ಅನಿರೀಕ್ಷಿತ ತಿರುವು ಕೊಟ್ಟ ವಿಶ್ವ ಕಪ್ ಕ್ರಿಕೆಟ್ಟೂ,, ನಾಳೆ ಬರಲಿರುವ ಉಪಚುನಾವಣಾ ಫಲಿತಾಂಶವೂ...

ಅನಿರೀಕ್ಷಿತ ತಿರುವು ಕೊಟ್ಟ ವಿಶ್ವ ಕಪ್ ಕ್ರಿಕೆಟ್ಟೂ,, ನಾಳೆ ಬರಲಿರುವ ಉಪಚುನಾವಣಾ ಫಲಿತಾಂಶವೂ...

ತಲೆಕೆಳಗಾದರೂ ಇನ್ನೇನೂ ಆಗಲಾರದು ಎಂದೇ ವೀಕ್ಷಕರು ಬಹುವಾಗಿ ನಂಬಿ ವಿಜಯೋತ್ಸವದ ಗುಂಗಿನಲ್ಲಿದ್ದಾಗಲೇ,  ಬೌಲರ್ ಚೇತನ್ ಶರ್ಮ ಎಸೆದ ಕಟ್ಟ ಕಡೆಯ ಚೆಂಡನ್ನ,  ಮಿಯಾಂದಾದ್ ಸಿಕ್ಸರ್ ಬಾರಿಸಿದ ಕೂಡಲೇ ಪವಾಡ ನಡೆದೆಹೋಗಿತ್ತು. ಸೋಲು ಖಚಿತವೆನಿಸಿದ್ದ ಪಾಕ್ ಗೆದ್ದಿತ್ತು, ವಿಜಯೋತ್ಸವಕ್ಕೆ ಸಜ್ಜಾಗಿದ್ದ ಭಾರತ ಸೋತು ಮುಖ ಬಾಡಿಸಿಕೊಂಡಿತ್ತು.

ಇಂಥ ರೋಮಾಂಚಕ ಘಟನೆಗೆ ಸಾಕ್ಷಿಯಾಗಿದ್ದು ಏಪ್ರಿಲ್ 18, 1986 ರಂದು ಶಾರ್ಜಾ ಕ್ರಿಕೆಟ್ ಮೈದಾನ. ಆಸ್ಟ್ರೇಲ್‍ ಏಷ್ಯಾ ವಿಶ್ವಕಪ್ ಏಕದಿನದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಕ ಎದುರಾಳಿ ತಂಡಗಳ ನಡುವಣ ಹೋರಾಟದಲ್ಲಿ, ಭಾರತ 50 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತ್ತು. ಇದರಲ್ಲಿ ಆರಂಭಿಕ ಆಟಗಾರರಾದ ಸುನಿಲ್ ಗವಾಸ್ಕರ್ 92, ಶ್ರೀಕಾಂತ್ 75 ರನ್ ಬಾರಿಸಿ 117 ರನ್ ಕೂಡಿಹಾಕಿಕೊಟ್ಟಿದ್ದರೆ, ವೆಂಗ್ ಸರ್ಕಾರ್ ಕೂಡ 50 ರನ್ ಸೇರಿಸಿಕೊಟ್ಟಿದ್ದರು.

