ದಕ್ಷಿಣ ಆಫ್ರಿಕಾ ಸೋಲಿಗೆ : ಹೀಗೊಂದು ವ್ಯಾಖ್ಯಾನ

ದಕ್ಷಿಣ ಆಫ್ರಿಕಾ ಮೊನ್ನೆ ಮೂರೂ ಟೆಸ್ಟ್ ಗಳನ್ನು ಬೃಹತ್ ಅಂತರದಲ್ಲಿ ಸೋತಿದ್ದಕ್ಕೆ ಕಾರಣ ಅವರು ಚೋಕ್ ಆಗಿದಕ್ಕಲ್ಲ, ಪ್ಯಾನಿಕ್ ಆಗಿದ್ದಕ್ಕೆ. ಚೋಕರ್ಸ್ ಎಂದು ಆ ತಂಡಕ್ಕೆ ಹೆಸರು ಬಂದಿರುವುದು ಬೇರೆ ಸಂದರ್ಭದಲ್ಲಿ ಸರಿ ಇರಬಹುದೇನೋ, ಆದರೆ ಇತ್ತೀಚಿನ ಸರಣಿಯಲ್ಲಿ ಅನಾವರಣಗೊಂಡಿದ್ದು ಅವರ ಚೋಕಿಂಗ್ ಪ್ರವೃತ್ತಿಯಲ್ಲ, ಅವರ ಭಯ ಮತ್ತು ದಿಗ್ಭ್ರಮೆ

ದಕ್ಷಿಣ ಆಫ್ರಿಕಾ ಸೋಲಿಗೆ : ಹೀಗೊಂದು ವ್ಯಾಖ್ಯಾನ

ಒಮ್ಮೆ ಬೆಂಗಳೂರಿನ ಪತ್ರಕರ್ತರ ಎರಡು ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಮ್ಯಾಚ್ ನೋಡಲು ಬಂದಿದ್ದ ಹಿರಿಯ ಪತ್ರಕರ್ತರೊಬ್ಬರು ನಮ್ಮ ನಡುವೆ ಇದ್ದ ಕ್ರೀಡಾ ಪತ್ರಕರ್ತರೊಂದಿಬ್ಬರನ್ನು ಉದ್ದೇಶಿಸಿ "ಯೋ, ಏನ್ರಯ್ಯಾ, ಊರೋರ್ ಬಗ್ಗೆ ಎಲ್ಲಾನು ಬರೀತೀರಿ, ನಮ್ ಹುಡ್ಗನ್ ಬಗ್ಗೆನೂ ಬರೀರಯ್ಯಾ" ಅಂತ ಕ್ರೀಡಾಪಟು ಮಗನ ಪರವಾಗಿ ಆಗ್ರಹಪೂರ್ವಕವಾಗಿ ಹೇಳಿದರು. "ರೀ, ಗೆದ್ದೋರ್ ಬಗ್ಗೆ ಬರೀತೀವಿ, ನಿಮ್ ಹುಡ್ಗ ಸೋತಿದ್ದನ್ನ ಬರ್ಯೋದಕ್ಕೆ ಹೇಳ್ತೀರಲ್ರಿ" ಅಂತ ಕುಚೋದ್ಯ ಮಾಡಿದ್ದರು.

ಹೌದು, ಗೆದ್ದವರ ಬಗ್ಗೆ ಬರೆಯುವಷ್ಟು ಸೋತವರ ಬಗ್ಗೆ ಬರೆಯುವುದಿಲ್ಲ. ಅದು ಯುದ್ಧವಾದರೂ ಅಷ್ಟೆ, ರಣೋತ್ಸಾಹದಲ್ಲಿ ಸ್ಪರ್ಧಿಸುವ ಕ್ರೀಡೆಯಲ್ಲಾದರೂ ಅಷ್ಟೆ. ಕಳೆದ ವಾರ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಪ್ರಥಮವಾಗಿ ಏಕಪಕ್ಷೀಯವಾಗಿ ಸರಣಿ ಜಯ ಸಾಧಿಸಿದ ಭಾರತದ ಬಗ್ಗೆ ಸಾಂಗೋಪಾಂಗವಾಗಿ ಬರೆವಾಗ ಪರಾಜಿತ ತಂಡ ಕುರಿತು ಕೂಲಂಕಷವಾಗಿ ವಿಶ್ಲೇಷಣೆ ಮಾಡದಿದ್ದುದಕ್ಕೆ ಲೇಖನ ಅತಿ ಉದ್ದವಾಗಬಾರದೆಂಬ ಕಾಳಜಿ ಕಾರಣವಾಗಿತ್ತು. ಆದರೆ ಬರೆಯುವುದಕ್ಕೆ ಸಾಮಗ್ರಿ ವಿಪುಲವಾಗಿದೆ.

