ಹಿಂದಿ ಹೇರಿಕೆಯಿಂದ ತಾಯ್ನುಡಿಗಳ ಕಣ್ಮರೆ

ಹಿಂದಿ ಹೇರಿಕೆಯಿಂದ ತಾಯ್ನುಡಿಗಳ ಕಣ್ಮರೆ

ಬಿಜೆಪಿ ಅಧ್ಯಕ್ಷನೂ ಆಗಿರುವ ಅಮಿತ್ ಶಾ ಎಂಬ ಮೂರ್ಖ ರಾಜಕಾರಣಿ ಭಾಷೆಯ ಅಗತ್ಯ, ಅನಿವಾರ್ಯತೆ, ಇತಿಹಾಸದ ಒಂದಿಷ್ಟೂ ಅರಿವಿಲ್ಲದೇ ರಾಷ್ಟ್ರಭಾಷೆಯ ಬಗ್ಗೆ ಮಾತಾಡಿದ್ದಾರೆ. ಈ ಮನುಷ್ಯನಿಗೆ ವಿಭಿನ್ನ, ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ ಭಾರತದಂಥ ದೇಶದಲ್ಲಿ ಹೇಗಿದೆ ಎನ್ನುವುದೂ ಗೊತ್ತಿದ್ದಂತಿಲ್ಲ. ಭಾರತ ಎನ್ನುವುದು ಒಂದೇ ಭಾಷೆದು ದೇಶವಲ್ಲ. ಹಲವು ದೇಶಗಳ ಒಕ್ಕೂಟವೇ ಭಾರತ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೋ ಮೂರ್ನಾಲ್ಕು ರಾಜ್ಯಗಳ ಭಾಷೆಯನ್ನು ಇತರ ರಾಜ್ಯಗಳ ಮೇಲೆ ಹೇರುವಂತಿಲ್ಲ. ಇತರ ತಾಯ್ನುಡಿಗಳನ್ನೂ ಒಕ್ಕೂಟ ಸರ್ಕಾರ ಗೌರವಿಸಿ ಪೋಷಿಸಬೇಕು.  ತಾಯ್ನುಡಿ ಎಂದರೆ ಒಂದು ಪ್ರದೇಶದ ಜನರ ತೊದಲು ನುಡಿಗೆ ನಾಂದಿ ಹಾಡಿದ ಭಾಷೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಒಬ್ಬ ಮನುಷ್ಯನ ಮೊದಲ ನುಡಿ.  ತಾಯ್ನುಡಿಯ ಉಳಿವಿಗಾಗಿ ನಡೆದ ಹೋರಾಟಗಳ ಇತಿಹಾಸವೇ ರೋಮಾಂಚಕವಾಗಿದೆ.

1947 ರಲ್ಲಿ ಭಾರತದಿಂದ  ಪಾಕಿಸ್ತಾನ ಪ್ರತ್ಯೇಕಗೊಂಡ ನಂತರ ಬಂಗಾಳದ ಪಶ್ಚಿಮ ಭಾಗ ಭಾರತದಲ್ಲೇ ಉಳಿದರೆ ಪೂರ್ವ ಭಾಗ ಪಾಕಿಸ್ತಾನದ ಪ್ರಾಂತ್ಯವಾಗಿ ಸೇರ್ಪಡೆಗೊಂಡಿತು. ಹಾಗೆ ನೋಡಿದರೆ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದ ನಡುವೆ ಧರ್ಮವೊಂದು ಹೊರತುಪಡಿಸಿದರೆ ಆರ್ಥಿಕ, ಸಾಂಸ್ಕೃತಿಕ ಮತ್ತು ಭಾಷಿಕ ಸಾಮ್ಯತೆ ಎಳ್ಳಷ್ಟೂ ಇರಲಿಲ್ಲ. 1948 ರಲ್ಲಿ ಪಾಕಿಸ್ತಾನ ಸರ್ಕಾರ, ಉರ್ದು ಏಕೈಕ ರಾಷ್ಟ್ರೀಯ ಭಾಷೆ ಎಂದು ಘೋಷಿಸಿದ್ದನ್ನು ವಿರೋಧಿಸಿ ಪೂರ್ವ ಪಾಕಿಸ್ತಾನದಲ್ಲಿದ್ದ ಬಹುಸಂಖ್ಯಾತ ಬಂಗಾಳಿ ಭಾಷಿಕರು ಪ್ರತಿಭಟನೆಗಿಳಿದರು. ಆರಂಭದಲ್ಲಿ ಸರ್ಕಾರ ಪ್ರತಿಭಟನೆಯನ್ನು ಬಗ್ಗುಬಡಿಯಿತಾದರೂ ಆನಂತರ ಅದು ಪಡೆದ ತೀವ್ರತೆಗೆ ಅಡ್ಡಗಾಲು ಹಾಕುವುದು ಸಾಧ್ಯವಾಗಲಿಲ್ಲ. 1952 ರ ಫೆಬ್ರವರಿ 21 ರಂದು ಡಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಇತರ ಕಾರ್ಯಕರ್ತರು ಪ್ರತಿಭಟನೆಗಿಳಿದಾಗ ಪೊಲೀಸರು ಗುಂಡು ಹಾರಿಸಿದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಹುತಾತ್ಮರಾದರು. ಡಾಕಾದಲ್ಲಿ ಈ ಹುತಾತ್ಮ ವಿದ್ಯಾರ್ಥಿಗಳ ನೆನಪಿನಲ್ಲಿ ಬಂಗಾಳಿ ಭಾಷಿಕರು “ಶಹೀದ್ ಮಿನಾರ್” ಎಂಬ ಸ್ಮಾರಕ ನಿರ್ಮಿಸಿದರು.

