‘ಸರ್ಕಾರದ ಆಸ್ತಿ ನಮ್ಮ ಆಸ್ತಿ’ ಪ್ರಕರಣ: ಅಧಿಕಾರಿಗಳ ಭಂಡ ನಿರ್ಲಕ್ಷ್ಯವೇ ಕಾರಣ

‘ಸರ್ಕಾರದ ಆಸ್ತಿ ನಮ್ಮ ಆಸ್ತಿ’ ಪ್ರಕರಣ: ಅಧಿಕಾರಿಗಳ ಭಂಡ ನಿರ್ಲಕ್ಷ್ಯವೇ ಕಾರಣ

ಸರ್ಕಾರಿ ಜಮೀನುಗಳು ಹೇಗೆ ಬಲಾಢ್ಯ ವ್ಯಕ್ತಿಗಳ ಪಾಲಾಗುತ್ತಿವೆ; ಇಂತಹ ಪ್ರಕರಣಗಳಲ್ಲಿ ಕಾನೂನು ಇಲಾಖೆ ಹೇಗೆ ಅಭಿಪ್ರಾಯ ನೀಡುತ್ತಿದೆ ಎಂಬುದನ್ನು 'ಡೆಕ್ಕನ್ ನ್ಯೂಸ್’ ನಿನ್ನೆಯಷ್ಟೇ ಹೊರಗೆಡವಿತ್ತು. ಈಗ ಇದೇ ಪ್ರಕರಣದಲ್ಲಿ ಭೂ ದಾಖಲೆಗಳ ಉಪ ನಿರ್ದೇಶಕರು ಮತ್ತು ಅಂದಿನ ತಹಸೀಲ್ದಾರ್‌ ಉದ್ದೇಶಪೂರ್ವಕವಾಗಿ ಹೇಗೆ ನಿರ್ಲಕ್ಷ್ಯ ವಹಿಸಿದ್ದರು ಎಂಬುದನ್ನು ಬಹಿರಂಗಗೊಳಿಸುತ್ತಿದೆ. ಹಾಗೆಯೇ ಪ್ರಕರಣ ಸಿಐಡಿ ಮತ್ತು ಎಸಿಬಿ ತನಿಖೆಗೆ ಒಳಪಡಬೇಕು ಎಂಬ  ಶಿಫಾರಸ್ಸನ್ನು ಪ್ರಭಾವಿ ಅಧಿಕಾರಿಗಳು ಹೇಗೆ ಮಣ್ಣೆಳೆದು ಮುಚ್ಚಿದ್ದಾರೆ ಮತ್ತು ಕಂದಾಯ ಇಲಾಖೆಯನ್ನು ನ್ಯಾಯಾಂಗ ನಿಂದನೆ ಆರೋಪದಲ್ಲಿ ಹೇಗೆ ಸಿಲುಕಿಸಿದ್ದಾರೆ ಎಂಬುದನ್ನು ಜಿ.ಮಹಂತೇಶ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು ಉತ್ತರ(ಅಪರ) ತಾಲೂಕಿನ ಜಾಲಾ ಹೋಬಳಿಯ ತರಹುಣಸೆ ಗ್ರಾಮದಲ್ಲಿನ (ಸರ್ವೆ ನಂಬರ್‌ 87/ P4) 13 ಎಕರೆ 20 ಗುಂಟೆ ವಿಸ್ತೀರ್ಣ ಹೊಂದಿರುವ ಗೋಮಾಳ ಜಮೀನಿನ ಪ್ರಕರಣದಲ್ಲಿ ಭ್ರಷ್ಟಾಚಾರದ ಸುಳಿವು ಇದ್ದರೂ ಭ್ರಷ್ಟಾಚಾರ ನಿಗ್ರಹ ದಳ ಮೈಮರೆತಿದೆ. 
