ಸ್ವಚ್ಚ ಭಾರತವೂ, ಬೌದ್ಧಿಕ ತ್ಯಾಜ್ಯವೂ

ಪ್ರತಿ ಕ್ಷಣದಲ್ಲೂ ನಮ್ಮ ಮನದೊಳಗಿನ ತ್ಯಾಜ್ಯವನ್ನು ಸ್ವಪ್ರೇರಣೆಯಿಂದ ಹೊರಹಾಕುವ ಮೂಲಕ ಗಾಂಧಿ 150ರ ಸಂದರ್ಭವನ್ನು ಸಾರ್ಥಕಪಡಿಸಲು ಸಾಧ್ಯ.  

ಸ್ವಚ್ಚ ಭಾರತವೂ, ಬೌದ್ಧಿಕ ತ್ಯಾಜ್ಯವೂ

ಗಾಂಧಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ವಿಶೇಷ ಎಂದರೆ ಅವರ 150ನೆಯ ಹುಟ್ಟುಹಬ್ಬ. ವರ್ಷಕ್ಕೊಮ್ಮೆಯಾದರೂ ಅವರ ಸ್ಮರಣೆಯಲ್ಲಿ ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ ಮತ್ತು ಪ್ರಾಮಾಣಿಕತೆಗೆ ವೇದಿಕೆಗಳ ಮೇಲೆ ಅವಕಾಶ ದೊರೆಯುತ್ತದೆ.  ಈ ಬಾರಿ ಮತ್ತೊಂದು ವಿಶೇಷವೆಂದರೆ ಗಾಂಧಿ ಸ್ವಚ್ಚ ಭಾರತದ ರಾಯಭಾರಿಯಾಗಿ ಕಾಣುತ್ತಿದ್ದಾರೆ. ಈ ದಿನಕ್ಕೆ, ಅಂದರೆ ಗಾಂಧೀಜಿಯ 150ನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭಾರತವನ್ನು ಬಯಲುಶೌಚ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಹೆಬ್ಬಯಕೆಯಿಂದ ಹಮ್ಮಿಕೊಂಡ ಯೋಜನೆ ಸಾಕಷ್ಟು ಯಶಸ್ವಿಯಾಗಿದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರಶಂಸೆಯನ್ನೂ ಪಡೆದಿದೆ. ಗಾಂಧೀಜಿ ಸ್ವತಃ ತಮ್ಮ ಕೈಯ್ಯಾರೆ ಮಲ ಸ್ವಚ್ಚಗೊಳಿಸಿದ್ದರು ಎಂದು ಹೇಳಲಾಗುತ್ತದೆ. ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಮಲವನ್ನು ಮಾತ್ರವೇ ಅಲ್ಲ ಮಲ ವಿಸರ್ಜನೆ ಮಾಡುವವರನ್ನೂ ಸ್ವಚ್ಚ ಮಾಡಿಬಿಟ್ಟಿದ್ದೇವೆ. ಮಧ್ಯ ಪ್ರದೇಶದ ಆ ಪುಟ್ಟ ಜಾಗವನ್ನು ಅಂತರರಾಷ್ಟ್ರೀಯ ಮಟ್ಟದ ಸ್ಮಾರಕದಂತೆ ಸಂರಕ್ಷಿಸಬೇಕು. ಏಕೆಂದರೆ ಮಲವಿಸರ್ಜನೆಗಾಗಿ ಹುತಾತ್ಮರಾದವರ ದಾಖಲೆ ವಿಶ್ವದ ಇತಿಹಾಸದಲ್ಲೇ ಇಲ್ಲ. ಈ ಬಾಲ ಹುತಾತ್ಮರಿಗಾಗಿ ಅಲ್ಲೊಂದು ಸ್ವಚ್ಚ ಭಾರತ ಸ್ಮಾರಕವನ್ನು ನಿರ್ಮಿಸಿದರೆ ಮುಂದಿನ ಪೀಳಿಗೆಗೆ ಇಂತಹ ಭಾರತವೂ ಇತ್ತು ಎಂದು ಅರಿವಾಗುತ್ತದೆ.

ಸ್ವಚ್ಚ ಭಾರತದ ರಾಯಭಾರಿಯಾಗಿ ಬಾಪು ತಮ್ಮ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಕ್ಷಣದಲ್ಲೇ ಅವರ ಗಮನ ರಸ್ತೆ ಮಧ್ಯದ ಗುಂಡಿಗಳತ್ತ ಹಾಯ್ದರೆ ಅಚ್ಚರಿಯೇನಲ್ಲ. ಏಕೆಂದರೆ ಮಲಗುಂಡಿಯಲ್ಲಿ ಬಿದ್ದು ಸತ್ತವರ ಸಂಖ್ಯೆ ಕಳೆದ ಒಂದು ವರ್ಷದಲ್ಲೇ 22 ಸಾವಿರ ದಾಟಿದೆ. ಸುಪ್ರೀಂಕೋರ್ಟ್ ಸಹ ಮಲಗುಂಡಿಗಳನ್ನು ಗ್ಯಾಸ್ ಚೇಂಬರ್ ಗೆ ಹೋಲಿಸಿದೆ. ಆದರೆ ನಮ್ಮ ಸಮಾಜದ ಕೂದಲೂ ಕೊಂಕಿಲ್ಲ. ನಾವು ನಿರುಮ್ಮಳವಾಗಿದ್ದೇವೆ. ಅವರು ಮಲಗುಂಡಿಯೊಳಗೆ ಇಳಿದು ಸ್ವಚ್ಚ ಮಾಡಿದರೆ ತಾನೇ ಭಾರತ ಸ್ವಚ್ಚವಾಗಿ ಫಳಫಳ ಹೊಳೆಯಲು ಸಾಧ್ಯ ! ಇಂತಹ ಉದ್ಗಾರಕ್ಕೇನೂ ಕಡಿಮೆ ಇರುವುದಿಲ್ಲ. ಯಂತ್ರ ಮಾನವನ ಯುಗದಲ್ಲೂ ನಮ್ಮ ಕೈಗಳಿಗೆ ಕೆಲಸ ಕೊಡುತ್ತಿದ್ದೇವೆ ಎಂದು ಹೆಮ್ಮೆ ಪಡಬೇಕಲ್ಲವೇ ? ಮಾನವ ಮತ್ತು ಯಂತ್ರದ ನಡುವಿನ ಸಂಘರ್ಷವನ್ನು ನಾವು 21ನೆಯ ಶತಮಾನಕ್ಕೂ ಕರೆತಂದಿದ್ದೇವೆ. ಮಲಗುಂಡಿಗಳು ಅಲ್ಲೊಂದು ಇಲ್ಲೊಂದು ಎಂದೇ ಇಟ್ಟುಕೊಳ್ಳೋಣ. ನಮ್ಮ ಸುತ್ತಲಿನ ಪರಿಸರದಲ್ಲಿ ನಿತ್ಯ ನೋಡುತ್ತಿರುವುದೇನು ? ಚರಂಡಿಗಳನ್ನು ಬರಿಗೈಯ್ಯಿಂದಲೇ ಸ್ವಚ್ಚ ಮಾಡುವ ಪೌರ ಕಾರ್ಮಿಕರು, ಚರಂಡಿಯೊಳಗಿನ ಕೊಚ್ಚೆಯನ್ನು ಕೈಯ್ಯಿಂದಲೇ ಹೊರ ಹಾಕುವ ಅಮಾಯಕರು. ಚರಂಡಿಯೊಳಗೆ ಇಳಿದು ಸ್ವಚ್ಚ ಮಾಡುವ ಪೌರ ಕಾರ್ಮಿಕರ ಮೂಗಿನ ಹೊಳ್ಳೆಗಳು ಮುಕ್ತ ಮಾರುಕಟ್ಟೆಯಂತೆ ತೆರೆದೇ ಇರುತ್ತವೆ. ಮೌನವಾಗಿ ಕೆಲಸ ಮಾಡಲು ಸಾಧ್ಯವೇ ? ಹಾಗಾಗಿ ಬಾಯಿಗೆ ಏನನ್ನೂ ಕಟ್ಟುವುದು ಬೇಕಿಲ್ಲ. ಕೆಲವು ಕ್ರಿಮಿಕೀಟಗಳು ಒಳಹೊಕ್ಕರೆ ಆಯುಷ್ಮಾನ್ 5 ಲಕ್ಷ ರೂ ನೀಡುತ್ತದೆ. ಎಲ್ಲವೂ ಉಚಿತ. ಇನ್ನು ನಡೆವ ಪಾದಗಳಿಗೆ ಬೂಟುಗಳು ಬೇಕೇಬೇಕೆಂದೇನಿಲ್ಲ. ಅವರ ಪಾದಗಳು ಗಟ್ಟಿ ಇವೆ. ಸಾಧಾರಣ ಚಪ್ಪಲಿಯೇ ಸಾಕು. ಇಲ್ಲವಾದಲ್ಲಿ ಚರ್ಮವೇ ಚಪ್ಪಲಿ. ಅಪ್ಪ/ಅಮ್ಮ ಸ್ವಚ್ಚತಾ ಕೆಲಸದಲ್ಲಿ ನಿರತರಾಗಿರುವುದನ್ನು ದೂರದಲ್ಲಿ ನಿಂತು ನೋಡುವ ಮಕ್ಕಳು ನಾಳಿನ ಭಾರತದ ಬಗ್ಗೆ ಯೋಚಿಸುತ್ತಾ ಕಸದ ಉಪ್ಪರಿಗೆಯಲ್ಲಿ ಆಟ ಆಡುತ್ತಿರುತ್ತವೆ.

ನಂಬರ್ ಒನ್ ಸ್ವಚ್ಚ ನಗರಿಯ ಪಟ್ಟಕ್ಕಾಗಿ ಎಷ್ಟೊಂದು ಶ್ರಮಿಸುತ್ತೇವೆ. ಪ್ಲಾಸ್ಟಿಕ್ ಮುಕ್ತ ಪರಿಸರ, ಕಸ ಮುಕ್ತ ಪರಿಸರ, ಬಯಲುಶೌಚ ಮುಕ್ತ ಪರಿಸರ, ಬಯಲು ಮೂತ್ರ ಮುಕ್ತ ಪರಿಸರ ಹೀಗೆ ಮುಕ್ತ ಮುಕ್ತ ಎಂದು ಸಾವೇರಿ ರಾಗದಲ್ಲಿ ಹಾಡುತ್ತಾ ಐದು ವರ್ಷಗಳು ಸವೆದುಹೋಗಿವೆ. ನಮ್ಮ ಮೈಸೂರು ಸಹ ನಂಬರ್ ಒನ್ ಪಟ್ಟಕ್ಕಾಗಿ ಶ್ರಮಿಸುತ್ತಿದೆ. ಆದರೆ ನಂಜನಗೂಡಿಗೆ ಹೋಗುವ ದಾರಿಯಲ್ಲಿ ಮೂಗು ಮುಚ್ಚಿಕೊಳ್ಳದೆ ಪ್ರಯಾಣ ಮಾಡಿದವರಿಗೆ ಪ್ರಶಸ್ತಿ ಕೊಡಬಹುದು. ಇಲ್ಲಿ ಸುತ್ತಮುತ್ತ ಬಡಾವಣೆಗಳಿವೆ. ಮಧ್ಯಮ ವರ್ಗದ ಜನರು, ಬಡ ಜನರು ವಾಸಿಸುತ್ತಾರೆ. ಸಮೀಪದಲ್ಲೇ ಪ್ರಸಿದ್ಧ ದತ್ತಪೀಠವೂ ಇದೆ. ದುರ್ವಾಸನೆಯ ಒಂದು ವಿಶೇಷ ಎಂದರೆ ರೂಢಿಯಾಗಿಬಿಟ್ಟರೆ ಅದು ಪರಿಮಳದಂತೆ ಭಾಸವಾಗುತ್ತದೆ. ಅಂತಹ ದುರ್ನಾತವನ್ನು ಹೊತ್ತ ಮಾನವ ನಿರ್ಮಿತ ಬೆಟ್ಟಗುಡ್ಡಗಳನ್ನು ಸೂಯೆಜ್ ಫಾರ್ಮ್ ತ್ಯಾಜ್ಯ ಸಂಗ್ರಹಾಲಯದಲ್ಲಿ ನೋಡಬಹುದು. ಇಂತಹ ತ್ಯಾಜ್ಯ ಮ್ಯೂಸಿಯಂ ಬಹುಶಃ ಬೆಂಗಳೂರಿನ ಬಿನ್ನಿ ಮಿಲ್ಸ್ ಪಕ್ಕದಲ್ಲೂ ಇದೆ. ಎಲ್ಲೆಡೆ ಚೆಲ್ಲಿದ ಕಸವನ್ನು ಒಂದೆಡೆ ಸಂಗ್ರಹಿಸುವುದೇ ಸ್ವಚ್ಚತೆ ಎಂದಾದರೆ ನಾವು ಸದಾ ನಂಬರ್ ಒನ್. ಮಹಾತ್ಮ ಖುಷ್ ಹುವಾ !

