ಪತ್ರಕರ್ತ ಪ್ರಶಾಂತ್‌ ಕನೋಜಿಯಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ಪತ್ರಕರ್ತ ಪ್ರಶಾಂತ್‌ ಕನೋಜಿಯಾ ಬಿಡುಗಡೆಗೆ ಸುಪ್ರೀಂ ಕೋರ್ಟ್  ಆದೇಶ

ದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ ವಿರುದ್ಧ ಟ್ವೀಟ್ ಮಾಡಿ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಪ್ರಶಾಂತ್‍ ಕನೋಜಿಯಾ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಹವ್ಯಾಸಿ ಪತ್ರಕರ್ತರಾಗಿರುವ ಪ್ರಶಾಂತ್‍ ಕನೋಜಿಯಾ ಅವರನ್ನು ಉತ್ತರ ಪ್ರದೇಶದ ಪೊಲೀಸರು ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು ಎಂದು ಆರೋಪಿಸಿ ಬಂಧಿಸಿದ್ದರು.

ಉತ್ತರ ಪ್ರದೇಶ ಪೊಲೀಸರು ವಾರೆಂಟ್‍ ಹಾಗೂ ಸಕಾರಣವಿಲ್ಲದೆ ಪ್ರಶಾಂತ್‍ರನ್ನು ಬಂಧಿಸಿದ್ದಾರೆ ಎಂದು ಪ್ರಶಾಂತ್‍ ಪತ್ನಿ ಬಿಡುಗಡೆಗಾಗಿ ಸೋಮವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಪತ್ರಕರ್ತನ ಪತ್ನಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಇಂದಿರಾ ಬ್ಯಾನರ್ಜಿ ಮತ್ತು ಅಜಯ್‍ ರಸ್ತೋಗಿ ನೇತೃತ್ವದ ಪೀಠ ಪತ್ರಕರ್ತನನ್ನು ಬಿಡುಗಡೆಗೊಳಿಸಲು ಆದೇಶ ನೀಡಿದೆ. ಇಂದಿನ ವಿಚಾರಣೆಯಲ್ಲಿ ನ್ಯಾಯಪೀಠವು “ಪೊಲೀಸರು ಪ್ರಶಾಂತ್‍ ಅವರನ್ನು ವಿಚಾರಣೆ ನಡೆಸಬಹುದಾದರೂ ಬಂಧಿಸುವಂತಿಲ್ಲ. ಆರೋಪಿ ಯಾವ ರೀತಿಯ ಪೋಸ್ಟ್ ಮಾಡಿದ್ದಾನೆ ಎನ್ನುವುದಕ್ಕಿಂತಲೂ ಆತನ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆಯೇ ಎನ್ನುವುದು ಮುಖ್ಯ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಶಾಂತ್‍ ಕನೋಜಿಯಾ ಅವರು ಇಂಡಿಯನ್‍ ಎಕ್ಸ್‍ಪ್ರೆಸ್‍, ದ ವೈರ್‍ ಎನ್ನುವ ಸುದ್ದಿಜಾಲತಾಣಕ್ಕಾಗಿ  ಹವ್ಯಾಸಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು.