ಸಪ್ತಸಾಗರದೊಡತಿ ಈ ಭಕುತಿ

ಒಂದು ಶತಮಾನದಲ್ಲಿ ಯಶಸ್ವಿಯಾಗಿ ಈಜಿರುವವರ ಸಂಖ್ಯೆ 1500 ಕ್ಕಿಂತಲೂ ಕಡಿಮೆ. ಅದಕ್ಕಿಂತಲೂ, ಪ್ರಯತ್ನ ಪಟ್ಟು ಸೋತವರೇ ಹೆಚ್ಚು. ಸುಮಾರು ಒಂದು ಡಜನ್ ಈಜುಗಾರರು ಸಾವನ್ನಪ್ಪಿದ ನಿದರ್ಶನಗಳೂ ಉಂಟು.

ಸಪ್ತಸಾಗರದೊಡತಿ ಈ ಭಕುತಿ

ಮೂರು ದಶಕಗಳ ಹಿಂದೆ, ಬೆಂಗಳೂರಿನಲ್ಲಿ ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಕೆಕೆ ವೇಣುಗೋಪಾಲ್ ಅವರ ಉಪನ್ಯಾಸವನ್ನು ಡೆಕ್ಕನ್ ಹೆರಾಲ್ಡ್ ಗೆ ವರದಿಮಾಡಲು ಹೋಗಿದ್ದೆ. ವಾಗ್ಮಿಯಾದ ಅವರದ್ದು ನಿರರ್ಗಳ ಮಾತು. ಕಿವಿ-ಮನಸುಗಳಿಗೆ ಮುದ ನೀಡುತ್ತಿತ್ತು. ಭಾಷಣದ ಮುಖ್ಯಾಂಶಗಳನ್ನು ಗುರುತು ಹಾಕಿಕೊಳ್ಳುತ್ತಿದ್ದ ನನಗೆ ಅವರ ಮಾತಿನ ವೇಗವನ್ನು ಅನುಸರಿಸುವುದು ಕಷ್ಟವೆನಿಸಿತು. ಮೇಲಾಗಿ, ಅಂಥವರ ಭಾಷಣವನ್ನು ಕೇಳಿ ಆನಂದಿಸವುದನ್ನು ನನ್ನ ವೃತ್ತಿಯ ಜವಾಬ್ದಾರಿ ಕಸಿದುಕೊಳ್ಳುತ್ತಿದೆ ಅನ್ನಿಸಿ ಪೆನ್ನನ್ನು ಮುಚ್ಚಿಟ್ಟು ತದೇಕಚಿತ್ತನಾಗಿ ಭಾಷಣವನ್ನು ಕೇಳುತ್ತಾ ಕುಳಿತೆ. ಆನಂದ-ವಿಸ್ಮಯಗಳನ್ನುಂಟು ಮಾಡುವ ಕ್ಷಣಗಳಲ್ಲಿ ಕಾರ್ಯ ನಿರ್ವಹಿಸುವುದೇ ರಸಭಂಗ. ಅಂತಹದೇ ರಸಭಂಗ ನನ್ನ ಬರವಣಿಗೆಗೆ ಈ ಕ್ಷಣದಲ್ಲಿ ತಡೆ ಒಡ್ಡುತ್ತಿದೆ. ಈಜುಗಾರ್ತಿ ಭಕ್ತಿ ಶರ್ಮಾರ ಟೆಡ್ ಟಾಕ್ ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ. ಆಕೆಯ ಸಾಧನೆಯ ಕುರಿತು ಕೇಳಿದಷ್ಟೂ ಮತ್ತಷ್ಟು ಕೇಳಬೇಕೆನಿಸುತ್ತದೆ. 