ಆದರೆ ಪೂರ್ವ ಪಾಕಿಸ್ತಾನದಲ್ಲಿ ಆನಂತರವೂ ಹೋರಾಟದ ಕಾವು ಇಳಿಯಲಿಲ್ಲ. ತಮ್ಮ ತಾಯ್ನುಡಿಯ ಹಕ್ಕಿಗಾಗಿ ಹೋರಾಟ ಮುಂದುವರಿದ ಪರಿಣಾಮ ಪಾಕ್ ಸರ್ಕಾರ 1956 ರ ಫೆಬ್ರವರಿ 29 ರಂದು ಬಂಗಾಳಿ ಭಾಷೆಯನ್ನು ಇನ್ನೊಂದು ಅಧಿಕೃತ ಭಾಷೆಯಾಗಿ ಘೋಷಿಸಿತು. ಆನಂತರವೂ ಆರದ ಅಸಮಾಧಾನದ ಕಿಡಿ ಜ್ವಾಲೆಯಾಗಿ 1971 ರಲ್ಲಿ ಬಾಂಗ್ಲಾದೇಶ ವಿಮೋಚನಾ ಸಮರವಾಗಿ ರೂಪುಗೊಂಡಿತು. ತಾಯ್ನುಡಿಯ ಹಕ್ಕಿಗಾಗಿ ಆರಂಭವಾದ ಹೋರಾಟ ಸ್ವತಂತ್ರ ಬಾಂಗ್ಲಾದೇಶ ಉದಯಕ್ಕೆ ಕಾರಣವಾಯಿತು. ಪಾಕಿಸ್ತಾನದಿಂದ ಪ್ರತ್ಯೇಕಗೊಂಡ ಹೊಸ ದೇಶಕ್ಕೆ ಬಂಗಾಳಿ ಅಧಿಕೃತ ಭಾಷೆಯಾಯಿತು. ಈ ಹಿನ್ನೆಲೆಯಲ್ಲಿ ತಮ್ಮ ತಾಯ್ನುಡಿಯ ಹಕ್ಕಿಗಾಗಿ ಪ್ರಾಣ ತ್ಯಾಗ ಮಾಡಿದ ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ತಾಯ್ನುಡಿ ದಿನದಂದು ಸ್ಮರಿಸಲಾಗುತ್ತಿದೆ. 

ವಿಕಾಸದ ಜತೆ ವಿನಾಶವೂ ಇದೆ. ಭಾಷೆಯ ವಿಚಾರವೂ ಇದಕ್ಕಿಂತ ಭಿನ್ನವಲ್ಲ. ಲಕ್ಷಾಂತರ ವರ್ಷಗಳ ಹಿಂದೆ ಮನುಕುಲದ ಉಗಮವಾದಾಗ ಸಂಕೇತವೇ ಭಾಷೆಯಾಗಿದ್ದ ದಿನಗಳಿಂದ ವಿವಿಧ ಹಂತಗಳಲ್ಲಿ, ವಿವಿಧ ಪ್ರದೇಶಗಳಲ್ಲಿ ಮನುಷ್ಯರ ನಡುವೆ ಸಂವಹನ ಪ್ರಕ್ರಿಯೆ ವಿವಿಧ ಭಾಷೆಗಳಾಗಿ ವಿವಿಧ ರೂಪಗಳಲ್ಲಿ ವಿಕಸನಗೊಂಡ ಬಗೆಯೇ ಒಂದು ವಿಸ್ಮಯ. ಹಾಗೇ ಒಂದು ಭಾಷೆಯ ಅಭಿವೃದ್ಧಿಯ ಹಿಂದೆ ಅವನತಿಯ ನೆರಳೂ ಸಾವಿನಂತೆ ಸದ್ದುಗದ್ದಲವಿಲ್ಲದೆ ಹಿಂಬಾಲಿಸಿರುವುದಕ್ಕೂ ಆತಂಕ ಹುಟ್ಟಿಸುವ ಇತಿಹಾಸವೇ ಇದೆ.

ಹಾಗೆ ನೋಡಿದರೆ ಒಂದು ಭಾಷೆಯನ್ನು ಬಳಸುವವರು ಇರುವವರೆಗೂ ಅದಕ್ಕೆ ಸಾವಿಲ್ಲ. ಆದರೆ ಆಳುವ ಪ್ರಭುಗಳು ಮತ್ತು ಅಧಿಕಾರಷಾಹಿಗಳ ನಿರ್ಲಕ್ಷ್ಯವೂ ಯಾವುದೇ ಒಂದು ಭಾಷಿಕರನ್ನು ಸದಾ ಅತಂತ್ರ ಸ್ಥಿತಿಯಲ್ಲಿಡುತ್ತದೆ. ಆಧುನೀಕರಣ, ಜಾಗತೀಕರಣ, ಉದಾರೀಕರಣ ಎಂಬ ಒಂದಕ್ಕೊಂದು ಆಂತರಿಕ ಸಂಬಂಧ ಇರುವ ವಿವಿಧ ಕಾಲಘಟ್ಟದಲ್ಲಿ ಕಂಡು ಬಂದ ಪ್ರತಿಯೊಂದು ಮನ್ವಂತರವೂ ಅದೆಷ್ಟೋ ಭಾಷೆಗಳನ್ನು ಅವಸಾನದ ಅಂಚಿಗೆ ತಳ್ಳಿವೆ.

