ಗ್ರಾಂಸಿಯ ಸಿದ್ದಾಂತದ ಉಗಮ ಮತ್ತು ವಿಕಾಸದ ಮುಂದುವರೆದ ಭಾಗ

ಗ್ರಾಂಸಿಯ ಸಿದ್ದಾಂತದ ಉಗಮ ಮತ್ತು ವಿಕಾಸದ ಮುಂದುವರೆದ ಭಾಗ

(ಕಳೆದ ಭಾನುವಾರದಿಂದ)

ಗ್ರಾಂಸಿಯು ‘ಸಬಾಲ್ಟರ್ನ್’ ಎನ್ನುವ ಪದವನ್ನು ಉಪಯೋಗಿಸಿದ ಬಗೆಗಳು ಸಬಾಲ್ಟರ್ನ್ ಅಧ್ಯಯನಕ್ರಮವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಮೂಲೆಗೊತ್ತಲ್ಪಟ್ಟ ಸಮುದಾಯಗಳಾದ ಕಾರ್ಮಿಕರು, ರೈತರು, ಕೂಲಿಕಾರರು, ಕುಶಲಕರ್ಮಿಗಳು, ಕುರಿ ಕಾಯುವವರು ಮತ್ತಿತರರು ಈ ಬಗೆಯ ಸಬಾಲ್ಟರ್ನ್‍ಗಳಾಗುತ್ತಾರೆ. ಫಾಸಿಸ್ಟ್ ಸರಕಾರದ ರಾಜಕೀಯ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಗ್ರಾಂಸಿಯು ‘ಪ್ರೋಲಟರಿಯೇಟ್’ ಎನ್ನುವ ಮಾಕ್ರ್ಸಿಸ್ಟ್ ಪರಿಭಾಷೆಯ ಬದಲಿಗೆ ಸಬಾಲ್ಟರ್ನ್ ಸಮುದಾಯಗಳನ್ನು ಹೆಸರಿಸಿದ್ದನ್ನು ಡೇವಿಡ್ ಅರ್ನಾಲ್ಡ್ ಅವರು ವಿವರಿಸಿದ್ದಾರೆ.

ಹಾಗೆಯೇ ಮಾಕ್ರ್ಸಿಸಂ ಬದಲಿಗೆ ಗ್ರಾಂಸಿಯು ‘ದಿ ಪಿಲಾಸಪಿ ಆಫ್ ಪ್ರಾಕ್ಸೀಸ್’ ಎಂದು ಹೆಸರಿಸಿರುವುದನ್ನು ಗಮನಿಸಬಹುದಾಗಿದೆ. ಸಬಾಲ್ಟರ್ನ್ ಎನ್ನುವ ಪದವು ಕೇವಲ ರೈತರ ಮತ್ತು ಭೂ ಒಡೆಯರ ನಡುವಿನ ವಿಚಾರವನ್ನು ಮಾತ್ರ ಅಬಿsವ್ಯಕ್ತಗೊಳಿಸದೆ ನಿಯಂತ್ರಣದಲ್ಲಿರುವವರು ಮತ್ತು ನಿಯಂತ್ರಣಕ್ಕೊಳಪಡಿಸುವವರ ನಡುವಿನ ಸಂಬಂಧದ ಪ್ರಕ್ರಿಯೆಯನ್ನು ವಿವರಿಸುತ್ತದೆ ಎಂದು ಗ್ರಾಂಸಿಯು ಭಾವಿಸಿದ್ದನು.

19ನೆಯ ಶತಮಾನದ ಇಟಲಿ ಅಥವಾ ಭಾರತವು ಬಂಡವಾಳಪ್ರಧಾನ ದೇಶಗಳಾಗಿ ಇನ್ನೂ ರೂಪುಗೊಂಡಿಲ್ಲದ್ದರಿಂದ ವರ್ಗದ ಬಳಕೆಗಿಂತ ‘ಸಬಾಲ್ಟರ್ನ್’ ಬಳಕೆ ಹೆಚ್ಚು ಸೂಕ್ತವಾಗಿದೆ. ವಾಸ್ತವಿಕ ಚಾರಿತ್ರಿಕ ಸಂದರ್ಭವನ್ನು ಅರ್ಥ ಮಾಡಿಕೊಳ್ಳುವ ಸನ್ನಿವೇಶದಲ್ಲಿ ಸಂಘರ್ಷ ಮತ್ತು ದ್ವಂದ್ವತೆಗಳನ್ನು ಹೊರಹೊಮ್ಮಿಸಲು ಗ್ರಾಂಸಿಯು ಬಳಸುವ ಹೆಜಿಮನಿ/ಸಬಾರ್ಡಿನೇಶನ್, ಫೆÇೀರ್ಸ್/ಕನ್ಸೆಂಟ್, ಆಕ್ಟಿವ್/ಪ್ಯಾಸಿವ್ ಎನ್ನುವ ಡೈಲೆಕ್ಟಿಕಲ್ ಜಾರ್ಗನ್‍ಗಳ ಬಳಕೆಯನ್ನು ನೋಡಬಹುದು. 


ಮಾಕ್ರ್ಸ್ ಮತ್ತು ಏಂಗಲ್ಸ್ ಇವರು ಕಮ್ಯುನಿಸ್ಟ್ ಮ್ಯಾನಿಫೆಸ್ಟೋವಿನಲ್ಲಿ ಉಲ್ಲೇಖಿಸಿದಂತೆ ಸಂವೇದನೆ ಮತ್ತು ಸಂಘಟನೆಗೆ ಸಂಬಂದಿsಸಿದಂತೆ ಪ್ರೋಲಟರಿಯೇಟ್‍ಗೆ ಇರುವ ಅನುಕೂಲಗಳಿಂದ “ಪ್ರೋಲಟರಿಯೇಟ್”(ಕಾರ್ಮಿಕ) ಶಕ್ತಿಶಾಲಿಯಾಗಿದ್ದಾನೆ. ಗ್ರಾಂಸಿ ಅದನ್ನು ಅನುಮೋದಿಸಿದರೂ ಪ್ರೋಲಟರಿಯೇಟ್ ವರ್ಗವು ಶೋಷಣೆಗೊಳಪಟ್ಟ ಮತ್ತು ದಮನಕ್ಕೊಳಪಟ್ಟ ಉಳಿದ ಸಬಾಲ್ಟರ್ನ್‍ಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಆಶಿಸುತ್ತಾನೆ. ಪ್ರೋಲಟರಿಯೇಟ್ ರೈತರ ಅಥವಾ ಕ್ರಾಂತಿಕಾರಿಗಳ ಹಾಗೂ ಪ್ರತಿಗಾಮಿಗಳ ನಡುವಿನ ದ್ವಂದ್ವಗಳಿಗಿಂತ ಹೆಚ್ಚಾಗಿ ಇವರೆಲ್ಲರೂ ಕ್ರಾಂತಿಕಾರಿಗಳಾಗಿ ಒಟ್ಟಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಕಾಣಬರುವ ಸಂವೇದನಾಶೀಲತೆ ಮತ್ತು ಒಗ್ಗಟ್ಟು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ ಎಂದು ಗ್ರಾಂಸಿಯು ಅಬಿsಪ್ರಾಯ ಪಟ್ಟಿದ್ದಾನೆ.

 
ಭಾರತದ ರೈತಾಪಿ ವರ್ಗದ ಬಗ್ಗೆ ಗ್ರಾಂಸಿಯ ತತ್ವವನ್ನು ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಅನ್ವಯಿಸುವಾಗ ನಮಗೆ ಬಹಳ ಮುಖ್ಯವೆಂದು ಅನ್ನಿಸುವ ವಿಷಯ ‘ಸ್ವಾಯತ್ತತೆ’(ಅಟಾನಮಿ). ಕೆಳವರ್ಗದ ಮೇಲೆ ಆಳುವವರು ತಮ್ಮ ಆಳ್ವಿಕೆಯನ್ನು ಮತ್ತು ಯಜಮಾನಿಕೆಯನ್ನು ದಬ್ಬಾಳಿಕೆ ಮೂಲಕ ಪ್ರತಿಪಾದಿಸುವುದನ್ನು ಗ್ರಾಂಸಿಯು ಈಗಾಗಲೇ ಚರ್ಚಿಸಿರುವುದು ಸರಿಯಷ್ಟೆ. ಆಧುನಿಕ ಬಂಡವಾಳಶಾಹಿ ಸಮಾಜದಲ್ಲಿ ರಾಜ್ಯಾಡಳಿತವನ್ನು ಕಿತ್ತೆಸೆಯಲು ಸಬಾಲ್ಟರ್ನ್ ವರ್ಗಗಳಿಗೆ ಅಸಾಧ್ಯವಾದದ್ದನ್ನು ಮತ್ತು ಸಬಾಲ್ಟರ್ನ್ ವರ್ಗಗಳು ಆಳುವ ವರ್ಗದ ಅಡಿಯಾಳಾದ ವಿಚಾರವನ್ನು ಚರ್ಚಿಸುವುದು ಗ್ರಾಂಸಿಯ ಉದ್ದೇಶವಾಗಿತ್ತು. ಅಲ್ಲಲ್ಲಿ ಸ್ವಾಯತ್ತತೆಯ ಅಂಶಗಳು ಕಂಡುಬಂದರೂ ಸಬಾಲ್ಟರ್ನ್‍ಗಳ ನಡುವೆ ಸಮರ್ಥ ನಾಯಕತ್ವದ ಕೊರತೆ ಕಂಡುಬಂದದ್ದನ್ನು, ಸಬಾಲ್ಟರ್ನ್‍ಗಳು ಸಮರ್ಥವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಲು ವಿಫಲವಾಗಿದ್ದನ್ನು, ಆಳುವ ವರ್ಗದ ಹಿತಾಸಕ್ತಿಗಳನ್ನು ಸೋಲಿಸಲು ಸಮರ್ಥವಾದ ಸೈದ್ಧಾಂತಿಕ ಹಾಗೂ ರಾಜಕೀಯ ನಿರ್ಣಯಗಳನ್ನು ಮಂಡಿಸಲು ವಿಫಲವಾದದ್ದನ್ನು ಗ್ರಾಂಸಿಯು ಚರ್ಚಿಸಿರುವುದು ಗಮನಾರ್ಹ.