ಏಳು ಕೆರೆಯ ನೀರು ಕುಡಿದು ಬಂದಿದ್ದೀನಿ ಎಂದು ಕೊಚ್ಚಿಕೊಳ್ಳುವವರಂತೆ ಭಕ್ತಿ ಪಂಚಮಹಾಸಾಗರಗಳಲ್ಲೂ, ಎಂಟು ಸಮುದ್ರ-ಕಾಲುವೆಗಳಲ್ಲೂ  ಈಜಿಬಂದಿರುವ ಜಲಕನ್ಯೆ. ಆರ್ಟಿಕ್ ಸಾಗರದಲ್ಲಿ ಈಗಾಗಲೇ ಈಜಿದ್ದ 30 ವರ್ಷ ಪ್ರಾಯದ ಭಕ್ತಿ  ಈ ವರ್ಷದ ಜನವರಿಯಲ್ಲಷ್ಟೇ ಒಂದು ಡಿಗ್ರಿ ಚಳಿಯಲ್ಲಿ  ಅಂಟಾರ್ಟಿಕ್ ಸರೋವರದ ಮಂಜುಗಡ್ಡೆ-ಮಿಶ್ರಿತನೀರಿನಲ್ಲಿ ಎರಡೂಕಾಲು ಕಿಮೀಗೂ ಹೆಚ್ಚು ದೂರವನ್ನು 41 ನಿಮಿಷಗಳಲ್ಲಿ  ಕ್ರಮಿಸಿ ದಾಖಲೆಗಳನ್ನು ಮುಳುಗಿಸಿದರು. ಅಂಕಿ-ಅಂಶಗಳು ಇಂತಹ ಚರಿತ್ರಾರ್ಹ ಸಾಧನೆಗಳ ಮಹತ್ವವನ್ನು ಬಿಚ್ಚಿಡುವುದಿಲ್ಲ, ಮುಚ್ಚಿಬಿಡುತ್ತವೆ. 

ಅಲೆಕ್ಸಾಂಡರ್ ನ ದಂಡಯಾತ್ರೆಯಂತೆ, ಮಿಕ್ಕೆಲ್ಲ ಸಾಗರಗಳನ್ನು ಹೊಕ್ಕಿ ವಿಕ್ರಮ ಸಾಧಿಸಿದ್ದ ಭಕ್ತಿ ಅಂಟಾರ್ಟಿಕ್ ಸರೋವರದ ಈಜಿಗೆ ತಯಾರಾದ ರೀತಿಯೇ ಕೊರೆಯುವ ನೀರಿನಲ್ಲಿ ಬಿದ್ದ ಆಕೆಯ ಮೈಯನ್ನು ನಡುಗಿಸುವುದಿರಲಿ, ಓದುಗರ/ಕೇಳುಗರ ಮೈಯನ್ನು ನಡುಗಿಸಿ ಮರಗಟ್ಟಿಸಿಬಿಡುತ್ತದೆ. 

ಚಂದ್ರಶೇಖರ್ ಶರ್ಮಾ ಮತ್ತು ಲೀನಾ ಶರ್ಮಾರ ಪುತ್ರಿಯಾದ ಭಕ್ತಿ ಹುಟ್ಟಿದ್ದು ಅಂದಿನ ಬಾಂಬೆಯಲ್ಲಿ. ತಂದೆ ಅಮೃತಶಿಲೆಯ ವ್ಯಾಪಾರಕ್ಕಾಗಿ ರಾಜಸ್ಥಾನದ ಉದಯಪುರಕ್ಕೆ ಸ್ಥಳಾಂತರಗೊಂಡಾಗ ಅವರ ಪುಟ್ಟ ಸಂಸಾರವೂ ಅಲ್ಲೇ ನೆಲೆಗೊಂಡಿತು. ಆಕೆ  ಪ್ರಪ್ರಥಮವಾಗಿ ನೀರಲ್ಲಿ ಬಿದ್ದಿದ್ದು ಎರಡೂವರೆ ವರ್ಷದ ಮಗುವಾಗಿ. ಸ್ವಯಂ ಈಜುಗಾರ್ತಿಯಾದ ಲೀನಾ  ಈಜುಕೊಳಕ್ಕೆ ಎಳೆಯ ಮಗುವನ್ನೂ ಎಳೆದುಕೊಂಡು ಧುಮುಕಿ ಮಗಳಿಗೆ ನೀರಿನ ರುಚಿ ತೋರಿಸಿದ್ದರು. ಪದ್ಧತಿಯಾಗಿ ಈಜುಕೊಳಕ್ಕೆ ಹೋಗುವುದಾಯಿತು. ಉದಯಪುರದಲ್ಲಿ ಸಾರ್ವಜನಿಕ ಈಜುಕೊಳಗಳ ಸೌಲಭ್ಯ ಸೀಮಿತ. ಪಂಚತಾರಾ ಹೊಟೆಲ್ ಸ್ವಿಮ್ಮಿಂಗ್ ಪೂಲ್ ಗೆ ಹೋಗಲು ಶುರುವಾಯಿತು. ಮಹಿಳೆಯರು ಮೈಪೂರ್ತಿ ಸೆರಗು ಹೊದ್ದುಕೊಂಡು, ತಲೆಯನ್ನೂ ಮುಚ್ಚಿಕೊಳ್ಳುವ ಸಂಪ್ರದಾಯವಿರುವ ರಾಜಸ್ಥಾನದಲ್ಲಿ ತಾಯಿ-ಮಗಳು ಈಸಿ ಜಯಿಸುವುದಿರಲಿ, ಈಜುವುದೇ ಸವಾಲಾಗಿತ್ತು. 