ಪ್ರಕರಣವನ್ನು ಸಿಐಡಿ ಅಥವಾ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ವಹಿಸಬೇಕು ಎಂಬ ಶಿಫಾರಸ್ಸನ್ನು ಅನುಷ್ಠಾನಗೊಳಿಸದ ಕಂದಾಯ ಇಲಾಖೆಯ ಭಂಡ ನಿರ್ಲಕ್ಷ್ಯವೂ ಬಹಿರಂಗಗೊಂಡಿದೆ. ಅದೇ ರೀತಿ ಜಮೀನಿನ ಮೇಲೆ ಹಕ್ಕು ಸಾಧಿಸಲು ನಡೆಸಿರುವ ಯತ್ನಗಳು ಅಧಿಕಾರಿಗಳ ಗಮನಕ್ಕೆ ಬಂದಿತ್ತಾದರೂ ಕಂದಾಯ ನಡವಳಿಗಳು ಮತ್ತು ನಿರ್ದಿಷ್ಟ ನಮೂನೆಗಳನ್ನು ಸಮರ್ಪಕವಾಗಿ ಭರ್ತಿ ಮಾಡಿರಲಿಲ್ಲ ಎಂಬ ಸಂಗತಿಯೂ ಇದೀಗ ಹೊರಬಿದ್ದಿದೆ.
ಅಷ್ಟೇ ಅಲ್ಲ, ಸರ್ವೆ ನಂಬರ್ 87ರ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಹಕ್ಕು ಸಾಧಿಸಿ ಕಬಳಿಸಲು ಯತ್ನಿಸಿರುವ ಖಾಸಗಿ ವ್ಯಕ್ತಿಗಳ ಪರವಾಗಿ ಮಂಜೂರಾಗಿರುವ ದಾಖಲೆಗಳೇ ಬೋಗಸ್‌ ಎಂದು 2014ರ ಜೂನ್‌ 7ರಂದು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೂ ಉನ್ನತ ಮಟ್ಟದಲ್ಲಿ ತೀರ್ಮಾನವೇ ಬದಲಾಗಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ. 
ಪ್ರಕರಣದ ಕುರಿತು ಪ್ರಾಥಮಿಕ ತಪಾಸಣೆ ನಡೆಸಿದ್ದ  ಭೂ ದಾಖಲೆಗಳ ಜಂಟಿ ನಿರ್ದೇಶಕರು ಬಗ್ಗೆ 12 ಪುಟಗಳ ವರದಿಯನ್ನು 2 ವರ್ಷದ ಹಿಂದೆಯೇ ಸಲ್ಲಿಸಿದ್ದರು. ಸರ್ಕಾರಿ ಜಮೀನಿನ ಮೇಲೆ ಖಾಸಗಿ ವ್ಯಕ್ತಿಗಳು ಹಕ್ಕು ಸಾಧಿಸಲು ನಡೆಸಿರುವ ಯತ್ನಗಳೆಲ್ಲವೂ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆಯ ಆಯುಕ್ತರ ಗಮನಕ್ಕೆ ಬಂದಿದೆಯಾದರೂ ಸರ್ಕಾರಿ ಜಮೀನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 
ವಿಶೇಷವಾಗಿ ಭೂ ದಾಖಲೆಗಳ ಜಂಟಿ ನಿರ್ದೇಶಕರು ಪ್ರಕರಣದ ಕುರಿತಾದ ವರದಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿದ್ದ ಮೇಘರಿಕ್‌ ಅವರಿಗೆ ತಲುಪಿಸಿದ್ದರು. ಅವರ ಅವಧಿಯಲ್ಲಿಯೂ ಪ್ರಕರಣ ತನಿಖೆಗೊಳಪಡಲಿಲ್ಲ.


ಅದೇ ರೀತಿ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದಾಗಲೂ ಭೂ ದಾಖಲೆಗಳ ಉಪನಿರ್ದೇಶಕರಾಗಿದ್ದ ಎಸ್‌ ರಾಜಾನಾಯ್ಕ ಅವರು ಸರ್ಕಾರದ ಪರವಾಗಿ ಹಾಜರಾಗಿ ಯಾವುದೇ ಕಂಡಿಕೆವಾರು ಉತ್ತರವನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಖಾಸಗಿ ವ್ಯಕ್ತಿಗಳ ಪರ ತೀರ್ಪು ನೀಡಿತ್ತಲ್ಲದೆ 3 ತಿಂಗಳ ಒಳಗಾಗಿ ಜಮೀನಿನ ಅಳತೆ ಮತ್ತು ಪೋಡಿ ಮಾಡಿ ಕ್ರಮ ಜರುಗಿಸಬೇಕು ಎಂದು ಸೂಚಿಸಿತ್ತು ಎಂಬ ಅಂಶವೂ ಜಂಟಿ ನಿರ್ದೇಶಕರ ವರದಿಯಿಂದ ತಿಳಿದು ಬಂದಿದೆ.  ವರದಿಯ ಪ್ರತಿ 'ಡೆಕ್ಕನ್‌'ನ್ಯೂಸ್‌ಗೆ ಲಭ್ಯವಾಗಿದೆ. 