ಸಬಾಲ್ಟರ್ನ್ ಗುಂಪುಗಳು ದಂಗೆ ಎದ್ದ ಸಂದರ್ಭದಲ್ಲಿ ಮತ್ತು ಸೆಟೆದು ನಿಲ್ಲುವ ಸಂದರ್ಭದಲ್ಲಿಯೂ ಸಬಾಲ್ಟರ್ನ್ ಗುಂಪುಗಳು ಆಳುವ ವರ್ಗಗಳ ಕಪಿಮುಷ್ಟಿಯಲ್ಲಿದ್ದ ವಿಚಾರವನ್ನು ತನ್ನ “ಸೆಲೆಕ್ಷನ್ ಫ್ರಂ ದಿ ಪ್ರಿಸನ್ ನೋಟ್ಸ್”ನಲ್ಲಿ ಗ್ರಾಂಸಿಯು ಮಂಡಿಸಿದ್ದನ್ನು ನಾವು ನೋಡಬಹುದು.


ಭಾರತದ ಚರಿತ್ರೆ ಬರವಣಿಗೆಯನ್ನು ವಿಮರ್ಶಿಸಿದ ಸಂದರ್ಭದಲ್ಲಿ ರಣಜಿತ್ ಗುಹಾ ಅವರು ಗ್ರಾಂಸಿಯ ಮೇಲ್ಕಾಣಿಸಿದ ವಿಷಯಗಳಿಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವರು. ಭಾರತದಲ್ಲಿ ಸಬಾಲ್ಟರ್ನ್ ವರ್ಗಗಳ ಸ್ವಾಯತ್ತ ವಲಯಗಳು ಎಲೈಟ್ ರಾಜಕೀಯದ ಶಿಶುಗಳಾಗಿರಲಿಲ್ಲ ಮತ್ತು ಅವುಗಳ ಮೇಲೆ ಅವಲಂಬಿಸಿಕೊಂಡಿರಲಿಲ್ಲ ಎಂದು ಸಬಾಲ್ಟರ್ನ್ ಸ್ಟಡೀಸ್‍ನ ಪ್ರಥಮ ಸಂಪುಟದಲ್ಲಿ ರಣಜಿತ್ ಗುಹಾ ಅವರು ಬರೆದಿರುವುದು ಗಮನಾರ್ಹ. 


ಸಬಾಲ್ಟರ್ನ್‍ಗಳೂ ಅಂತಿಮವಾಗಿ ಆಡಳಿತಶಾಹಿಗಳ ನಿಯಂತ್ರಣಕ್ಕೊಳಪಡುತ್ತಾರೆ ಎನ್ನುವ ಗ್ರಾಂಸಿಯ ಸೈದ್ಧಾಂತಿಕತೆಯನ್ನು ಒಪ್ಪದಿರುವವರ ಪೈಕಿ ಖ್ಯಾತ ಇಂಗ್ಲಿಶ್ ಮಾಕ್ರ್ಸಿಸ್ಟ್ ಚರಿತ್ರೆಕಾರ ಇ.ಪಿ. ಥಾಮ್ ಸನ್ ಅವರು ಪ್ರಧಾನರು. ಸಬಾಲ್ಟರ್ನ್ ಸ್ಟಡೀಸ್ ಅಧ್ಯಯನದ ಪ್ರವರ್ತಕ ರಣಜಿತ್ ಗುಹಾ ಅವರು ಕೂಡ ಇದೇ ಸಾಲಿಗೆ ಬರುತ್ತಾರೆ. ಈ ಕುರಿತಂತೆ ಗುಹಾ ಅವರು ಎರಡು ವಲಯಗಳ ರಚನೆಯ ಬಗ್ಗೆ ವ್ಯಾಖ್ಯಾನಿಸಿದ್ದನ್ನೂ ಗಮನಿಸಬಹುದು.

