುಪಿವೆ.

ಇದೂ ಅಲ್ಲದೇ 18 ವರ್ಷಗಳ ಹಿಂದೆ ದಿವಂಗತ ಮಾಜಿ.ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು  ಜಾರಿಗೊಳಿಸಿದ ’ಅಂತ್ಯೋದಯ ಅನ್ನ ಯೋಜನೆ’ಯ ಅಡಿ ಲಕ್ಷಾಂತರ ಬಡವರಿಗೆ  ನ್ಯಾಯಬೆಲೆಗೆ ಆಹಾರ ಧಾನ್ಯಗಳನ್ನು ಒದಗಿಸುವ ಸೌಕರ್ಯವಿದೆ.  ಬಾಲವಾಡಿ ನ್ಯೂಟ್ರಿಷನ್ ಯೋಜನೆ (ICDS ಒಳಪಟ್ಟದ್ದು), ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಅಡಿ ಹಲವಾರು ಯೋಜನೆಗಳು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿಯೇ ಇವೆ.

ಇನ್ನು ನಾಲ್ಕು ಹೆಜ್ಜೆ ಮುಂದೆ ಹೋದರೆ ಆಧುನಿಕ ಭಾರತ, ನ್ಯೂ ಇಂಡಿಯಾ, ಡಿಜಿಟಲ್ ಇಂಡಿಯಾದ ಕನಸುಗಾರ “ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಮೆಡಿಕೇರ್ ಹೆಲ್ಥ್ ಯೋಜನೆ ಅಡಿ “ ಹತ್ತುಕೋಟಿ  ಬಡಕುಟುಂಬಗಳಿಗೆ ಕ್ಯಾಶಲೆಸ್ ಸೌಕರ್ಯ ಸಿಗಲಿದೆಯಂತೆ. ಆನಲೈನ್ ಹೆಸರು ನೊಂದಾಯಿಸಿಕೊಳ್ಳಲು 5 ನಿಮಿಷ ಸಾಕು. ಈ ಯೋಜನೆ  ಬಹುಶಃ ಬಡವರಲ್ಲದ ಬಡವರಿಗಾಗಿಯೇ ಇದ್ದೀತು !     

ಮುಜಫ್ಪರಪುರದಲ್ಲಿ ಶೇಕಡಾ 40ರಷ್ಟು ಜನ ಬಡತನ ರೇಖೆಗಿಂತಲೂ ಕೆಳಸ್ತರದಲ್ಲಿದ್ದರೆ ಮುಸಹರಿ, ಕಾಂಟಿ, ಮೀನಾಪುರ್ ಮತ್ತು ಮೋತಿಹಾರಿ ಪ್ರದೇಶಗಳಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಜನ ಬಡತನದ ರೇಖೆಗಿಂತ ಕೆಳಮಟ್ಟದಲ್ಲಿದ್ದಾರೆ. ಅವರೆಲ್ಲ ಯಾವ ಮೂಲಭೂತ ಸೌಕರ್ಯವಿರದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಾರೆ. ’ಸ್ವಚ್ಚ ಭಾರತ’ದ ಭಾರತ ಇನ್ನೂ ಗಲೀಜಾಗೇ ಇದೆ. ಈ ಸ್ವಚ್ಚ ಭಾರತದ ಸತ್ಯದರ್ಶನ ಮಾಡಬೇಕಿದ್ದರೆ ನೀವು ಉತ್ತರಪ್ರದೇಶದಿಂದ ಬಿಹಾರದವರೆಗೂ ಒಂದು ಸುತ್ತು ಸುತ್ತಿ ಬರಬೇಕು. 

ನೆತ್ತಿ ಸಿಡಿಯುವ 40 ಡಿಗ್ರಿ ಬೇಸಿಗೆಯ ತಾಪಮಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಇಎಸ್‍ನಂಥ ರೋಗಗಳನ್ನು ನಿಭಾಯಿಸುವ ಯಾವ ವ್ಯವಸ್ಥೆಯಿಲ್ಲದ್ದರಿಂದ ಜನ ದೂರದ ಸರಕಾರಿ ಆಸ್ಪೆತ್ರೆಗಳನ್ನು ಹುಡುಕಿ ಅಲೆಯಬೇಕಾಯ್ತು. ಸಧ್ಯ ಮಕ್ಕಳು  ಭರ್ತಿಯಾಗಿರುವ ಶ್ರೀ ಕೃಷ್ಣಾ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್‍ನ ದುಸ್ಥಿತಿ ಕಂಗೆಡಿಸುತ್ತದೆ. ಐಸಿಯೂ ಎಂಬುದು ಜನರಲ್ ವಾರ್ಡಿನಂತಾಗಿದೆ. ಆಸ್ಪೆತ್ರೆಯಿದೆ ಆದರೆ ಇರಬೇಕಾದ ಸಂಖ್ಯೆಯ ಡಾಕ್ಟರುಗಳಿಲ್ಲ !      