ವರ್ಣಭೇದನೀತಿಯ ಕಾರಣದಿಂದ ಅಂತರ ರಾಷ್ಟ್ರೀಯ ಕ್ರಿಕೆಟ್ ನಿಂದ ಬಹಿಷ್ಕೃತಗೊಳ್ಳುವ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರಬಲ ತಂಡವೆಂದು ಹೆಸರುವಾಸಿಯಾಗಿತ್ತು. ಹತ್ತೊಂಭತ್ತನೆಯ ಶತಮಾನದ ಕೊನೆಯ ಅವಧಿಯಲ್ಲಿ ಅಂತರ ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ ಸತತವಾಗಿ ಸೋಲನ್ನು ಅನುಭವಿಸಿತು, ಆದರೆ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಕ್ರಮೇಣ ಪ್ರಾಬಲ್ಯ ಗಳಿಸಿತು. ಆ ಅವಧಿಯಲ್ಲಿ ಬ್ಯಾಟಿಂಗ್ ಬಲಿಷ್ಠನೆಂದು ಹೆಸರುಗಳಿಸಿದ ಜಿಮ್ಮಿ ಸಿಂಕ್ಲೇರ್ ಟೆಸ್ಟ್ ಗಳಲ್ಲಿ ಅದ್ವಿತೀಯ ಸ್ಟ್ರೈಕ್ ರೇಟ್ ಗಳಿಸಿದರು. ಅದೇ ಅವಧಿಯಲ್ಲಿ ಪ್ರಚಲಿತಕ್ಕೆ ಬಂದ ರೆಗ್ಗಿ ಶ್ವಾರ್ಜ್ ಗೂಗ್ಲಿಯ ಹರಿಕಾರನೆಂದು ಹೆಸರು ಪಡೆದರು. ತನ್ನ ತಂಡದ ಇತರೇ ಸದಸ್ಯರಾದ ಫಾಕ್ನರ್ (ಆಲ್ರೌಂಡರ್), ವೋಗ್ಲರ್ (ಮಧ್ಯಮವೇಗಿ) ಮತ್ತು ವೈಟ್ (ಬ್ಯಾಟ್ಸ್ ಮ್ಯಾನ್) ಗೆ ಗೂಗ್ಲಿ ಹೇಗೆ ಬೌಲ್ ಮಾಡಬೇಕೆಂದು ಹೇಳಿಕೊಟ್ಟಿದ್ದರಿಂದ ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ಸಾಮರ್ಥ್ಯ ಗಣನೀಯವಾಗಿ ಏರಿಕೆ ಕಂಡಿತು. ಕ್ರಿಕೆಟ್ ಇತಿಹಾಸದಲ್ಲಿ ಬಹುಶಃ ಏಕಕಾಲಕ್ಕೆ ಒಂದೇ ತಂಡದಲ್ಲಿ ನಾಲ್ಕು ಗೂಗ್ಲಿ ಬೌಲರ್ ಗಳು ಆಡಿದ ನಿದರ್ಶನವಿಲ್ಲ. ಆಬ್ರೆ ಫಾಕ್ನರ್ (ವಿಶ್ವ) ಸಮರ-ಪೂರ್ವ ಶಕೆಯಲ್ಲಿ  ದಕ್ಷಿಣ ಆಫ್ರಿಕಾದಿಂದ ಹೊರಹೊಮ್ಮಿದ ಅತ್ಯಂತ ಯಶಸ್ವಿ ಆಲ್ರೌಂಡರ್. ಆ ನಂತರದಲ್ಲಿ ವಿಶ್ವ ಕಂಡ ದೈತ್ಯ ಕ್ರಿಕೆಟ್ ಪ್ರತಿಭೆಗಳಾದ ಬ್ಯಾರಿ ರಿಚರ್ಡ್ಸ್, ಮೈಕ್ ಪ್ರಾಕ್ಟರ್, ಮತ್ತು ಪೀಟರ್ ಪೊಲಾಕ್ ಮುಂತಾದವರು ಆ ದೇಶದ ಕ್ರಿಕೆಟ್ ಪರಂಪರೆಯ ಔನ್ನತ್ಯಕ್ಕೆ ಉತ್ತಮ ನಿದರ್ಶನಗಳು. ಎರಡು ದಶಕಗಳ ನಿರ್ವಾತದ ನಂತರ ಕ್ರಿಕೆಟ್ ಜಗತ್ತನ್ನು ಮರುಪ್ರವೇಶಿಸಿದಾಗ ಕೂಡಾ ದಕ್ಷಿಣ ಆಫ್ರಿಕಾದ  ಪ್ರಾಬಲ್ಯ ತಗ್ಗಿರಲಿಲ್ಲ.

