ಗ್ರಾಂಸಿ ಸಿದ್ದಾಂತದ ಉಗಮ ಮತ್ತು ವಿಕಾಸದ ಮುಂದುವರೆದ ಭಾಗ

ಗ್ರಾಂಸಿ ಸಿದ್ದಾಂತದ ಉಗಮ ಮತ್ತು ವಿಕಾಸದ ಮುಂದುವರೆದ ಭಾಗ

(ಕಳೆದ ಭಾನುವಾರದಿಂದ)

ವಸಾಹತು ಕಾಲಾವಧಿಯಲ್ಲಿ ಬ್ರಿಟಿಷ್ ಆಳರಸರು ಮತ್ತು ಸ್ಥಳೀಯ ಎಲೈಟ್‍ಗಳಿಗಿಂತ ಭಿನ್ನ ಸಂರಚನೆಯನ್ನು ಹೊಂದಿದ ಸಬಾಲ್ಟರ್ನ್ ವಲಯಗಳು ಗ್ರಾಂಸಿಯು ಚರ್ಚಿಸಿದ ಇಟಲಿಯ ಪುನರುಜ್ಜೀವನೋತ್ತರ ವಿದ್ಯಮಾನಗಳಿಗಿಂತ ಭಿನ್ನವಾಗಿ 19 ಮತ್ತು 20ನೇ ಶತಮಾನದ ಭಾರತದಲ್ಲಿ ಪ್ರಮುಖವಾಗಿ ಕಂಡುಬಂದಿದ್ದನ್ನು ನೋಡಬಹುದು.

ವಸಾಹತುಪೂರ್ವ ಭಾರತದಲ್ಲಿ ಪ್ರವರ್ಧಮಾನದಲ್ಲಿದ್ದ ಊಳಿಗಮಾನ್ಯ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯು ಬಿಟ್ಟುಕೊಟ್ಟ ಅಧಿಕಾರ ಸೂತ್ರಗಳು ವಸಾಹತು ಕಾಲದಲ್ಲಿ ಸ್ಥಳೀಯ ಅರಸರ ಮತ್ತು ದೊಡ್ಡ ಭೂಮಾಲೀಕರ ಕೈಗಳನ್ನು ಬಲಪಡಿಸಿದವು. ಹೊರಜಗತ್ತಿಗೆ ಅವರ ಸಂಬಂಧಗಳು ಅಷ್ಟಕಷ್ಟೇ ಇದ್ದರೂ ಅವರಿದ್ದ ವ್ಯವಸ್ಥೆ ಒಂದು ಬಗೆಯಲ್ಲಿ ಹೊರಜಗತ್ತಿನ ವಿದ್ಯಮಾನಗಳಿಂದ ದೂರ ಉಳಿದವು. ಪರಿಣಾಮವಾಗಿ ರೈತರು ಪ್ರಧಾನವಾಗಿದ್ದ ಸ್ಥಳೀಯ ಸಮಾಜವು ಆರ್ಥಿಕ, ರಾಜಕೀಯ ಮತ್ತು ಸಾಂಸ್ಕಂತಿಕ ರಂಗಗಳಲ್ಲಿ ಬಹಳಷ್ಟು ಸ್ವಾಯತ್ತತೆಯನ್ನು ಹೊಂದಿತ್ತು.