ತಾಯಿ ಮೀನನ್ನು ಹಿಂಬಾಲಿಸುತ್ತಲೇ ಭಕ್ತಿ ಎಂಬ ಪುಟ್ಟ ಮೀನು ನೀರಿನಲ್ಲಿ ಲೀಲಾಜಾಲವಾಗಿ ಸಂಚರಿಸಲಾರಂಭಿಸಿತು. ನಿರೀಕ್ಷಿಸಿದಂತೆ,  ಬಾಲಕಿ ಭಕ್ತಿ ಬಹುಮಾನಗಳ ಹೊಳೆಯನ್ನು ಹರಿಸಿದಳು. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಂತೆ ಜಿಲ್ಲಾ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಹೆಸರುವಾಸಿಯಾದಳು. ಯಾವುದೇ ರಂಗದಲ್ಲಿ ಮೇಲೇರುತ್ತಾ ಹೋದಂತೆ ಹೆಚ್ಚು ಅಭ್ಯಾಸ ಮಾಡಬೇಕಾಗುತ್ತದೆ. ರಾಷ್ಟ್ರಮಟ್ಟಕ್ಕೆ ಬೆಳೆದು ನಿಂತ ಭಕ್ತಿಗೆ ತನ್ನ ವಾಸಸ್ಥಾನ ತೊಡಕಾಯಿತು. ಚಳಿಗಾಲದಲ್ಲಿ ಚಳಿ ಜಾಸ್ತಿಯಿರುವ ಮರಳುಗಾಡಾದ ಉದಯಪುರದಲ್ಲಿ ವರ್ಷದ ನಾಲ್ಕೈದು ತಿಂಗಳುಗಳು ಈಜುಕೊಳದ ಸೌಲಭ್ಯವಿಲ್ಲದೇ, ಈಜುಕೊಳ ಪ್ರವೇಶಿಸಲು ವಿಶೇಷ ಅನುಮತಿ ಪಡೆಯುವ ಸ್ಥಿತಿ ಇತ್ತು. (ಅದಕ್ಕೆ ಅಧಿಕ ಫೀಜು ಬೇರೆ! ಇಪ್ಪತ್ತೈದು ವರ್ಷಗಳ ಹಿಂದೆಯೇ ಲೀನಾ ಶರ್ಮಾ ಮಗಳಿಗೋಸ್ಕರ ವಾರ್ಷಿಕ 5000 ರೂಪಾಯಿ ತೆತ್ತು ಹೊಟೆಲ್ ಪೂಲೊಂದರ ಸದಸ್ಯತ್ವ ಪಡೆದಿದ್ದರು, ಮಗಳನ್ನು ಪ್ರತಿನಿತ್ಯ ಒಂದು ಗಂಟೆ ನೀರಿನಲ್ಲಿ ಬಿಡುತ್ತಿದ್ದರು.)

