ಡಿ.ಕೆ.ಸಾಹೇಬರೇ ಇವರನ್ನೆಲ್ಲಕಟ್ಟಿಕೊಂಡು ಮುಖ್ಯಮಂತ್ರಿ ಆಗ್ತೀರಾ..?

ಡಿ.ಕೆ.ಸಾಹೇಬರೇ ಇವರನ್ನೆಲ್ಲಕಟ್ಟಿಕೊಂಡು ಮುಖ್ಯಮಂತ್ರಿ ಆಗ್ತೀರಾ..?

ಸೂರ್ಯ ಮುಕುಂದರಾಜ್  ಅನ್ನುವ ವ್ಯಕ್ತಿ ದಲಿತರು ಮತ್ತು ಮುಸ್ಲಿಮರು  ತಮ್ಮ ಮತಗಳನ್ನು ಮಾರಿಕೊಳ್ಳುವವರು ಎಂದು ತಮ್ಮ ಮುಖಪುಟದಲ್ಲಿ ಬರೆದು ಕೊಂಡಿದ್ದಾರೆ.  ಆಮೂಲಕ  ಆ ಎರಡು ಸಮುದಾಯಗಳನ್ನು ಅವಮಾನಿಸಿದ್ದಾರೆ. ಈ ವ್ಯಕ್ತಿ  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ  ರಾಜ್ಯ ಮಟ್ಟದ  ಯಾವುದೋ ಒಂದು ಹುದ್ದೆಯಲ್ಲಿದ್ದಾರೆಂದು ಹೇಳಲಾಗಿದೆ.

ಸೂರ್ಯ ಮುಕುಂದರಾಜ್ ರವರ  ಧರ್ಮ ಜಾತಿ ಯಾವುದು ಎಂದು  ನಮಗೆ ಗೊತ್ತಿಲ್ಲ.  ಅದನ್ನು  ತಿಳಿದುಕೊಳ್ಳುವ ಅವಶ್ಯಕತೆ  ನಮಗೆ ಇಲ್ಲವಾದರೂ,  ಆ ಬಗ್ಗೆ ಮಾತನಾಡುವ ಸಂದರ್ಭ ಒದಗಿ ಬಂದಿದೆ. ಆದ್ದರಿಂದ  ಸೂರ್ಯ ಮುಕುಂದರಾಜ್ ರವರ,   ಜಾತಿಯವರು ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕುವುದಿಲ್ಲವೇ ? ಬೇರೆ ಪಕ್ಷಗಳಲ್ಲಿ ಇಲ್ಲವಾ ?  ಅಥವಾ ಇವರ ಸಮುದಾಯದವರು ಯಾವತ್ತು ಹಣಕ್ಕಾಗಿ ಮತ ಮಾರಿಕೊಂಡಿಲ್ಲವಾ..? ಎಂಬುದನ್ನು ಅವರೆ ಸಾಬೀತು ಪಡಿಸಬೇಕಿದೆ. ಇಲ್ಲದೇ ಇದ್ದಲ್ಲಿ ಅವರು  ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಪಕ್ಷದಿಂದ ಹೊರಹೋಗಬೇಕು.  ಏಕೆಂದರೆ ಕಾಂಗ್ರೆಸ್ ಪಕ್ಷ ಬದುಕಿರುವುದು ಕೇವಲ  ದಲಿತರು ಮತ್ತು ಮುಸ್ಲಿಮರಿಂದ ಮಾತ್ರ.

ಒಂದು ವೇಳೆ  ಈ ಎರಡು ಸಮುದಾಯಗಳು ತಿರುಗಿ ಬಿದ್ದರೆ,  ಕಾಂಗ್ರೆಸ್ ಪಕ್ಷದ  ಎಲುಬಿನ ಕಿಲುಬು  ಉಳಿಯುವುದಿಲ್ಲ. ಅದು  ರಾಜ್ಯ ಮತ್ತು ದೇಶದಲ್ಲು ಸಹ .  ಹೀಗಿದ್ದರೂ ಕಾಂಗ್ರೆಸ್ ಕಛೇರಿಯಲ್ಲಿ ಕುಳಿತು, ಆ ಎರಡು ಸಮುದಾಯಗಳನ್ನು ಅವಮಾನಕ್ಕೆ ಗುರಿ ಮಾಡಿ  ಮುಖ ಪುಟದಲ್ಲಿ ಬರೆಯುವುದೆಂದರೆ ನಿಸಂದೇಹವಾಗಿ, ಸೂರ್ಯ ಮುಕುಂದರಾಜ್ ರವರು ಸಂಘ ಪರಿವಾರದ ಸೂಸೈಡ್ ಬಾಂಬರ್  ಎಂಬ  ಅನುಮಾನಗಳು  ಸಹಜವಾಗಿ ಬರುತ್ತವೆ. ಇನ್ನೂ  ಕಾಂಗ್ರೆಸ್ನಲ್ಲಿ ಅಳಿದುಳಿರುವ  ದಲಿತ ಮುಸ್ಲಿಮರನ್ನು ಅವಮಾನಿಸಿ ಅವರನ್ನು ಕಾಂಗ್ರೆಸ್ ನಿಂದ ಓಡಿಸಲು  ಸೂರ್ಯ ಮುಕುಂದರಾಜ್ ರಂತವರು ವ್ಯವಸ್ಥಿತವಾಗಿ  ಸಂಚು ಮಾಡುತ್ತಿದ್ದಾರೇಯೇ  ಎಂಬ ಪ್ರಶ್ನೆಗಳು  ಕೂಡ ಸಾರ್ವಜನಿಕವಾಗಿ ಕೇಳಿಸುತ್ತಿವೆ. ಇದನ್ನು  ಕೆ.ಪಿ.ಸಿ.ಸಿ. ಗಂಭೀರವಾಗಿ ಪರಿಗಣಿಸಬೇಕಿದೆ .

