ಬೇಸರ ಮೂಡಿಸದೇ ಆರೋಗ್ಯಕರ ಚರ್ಚೆಗೆ ಅವಕಾಶ ನೀಡುವ 'ಸೂಜಿದಾರ'

ಬೇಸರ ಮೂಡಿಸದೇ ಆರೋಗ್ಯಕರ ಚರ್ಚೆಗೆ ಅವಕಾಶ ನೀಡುವ 'ಸೂಜಿದಾರ'

"ಮನಸ್ಸು ದೇಹದ ಮೇಲಿನ ಮೊದಲ ಗಾಯ.ಎಂದೂ ಮಾಯದ ಗಾಯ" ಎಂಬ ಇಂಪ್ರೆಸ್ಸಿವ್ ನುಡಿಯನ್ನು ತಾಗಿಸಿ ಶುರುವಾಗುವ ಸಿನಿಮಾ "ಸೂಜಿದಾರ"."ಬೆಲ್ ಬಾಟಂ" ನಂತರ ನನ್ನನ್ನು ಎರಡನೇ ಬಾರಿಗೆ ಥಿಯೇಟರ್ ಗೆ ಸೆಳೆದ ಸಿನಿಮಾ ಇದು.ಪೇಪರ್ ಹಾಕುವ ಹುಡುಗನ ಪರಿಣಾಮವರಿಯದ ವರ್ತನೆಯೇ ಕಾರಣವಾಗಿ ಇಬ್ಬರು ವ್ಯಕ್ತಿಗಳ ಬದುಕು ಯಾರದೋ ಸೆಳವಿಗೆ ಸಿಕ್ಕಿ ಭಿನ್ನ ತಿರುವುಗಳಿಗೆ ತೆರೆದುಕೊಳ್ಳುವ ಚಿತ್ರಕತೆ ಸೂಜಿದಾರದ್ದು.
ಇವತ್ತಿನ ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ವಿಚಾರಗಳಿಗೇನೇ  ಮನಸೋತ ಪುಂಡರು ತಮಗೆ ಯಾವ ರೀತಿಯಲ್ಲೂ ನೇರವಾಗಿ ಸಂಬಂಧಪಡದವರ ಬಾಳನ್ನು ನರಕಕ್ಕೆ ನೂಕುತ್ತಿರುವ ಸಮಕಾಲೀನ ರೋಗವೇ ಒಟ್ಟೂ ಸಿನಿಮಾದ ನಂತರದ ಘಟನೆಗಳ ತಳಹದಿ. ಮೂಲಭೂತವಾದಿಗಳು ಪ್ರಕೃತಿ ಸಹಜ ಪ್ರೇಮವನ್ನೂ ಅಪರಾಧೀಕರಿಸುವ ಪ್ರಯತ್ನ ಶಬ್ಬೀರ್ ಮತ್ತು ಸಾಕ್ಷಿ ಬಾಳಿನ ನಾಳೆಗಳನ್ನು ಛಿದ್ರೀಕರಿಸುತ್ತದೆ. ಪ್ರಜ್ಞಾಳ ಜೀವ ತೆಗೆಯುತ್ತದೆ.
ಹೀಗೆ ಒಂದೇ ಮೂಲ ಕಾರಣದಿಂದ ಸಾಕ್ಷಿ ಮತ್ತು ಶಬ್ಬೀರ್ ಬದುಕು ಭಿನ್ನ ಸವಾಲುಗಳಿಗೆ ಸಿಲುಕಿ; ಸಾಕ್ಷಿ ಪದ್ಮಳಾಗಿ, ಶಬ್ಬೀರ್ ಶಂಕ್ರನಾಗಿ ಅವರು ಮಾಡದಿರುವ ತಪ್ಪಿನಿಂದ ಹೊರ ಬರುವ ಪ್ರಯತ್ನ ಒಟ್ಟೂ ಚಿತ್ರದ್ದು.
ಸಮಕಾಲೀನ ವಸ್ತುವನ್ನೊಳಗೊಂಡ ಸಿನಿಮಾ: ಈ ಸಮಾಜದ ಕ್ರೌರ್ಯವನ್ನು, ಮಾನವ ಸಂಬಂಧಗಳ ತೀವ್ರ ಸಂಘರ್ಷವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಂಡಿಸಲು ಹವಣಿಸುತ್ತಲೇ ದಿಕ್ಕು ತಪ್ಪಿ ಮತ್ತೆ ದಿಕ್ಕು ಹಿಡಿಯುವ ಪ್ರಯತ್ನ ಮಾಡುತ್ತದೆ.
ರಂಗಕೃತಿ ಮತ್ತು ಸಿನಿಮಾ ಎರಡೂ ಭಿನ್ನ ಪ್ರಕಾರಗಳು. ಕತೆಯನ್ನು ಸಶಕ್ತಗೊಳಿಸುವ ಸಲುವಾಗಿ ಸಿನಿಮಾ ನಿರ್ದೇಶಕ ಅವೆರಡನ್ನೂ ನಿರೂಪಣೆಯಲ್ಲಿ ಬೆರೆಸಬಹುದು. ಇಲ್ಲಿಯೂ ನಿರ್ದೇಶಕರು ಆ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನ ಕೆಲವು ಕಡೆ ಪಾತ್ರಗಳ ಆತ್ಮಶೋಧನೆಗೆ, ಘಟನೆಯ ಭಿನ್ನ ಮುಖದ ಅನಾವರಣಕ್ಕೆ ನೆರವಾಗುವಂತಿರಬೇಕು. ಸೂಜಿದಾರ ಸಿನಿಮಾದಲ್ಲಿ ಅದು ಒಬ್ಬ ಸೆನ್ಸಿಬಲ್ ಪ್ರೇಕ್ಷಕನನ್ನು ಕಿರಿಕಿರಿಗೆ ದೂಡುತ್ತದೆ. ಅಸಲಿಗೆ ಸಿನಿಮಾ ಶುರುವಾಗುವುದೇ ಪ್ರಿನ್ಸಿಪಾಲ್ ಡಿಸೋಜ ಮಂಗಳೂರಿನ ಕಾಲೇಜಿಗೆ ಬಂದ ನಂತರ. ಅಷ್ಟೊತ್ತಿಗೆ ಪ್ರೇಕ್ಷಕ ಸುಮಾರು ನಲವತ್ತು ನಿಮಿಷ ಕಾಯಬೇಕಾಗುತ್ತದೆ.ಬುರುಜನಟ್ಟಿ ರಾಜಿ, ಆಕೆಯ ನಟನಾಸಕ್ತಿ, ಸೀರಿಯಲ್ ವ್ಯಾಮೋಹ,ಪದ್ಮಶ್ರೀ ಪ್ರಶಸ್ತಿ ಫಲಕದ ಕಳ್ಳತನ ಈ ಯಾವುವೂ ಸಿನಿಮಾದ ಪ್ರಧಾನ ಎಳೆಯೊಂದಿಗೆ ಬೆರೆಯುವುದೇ ಇಲ್ಲ. ಈ ಕತೆಯ ಮುಂದುವರಿಕೆಯ ಕ್ಲೈಮ್ಯಾಕ್ಸ್ ನಿರೀಕ್ಷಿಸುವ ಪ್ರೇಕ್ಷಕನಿಗೆ ಅನಗತ್ಯವೆನ್ನಿಸುವ ಕಿರಿಕಿರಿ ಉಂಟು ಮಾಡುತ್ತವೆ. ಕತೆಯ ಓಘಕ್ಕೆ ಅನಗತ್ಯ ತಡೆಯೊಡ್ಡುತ್ತವೆ. 
ತೀರಾ ಸಕಾಲಿಕ ಚಿತ್ರಕತೆಯ ಸಿನಿಮಾ ಪ್ರಮುಖ ಎಳೆಯನ್ನು ಮತ್ತಷ್ಟು ಬಲಪಡಿಸಿ ಪ್ರೇಕ್ಷಕನನ್ನು ಆವರಿಸಿಕೊಳ್ಳುವ ಅವಕಾಶ ಶಂಕ್ರ ಪದ್ಮಳ ಮನೆಯಲ್ಲಿ ಸಿಲುಕಿಕೊಂಡಾಗಿನ ಸನ್ನಿವೇಶದಲ್ಲಿದ್ದರೂ ಅದನ್ನು ಪರಿಣಾಮಕಾರಿಯಾಗಿ ದುಡಿಸಿಕೊಳ್ಳಲು ನಿರ್ದೇಶಕ ಇನ್ನೂ ಪ್ರಯತ್ನಿಸಬೇಕಿತ್ತು. ಹಿನ್ನೆಲೆ ಸಂಗೀತ, ಎರಡು ಹಾಡು, ನಟನೆ ಚೆನ್ನಾಗಿದೆ. ಹಾಗೆಯೇ ದೃಶ್ಯೀಕರಣ. 
ಸ್ಟಾರ್ ಗಳ ನಿಷ್ಪ್ರಯೋಜಕ ಸಿನಿಮಾಗಳು ಸೃಷ್ಟಿಸುವ ಬೇಸರವನ್ನು "ಸೂಜಿದಾರ" ಸೃಷ್ಟಿಸುವುದಿಲ್ಲ‌. ಒಂದು ಸಂವಾದ ಸೃಷ್ಟಿಸಬಲ್ಲ ಆರೋಗ್ಯಕರ ಅವಕಾಶ ಉಳಿಸಿಯೇ ಥಿಯೇಟರ್‌ ನಿಂದ ಪ್ರೇಕ್ಷಕನನ್ನು ಬೀಳ್ಕೊಡುತ್ತದೆ.