19 ನೇ ಶತಮಾನದ ಅಂತ್ಯಭಾಗದವರೆಗೂ ಹೆಚ್ಚು ಕಡಿಮೆ ಇದೇ ವ್ಯವಸ್ಥೆಯನ್ನು ಭಾರತದ ಸಂದರ್ಭದಲ್ಲಿ ನೋಡಬಹುದು. ಯಾವ ಗಳಿಗೆಯಿಂದ ಭಾರತವು ಅಂತಾರಾಷ್ಟ್ರೀಯ ಮಾರುಕಟ್ಟೆಯ ಅರ್ಥವ್ಯವಸ್ಥೆಯ ಭಾಗವಾಗಿ ಕಾರ್ಯ ಚಟುವಟಿಕೆಯನ್ನು ನಿರ್ವಹಿಸಲು ಮುಂದಾಯಿತೋ ಆ ಹೊತ್ತಿನಿಂದ ರಾಜ್ಯವ್ಯವಸ್ಥೆಯ ಸ್ವರೂಪ, ನಿರ್ವಹಣಾ ವಿಧಾನ ಮತ್ತು ಸ್ಥಳೀಯರ ವಿಷಯದಲ್ಲಿ ಮೂಗು ತೂರಿಸುವ ವಿಧಾನ ಇವೆಲ್ಲದರಲ್ಲೂ ಬದಲಾವಣೆ ಕಂಡುಬಂದವು. ಭಾರತದ ಸಂದರ್ಭದಲ್ಲಿ ಸಹಜವಾಗಿ ಸರಕು ಸಾಗಾಟ ಕ್ರಮಗಳಲ್ಲಿ ಮತ್ತು ಸಂವಹನ ಕ್ರಮಗಳಲ್ಲಿಯೂ ಭಾರಿ ಬದಲಾವಣೆಗಳನ್ನು ನಾವು ಈ ಸಂದರ್ಭದಲ್ಲಿ ಗಮನಿಸಬಹುದು.

ಚರಿತ್ರೆಯ ಈ ಕಾಲಘಟ್ಟದಲ್ಲಿ ನಡೆದ ಈ ಬಗೆಯ ಮಹತ್ವದ ಸ್ಥಿತ್ಯಂತರದ ವ್ಯಾಪ್ತಿ ಭಾರತದ ಎಲ್ಲ ಕಡೆ ಒಂದೇ ರೀತಿಯಲ್ಲಿರಲಿಲ್ಲ. ಸಂಪರ್ಕವೇ ದುಸ್ತರವಾಗಿದ್ದ ಭಾರತದ ಪೂರ್ವಭಾಗಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬದಲಾವಣೆ ತೀವ್ರಗತಿಯಲ್ಲಾಯಿತು. ಇದಕ್ಕೆ ಗತಕಾಲದಿಂದ ಸಾಂಪ್ರದಾಯಿಕವಾಗಿ ಅಧಿಕಾರವನ್ನು ಹೊಂದಿದ್ದ, ಸ್ವಾಯತ್ತ(ಸಬಾಲ್ಟರ್ನ್) ವಲಯಗಳ ಮುಖ್ಯಸ್ಥರು ಸಾರ್ವಜನಿಕವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರೂ ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರವು ಸ್ಥಿರಗೊಂಡ ಈ ಬದಲಾವಣೆಯನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಉಳಿದ ಬಹುತೇಕ ಪ್ರದೇಶಗಳಲ್ಲಿ ಈ ಬದಲಾವಣೆಗಳನ್ನು ಜನರು ಭಿನ್ನ ಭಿನ್ನ ರೀತಿಯಲ್ಲಿ ಸ್ವೀಕರಿಸಿದರು.