ಏಕೆಂದರೆ ಕಾಂಗ್ರೆಸ್ ಪಕ್ಷದ ತಾಯಿ ಬೇರು ಎನಿಸಿಕೊಂಡಿರುವ ಅಸ್ಪೃಷ್ಯ ಸಮುದಾಯಗಳನ್ನು ಈಗಾಗಲೇ ನಿರ್ಲಕ್ಷಿಸಲಾಗಿದೆ. ನೂತನ ಅಧ್ಯಕ್ಷ ಮತ್ತು ಕಾರ್ಯದ್ಯಕ್ಷ ಹುದ್ದೆಗೆ ಪದಾಧಿಕಾರಿಗಳನ್ನು ನೇಮಿಸುವಾಗ ಅಸ್ಪೃಷ್ಯ ಸಮುದಾಯಗಳಲ್ಲಿ  (  ಎಡಗೈ ಮತ್ತು ಬಲಗೈ ) ನ  ಒಬ್ಬರನ್ನು ಕೂಡ ಪರಿಗಣಿಸಲಿಲ್ಲ. ಹಾಗೆಯೇ ಕಳೆದ ವಾರವಷ್ಟೆ ಕೆ.ಪಿ.ಸಿ.ಸಿ. ಅಧ್ಯಕ್ಷ  ಡಿ.ಕೆ.ಶಿವಕುಮಾರ್  ರವರೇ  ಬಿಡುಗಡೆ ಗೊಳಿಸಿದ ಸಾಮಾಜಿಕ ಜಾಲತಾಣ  ರಾಜ್ಯ ಸಂಯೋಜನಾ ಸಮಿತಿಯಲ್ಲು ಸಹ ಒಬ್ಬೆ ಒಬ್ಬ ಅಸ್ಪೃಷ್ಯ  ಸಮುದಾಯದ ಪ್ರತಿನಿಧಿ ಇಲ್ಲ.  ಈ ಲೇಖನ ಬರೆಯುವ ಸಂದರ್ಭದಲ್ಲಿ ಬಂದ ಮಾಹಿತಿಯಂತೆ, ಎಲ್ಲೂ  ಸಾರ್ವಜನಿಕವಾಗಿ  ಕಾಣಿಸಿಕೊಳ್ಳದ  ಒಬ್ಬಿಬ್ಬರು  ಕೆ.ಪಿ.ಸಿ.ಸಿ.ಯಲ್ಲಿ ಇದಾರಂತೆ .  ಆದರೆ ಇವರು  ಎಂದೂ ಸಮುದಾಯದೊಂದಿಗೆ  ಗುರ್ತಿಸಿಕೊಂಡವರಲ್ಲ.  