ಒಟ್ಟು 245 ರನ್‍ಗಳ ಬೆನ್ನುಹತ್ತಿದ್ದ ಪಾಕ್ ತಂಡ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿದ್ದಾಗಲೇ, ಇನ್ನಿದು ಗೆಲ್ಲಲ್ಲ ಎಂಬ ನಿರ್ಧಾರಕ್ಕೆ ಅದೆಷ್ಟೋ ಮಂದಿ ಬಂದಿದ್ದರು. 20 ಸಾವಿರ ಜನರಿದ್ದ ಕ್ರೀಡಾಂಗಣದಲ್ಲಿ `ಗಣಪತಿ ಬಪ್ಪಾ ಮೋರ್ಯಾ' ಎಂಬಿತ್ಯಾದಿ ಘೋಷಣೆಯೊಡನೆ ಕರತಾಡನಗಳು ಮುಗಿಲು ಮುಟ್ಟಿದ್ದಾಗಲೇ, ಚೇತನ್ ಶರ್ಮಾ ಕೊನೆ ಓವರ್‍ನಲ್ಲಿ  5 ಬಾಲ್‍ಗೆ 7 ರನ್ ಕೊಟ್ಟಿದ್ದರು, ತಂಡದ ಉಪನಾಯಕ ರವಿಶಾಸ್ತ್ರೀ ಸಲಹೆ ಮೇರೆಗೆ ಕೊನೆಯ ಚೆಂಡನ್ನ ಯಾರ್ಕರ್ ಹಾಕಿದ್ದರು.  ಒಂದೇ ಬಾಲ್‍ನಲ್ಲಿ ನಾಲ್ಕು ರನ್ ಬರಲ್ಲ ಎಂದು ಕೊಂಡಿದ್ದರೆ ಜಾವೆದ್ ಮಿಯಾಂದಾದ್ ಅದನ್ನ ಸಿಕ್ಸರ್ ಎತ್ತುವ ಮೂಲಕ ಕಟ್ಟ ಕಡೇ ಗಳಿಗೆಯಲ್ಲಿ ಇಡೀ ಕ್ರಿಕೆಟ್‍ನಲ್ಲೆ ಇತಿಹಾಸ ನಿರ್ಮಿಸಿಬಿಟ್ಟರು. ಫಲಿತಾಂಶ ಉಲ್ಟಾಪಲ್ಟಾ ಆಗಿತ್ತು.

ಕ್ರಿಕೆಟ್ ಲೋಕದಲ್ಲಿ ಕೊನೇ ಚೆಂಡಿನಲ್ಲಿ ಬಾರಿಸಿದ ರನ್‍ಗಳಿಂದ ಇಡೀ ಪಂದ್ಯವೇ ಬದಲಾಗಿ ಹೋಗಿದ್ದರ ಬಹಳಷ್ಟು ಉದಾಹರಣೆಗಳಿವೆ.

ಇದನ್ನ ನಾಳೆ ಹೊರಬರಲಿರುವ ರಾಜ್ಯದ 15 ಉಪಚುನಾವಣಾ ಫಲಿತಾಂಶಕ್ಕೆ ಸಾಮೀಪ್ಯಗೊಳಿಸಿಕೊಂಡು ನೋಡಿದರೆ, ಬಾಕಿ ಉಳಿದಿರುವುದು ಒಂದೇ ದಿನ. ಹದಿನೆಂಟು ಸಚಿವರು, ಇಬ್ಬರು ಪಕ್ಷೇತರರೂ  ಸೇರಿದಂತೆ ಒಟ್ಟು 107 ಮಂದಿಯ ತಂಡ ಕಟ್ಟಿಕೊಂಡಿರುವ ಯಡಿಯೂರಪ್ಪ ನಾಳಿನಿಂದಾಚೆಗು ಮುಖ್ಯಮಂತ್ರಿಯಾಗೇ ಮುಂದುವರಿಯಬೇಕಾದರೆ 5 ಗೆದ್ದರೂ ನಷ್ಟವಿಲ್ಲ ಟೈ ಆಗುತ್ತೆ. 6 ಗೆದ್ದರೆ ಒಂದು ಎಕ್ಸೆಟ್ರಾ ಆಗುತ್ತೆ. ಇದಕ್ಕೂ ಮೀರಿ ಗೆದ್ದರೆ ವಿಜಯದ ಅಂತರ ಹೆಚ್ಚಿಸಿಕೊಳ್ಳುತ್ತೆ.

