ಮುರುಗೆಪ್ಪನ ಕಾಲಿಗೆ ಬಿದ್ದ ಸ್ವಾಮಿಜೀ

ಮುರುಗೆಪ್ಪನ ಕಾಲಿಗೆ ಬಿದ್ದ ಸ್ವಾಮಿಜೀ

ಒಂದು ಸಲ ಮುರುಗೆಪ್ಪಜ್ಜನ ಸವಾರಿ ನಮ್ಮ ತೋಟಕ್ಕೆ ಬಂದಿತ್ತು. ಅದಕ್ಕೆ ಕಾರಣ ಬ್ಯಾಡಗಿ ಚಿಕ್ಕಣ್ಣ. ಚಿಕ್ಕಣ್ಣ ಆಗ ನಮ್ಮ ಮನೆಯಲ್ಲೆ ಇದ್ದು ಕಮ್ತ ಮಾಡುತಿದ್ದ. ಭಂಗಿ ಸೇದುವ ಚಟ ಮುರುಗೆಪ್ಪನಿಗೆ ತಾರುಣ್ಯದಲ್ಲೇ ಅಂಟಿಕೊಂಡಿತ್ತು. ಹೀಗಾಗಿಯೆ ಚಿಕ್ಕಪ್ಪ ಮುರುಗೆಪ್ಪಜ್ಜನ ಪಟ್ಟದ ಶಿಷ್ಯ ಆಗಿದ್ದ.
ಊರಿಗೆ ಬಂದಾಗ ಮುರುಗೆಪ್ಪನಿಗೆ ಭಂಗಿ ಸೇದಬೇಕೆನ್ನಿಸಿದರೆ ಅವನು ಚಿಕ್ಕಪ್ಪನನ್ನು ಹುಡುಕಿಕೊಂಡು ಬರಲೇಬೇಕಿತ್ತು. ತೋಟದಲ್ಲಿ ನಾನು, ಚಿಕ್ಕಪ್ಪ ಯಾವದೋ ಕೆಲಸದಲ್ಲಿ ತೊಡಗಿಕೊಂಡಿದ್ದೆವು.  ಮುರುಗೆಪ್ಪಜ್ಜ ಬಸಲಿಂಗಪ್ಪಜ್ಜನ ಜೊತೆಗೆ ತೋಟಕ್ಕೆ ಬರುತ್ತಲೆ ನಮ್ಮ ಕೆಲಸ ಅಲ್ಲಿಗೇ ನಿಂತಿತು. ಇವರೆಲ್ಲ ನಮ್ಮ ಬಾವಿದಂಡೆಯ ಬೇವಿನಮರದ ನೆಳಲಿಗೆ ಬೈಟಕ್ ಕೂತರು. ನಾನು ಬಿ.ಎ ಮುಗಿಸಿ ಕಮ್ತ ಮಾಡಬೇಕೆಂದು ಅದೇ ಊರಿಗೆ ಮರಳಿದ್ದೆ. ನನ್ನ ಮೊದಲ ಕವನ ಸಂಕಲನವೂ ಆಗ ಹೊರಬಂದಿತ್ತು. ಮುರುಗೆಪ್ಪಜ್ಜನಿಗೆ ಇದೆಲ್ಲ ಗೊತ್ತಿತ್ತು ಅಂತ ಕಾಣಿಸುತ್ತದೆ. ನಾನೂ ಇವರ ಮಾತು ಕೇಳುತ್ತಾ ಅಲ್ಲೇ ಕೂತೆ. ಈ ಮೂವರ ಮಧ್ಯೆ ಚಿಲುಮೆ ಹಸ್ತಾಂತರಗೊಳ್ಳುತ್ತ ಒಂದು ಸುತ್ತು ಹಾಕುತ್ತಲೇ ಮುರುಗೆಪ್ಪಜ್ಜ ಕಾವ್ಯದ ಕುರಿತು ಮಾತನಾಡತೊಡಗಿದ. ಮಹಲಿಂಗರಂಗ ಮತ್ತು ನಿಜಗುಣ ಶಿವಯೋಗಿ ಅವನ ಇಷ್ಟದ ಕವಿಗಳು. ಶಿಶುನಾಳ ಶರೀಫರೆಂದರೆ ಮುರಗೆಪ್ಪನಿಗೆ ಸಾಕ್ಷಾತ್ ಗುರುವೆ!
ಮಹಲಿಂಗರಂಗನ ಅನುಭವಾಮೃತ ಮುರುಗೆಪ್ಪಜ್ಜನಿಗೆ ಕಂಠಸ್ಥವೇ ಆಗಿತ್ತೇನೋ...