ತ್ಯಾಜ್ಯ ಸಂಗ್ರಹಾಗಾರದ ಪಕ್ಕದಲ್ಲಿ ಹಾದು ಹೋಗುವಾಗೆಲ್ಲಾ ಮೂಗು ಮುಚ್ಚಿಕೊಂಡು ಪುರಸಭೆಯನ್ನೊ, ನಗರಸಭೆಯನ್ನೂ ನಿಂದಿಸುತ್ತಾ, ಹಿಡಿ ಶಾಪ ಹಾಕುತ್ತಾ ನಡೆದಾಡುವ ನಾವು ಮಲಗುಂಡಿಯಲ್ಲಿ ಇಳಿದು ಸ್ವಚ್ಚ ಮಾಡುವವರ ಬಗ್ಗೆ ಎಂದಾದರೂ ಯೋಚಿಸುತ್ತೇವೆಯೇ ? ಅವರಿಗೂ ನಮ್ಮಂತೆಯೇ ಮೂಗು ಇದೆಯಲ್ಲವೇ ? ಇರಲಿ, ನಮ್ಮ ನಗರಗಳ ಮುಖ್ಯ ರಸ್ಥೆಗಳು ಸ್ವಚ್ಚವಾಗಿರುತ್ತವೆ. ಪ್ರತಿದಿನ ಕಸ ಸಂಗ್ರಹಣೆ ಮಾಡುವವರು ಬರದಿದ್ದರೆ ಸೂರು ಕಳಚಿಬಿದ್ದಂತೆ ಕೂಗಾಡುತ್ತಾ ನಮ್ಮ ನಿತ್ಯ ಕರ್ಮಗಳನ್ನು ಮುಗಿಸಿರುತ್ತೇವೆ. ಒಮ್ಮೆ ನಗರ ಪರ್ಯಟನೆ ಮಾಡಿದರೆ ತಿಳಿಯುತ್ತೆ ನಮ್ಮ ಪರಿಸರ ಎಷ್ಟು ಸ್ವಚ್ಚವಾಗಿದೆ ಎಂದು.  ಒಮ್ಮೆ ಯಾವುದೇ ಊರಿಗೆ ಬೆಳಗಿನ ಹೊತ್ತು ರೈಲಿನಲ್ಲಿ ಪ್ರಯಾಣ ಮಾಡಿದರೆ ತಿಳಿಯುತ್ತೆ ಊರೊಳಗಿನ ಸ್ವಚ್ಚ ಕನ್ನಡಿ ಹೇಗೆ ಊರ ಹೊರಗೆ ತೊಪ್ಪೆಗಳಂತೆ ಬಿದ್ದಿರುತ್ತದೆ ಎಂದು. ಸ್ವಚ್ಚ ಭಾರತ ಅಭಿಯಾನ ಒಂದು ಉತ್ತಮ ಚಿಂತನೆ. ಆದರೆ ಈ ಪರಿಕಲ್ಪನೆಯ ಹಿಂದಿನ ಮನಸುಗಳಲ್ಲಿರುವ ಹೊಲಸನ್ನು ಸ್ವಚ್ಚಗೊಳಿಸುವವರಾರು ? ದೇಶ ಸ್ವಚ್ಚತೆಯ ಸಾಕಾರಮೂರ್ತಿಯಂತೆ ಕಂಗೊಳಿಸಬೇಕು ಆದರೆ ಸ್ವಚ್ಚಗೊಳಿಸುವವರು ಕೊಚ್ಚೆಯಲಿ ಮಿಂದೆದ್ದ ಬೆತ್ತಲೆ ಮೂರ್ತಿಗಳಂತಿರಬೇಕೇ ? ಈ ಪ್ರಶ್ನೆ ನಮ್ಮೊಳಗೆ ಮೂಡದಿದ್ದರೆ ನಮ್ಮ ಮಿದುಳು ಸಂಪೂರ್ಣ ಸ್ವಚ್ಚವಾಗಿ ಖಾಲಿಯಾಗಿದೆ ಎಂದೇ ಅರ್ಥ.