ಕೆಲವೆಡೆ ಇದೊಂದು ಸಹಜ ಪ್ರಕ್ರಿಯೆ ಎಂಬಂತೆ ಸ್ವೀಕರಿಸಿದರೂ, ಉಳಿದೆಡೆ ಮಿಶ್ರ ಪ್ರತಿಕ್ರಿಯೆಗಳು ಕಂಡುಬಂದವು. ಬ್ರಿಟಿಷ್ ಆಳ್ವಿಕೆಯಲ್ಲಿ ಕಂಡ ಆರ್ಥಿಕ ಮತ್ತು ಆಡಳಿತಾತ್ಮಕ ಬದಲಾವಣೆಗಳು ಹಾಗೂ ಗ್ರಾಮೀಣ ಬಂಡವಾಳವು ವ್ಯವಸ್ಥೆಯ ಕೇಂದ್ರಸ್ಥಾನವನ್ನು ಅಲಂಕರಿಸಿದ ಪರಿಣಾಮವಾಗಿ ಸ್ಥಳೀಯ ಮಟ್ಟದಲ್ಲಿಯೂ ಸಂಬಂಧಗಳು ಏರುಪೇರಾಯಿತು. ಇಂತಹ ಸಂದರ್ಭದಲ್ಲಿ ಹೊರಜಗತ್ತಿನ ಶಕ್ತಿಗಳೊಡನೆ (ಬ್ರಿಟಿಶರ ಆಡಳಿತಶಾಹಿ, ಆರ್ಥಿಕ ದಲ್ಲಾಳಿ, ಸಹವರ್ತಿಗಳು ಮತ್ತಿತರರು) ವ್ಯವಹರಿಸಲು ಅಥವಾ ಅವರ ಆಕ್ರಮಣಗಳಿಂದ ರೈತ ವರ್ಗಗಳನ್ನು ರಕ್ಷಿಸಲು ಸ್ಥಳೀಯ ಎಲೈಟ್‍ಗಳು ಹೊರಜಗತ್ತಿನ ಶಕ್ತಿಗಳ ದಲ್ಲಾಳಿಗಳಾದರು ಅಥವಾ ಅವರ ಮಿತ್ರರಾದರು. ಈ ವಿಷಮ ಪರಿಸ್ಥಿತಿಯಲ್ಲಿ ರೈತರು ಸ್ಥಳೀಯ ಎಲೈಟ್‍ಗಳನ್ನು ನಂಬಿ ಅವರ ಮೂಲಕ ಸ್ಥಳೀಯವಲ್ಲದ ಶಕ್ತಿಗಳೊಂದಿಗೆ ವ್ಯವಹಾರ ನಡೆಸುವಂತಹ ಸಂದರ್ಭ ನಿರ್ಮಾಣವಾಯಿತು. ಹೊಸ ವ್ಯವಸ್ಥೆಯ ಆರ್ಥಿಕ ವೈರುಧ್ಯಗಳಿಂದ ರೈತವರ್ಗಗಳ ಒಳಗೇ ಒಂದು ಬಗೆಯ ಸಂಘರ್ಷ ಉಂಟಾಯಿತು.

ಕೆಲವು ಸಬಾಲ್ಟರ್ನ್ ವಲಯಗಳು ಹೊರಶಕ್ತಿಗಳೊಡನೆ ಏನೂ ಸಂದರ್ಭಗಳನ್ನಿಟ್ಟುಕೊಳ್ಳದೇ ತಮ್ಮದೇ ಸ್ವಾಯತ್ತತೆಯನ್ನು ಉಳಿಸಿಕೊಂಡದ್ದನ್ನು ಕಾಣಬಹುದು. 1920 ಮತ್ತು 1930 ರ ದಶಕಗಳಲ್ಲಿ ಬಂಗಾಳದ ಸಂದರ್ಭದಲ್ಲಿ ಪಾರ್ಥ ಚಟರ್ಜಿ ಅವರು ಅಧ್ಯಯನ ಮಾಡಿರುವಂತೆ ಕೆಲವು ರೈತ ವರ್ಗಗಳು ಪ್ರಖರವಾದ ತಮ್ಮ ‘ಸಮುದಾಯ’ದ (ಕಮ್ಯುನಲ್) ಐಡೆಂಟಿಟಿಯನ್ನು ಹೊರಜಗತ್ತಿನ ಪ್ರಭಾವದಿಂದಾಗಿಯೋ ಅಥವಾ ಆಂತರಿಕ ಜಗತ್ತಿನ ವಿಪ್ಲವಗಳಿಂದಾಗಿಯೋ ಬಿಟ್ಟುಕೊಡಲು ತಯಾರಾಗಲಿಲ್ಲ.