ಒಂದೊಂದೇ ಜೂರಿ ಜಗ್ಗುತ್ತ ಚಿಲುಮೆ ಬುಸು ಬುಸು ಹೊಗೆ ಬಿಟ್ಟು ಸುಳಿ ಸುತ್ತಿ ಹಾರಿದಂತೆ ಅನುಭವಾಮೃತದ ಪದ್ಯಗಳೂ ಮುರುಗೆಪ್ಪಜ್ಜನ ನಾಲಿಗೆಯ ಮೇಲೆ ನಲಿದಾಡತೊಡಗಿದವು.

ಅಂಕೆಯಿಲ್ಲದ ರಾಜ್ಯವನು ನಿ ಶ್ಯಂಕೆಯಿಂದಾಳುವ ನೃಪಾಲಗೆ
ಮಂಕು ಹಿಡಿಯಲು ತನ್ನನೇ ತಾ
ರಂಕನೆಂಬಂತೆ, ಕೊಂಕು ಕೊರತೆಗಳಿಲ್ಲದಿರ್ಪ
ನಿರಂಕುಶದ ಪರಬೊಮ್ಮ ತನ್ನನು ಸಂಕಲೆಯ ನರನಂತೆ ಕಿಂಕರನೆಂಬನೆಲ್ಲರಿಗೆ.

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ  ಸಿಗುರಿನ ಕಬ್ಬಿನಂದದ
ಅಳಿದ ಉಷ್ಣದ ಹಾಲಿನಂದದಿ
ಸುಲಭವಾಗಿರ್ಪ ಲಲಿತವಹ  ಕನ್ನಡ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡರೆ ಸಾಲದೇ? ಸಂಸ್ಕೃತದಲ್ಲಿನ್ನೇನು.

ಹೀಗೆ ಸಾಗಿತ್ತು.
ಮುರುಗೆಪ್ಪಜ್ಜನ ಕಾವ್ಯಲಹರಿ.

ಈ ಮಧ್ಯೆ ಹಠಾತ್ತನೆ ಅದು ಗಾಯತ್ರಿ ಮಂತ್ರದ ಕಡೆ ತಿರುಗಿತು. ನಮ್ಮ ಬುದ್ಧಿ, ವಿವೇಕಗಳನ್ನು ಪ್ರಕಾಶಿಸು ಎಂದು ಸೂರ್ಯನಲ್ಲಿ ಬೇಡಿಕೊಳ್ಳುವ ಈ ಮಂತ್ರದ ಬಗ್ಗೆ ನಾನು ತಿಳಿದದ್ದೂ ಅಷ್ಟೇ ಆಗಿತ್ತು. ಅದೇ ಕ್ಷಣಕ್ಕೆ ನಾನು ಚಕಿತಗೊಳ್ಳುವಂತೆ ಮಾಡಿದ್ದು ಮುರುಗೆಪ್ಪಜ್ಜನ ಪ್ರಶ್ನೆ! ಗಾಯತ್ರಿ ಮಂತ್ರವನುಸುರಿದ ಅವನು ಅದರ ಅರ್ಥ ಗೊತ್ತಿದೆಯೇ ಎಂದು ಕೇಳಿದ್ದು ನನ್ನನ್ನು ಆಶ್ಚರ್ಯಚಕಿತನನ್ನಾಗಿ ಮಾಡಿತ್ತು. ನನಗೆ ತಿಳಿದದ್ದನ್ನೇ ನಾನೂ ಹೇಳಿದೆ.