ಬೆಂಗಳೂರು ಮತ್ತು ಮಹಾರಾಷ್ಟ್ರದ ಈಜುಗಾರರಿಗೆ ಋತುಗಳ ಅಡಚಣೆಯಿಲ್ಲ. ಅಲ್ಲಿಯ ಹವಾಮಾನಕ್ಕನುಗುಣವಾಗಿ, ವರ್ಷಾದ್ಯಂತ ಈಜುಕೊಳದ ಸೌಲಭ್ಯ. ತರಬೇತಿಗೆ ಋತುವಿನ ನಿರ್ಬಂಧವಿಲ್ಲ. ಆದರೆ, ಅಷ್ಟು ಹೊತ್ತಿಗಾಗಲೇ ಯಶಸ್ಸಿನ ಸರಮಾಲೆಯನ್ನೇ ಧರಿಸಿದ್ದ ಭಕ್ತಿಗೆ ಬೇಸರ ಕಾಡುತ್ತಿತ್ತು. ಸ್ಪರ್ಧಾತ್ಮಕ ಈಜು ಬೇಡವೆನಿಸಿತ್ತು. ಆಗ ಆಕೆಯ ವಯಸ್ಸು ಕೇವಲ 14. ಚಾನೆಲ್ ಎಂದೇ ಕರೆಯಲ್ಪಡುವ ಇಂಗ್ಲಿಷ್ ಚಾನೆಲ್ ಆಕೆಯನ್ನು ಕೈಬೀಸಿ ಕರೆಯಿತು. ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವಿನ ಈ ಕಾಲುವೆಯ ಉದ್ದ 560 ಕಿಮೀ, ಅಗಲ 240 ಕಿಮೀ, ಮತ್ತು ಅತ್ಯಧಿಕ ಆಳ 174 ಮೀಟರ್. ಜಗತ್ತಿನ ಅತ್ಯಂತ ಬಿಜಿ ವಾಣಿಜ್ಯ ಜಲಮಾರ್ಗವಿದು. ವಿಶ್ವದ ಎಲ್ಲೆಡೆಯಿಂದ ಸಾಹಸೀ ಜಲಕ್ರೀಡಾಗಾರರಿಗೂ ಸದಾ ಆಹ್ವಾನ ನೀಡುವ ಬೃಹತ್ ಕಾಲುವೆ.  ಅದಕ್ಕೆ ತಯಾರಿ ನಡೆಸುವ ನಿಟ್ಟಿನಲ್ಲಿ, ಪ್ರೌಢಾವಸ್ಥೆ ತಲುಪಿದ್ದ ಭಕ್ತಿ ಅರಬ್ಬೀ ಸಮುದ್ರದಲ್ಲಿ ಈಜತೊಡಗಿದರು. ಕ್ಷಿತಿಜ-ಕಡಲುಗಳು ಒಂದಾಗುವ ದಟ್ಟ ಕತ್ತಲಿನಲ್ಲಿ ಆಕೆಯ ಅಭ್ಯಾಸ. ಬ್ರಾಹ್ಮೀ ಮುಹೂರ್ತದಲ್ಲಿ ಸಮುದ್ರರಾಜನ ಕೊರೆಯುವ ಆಲಿಂಗನ. ಮುಕ್ತ-ಜಲ ಈಜಿಗೆ ಏಕಾಂತದ ಮರೆ. ಬಾನಿನಲ್ಲಿ ನಕ್ಷತ್ರಗಳ ಕಾವಲು. ಸಂಗಾತಿಗಳಾಗಿ ಕಾಣದ ಜಲಚರಗಳು. ಕತ್ತಲಲ್ಲಿ ಜತೆಗಿದ್ದೂ ಬೀಳದ ಅಮ್ಮನ ನೆರಳು. ಮೊದಲಿಗೇ ಉರಂಗ್ ಬಂದರಿನಿಂದ  ಹದಿನಾರು ಕಿಮೀ ಈಸಿದ್ದಾಯಿತು. ಅಮ್ಮನ ಜತೆ ಅರಬ್ಬೀ ಸಮುದ್ರದ ಒಡಲನ್ನು ಬಗೆಯುತ್ತಲೇ ಹೋದ ಭಕ್ತಿ ಮತ್ತೊಮ್ಮೆ ಅದರ ದುಪ್ಪಟ್ಟು ದೂರ ಕ್ರಮಿಸಿದ್ದೂ ಆಯಿತು. ಇಂಗ್ಲಿಷ್ ಚಾನೆಲ್ ಚಾಲೆಂಜ್ ಗೆ ತನ್ನನ್ನು ತಾನು ಒಡ್ಡಿಕೊಂಡ ಭಕ್ತಿ ಪ್ರತಿವರ್ಷ ಒಂದಲ್ಲಾ ಒಂದು ಸಾಹಸವನ್ನು ಕೈಗೊಳ್ಳುತ್ತಾ, ಪ್ರತಿಯೊಂದು ಸವಾಲನ್ನು ಯಶಸ್ವಿಯಾಗಿ ಎದುರಿಸುತ್ತಾ ಕಡಲ ಒಡಲಿನ ಭಾರ್ಗವಿಯಾದಳು.

ಹದಿನಾಲ್ಕನೇ ವಯಸ್ಸಿನಲ್ಲಿ ಆಕೆ ಚಾನೆಲ್ಲನ್ನು ಕ್ರಮಿಸುವ ಪ್ರಯತ್ನದಲ್ಲಿ ಫಲ ಕಾಣಲಿಲ್ಲ. ಅಷ್ಟು ದೊಡ್ಡ ಸಾಹಸಕ್ಕೆ ಆಕೆಯ ವಯಸ್ಸು ತೀರಾ ಕಿರಿದೆಂದು ಹೇಳಲಾಯಿತು. ಆಕೆಗಿಂತ ಹಿರಿಯರೂ ಚಾನೆಲ್ ಸವಾಲನ್ನು ಎದುರಿಸಲಾಗದೇ ಹಿಮ್ಮೆಟ್ಟಿದ್ದ ಅನೇಕ ನಿದರ್ಶನಗಳಿವೆ. ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವಿನ 21 ಮೈಲಿ ದೂರವನ್ನು ತಮ್ಮ ಸಾಹಸಕ್ಕಾಗಿ ಆಯ್ದುಕೊಳ್ಳುವ ಈಜುಗಾರರು ತಮ್ಮ ಜಲಯಾನವನ್ನು ಪೂರ್ಣಗೊಳಿಸುವ ಗ್ಯಾರಂಟಿ ಇಲ್ಲ. ಒಂದು ಶತಮಾನದಲ್ಲಿ ಯಶಸ್ವಿಯಾಗಿ ಈಜಿರುವವರ ಸಂಖ್ಯೆ 1500 ಕ್ಕಿಂತಲೂ ಕಡಿಮೆ. ಅದಕ್ಕಿಂತಲೂ, ಪ್ರಯತ್ನ ಪಟ್ಟು ಸೋತವರೇ ಹೆಚ್ಚು. ಸುಮಾರು ಒಂದು ಡಜನ್ ಈಜುಗಾರರು ಸಾವನ್ನಪ್ಪಿದ ನಿದರ್ಶನಗಳೂ ಉಂಟು.  ಪ್ರಯತ್ನವನ್ನು ನಿಲ್ಲಿಸದ ಭಕ್ತಿ ಎರಡು ವರ್ಷದಲ್ಲಿ ಮತ್ತೆ ವಾಪಸ್ಸಾದರು. ಪೂರ್ವಸಿದ್ಧತೆಯೊಂದಿಗೆ ಬಂದು ಯಾನವನ್ನು ಪೂರ್ಣಗೊಳಿಸಿದರು. ಚಾನೆಲ್ಲನ್ನು ಕ್ರಮಿಸಿದ ಏಕೈಕ ತಾಯಿ-ಮಗಳ ಜೋಡಿಯೆಂಬ ದಾಖಲೆಯೂ ಲೀನಾ-ಭಕ್ತಿಯರ ಹೆಸರಲ್ಲಿದೆ.