ಇರಲಿ ಕೇವಲ ಸರ್ಕಾರವನ್ನು ಟೀಕಿಸುವುದಷ್ಟೇ ಅಲ್ಲ. ನಾಗರಿಕ ಸಮಾಜವೂ ತನ್ನ ಪ್ರಜ್ಞೆಯನ್ನು ಚುರುಕುಗೊಳಿಸಬೇಕು. ನಮ್ಮ ಸ್ವಚ್ಚತೆ ಮತ್ತೊಬ್ಬರ ಮಾಲಿನ್ಯಕ್ಕೆ ಕಾರಣವಾಗುವ ಪರಿಸರದಲ್ಲಿ ನಿಂತು ನಾವು ತ್ಯಾಜ್ಯ ಸಂಗ್ರಹಾಲಯಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೂ ಅದು ನಮ್ಮ ಸಮಸ್ಯೆ ಅಲ್ಲ ಎಂದು ಭಾವಿಸಿ ತೆಪ್ಪಗಿರುತ್ತೇವೆ. ತ್ಯಾಜ್ಯದ ನಡುವೆಯೂ ಭವ್ಯ ಸಾಕಾರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉಧೋ ಉಧೋ ಎನ್ನುವ ನಮಗೆ ಮಲಗುಂಡಿಯಲಿ ಮರೆಯಾದ ಜೀವಗಳು ಕೊಚ್ಚೆ ಹುಳುಗಳಂತೆಯೇ ಕಾಣುವುದಾದರೆ ಸ್ವಚ್ಚಮೇವ ಜಯತೇ ಎನ್ನಲು ಹೇಗೆ ಸಾಧ್ಯ ? ಇದು ಮೋದಿ ಸಿಂಗ್ ಪ್ರಶ್ನೆಯಲ್ಲ. ನಾಗರಿಕ ಸಂವೇದನೆ ಮತ್ತು ಮಾನವ ಪ್ರಜ್ಞೆಯ ಪ್ರಶ್ನೆ. ನಮ್ಮ ದೇಶದ ಪ್ರಸ್ತುತ ಸಮಸ್ಯೆ ಎಂದರೆ ನಮ್ಮೊಳಗೇ ಇರುವ ಕ್ಯಾಮರಾದ ಮಸೂರಗಳಿಗೆ ಪರದೆ ಹಾಕಿ, ಪಿಕ್ಸೆಲ್ ಕ್ಯಾಮರಾದ ಮಸೂರಗಳಿಂದ ಹೊರಹೊಮ್ಮುವ ಸೌಂದರ್ಯವನ್ನು ಸವಿಯುತ್ತಿರುತ್ತೇವೆ. ಈ ಮಸೂರಗಳೇ ಕಲುಷಿತವಾಗಿದೆ ಅಲ್ಲವೇ ? ಆದರೂ ಅದನ್ನೇ ತೊಡುತ್ತೇವೆ. ನಮ್ಮ ಒಳಗಣ್ಣನ್ನು ಮುಚ್ಚಿಕೊಂಡು ಅವರ ಹೊರಗಣ್ಣಿಂದ ಪ್ರಪಂಚವನ್ನು ನೋಡುತ್ತೇವೆ. ಹಾಗಾಗಿಯೇ ಸ್ವಚ್ಚ ಭಾರತದ ಬಾಲ ಹುತಾತ್ಮರು ನಮಗೆ ಅಪ್ರಸ್ತುತರಾಗಿ ಬಿಡುತ್ತಾರೆ. ಗ್ಯಾಸ್ ಚೇಂಬರ್ ಗಳು ಸಹಜವಾಗಿಬಿಡುತ್ತವೆ. ಮಲಗುಂಡಿಗಳಲಿ ಮರುಗುವ ಮನಸುಗಳು ಕಳೆದುಹೋಗುತ್ತವೆ.