ಮುಗುಳ್ನಕ್ಕ ಮುರುಗೆಪ್ಪಜ್ಜ ` ಅದು ಹಾಗಲ್ಲ, ಸಾಮಾನ್ಯವಾಗಿ ಎಲ್ಲರೂ ತಿಳಿದಿರೋದನ್ನೆ ನೀನೂ ತಿಳ್ಕೊಂಡೀದೀ. ಆದರೆ, ಈ ಮಂತ್ರದ ನಿಜವಾದ ಅರ್ಥ ಬ್ಯಾರೇನ ಐತಿ' ಎಂದ.

ನನಗೆ ಕುತೂಹಲವಾಯಿತು.

` ನೋಡು, ಇಂದ್ರಿಯಗಳಿಂದ ನಮಗೆ ಅನುಭವವಾಗ್ತದ, ವಿವಿಧ ಅನುಭವದಿಂದ ಅರಿವಾಗ್ತದೆ, ಅರಿವಿನಿಂದ ಜ್ಞಾನ ಬರ್ತದೆ. ಜ್ಞಾನದಿಂದ ಬುದ್ಧಿ ವಿಕಾಸ ಆಕ್ಕೈತಿ ಮತ್ತ ಬುದ್ಧಿಯಿಂದ ವಿವೇಕ ಜಾಗ್ರತವಾಗತೈತಿ. ಈ ಬುದ್ಧಿ, ವಿವೇಕ ಎಚ್ಚರಿದ್ರನ ನಾವು, ಜಗತ್ತಿನ ಎಲ್ಲ ಸುಖಭೋಗಗಳನ್ನು ಅನುಭವಿಸಲಿಕ್ಕ ಸಾಧ್ಯ! ಇಲ್ಲಾಂದ್ದ ಇಲ್ಲ. ಅದಕ್ಕ ಈ ಮಂತ್ರದ ಅರ್ಥ ಏನಪಾ ಅಂದ್ರ` ಈ ಜಗತ್ತಿನ ಎಲ್ಲ ಸುಖ, ಭೋಗಗಳನ್ನು ಅನುಭವಿಸಲು ಸಾಧ್ಯವಾಗುವಂತೆ ನಮ್ಮ ಇಂದ್ರೀಯಗಳನ್ನು ಪ್ರಚೋದಿಸು ಎಂದು ಸೂರ್ಯನನ್ನು ಬೇಡ್ಕೊಳ್ಳೋದು!'

ಒಂದು ಪ್ರಾರ್ಥನೆಗೆ ಮುರುಗೆಪ್ಪಜ್ಜ ನೀಡಿದ ಸರಳ ವ್ಯಾಖ್ಯಾನ ಆ ಕ್ಷಣಕ್ಕೆ ನನಗೆ ಅಮೋಘ ಎನ್ನಿಸಿತ್ತು. ಸಾಧು, ಸಂತರೊಡನೆ ಒಡನಾಟ ಇಟ್ಟುಕೊಂಡಿದ್ದ ಮುರುಗೆಪ್ಪಜ್ಜ ಬರಿ ಕಲಾವಿದನಷ್ಟೇ ಆಗಿರಲಿಲ್ಲ. ಅವನೊಳಗೊಬ್ಬ ತತ್ವಜ್ಞಾನಿಯೂ ಇದ್ದ ಎಂಬುದು ಆಮೇಲಷ್ಟೇ ನನಗೆ ಗೊತ್ತಾಗಿದ್ದು.

ಗುಡಗೇರಿ ಸಮೀಪದ ಹಳ್ಳಿಯೊಂದರ ಮಠ ಆ ಕಾಲಕ್ಕೆ ಪ್ರಸಿದ್ಧವಾಗಿತ್ತು. ಅಲ್ಲಿನ ಮಠಕ್ಕೆ ಮುರುಗೆಪ್ಪ ಆಗಾಗ ಹೋಗಿ ಬರುತ್ತ ಮಠದ ಶ್ರೀಗಳೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದ.