ಸದ್ಯಕ್ಕೆ ಎಲ್ಲಾ ಸಮೀಕ್ಷೆಗಳೂ ಬಿಜೆಪಿ ಸರ್ಕಾರಕ್ಕೆ ಕಂಟಕವಾಗಲ್ಲ ಎಂಬುದನ್ನೇ ಸಾರಿ ಹೇಳಿವೆ. ಇದು ನಿಜವಾದರೆ ಓಕೆ, ಒಂದು ವೇಳೆ ಕ್ರಿಕೆಟ್‍ನಂತೆ ಕೊನೆಯ ಚೆಂಡಿನಲ್ಲಿ ಪಂದ್ಯ ಬದಲಾಗಿಬಿಡುತ್ತಾ ಎಂಬ ಶಂಕೆಗಳು ಯಡಿಯೂರಪ್ಪರಿಗೂ ಇದೆ. ಹೀಗಾಗಿಯೇ ಪ್ರತೀ ಕ್ಷೇತ್ರಗಳಿಂದ ಮಾಹಿತಿಯನ್ನ ಗುಪ್ತಚರ ಇಲಾಖೆ ಮತ್ತು ಪಕ್ಷದ ಕಾರ್ಯಕರ್ತರಿಂದ ಇವತ್ತೂ ತರಿಸಿಕೊಂಡು, ಸೋಲುಗೆಲುವಿನ ಲೆಕ್ಕವನ್ನ ಅಳೆಯುತ್ತಿದ್ದಾರೆ.

ಇನ್ನ ಮತದಾನ ನಡೆದಿರುವ ಕ್ಷೇತ್ರಗಳತ್ತ ಹೊರಳಿದರೆ, ಬಾಜಿ ಕಟ್ಟುವ ಧಂದೆ ಎಗ್ಗಿಲ್ಲದೆ ನಡೆಯುತ್ತಿದ್ದು, ಕೆ.ಆರ್.ಪೇಟೆ, ಹುಣಸೂರಿನ ಗ್ರಾಮೀಣ ಭಾಗಗಳಲ್ಲಿ ನಗದು, ಕೋಳಿ, ಹಸು,ಕುರಿ, ಮೇಕೆ, ಬೈಕು ಇತ್ಯಾದಿಯೆಲ್ಲವನ್ನ ಪಣಕ್ಕಿಡಲಾಗಿದೆ. ಕ್ಷೇತ್ರದ ಹೊರಗಿನ ನಗರ ಪ್ರದೇಶದ ರಾಜಕೀಯ ಕುತೂಹಲಗಳು ಕೂಡ ಬೆಟ್ಟಿಂಗ್ ಕಟ್ಟುವುದರಲ್ಲಿ, ಯಾರು ಗೆಲ್ಲುತ್ತಾರೆಂಬ ಚರ್ಚೆಯನ್ನೂ, ಅದಕ್ಕೆ ತಮ್ಮದೇ ಆದ ಆಧಾರವನ್ನೂ ಕೊಟ್ಟುಕೊಳ್ಳುತ್ತಿರುವುದು ಸಾಮಾನ್ಯವಾಗಿ ಕಾಣಸಿಗುತ್ತಿದೆ.

ಅಧಿಕಾರ ಉಳಿಯುತ್ತೆ ಎಂಬ ವಿಶ್ವಾಸವಿದ್ದರೂ, ಮಂತ್ರಿಗಿರಿ ಯಾರಿಗೆಲ್ಲ ಕೊಡಬೇಕು ಎಂಬ ತಲೆಶೂಲೆಗೆ ಮುಂಚಿತವಾಗಿಯೇ ಮದ್ದು ಹುಡುಕಿಕೊಳ್ಳುವತ್ತ ಯಡಿಯೂರಪ್ಪ ಮಗ್ನರಾಗಿದ್ದರೆ. ಮೊದಲೆಲ್ಲ 9ರ ನಂತರ ನಾನೆ ಮುಖ್ಯಮಂತ್ರಿ ಎಂದೇಳುತ್ತಿದ್ದ ಸಿದ್ದರಾಮಯ್ಯ ಏಕೋ ಮೌನಕ್ಕೆ ಜಾರಿದ್ದರೆ, ಆಟ ಬದಲಾಗುತ್ತೆ ನೋಡಿ ಎನ್ನುತ್ತಿದ್ದ ಕುಮಾರಸ್ವಾಮಿ ಕೂಡ ಸದ್ದು ಮಾಡುತ್ತಿಲ್ಲ. ಅಂದ ಮಾತ್ರಕ್ಕೆ ಇವರಿಬ್ಬರೂ ಸೋಲು ಒಪ್ಪಿಕೊಂಡಿದ್ದಾರೆ ಎಂದರ್ಥವಲ್ಲ. ಸಮೀಕ್ಷೆಗಳನ್ನ ಸುಳ್ಳು ಮಾಡಿ ಫಲಿತಾಂಶ ಬರುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡೇ, ಇವರುಗಳು ಕೂಡ ಕ್ಷೇತ್ರಾವಾರು ಮಾಹಿತಿಗಳನ್ನ ತರಿಸಿಕೊಳ್ಳುತ್ತಿದ್ದಾರೆ.