18ನೆಯ ಶತಮಾನದ ಗ್ರಾಮೀಣ ಸಮಾಜ ಪ್ರಧಾನವಾದ ಇಂಗ್ಲೆಂಡಿನ ಚರಿತ್ರೆ ಬರವಣಿಗೆಗಳು ಮುಖ್ಯವಾಗಿ ಸ್ಥಳೀಯ ಭೂ ಒಡೆಯರ ಮನೆತನ ಹಾಗೂ ಅವರ ಎಸ್ಟೇಟ್‍ಗಳನ್ನೇ ಕೇಂದ್ರವಾಗಿರಿಸಿಕೊಂಡಿದ್ದವು. ಇದು ಮೇಲ್ವರ್ಗವು ತನ್ನ ಮೂಗಿನ ನೇರಕ್ಕೆ ಕಟ್ಟಿಕೊಟ್ಟ ಚರಿತ್ರೆ ಕ್ರಮವಾಗಿದೆ;

ಶ್ರೀಮಂತರು ಮತ್ತು ಎಲೈಟ್‍ಗಳ ‘ಮಹತ್ವವನ್ನು’ ಸಾರಿ ಹೇಳಿದ ಕ್ರಮವಿದು ಎಂದು ಇದರ ಬಗ್ಗೆ ತೀವ್ರವಾದ ಆಕ್ಷೇಪವನ್ನು ಥಾಮ್ಸನ್ ಅವರು ವ್ಯಕ್ತಪಡಿಸಿದರು. ಇಂಗ್ಲೆಂಡಿನ ಉನ್ನತ ವರ್ಗದವರ ಅದಿsಕಾರ, ದರ್ಪ ಹಾಗೂ ದೊಡ್ಡಸ್ತಿಕೆಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟ ಚರಿತ್ರೆ ಬರವಣಿಗೆ ಕ್ರಮ ಅದು ಎಂದು ಅವರು ಟೀಕಿಸಿದ್ದಾರೆ. ಬದಲಿಗೆ, ಜನಸಾಮಾನ್ಯರ ದೃಷ್ಟಿಕೋನವು ಚರಿತ್ರೆ ರಚನೆಯ ಬರವಣಿಗೆಯ ಸಂದರ್ಭದಲ್ಲಿ ಮಹತ್ವ ಪಡೆಯುತ್ತದೆ ಎನ್ನತ್ತಾ, ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಖ್ಯಾತರೊಂದಿಗಿಟ್ಟುಕೊಂಡ ಅಸಮಾಧಾನಗಳನ್ನೂ ಪರಿಗಣಿಸಬೇಕೆಂದು ಅವರು ಸಲಹೆ ಮಾಡುತ್ತಾರೆ. ಆ ಮೂಲಕ ರಾಜಕಾರಣ ಮತ್ತು ಸಂಸ್ಕøತಿಗಳೆರಡೂ ವಿಚಾರಗಳಲ್ಲಿ ಬಡವರು ಮತ್ತು ಗಣ್ಯರು ಭಿನ್ನಭಿನ್ನವಾಗಿರಿಸಿಕೊಂಡ ಸಂಬಂಧಗಳನ್ನು ಪರಿಗಣಿಸಬೇಕು ಎಂದು ಅಬಿsಪ್ರಾಯಪಟ್ಟಿದ್ದಾರೆ.

ಶೋಷಿತರು ಯಾವಾಗಲೂ ಅಧಿಕಾರಸ್ಥರ ವಲಯದ ಭಾಗವಾಗಿದ್ದು ಅವರಿಂದ ಯಾವಾಗಲೂ ಶೋಷಣೆಗೆ ಒಳಪಡುತ್ತಾರೆ ಎನ್ನುವ ಗ್ರಾಂಸಿಯ ವಾದಕ್ಕಿಂತ ಭಿನ್ನವಾದ ವಾದವಿದು. “ಆಳುವ ವರ್ಗದ ಪ್ರಭುತ್ವದ ಯಜಮಾನಿಕೆ ಏನೇ ಇದ್ದರೂ ಅದು ಬಡವರ್ಗವು ಮಾಡುತ್ತಿರುವ ಯಾವ ಕೆಲಸದ ಮೇಲೂ ಪರಿಣಾಮ ಬೀರಿಲ್ಲ. ಅದು ಬಡವರ್ಗದ ವಿರಾಮ ಅಥವಾ ಅವರು ಅನುಸರಿಸುತ್ತಿರುವ ವಿಧಿವಿಧಾನಗಳ ಮೇಲಾಗಲಿ ಅಥವಾ ಅವರ ಸುಖ ಸಂತೋಷಗಳ ಮೇಲಾಗಲಿ ಯಾವ ಪರಿಣಾಮವನ್ನು ಬೀರಿಲ್ಲ” ಎಂದು ಥಾಮ್ ಸನ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಕಾರಣಕ್ಕಾಗಿ ಯಜಮಾನಿಕೆ ಎನ್ನುವ ಅಂಶವು ಬಹಳ ಜಟಿಲವಾಗಿರಲಿಲ್ಲ ಅಥವಾ ಸ್ವಯಂಚಾಲಿತವಾಗಿರಲಿಲ್ಲ ಅಥವಾ ಅದು ಎಲ್ಲವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರಲಿಲ್ಲ. ಬದಲಿಗೆ, ಪ್ರಭುತ್ವ ಮತ್ತು ದಬ್ಬಾಳಿಕೆಗೆ ಒಳಗುಮಾಡುವ ಸಂಬಂಧಗಳ ಸಂರಚನೆಯನ್ನು ರಚಿಸಿಕೊಂಡ ವಾಸ್ತುಶಿಲ್ಪ ಅದು ಎಂದು ಥಾಮ್ ಸನ್ ವ್ಯಂಗ್ಯವಾಡಿದ್ದಾರೆ.