ಏಷ್ಯಾ ಖಂಡದಿಂದ ಅಮೆರಿಕದ ಮೂರು ಪ್ರಮುಖ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ ಏಕೈಕ ಮಹಿಳೆ ಎಂಬ ಕೀರ್ತಿಯೂ ಭಕ್ತಿಯದ್ದು. ಗಂಡೆದೆಯ ಸ್ವಿಮ್ಮರ್ ಗಳು ಈಜಲು ಹಿಂದೆಮುಂದೆ ನೋಡುವ ಮೆಡಿಟರೇನಿಯನ್ ಸಮುದ್ರದ ಜಿಬ್ರಾಲ್ಟರ್  ಸ್ಟ್ರೇಟ್ ನಲ್ಲಿ ಈಜಿದ ದಾಖಲೆಯ ಜತೆ ಅನೇಕಾನೇಕ ಜಲಗಡಿಗಳನ್ನು ಭಕ್ತಿ ಮೀರುತ್ತಲೇ ಮುನ್ನಡೆದಿದ್ದಾರೆ.

ಕೊರೆಯುವ ಆರ್ಟಿಕ್ ಸರೋವರದ ನೀರಿನಲ್ಲಿ, 33 ನಿಮಿಷಗಳ ಅವಧಿಯಲ್ಲಿ 1. ಕಿಮೀ ದೂರವನ್ನು ಭಕ್ತಿ  ಕ್ರಮಿಸಿದ್ದು ಒಂಭತ್ತು ವರ್ಷಗಳ ಹಿಂದೆ.  ಐದೂ ಮಹಾಸಾಗರಗಳಲ್ಲಿ ಈಜಿದ ಎರಡನೇ ಮತ್ತು ಅತಿ ಕಿರಿಯ ಮಹಿಳೆಯೆಂಬ ದಾಖಲೆ ಅವರಿಗೆ ದಕ್ಕಿದ್ದು ಈ ವರ್ಷದ ಆರಂಭದಲ್ಲಿ. ಅವರ ಒಂದೊಂದು ದಾಖಲೆಯೂ ಅವರದ್ದೇ ಹಿಂದಿನ ದಾಖಲೆ ದಾಖಲೆಯೇ ಅಲ್ಲವೇನೋ ಅನ್ನಿಸಿಬಿಡುವಷ್ಟು ಅಪೂರ್ವವಾದದ್ದು.

ಈ ವರ್ಷದ ಅಂಟಾರ್ಟಿಕ್ ಸಾಗರದ ಸಾಹಸವೇ ಒಂದು ಸಾಹಸವಾದರೆ, ಅದಕ್ಕೆ ತಯಾರಿ ನಡೆಸಿದ್ದು ಮತ್ತೊಂದು ಸಾಹಸ. ಅತ್ಯಂತ ಕಡಿಮೆ ಉಷ್ಣಾಂಶವಿರುವ ದಕ್ಷಿಣ ಧ್ರುವದ ಆ ತಾಪಮಾನವನ್ನು ತನ್ನ ಊರಿನಲ್ಲಿ ಸೃಷ್ಟಿಸುವುದಾದರೂ ಹೇಗೆ?   ಬಲೂನನ್ನು ಹೋಲುವ ತಾತ್ಕಾಲಿಕ, ಪುಟ್ಟ ಪೂಲ್ನಲ್ಲಿ 10-15 ಟನ್ ಮಂಜುಗಡ್ಡೆಯನ್ನು ರಾತ್ರಿ ತುಂಬಿ, ಮುಂಜಾವಿನ ಹೊತ್ತಿಗೆ ಅದು ಕರಗಿ ನೀರಾದಾಗ ಅದರಲ್ಲಿ ಈಜುವುದನ್ನು ಭಕ್ತಿ ಅಭ್ಯಾಸ ಮಾಡಿದರು.

(ಮುಂದುವರಿಯುವುದು)