ಶ್ರೀಗಳ ದರ್ಶನಕ್ಕೆ ಬರುತಿದ್ದ ಭಕ್ತರು ಸ್ವಾಮಿಗಳಿಗೆ ನೂರು ರೂ. ದಕ್ಷಿಣೆ ನೀಡಿ ಪಾದಮುಟ್ಟಿ ನಮಸ್ಕರಿಸುವುದು ಲೋಕಾರೂಢಿ. ಆದರೆ, ಮುರುಗೆಪ್ಪಜ್ಜ ಇದನ್ನು ಪಾಲಿಸುತ್ತಿರಲಿಲ್ಲ. ತಾನು ಬಂದ ಉದ್ದೇಶ, ಕೆಲಸದ ಬಗ್ಗೆಯೆ ನೇರವಾಗಿ ಮಾತನಾಡುವುದು ಅವನ ರೂಢಿ. ಮುರುಗೆಪ್ಪನ ಬಗ್ಗೆ ತಿಳಿದಿದ್ದ ಸ್ವಾಮಿಗಳೂ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಸ್ವಾಮಿಗಳ ಶಿಷ್ಯರ ಬಳಗದಲ್ಲಿ ಕೆಲವರಿಗೆ ಇದು ಅಸಹನೆಯನ್ನು ಹುಟ್ಟು ಹಾಕಿತ್ತು. ಮೊದಮೊದಲು ಆ ಬಗ್ಗೆ ಉದಾಸೀನರಾಗಿದ್ದ ಅವರು ಇಂಥ ಶಿಷ್ಯೋತ್ತಮರ ಮಾತಿಗೆ ಕಿವಿಗೊಡುತ್ತ ಬಂದಂತೆ ಮುರುಗೆಪ್ಪನ ಈ ನಡೆ ಅವರಿಗೆ ಅಹಂಕಾರ ಎನ್ನಿಸತೊಡಗಿ ಕಿರಿಕಿರಿ ಯಾಗತೊಡಗಿತು. ಅಲ್ಲಿಂದ ಅವರೂ ಇದಕ್ಕೇನಾದರೂ ಒಂದು ಪರಿಹಾರ ಹುಡುಕಬೇಕು. ನನ್ನ ಭಕ್ತರ ಮುಂದೆ ನನ್ನನ್ನು ಕ್ಯಾರೇ ಎನ್ನದ ಮುರುಗೆಪ್ಪ ನನ್ನನ್ನು ಸಣ್ಣವನನ್ನಾಗಿ ಮಾಡುತಿದ್ದಾನೆ ಎಂದು ಯೋಚಿಸಲಾರಂಭಿಸಿದರು.

ತನ್ನ ಶಿಷ್ಯರಲ್ಲಿ ಆಪ್ತನಾಗಿದ್ದ ಹಿರಿಯ ಭಕ್ತನೊಬ್ಬನಿಗೆ ಈ ಸಂಬಂಧ ಮುರುಗೆಪ್ಪನಿಗೆ ಬುದ್ಧಿ ಹೇಳುವಂತೆ ವ್ಯವಸ್ಥೆ ಮಾಡಿದರು.

ಹೀಗೆ ಒಮ್ಮೆ ಮಠಕ್ಕೆ ಬಂದಿದ್ದ ಮುರುಗೆಪ್ಪ ಸ್ವಾಮಿಗಳನ್ನು ಕಂಡು ಹೋಗಲು ಅವರ ಸಾನಿಧ್ಯಕ್ಕೆ ಬಂದ. ಎಂದಿನಂತೆ ಅವರ ಒಡ್ಡೋಲಗದಲ್ಲಿ ಕೂತು ಪ್ರಸ್ತುತ ವಿಷಯಗಳನ್ನು ಮಾತನಾಡತೊಡಗಿದ. ಇದನ್ನೇ ಕಾಯುತಿದ್ದ ಆ ಶಿಷ್ಯೋತ್ತಮ` ಗುರುಗಳೊಂದಿಗೆ ಹೇಗೆ ನಡ್ಕೋಬೇಕು ಎಂಬ ಲೋಕಾರೂಢಿಯೇ ಗೊತ್ತಿಲ್ಲದ ನೀನು ಇಲ್ಲಿ ಬಂದು ನಮಗೆ ಉಪದೇಶ ಮಾಡಬೇಕಿಲ್ಲ'
ಎಂದುಬಿಟ್ಟ.

