ಅಸಹ್ಯ ಹುಟ್ಟಿಸುವ ರಾಜಕೀಯ ಮೇಲಾಟ

ಅಸಹ್ಯ ಹುಟ್ಟಿಸುವ ರಾಜಕೀಯ ಮೇಲಾಟ

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಕದ ಮುಂಬೈ ಸೇರಿರುವ 15  ಜನ ಎಂಎಲ್ಎಗಳ ಅಳಲು, ನಮ್ಮ ಕೆಲಸ ಆಗುತ್ತಿಲ್ಲ, ನಮ್ಮ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ, ನಮ್ಮ ಪ್ರತಿ ಕೆಲಸದಲ್ಲೂ ಸಚಿವ ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ, ನಮ್ಮ ಕಷ್ಟ ಕೇಳಲು ಸಿಎಂ ಕುಮಾರಸ್ವಾಮಿ ಕೈಗೆ ಸಿಗುವುದಿಲ್ಲ. ಹೀಗೆ ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ನೀಡುತ್ತಿದ್ದಾರೆ.

ಇಷ್ಟೆಲ್ಲ ಆರೋಪಗಳ ಸರಮಾಲೆಗಳನ್ನು ಮಾಡುತ್ತಿರುವ ಈ ಶಾಸಕರು, ಸದನಕ್ಕೆ ಬಂದು ಹಾಜರಾಗಲು ಸಿದ್ದರಿಲ್ಲ. ಕೇಳಿದ್ದರೆ ರಾಜೀನಾಮೆ ಕೊಟ್ಟಿದ್ದೇವೆ ಎಂಬ ಸಬೂಬು. ಅರೆ, ರಾಜೀನಾಮೆ ಕೊಟ್ಟು ಮುಂಬೈ ಸೇರಿದ್ದರೆ ಏನು ಬಂತು ಪ್ರಯೋಜನ.? ನಿಮ್ಮ ರಾಜೀನಾಮೆ ಅಂಗೀಕಾರ ಆಗಬೇಕು ಎಂಬ ಹಂಬಲ ನಿಮ್ಮದ್ದು. ಹಾಗಿದ್ದರೆ ನಿಮ್ಮ ಪಕ್ಷ ಕೊಡುವ ವಿಪ್ ಗೆ ಸವಾಲು ಹಾಕಿ, ಸದನಕ್ಕೆ ಹಾಜರಾಗಿ ಸರ್ಕಾರದ ಮುಖವಾಡವನ್ನು ಬಯಲು ಮಾಡಿ. ನಿಮಗೆ ಆದ ಅನ್ಯಾಯವನ್ನ ಇಡೀ ರಾಜ್ಯದ ಮುಂದೆ ಇಡಿ. ಆಗ ನಿಮ್ಮ ಮೇಲೆ ರಾಜ್ಯದ ಜನರಿಗೆ ಒಂದಷ್ಟು ವಿಶ್ವಾಸ ಮೂಡುತ್ತೆ.‌ ಅದನ್ನು ಬಿಟ್ಟು ಮುಂಬೈನಲ್ಲಿ ಕೂತರೆ ಪ್ರಯೋಜನ ಏನು.?

ಇನ್ನೂ ರಾಜ್ಯದ ವಿಧಾನ ಸಭೆಯಲ್ಲಿ ನಡೆಯುತ್ತಿರುವ ವಿದ್ಯಮಾನ ನೋಡಿದ್ರೆ ನಿಜಕ್ಕೂ ನಾಚಿಕೆ ಆಗುತ್ತೆ. ಒಂದು ಕಡೆ ವಿಶ್ವಾಸಮತ ಯಾಚನೆಗೆ ಮೀನಾಮೇಷ ಎಣಿಸುತ್ತಿರುವ ಸರ್ಕಾರ, ಮತ್ತೊಂದೆಡೆ ಆತುರಕ್ಕೆ ಬಿದ್ದಂತೆ  ಮತಯಾಚನೆ ಮಾಡಿ ಎಂದು ಬಿಜೆಪಿ. ಇಬ್ಬರಲ್ಲೂ ಕಾಣುವುದು ಒಂದೆ ಅಧಿಕಾರ  ದಾಹ. ಒಂದು ಕಡೆ ರಾಜ್ಯದ ಜನ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಮಳೆಯಾಗದೆ ರೈತ ಕಂಗೆಟ್ಟಿದ್ದಾನೆ. ಕುಡಿಯುವ ನೀರಿಗೆ ಹಾಹಾಕಾರ ಏರ್ಪಟ್ಟಿದೆ. ಅಧಿಕಾರಿಗಳನ್ನು ಕೇಳುವವರೆ ಇಲ್ಲದಂತಾಗಿದೆ.

ಈ ಸಂದರ್ಭದಲ್ಲಿ ಕುರ್ಚಿಗಾಗಿ ಮೂರು ಪಕ್ಷಗಳ ಕಿತ್ತಾಟ ನೋಡಿದರೆ, ರಾಜ್ಯದ ಜನ ಇವರಿಗೆ ಮತ ಹಾಕಿದ್ದು ಇಂತಹ ಅಸಹ್ಯ ಗಳನ್ನು ನೋಡಲು ಅಲ್ಲ. ಬದಲಾಗಿ ತಮ್ಮ ಕಷ್ಟ ಕಾರ್ಪಣ್ಯಗಳನ್ನ ಇವರು ಈಡೇರಿಸುತ್ತಾರೆ ಎಂದು. ಆದರೆ ಇವರ ನಡವಳಿಕೆ  ನೋಡಿದ್ರೆ ಪ್ರತಿಯೊಬ್ಬ ಮತದಾರನ್ನೂ ತಲೆತಗ್ಗಿಸುವಂತಿದೆ. ಇನ್ನೊಂದೆಡೆ ಕಾನೂನು ಪಾಠ ಮಾಡುವ ಸ್ಪೀಕರ್ ಪಾತ್ರವೂ ದೊಡ್ಡದು. ಮಾತೆತ್ತಿದ್ದರೆ ಲಾ ಪಾಯಿಂಟ್ ಹಾಕುವ ಸ್ಪೀಕರ್, ಪಕ್ಷಪಾತಿ ಅಲ್ಲ ...ಅಲ್ಲ ...ಅಂತ ಹೇಳುತ್ತಲೇ  ಪರೋಕ್ಷವಾಗಿ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕರದ್ದು. ಈ ಮಧ್ಯೆ ರಾಜ್ಯಪಾಲರ ಎಂಟ್ರಿ. ಮಾನ್ಯ ಗವರ್ನರ್ ಎಂಟ್ರಿಯೂ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇವರು  ಸಂವಿಧಾನದ ರಕ್ಷಣೆಗೆ ಧಾವಿಸಿದ್ದಾರೋ ಇಲ್ಲ, ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೋ ಎಂಬ ಜಿಜ್ಞಾಸೆಯೂ ಜನಸಾಮಾನ್ಯರಲ್ಲಿ ಮೂಡಿದೆ.                                                                                                                                                                                                                                                     - ಅರವಿಂದ್ ಸಾಗರ್