ಸಾಮಾಜಿಕ ನ್ಯಾಯದ ಕಟಕಟೆಯಲ್ಲಿ ಸುಮಲತಾ...

ಸಾಮಾಜಿಕ ನ್ಯಾಯದ ಕಟಕಟೆಯಲ್ಲಿ ಸುಮಲತಾ...

ವೈಯಕ್ತಿಕವಾಗಿ ಪ್ರಖ್ಯಾತಿ ಪಡೆದಿರುವ ಚಿತ್ರ ನಟಿ ಸುಮಲತಾ ಅವರು ಯಶಸ್ವಿ ನಾಯಕಿ. ಸ್ವಪ್ರತಿಭೆ ಮತ್ತು ಸಂಸಾರವನ್ನು ಸರಿದೂಗಿಸಿಕೊಂಡು ಅರ್ಧ ಶತಕಕ್ಕೂ ಹೆಚ್ಚು ಅರ್ಥಪೂರ್ಣ ಬದುಕು ನಡೆಸಿದ ಗೌರವಾನ್ವಿತ ಮಹಿಳೆ. ಅವರು ಅಂಬರೀಶ್ ಪತ್ನಿಯೂ ಹೌದು, ಅಭಿಶೇಕ್ ಅವರ ತಾಯಿಯೂ ಹೌದು. ಅವರ ಬಗ್ಗೆ ಹೇಳಲು, ಬರೆಯಲು ಪೀಠಿಕೆಯ ಅಗತ್ಯವಿದೆ ಎನಿಸುವುದಿಲ್ಲ. ಸಮಾಜದಲ್ಲಿ ಕೆಲವು ಕ್ಷೇತ್ರಗಳೇ ಹಾಗೆ.

 

ರಾಜಕೀಯ, ಚಿತ್ರರಂಗ, ಕ್ರೀಡೆ ಈ ಮೂರು ಕ್ಷೇತ್ರದಲ್ಲಿದ್ದರೆ ವ್ಯಕ್ತಿ ತಡವಿಲ್ಲದೆ ಜನಪ್ರಿಯರಾಗುತ್ತಾರೆ ಎನ್ನುವ ಮಾತನ್ನು ಬಾಲ್ಯದಿಂದಲೇ ಕೇಳುತ್ತ ಬಂದಿರುವೆ. ಆದರೆ ಯಾವ ರೀತಿಯ ಜನಪ್ರಿಯತೆ ಗಳಿಸುತ್ತಾರೆ ಅನ್ನೊ ಮಾತು ಗ್ರಹಿಸಲು ಸಾಧ್ಯವಾಗುವುದು ಪ್ರಜ್ಞೆ ಮೂಡಿದ ನಂತರವೆ.

 

ಸುಮಲತಾ ಅವರೇನು ವೈಯಕ್ತಿಕವಾಗಿ ಪರಿಚಯವಿದ್ದವರಲ್ಲ. ಅವರನ್ನು ಚಲನಚಿತ್ರದಲ್ಲಿ ಬಿಟ್ಟರೆ, ಬೇರೆಲ್ಲೂ ನೋಡಿಲ್ಲ. ಅವರೂ ಒಬ್ಬ ಮಹಿಳೆ ಎನ್ನುವ ಕಾರಣಕ್ಕೆ ಮನ ಮಿಡಿಯಿತು. ‘ಹೆಣ್ಣಿನ ನೋವನ್ನು ಹೆಣ್ಣೇ ಬಲ್ಲಳು’. ಅವರನ್ನು ಕುರಿತು ಕೇವಲ ಸಾಪ್ಟ್ ಕಾರ್ನರ್ ಅಷ್ಟೇ ಅಲ್ಲ, ಒಮ್ಮೊಮ್ಮೆ ಹೆಣ್ಣಿನ ಕುರಿತು ಬರುವ ಹಗುರವಾದ ಮಾತುಗಳಿಗೆ ಮನದ ರೋಷಾವೇಶಕ್ಕೂ ದಾರಿ ಮಾಡಿಕೊಟ್ಟಿದೆ.