ಈ ಬಗೆಯ ಸಾಮುದಾಯಿಕ ಪ್ರಜ್ಞೆ ಅನೇಕ ಬಾರಿ ಧಾರ್ಮಿಕ ಚೌಕಟ್ಟಿನಲ್ಲಿ ವ್ಯಕ್ತವಾಯಿತು. ಬಂಗಾಳದಲ್ಲಿರುವ ಮುಸ್ಲಿಮರು ಇದಕ್ಕೆ ಒಂದು ಒಳ್ಳೆಯ ನಿದರ್ಶನ. ಇಲ್ಲಿನ ಮುಸ್ಲಿಮರು ತಮ್ಮ ಐಡೆಂಟಿಟಿಯನ್ನು ಸ್ಥಿತ್ಯಂತರದ ಸಂದರ್ಭದಲ್ಲಿ ಬಿಟ್ಟುಕೊಡದಿರುವುದನ್ನು ಕಾಣಬಹುದು. ಸಂಘರ್ಷದ ಸಂದರ್ಭದಲ್ಲಿ ಮುಸ್ಲಿಂ ರೈತರು ಹಿಂದೂ ವ್ಯಾಪಾರಿಗಳ ಮತ್ತು ಲೇವಾದೇವಿಗಾರರ ವಿರುದ್ಧ ಬಂಡೆದ್ದರು. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಆಕ್ರಮಣ ಮಾಡಿದರು. ಇದು ರೈತರ ಮತ್ತು ಭೂಮಾಲೀಕರ ನಡುವಿನ ಹೋರಾಟವಾಗಿದ್ದರೂ ಭಾರತೀಯ ಪರಿಭಾಷೆಯಲ್ಲಿ ಈ ಹೋರಾಟಗಳು ಕೋಮುಗಲಭೆಗಳೆಂದೇ ಬಿಂಬಿತವಾದವು. ಇಲ್ಲಿ “ಧರ್ಮ” ಎನ್ನುವ ಅಂಶ ಸಮಷ್ಟಿಪ್ರಜ್ಞೆಯಾಗಿ ಒಂದು “ವರ್ಗ”ದ ವಿರುದ್ಧ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತು ಎಂಬ ಅಂಶವನ್ನು ಗಮನಿಸಬಹುದಾಗಿದೆ. 

ಮೇಲ್ಜಾತಿ/ವರ್ಗಗಳು ಹಿಡಿತದಲ್ಲಿಟ್ಟುಕೊಂಡಿದ್ದ ಸಾಂಪ್ರದಾಯಿಕ ಅಧಿಕಾರ ಸಂಬಂಧಗಳು 19 ಮತ್ತು 20 ನೇ ಶತಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಸಾಹತುಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳು ಬೆಸೆದ ಹೊಸ ವ್ಯವಸ್ಥೆಯಿಂದಾಗಿ ಪಲ್ಲಟವಾದವು. ಈ ಹೊಸ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಹತ್ತಿರವಾದ ವರ್ಗವೆಂದರೆ ಭಾರತೀಯ ಬೂಜ್ರ್ವಾಗಳು. ಹಳೆಯ ವ್ಯವಸ್ಥೆಗೆ ಒಗ್ಗಿ ಹೋಗಿದ್ದ ರೈತವರ್ಗಗಳಿಗೆ ಈ ವ್ಯವಸ್ಥೆ ನಿಜಕ್ಕೂ ನುಂಗಲಾಗದ ವಿಷಯವಾಯಿತು. ರೈತ ವರ್ಗಗಳ ಐಡೆಂಟಿಟಿ ಮತ್ತು ನಾಯಕತ್ವಗಳು ಈ ಕಾರಣಕ್ಕಾಗಿ ನಿಧಾನವಾಗಿ ನಶಿಸುತ್ತ ಬಂದವು. ಇಂತಹ ಸಂದರ್ಭಗಳಲ್ಲಿ ರೈತವರ್ಗಗಳು ತಮ್ಮ ಅಸ್ತಿತ್ವಕ್ಕಾಗಿ ಮತ್ತು ಹಿತಾಸಕ್ತಿಗಾಗಿ ರೈತರ ಸ್ವಾಯತ್ತತೆಯನ್ನುಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ರೈತರ ಸ್ವಾಯತ್ತತೆಯು ಬಹಳ ಪ್ರಬಲವಾಗಲು 19 ಮತ್ತು 20 ನೇ ಶತಮಾನಗಳಲ್ಲಿ ಬಹಳಷ್ಟು ಅವಕಾಶಗಳಿದ್ದವು. ಆ ಕಾಲಘಟ್ಟದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೋರಾಟಗಳು ರೈತವರ್ಗಕ್ಕೆ ಈ ಬಗೆಯ ಭೂಮಿಕೆಯನ್ನು ಸಿದ್ಧಮಾಡಿಕೊಟ್ಟಿತ್ತು. ಗಾಂಧೀಜಿಯವರ ನಾಯಕತ್ವದಲ್ಲಿ ಮಧ್ಯಮವರ್ಗಗಳು ರೈತರನ್ನು ಓಲೈಸಿಕೊಂಡು ಹೋಗುವ ರಾಷ್ಟ್ರೀಯ ಹೋರಾಟದ ಮಾರ್ಗಗಳನ್ನು ರೂಪಿಸಿದ್ದವು. ಈ ದಿಸೆಯಲ್ಲಿ ಅಲ್ಪಸ್ವಲ್ಪ ಸಫಲತೆಯೂ ಆಗಿತ್ತು. ಆದರೆ ಸಬಾಲ್ಟರ್ನ್ ಅಧ್ಯಯನಗಳ ಪ್ರಕಾರ ಗ್ರಾಂಸಿಯು ಪ್ರತಿಪಾದಿಸಿದ ರೈತವರ್ಗದ ನಾಯಕತ್ವ ಮಾತ್ರ ಈ ಸಂದರ್ಭದಲ್ಲಿ ಕಾಣಲಿಲ್ಲ. ಹೊಸ ವ್ಯವಸ್ಥೆಯಲ್ಲಿ ಬಲಾಢ್ಯರಾಗಿದ್ದ ಭಾರತೀಯ ಬೂಜ್ರ್ವಾಗಳು ರೈತವರ್ಗದ ದಾಪುಗಾಲಿಗೆ ತೊಡಕಾದವು.