ಕಳೆದುಹೋಗುವ ಈ ಮನಸುಗಳ ರಾಶಿಯ ನಡುವೆಯೇ, ಗಾಂಧಿ 150ರ ಸಂದರ್ಭದಲ್ಲಿ ನಾವು ಮತ್ತೊಂದು ತ್ಯಾಜ್ಯ ಸಂಗ್ರಹಾಲಯವನ್ನು ಸೃಷ್ಟಿಸಲು ಸಜ್ಜಾಗುತ್ತಿದ್ದೇವೆ. ಅದು ಮಲಗುಂಡಿಯಲ್ಲ, ಘನ ತ್ಯಾಜ್ಯವಲ್ಲ, ದ್ರವ ತ್ಯಾಜ್ಯವಲ್ಲ. ಅದು ಶವ ತ್ಯಾಜ್ಯ. ಹೌದು ನಮ್ಮ ಮಾಧ್ಯಮಗಳ ವರದಿಗಳನ್ನು ನೋಡಿದರೆ ತ್ಯಾಜ್ಯ ಸಂಗ್ರಹಾಲಯಗಳನ್ನೂ ಮೀರಿಸುವ ಶವ ಸಂಗ್ರಹಾಲಯಗಳು ಸೃಷ್ಟಿಯಾಗುವ ದಿನಗಳು ದೂರವಿಲ್ಲ. ನಮ್ಮ ಟಿವಿ ನಿರೂಪಕರಿಗೆ ಯುದ್ಧ ಎಂದರೆ ಮೈ ನವಿರೇಳುತ್ತದೆ. ಸೇನಾಧಿಕಾರಿಗಳಿಗೂ ದೊರೆಯದ ಮಾಹಿತಿಗಳು ಇವರಿಗೆ ದೊರೆಯುತ್ತವೆ. ಉಡೀಸ್, ಖಲಾಸ್, ಮಟಾಷ್ ಮುಂತಾದ ಪದಗಳನ್ನು ಬಳಸುತ್ತಾ ವಿನಾಶಕಾರಿ ಯುದ್ಧ ಪರಂಪರೆಗೆ ಮನಸುಗಳನ್ನು ಸಿದ್ಧಪಡಿಸುವುದರಲ್ಲಿ ಮಾಧ್ಯಮಗಳು ತೊಡಗಿವೆ. ಪಾಪ ಭಾರತ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನುಈ ಯುದ್ಧ ಪರಂಪರೆಯ ಸಂಕೇತವಾಗಿ ಬಿಂಬಿಸಲು 1965ರ ಯುದ್ಧ ಮತ್ತು ಜೈ ಜವಾನ್ ಜೈ ಕಿಸಾನ್ ಘೋಷಣೆಯನ್ನು ವೈಭವೀಕರಿಸಲಾಗುತ್ತಿದೆ. ನೆಹರೂ-ಪಟೇಲ್ ಜುಗಲ್ ಬಂದಿಯ ನಂತರ ಈಗ ಗಾಂಧಿ-ಶಾಸ್ತ್ರಿ ಜುಗಲ್ ಬಂದಿ ಕೇಳಿಬರುತ್ತಿದೆ. ಇಂದು ಶಾಸ್ತ್ರಿ ಇದ್ದಿದ್ದರೆ ಪಾಕಿಸ್ತಾನ ಉಡೀಸ್ ಆಗ್ತಿತ್ತು ಎಂತಲೊ, ನೆಹರೂ ಬದಲು ಶಾಸ್ತ್ರಿ ಪ್ರಧಾನಿಯಾಗಿದ್ದಿದ್ದರೆ ಪಾಕಿಸ್ತಾನ ಸೃಷ್ಟಿಯಾಗುತ್ತಲೇ ಇರಲಿಲ್ಲ ಎಂತಲೋ ಹೇಳುವ ವಿದ್ವಾಂಸರು ವಾಟ್ಸ್ ಆಪ್ ವಿಶ್ವವಿದ್ಯಾಲಯಗಳಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ಶಾಂತಿ ಪ್ರಿಯ ಶಾಸ್ತ್ರಿಯವರನ್ನು ಯುದ್ಧಪ್ರಿಯರನ್ನಾಗಿಸುವ ಮೂಲಕ ಗಾಂಧೀಜಿಗೆ ಪ್ರತಿಸ್ಪರ್ಧಿಯನ್ನು ಸೃಷ್ಟಿಸಲಾಗುತ್ತಿದೆ.