ಆ ವಾಸ್ತುಶಿಲ್ಪದಡಿಯಲ್ಲಿ ಭಿನ್ನವಾದ ದೃಶ್ಯಗಳನ್ನು ಸಂಯೋಜಿಸಲಾಗಿದೆ ಮತ್ತು ಬೇರೆ ಬೇರೆ ನಾಟಕಗಳನ್ನು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಕುಟುಕಿದ್ದಾರೆ. ರೇಮಂಡ್ ವಿಲಿಯಮ್ಸ್ ಅವರು ಕೂಡ ಇದೇ ಬಗೆಯ ಅಬಿsಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ನೋಡಬಹುದು. ಈ ರೀತಿಯಲ್ಲಿ ಥಾಮ್ ಸನ್, ರೇಮಂಡ್ ವಿಲಿಯಮ್ಸ್ ಮತ್ತು ರಣಜಿತ್ ಗುಹಾ ಅವರು ಪ್ರಭುತ್ವದ ಯಜಮಾನಿಕೆಯು ಜಟಿಲವಾಗಿರುತ್ತದೆ, ದೃಢವಾಗಿರುತ್ತದೆ ಎಂದು ಗ್ರಾಂಸಿಯು ಹೇಳಿರುವುದಕ್ಕೆ ಭಿನ್ನಾಭಿಪ್ರಾಯಗಳನ್ನು ಸೂಚಿಸುತ್ತ ಅದು ನಿರಂತರ ಬದಲಾವಣೆಗೆ ಒಳಗಾಗುವ ಪ್ರಕ್ರಿಯೆಯನ್ನು ಹೊಂದಿದೆ ಮತ್ತು ಕೆಳಸ್ತರಗಳನ್ನು ಅದು ತೀವ್ರವಾಗಿ ಬಾಧಿಸಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


“ಅಧೀನಕ್ಕೊಳಪಡಿಸುವುದು” ಎನ್ನುವ ಪ್ರಕ್ರಿಯೆ ಜೀವಂತವಾಗಿರುವುದೇ ಅದರೊಳಗಿರುವ ಸಂಬಂಧಗಳಿಂದ ಎಂದು ಖ್ಯಾತ ರಾಜಕೀಯ ಶಾಸ್ತ್ರಜ್ಞ ಪಾರ್ಥ ಚಟರ್ಜಿ ಅವರು ಗುರುತಿಸುತ್ತಾರೆ. ಅಧೀನಗೊಂಡ ವರ್ಗಗಳು ಅಧೀನಕ್ಕೊಳಗಾಗದಿದ್ದರೆ ಅಧೀನಕ್ಕೊಳಪಡಿಸುವ ವರ್ಗಗಳು ಇರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಬಾಲ್ಟರ್ನ್‍ಗಳ ಸ್ವಾಯತ್ತತೆ (ಅಟಾನಮಿ) ಇಲ್ಲದಿದ್ದರೆ ದಬ್ಬಾಳಿಕೆ ಮಾಡುವವರಿಗೂ ತಮ್ಮ ಐಡೆಂಟಿಟಿ ಇರುವುದಿಲ್ಲ. ಒಂದು ವೇಳೆ ಅಧೀನಕ್ಕೊಳಪಟ್ಟ ಸ್ವಾಯತ್ತವಲಯಗಳಿಗೆ(ಶೋಷಿತರು ಅಥವಾ ಸಬಾಲ್ಟರ್ನ್‍ಗಳು) ತಮ್ಮದೇ ಆದ ಗುರುತು/ಐಡೆಂಟಿಟಿ ಇಲ್ಲದಿದ್ದರೆ ಅವುಗಳು ಸದಾ ಅಧಿಕಾರಸ್ಥರ ಬಾಲಂಗೋಚಿಗಳು ಎಂದು ಅರ್ಥೈಸಬೇಕಾಗುತ್ತದೆ.