ಮುರಗೆಪ್ಪನಿಗೆ ಅದರ ಹಿಂದಿನ ಮರ್ಮ ತಟ್ಟನೆ  ಹೊಳೆದೇಬಿಟ್ಟಿತು. ಕೂಡಲೇ ಎದ್ದ ಅವನು ಮರುಮಾತಾಡದೆ ಹೊರಗೆ ಬಂದುಬಿಟ್ಟ!

ಮರುದಿನ ಮತ್ತೆ ಮಠಕ್ಕೆ ಬಂದ ಮುರುಗೆಪ್ಪ ಸೀದಾ ಸ್ವಾಮಿಗಳ ಬಳಿ ಬಂದ. ಸ್ವಾಮಿಗಳ ಕೈಗೆ ಏನೋ ಕೊಟ್ಟ. ಸ್ವಾಮಿಗಳು ಇನ್ನೇನು ಮುರುಗೆಪ್ಪ ನನ್ನ ಕಾಲಿಗೆ ಬೀಳ್ತಾನೆ ಎಂದುಕೊಂಡರು. ಮುರಗೆಪ್ಪ ಬೀಳಲಿಲ್ಲ. ಸ್ವಲ್ಪ ಇರಿಸುಮುರಿಸಿನ ಮನಸ್ಥಿತಿಯಲ್ಲೇ ಇದ್ದ ಅವರಿಗೆ, `ಸ್ವಾಮೇರ ನಾನೀಗರ ನಿಮ್ಮ ಕೈಯಾಗ ಕೊಟ್ಯಲ ಅದೇನಂತ ಸರೀತ್ನಗ ನೋಡಿದ್ರೇನು'? ಎಂದು ಕೇಳಿದ.

`ಅದ, ನೋಡಿದ್ನಲ್ಲಪ! ನೂರರ ನೋಟು, ದೇವರು ಕೊನೆಗೂ ನಮ್ಮ ಮುರಗೆಪ್ಪಗ ಸತ್ಬುದ್ಧೀ ಕೊಟ್ಟ ಅಂತ ಸಂತೋಷಾತು' ಎನ್ನುತ್ತ
ಸ್ವಾಮಿಗಳು ಹುಸಿನಗೆ ಬೀರಿದರು.

ಮುರುಗೆಪ್ಪ ಸಮಾಧಾನದಿಂದ ಅಯ್ಯೋ ಪಾಪ ಎಂಬಂತೆ ಕಾರುಣ್ಯದ ದನಿಯಲ್ಲಿ ಹೇಳಿದ...

`ನೂರರ ನೋಟಲ್ರೀ ಸ್ವಾಮೇರ ಅದೂ..ಅದು ಬಿಳೇ ಹಾಳೇಗ ನಾ ತಕ್ಕೋಂಡ ಬಂದಿರೋ ಚಿತ್ರ'

ತಡಬಡಾಯಿಸಿದ ಸ್ವಾಮಿಗಳು ನೋಟನ್ನು ತೆಗೆದವರೆ, ಕೂಲಂಕುಷ ಪರಿಶೀಲಿಸಿ, `ಬೆರಗು ಪಡುತ್ತ ಹೌದಲ್ಲೋ ಮುರಗೆಪ್ಪ ಸುದ್ಧ ನೋಟ ಅನ್ನೋ ಹಾಂಗೈತಲ್ಲೋ ಇದು..ಚಿತ್ರನು' ಎಂದರು.

`ಸ್ವಾಮೇರ, ಅಸಲಿ ಯಾವುದು ನಕಲಿ ಯಾವುದು ಅಂತ ಒಂದು ನೋಟು ಗುರುತಿಸಲಾಗದ ನೀವು ನಮಗಿನ್ನೆಂಥಾ ನೋಟ(ದೃಷ್ಟಿ)ನೀಡಬಲ್ರೀ?' ಎಂದ ಮುರಗೆಪ್ಪ.

` ದೊಡ್ಡಾಂವ ಅದೀಪಾ ಮರಾಯಾ ನೀನು. ನನಗ ನಿನ್ನ ನೋಟು ಬ್ಯಾಡ, ನೀ ನನ್ನ ಕಾಲೀಗೆ ಬೀಳೋದು ಬ್ಯಾಡ. ನೀ ನಮ್ಮ ಶಿಷ್ಯ ಆಗಿದ್ರ ಅಷ್ಟ ಸಾಕು!' ಎಂದ ಸ್ವಾಮಿಗಳ ದನಿಯಲ್ಲಿ ಆಗಲೇ ಧೈನ್ಯತೆ ಆವರಿಸಿತ್ತು.