ವಿಶ್ವ ಕಪ್ ಆರಂಭವಾದದ್ದು 1975 ರಲ್ಲಿ, ಆದರೆ ಹೊರಹಾಕಲ್ಪಟ್ಟಿದ್ದ ದಕ್ಷಿಣ ಆಫ್ರಿಕಾ ಆ ಪಂದ್ಯಾವಳಿಯಲ್ಲಿ  ಪ್ರಪ್ರಥಮವಾಗಿ  ಭಾಗವಹಿಸಿದ್ದು 1992 ರಲ್ಲಿ. ನಿರ್ಣಾಯಕ ಪಂದ್ಯಗಳಲ್ಲಿ  ಮುಗ್ಗರಿಸುತ್ತಲೇ ಬಂದಿರುವುದು ದಕ್ಷಿಣ ಆಫ್ರಿಕಾದ ವೈಶಿಷ್ಠ್ಯ. ಆದರೆ ಭಾರತದ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಆ ತಂಡ ಸೋತಿದ್ದಿಲ್ಲ.  ಹೀಗೆ ಮುಗ್ಗರಿಸುವುದಕ್ಕೆ ಒಂದು ವೈಜ್ಞಾನಿಕ ವಿವರಣೆ ಇದೆ.

ಅಮೆರಿಕದ ನ್ಯೂಯಾರ್ಕ್ ನಲ್ಲಿ ಸೇವೆ ಸಲ್ಲಿಸಿದ ಮ್ಯಾಲ್ಕೊಮ್ ಗ್ಲಾಡ್ವೆಲ್ ಬರೆದಿರುವ "ವಾಟ್ ದ ಡಾಗ್ ಸಾ" ಎಂಬ ಅಪರೂಪದ ಪುಸ್ತಕದ ಒಂದು ಪ್ರಬಂಧದಲ್ಲಿ ಆ ವಿವರಣೆ ಬರುತ್ತದೆ. ಜಾನ ನೊವೊಟ್ನ ವಿಂಬಲ್ಡನ್ ಮಹಿಳೆಯರ ಫೈನಲ್ ನಲ್ಲಿ ಶ್ರೇಷ್ಠ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ವಿರುದ್ಧ ಸೆಣಸುತ್ತಾ ಗೆಲ್ಲುವ ಹಂತದಲ್ಲಿರುತ್ತಾರೆ. ಆದರೆ ಅತ್ಯಂತ ಅನಿರೀಕ್ಷಿತವಾಗಿ ಸೋಲುತ್ತಾರೆ.

ಗೇಮ್ ಗೆಲ್ಲಲು ಆಕೆಗೆ ಒಂದೇ ಒಂದು ಪಾಯಿಂಟ್ ಬೇಕಿರುತ್ತದೆ, ಮ್ಯಾಚ್ ಮತ್ತು ಪ್ರತಿಷ್ಠಿತ ವಿಂಬಲ್ಡನ್ ಟ್ರೋಫಿ ತನ್ನದಾಗಿಸಿಕೊಳ್ಳಲು ಐದು ಪಾಯಿಂಟ್ ಬೇಕಿರುತ್ತದೆ. ಆದರೆ ಇದ್ದಕ್ಕಿದ್ದಂತೆ ಆಕೆ ತನ್ನ ಎಂದಿನ ಆಟವನ್ನು ಮರೆಯುತ್ತಾರೆ. ಟೆನಿಸ್ ಬಾಲನ್ನು ಎಲ್ಲೋ ಹೊಡೆದರೆ ಮತ್ತೆಲ್ಲೋ ಹೋಗುತ್ತದೆ, ಸರ್ವ್ ಮಾಡುವಾಗ ತಡವರಿಸುತ್ತಾರೆ. ಆವಾಗಷ್ಟೆ ಮೊದಲ ಬಾರಿಗೆ ಕೋರ್ಟ್ ಪ್ರವೇಶಿಸಿದಂತೆ ಕಾಣುತ್ತಾರೆ. ಮ್ಯಾಚ್ ಸೋತು ಕಣ್ಣೀರಿಡುತ್ತಾರೆ.

ಯಾವುದೇ ಸ್ಪರ್ಧೆಯಲ್ಲಿ ಒತ್ತಡ ಸಹಜ. ಸ್ಪರ್ಧೆಯಲ್ಲಿ ಗೆಲ್ಲುತ್ತಾ ಹೋದಂತೆ ಗೆಲ್ಲಬೇಕಾದ ಕಪ್/ಟ್ರೋಫಿ/ಬಹುಮಾನ ಮೊತ್ತ ಹತ್ತಿರವಾಗುತ್ತಾ ಹೋಗುತ್ತದೆ. ಒತ್ತಡವೂ ಹೆಚ್ಚಾಗುತ್ತಾ ಹೋಗುತ್ತದೆ. ಸ್ಪರ್ಧಿಗಳು ಕೆಲವೊಮ್ಮೆ ಆ ಒತ್ತಡಕ್ಕೆ ಮಣಿದು ಆಶ್ಚರ್ಯಕರವಾದ ರೀತಿಯಲ್ಲಿ ಸೋಲುತ್ತಾರೆ. ಒತ್ತಡಕ್ಕೆ ಕುಸಿಯುವ ರೀತಿಯಲ್ಲಿ ಎರಡು ವಿಧ. ಅದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗಿದೆ.

ವ್ಯಕ್ತಿಯೊಬ್ಬನ ಮೋಟಾರ್ ಸಾಮರ್ಥ್ಯವನ್ನು ಅಳೆಯಲು ಮನೋವಿಜ್ಞಾನಿಗಳು ಒಂದು ಅತ್ಯಂತ ಸರಳವಾದ ವಿಡಿಯೋ ಗೇಂ ಬಳಸಿ ನಡೆಸಿರುವ ಅಧ್ಯಯನ ಹೀಗಿದೆ: ಕಂಪ್ಯೂಟರ್ ಪರದೆಯ ಮೇಲೆ ಸಾಲಾಗಿ ಜೋಡಿಸಿದ ನಾಲ್ಕು ಬಾಕ್ಸ್ ಗಳಿವೆ. ಪ್ರತಿ ಬಾಕ್ಸನ್ನು ನಿಯಂತ್ರಿಸಲು ಕೀ ಬೋರ್ಡ್ನಲ್ಲಿ ನಾಲ್ಕು ಗುಂಡಿಗಳಿವೆ. ಪ್ರತಿ ಬಾಕ್ಸ್ ನ ಮೈ ಮೇಲೆ ಒಮ್ಮೆಗೆ ಒಂದು ಬಾಕ್ಸ್ ಮೇಲಂತೆ 'x' ಅಕ್ಷರ ಕಾಣಿಸಿಕೊಳ್ಳುತ್ತಾ ಹೋದಂತೆ ಆಟಗಾರನು ಆ ಬಾಕ್ಸ್ ಗೆ ಸಂಬಂಧಿಸಿದ ಗುಂಡಿಯನ್ನು ನೂಕುತ್ತಾ ಹೋಗಬೇಕು. ಅಮೆರಿಕದ ಮನೋವಿಜ್ಞಾನಿ ಡೇನಿಯಲ್ ವಿಲ್ಲಿಂಗ್ಹ್ಯಾಮ್ ಪ್ರಕಾರ ಆಟಗಾರನಿಗೆ 'x' ಕಾಣಿಸಿಕೊಳ್ಳುವ ಸರತಿ ಕುರಿತು ಪೂರ್ವಮಾಹಿತಿ ಇದ್ದಲ್ಲಿ ಆಟಗಾರ ಪ್ರತಿಕ್ರಿಯಿಸುವ ವೇಗದಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತದೆ. ಆ ಅನುಕ್ರಮವನ್ನು ತುಸುಕಾಲ ಅಭ್ಯಸಿಸಿ ಅದರ ಸಂಪೂರ್ಣ ಪರಿಚಯವಾದಮೇಲೆ ಆಟದ ವೇಗವನ್ನು ವೃದ್ಧಿಸುವುದು ಕ್ರಮಬದ್ಧವಾಗಿ ಕಂಡುಬಂದ ಫಲಿತಾಂಶ. ಇದನ್ನು ಅಭಿವ್ಯಕ್ತ ಕಲಿಕೆ ಎಂದು ಕರೆಯಲಾಗುತ್ತದೆ.

ಒಂದು ವೇಳೆ, ಆಟಗಾರನಿಗೆ 'x' ಕಾಣಿಸಿಕೊಳ್ಳುವ ಕ್ರಮಾನುಗತಿ ಕುರಿತು ಮಾಹಿತಿ ಲಭ್ಯವಾಗದಿದ್ದರೂ ಆತ ತಾನು ಪ್ರತಿಕ್ರಿಯಿಸುವ ಗತಿಯನ್ನು ಕ್ಷಿಪ್ರಗೊಳಿಸುತ್ತಾನೆ. ಪರದೆಯ ಮೇಲೆ 'x' ಪ್ರತ್ಯಕ್ಷವಾಗುವುದರ ಕ್ರಮಬದ್ಧತೆ ಅವನಿಗೆ ಅರಿವಿಲ್ಲದೆಯೇ ಅನುಭವಕ್ಕೆ ಬರುತ್ತದೆ. ಆ ಅನುಭವ ಅವನ ಜಾಗ್ರತೆಯ ಪರಿಧಿಯ ಹೊರಗಿನಿಂದ ಪಡೆದ್ದಾಗಿದ್ದು ಅದನ್ನು ಅವ್ಯಕ್ತ ಕಲಿಕೆ ಎನ್ನಲಾಗುತ್ತದೆ.

ಈ ಎರಡೂ ಕಲಿಕಾ ಕ್ರಮಗಳು ವಿಭಿನ್ನ. ಮೆದುಳಿನ ಪ್ರತ್ಯೇಕ ಭಾಗಗಳ ಪಾತ್ರಕ್ಕೆ ಸಂಬಂಧಿಸಿದ್ದು. ನಾನು ಉಲ್ಲೇಖಿಸಿರುವ ಪುಸ್ತಕದಲ್ಲಿ ಕ್ರಿಕೆಟ್ ಪ್ರಸ್ತಾಪ ಇಲ್ಲ, ಆದರೆ ಅಲ್ಲಿನ ಉದಾಹರಣೆಯನ್ನು ನಾನು ಈ ಲೇಖನದ ಸಂದರ್ಭಕ್ಕೆ ಉಚಿತವಾಗುವಂತೆ ಕ್ರಿಕೆಟ್ ಗೆ ವಿಸ್ತರಿಸಿದ್ದೇನೆ. ಬ್ಯಾಟಿಂಗ್ ಕಲಿಯಲು ಆರಂಭಿಸುವ ಕ್ರೀಡಾಕಾಂಕ್ಷಿ ಮೊದಲು ಕಲಿಯುವುದು ಅಭಿವ್ಯಕ್ತ ಕಲಿಕೆಯ ಮಾರ್ಗವಾಗಿ.  ಹಾಗಾಗಿ ಅಲ್ಲಿ ಒಂದು ನಮೂನೆಯ ಯಾಂತ್ರಿಕ ಮನಃಪೂರ್ವಕ ವಿನ್ಯಾಸವಿದೆ. ಇದೆ. ಆಟಗಾರ ಪಳಗಿದಂತೆ ಅವ್ಯಕ್ತ ಕಲಿಕೆ ಪ್ರಾಮುಖ್ಯ ಪಡೆಯುತ್ತದೆ. ಯಾವ ಸ್ಟ್ರೋಕ್ ಮಾಡಬೇಕೆಂದು ನಿರ್ಣಯಿಸುವ (ಮೆದುಳಿನ) ನಿಯಂತ್ರಣ ಕೇಂದ್ರ ಬದಲಾಗುತ್ತದೆ.  ನುರಿತ ಆಟಗಾರ ಆಡುವಾಗ ಅವ್ಯಕ್ತ ಕಲಿಕೆಗೆ ಕಾರಣವಾದ ಕೇಂದ್ರ ಕೆಲಸ ಮಾಡುತ್ತಿರುತ್ತದೆ. ಕೆಲವೊಮ್ಮೆ, ಒತ್ತಡಕ್ಕೆ ಈಡಾದ ಮನಸ್ಸಿನ ನಿಯಂತ್ರಣವನ್ನು ಅಭಿವ್ಯಕ್ತ ಕಲಿಕೆಯನ್ನು ನಿಯಂತ್ರಿಸುವ ಕೇಂದ್ರ ವಹಿಸಲಾರಂಭಿಸುತ್ತದೆ.

