ಸಮಯ ಬೆನ್ನತ್ತಿದ ಹಿಮಾ ಎಂಬ ಬೆರಗು

ಸಮಯ ಬೆನ್ನತ್ತಿದ ಹಿಮಾ ಎಂಬ ಬೆರಗು

ಈ ಹುಡುಗಿ ಕೇವಲ ಹತ್ತೊಂಬತ್ತು ದಿನಗಳಲ್ಲಿ ಐದು ಚಿನ್ನದ ಪದಕ ಗೆದ್ದು ಭಾರತದ ಉದ್ದಗಲಕ್ಕೂ ಮನೆ ಮಾತಾಗುವಂಥ ಅಚ್ಚರಿಯ ಸಾಧನೆ ಮಾಡಿದ್ದಾಳೆ. ಅದೂ ಜಾಗತಿಕ ಮಟ್ಟದಲ್ಲಿ ಭಾರತೀಯ ಅಥ್ಲೀಟ್ ಒಬ್ಬರು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಘಗಳ ಒಕ್ಕೂಟ(ಐಎಎಎಫ್)ದ 20 ವರ್ಷ ಕೆಳಗಿನವರ ಓಟದ ಸ್ಪರ್ಧೆಯಲ್ಲಿ ಭಾರತೀಯ ಅಥ್ಲೀಟ್ ಒಬ್ಬರು ಚಿನ್ನ ಗೆದ್ದಿರುವುದು ಇದೇ ಮೊದಲು.

ಹಿಮಾದಾಸ್ ಕೂಡ ಹತ್ತೊಂಬತ್ತು ವರ್ಷದ ಹುಡುಗಿ. ಅಸ್ಸಾಂನ ಧಿಂಗ್ ಸಮೀಪದ ಕಂಡುಲ್ಮರಿ ಗ್ರಾಮದಲ್ಲಿ ಜನಿಸಿದ ಹಿಮಾದಾಸ್ ತನ್ನ ಚಿರತೆ ವೇಗದ ಓಟದಿಂದಾಗಿ  ಈಗ ಧಿಂಗ್ ಎಕ್ಸ್ಪ್ರೆಸ್ ಎಂದೂ ಪ್ರಖ್ಯಾತಳಾಗಿದ್ದಾಳೆ. ಅವಳು ಜನಿಸಿದ್ದು ಭತ್ತ ಬೆಳೆಯುವ ಸಾಮಾನ್ಯ ರೈತ ಕುಟುಂಬದಲ್ಲಿ. ರಣಜಿತ್ ಮತ್ತು ಜೊನಾಲಿ ದಾಸ್ ದಂಪತಿಯ ಐವರು ಮಕ್ಕಳಲ್ಲಿ ಹಿರಿಯವಳೇ ಹಿಮ. 

ಹಾಗೆ ನೋಡಿದರೆ ಹಿಮಾ ಫುಟ್ಬಾಲ್ ಆಟಗಾರ್ತಿಯಾಗಿದ್ದವಳು. ಸ್ಥಳೀಯ ಕ್ಲಬ್ ಗಳಲ್ಲಿ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದವಳು. ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸು ಕಂಡವಳು. ಫುಟ್ಬಾಲ್ ಈಗಲೂ ಹೇಳಿಕೊಳ್ಳುವ ಪ್ರಮಾಣದಲ್ಲಿ ಮಹಿಳೆಯರೂ ಆಡಬಹುದಾದ ಆಟವಾಗಿ ಸಂಪೂರ್ಣ ಬದಲಾಗಿಲ್ಲ. ಫುಟ್ಬಾಲ್ ಆಡಲು ಹುಡುಗಿಯರಾರೂ ಸಿಕ್ಕದ ಕಾರಣ ಹುಡುಗರೇ ಅವಳ ಫುಟ್ಬಾಲ್ ಆಟಕ್ಕೆ ಜತೆಗಾರರಾಗಿದ್ದರು. ಹುಡುಗರೊಂದಿಗೆ ಆಡಬಾರದೆಂದು ಮನೆಯವರೆಲ್ಲ ಹೇಳುತ್ತಿದ್ದರೂ ಆ ಮಾತುಗಳನ್ನು ಕಿವಿಗೇ ಹಾಕಿಕೊಳ್ಳದಂಥ ಹಠದ ಹುಡುಗಿಯಾಗಿದ್ದಳು ಅವಳು.

ಆದರೆ ಕಾಲದ ತೀರ್ಮಾನವೇ ಬಹುತೇಕ ಸಲ ಬೇರೆಯೇ ಆಗಿರುತ್ತದೆ. ಇದು ಹಿಮಾಳ ಬದುಕಿನಲ್ಲೂ ಸಂಭವಿಸಿತು. ಅಪ್ಪ, ಅಮ್ಮನ ಜತೆ ಭತ್ತದ ಗದ್ದೆಗೆ ಹೋಗುತ್ತಿದ್ದ ಹಿಮಾ ಸುಮ್ಮನೆ ಕೂರುತ್ತಿರಲಿಲ್ಲ. ಭತ್ತದ ಗದ್ದೆ ಎಂದರೆ ಮೊಣಕಾಲು ಹೂತು ಹೋಗುವಷ್ಟು ಕೆಸರು ತುಂಬಿರುತ್ತದೆ. ನಡೆಯುವುದೇ ಕಷ್ಟ. ಇನ್ನು ಓಡುವುದಾದರೂ ಹೇಗೆ? ಹಿಮಾ ಬದುಕಿಗೆ ಈ ಗದ್ದೆಯೇ ತಿರುವು ತಂದು ಕೊಟ್ಟಿತು. ಭತ್ತದ ಗದ್ದೆಯಲ್ಲೇ ಮಿಂಚಿನ ವೇಗದಲ್ಲಿ ಓಡತೊಡಗಿದಳು. ಓಡುತ್ತಲೇ ಇದ್ದಳು. ಶಾಲೆಯ  ಮೈದಾನದಲ್ಲೂ ಅಷ್ಟೇ. ಉಳಿದ ಜತೆಗಾರರು ಯಾವ್ಯಾವುದೋ ಆಟದಲ್ಲಿ ಭಾಗಿಯಾಗುತ್ತಿದ್ದರೆ ಹಿಮಾ ಮೈದಾನದ ಸುತ್ತ ಓಡುತ್ತಿದ್ದಳು. ಅವಳ ಸುಪ್ತ ಮನಸ್ಸಿಗೊಂದು ಗುರಿ ಇತ್ತು ಎನ್ನುವುದು ಎಷ್ಟೋ ಮಂದಿಗೆ ಗೊತ್ತಿರಲಿಲ್ಲ. ಈ ಪುಟಾಣಿ ಹೆಣ್ಣು ಮಗಳ ಕಾಲಿಗೆ ಕಸುವು ತುಂಬಿದ್ದು ಅವರ ಪುಟ್ಟ ಆಸ್ತಿಯಾಗಿದ್ದ ಗದ್ದೆಯೇ. ಕೆಸರಿನಲ್ಲಿ ಸಿಕ್ಕಿ ಬೀಳುತ್ತಿದ್ದ ಕಾಲುಗಳನ್ನು ಎಳೆದೆಳೆದು ಓಡುತ್ತಿದ್ದ ಹಿಮಾದಾಸ್ ದಿಗಂತವನ್ನೇ ಗುರಿಯಾಗಿಸಿಕೊಂಡಂತೆ ಕಾಣುತ್ತಿದ್ದಳು.