ಇತಿಹಾಸವನ್ನು ನೋಡಿದರೆ ಪ್ರತಿಯೊಂದು ಜನಾಂಗ, ಪ್ರದೇಶ, ಪ್ರಾಂತ್ಯ, ರಾಜ್ಯ, ದೇಶಕ್ಕೆ ಸೇರಿದ ಸಾವಿರಾರು ಭಾಷೆಗಳು ಜಗತ್ತಿನಲ್ಲಿದ್ದುದು ಅರಿವಿಗೆ ಬರುತ್ತದೆ. ಒಂದು ಅಂದಾಜಿನಂತೆ ಈಗ ಆಡು ಭಾಷೆಗಳೂ ಸೇರಿದಂತೆ ಜಗತ್ತಿನಲ್ಲಿ ಸುಮಾರು ಏಳು ಸಾವಿರ ಭಾಷೆಗಳು ಉಳಿದಿವೆ. ಪ್ಯಾಪುವಾ ನ್ಯೂಗಿನಿ ಬುಡಕಟ್ಟು ದ್ವೀಪದಲ್ಲಿ ಜಗತ್ತಿನ ಅತಿ ಹೆಚ್ಚು ಆಡು ಭಾಷೆಗಳಿವೆ. ಪ್ಯಾಪುವಾ ನ್ಯೂಗಿನಿಯಲ್ಲಿ ಹಿಂದೊಮ್ಮೆ ಸಾವಿರದ ನೂರಕ್ಕೂ ಹೆಚ್ಚಿದ್ದ ಭಾಷೆಗಳ ಸಂಖ್ಯೆ ಈಗ 850 ಕ್ಕೆ ಇಳಿದಿದೆ.

 2 ಸಾವಿರದ 13 ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಬಹು ಸಂಸ್ಕೃತಿಗಳ ಸಂಪತ್ತು ಹೊಂದಿರುವ ಭಾರತದಲ್ಲಿ ಆಡು ಭಾಷೆಗಳು ಸೇರಿದಂತೆ 780 ಭಾಷೆಗಳು ಉಳಿದಿವೆ. 86 ಭಾಷೆಗಳಲ್ಲಿ ವಿವಿಧ ಲಿಪಿಗಳನ್ನು ಬಳಸಲಾಗುತ್ತಿದೆ. 122 ಭಾಷೆಗಳನ್ನು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ವಿವಿಧ ಸಮುದಾಯಗಳು ಬಳಸುತ್ತಿದ್ದರೆ, ಉಳಿದ ಭಾಷೆಗಳನ್ನು ಹತ್ತು ಸಾವಿರಕ್ಕೂ ಕಡಿಮೆ ಜನಸಂಖ್ಯೆ ಇರುವ ಸಮುದಾಯಗಳು ಬಳಸುತ್ತಿವೆ ಕಳೆದ 50 ವರ್ಷಗಳಲ್ಲಿ 50 ಭಾಷೆಗಳು ಸಾವನ್ನಪ್ಪಿದ್ದರೆ ಮುಂದಿನ 50 ವರ್ಷಗಳಲ್ಲಿ ಇನ್ನೂ 50 ಭಾಷೆಗಳು ಮೃತಭಾಷೆಗಳ ಸಾಲಿಗೆ ಸೇರುವ ಆತಂಕ ಎದುರಿಸುತ್ತಿವೆ. ಕನ್ನಡ ಸೇರಿದಂತೆ 22 ಭಾಷೆಗಳು ಸಂವಿಧಾನದ ಅಧಿಸೂಚಿತ ಭಾಷೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕನ್ನಡ, ತಮಿಳು, ತೆಲುಗು, ಮಲಯಾಳ, ಒರಿಯಾ ಮತ್ತು ಸಂಸ್ಕೃತ ಶಾಸ್ತ್ರೀಯ ಭಾಷೆಗಳೆಂಬ ಸ್ಥಾನಮಾನ ಪಡೆದಿವೆ.

ಇಷ್ಟರ ನಡುವೆಯೂ ಭಾಷೆಗಳು ಸಾವನ್ನಪ್ಪುತ್ತಿವೆ ಎಂದರೆ ಏನರ್ಥ? ಒಂದು ಭಾಷೆಯ ಸಾವು ಎಂದರೆ ಒಂದು ಸಂಸ್ಕೃತಿಯ ಅಂತ್ಯ. ಸಾಮಾನ್ಯವಾಗಿ ಒಂದು ಭಾಷೆ ಅದು ಹುಟ್ಟಿದ ಪ್ರದೇಶದಲ್ಲೇ ಬೆಳೆಯುತ್ತದೆ. ಆದರೆ ಈ ಮಾತು ಇಂಗ್ಲಿಷ್ಗೆ ಅನ್ವಯಿಸದು. ಇಂಗ್ಲೆಂಡ್ನಿಂದ ಇಂಗ್ಲಿಷರು ಜಗತ್ತಿನ ವಿವಿಧೆಡೆಗಳಿಗೆ ವಲಸೆ ಹೋಗಿ ವಸಾಹತು ಮಾಡಿಕೊಂಡ ಕಾರಣ ಅಲ್ಲೆಲ್ಲ ಇಂಗ್ಲಿಷ್ ಹುಲುಸಾಗಿ ಬೆಳೆಯುವಂಥ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಇಂಗ್ಲಿಷ್, ಜಾಗತಿಕ ಅನಿವಾರ್ಯತೆ ಎಂಬ ನಂಬಿಕೆ ಪ್ರಬಲವಾಗಿ ಬೆಳೆದಿದೆ. ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇಂಗ್ಲಿಷ್ ಅಹಂಕಾರ ಪ್ರದರ್ಶನದ, ಮೇಲರಿಮೆಯ ಭಾಷೆಯಾಗಿ ಬಳಕೆಯಾಗುತ್ತಿರುವುದರಿಂದ ವಿವಿಧ ಪ್ರಾದೇಶಿಕ ಭಾಷೆಗಳಿಗೆ ಸೇರಿದ ಮೇಲು ಸ್ತರದ ಜನರು ಆಯಾ ಪ್ರದೇಶದ ಭಾಷೆ ಬಳಕೆಯಿಂದ ವಿಮುಖರಾಗುತ್ತಿದ್ದಾರೆ. ಭಾರತದಂಥ ದೇಶದಲ್ಲಿ ಇಂಗ್ಲಿಷ್ ಜತೆ ಹಿಂದಿಯೂ ಪ್ರಾದೇಶಿಕ ಭಾಷೆಗಳಿಗೆ ಮುಳುವಾಗಿದೆ. ಹಿಂದಿಯನ್ನು ಏಕತೆಯ ಭಾಷೆ ಎಂದು ಬಿಂಬಿಸಿ ಇತರ ಭಾಷಿಕರ ಮೇಲೆ ಹೇರುತ್ತಿರುವುದರಿಂದಲೂ ಪ್ರಾದೇಶಿಕ ಭಾಷೆಗಳು ಗಂಡಾಂತರ ಎದುರಿಸುತ್ತಿವೆ. ದೇಶದ  29 ರಾಜ್ಯಗಳಲ್ಲಿ ಕೇವಲ 10 ರಾಜ್ಯಗಳು ಮಾತ್ರ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಹೊಂದಿವೆ. ಶೇಕಡಾ 60 ರಷ್ಟು ಮಂದಿ ಹಿಂದಿ ಹೊರತುಪಡಿಸಿ ಇತರ ಭಾಷೆಗಳನ್ನು ಬಳಸುತ್ತಿದ್ದಾರೆ. ಭಾರತದ ಒಂದೊಂದು ರಾಜ್ಯವೂ ವಿಭಿನ್ನ ಭಾಷೆ, ಸಂಸ್ಕೃತಿ ಹೊಂದಿದ್ದರೂ ಅವುಗಳನ್ನು ಪೋಷಿಸಿ ಬೆಳೆಸುವ ಬದಲು ರಾಷ್ಟ್ರೀಯತೆಯ ನೆಪದಲ್ಲಿ ಸ್ಥಳೀಯ ಭಾಷೆಗಳನ್ನು ವಂಚಿಸಲಾಗುತ್ತಿದೆ.

1962 ರಲ್ಲಿ ಚೀನಾ ವಿರುದ್ಧದ ಸಮರದಲ್ಲಿ ಭಾರತ ಹೀನಾಯ ಸೋಲನುಭವಿಸಿದ ನಂತರ ದೇಶದ ಈಶಾನ್ಯ ಭಾಗದಲ್ಲಿ ಕಂಡು ಬಂದ ಬಂಡಾಯ ಹತ್ತಿಕ್ಕುವ ಸಲುವಾಗಿ “ಭಾರತೀಯಕರಣ”ದ ನೆಪದಲ್ಲಿ ಕೇಂದ್ರ ಸರ್ಕಾರ ಅರುಣಾಚಲ ಪ್ರದೇಶಕ್ಕೆ ಹಿಂದಿ ಭಾಷಿಕರು ಮತ್ತು ಅಧ್ಯಾಪಕರನ್ನು  ಕಳಿಸಿ ಹಿಂದಿ ಭಾಷೆಗೆ ಒತ್ತು ನೀಡಿದ ಫಲವಾಗಿ ಅಲ್ಲಿನ ಎಷ್ಟೋ ಬುಡಕಟ್ಟು ಭಾಷೆಗಳು ಅವನತಿ ಕಂಡವು. ಇತ್ತೀಚಿನ ವರ್ಷಗಳಲ್ಲಿ ನೂತನ ರಾಜ್ಯವಾಗಿ ಉದಯವಾದ ಉತ್ತರಾಖಂಡದಲ್ಲಿ ಅಳಿವಿನಂಚಿನಲ್ಲಿರುವ ಬಹುಸಂಖ್ಯಾತರ ಕುಮೌನಿ ಆಡು ಭಾಷೆಯನ್ನು ಕಾಪಾಡುವ ಬದಲು ಅಲ್ಲಿನ ಸರ್ಕಾರ ಸಂಸ್ಕೃತವನ್ನು ಎರಡನೇ ಅಧಿಕೃತ ಭಾಷೆಯಾಗಿಸಿ ದೇಶದಲ್ಲಿ ಸಂಸ್ಕೃತವನ್ನು ಅಧಿಕೃತ ಭಾಷೆಯಾಗಿ ಹೊಂದಿದ ಏಕೈಕ ರಾಜ್ಯ ಎನಿಸಿಕೊಂಡಿದೆ. ಅಲ್ಲಿನ ಮೊದಲ ಅಧಿಕೃತ ಭಾಷೆ ಹಿಂದಿ. ಕುಮೌನಿ ಮಾತನಾಡುವವರೆಲ್ಲ ಹಿಂದಿ ಅರ್ಥ ಮಾಡಿಕೊಳ್ಳುತ್ತಾರೆಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳುತ್ತದೆ. 