ಆಡಳಿತ ಪಕ್ಷಕ್ಕೆ ಅಗತ್ಯ ಗೆಲುವು ಸಿಕ್ಕಿದರೆ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ವಿರುದ್ಧ ಹೋರಾಡುವುದು ಹೇಗೆ ಎಂಬ ಷಡ್ಯಂತ್ರ ನಡೆಯುತ್ತಿದ್ದು, ಪಕ್ಷ ಬಿಟ್ಟು ತೆರಳುವುದಕ್ಕೆ ಸಜ್ಜಾಗಿರುವ ಶಾಸಕರು ಯಾರು ಎಂದು ದಳ ಮತ್ತು ಕಾಂಗ್ರೆಸ್‍ನ ನಾಯಕರು ಭೂತಗನ್ನಡಿ ಹಿಡಿದುಕೊಂಡು ಜಾಲಾಡುತ್ತಿದ್ದಾರೆ.

ಅಗತ್ಯ ಗೆಲುವು ಬಿಜೆಪಿಗೆ ದಕ್ಕದಿದ್ದರೆ, ಮತ್ತೊಮ್ಮೆ ಮೈತ್ರಿ ಮಾತುಕತೆ ಹೇಗೆ ಯಾರು ಎಲ್ಲಿಂದ ಆರಂಭಿಸಬೇಕು ಎಂಬ ಲೆಕ್ಕದಲ್ಲೂ ರಾಷ್ಟ್ರ ಮಟ್ಟದ ನಾಯಕರು ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

ಇಂಥವೆಲ್ಲ ಚಟುವಟಿಕೆಯಲ್ಲಿ ಯಾವುದು ಸ್ಪಷ್ಟವಾಗಿ ನಡೆಯುತ್ತೆ ಎಂಬುದು ಪಕ್ಕಾ ಗೊತ್ತಾಗಲು ಬಾಕಿ ಇರುವುದು ಇಪ್ಪತ್ತನಾಲ್ಕು ಗಂಟೆಗಳು ಮಾತ್ರ. ಇದು ಇಡೀ ಪಂದ್ಯವನ್ನೇ ಒಂದೇ ಒಂದು ದಿನದಲ್ಲಿ, ಬೇಕಾಗಿರುವ ಆರು ಗೆಲುವನ್ನ ಕಂಡು ನಿರೀಕ್ಷೆಯಂತೆಯೇ ಪಂದ್ಯ ಗೆಲ್ಲುತ್ತಾ ಅಥವಾ ಐದರ ಅಂಚಿನಲ್ಲೇ ವಿಕೆಟ್ ಉದುರಿ ಹೋಗಿ, ಬೌಲರ್‍ಗಳೇ ಪಾರಮ್ಯ ಸಾಧಿಸಿಬಿಟ್ಟು ಕಡೇ ಕ್ಷಣದಲ್ಲಿ ಪಂದ್ಯವನ್ನೇ ಉಲ್ಟಾ ಮಾಡುತ್ತಾರೆಯೇ ಎಂಬುದು ಆಸ್ಟ್ರೇಲ್‍ಏಷ್ಯಾ ವಿಶ್ವಕಪ್ ಫೈನಲ್ ಪಂದ್ಯಕ್ಕಿಂತಲೂ ನೂರಾರು ಪಟ್ಟು ಕೌತುಕವನ್ನ ಹೆಚ್ಚಿಸಿಕೊಂಡಿದೆ.