ಹೊಸತರಲ್ಲಿ ಆಡುವಾಗ ಎಲ್ಲಿ ಎಡವುತ್ತೇನೋ ಎಂಬ ಆತಂಕದಲ್ಲಿ ಆಡುವಂಥಾ ಮನಃಸ್ಥಿತಿಗೆ ನೋವೋಟ್ ನ 1993 ರ ಆ ವಿಂಬಲ್ಡನ್ ಫೈನಲ್ ಪಂದ್ಯದ ಆ ಘಳಿಗೆಯಲ್ಲಿ ಮರಳಿದ್ದರು. ಆಟದಲ್ಲಿದ್ದ ಸರಾಗ ಮಾಯವಾಗಿತ್ತು. ಎಂದಿನ ಲೀಲಾಜಾಲ ಕೌಶಲ ಅಲ್ಪಕಾಲ ಕೈಕೊಟ್ಟಿತು.

ಮೇಲ್ಕಂಡ ಘಟನೆಯ ಆರು ವರ್ಷಗಳ ನಂತರ ಅಮೆರಿಕದ  ವಕೀಲ, ಪತ್ರಕರ್ತ, ಪ್ರಕಾಶಕ ಜಾನ್ ಎಫ್ ಕೆನಡಿ ಜೂನಿಯರ್ ತಾನೇ ಚಲಾಯಿಸುತ್ತಿದ್ದ ವಿಮಾನದ ನಿಯಂತ್ರಣ ಕಳೆದುಕೊಳ್ಳುವ ಸಂದರ್ಭವನ್ನೂ ಇದೇ ತತ್ವದ ಆಧಾರದ ಮೇಲೆ ವಿವರಿಸಲಾಗಿದೆ. ಹತ್ಯೆಗೀಡಾದ ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿಯ ಪುತ್ರರಾದ ಅವರು ಗಾಬರಿಗೊಂಡದ್ದು, ಆ ಕಾರಣದಿಂದ ಏರುಪೇರಾಗಿದ್ದು, ವಿಮಾನ ದುರಂತಕ್ಕೀಡಾಗಿದ್ದು ಮುಂತಾದ ವೈಜ್ಞಾನಿಕ ವಿಶ್ಲೇಷಣೆಯಿದೆ.

ಈ ತತ್ವ ಪ್ರತಿಪಾದಿಸುವ ಒಂದು ಸ್ವಾರಸ್ಯಕರ ಅಂಶವೆಂದರೆ (ಒತ್ತಡದ ಸನ್ನಿವೇಶದಿಂದ ಹುಟ್ಟುವ ಗಾಬರಿಯೇ (ಪ್ಯಾನಿಕ್) ಬೇರೆ, ಇಕ್ಕಟ್ಟು (ಚೋಕಿಂಗ್) ಬೇರೆ. ಒಂದು ಸನ್ನಿವೇಶವನ್ನು ಯಾವ ರೀತಿ ಎದುರಿಸಬೇಕೆಂದು ನಾನಾ  ಆಲೋಚನೆಗಳು ಹೊಳೆದಾಗ ಅವುಗಳ ಇಕ್ಕಟ್ಟೇ ಯಾವುದೇ ಆಲೋಚನೆ ಸುಸೂತ್ರವಾಗಿ ಹರಿದು ಅನುಷ್ಠಾನಗೊಳ್ಳದಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತದೆ. ಗಾಬರಿಯಾದಾಗ ಏನೂ ಹೊಳೆಯುವುದಿಲ್ಲ, ಆ ಸ್ಥಿತಿ ಚೋಕಿಂಗ್ ತದ್ವಿರುದ್ಧ. ಪ್ಯಾನಿಕ್ ಮತ್ತು ಚೋಕಿಂಗ್ ಒಂದೇ ಅಲ್ಲ, ವಿಭಿನ್ನ ಸ್ಥಿತಿಗಳು.