ಸ್ವಾತಂತ್ರ್ಯ ಪೂರ್ವಕ್ಕೆ ಹೋಗುವುದಾದರೆ ಭಾರತೀಯ ಭಾಷೆಗಳ ಅವನತಿಗೆ ಇಂಗ್ಲಿಷರೂ ಒಂದಷ್ಟು ಕೊಡುಗೆ ನೀಡಿದ್ದಾರೆ. 1871 ರಲ್ಲಿ ಇಂಗ್ಲಿಷರು ಭಾರತದಲ್ಲಿ ಜಾರಿಗೆ ತಂದ ಕ್ರಿಮಿನಲ್ ಟ್ರೈಬ್ಸ್ ಆ್ಯಕ್ಟ್ನಿಂದ ಬಹುತೇಕ ಭಾರತೀಯ ಅಲೆಮಾರಿ ಜನಾಂಗಗಳ  ಸಂಸ್ಕೃತಿ, ಭಾಷೆ ಕಣ್ಮರೆಯಾಗಿದೆ. ಈ ಕಾಯ್ದೆಯ ಪ್ರಕಾರ ಅಲೆಮಾರಿಗಳು ಹುಟ್ಟಿನಿಂದ ಅಪರಾಧಿಗಳೇ ಹೊರತು ಕ್ರಿಯೆಯಿಂದಲ್ಲ. ಇದರ ಫಲವಾಗಿ ಅದೆಷ್ಟೋ ಅಲೆಮಾರಿ ಜನಾಂಗಗಳು ತಮ್ಮನ್ನು ಅಪರಾಧಿಗಳೆಂದು ಗುರುತಿಸುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ  ತಮ್ಮ ಸಂಸ್ಕೃತಿಯಿಂದ ದೂರ ಸರಿದು ಗುರುತನ್ನೇ ಮರೆಮಾಚಿ ತಾಯ್ನುಡಿಯನ್ನೇ ತ್ಯಜಿಸಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1952 ರಲ್ಲಿ ಈ ಕಾಯ್ದೆ ರದ್ದುಪಡಿಸಿದರೂ ಕಾಲ ಮಿಂಚಿ ಹೋಗಿತ್ತು. ಇವು ಕೇವಲ ಕೆಲವು ಉದಾಹರಣೆಗಳಷ್ಟೇ.

ಬದುಕಿನ ಪ್ರಶ್ನೆಯೂ ಭಾಷೆಯ ಉಳಿವು, ಬೆಳೆವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ಒಂದು ಜೀವನಾಧಾರದಿಂದ ಇನ್ನೊಂದು ಜೀವನಾಧಾರಕ್ಕಾಗಿ ವಲಸೆ ಹೋಗುವವರಿಂದಲೂ ಆ ಪ್ರದೇಶದ ಭಾಷೆಯ ಬಳಕೆ ಕಡಿಮೆಯಾಗುತ್ತಾ ಹೋಗುವುದಕ್ಕೆ ಕಾರಣವಾಗುತ್ತದೆ. ಒಂದು ನಿರ್ದಿಷ್ಟ ಭಾಷೆಯ ಪ್ರದೇಶದಿಂದ ಇನ್ನೊಂದು ಭಾಷೆಯ ಪ್ರದೇಶಕ್ಕೆ ಹೊಟ್ಟೆಪಾಡಿಗಾಗಿ ವಲಸೆ ಹೋಗುವವರು ಒಂದೆರಡು ತಲೆಮಾರುಗಳ ನಂತರ ಅಲ್ಲಿನ ಭಾಷಿಕರಾಗಿ ತಾಯ್ನುಡಿಯನ್ನು ಅನಿವಾರ್ಯವಾಗಿ ಮರೆಯುವುದನ್ನು ನೋಡಿದ್ದೇವೆ. ಇಂಗ್ಲಿಷ್ ಕೇವಲ ಉಳ್ಳವರ ಭಾಷೆಯಾಗಿರುವುದರಿಂದ ಶ್ರಮಿಕರಷ್ಟೇ ತಾಯ್ನುಡಿಯನ್ನು ಅನಿವಾರ್ಯವಾಗಿ ಅಪ್ಪಿಕೊಂಡಿದ್ದಾರೆ. ಹೀಗಾಗಿ ಇಂಥವರ ಜೀವನಾಧಾರ ಕಾಪಾಡಿದರೆ ಮಾತ್ರ ಆ ಭಾಷೆ ಉಳಿಯುವುದು ಸಾಧ್ಯ. ಜೀವನಾಧಾರ ಆಯ್ಕೆಗಳು ಕಾಣೆಯಾದಂತೆ ಭಾಷೆಯೂ ಕಣ್ಮರೆಯಾಗುತ್ತದೆ ಎಂದು  ಭಾಷಾ ತಜ್ಞರು ಹೇಳುತ್ತಾರೆ. 

