ಸ್ವಿಸ್ ಬ್ಯಾಂಕ್ ಖಾತೆ ಬಯಲು, ವಾಸ್ತವವೇನು?

ಸ್ವಿಸ್ ಬ್ಯಾಂಕ್ ಖಾತೆ ಬಯಲು, ವಾಸ್ತವವೇನು?

ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಕಳ್ಳಹಣದ ಖಾತೆಗಳ ವಿವರ ಇನ್ನೆರಡು ತಿಂಗಳಲ್ಲಿ ಲಭ್ಯವಾಗಲಿದೆ,  ಇದು ಮೋದಿ ಕರಾಮತ್ತು  ಎಂದೇ ಬಿಂಬಿಸಲಾಗುತ್ತಿದೆ.

ಆದರೆ ವಾಸ್ತವವಾಗಿ ಈ ರೀತಿ ಮಾಹಿತಿಗಳನ್ನ ವಿನಿಮಯ ಮಾಡಿಕೊಳ್ಳುವುದಕ್ಕಾಗಿಯೇ ಹೂಡಿಕೆಯ ಸ್ವಯಂಚಾಲಿತ ವಿನಿಮಯ (ಆಟೋಮ್ಯಾಟಿಕ್ಎಕ್ಸ್ಚೇಂಜ್ ಆಫ್ ಇನ್ವೆಸ್ಟ್ ಮೆಂಟ್- ಎಇಒಐ) ಎಂಬ ಒಪ್ಪಂದವನ್ನ ಸ್ವಿಝರ್ಲ್ಯಾಂಡ್ ಸರ್ಕಾರದೊಡನೆ ಭಾರತ ಸೇರಿದಂತೆ ಒಟ್ಟು 75  ರಾಷ್ಟ್ರಗಳು ಇತ್ತೀಚಿನ ವರ್ಷಗಳಲ್ಲಿ ಮಾಡಿಕೊಂಡಿವೆ.  ಮುಂದಿನ ವರ್ಷ ಈ ಸಂಖ್ಯೆ  90 ಕ್ಕೇರಲಿದೆ.

ಇದರಡಿಯಲ್ಲಿ ಪಾಲುದಾರ ರಾಷ್ಟ್ರಗಳು ತಮ್ಮ ತಮ್ಮಲ್ಲಿನ ಖಾತೆಗಳ ವಿವರವನ್ನ ವಿನಿಮಯ ಮಾಡಿಕೊಳ್ಳಬೇಕು.   ಹೀಗಾಗಿ ಸ್ವಿಸ್ ಸರ್ಕಾರ ತನ್ನಲ್ಲಿನ 7500 ಹಣಕಾಸು ಸಂಸ್ಥೆಗಳಿಂದ ಅನ್ಯರಾಷ್ಟ್ರದವರ ಖಾತೆವಿವರಗಳನ್ನ ಸಂಗ್ರಹಿಸಿಕೊಂಡಿದೆ.

ಇದನ್ನ ಸಂಬಂಧಿತ ರಾಷ್ಟ್ರ ತನ್ನಲ್ಲಿರುವ ಮಾಹಿತಿಯನ್ನ ಕೊಟ್ಟಾಗ, ವಿನಿಮಯ ಮಾಡಿಕೊಳ್ಳುತ್ತೆ. ಈ ರೀತಿ  3.1  ಮಿಲಿಯನ್ ಖಾತೆಗಳ ವಿವರ ಕೊಡಲಿರುವ ಸ್ವಿಸ್   2.4 ಮಿಲಿಯನ್ ಖಾತೆಗಳ ವಿವರವನ್ನ ಪಾಲುದಾರ ರಾಷ್ಟ್ರಗಳಿಂದ ಪಡೆದು ಕೊಂಡಿದೆ.