ಕಳೆದ 70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಿ.ಬಸವಲಿಂಗಪ್ಪ, ಎನ್.ರಾಚಯ್ಯ ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಡಾ||.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ ರಂತಹ ಹಿರಿಯ ತಲೆಗಳು ಇದ್ದರೂ ಸಹ ಒಮ್ಮೆಯೂ ಇವರುಗಳಲ್ಲಿ ಒಬ್ಬರನ್ನಾದರೂ ಮುಖ್ಯಮಂತ್ರಿಯನ್ನಾಗಿ  ಮಾಡಲಿಲ್ಲಿವೆಂಬ ಕಾರಣಕ್ಕೆ ಅಸ್ಪೃಷ್ಯರು ಸಮುದಾಯಗಳು ಈಗಾಗಲೇ ವೆಗ್ರಗೊಂಡಿವೆ.  ಅದರ ಪರಿಣಾಮವೆ ಕಳೆದ ವಿಧಾನ ಸಭಾ  ಮತ್ತು  ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷ  ಅಧಿಕಾರದಿಂದ  ದೂರ ಉಳಿಯಬೇಕಾಯಿತು., ಎಂಭತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಅಸ್ಪೃಷ್ಯರು ಮತ್ತು ಸುಮಾರು ಒಂದು ಕೋಟೆಯಷ್ಟು ಜನಸಂಖ್ಯೆ ಇರುವ  ಮುಸ್ಲಿಮ ಸಮುದಾಯಕ್ಕೆ  ಒಮ್ಮೆಯಾದರೂ  ಮುಖ್ಯಮಂತ್ರಿ ಸ್ಥಾನವನ್ನು  ಕಾಂಗ್ರೆಸ್ ಪಕ್ಷ ನೀಡಬೇಕಿತ್ತು.  ಈ ಕಾರಣದಿಂದಲೇ ಆಕ್ರೋಶಿತ ಸಮುದಾಯವನ್ನು  ಮತ್ತೆ  ತನ್ನ ತೆಕ್ಕೆಗೆ ತೆಗೆದುಕೊಂಡು  ಕಾಂಗ್ರೆಸ್ ಪಕ್ಷವನ್ನು ಬಲಿಷ್ಟ ಗೊಳಿಸಲು  ಡಿ.ಕೆ.ಶಿವಕುಮಾರ್  ರವರು ಹಗಲಿರುಳು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ, ಸೂರ್ಯ ಮುಕುಂದರಾಜ್ ರಂತವರು  ದಲಿತರು ಮತ್ತು ಮುಸ್ಲಿಮರ ವಿರುದ್ದ ವಿಷಕಾರುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಶ್ರೇಯಸ್ಕರವಲ್ಲ. ಡಿ.ಕೆ.ಶಿವಕುಮಾರ್  ರವರು ಇಂತಹ  ಬೇಜವಾಬ್ದಾರಿ ವ್ಯಕ್ತಿಗಳನ್ನು  ಕಾಂಗ್ರೆಸ್ ಪಕ್ಷದ  ಜವಾಬ್ದಾರಿ ಸ್ಥಾನಗಳಿಂದ  ಕೂಡಲೇ ಬಿಡುಗಡೆಗೊಳಿಸಬೇಕಿದೆ. 

ಕಾಂಗ್ರೆಸ್ ಪಕ್ಷ  ಇಂದಿನ ಸ್ಥಿತಿಗೆ ಬಿ.ಜೆ.ಪಿ.  ಕಾರಣ ಎನ್ನುವುದಕ್ಕಿಂತಲೂ  ಕಾಂಗ್ರೆಸ್ ಪಕ್ಷದ ನಾಯಕತ್ವವೇ  ಕಾರಣ ಎಂಬುದನ್ನು,  ಆಪಕ್ಷದ ನಾಯಕತ್ವ  ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಕಳೆದ 70 ವರ್ಷಗಳಲ್ಲಿ ಆಪಕ್ಷದ ನಾಯಕತ್ವ  ಕಾಂಗ್ರೆಸ್ನ್ನು  ತನ್ನ ಸಂವಿಧಾನ  ಮತ್ತು  ಕಾರ್ಯಕ್ರಮಗಳಡಿಯಲ್ಲಿ  ಸಂಘಟಿಸುವ  ಗೋಜಿಗೆ ಹೋಗಲಿಲ್ಲ. ಈಗಲೂ  ತನ್ನ ಕೆಲಸ  ಕಾಂಗ್ರೆಸ್ ಮಾಡುತ್ತಿಲ್ಲ.  ಆದರೆ   ಬಿ.ಜೆ.ಪಿ.  ಹಾಗಲ್ಲ  ವಿಶಾಲ ತಳಹದಿಯಲ್ಲಿ  ಆಪಕ್ಷದಲ್ಲಿ ಕಾರ್ಯಕರ್ತರ ಪಡೆ ಇದೆ  ಸಂಘಪರಿವಾರದ  ಬೆಂಬಲವಿದೆ  ಆಕಾರಣಕ್ಕೆ ಅದು ಬಲಿಷ್ಟವಾಗಿದೆ.  ಇದನ್ನು ತಿಳಿದುಕೊಳ್ಳದ ಸೂರ್ಯ ಮುಕುಂದರಾಜ್ ರಂತ ತಿಳಿಗೇಡಿಗಳು  ದಲಿತರು ಮತ್ತು ಮುಸ್ಲಿಮರ ವಿರುದ್ದ  ವಿಷಕಾರುತ್ತ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಲು ನಿಂತಿರುವುದು ವಿಷಾದನಿಯ. ಡಿ.ಕೆ.ಶಿವಕುಮಾರ್ ರವರು ಇಂತವರನ್ನು ಕಟ್ಟಿಕೊಂಡು ಮುಖ್ಯಮಂತ್ರಿಯಾಗಲು ಹೊರಟ್ಟಿದ್ದಾರೆ. ಆದ್ದರಿಂದ ಡಿ.ಕೆ. ಸಾಹೇಬರು  ಬಹುಬೇಗ  ಎಚ್ಚರಗೊಳ್ಳುವುದು ಅನಿವಾರ್ಯ.  
                                                                                                                                                                                                                                                                                                                                ಆನೂಡಿ  ನಾಗರಾಜ್ 
                                                                                                                                                  ನಂದಿನಿ. ಆರ್