ಸರ್ವೋಚ್ಚ ನ್ಯಾಯಾಲಯ ವಿಂಗಡಣೆ : ಚರ್ಚೆಗೆ ಗ್ರಾಸವಾದ ಉಪರಾಷ್ಟ್ರಪತಿ ನಿಲುವು

ಸರ್ವೋಚ್ಚ ನ್ಯಾಯಾಲಯ ವಿಂಗಡಣೆ : ಚರ್ಚೆಗೆ ಗ್ರಾಸವಾದ ಉಪರಾಷ್ಟ್ರಪತಿ ನಿಲುವು

 ಸರ್ವೋಚ್ಚ ನ್ಯಾಯಾಲಯ ಬೇರೆ ಬೇರೆಯಾಗಿ ವಿಂಗಡಿಸಬೇಕು ಎಂಬ ನಿಲುವನ್ನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಂಡಿಸುವ ಮುಖೇನ ಮತ್ತೊಂದು ಗಹನ ಚರ್ಚೆಗೆ ನಾಂದಿ ಹಾಡಿದ್ದಾರೆ.

ಸಂವಿಧಾನದ ಅನುಚ್ಚೇದ 130 ರಲ್ಲಿ ರಾಷ್ಟ್ರಪತಿಯವರ ಪೂರ್ವಾನುಮತಿ ಮೇರೆಗೆ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ದೇಶದ ಯಾವುದೇ ಸ್ಥಳದಲ್ಲಿ ಬೇಕಾದರೂ ಕಾರ್ಯಕಲಾಪ ನಡೆಸಬಹುದು ಎಂದು ಹೇಳಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ವೆಂಕಯ್ಯ ನಾಯ್ಡು, ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ನಾಲ್ಕು ಪ್ರಾಂತ್ಯಗಳಲ್ಲಿ ನ್ಯಾಯಾಲಯ ಪೀಠವಾಗಬೇಕು ಎಂದಿದ್ದಾರೆ.

ಸಾಂವಿಧಾನಿಕ ಪೀಠ ಮತ್ತು ಮೇಲ್ಮನವಿಗಳ ಇತ್ಯರ್ಥಕ್ಕಾಗಿಯೇ ಪ್ರತ್ಯೇಕ ಸರ್ವೋಚ್ಚ ನ್ಯಾಯಾಲಯಗಳಿರಬೇಕು, ತ್ವರಿತ ವಿಲೇಗಾಗಿ ಉತ್ತರ ಭಾಗಕ್ಕೆ ದೆಹಲಿ, ದಕ್ಷಿಣಕ್ಕೆ ಚೆನ್ನೈ ಅಥವಾ ಹೈದರಾಬಾದ್, ಪೂರ್ವಕ್ಕೆ ಕೊಲ್ಕತ್ತಾ, ಪಶ್ಚಿಮಕ್ಕೆ ಮುಂಬೈನಲ್ಲಿ ಪೀಠಗಳಿರಬೇಕು ಎಂಬ ಅಭಿಪ್ರಾಯವನ್ನ 2009 ಕಾನೂನು ಆಯೋಗ ಕೊಟ್ಟಿದ್ದ ಶಿಫಾರಸಿನ ಆಧಾರದಲ್ಲಿ ಹೇಳಿದ್ದಾರೆ(ಆಯೋಗದ ಶಿಫಾರಸನ್ನು ಪೂರ್ಣ ಪ್ರಮಾಣದ ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿತ್ತು)

ನ್ಯಾಯಾಲಯಗಳು ಪ್ರಕರಣ ಮುಂದೂಡಿಕೆಗೆ ಕಾಲಮಿತಿ ಬೇಕು, ಪಕ್ಷಾಂತರ ನಿಷೇಧ ಕುರಿತ ಸಂವಿಧಾನದ 10 ನೇ ಪರಿಚ್ಚೇದದ ಬಗ್ಗೆ ಸ್ಪಷ್ಟತೆ ಕೊಡಬೇಕಲ್ಲದೆ, ಸಭಾಧ್ಯಕ್ಷರ ತೀರ್ಪಿನ ಇತ್ಯರ್ಥಕ್ಕೆ ಗಡುವು ಇರಬೇಕು, ಚುನಾವಣೆ ವಿಚಾರ ಮತ್ತು ರಾಜಕಾರಣಿಗಳ ಅಪರಾಧ ಪ್ರಕರಣಗಳ ಬಗ್ಗೆಯೇ ವಿಶೇಷ ನ್ಯಾಯಾಲಯಗಳು ಪ್ರತ್ಯೇಕವಾಗಿರಬೇಕು ಎಂಬ ಪ್ರಸ್ತಾಪ ಮಂಡಿಸಿರುವುದು ಮುಂದೊಂದು ದಿನ ಸರ್ವೋಚ್ಚ ನ್ಯಾಯಾಲಯ ದೆಹಲಿಯಲ್ಲಲ್ಲದೇ ಬೇರೆಡೆಯೂ ಪೀಠ ಹೊಂದಬಹುದು ಎಂಬಾಸೆ ಗರಿಗೆದರಿದೆ.