ಹಾಗೆಂದು ಭಾಷೆಗಳ ಕಣ್ಮರೆಗೆ ಇವಿಷ್ಟೇ ಕಾರಣಗಳೆಂದು ಹೇಳಲಾಗದು. ಒಂದಲ್ಲ ಒಂದು ಯುಗದಲ್ಲಿ ಮಹತ್ವದ ಭಾಷೆಗಳಾಗಿದ್ದ ಲ್ಯಾಟಿನ್, ಹೀಬ್ರೂ, ಪುರಾತನ ಗ್ರೀಕ್, ಪುರಾತನ ಈಜಿಪ್ಟ್, ಸಂಸ್ಕೃತ ಸೇರಿದಂತೆ ಸುಮಾರು 10 ಭಾಷೆಗಳನ್ನು ಜಾಗತಿಕವಾಗಿ ಮೃತ ಭಾಷೆಗಳೆಂದು ಪರಿಗಣಿಸಲಾಗಿವೆ. ಈ ಹಿನ್ನೆಲೆಯಲ್ಲಿ ಸಂಸ್ಕೃತ ಸೇರಿದಂತೆ ಇಂಥ ಕೆಲವು ಭಾಷೆಗಳಿಗೆ ಪುನಶ್ಚೇತನ ನೀಡುವ ಕಾರ್ಯ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿವೆ. ಆದರೆ ಒಂದು ಭಾಷೆ ಅತಿ ಕಡಿಮೆಯಾಗಿ ಬಳಕೆಯಾಗುತ್ತಿದೆ ಎಂಬ ಕಾರಣದಿಂದ ಸಾವನ್ನಪ್ಪುತ್ತಿದೆ ಎಂದೂ ಹೇಳಲಾಗದು ಎಂಬ ಅಭಿಪ್ರಾಯವನ್ನೂ ಭಾಷಾ ತಜ್ಞರು ವ್ಯಕ್ತಪಡಿಸುತ್ತಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬಳಕೆಯಲ್ಲಿರುವ ಒಂದು ಸೀಮಿತ ವ್ಯಾಪ್ತಿಯ ಭೋಜ್ಪುರಿ, ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಒಂದು ರಾಜ್ಯದ ಭಾಷೆಯಾಗಿ ಸ್ಥಾನ ಪಡೆಯಲಿಲ್ಲ ನಿಜ. ಈ ಒಂದು ಪುಟ್ಟ ಭಾಷೆ ತನ್ನದೇ ಆದ ಚಲನಚಿತ್ರ, ನಾಟಕ ಸೇರಿದಂತೆ ಸಮೃದ್ಧ ಸಂಸ್ಕೃತಿ ಹೊಂದಿದ್ದು ಅದು ವ್ಯಾಪಕವಾಗಿ ಬೆಳೆಯುತ್ತಿರುವ ರೀತಿ ಒಂದು ಸುಂದರ ಕಾವ್ಯದಂತಿದೆ. ನೇಪಾಳ, ಫಿಜಿ, ಸುರಿನಾಮ್, ಟ್ರಿನಿಡಾಡ್, ಟೊಬ್ಯಾಗೊ, ಮಾರಿಷಸ್ ದೇಶಗಳಿಗೆ ವಲಸೆ ಹೋದ ಭೋಜ್ಪುರಿ ಭಾಷಿಕರು ತಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಪೋಷಿಸಿದ್ದಾರೆ. ಜೀವನಾಧಾರಕ್ಕಾಗಿ ವಲಸೆ ಹೋದವರಿಂದ ಎಷ್ಟೋ ಭಾಷೆಗಳನ್ನು ಬಳಸುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವಾದಕ್ಕೆ ಭೋಜ್ಪುರಿ ಅಪವಾದವಾಗಿದೆ. 

ಕರ್ನಾಟಕವನ್ನೇ ನೋಡಿ. ಕನ್ನಡವೇ ಈ ನೆಲದ ಭಾಷೆಯಾಗಿದ್ದರೂ ಅದು ಆಗಿಂದಾಗ್ಗೆ ಆತಂಕ ಎದುರಿಸುತ್ತಲೇ ಬಂದಿದೆ. ಎಂಬತ್ತರ ದಶಕದ ಆರಂಭದಲ್ಲಿ ಅಂದಿನ ರಾಜ್ಯ ಸರ್ಕಾರ ಶಾಲಾ ಶಿಕ್ಷಣದಲ್ಲಿ ಸಂಸ್ಕೃತಕ್ಕೆ ಮೊದಲ ಭಾಷೆಯ ಸ್ಥಾನ ನೀಡಿದ ಪರಿಣಾಮ ಆರಂಭವಾದ ಗೋಕಾಕ್ ಚಳವಳಿ, ತಾಯ್ನುಡಿ ಚಳವಳಿಗಳ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ. ಕನ್ನಡ ನಾಡಿನ ವಿವಿಧ ಪ್ರದೇಶಗಳಲ್ಲಿ ಕೆಲವು ಸಮುದಾಯಗಳು ತಮ್ಮದೇ ಆದ ಭಾಷೆಯನ್ನು ಬಳಸುತ್ತಿವೆ.ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ತುಳು, ಕೊಂಕಣಿ,  ಕೊಡಗಿನಲ್ಲಿ ಕೊಡವ, ಕೊಡಗು ಮತ್ತು ದಕ್ಷಿಣ ಕನ್ನಡ ಗಡಿ ಪ್ರದೇಶಗಳಲ್ಲಿ ಅರೆಭಾಷೆ, ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ಯಾರಿ ಭಾಷೆಗಳನ್ನು ಬಳಸಲಾಗುತ್ತಿದೆ. ಸ್ಥಳೀಯ ಭಾಷೆಗಳ ಉಳಿವು ಬೆಳವಿನ ಉದ್ದೇಶದಿಂದಲೇ ಕರ್ನಾಟಕ ಸರ್ಕಾರ ಕೊಡವ, ಅರೆಭಾಷೆ, ತುಳು, ಕೊಂಕಣಿ, ಬ್ಯಾರಿ ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸುತ್ತಿದೆ. ಭೋಜ್ಪುರಿಯಷ್ಟು ಅಲ್ಲದಿದ್ದರೂ ಅದೇ ರೀತಿಯಲ್ಲಿ ಬ್ಯಾರಿ ಭಾಷೆ ತನ್ನದೇ ಸಂಸ್ಕೃತಿ ರೂಪಿಸಿಕೊಂಡು ಬೆಳೆಯುತ್ತಿದೆ.

