ಲೈಂಗಿಕ ಕಿರುಕುಳ ಆರೋಪದ ಮೇಲೆ ಕಿರುತೆರೆ ನಟ ಅಭಿನವ್ ಕೊಹ್ಲಿ ಬಂಧನ

ಮುಂಬೈ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ ಆರೋಪದ ಮೇಲೆ ಕಿರುತೆರೆ ನಟ ಅಭಿನವ್ ಕೊಹ್ಲಿ (39)ಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಟಿಯೂ ಆಗಿರುವ ಮಹಿಳೆ ಅವರ ತಾಯಿಯೊಂದಿಗೆ ಉಪನಗರ ಕಂಡವಲಿಯ ಸಮತಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಭಿನವ್ ಕೊಹ್ಲಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮಹಿಳೆಗೆ ಅಶ್ಲೀಲ ಪದಗಳ ನಿಂದನೆ ಹಾಗೂ ಅಶ್ಲೀಲ ಫೋಟೋಗಳನ್ನು ನೋಡುವಂತೆ ಒತ್ತಾಯಿಸಿದ್ದಾರೆ. ಮಹಿಳೆಯ ತಾಯಿಯ ಮೇಲೂ ಭೀಕರವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಅಭಿನವ್ ಕೊಹ್ಲಿ ವಿರುದ್ಧ ಐಪಿಸಿ ಸೆಕ್ಷನ್ 354-ಎ( ಲೈಂಗಿಕ ಕಿರುಕುಳ), 506(ಕ್ರಿಮಿನಲ್ ಬೆದರಿಕೆ) ಹಾಗೂ ಹಲ್ಲೆ ಸೇರಿದಂತೆ ವಿವಿಧ ಅಪರಾಧಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ.