ಪುಟ್ಟ ಲಂಕಾದ ಮೇಲೆ ಆರ್ಥಿಕತೆ ಮತ್ತೆ ಕಟ್ಟುವ ಸವಾಲು

ಪುಟ್ಟ ಲಂಕಾದ ಮೇಲೆ ಆರ್ಥಿಕತೆ ಮತ್ತೆ ಕಟ್ಟುವ ಸವಾಲು

ಭಯೋತ್ಪಾದನಾ ದಾಳಿಯಿಂದಾಗಿ ಇತ್ತೀಚೆಗೆ ಶ್ರೀಲಂಕಾ ಅಂತಾರಾಷ್ಟ್ರೀಯವಾಗಿ ಸುದ್ದಿಯಲ್ಲಿದೆ. ಇದು 2008ರ ಮುಂಬೈ ದಾಳಿ ನಂತರ ಉಪಖಂಡದಲ್ಲಿ ನಡೆದ ಬಹುದೊಡ್ಡ ಭಯೋತ್ಪಾದನಾ ದಾಳಿ .

ಪ್ರವಾಸೋದ್ಯಮವೇ ಬಂಡವಾಳವಾದ ದ್ವೀಪ ರಾಷ್ಟ್ರ ಸರಣಿ ಸ್ಫೋಟಗಳಿಂದಾಗಿ ಈಗ ನಲುಗಿಹೋಗಿದೆ. ಸುಮಾರು 65 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣ ಇರುವ ಈ ಪುಟ್ಟ ರಾಷ್ಟ್ರ ಸುಮಾರು 2 ಕೋಟಿ ಜನಸಂಖ್ಯೆ ಹೊಂದಿದೆ. ಅಂದರೆ ಈ ಎರಡೂ ಮಾನದಂಡಗಳಲ್ಲಿ ನಮ್ಮ ಅಸ್ಸಾಂಗಿಂತಲೂ ಚಿಕ್ಕ ರಾಷ್ಟ್ರ ಶ್ರೀಲಂಕಾ.

ಭಾರತೀಯ ಮಹಾಕಾವ್ಯಗಳಲ್ಲೊಂದಾದ ರಾಮಾಯಣದೊಂದಿಗೆ ತಳುಕು ಹಾಕಿಕೊಂಡಿರುವ ಶ್ರೀಲಂಕಾಕ್ಕೆ ಬೌದ್ಧ ಧರ್ಮ ಭಾರತದಿಂದಲೇ ಪ್ರವೇಶಿಸಿತು. ಕ್ರಿಸ್ತಪೂರ್ವದಲ್ಲಿ ನಡೆದ ಬೃಹತ್ ಬೌದ್ಧ ಸಮಾವೇಶಗಳಿಗೆ ಲಂಕೆ ಆತಿಥ್ಯ ವಹಿಸಿತ್ತು. ಆಧುನಿಕ ಯುಗದಲ್ಲಿ ಭಾರತ ಉಪಖಂಡದಂತೆ ಬ್ರಿಟಿಷ್ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟ ಶ್ರೀಲಂಕಾ 1948ರಲ್ಲಿ ಸ್ವತಂತ್ರಗೊಂಡಿತ್ತು. ನಂತರದ ದಶಕಗಳಲ್ಲಿ ತಮಿಳು ಈಳಂ ಸಂಘರ್ಷಕ್ಕೆ ಸಾಕ್ಷಿಯಾದ ಶ್ರೀಲಂಕಾದಲ್ಲಿ ಶಾಂತಿಸ್ಥಾಪನೆಯಾಗಿತ್ತು.