ಇದು ಒಂದು ರೀತಿಯ ಬೌದ್ಧಿಕ ತ್ಯಾಜ್ಯ. ಗಾಂಧೀಜಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದಾಗ 13 ವರ್ಷದ ಬಾಲಕನಾಗಿದ್ದ ಶಾಸ್ತ್ರಿಯವರನ್ನು ಗಾಂಧೀಜಿಗೆ ಮುಖಾಮುಖಿಯಾಗಿಸುವವರಿಗೆ ಇತಿಹಾಸದ ಪರಿವೆ ಇಲ್ಲ ಎನ್ನುವುದು ದಿಟ. ಆದರೆ ಇದರಿಂದ ನಮ್ಮ ಮಿದುಳಿನಲ್ಲಿರುವ ಬೌದ್ಧಿಕ ತ್ಯಾಜ್ಯ ಹೆಚ್ಚಾಗುವುದಲ್ಲವೇ ? ಇಂದು ಶಾಸ್ತ್ರೀಜಿ ಜನಿಸಿದ ದಿನವೂ ಹೌದು. ಗಾಂಧಿ ಜನಿಸಿದ ದಿನವೂ ಹೌದು. ಶಾಸ್ತ್ರಿ ಓಕೆ ಗಾಂಧಿ ಯಾಕೆ ಎಂದು ಉಪ್ಪಿ ಶೈಲಿಯ ಮಾತುಗಳು ಇಬ್ಬರಿಗೂ ನ್ಯಾಯ ಒದಗಿಸುವುದಿಲ್ಲ  ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳುವುದು ಒಳಿತು. ಇತಿಹಾಸದ ವಿಭಿನ್ನ ಕಾಲಘಟ್ಟದಲ್ಲಿ ತಾವು ತುಳಿದ ಹಾದಿಗೆ ನಿಷ್ಠರಾಗಿ ತಮ್ಮದೇ ಆದ ಕೊಡುಗೆ ನೀಡಿರುವ ಇಬ್ಬರು ಮಹನೀಯರನ್ನು ತಕ್ಕಡಿಯಲ್ಲಿಟ್ಟು ತೂಗುವ ಮಟ್ಟಿಗೆ ನಮ್ಮ ಬೌದ್ಧಿಕ ಮಾಲಿನ್ಯ ಹೆಚ್ಚಾಗಿದೆ. ನೆಹರೂ ಪಟೇಲ್, ಗಾಂಧಿ ಶಾಸ್ತ್ರಿ, ಶಾಸ್ತ್ರಿ ನೆಹರೂ, ಇಂದಿರಾ ಶಾಸ್ತ್ರಿ ಹೀಗೆ ಚರಿತ್ರೆಯ ಎಲ್ಲ ಪಾತ್ರಧಾರಿಗಳನ್ನೂ ಕುಸ್ತಿಯ ಅಖಾಡಾದಲ್ಲಿಟ್ಟು ನೋಡಲು  ನಾವು ಮೊಹಮದ್ ಅಲಿ ಮತ್ತು ಫ್ರೇಸರ್ ನಡುವಿನ ಬಾಕ್ಸಿಂಗ್ ವೀಕ್ಷಿಸುತ್ತಿಲ್ಲ. ಅಥವಾ ಬ್ರೂಸ್ ಲೀ ಕರಾಟೆಯನ್ನು ವೀಕ್ಷಿಸುತ್ತಿಲ್ಲ. ಸಮಾಜಮುಖಿ ಮನಸುಗಳಿಗೆ ಇತಿಹಾಸ ಭವಿಷ್ಯದ ಹೆಜ್ಜೆಗಳಿಗೆ ಮಾರ್ಗದರ್ಶಕವಾಗಿ ಕಾಣಬೇಕು.