ಆದರೆ ಚರಿತ್ರೆಯಲ್ಲಿ ಅಧೀನಕ್ಕೊಳಪಟ್ಟ ಸಮುದಾಯಗಳು ಅಧೀಕಾರಸ್ಥ ಸಮುದಾಯ/ವಲಯಗಳ ವಿರುದ್ಧ ಬಂಡೆದ್ದ ಅಥವಾ ಸಮರ ಸಾರಿರುವ ಅನೇಕ ಘಟನೆಗಳಿರುವುದರಿಂದ ಅಧೀನಕ್ಕೊಳಪಟ್ಟ ಎಂದು ಭಾವಿಸಲಾದ ವಲಯಗಳಿಗೆ ಸ್ವಾಯತ್ತ ಇರುತ್ತದೆ. ಅವುಗಳು ಪ್ರಬಲರನ್ನು ಪ್ರಶ್ನಿಸುವ/ಪ್ರಬಲರ ವಿರುದ್ಧ ಬಂಡೇಳುವ ಸಾಮಥ್ರ್ಯವಿರುವ ವಲಯ/ಸಮುದಾಯಗಳಾಗಿರುವುದರಿಂದ ಅವುಗಳಿಗೆ ತಮ್ಮದೇ ಆದ ಐಡೆಂಟಿಟಿ ಇರುತ್ತದೆ. ಪ್ರಬಲವರ್ಗಗಳ ಜೀವನಚರಿತ್ರೆಯನ್ನು ಅರ್ಥವತ್ತಾಗಿ ಚಿತ್ರಿಸಲು ಅನುಕೂಲವಾಗುವಂತೆ ಸಬಾಲ್ಟರ್ನ್‍ಗಳನ್ನು ಚರಿತ್ರೆ ಬರವಣಿಗೆ ಸಂದರ್ಭದಲ್ಲಿ ಬಳಸಿಕೊಳ್ಳಲಾಯಿತು ಎಂದು ಪಾರ್ಥ ಚಟರ್ಜಿ ಅವರು ರಣಜಿತ್ ಗುಹಾ ಅವರನ್ನು ಬೆಂಬಲಿಸಿರುವುದು ಗಮನಾರ್ಹವಾಗಿದೆ.


ಸ್ವತಂತ್ರವಾಗಿರುವ ಸ್ವಾಯತ್ತತೆ ಹೊಂದಿದ ಸಬಾಲ್ಟರ್ನ್ ವಲಯವೊಂದರ ಬಗ್ಗೆ ಗ್ಯಾನೇಂದ್ರ ಪಾಂಡೆ ಸಬಾಲ್ಟರ್ನ್ ಸ್ಟಡೀಸ್‍ನ ಪ್ರಥಮ ಸಂಪುಟದಲ್ಲಿನ ತಮ್ಮ ಲೇಖನದಲ್ಲಿ ವಿವರಿಸಲು ಯತ್ನಿಸಿದ್ದಾರೆ. 1919-22ರ ಹೊತ್ತಿಗೆ ರೈತರ ಸ್ವತಂತ್ರ ಚಳವಳಿಯು ಔಧ್ ಪ್ರದೇಶದಲ್ಲಿ ವ್ಯಾಪಕವಾಗಿದ್ದಿತು. ಚಳವಳಿಯ ಆರಂಭದ ಹಂತದಲ್ಲಿ ರೈತರು ತಮ್ಮ ಪ್ರಬಲ ವಿರೋಧವನ್ನು ಅಲ್ಲಿನ ಜಮೀನ್ದಾರರ ವಿರುದ್ಧ ಪ್ರದರ್ಶಿಸಿದ್ದರು. ನಂತರ ತಮ್ಮ ಚಳವಳಿಯನ್ನು ಬ್ರಿಟಿಶರ ವಿರುದ್ಧ ಕೇಂದ್ರೀಕರಿಸಿದರು. ಜಮೀನ್ದಾರರ ವಿರುದ್ಧ ನಡೆದ ಸಂಘರ್ಷವು ಹಿಂಸಾತ್ಮಕವಾಗಿದ್ದವು. ಚಳವಳಿಯ ಕೊನೆಯ ಹಂತದಲ್ಲಿ ಗಾಂಧಿ-ನೆಹರು ಅವರ ನೇತೃತ್ವದ ಮಧ್ಯಮವರ್ಗದ ರಾಷ್ಟ್ರೀಯವಾದಿಗಳು ‘ರಾಷ್ಟ್ರೀಯ ಐಕ್ಯತೆ’ ಹಾಗೂ ‘ಗಾಂಧಿಯ ಅಹಿಂಸಾ ಚಳವಳಿ’ಯನ್ನು ಬಲಿಷವಿಗೊಳಿಸಲು ರೈತರ ಚಳವಳಿಯನ್ನು ಬಲಹೀನಗೊಳಿಸಲು ಯತ್ನಿಸಿದರು. ಅಂತಿಮವಾಗಿ ಜಮೀನ್ದಾರರ ವಿರುದ್ಧದ ರೈತರ ಹಿಂಸಾತ್ಮಕ ಚಳವಳಿಯನ್ನು ದಮನ ಮಾಡಲು ಇವರು ಯತ್ನಿಸಿದ್ದನ್ನು ಗ್ಯಾನೇಂದ್ರ ಪಾಂಡೆ ದಾಖಲಿಸಲು ಯತ್ನಿಸಿದ್ದಾರೆ.