ಪ್ರವಾಸ ಆಕರ್ಷಣೆ: ಮನಮೋಹಕ ಕರಾವಳಿ ತೀರಗಳು, ನೈಸರ್ಗಿಕ ಸಂಪದ್ಭರಿತ ತಾಣಗಳನ್ನು ಹೊಂದಿರುವ ಶ್ರೀಲಂಕಾ ಪ್ರವಾಸಿಗರ ನೆಚ್ಚಿನ ಯಾತ್ರಾ ಕೇಂದ್ರ. ಇಲ್ಲಿನ ದಾಂಬುಲಾ ಗುಹಾಂತರ್ ದೇವಾಲಯ, ಯಾಲಾ ನ್ಯಾಷನಲ್ ಪಾರ್ಕ್, ಸಿಗಿರಿಯಾ ಮೌಂಟೇನ್, ಅರುಗಮ್ ಬೇ ಮುಂತಾದವು ಜಾಗತಿಕವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. 2019ರ ಆರಂಭದಲ್ಲಿ ಹೊರಬಿದ್ದ ಸಮೀಕ್ಷೆಯ ಅನುಸಾರ ಶ್ರೀಲಂಕಾ ವಿಶ್ವದ ಅತಿ ನೆಚ್ಚಿನ ಪ್ರವಾಸಿ ತಾಣವಾಗಿ ಹೊರಹೊಮ್ಮಿತ್ತು.

ಮೂರು ದಶಕಗಳ ಆಂತರಿಕ ಕಲಹ ಅಂತ್ಯಗೊಂಡ ನಂತರ 2008ರಲ್ಲಿ ವಾರ್ಷಿಕ ಐದು ಲಕ್ಷ ವಿದೇಶಿ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರೆ, 2018ರ ವೇಳೆಗೆ ಈ ಸಂಖ್ಯೆ ವಾರ್ಷಿಕ 25 ಲಕ್ಷಕ್ಕೆ ಏರಿತ್ತು. ದೇಶದ ಜಿಡಿಪಿಗೆ ಪ್ರವಾಸೋದ್ಯಮ ವಲಯದ ಕೊಡಗೆ ಶೇಕಡ 11ಕ್ಕಿಂತಲೂ ಹೆಚ್ಚು. ಅಲ್ಲದೆ 10 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಿದೆ ಇಲ್ಲಿನ ಪ್ರವಾಸೋದ್ಯಮ.

ಆದರೆ ಏಪ್ರಿಲ್ 21ರ ಈಸ್ಟರ್ ಭಾನುವಾರದಂದು ನಡೆದ ಭಯೋತ್ಪಾದನಾ ದಾಳಿಯಲ್ಲಿ 250ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಶ್ರೀಲಂಕಾ ಪ್ರವಾಸೋದ್ಯಮಕ್ಕೆ, ಆ ಮೂಲಕ ಆರ್ಥಿಕತೆಯ ಮೇಲೆ ಭಾರಿ ಪೆಟ್ಟು ಬಿದ್ದಿದೆ.

ಇಸ್ಲಾಮಿ ಭಯೋತ್ಪಾದನಾ ಸಂಘಟನೆ ಐಸಿಸ್, ದಾಳಿಯ ಹೊಣೆ ಹೊತ್ತಿದ್ದು, ಸಿರಿಯಾದಲ್ಲಾದ ಹಿನ್ನಡೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಹೇಳಿದೆ. ಇವತ್ತು ಭಯೋತ್ಪಾದನೆಯ ಜಾಲಗಳು ಜಾಗತಿಕವಾಗಿ ವ್ಯಾಪಕವಾಗಿದ್ದು ಇದರ ಸವಾಲನ್ನು ಅಮೇರಿಕ, ಫ್ರಾನ್ಸ್ ನಂತಹ ಸೋಕಾಲ್ಡ್ ಮುಂದುವರಿದ ರಾಷ್ಟ್ರಗಳಲ್ಲದೆ ಮುಂದುವರಿಯುತ್ತಿರುವ ರಾಷ್ಟ್ರಗಳು ಸಹ ಎದುರಿಸುತ್ತಿವೆ. ಭಯೋತ್ಪಾದನೆಯನ್ನು ಜಾಗತಿಕವಾಗಿ ಒಗ್ಗೂಡಿ ಎದುರಿಸುವ, ಭಯೋತ್ಪಾದನೆಗೆ ಪರೋಕ್ಷವಾಗಿ ಬೆಂಬಲಿಸುವ ದೇಶಗಳನ್ನು ಏಕಾಂಗಿಯಾಗಿಸುವ ಪ್ರಯತ್ನಗಳು ಬಲಗೊಳ್ಳುತ್ತಿವೆ. ಈ ಬೆಳವಣಿಗೆಯನ್ನು ಗಮನಿಸಿಯೋ ಏನೋ, ಚೀನಾ ಕೂಡಾ ತನ್ನ ಪಟ್ಟು ಸಡಿಲಿಸಿದೆ. ಭಯೋತ್ಪಾದನಾ ಮಾಸ್ಟರ್ ಮೈಂಡ್, ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಲು ಒಡ್ಡಿದ್ದ ತಡೆಯನ್ನು ಚೀನಾ ಇದೀಗ ಹಿಂಪಡೆದಿದೆ. ಜಾಗತಿಕವಾಗಿ ಬೃಹತ್ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಿರುವ ಭಾರತ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲೂ ರಾಜತಾಂತ್ರಿಕ ಗೆಲುವು ಪಡೆದಿದೆ.