 

ಮಂಡ್ಯದ ಲೋಕಸಭಾ ಚುನಾವಣೆಯ ಮಾತು ಆರಂಭವಾಗಿ, ಅದರಲ್ಲಿ ಸುಮಲತಾ ಅವರು ಸಹಭಾಗಿತ್ವ ತೋರಲು ಮುಂದಾದಾಗಿನಿಂದ ಶುರುವಾದ ವಾದ ವಿವಾದಗಳು, ಇಂದಿನವರೆಗೂ ಮುಗಿದಿಲ್ಲ. ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿರುವುದೇ ನೋವಿನ ಪರಿಸ್ಥಿತಿ. ಅದು ತನ್ನದೇ ಹಾದಿ ಹಿಡಿದು ಕೊನೆಗೊಂಡು ಮತ್ತೆ ಹೊಸ ರೀತಿಯಲ್ಲಿ ಕುರುಡು ಕಾರಣ ಹುಡುಕಿ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ. ಇದು ಪ್ರಜಾಪ್ರಭುತ್ವದಲ್ಲಿ ಕಾಣುತ್ತಿರುವುದು ಆರೋಗ್ಯಕರ ಸಂಗತಿಯಲ್ಲ. ಒಂದು ರೀತಿಯಲ್ಲಿ ಇಡೀ ರಾಜಕೀಯ ಕ್ಷೇತ್ರವೇ ಇರಿಸುಮುರಿಸಿನ ವಾತಾವರಣವನ್ನು ಸೃಷ್ಟಿಸಿಕೊಂಡು, ಅದರಲ್ಲೇ ಸಿಲುಕಿ ಹಾಕಿಕೊಂಡ ಭಾವ. ಅದಕ್ಕೆ ಒಬ್ಬ ಮಹಿಳೆಯೇ ಕಾರಣ ಎನ್ನುವುದು ತೀರಾ ವಿಷಾದನೀಯ ಸ್ಥಿತಿ.

 

ಸಮಾಜದಲ್ಲಿ ವರ್ಣ, ವರ್ಗ, ಜಾತಿ ಭೇದಿಸಿ ಬಹಳ ಮುಂದೆ ಬಂದ ನಂತರವೂ ಮತ್ತೆ ಅದೇ ಆಲಾಪ ಕೇಳಿದಾಗ ಮನಸಿಗೆ ಕಿರಿಕಿರಿ ಎನಿಸುವುದು. ಅನೇಕ ಮಹಾಪುರುಷರು, ದಿಟ್ಟ ಮಹಿಳೆಯರು, ಸ್ವಾತಂತ್ರ್ಯ ಹೋರಾಟಗಾರರು, ಸ್ತ್ರೀಪರ ನಿಲುವುಳ್ಳ ಸೈದ್ಧಾಂತಿಕ ವ್ಯಕ್ತಿಗಳು ಮಾಡಿದ ಶ್ರಮವೆಲ್ಲಾ ಹೊಳೆಯಲ್ಲಿ ಹುಣಸೇಹಣ್ಣು ಹಿಂಡಿದಂತಾಗಿದೆ.

 

ಅಂಬರೀಶ ಅವರನ್ನು ಕಳೆದುಕೊಂಡು, ಅದೇ ದುಃಖದ ಗಾಯ ಹಕ್ಕಳಿಗಟ್ಟಿತ್ತು. ರಾಜಕೀಯ ಕ್ಷೇತ್ರದ ಮುಖಂಡರು ಆ ಹಕ್ಕಳಿಯನ್ನೇ ಕಿತ್ತುವಂತಹ ಮಾತುಗಳನ್ನಾಡಿ ಸುಮಲತಾ ಅವರಿಗೆ ತೀವ್ರ ತರದ ನೋವು ಕೊಟ್ಟರು. ಇದು ನಡೆದದ್ದು ಜಾಗತಿಕ ಮಹಿಳಾ ದಿನಾಚರಣೆಯ ಸಂದರ್ಭದಲ್ಲೇ ಎನ್ನುವುದು ಇನ್ನೂ ನೋವಿನ ಸಂಗತಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ನೂರಾರು ವರುಷಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಬಂದ ಪರಂಪರೆ ಅರ್ಥಹೀನ ಎನಿಸುವಂತಾಗಿದ್ದು ದುಃಖದ ಸಂಗತಿ. ಜರ್ಮನಿ ದೇಶದ ಕ್ಲಾರಾ ಜೆಟ್ಕಿನ್ ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಮಾಡಿದ ಹೋರಾಟ, ನಮ್ಮ ದೇಶದಲ್ಲಿ ಇನ್ನೂ ಹೋರಾಟವಾಗಿಯೇ ಉಳಿದಿರುವುದು ಫ್ಯೂಡಲ್ ಮೈಡ್ ಸೆಟ್ ಗೆ ದ್ಯೋತಕ.

 

ಮಂಡ್ಯದಿಂದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಗೆಲುವನ್ನು ಸಾಧಿಸಲಿದ್ದಾರೆ ಎನ್ನುವ ಕೂಗು ಈಗ ಕೇಳಿ ಬರುತ್ತಿದೆ. ಅವರು ಈ ಹಂತವನ್ನು ತಲುಪುವವರೆಗೆ ಏನೆಲ್ಲಾ ಕೇಳ ಬೇಕಾಯಿತು. ಅದೂ ಅವರೊಬ್ಬ ಮಹಿಳೆ ಎನ್ನುವ ಕಾರಣಕ್ಕಾಗಿಯೇ ಎಂದಾಗ ನೋವಾಗುವುದು.