ಉರ್ದು ಭಾರತೀಯ ಭಾಷೆಯಾಗಿದ್ದರೂ, ಸಾಂಸ್ಕೃತಿಕವಾಗಿ ಭವ್ಯ ಇತಿಹಾಸವಿದ್ದರೂ, ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಉರ್ದು ಭಾಷಿಕರಿದ್ದರೂ ಅದು ಕೇವಲ ಮುಸ್ಲಿಮರ ಭಾಷೆಯೆಂಬ ತಾತ್ಸಾರ ಇತರರಲ್ಲಿದೆ. ಉರ್ದು ಹೊರತುಪಡಿಸಿ ಭಾರತದ ಇತರ ಯಾವುದೇ ಭಾಷೆ ಎಲ್ಲ ರಾಜ್ಯಗಳಲ್ಲಿ ತನ್ನ ಭಾಷಿಕರನ್ನು ಹೊಂದಿಲ್ಲ. 1950 ರಲ್ಲಿ ಕೇಂದ್ರ ಸರ್ಕಾರ ಹಿಂದಿಯನ್ನು ಅಧಿಕೃತ ಭಾಷೆ ಎಂದು ಘೋಷಿಸಿದ ಆಳುವವರ ಮನೋಸ್ಥಿತಿಯಿಂದಾಗಿ ಉತ್ತರದ ಕೆಲವು ರಾಜ್ಯಗಳಲ್ಲಿ ಹಿಂದಿಯೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯತೆಯನ್ನು ಉರ್ದು ಎದುರಿಸಬೇಕಾಯಿತು. ಇದರ ಜತೆಯಲ್ಲೇ ಹಿಂದೂ ರಾಷ್ಟ್ರೀಯತೆ ಎಂಬ ಹೋರಾಟವೂ ಉರ್ದು ಭಾಷೆ ಇನ್ನಷ್ಟು ಬೆಳೆಯುವುದಕ್ಕೆ ಅಡ್ಡಗಾಲಾಯಿತು.  ನೀವು ನಂಬತ್ತೀರೋ ಬಿಡುತ್ತೀರೋ ಭಾರತದ ಮೊದಲ ಪ್ರಧಾನಮಂತ್ರಿ ಜವ್ಹರ್ಲಾಲ್ ನೆಹರೂ ಅವರ ತಾಯ್ನುಡಿ ಉರ್ದು(ಕೆಲವರು ಅವರ ತಾಯ್ನುಡಿ ಹಿಂದೂಸ್ಥಾನಿ ಎಂದು ವಾದಿಸುತ್ತಾರೆ). ಪರ್ಷಿಯನೀಕರಣಗೊಂಡ ಕಾಶ್ಮೀರಿ ಪಂಡಿತರ ಕುಟುಂಬದಲ್ಲಿ ಹುಟ್ಟಿದ ನೆಹರೂ ಕುಟುಂಬದ ತಾಯ್ನುಡಿ ಉರ್ದು ಎಂದು ಶಂಖರ್ ಘೋಷ್ ಅವರ “ಜವ್ಹರ್ಲಾಲ್ ನೆಹರೂ” ಎಂಬ ಜೀವನಚರಿತ್ರೆಯಲ್ಲಿ ಈ ಕುರಿತ ಉಲ್ಲೇಖ ಇದೆ. 

ಭಾರತದಲ್ಲಿ ಉರ್ದು ಪರಿಸ್ಥಿತಿ ಹೀಗಿದ್ದರೆ, ದೇಶದ ವಿಭಜನೆ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ಉರ್ದು ಅಲ್ಲಿನ ರಾಷ್ಟ್ರೀಯ ಭಾಷೆಯಾಯಿತು. ಇಂಗ್ಲಿಷ್ ಅಲ್ಲಿನ ಅಧಿಕೃತ ಭಾಷೆ. ಆದರೆ ಅಲ್ಲಿ ಉರ್ದು ಭಾಷೆಯಿಂದ ಇತರ ಭಾಷೆಗಳಿಗೆ ಭಾರೀ ಅನ್ಯಾಯವಾಗಿದೆ. ಪಾಕಿಸ್ತಾನದಲ್ಲಿ ಪಂಜಾಬಿ ಭಾಷಿಕರು ಶೇಕಡಾ 44, ಪಾಶ್ತೋ ಭಾಷಿಕರು ಶೇಕಡಾ 15. ಸಿಂಧಿ ಭಾಷಿಕರು ಶೇಕಡಾ 14 ಮತ್ತು ಸರೈಕಿ ಭಾಷಿಕರ ಸಂಖ್ಯೆ ಶೇಕಡಾ 10 ರಷ್ಟಿದ್ದರೂ, ಕೇವಲ ಶೇಕಡಾ 8 ರಷ್ಟು ಜನರ ಮಾತೃ ಭಾಷೆಯಾಗಿರುವ ಉರ್ದು ಅಲ್ಲಿನ ರಾಷ್ಟ್ರ ಭಾಷೆ. ಪಾಕಿಸ್ತಾನದಲ್ಲಿ ಆಳುವ ಕುಟುಂಬಗಳ ಭಾಷೆ ಉರ್ದುವಾಗಿರುವುದೇ ಈ ತಾರತಮ್ಯಕ್ಕೆ ಕಾರಣ. ಭಾರತದಲ್ಲಿ ಹಿಂದಿಯಿಂದ ಇತರ ಭಾಷೆಗಳಿಗೆ ಆಗಿರುವ ಅನ್ಯಾಯದಂತೆ ಪಾಕಿಸ್ತಾನದಲ್ಲಿ ಉರ್ದು ಸವಾರಿ ನಡೆಯುತ್ತಿದೆ.  