ಈ ಪುಟ್ಟ ಹುಡುಗಿಯ ಪ್ರತಿಭೆಯನ್ನು ಮೊದಲು ಗಮನಿಸಿದ್ದು 2011-12 ರಲ್ಲಿ. ಮೋರಿಗಾಂವ್ ನಲ್ಲಿ ನಡೆದ ಶಾಲಾ ಕ್ರೀಡಾಕೂಟವೊಂದರಲ್ಲಿ ಪಾಲ್ಗೊಂಡಿದ್ದ ಹಿಮಾ ಅಥ್ಲೆಟಿಕ್ಸ್ ನ ಎಲ್ಲ ಸ್ಪರ್ಧೆಗಳಲ್ಲೂ ಗೆದ್ದುದನ್ನು ಕಂಡ ಷಮ್ಸ್ ಉಲ್ ಹಖ್ ಎಂಬ ಅಧ್ಯಾಪಕರೊಬ್ಬರು, ‘ಈಕೆಗೆ ಸೂಕ್ತ ತರಬೇತಿ ನೀಡಿದರೆ ಇನ್ನಷ್ಟು ಉತ್ತಮ ಸಾಧನೆ ಮಾಡಬಹುದು’ ಎಂದು ಜಿಲ್ಲಾ ಕ್ರೀಡಾ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟರು. ‘ಅವಳಿಗೆ ಸ್ಪಷ್ಟ ಗುರಿ ಇತ್ತು. ಎಲ್ಲವನ್ನೂ ಗೆಲ್ಲಬೇಕೆಂಬ ಛಲ ಬಾಲ್ಯದಲ್ಲೇ ಇತ್ತು’ ಎಂದು ಹಖ್ ನೆನಪಿಸಿಕೊಳ್ಳುತ್ತಾರೆ.

 ಅದಾದ ಒಂದು ವರ್ಷದ ನಂತರ ಹಿಮಾ ಜಿಲ್ಲಾ ಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದಳು. 2016 ರಲ್ಲಿ 100 ಮೀಟರ್ ಓಟದಲ್ಲಿ ಹಿಮಾ ರಾಜ್ಯ ಚಾಂಪಿಯನ್. ಅದೇ ವರ್ಷ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರೀಯ ಕಿರಿಯರ ಚಾಂಪಿಯನ್ ಶಿಪ್ ನಲ್ಲಿ ಯಾವುದೇ ತರಬೇತಿ ಇಲ್ಲದ ಹಿಮಾದಾಸ್ ಫೈನಲ್ ತಲುಪಿದಾಗ ಕ್ರೀಡಾತರಬೇತುದಾರರೂ ಬೆರಗಾಗಿದ್ದರು. 2017 ರ ಜನವರಿಯಲ್ಲಿ ಕ್ರೀಡಾ ನಿರ್ದೇಶನಾಲಯ ಎಳೆಯ ಕ್ರೀಡಾ ಪ್ರತಿಭೆಗಳಿಗೆ ಆಯೋಜಿಸಿದ್ದ ಶಿಬಿರದಲ್ಲಿ ಹಿಮಾಳನ್ನು ಕಂಡ ನಿಪನ್ ದಾಸ್ ಎಂಬ ಅಥ್ಲೆಟಿಕ್ಸ್ ತರಬೇತುದಾರ ಹಿಮಾದಾಸ್ ನ್ನು ಗುವಾಹತಿಗೆ ಕಳಿಸಿದರೆ ಅವಳು ರಾಜ್ಯ ಕ್ರೀಡಾ ಮತ್ತು ಯುವಜನ ನಿರ್ದೇಶನಾಲಯದ ಆಶ್ರಯದಲ್ಲಿ ತರಬೇತಿ ನೀಡಿದರೆ ಅವಳ ಪ್ರತಿಭೆಗೆ ಸೂಕ್ತ ತರಬೇತಿ ಒದಗಿಸಬಹುದು ಎಂದು ಸಲಹೆ ನೀಡಿದರು. ಮೊದಮೊದಲು ಒಪ್ಪದಿದ್ದ ಹೆತ್ತವರು ಕ್ರಮೇಣ ತಮ್ಮ ಪ್ರೀತಿಯ ಮಗಳ ಕೀರ್ತಿ ನಾಲ್ದೆಸೆಗಳಲ್ಲೂ ವಿಸ್ತರಿಸಬಹುದೆಂಬ  ಸಹಜ ಆಸೆಯಿಂದ ಸಮ್ಮತಿಸಿದರು.   