`ಹಂಗಂದ್ರ ಹ್ಯಾಂಗ್ರೀ ಸ್ವಾಮೇರ? ನಾನಂತೂ ನಿಮ್ಮ ಕಾಲಿಗೆ ಬೀಳೋದಿಲ್ಲ ಬಿಡ್ರಿ, ಆ ಮಾತ ಬ್ಯಾರೇ, ಆದ್ರ ನೀವರ ನನ್ನ ಕಾಲೀಗೆ ಬೀಳಬೇಕಲ್ರೀ? ಮುರುಗೆಪ್ಪನ ಮಾತಿಗೆ ಸ್ವಾಮಿಗಳು ಬೆವರಿಯೆ ಬಿಟ್ಟರು.

`ಅದ್ಯಾಂಗೋ ಮುರಗೆಪ್ಪ ಸ್ವಲ್ಪ ಬಿಡಿಸಿ ಹೇಳು' ಎಂದು ಅಂಗಲಾಚಿದ ಸ್ವಾಮಿಗಳು ಕಕಮಿಕ ನೋಡತೊಡಗಿದರು.
`ತಿಳ್ದೋರಿಗೆ ಬಿಡಿಸಿ ಹೇಳೋದು..ಈ ಮುರುಗೆಪ್ಪನಿಗೆ ಗೊತ್ತಿಲ್ಲ. ಅಂದ ಮಾತ ನಡಿಸಿ ತೋರ್ಸೋದು ಮಾತ್ರ ಗೊತ್ತು. ಸರಿ. ನಾನಿನ್ನ ಬರ್ತನ್ರೀ' ಎಂದವನೇ ಮುರಗೆಪ್ಪ ಅಲ್ಲಿಂದ ಬಂದು ಬಿಟ್ಟ.

ಸ್ವಲ್ಪೇ ದಿನದಲ್ಲಿ ಪಕ್ಕದ ಹಳ್ಳಿಯೊಂದರಲ್ಲಿ ಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಇತ್ತು. ಸ್ವಾಮಿಗಳ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಹಾದು ಬರುತ್ತಲಿತ್ತು. ಮುರುಗೆಪ್ಪ ತನ್ನ ಸಂಗಡಿಗರನ್ನು ಕರೆದುಕೊಂಡು ಆ ಮೆರವಣಿಗೆ ಎದುರಿಗೆ ಇನ್ನೊಂದು ಮೆರವಣಿಗೆ ಮಾಡಿಕೊಂಡು ಬಂದ. ಎದುರಿನ ಅಡ್ಡಪಲ್ಲಕ್ಕಿಯಲ್ಲಿ ಸ್ವಾಮಿಗಳು. ಮುರಗೆಪ್ಪನ ಮೆರವಣಿಗೆಯಲ್ಲಿ ಅವನೇ ನಿರ್ಮಿಸಿದ್ದ ಬಸವಣ್ಣನ ಪುಟ್ಟ ಪ್ರತಿಮೆ. ಅದನ್ನೂ ಅವನೇ ಹೊತ್ತು ನಡೆದಿದ್ದ.

ಎರಡು ಮೆರವಣಿಗೆಗಳ  ಈ ಅನಿರೀಕ್ಷಿತ ಮುಖಾಮುಖಿಯನ್ನು ಕಂಡು ಭಕ್ತರೆಲ್ಲ ಹೋಯ್ ಎಂದರು‌. ಮುಂದೇನೆಂದು ತಿಳಿಯದೇ ನಿಂತಲ್ಲೇ ಸ್ತಂಭೀಭೂತರಾದರು.