ಮುಜಫ್ಪರಪುರ್ ಸಹಿತ ಮುಸಹರಿ, ಕಾಂಟಿ, ಮೀನಾಪುರ್ ಮತ್ತು ಮೋತಿಹಾರಿ ಪ್ರದೇಶಗಳಲ್ಲಿಯೂ ಏಇಎಸ್‍ನ ಪ್ರಕೋಪ ಕಾಣಿಸಿಕೊಂಡಿದೆ. ಇದೇ ರೀತಿ ಸೀತಾಮಡಿಯ ರೂಣಿ ಸೈದಪುರ್, ವೈಶಾಲಿಯ ಕೆಲವು ಭಾಗ, ಸಮಸ್ತಿಪುರ ಮತ್ತು ಪೂರ್ವ ಚಂಪಾರಣದ ಲೀಚಿ ಹಣ್ಣು ಬೆಳೆಯುವ ಲೀಚಿ ಬೆಲ್ಟಿನಲ್ಲಿ ಈ ರೋಗ ಸಾವಿರಾರು ಮಕ್ಕಳನ್ನು ಬಲಿ ತೆಗೆದುಕೊಂಡಿದೆ ಎನ್ನುತ್ತದೆ ಇತಿಹಾಸ.  

ಎಇಎಸ್ ಪೀಡಿತ ಮಗುವಿನ ದೇಹದ ಗ್ಲೂಕೋಸ್ ಒಮ್ಮೆಲೆ ಕುಗ್ಗಿದಾಗ ಆರೋಗ್ಯವಂತ ಮಗುವಿನ ಶರೀರ ದೇಹದಲ್ಲಿ ಸಂಗ್ರಹಿತ ಗ್ಲುಕೋಸನ್ನು ಬಳಸಿಕೊಳ್ಳುತ್ತದೆ ಆದರೆ ಪೌಷ್ಠಿಕಾಂಶವಿರದ ಕುಪೋಷಿತ ಮಕ್ಕಳಲ್ಲಿ ಈ ಕ್ಷಮೆತೆ ಇರುವುದಿಲ್ಲ. ಆಗ ಹೊರಗಿನಿಂದ ಗ್ಲೂಕೋಸ್ ಡ್ರಿಪ್ ಕೊಟ್ಟು ಮಗುವನ್ನು ಉಳಿಸಿಕೊಳ್ಳಬಹುದು. ಇಂಥ ಹದಗೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೆ ನೆಚ್ಚಿಕೊಂಡ ಬಡವರು ಖಾಸಗಿ ಆಸ್ಪೆತ್ರೆಗಳಿಗೆ ಹೋಗಲಾಗದೇ ಹಡೆದ ಕುಡಿಗಳನ್ನು ಕಳೆದುಕೊಳ್ಳುತ್ತಿದ್ದು ನಮ್ಮ ಕಣ್ಣೆದುರಿನ ದುರಂತ.   