 

ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅರ್ಥಿಕವಾಗಿ, ಪ್ರತಿಭಾ ಸಂಪನ್ನೆಯಾಗಿ ಮಹಿಳೆ ಶಕ್ತಿಯುತವಾಗಿ ಇಂದು ಹೊರಹೊಮ್ಮುತ್ತಿದ್ದಾಳೆ. ಇಂತಹ ಸಂದರ್ಭದಲ್ಲೂ ಸಾರ್ವಜನಿಕವಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಭಾಗವಹಿಸುವಾಗ ಅವಳ ಮೇಲಿನ ನಿರ್ಬಂಧ, ಕಟ್ಟುಪಾಡು, ಮಡಿವಂತಿಕೆ ಮುಂತಾದ ವಿಷಯಗಳು ತನ್ನಿಂದ ತಾನೇ ಜೀವಂತಿಕೆ ಪಡೆದುಕೊಳ್ಳುತ್ತಿರುವುದು ತಾರತಮ್ಯದ ಮನೋಸ್ಥಿತಿಗೆ ನಿದರ್ಶನ. ರಾಜಕೀಯ ಕ್ಷೇತ್ರ ಮಹಿಳೆಗೆ ಅಪಥ್ಯ ಎಂದು ಸಾಬೀತು ಪಡಿಸುವುದು ಬೇಕೆನಿಸುವುದಿಲ್ಲ. ಇದೊಂದು ಗಂಭೀರ ವಿಷಯ.

 

ಸಮಾಜದ ಗಣ್ಯರ ವಿರೋಧ, ಬಿರುನುಡಿ, ಕುತಂತ್ರಗಳನ್ನು ಎದುರಿಸಿದ್ದು ಒಬ್ಬ ಪ್ರತಿಭಾನ್ವಿತ, ದುಃಖ ತಪ್ತ ಮಹಿಳೆ. ಅವಳು ಹಿಂದೆ ಸರಿಯಬಹುದಿತ್ತು. ಹಾಗೆ ಮಾಡದೆ ಗಟ್ಟಿಯಾಗಿ ನಿಲ್ಲಲು ಸುಮಲತಾ ಅವರಲ್ಲಿದ್ದ ಸಹನೆ, ಧೈರ್ಯ ಮತ್ತು ಸಂಯಮದ ಮಾತುಗಳೇ ಕಾರಣ.

 

ಮಕ್ಕಳು ಯಾವತ್ತೂ ತಾಯಿಯ ಕೈ ಬಿಡುವುದಿಲ್ಲ ಅನ್ನೋ ಮಾತಿಗೆ ತಕ್ಕಂತೆ, ಯಶ್, ದರ್ಶನ್, ಅಭಿಶೇಕ್ ಮುಂತಾದವರು ಕಹಳೆಯನೂದುತ್ತಿರುವುದೇ ಉದಾಹರಣೆ. ಮಂಡ್ಯದ ಅಭಿಮಾನಿಗಳ ಒತ್ತಾಸೆಗೆ ಮಣಿದ ಸುಮಲತಾ ಅವರಿಗೆ ಅವರ ಶ್ರೀರಕ್ಷೆ ಇರಲೆಂದು ಹಾರೈಸುವೆ.

 

ಸುಮಲತಾ ಅವರು ಗೆದ್ದರೂ ಅಷ್ಟೆ, ಸೋತರೂ ಅಷ್ಟೆ. ಈ ಅಖಾಡಕ್ಕೆ ಇಳಿದು ಮುಂದುವರಿದದ್ದೇ ಆರೋಗ್ಯಕರ ಚಿನ್ಹೆ. ‘ಸಾಮಾಜಿಕ ನ್ಯಾಯ’ ಎನ್ನುವುದು ಈ ಮನುಕುಲದಲ್ಲಿ ಜೀವಂತವಾಗಿದ್ದರೆ ಖಂಡಿತಾ ಸುಮಲತಾ ಅವರು ಗೆದ್ದೇ ಗೆಲ್ಲುತ್ತಾರೆ. ಹಾಗೇ ಆಗಲೆಂದು ನಿಸ್ಪ್ರಹತೆಯಿಂದ ಪ್ರಜ್ಞಾವಂತರೆಲ್ಲರೂ ಸೇರಿ ಬಯಸೋಣ.