ಹೀಗೆ  63  ರಾಷ್ಟ್ರಗಳು ಮಾಹಿತಿ ವಿನಿಮಯ ಮಾಡಿಕೊಂಡಿವೆ.  ಇದರಲ್ಲಿ ಜರ್ಮನಿಯ ಪ್ರಮಾಣವೇ ಹೆಚ್ಚು, 12  ರಾಷ್ಟ್ರಗಳು ಈ ರೀತಿ ವಿನಿಮಯ ಮಾಡಿಕೊಂಡಿಲ್ಲ.  ಹೀಗಾಗಿ ಇವುಗಳಿಗೆ ಸ್ವಿಸ್ ಮಾಹಿತಿ ಕೊಡಲ್ಲ. ಈ ಒಪ್ಪಂದದಡಿಯಲ್ಲಿ ಭಾರತವೂ ವಿನಿಮಯ ಮಾಡಿಕೊಂಡಿದೆ, ಪರಿಣಾಮವಾಗಿ ಭಾರತೀಯರ ಖಾತೆ ವಿವರಗಳೂ ಕೆಲವು ರಹಸ್ಯತೆ ಕಾಯ್ದುಕೊಳ್ಳುವ ಷರತ್ತಿನೊಡನೆ ವಿನಿಮಯವಾಗುತ್ತೆ.

ಖಾತೆದಾರರ ಹೆಸರು, ವಿಳಾಸ,  ಅವರ ಖಾತೆ,  ಆಸ್ತಿ ಇತ್ಯಾದಿಗಳ ವಿವರ ಇದರಲ್ಲಿ ಇರಲಿದೆ.  ಅಂದ ಹಾಗೆ ದಕ್ಷಿಣ ಏಷ್ಯಾ,  ಅಮೆರಿಕ , ಯುಕೆ, ದಕ್ಷಿಣ ಆಫ್ರಿಕಾದಂಥ ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರದ್ದೇ ಇಂಥ ಖಾತೆಗಳು ಹೆಚ್ಚಿವೆ.  ಜವಳಿ,  ರಾಸಾಯನಿಕ,  ರಿಯಲ್ ಎಸ್ಟೇಟ್,  ವಜ್ರ, ಆಭರಣ,  ಆಟೊಮೊಬೈಲ್ ಇಂಥ ವ್ಯವಹಾರಸ್ಥರೇ ಸ್ವಿಸ್ ಬ್ಯಾಂಕಿನಲ್ಲಿ ಖಾತೆಯನ್ನೊಂದಿರುವವರು ಎಂಬ ಮಾಹಿತಿಗಳಿವೆ.

ಒಡಂಬಡಿಕೆ ಅನುಸಾರ ಸ್ವಿಸ್ ಖಾತೆ ಮಾಹಿತಿ ವಿನಿಮಯವಾಗುತ್ತಿದೆ,  ಇದರಲ್ಲಿ ಭಾರತ ಒಂದೇ ಅಲ್ಲ.  ಇದು ವಾಸ್ತವ ಸಂಗತಿಯಾದರೂ,  ನಮ್ಮ ರಾಷ್ಟ್ರದಲ್ಲಷ್ಟೇ ಇದಾಗುತ್ತಿದೆ,   ಮೋದಿಯ ಈ ಕ್ರಮ ಕಳ್ಳಹಣದವರಿಗೆ ನಡುಕ ತರಿಸಿದೆ ಎಂದೆಲ್ಲ ಹೊಗಳಲಾಗುತ್ತಿದೆ.  ಮೋದಿಯವರ ಸರ್ಕಾರದ ಪಾತ್ರ ಇದರಲ್ಲಿ ಇಲ್ಲವೇ ಇಲ್ಲ ಎಂದು ತಳ್ಳಿಹಾಕಲು ಬರಲ್ಲ,  ಅವರ ಆಸಕ್ತಿಯೂ ಪ್ರಧಾನವಾಗಿದೆ ಎಂಬುದು ದಿಟವಾದರೂ ಎಲ್ಲಾ ಕ್ರೆಡಿಟ್ ಇವರಿಗೇ ಸಲ್ಲುವಂತೆ ಮಾಡುತ್ತಿರುವುದು ಮತ್ತೊಂದು ಪರಮಾವಧಿ ಸಂಗತಿ.