ದಕ್ಷಿಣ ಆಫ್ರಿಕಾ ಮೊನ್ನೆ ಮೂರೂ ಟೆಸ್ಟ್ ಗಳನ್ನು ಬೃಹತ್ ಅಂತರದಲ್ಲಿ ಸೋತಿದ್ದಕ್ಕೆ ಕಾರಣ ಅವರು ಚೋಕ್ ಆಗಿದಕ್ಕಲ್ಲ, ಪ್ಯಾನಿಕ್ ಆಗಿದ್ದಕ್ಕೆ. ಚೋಕರ್ಸ್ ಎಂದು ಆ ತಂಡಕ್ಕೆ ಹೆಸರು ಬಂದಿರುವುದು ಬೇರೆ ಸಂದರ್ಭದಲ್ಲಿ ಸರಿ ಇರಬಹುದೇನೋ, ಆದರೆ ಇತ್ತೀಚಿನ ಸರಣಿಯಲ್ಲಿ ಅನಾವರಣಗೊಂಡಿದ್ದು ಅವರ ಚೋಕಿಂಗ್ ಪ್ರವೃತ್ತಿಯಲ್ಲ, ಅವರ ಭಯ ಮತ್ತು ದಿಗ್ಭ್ರಮೆ. ಇತ್ತೀಚಿಗೆ ಒಟ್ಟೊಟ್ಟಿಗೆ ನಿವೃತ್ತರಾದ ಮಹಾನ್ ಆಟಗಾರರ ಅನುಪಸ್ಥಿತಿಯಿಂದ ಹುಟ್ಟಿದ ಭಯ, ಲಭ್ಯವಿದ್ದ ಬಹುತೇಕ ಆಟಗಾರರ ಅನುಭವ ಅಥವಾ ಸೀಮಿತ ಅನುಭವದಿಂದ ಜನಿಸಿದ ಗಾಬರಿ, ನಂಬರ್ ಒನ್ ಟೆಸ್ಟ್ ರಾಷ್ಟ್ರವೆಂದು ಹೆಸರು ಮಾಡಿ ಹಿಂದೆಂದೂ ಕಾಣದ ಗೆಲುವಿನ ಗೀಳು ಅಂಟಿಸಿಕೊಂಡಿರುವ ಭಾರತದ ತಂಡವನ್ನು ಕಂಡು ದಿಗ್ಭ್ರಮೆ. ಆಯತಪ್ಪಲು ಇನ್ನೇನು ಬೇಕು?

ಈ ಹಿನ್ನೆಲೆಯಲ್ಲಿ ನೋಡಿದಾಗ, ನನ್ನ ಗ್ರಹಿಕೆಗೆ ಬರುವ ಅಂಶ: ದಕ್ಷಿಣ ಆಫ್ರಿಕಾ ಮೊನ್ನೆಯ ಟೆಸ್ಟ್ ಸರಣಿಯ ಆರಂಭಕ್ಕೆ ಮುನ್ನವೇ ಸರಣಿಯನ್ನು ಸೋತಾಗಿತ್ತು. ಪುಕ್ಕಲುತನ ಮೊದಲ ಟೆಸ್ಟ್ ನ ಟಾಸ್ ಗೆ ಮುನ್ನವೇ ಡು ಪ್ಲಸಿಯನ್ನು ಆವರಿಸಿತ್ತು. ದಕ್ಷಿಣ ಆಫ್ರಿಕಾ ಸತ್ತಿದ್ದು ಒತ್ತಡದಿಂದುಟಾದ ಉಸಿರಾಟದ ತೊಂದರೆಯಿಂದಲ್ಲ, ಒತ್ತಡಕ್ಕೂ ಮೊದಲು ಉದ್ಭವಿಸಿದ ಗಾಬರಿಯಿಂದ. ಹಾಗಿದ್ದು, ಅವರ ಒಬ್ಬಿಬ್ಬರು ಆಟಗಾರರು ಶತಕ ಗಳಿಸಿದ್ದು ಹೇಗೆ ಎಂಬುದೇ ಪರಮಾಶ್ಚರ್ಯ.