ಆರ್ಥಿಕತೆ ಮತ್ತೆ ಕಟ್ಟುವತ್ತ ಶ್ರೀಲಂಕಾ: ಇತ್ತ ಲಂಕಾದಲ್ಲಿ ಸರಣಿ ದಾಳಿಯ ನಂತರ ನಲುಗಿಹೋಗಿರುವ ಪ್ರವಾಸೋದ್ಯಮ ವಲಯಕ್ಕೆ ಚೇತರಿಕೆ ನೀಡಿ, ಆ ಮೂಲಕ ಆರ್ಥಿಕತೆಯನ್ನು ಪುನರ್ ನಿರ್ಮಿಸುವ ಬಹುದೊಡ್ಡ ಜವಾಬ್ದಾರಿ ಅಲ್ಲಿನ ಸರ್ಕಾರದ ಮೇಲಿದೆ. ಅಂತಾರಾಷ್ಟ್ರೀಯವಾಗಿ ಪ್ರವಾಸಿಗರನ್ನು ಮತ್ತೆ ಆಕರ್ಷಿಸಲು ಭದ್ರತೆಯನ್ನು ಖಾತ್ರಿಪಡಿಸಬೇಕು. ಈ ನಿಟ್ಟಿನಲ್ಲಿ ಲಂಕಾ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬುರ್ಕಾ ಸೇರಿದಂತೆ ಮುಖಮುಚ್ಚುವ ಎಲ್ಲ ಉಡುಪುಗಳನ್ನು ನಿಷೇಧಿಸಿದೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ತನ್ನದು ಶೂನ್ಯ ಸಹಿಷ್ಣತೆ ಎಂಬುದನ್ನು ಕೇವಲ ಘೋಷಣೆ ಮಾಡದೆ ಕಾರ್ಯರೂಪಕ್ಕೆ ತಂದಿದೆ.

ಇನ್ನು ಪ್ರವಾಸೋದ್ಯಮ ಚೇತರಿಕೆಗಾಗಿ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಕ್ರಮ ಕೈಗೊಳ್ಳುತ್ತಿದೆ. ಆದರೂ ಈ ವಲಯದ ಪುನಶ್ಚೇತನಕ್ಕೆ ಒಂದೆರಡು ವರ್ಷಗಳಾದರೂ ಬೇಕು. ಈ ಅವಧಿಯಲ್ಲಿ ಮತ್ತೆ ದಾಳಿ, ಹಿಂಸಾಚಾರ ಆಗದಂತೆ ಸರ್ಕಾರ ನಿಗಾ ವಹಿಸಬೇಕು.