ಬಿಹಾರದ ಈ ಹಳ್ಳಿಪ್ರದೇಶಗಳಲ್ಲಿ ಪ್ರತಿ ವರ್ಷ ಮೇ ತಿಂಗಳಿಂದ ಜೂನ್ ತಿಂಗಳಲ್ಲಿ ಮರದಿಂದ ಹಕ್ಕಿಕುಕ್ಕಿದ ಎಳೆ ಕಾಯಿಗಳು ಉದುರುವಂತೆ ಎಳೆಮಕ್ಕಳು ಸಾಯತೊಡಗುತ್ತಾರೆ.  1995 ರಿಂದಲೂ ನಿಗೂಡವಾದ ಮಹಾಮಾರಿ ಮಕ್ಕಳನ್ನು ನುಂಗುತ್ತಲೇ ಬಂದಿದೆಯೆನ್ನುವುದಕ್ಕೆ ಪುರಾವೆಗಳಿವೆ. ಈ ಮಹಾಮಾರಿಯಿಂದ ಬಚಾವಾಗಲು ಅನೇಕ ಸುರಕ್ಷಾ ವಿಧಾನಗಳನ್ನು ಜಾಗರೂಕತಾ ಅಭಿಯಾನದ ಸ್ವಯಂಸೇವಕರು ಹೇಳಿಕೊಡುತ್ತಾರೆ. ಮಕ್ಕಳಿಗೆ ಹಾನಿಕಾರಕ ಸೂರ್ಯ ಕಿರಣಗಳು ಸೋಕದಂತೆ ಸುಡುಬಿಸಿಲಲ್ಲಿ ಆಡಲು ಬಿಡಬಾರದು, ತುಂಬು ತೋಳಿನ ಹತ್ತಿ ಬಟ್ಟೆಗಳನ್ನು ಹಾಕಬೇಕು, ಹೆಚ್ಚು ನೀರು ಕುಡಿಯಲು ಕಲಿಸಬೇಕು, ರಾತ್ರಿ ಸ್ವಲ್ಪ ಆಹಾರವನ್ನು ಉಣಿಸಿಯೇ ಮಕ್ಕಳನ್ನು ಮಲಗಿಸಬೇಕು ಇತ್ಯಾದಿ ಇತ್ಯಾದಿ. ಇದರ ಜೊತೆ ನಿಯಮಿತವಾಗಿ ORS ಪ್ಯಾಕೆಟ್ಟುಗಳನ್ನು ಹಂಚಲಾಗುತ್ತದೆ. ಇಷ್ಟೆಲ್ಲ ಜಾಗರೂಕತಾ ಅಭಿಯಾನಗಳಿದ್ದರೂ ಇವೆಲ್ಲ ವಿಫಲವಾಗಿದ್ದು ಹೇಗೆ ? ಇಂಥ ದುರಂತಗಳು ಮುಂದೆ ಸಂಭವಿಸದಂತೆ  ನೋಡಿಕೊಳ್ಳಬೇಕಾದ ಕರ್ತವ್ಯ ರಾಜ್ಯ ಸರ್ಕಾರಕ್ಕಿದೆ.

ಬಿಹಾರ ಸರಕಾರಕ್ಕೆ ಇದೇನೂ ಹೊಸ ಸಮಸ್ಯೆಯಲ್ಲ. ಪ್ರತಿವರ್ಷ ನಿರ್ಧಿಷ್ಟ ಹಳ್ಳಿಗಳಲ್ಲಿ, ನಿರ್ಧಿಷ್ಟ ಜನಸಮುದಾಯದಗಳ ವಾಸಪ್ರದೇಶಗಳಲ್ಲಿ ಮಕ್ಕಳನ್ನು ನುಂಗುವ ಈ ರೋಗದ ನಿಯಂತ್ರಣಾ ಸಿದ್ಧತೆಗಳನ್ನು ಮುಂದಾಗಿಯೇ ಕೈಗೊಳ್ಳಬಹುದಿತ್ತು. ಈ ನಿಟ್ಟಿನಲ್ಲಿ ಆಯಾ ಗ್ರಾಮದ ಪ್ರಧಾನ ಸರಪಂಚರು, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿಗಳು ತಮ್ಮ ಹೊಣೆಗಾರಿಯನ್ನು ಮರೆತು ನಿರ್ಲಕ್ಷ ತೋರಿದ್ದೂ ಅಕ್ಷಮ್ಯವೇ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರು 2014 ರಲ್ಲಿಯೂ ಈ ರೋಗಗ್ರಸ್ತ ಪ್ರದೇಶಗಳ ಪರಿವೀಕ್ಷಣೆ ಮಾಡಿದ್ದರು ಮತ್ತು ನಿನ್ನೆಯೂ ಭೇಟಿಯಿತ್ತು ಬಿಹಾರ ಜಿಲ್ಲೆಯ ಮುಜಫ್ಪರಪುರದಲ್ಲಿ ವೈರಾಲಜಿ ಪ್ರಯೋಗಾಲಯವನ್ನು ನಿರ್ಮಿಸುವ ಭರವಸೆಯ ಮಾತುಗಳನ್ನಾಡಿದರು. ಬಂದವರು ಬರುತ್ತಾರೆ ಬಡ ಜನತೆಗೆ ಅರ್ಥವಾಗದ ಮಾತುಗಳನ್ನಾಡಿ ಹೋಗುತ್ತಾರೆ. ಅನುಭವಿಸುವವರಿಗೆ ಮಾತ್ರ ಬವಣೆ ತಪ್ಪಿದ್ದಲ್ಲ.