ಮಹಾತ್ಮನ 150ನೆಯ ಜನ್ಮದಿನದಂದು ಸ್ವಚ್ಚ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಸಜ್ಜಾಗಿರುವ ಈ ಸಂದರ್ಭದಲ್ಲಿ ಮಲವಿಸರ್ಜನೆಯ ಸಂದರ್ಭದಲ್ಲಿ ಹುತಾತ್ಜರಾದ ಎರಡು ಕೂಸುಗಳಿಗೆ ಗೌರವ ಸಲ್ಲಿಸುತ್ತಲೇ ನಮ್ಮ ಬೌದ್ಧಿಕ ಮಾಲಿನ್ಯವನ್ನು ತೊಡೆದುಹಾಕಲು ಪಣ ತೊಡಬೇಕಿದೆ. ರಸ್ತೆಯಲ್ಲಿನ ಮಲಗುಂಡಿಯನ್ನು ಸ್ವಚ್ಚ ಮಾಡಲು ಶೋಷಿತರ ಕೈಗಳಾದರೂ ಉಳಿದಿವೆ ಇಲ್ಲವಾದರೆ ಯಂತ್ರಗಳು ನೆರವಿಗೆ ಬರುತ್ತವೆ. ಆದರೆ ನಮ್ಮ ಮಿದುಳೇ ಮಲಗುಂಡಿಯಾದರೆ ಒಳಗೆ ಇಳಿಯಲು ಯಾರಿಗೆ ಸಾಧ್ಯ ? ಯಂತ್ರವೂ ಕೆಲಸಕ್ಕೆ ಬರುವುದಿಲ್ಲ. ನಮ್ಮ ಕೈಗಳೂ ನೆರವಾಗುವುದಿಲ್ಲ. ಚಿಂತನೆಯೊಂದೇ ಮಾರ್ಗ. ಮನಸ್ಸೊಂದೇ ಆಯುಧ. ಈ ಮನಸುಗಳನ್ನು ತಿಕ್ಕಿ ತೊಳೆದು ಸ್ವಚ್ಚಗೊಳಿಸಿ, ಚಿಂತನೆಗಳನ್ನು ಪಾರದರ್ಶಕಗೊಳಿಸಿ ಮುನ್ನಡೆದರೆ ಗಾಂಧಿ ನಮ್ಮೊಡನಿರುತ್ತಾರೆ. ಶಾಸ್ತ್ರೀಜಿಯವರೂ ಇರುತ್ತಾರೆ. ಕಸದ ಡಬ್ಬಿಗೆ ತ್ಯಾಜ್ಯ ಸುರಿಯುವ ಪ್ರತಿ ಕ್ಷಣದಲ್ಲೂ ನಮ್ಮ ಮನದೊಳಗಿನ ತ್ಯಾಜ್ಯವನ್ನು ಸ್ವಪ್ರೇರಣೆಯಿಂದ ಹೊರಹಾಕುವುದರ ಮೂಲಕ ಗಾಂಧಿ 150ರ ಸಂದರ್ಭವನ್ನು ಸಾರ್ಥಕಪಡಿಸಲು ಸಾಧ್ಯ.
 
--