ಅಂದಹಾಗೆ ಗುಪ್ತಚರ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದರೆ, ತುಸು ಮುನ್ನೆಚ್ಚರಿಕೆ ವಹಿಸಿದ್ದರೆ ದಾಳಿಯನ್ನು ತಡೆಯಬಹುದಾಗಿತ್ತು, ಇಲ್ಲವೇ ದಾಳಿಯ ಪ್ರಮಾಣವನ್ನು ಕಡಿಮೆಗೊಳಿಸಬಹುದಿತ್ತು ಎಂಬ ವಿಶ್ಲೇಷಣೆಗಳಲ್ಲಿ ಹುರುಳಿಲ್ಲದೇ ಇಲ್ಲ. ಆದರೆ ದಾಳಿಯ ನಂತರ ಶ್ರೀಲಂಕಾ ಸರ್ಕಾರ ಅನುಸರಿಸಿದ ದಿಟ್ಟ ಕ್ರಮ, ಅಲ್ಲಿನ ರಾಜಕಾರಣಿಗಳು ಮತ್ತು ಮಾಧ್ಯಮ ಜವಾಬ್ದಾರಿಯಿಂದ ವರ್ತಿಸಿದ ರೀತಿ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ.

ಶ್ರೀಲಂಕಾ ಮಾಧ್ಯಮಗಳು ದಾಳಿ ಕುರಿತು 24/7 ಸುದ್ದಿ ಬಿತ್ತರಿಸಲು ಅಥವ ತಮ್ಮದೇ ಮೂಗಿನ ನೇರಕ್ಕೆ ವಿಶ್ಲೇಷಿಸಲು ತೊಡಗಲಿಲ್ಲ. ದಾಳಿಯ ನಂತರದ ಕಾರ್ಯಾಚರಣೆ ವೇಳೆ ಯಾವುದೇ ಮಾಹಿತಿ ಸೋರಿಕೆ ಮಾಡಲಿಲ್ಲ. ಸರ್ಕಾರದಿಂದ ದೃಢೀಕೃತವಾಗದ ಯಾವುದೇ ಸುದ್ದಿಯನ್ನು ಬಿತ್ತರಿಸಲಿಲ್ಲ; ವದಂತಿಗಳ ಪ್ರಸಾರವಂತೂ ದೂರ ಉಳಿಯಿತು. ಬುರ್ಕಾ ನಿಷೇಧಕ್ಕೆ ಕೂಡಾ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.

ಅಂದಹಾಗೆ, ತೀರ ಇತ್ತೀಚೆಗೆ ಶ್ರೀಲಂಕಾ ರಾಜಕೀಯ ಮತ್ತು ಸಾಂವಿಧಾನಿಕ ಬಿಕ್ಕಟ್ಟು ಎದುರಿಸಿತ್ತು. ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ ಅವರು ಕಳೆದ ಅಕ್ಟೋಬರ್ ನಲ್ಲಿ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಮಾಜಿ ರಾಷ್ಟ್ರಪತಿ, ಸಂಸದ ಮಹಿಂದ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರು. ನಂತರ ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಈ ನೇಮಕಾತಿ ಅನೂರ್ಜಿತಗೊಂಡ ಮತ್ತೆ ರನಿಲ್ ವಿಕ್ರಮಸಿಂಘೆ ಪ್ರಧಾನಿಯಾದರು. ಬಿಕ್ಕಟ್ಟು ಶಮನಗೊಂಡಿತ್ತು.

ಆದರೆ ಭಯೋತ್ಪಾದನಾ ದಾಳಿಯ ನಂತರ ಸರ್ಕಾರ ಕೈಗೊಂಡ ಕ್ರಮಗಳಲ್ಲಿ ಹಿಂದಿನ ಬಿಕ್ಕಟ್ಟು  ಹಣಿಕಲಿಲ್ಲ. ಒಟ್ಟಾರೆ ಯಾವ ಸಂದರ್ಭದಲ್ಲೂ ರಾಜಕೀಯ ಭಿನ್ನಾಭಿಪ್ರಾಯಗಳು ವ್ಯಕ್ತವಾಗದೆ, ಇಡೀ ರಾಷ್ಟ್ರ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದು ಕೂಡಾ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ.

ಪುಟ್ಟ ರಾಷ್ಟ್ರ ಶ್ರೀಲಂಕಾ ಪುಟಿದೇಳಲು ಎಷ್ಟು ಸಮಯ ತೆಗೆದುಕೊಳ್ಳಲಿದೆ, ಕಾದು ನೋಡಬೇಕು.