ಗಾಂಧೀಜಿಯವರು ರೈತರ ಒಪ್ಪಿಗೆ/ಸಹಮತದೊಂದಿಗೆ ರೂಪಿಸಬೇಕೆಂದು ಹೊರಟಿದ್ದ ರಾಷ್ಟ್ರೀಯ ಹೋರಾಟವು ಸಮರ್ಥ ನಾಯಕತ್ವದ ಕೊರತೆಯಿಂದ ಸೊರಗಿತು. ಗ್ಯಾನೇಂದ್ರ ಪಾಂಡೆಯವರು ಔಧ್‍ನ ರೈತಹೋರಾಟವನ್ನು ವಿಮರ್ಶಿಸಿದಂತೆ, ಕಾಂಗ್ರೆಸ್ ನಾಯಕರಿಗೆ ರೈತರ ಬಹುಮುಖ್ಯವಾದ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವುದಕ್ಕಿಂತ ಮುಖ್ಯವಾಗಿ “ರಾಷ್ಟ್ರೀಯ ಐಕ್ಯತೆಗಾಗಿ” ಅಹಿಂಸೆಯನ್ನು ಪಾಲಿಸುವುದು ಮತ್ತು ಅಂತರ್‍ವರ್ಗಗಳ ನಡುವೆ ಸಹಮತ ಏರ್ಪಡಿಸುವುದು ಮುಖ್ಯವಾಯಿತು. ಸಮರ್ಥವಾದ ನಾಯಕತ್ವವಿಲ್ಲದೆ ರೈತವರ್ಗಗಳಿಗೆ ಪರಿಪಕ್ವತೆಯ ರಾಜಕೀಯ ಪ್ರಜ್ಞೆಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಕಾರ್ಮಿಕವರ್ಗವು ತನ್ನ ವಾಸ್ತವಿಕತೆಯ ಹಿನ್ನೆಲೆಯಲ್ಲಾಗಲಿ ಅಥವಾ ತನ್ನ ಸಂವೇದನೆಯನ್ನು ರೂಪಿಸಿಕೊಳ್ಳುವ ಹಿನ್ನೆಲೆಯಲ್ಲಾಗಲಿ ಒಂದು ಶಕ್ತಿಯಾಗಿ ರೂಪುಗೊಳ್ಳಲಿಲ್ಲ ಅಥವಾ ರೈತವರ್ಗದ ಜೊತೆ ಸಖ್ಯವನ್ನೂ ಬೆಳೆಸಿಕೊಳ್ಳಲಿಲ್ಲ. ಇಂತಹ ಸಂದರ್ಭದಲ್ಲಿ ನಾಯಕತ್ವದ ಹೊರೆ ಸಹಜವಾಗಿಯೇ ಎಂಬಂತೆ ಭಾರತೀಯ ಬೂಜ್ರ್ವಾಗಳ ಹೆಗಲ ಮೇಲೆ ಬಿದ್ದಿತು. ಆದರೆ ಅವರು ಈ ಹೊರೆಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾದರು. ರೈತರ ಸತ್ವಶಾಲಿ ಹೋರಾಟಗಳನ್ನು ಸಾಮಾನ್ಯೀಕರಣಗೊಳಿಸಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟವನ್ನಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ.