ಗುವಾಹತಿಗೆ ಹೋಗುವವರೆಗೆ ಅವಳು ಸಿಂಥೆಟಿಕ್ ಟ್ರ್ಯಾಕ್ ನೋಡಿರಲಿಲ್ಲ. ಅವಳ ಬಳಿ ಓಟಕ್ಕೆ ಬೇಕಾದ ಷೂಸ್ ಸೇರಿದಂತೆ ಯಾವುದೇ ಸಾಧನಗಳ ಕಿಟ್ ಇರಲಿಲ್ಲ. 100 ಮೀಟರ್, 200 ಮೀಟರ್ ಓಟದಲ್ಲಿ ಮಿಂಚುತ್ತಿದ್ದ ಹಿಮಾ ಬಿಸಿಲಿಗೆ ಕರಗಲಿಲ್ಲ, ಚಳಿಗೆ ಇನ್ನಷ್ಟು ಮುದುಡಲಿಲ್ಲ. ಅಲ್ಲಿಂದ ಅವಳ ಓಟದ ದಿಕ್ಕೇ ಬದಲಾಯಿತು. ನಿಧಾನವಾಗಿ ಓಟ ಆರಂಭಿಸುತ್ತಾ ಕೊನೆಯಲ್ಲಿ ವೇಗ ಹೆಚ್ಚಿಸಿಕೊಳ್ಳುತ್ತಿದ್ದ ರೀತಿಯನ್ನು ಕಂಡ ತರಬೇತುದಾರರು ಅವಳನ್ನು 400 ಮೀಟರ್ ಓಟದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದರು. ಅದು 2017 ರ ಮೇ ತಿಂಗಳು. ತರಬೇತುದಾರರಾದ ನಬಜಿತ್ ಮಲಕರ್ ಮತ್ತು ನಿಪನ್ ದಾಸ್ ತರಬೇತಿಗೆ ಫಲ ದೊರೆಯಿತು. ಕೇವಲ 57 ಸೆಕಂಡ್ ಗಳಲ್ಲಿ 400 ಮೀಟರ್ ದೂರವನ್ನು ಹಿಮಾ ಕ್ರಮಿಸಿದಳು. ಅದೆಲ್ಲ ಈಗ ಇತಿಹಾಸ. ಹಿಮಾದಾಸ್ ಹಿಂತಿರುಗಿ ನೋಡದೇ ಓಡತೊಡಗಿದಳು.

ಫಿನ್ಲ್ಯಾಂಡ್ ನ ಟಾಂಪಿಯರ್ನಲ್ಲಿ 2018 ರ ಜುಲೈ 12 ರಂದು ನಡೆದ ಇಪ್ಪತ್ತು ವರ್ಷ ಕೆಳಗಿನವರ ಐಎಎಎಫ್ ವಿಶ್ವ ಚಾಂಪಿಯನ್ ಶಿಪ್ ನ 400 ಮೀಟರ್ ಓಟವನ್ನು 51.46 ಸೆಕಂಡ್ ಗಳಲ್ಲಿ  ಮುಗಿಸಿ ಚಿನ್ನಕ್ಕೆ ಕೊರಳೊಡ್ಡಿದಳು. ಈ ವರ್ಷವಂತೂ ಜುಲೈ 2 ರಿಂದ 20 ರವರೆಗೆ ಜಗತ್ತಿನ ವಿವಿಧೆಡೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಒಟ್ಟು 5 ಚಿನ್ನವನ್ನು ಗೆದ್ದ ಹಿಮಾ ಭಾರತೀಯ ಕ್ರೀಡಾ ಇತಿಹಾಸದಲ್ಲಿ  ಹಿಮಾಲಯದೆತ್ತರದ ಸಾಧನೆಯನ್ನು ದಾಖಲಿಸಿದಳು. ಅವಳ ಕಾಲುಗಳು ದಣಿಯಲಿಲ್ಲ. ಈ ಎಲ್ಲ ಸಾಧನೆಯ ನಂತರ ಹುಟ್ಟೂರಿಗೆ ತೆರಳಿ ಕಬಡ್ಡಿ, ಫುಟ್ಬಾಲ್, ಓಟದಲ್ಲಿ ಹಿಮಾ ಖುಷಿಯಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕಡ್ಡಾಯಗೊಳಿಸಬೇಕೆನ್ನುವ ಹಿಮಾ ಹುಟ್ಟಿದ ಊರಿನಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಿಸುವ ಹೋರಾಟವನ್ನೂ ನಡೆಸಿ ಗಮನ ಸೆಳೆದ ಸಾಮಾಜಿಕ ಪ್ರಜ್ಞೆ ಇರುವ ಛಲಗಾತಿ.