ಪ್ರಕರಣದಲ್ಲಿ ಸ್ವಯಂ ಪ್ರೇರಣೆಯಿಂದ ಅಂದಿನ ಜಿಲ್ಲಾಧಿಕಾರಿ ಮಾಡಿದ್ದ ಅಂತಿಮ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ  ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿದ್ದರೂ ಸರ್ಕಾರದಿಂದ ರಿಟ್‌ ಅಪೀಲು ಸಲ್ಲಿಸಲು 2014ರ ಜೂನ್‌ 6ರಂದು ನಡೆದಿದ್ದ ಜಿಲ್ಲಾ ಮಟ್ಟದ ಸಭೆ, ಅಂದಿನ ತಹಸೀಲ್ದಾರ್‌ ಬಾಳಪ್ಪ ಹಂದಿಗುಂದ ಅವರಿಗೆ ಸೂಚಿಸಿತ್ತು.  ಆದರೆ ತಹಸೀಲ್ದಾರ್‌ ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ "ತಹಸೀಲ್ದಾರ್‌ ರಿಟ್‌ ಅಪೀಲು ಹಾಕಬೇಕಿತ್ತು ಅಥವಾ ಯೋಗ್ಯ ಪ್ರಕರಣ ಅಲ್ಲವೆಂದು ಹಿಂಬರಹ ನೀಡಬೇಕಿತ್ತು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುವವರೆಗೂ ನಿಷ್ಕ್ರಿಯವಾಗಿದ್ದು, ನಂತರ ಉಚ್ಛ ನ್ಯಾಯಾಲಯವು ಆಗಿರುವ ವಿಳಂಬವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ," ಎಂಬ ಅಂಶವೂ ವರದಿಯಲ್ಲಿ ಉಲ್ಲೇಖವಾಗಿದೆ. 
ಸರ್ಕಾರಿ ಜಮೀನಿನ ಮೇಲೆ ಖಾಸಗಿ ವ್ಯಕ್ತಿಗಳು ಹಕ್ಕು ಸಾಧಿಸಿ ಸಲ್ಲಿಸಿದ್ದ 'ದಾಖಲೆಗಳ ನೈಜತೆ ಮತ್ತು ಅವುಗಳನ್ನು ಖುದ್ದಾಗಿ ಪರಿಶೀಲಿಸಬೇಕಿದ್ದ ಭೂ ದಾಖಲೆಗಳ ಉಪ ನಿರ್ದೇಶಕ ಎಸ್‌ ರಾಜಾನಾಯ್ಕ್‌ ಮತ್ತು ತಹಸೀಲ್ದಾರ್‌ ಆಗಿದ್ದ ಬಾಳಪ್ಪ ಹಂದಿಗುಂದ ಅವರು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ,' ಎಂದು ಜಂಟಿ ನಿರ್ದೇಶಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.


ಸರ್ವೆ ನಂಬರ್‌ 87/ P4ರಲ್ಲಿನ 13 ಎಕರೆ 20 ಗುಂಟೆ ವಿಸ್ತೀರ್ಣದ ಜಮೀನು ಮೂಲತಃ ಸರ್ಕಾರಿ ಗೋಮಾಳ. ಆದರೆ ಜಮೀನನ್ನು ಟಿ ಸಿ ರಾಜಣ್ಣ ಮತ್ತು ಟಿ ಸಿ ಜಯಣ್ಣ ಎಂಬವರ ಹೆಸರಿಗೆ ತಲಾ 6 ಎಕರೆ 30 ಗುಂಟೆಯಂತೆ ವರ್ಗಾವಣೆ ಆಗಿತ್ತು.  ಆದರೆ ಜಮೀನು ಮಂಜೂರು ಮಾಡಲಾಗಿದೆ ಎನ್ನುವ ಬಗ್ಗೆ ತಹಸೀಲ್ದಾರ್‌ ಕಚೇರಿಯಲ್ಲಿ ಯಾವುದೇ ದಾಖಲೆಗಳು ಇರಲಿಲ್ಲ. ಈ ಕಾರಣಗಳಿಗಾಗಿಯೇ ಟಿ ಸಿ ಜಯಣ್ಣ ಮತ್ತು ಟಿ ಸಿ ರಾಜಣ್ಣ ಎನ್ನುವವರ ಹೆಸರಿಗೆ ವರ್ಗಾವಣೆ ಮಾಡಿ ಹೊರಡಿಸಿದ ಆದೇಶವೇ ಕಾನೂನುಬಾಹಿರ. ಈ ಕಾರಣಗಳಿಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 136(3)ರ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸುವುದು ಅಗತ್ಯ ಎಂದು ತಹಸೀಲ್ದಾರ್‌ ವರದಿ ಸಲ್ಲಿಸಿದ್ದನ್ನು ಸ್ಮರಿಸಿಕೊಳ್ಳಬಹುದು.