ಬಲಾಢ್ಯರಿಗೆ ಸಂಬಂಧಪಟ್ಟ ವಲಯದ ಬಗ್ಗೆ ಮಾತ್ರ ಬಲಾಢ್ಯರ ನೇತೃತ್ವದಲ್ಲಿನ ಎಲೈಟ್ ಬರಹಗಾರರು ವರ್ಣರಂಜಿತವಾಗಿ ಚರಿತ್ರೆ ಬರೆದರು. ಅವರ ಪ್ರತಿ, ಪ್ರಭಾವ, ಚಳವಳಿ, ಆದರ್ಶಗಳೇ ಭಾರತದ ರಾಷ್ಟ್ರೀಯ ಚಳವಳಿಯ ಆದರ್ಶಗಳೆಂಬಂತೆ ಬಿಂಬಿಸಲ್ಪಟ್ಟವು. ಹಾಗೆಯೇ ಭಾರತದ ರಾಷ್ಟ್ರೀಯ ಚಳವಳಿಯ ಆದ್ಯ ಪ್ರವರ್ತಕರು ಅವರೇ ಎಂಬಂತೆ ಅವರು ಬಿಂಬಿಸಿಕೊಂಡರು. ಹಲವಾರು ಸ್ವತಂತ್ರ, ಸ್ವಾಯತ್ತ ವಲಯಗಳು(ರೈತರು, ಬುಡಕಟ್ಟು ಇತ್ಯಾದಿ ಸಮುದಾಯಗಳು) ಜಮೀನ್ದಾರರಿಗೆ/ಸರ್ಕಾರಕ್ಕೆ ಒಡ್ಡಿದ ಪ್ರತಿರೋಧಗಳು ಈ ಸಂದರ್ಭದಲ್ಲಿ ದಾಖಲಾಗದ್ದರ ಬಗ್ಗೆ ಸಬಾಲ್ಟರ್ನ್ ಚರಿತ್ರೆಕಾರರು ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸಿದರು. ಸಬಾಲ್ಟರ್ನ್ ವಲಯಗಳು ಎಲೈಟ್ ರಾಜಕಾರಣದ ಶಿಶುವೂ ಅಲ್ಲ; ಅದಕ್ಕೆ ಪೂರಕವೂ ಆಗಿಲ್ಲ; ಎಲೈಟ್ ರಾಜಕಾರಣದ ಹಂಗಿನಲ್ಲೂ ಇಲ್ಲ; ಹಾಗೆಯೇ ಎಲೈಟ್ ರಾಜಕಾರಣದ ಮೇಲೆ ಅವಲಂಬಿತವಾಗಿಯೂ ಇಲ್ಲ ಎನ್ನುತ್ತಾರೆ ರಣಜಿತ್‍ ಗುಹಾ ಅವರು. ರೈತರ, ಆದಿವಾಸಿಗಳ ಸ್ವತಂತ್ರ, ಸ್ವಾಯತ್ತ ವಲಯಗಳು ವಸಾಹತುಪೂರ್ವ ಕಾಲದಲ್ಲಿಯೇ ತಮ್ಮ ಅಸ್ತಿತ್ವವನ್ನು ಹೊಂದಿತ್ತು. ಆ ಕಾಲದಲ್ಲಿ ನಡೆದ ಅನೇಕಾನೇಕ ಪ್ರತಿರೋಧಗಳಲ್ಲಿ, ಬಂಡಾಯಗಳಲ್ಲಿ ಮತ್ತು ಜನಪ್ರಿಯ ಹೋರಾಟಗಳಲ್ಲಿ ಅವುಗಳ ಛಾಯೆಯನ್ನು ಕಾಣಬಹುದಾಗಿದೆ.

(ಹಿಂದಿನ ಸಂಚಿಕೆಯಲ್ಲಿ ಗ್ರಾಂಸಿ ಸಿದ್ದಾಂತದ ಉಗಮ ಮತ್ತು ವಿಕಾಸ)