ಮುರಗೆಪ್ಪನಾದರೂ ಆ ಊರಿನಲ್ಲಿ ಎಲ್ಲರೂ ಬಲ್ಲ ವ್ಯಕ್ತಿಯೇ ಆಗಿದ್ದ. ಹೀಗಾಗಿ ಯಾರೂ ಹೊಡಿಬಡಿ ಎನ್ನುವ ದುಸ್ಸಾಹಸಕ್ಕೆ ಇಳಿಯಲಿಲ್ಲ . ಎಲ್ಲರ ಕಣ್ಣೂ ಈಗ ಅಡ್ಡಪಲ್ಲಕ್ಕಿಯಲ್ಲಿ ಕೂತಿದ್ದ ಸ್ವಾಮಿಗಳ ಮೇಲೆ ಬಿದ್ದಿತ್ತು‌. ಮುರುಗೆಪ್ಪ ಏನೋ ಧಾಳಿ ತಂದ ಎಂದುಕೊಂಡ ಸ್ವಾಮೀಜಿ ಏನು ಮಾಡುವುದೆಂದು ತನ್ನ ಆಪ್ತನ ಸಲಹೆ ಕೇಳಿದರು. ಅವನು `ಬುದ್ಧೀ, ನೀವೀಗ ಹೀಗೇ ಮುಂದುವರೆದರೆ ಇಲ್ಲಿನ ಬಸವಣ್ಣನ ಭಕ್ತರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ  ಜನರ ಕಣ್ಣಲ್ಲಿ ತಾವು ದುರಹಂಕಾರಿ ಎಂದಾಗುತ್ತದೆ. ಪಲ್ಲಕ್ಕಿಯಿಂದಿಳಿದು ಬಸವಣ್ಣನಿಗೆ ನಮಸ್ಕರಿಸಿದರೆ ತಮ್ಮ ದೊಡ್ಡತನ, ಸೌಜನ್ಯ ಸದ್ವರ್ತನೆಗಳ ಬಗ್ಗೆ ಇದೇ ಜನ ಗುಣಗಾನ ಮಾಡುವಂತಾಗುತ್ತದೆ' ಎಂದು ಕಿವಿಯಲ್ಲಿ ಉಸುರಿದ.
ಪಲ್ಲಕ್ಕಿ ಹೊತ್ತಿದ್ದ ಭಕ್ತರಿಗೆ ಅದನ್ನು ಕೆಳಗಿಳಿಸಲು ಹೇಳಿದ ಸ್ವಾಮೀಜಿ ಕೆಳಗಿಳಿದು ನಿಂತರು. ಭಕ್ತರು ಮುಂದೆ ಏನು ನಡೆಯಲಿದೆ ಎಂಬುದು ತಿಳಿಯದೆ ದಿಗ್ರ್ಭಾಂತಿಗೊಳಗಾಗಿದ್ದರು. ಹಾಗೇ ಮುರುಗೆಪ್ಪನ ಬಳಿಗೇ ಸಾರಿದ ಸ್ವಾಮೀಜಿ ಬಸವಣ್ಣನ ಎದುರು ಬಾಗಿ ನಮಸ್ಕರಿಸಿದರು.  ಆ ಕಡೆ ಪಲ್ಲಕ್ಕಿ, ಈ ಕಡೆ ಬಸವಣ್ಣ ಎರಡರ ನಡುವೆ ಎಡಬಿಡಂಗಿಯಾಗಿ ನಿಂತಿದ್ದ  ಸ್ವಾಮೀಜಿಯ ಅಯೋಮಯ ಸ್ಥಿತಿಯನ್ನು ಕಂಡು ಮುಗುಳ್ನಕ್ಕ  ಮುರಗೆಪ್ಪ ...

` ಸ್ವಾಮೇರ  ಬಸವಣ್ಣ ನಿಮಗ  ಸದ್ಭುದ್ಧಿ ಕೊಡಲಿ. ನಡ್ರೀ ಇನ್ನ ನಿಮ್ ರಥ ಏರ್ರೀ" ಎಂದ.

ಟಪ್ಪಂತ ಗಾಳಿ ಹಾರಿದ ಬಲೂನಿನಂತಾಗಿದ್ದ ಸ್ವಾಮಿಗಳು ಮತ್ತಷ್ಟು ಗಾಂಭೀರ್ಯವನ್ನು ನಟಿಸುತ್ತ ಪಲ್ಲಕ್ಕಿಯತ್ತ ಹೆಜ್ಜೆ ಹಾಕಿದ್ದರು.