1922-23ರ ಹೊತ್ತಿಗೆ ದಕ್ಷಿಣ ಗುಜರಾತಿನಲ್ಲಿ ನಡೆದ ದೇವಿ ಚಳವಳಿಯ ಬಗ್ಗೆ ಸಂಶೋಧನೆ ಮಾಡಿದ ಡೇವಿಡ್ ಹರ್ಡಿಮನ್ ಅವರು ಗ್ಯಾನೇಂದ್ರ ಪಾಂಡೆ ಅವರ ಸಂಶೋಧನೆಗೆ ಪೂರಕ ಮಾಹಿತಿಯನ್ನು ಒದಗಿಸಿದ್ದಾರೆ. ಗುಜರಾತಿನ ಸಂದರ್ಭದಲ್ಲಿ ಆದಿವಾಸಿಗಳ ನೇತೃತ್ವದಲ್ಲಿ ನಡೆದ ಸ್ವತಂತ್ರ ಸ್ವಾಯತ್ತ ಚಳವಳಿಯಿದು. ಅಲ್ಲಿನ ಆದಿವಾಸಿ ರೈತರು ಪಾರ್ಸಿ ಜಮೀನ್ದಾರರ ಆರ್ಥಿಕ ಶೋಷಣೆಯನ್ನು ಕೊನೆಗಾಣಿಸಲು ಹಾಗೂ ಸಾರಾಯಿ ಮಾರಾಟಗಾರರ ವಿರುದ್ಧ ಉಗ್ರ ಹೋರಾಟವನ್ನು ಹಮ್ಮಿಕೊಂಡಿದ್ದರು. ಔಧ್‍ನಲ್ಲಿ ಕಂಡ ಹಾಗೆಯೇ ಕಾಂಗ್ರೆಸ್‍ನ ಕಾರ್ಯಕರ್ತರು ರೈತರ ಈ ಹೋರಾಟದ ಮೇಲೆ ತಮ್ಮ ಪ್ರಭಾವವನ್ನು ಬೀರಲು ಯತ್ನಿಸಿದರು. ಆದಿವಾಸಿ ರೈತರಿಗೆ ಗಾಂದಿsಯ ಆದರ್ಶವನ್ನು ಹೇಳುತ್ತಾ ರೈತರು ಜಮೀನ್ದಾರರ ವಿರುದ್ಧ ಎತ್ತಿದ್ದ ಧ್ವನಿಯನ್ನು ತಣ್ಣಗೆ ಮಾಡಲು ಯತ್ನಿಸಿದರು. ಈ ಮೂಲಕ ಪಾರ್ಸಿ ಜಮೀನ್ದಾರರ ಹಿತರಕ್ಷಣೆಯನ್ನು ಮಾಡಲು ಇನ್ನಿಲ್ಲದ ಯತ್ನವನ್ನು ಮಾಡಿದರು.


1921-22ರ ಸಂದರ್ಭದಲ್ಲಿ ಯುನೈಟೆಡ್ ಪ್ರಾಂತ್ಯದ ಗೋರಖ್‍ಪುರದ ರೈತರು ಗಾಂದಿsಯ ಬಗ್ಗೆ ಇಟ್ಟುಕೊಂಡ ಪ್ರತೀಕಗಳಿಗೆ ಮೂಲ ಗಾಳಿಮಾತೆಂದು ಶಾಹಿದ್ ಅಮೀನ್ ಅವರ ಬರಹದಿಂದ ತಿಳಿಯುತ್ತದೆ. ಆ ಭಾಗದ ರೈತರ ಭಾವನೆ, ನಂಬುಗೆ ಮತ್ತು ಅಪೇಕ್ಷೆಗೆ ಅನುಗುಣವಾಗಿ ಅವರು ರೂಪಿಸಿಕೊಂಡ ಗಾಂದಿsಗೂ, ವಾಸ್ತವಿಕವಾದ ಕಾಂಗ್ರೆಸ್‍ನ ಗಾಂದಿsಯ ರಾಜಕೀಯ ಕಾರ್ಯಕ್ರಮಕ್ಕೂ ಅಥವಾ ಅವರ ಅನುಯಾಯಿಗಳು ಕಟ್ಟಿಕೊಡುವ ಗಾಂದಿsಯ ಚಿತ್ರಕ್ಕೂ ಯಾವುದೇ ಸಂಬಂಧಗಳಿರುವುದಿಲ್ಲ. ಗೋರಖ್‍ಪುರದ ರೈತರು ಕಟ್ಟಿಕೊಟ್ಟ ‘ಮಹಾತ್ಮನ’ ಪ್ರತೀಕವನ್ನು ಶಾಹಿದ್ ಅಮೀನ್ ಅವರು ಅನಾವರಣ ಮಾಡಿರುವುದು ಕುತೂಹಲಕಾರಿಯಾಗಿದೆ.