ತಹಸೀಲ್ದಾರ್‌ ಕೊಟ್ಟಿದ್ದ ವರದಿಯ ಮೇಲೆ ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಧಿಕಾರಿ ಸ್ವಯಂ ಪ್ರೇರಣೆಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 136(3)ಅಡಿಯಲ್ಲಿ ವಿಚಾರಣೆ ನಡೆಸಿದ್ದರಲ್ಲದೆ, ಈ ಬಗ್ಗೆ ಅಂತಿಮ ಆದೇಶವನ್ನೂ ಹೊರಡಿಸಿದ್ದರು. 
ಆಗಿನ ಮೈಸೂರು ರಾಜ್ಯದ ಕಂದಾಯ ಆಯುಕ್ತರು 1956ರ ಫೆ.13ರಂದು ತರಹುಣಸೆ ಗ್ರಾಮದ ಜಮೀನಿನಲ್ಲಿ ಸರ್ವೆ ನಂಬರ್‌ 87ರಲ್ಲಿನ ಒಟ್ಟು 13 ಎಕರೆ 20 ಗುಂಟೆ ಜಮೀನನ್ನು ಮುಕುಂದರಾವ್‌ ಎನ್ನುವವರಿಗೆ ಮಂಜೂರು ಮಾಡಿದ್ದರು. ಮಂಜೂರು ಷರತ್ತಿನ ಪ್ರಕಾರ 1956ರ ಮೇ 23ರಂದು ಜಮೀನಿನ ಸಾಗುವಳಿ ಚೀಟಿ ಪಡೆದುಕೊಂಡಿದ್ದರು ಎಂಬಂತೆ ದಾಖಲೆಗಳು ಮಂಡನೆಯಾಗಿದ್ದವು.
ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಅಂತಿಮ ಆದೇಶವನ್ನು ಖುದ್ದು ಕರ್ನಾಟಕ ಸರ್ಕಾರವೇ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ(ಸಂಖ್ಯೆ;31776/2011, 31780/2011) ದಾಖಲಿಸಿ ಅಚ್ಚರಿ ಮೂಡಿಸಿತ್ತು. ಈ ಎರಡೂ ರಿಟ್‌ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಉಭಯ ಪಕ್ಷಗಾರರ ವಾದಗಳನ್ನು ಆಲಿಸಿ ಜಿಲ್ಲಾಧಿಕಾರಿಗಳ ಆದೇಶ ಎತ್ತಿಹಿಡಿದಿತ್ತಲ್ಲದೆ ಅದು ಕಾನೂನುಬದ್ಧವಾಗಿದೆ. ಟಿ ಸಿ ಜಯಣ್ಣ ಮತ್ತು ಟಿ ಸಿ ರಾಜಣ್ಣ ಅವರ ಹೆಸರಿಗೆ ವರ್ಗಾವಣೆಗೊಂಡ ಕಂದಾಯ ದಾಖಲೆಗಳ ನೈಜತೆ ಸಂಶಯಾತ್ಮಕವಾಗಿದೆ ಎಂದು ಹೇಳಿದ್ದ ತಹಸೀಲ್ದಾರ್‌ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅಭಿಪ್ರಾಯಿಸಿ ಸರ್ಕಾರ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿದ್ದು ಕೂಡ ಸೋಜಿಗಕ್ಕೆ ಕಾರಣವಾಗಿತ್ತು.