ಓಟದ ಸಾಧನೆ ಅವಳನ್ನು ಯೂನಿಸೆಫ್ ನ ಮೊತ್ತ ಮೊದಲ ಯುವ ರಾಯಭಾರಿ, ಅಸ್ಸಾಂನ ಕ್ರೀಡಾ ರಾಯಭಾರಿಯಾಗಿಸಿತು. ಈಗ ಗುವಾಹತಿಯಲ್ಲಿ ಭಾರತೀಯ ತೈಲ ನಿಗಮದ ಮಾನವ ಸಂಪನ್ಮೂಲ ಅಧಿಕಾರಿ. 

ಅಂದ ಹಾಗೇ ಹಿಮಾ, ಅಸ್ಸಾಂನ ಬಹುಮುಖ ಪ್ರತಿಭೆ ಝುಬೀನ್ ಗರ್ಗ್ ಅಭಿಮಾನಿ. ಈತ ಗಾಯಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಗೀತರಚನೆಕಾರ, ನಟ ಎಲ್ಲವೂ ಆಗಿದ್ದಾನೆ. ಈತ ನಟಿಸಿದ ಒಂದು ಸಿನಿಮಾದ ಸಂಭಾಷಣೆಯಲ್ಲಿ ಬರುವ ಮಾನ್ ಜಾಯ್ ಎನ್ನುವ ಅಸ್ಸಾಮಿ ಮಾತು ಹಿಮಾಗೆ ಎಲ್ಲಿಲ್ಲದ ಇಷ್ಟ .ಅಸ್ಸಾ,ಮಿ ಭಾಷೆಯಲ್ಲಿ ಮಾನ್ ಜಾಯ್ ಅಂದರೆ  ಎಲ್ಲವೂ ಸಾಧ್ಯ ಎಂದರ್ಥ. ಎಂದೂ ನಕಾರಾತ್ಮಕವಾಗಿ ಚಿಂತಿಸದ ಹಿಮಾ ಹೇಳುತ್ತಾಳೆ, ‘ನಾನು ಪದಕಗಳ ಹಿಂದೆ ಓಡುವುದಿಲ್ಲ, ನಾನು ಓಡುವುದು ಕಾಲದ ಹಿಂದೆ’. ಅದೇ ಅವಳ ಗೆಲುವಿನ ಮಾಲೆಯ ಗುಟ್ಟು. ಗೆಲುವಿನ ನಂತರ ಗೆಲುವನ್ನು ದಾಖಲಿಸುತ್ತಿರುವ ಹಿಮಾಳ ಇಂಗ್ಲಿಷ್ ಭಾಷಾ ಜ್ಞಾನದ ಬಗ್ಗೆ ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ಈಗ ಕ್ಷಮೆ ಯಾಚಿಸಿದೆ. ಅವಳ ಓಟದ ಪ್ರತಿಭೆ ಪಡೆದ ಚಿನ್ನದ ರಾಶಿಯಲ್ಲಿ ಇಂಗ್ಲಿಷ್ ಕೂಡ ಮಂಕಾಗಿದೆ. ಚಿನ್ನ ಗೆಲ್ಲುವ ಓಟದಲ್ಲಿ ಹಿಮಾ ಇನ್ನಷ್ಟು ಮಿನುಗಲಿ ಎನ್ನುವುದೇ ನನ್ನ ಹರಕೆ; ಹಾರೈಕೆ.
                                                                            -