ಮೇಲ್ಕಂಡ ಮೂರು ಭಿನ್ನ ಘಟನೆಗಳಲ್ಲಿ ರೈತವರ್ಗವು ತನ್ನದೇ ಅನುಭವದಿಂದ ಕಂಡುಕೊಂಡ ಸ್ವತಂತ್ರ ಚಿಂತನೆಯ ಮೂಲಕ ತಮ್ಮ ಶೋಷಣೆಯ ವಿರುದ್ಧ ಹೋರಾಟದ ಮಾರ್ಗಗಳನ್ನು ಆವಿಷ್ಕಾರ ಮಾಡಿಕೊಂಡದ್ದನ್ನು ನಾವು ಗಮನಿಸಬಹುದು. ಎಲೈಟ್ ಮತ್ತು ಸಬಾಲ್ಟರ್ನ್ ಡೊಮೈನ್‍ಗಳು(ವಲಯಗಳು) ಸ್ವತಂತ್ರವಾಗಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ತಮ್ಮ ತಮ್ಮ ಉದ್ದೇಶಗಳಿಗಾಗಿ ಕೆಲಸಗಳನ್ನು ಮಾಡುತ್ತಿದ್ದರೂ, ರಣಜಿತ್ ಗುಹಾ ಅವರು ವಿವರಿಸಿದ ಹಾಗೆ ಕೆಲವೊಮ್ಮೆ ಅವು ಪರಸ್ಪರ ಒಂದೆಡೆ ನಿಂತು ಕೆಲಸ ಮಾಡಿದವು. ಸಬಾಲ್ಟರ್ನ್‍ಗಳ ಹೋರಾಟದ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್‍ನ ಮಧ್ಯಮವರ್ಗದ ಕಾರ್ಯಕರ್ತರ ಪ್ರವೇಶವನ್ನು ಇಂತಹ ಸಂದರ್ಭಗಳಲ್ಲಿ ಕಾಣಬಹುದಾಗಿದೆ. ಇವರು ಸಬಾಲ್ಟರ್ನ್ ಮತ್ತು ಎಲೈಟ್‍ಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದರು ಎಂದು ಡೇವಿಡ್ ಅರ್ನಾಲ್ಡ್ ಅಭಿಪ್ರಾಯ ಪಟ್ಟಿರುವುದನ್ನು ನಾವು ನೋಡಬಹುದು.

ಇದಕ್ಕೆ ಪ್ರತಿಯಾಗಿ ಸಬಾಲ್ಟರ್ನ್‍ಗಳು ತಮ್ಮ ಧ್ಯೇಯವನ್ನು ಪೂರ್ಣಗೊಳಿಸಲು ಎಲೈಟ್‍ಗಳ ಸಹಾಯ ಪಡೆದಿದ್ದನ್ನು ಮತ್ತು ಅಂತಹ ಸಂದರ್ಭದಲ್ಲಿ ಎಲೈಟ್‍ಗಳ ಹಿತಾಸಕ್ತಿಯನ್ನು ಸಬಾಲ್ಟರ್ನ್‍ಗಳು ಸಾಕಷ್ಟು ಬದಿಗೆ ಸರಿಸಿದ್ದನ್ನು ಚರಿತ್ರೆಕಾರ ಸುಮಿತ್ ಸರ್ಕಾರ್ ಅವರು ದಾಖಲಿಸಿದ್ದಾರೆ. ಬಂಗಾಳದ ಉದಾಹರಣೆಯನ್ನು ನೀಡುತ್ತ, ಸ್ವದೇಶಿ ಹಾಗೂ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಣನೀಯ ಪ್ರಮಾಣದ ಸ್ವಾಯತ್ತತೆಯನ್ನು ಪಡೆದಿದ್ದರು ಎನ್ನಲಾದ ಸಬಾಲ್ಟರ್ನ್ ವರ್ಗಗಳು ಎಲೈಟ್ ರಾಜಕಾರಣದಲ್ಲಿನ ಭಿನ್ನವರ್ಗಗಳನ್ನು ಗ್ರಹಿಸಿದ್ದನ್ನು ಕಾಣಬಹುದು. ಅವುಗಳ ಮೂಲಕ ತಮ್ಮ ಶೋಷಣೆಗೆ ಮುಕ್ತಿ ಹೇಳಲು, ತಮಗೆ ನ್ಯಾಯ ದೊರಕಿಸಿಕೊಳ್ಳಲು ಮತ್ತು ಸ್ವತಂತ್ರರಾಗಲು ಸಬಾಲ್ಟರ್ನ್‍ಗಳು ಹವಣಿಸಿದ್ದನ್ನು ನಾವು ಈ ಸಂದರ್ಭದಲ್ಲಿ ಗುರುತಿಸಬಹುದಾಗಿದೆ.

ಈ ಮೂಲಕ ಸಬಾಲ್ಟರ್ನ್‍ಗಳು ಎಲೈಟ್‍ಗಳ ‘ಸೂಕ್ತ ಮಾರ್ಗದರ್ಶನದ’ ಹೊರತಾಗಿ(ಇದ್ದರೂ ಅಲ್ಪಪ್ರಮಾಣದಲ್ಲಿ) ವಸಾಹತುಶಾಹಿ ಸರಕಾರದ ವಿರುದ್ಧ ಸುದೀರ್ಘ ಕಾಲಘಟ್ಟದವರೆಗೆ ಸಮರ ಸಾರಲು ಸಾಧ್ಯವಾದ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ.

(ಹಿಂದಿನ ಸಂಚಿಕೆಯಲ್ಲಿ ಗ್ರಾಂಸಿಯ ಉಗಮ ಸಿದ್ದಾಂತದ ಉಗಮ ಮತ್ತು ವಿಕಾಸ)