ಹಾಗೇ ಇನ್ನೊಂದು ವಿಚಿತ್ರ ಗಮನಿಸಿ. ಜಗತ್ತಿನಲ್ಲಿ ಇಂಗ್ಲಿಷ್ ಪ್ರಭಾವಿ ಭಾಷೆಯಾಗಿ ಬೆಳೆದಿದ್ದರೂ ಅತಿ ಹೆಚ್ಚು ಜನರು ಬಳಸುವ ಸಾಮಾನ್ಯ ಭಾಷೆಯ ಪಟ್ಟಿಯಲ್ಲಿ ಚೀನಾದ ಮ್ಯಾಂಡರಿನ್ ಅಗ್ರಸ್ಥಾನ ಪಡೆದಿದೆ. ಇಂಗ್ಲಿಷ್ಗೆ ಆನಂತರದ ಸ್ಥಾನವಷ್ಟೇ ದೊರೆತಿದೆ. 

ಜಗತ್ತಿನ ವಿವಿಧ ಭಾಷೆಗಳಿಗೆ ಇಂಗ್ಲಿಷ್ ಮಾರಕವಾಗಿದೆ ಎಂಬ ವಾದಗಳ ನಡುವೆಯೇ ಇಂಗ್ಲಿಷ್ನ ತವರಾದ ಯುನೈಟೆಡ್ ಕಿಂಗ್ಡಮ್ ಇನ್ನೊಂದು ರೀತಿಯ ಸಮಸ್ಯೆ ಎದುರಿಸುತ್ತಿದೆ ಎಂದು ಭಾಷಾ ತಜ್ಞ ಡೇವಿಡ್ ಗ್ರಾಡಾಲ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲಿಷ್ ಮಾತೃ ಭಾಷೆಯಾಗಿರುವ ಬಹುತೇಕ ಇಂಗ್ಲಿಷರಿಗೆ ಇನ್ನೊಂದು ಭಾಷೆಯ ಜ್ಞಾನ ಎಳ್ಳಷ್ಟೂ ಇಲ್ಲ. ಆದರೆ ಜಗತ್ತಿನ ವಿವಿಧ ದೇಶಗಳಲ್ಲಿ ಇಂಗ್ಲಿಷ್ ಕಲಿತಿರುವ ಜನರಿಗೆ ಕನಿಷ್ಠ ಇನ್ನೊಂದು ಭಾಷೆಯ ಸಂಪೂರ್ಣ ಅರಿವಿರುವುದರಲ್ಲೇ ಈ ಸಮಸ್ಯೆಯ ಮೂಲ ಅಡಗಿದೆ. ಆಧುನಿಕ ದಿನಗಳಲ್ಲಿ ಜಾಗತಿಕವಾಗಿ ಸಮಬಲದ ಸ್ಪರ್ಧೆ ನೀಡಬೇಕಾದರೆ ಕನಿಷ್ಠ ಇನ್ನೊಂದು ಭಾಷೆಯ ನೈಪುಣ್ಯತೆಯೂ ಬೇಕಾಗುತ್ತದೆ ಎಂದು ಗ್ರಾಡಾಲ್ ಹೇಳುತ್ತಾರೆ. ಹೀಗಾಗಿ ಇಂಗ್ಲಿಷ್ ತಾಯ್ನುಡಿಯ ಜನರು ತಮ್ಮ ಮಕ್ಕಳಿಗೆ ಭವಿಷ್ಯದ ಭಾಷೆಗಳಾದ ಸ್ಪಾನಿಷ್, ಮ್ಯಾಂಡರಿನ್ ಮತ್ತು ಅರಾಬಿಕ್ನಂಥ ಭಾಷೆಗಳನ್ನು ಕಲಿಸಿಕೊಡಬೇಕು ಎಂದು ಅವರು ಸಲಹೆ ನೀಡುತ್ತಾರೆ.

ತಾಯ್ನುಡಿ ಎಂದರೆ ಅದು ನಮ್ಮ ಸಂಸ್ಕೃತಿಯ ಹೆಗ್ಗುರುತು. ನಮ್ಮ ಭಾವನೆ, ನಮ್ಮ ಜ್ಞಾನ, ಸಂಪ್ರದಾಯ ಮತ್ತು ಸ್ಥಳೀಯ ಇತಿಹಾಸವನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಕೊಂಡೊಯ್ಯವ ಒಂದು ಪರಂಪರೆ. ಇಡೀ ಜಗತ್ತೇ ಒಂದು ಗ್ರಾಮವಾಗಿ ತ್ವರಿತಗತಿಯಲ್ಲಿ ರೂಪುಗೊಳ್ಳುತ್ತಿರುವ ಈ ದಿನಗಳಲ್ಲಿ ಭಾಷೆಗಳ ಕಣ್ಮರೆ, ಅದಕ್ಕೆ ಸಂಬಂಧಿಸಿದ ಸಂಸ್ಕೃತಿಯ ಅವನತಿ ಸಹಜವೇ ಇರಬಹುದು. ಆದರೂ ಪ್ರತಿಯೊಬ್ಬರೂ ತಮ್ಮ ತಾಯ್ನುಡಿಯನ್ನು ಉಳಿಸುವ ಜವಾಬ್ದಾರಿ ಹೊರಲೇಬೇಕಿದೆ. ಅದು ಇಂದಿನ ತುರ್ತು ಅನಿವಾರ್ಯ.