ರಾಜ್ಯದ ಜನರು ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೆ ಕಾಂಗ್ರೆಸ್ ನಾಯಕರು ಬಿರಿಯಾನಿ ತಿನ್ನುತ್ತಿದ್ದರು!

ರಾಜ್ಯದ ಜನರು ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೆ ಕಾಂಗ್ರೆಸ್ ನಾಯಕರು ಬಿರಿಯಾನಿ ತಿನ್ನುತ್ತಿದ್ದರು!

ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ಜನರು ಸಂಕಷ್ಟದಲ್ಲಿದ್ದರೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಇಳಿ ವಯಸ್ಸಿನಲ್ಲೂ ಸಂತ್ರಸ್ತರ ಅಹವಾಲು ಕೇಳುತ್ತಿದ್ದರೆ ಕೆಲವು ಪ್ರಮುಖ ನಾಯಕರು ಬಿರಿಯಾನಿ ತಿನ್ನುವುದರಲ್ಲಿ ಬ್ಯುಸಿಯಾಗಿದ್ದರು. ಈ ಕುರಿತು ವಿರೂಪಾಕ್ಷ ಹಾಲಗಳಲೆ ವರದಿ

ಕಾಂಗ್ರೆಸ್ ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ತಮ್ಮ 88 ರ ಇಳಿವಯಸ್ಸಿನಲ್ಲಿಯೂ ಸುರಿಯುವ ಮಳೆ ಮತ್ತು ಪ್ರವಾಹವನ್ನು ಲೆಕ್ಕಿಸದೆ ಸಂತ್ರಸ್ತರ ಅಹವಾಲು ಸ್ವೀಕರಿಸುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್ನ ಹಿರಿಯ ಮುಖಂಡರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್, ಕೃಷ್ಣಬೈರೇಗೌಡ, ಬಕ್ರೀದ್ ಹಬ್ಬದ ನೆಪದಲ್ಲಿ ತಮ್ಮ ಪಕ್ಷದ ಹಿರಿಯ ಮುಖಂಡ ನಜೀರ್ ಅಹಮದ್ ಅವರ ನಿವಾಸದಲ್ಲಿ ಭರ್ಜರಿ ಭೋಜನ ಕೂಟದಲ್ಲಿ ಭಾಗಿಯಾಗಿರುವುದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಸನದಲ್ಲಿ ನೆರೆಸಂತ್ರಸ್ತರನ್ನು ಭೇಟಿ ಮಾಡಿ ಕುಂದುಕೊರತೆಗಳನ್ನು ಆಲಿಸುತ್ತಿದ್ದರೆ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ನೆರೆಸಂತ್ರಸ್ತರ ತಾಣಗಳಿಗೆ ಭೇಟಿ ನೀಡಿ ಅವರನ್ನು ಸಂತೈಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾಂಗ್ರೆಸ್  ಹಿರಿಯ ಮುಖಂಡ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇವಲ ಪತ್ರಿಕಾಗೋಷ್ಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಧೂಷಿಸುವ ಮೂಲಕ ಕಾಲ ಕಳೆದರೆ ಸಾಲದು. ಕನಿಷ್ಠ ಅವರ ಕ್ಷೇತ್ರವಾದ ಬಾದಾಮಿಗಾದರೂ ಭೇಟಿ ನೀಡಿ ನೆರೆ ಸಂತ್ರಸ್ತರ ಅಹವಾಲುಗಳನ್ನು ಆಲಿಸಬಹುದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಷಾ ಅವರನ್ನು ಹೆಚ್ಚು ಹಣ ಬಿಡುಗಡೆ ಮಾಡುವಂತೆ ಒತ್ತಡ ಹೇರಿದರೆ ಏನು ಪ್ರಯೋಜನ ಎಂದು ಸಾರ್ವಜನಿಕ ಹಾಗೂ ಪಕ್ಷದ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

ಕಾಗೋಡು ತಿಮ್ಮಪ್ಪ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಜೊತೆಜೊತೆಯಲ್ಲಿಯೇ ರಾಜಕಾರಣದಲ್ಲಿ ಬೆಳೆದುಬಂದವರು. ಇಬ್ಬರೂ ರಾಜಕೀಯ ಸಹೋದ್ಯೋಗಿಗಳೆಂದರೆ ತಪ್ಪಿಲ್ಲ. ಕಾಗೋಡು ತಿಮ್ಮಪ್ಪನವರಿಗೆ ಇರುವ ಶ್ರದ್ಧೆ ಇವರಿಗ್ಯಾಕಿಲ್ಲ? ಅವರು ಸೋತು ಮನೆಯಲ್ಲೇ ಕುಳಿತು ಅನಾರೋಗ್ಯಕ್ಕೀಡಾಗಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಶರಾವತಿ ಹಿನ್ನೀರು ಪ್ರದೇಶದ ಸಂತ್ರಸ್ತರು ಹಾಗೂ ತಮ್ಮ ತಾಲ್ಲೂಕಿನ ಕೆಲ ನೆರೆಪ್ರದೇಶಗಳಿಗೆ ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಆದರೆ ಉತ್ತರ ಕರ್ನಾಟಕ ನಾಯಕರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಉತ್ತರ ಭಾಗದ ಜನರ ಕಣ್ಣೀರು ಒರೆಸಲು ಮುಂದಾಗುತ್ತಿಲ್ಲ ಏಕೆ ಎಂದು ಸಾರ್ವಜನಿಕರ ವಲಯದಲ್ಲಿ ಟೀಕೆಗಳು ಕೇಳಿಬರುತ್ತಿವೆ.

ಬಲಿ ಮತ್ತು ತ್ಯಾಗದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳಿಗೆ ಹಾಗೂ ಔತಣ ಕೂಟಗಳಿಗೆ ಭಾಗವಹಿಸುವುದು ತಪ್ಪೇನಿಲ್ಲ. ಇದನ್ನು ನಾಗರೀಕರು ಕೂಡ ತಪ್ಪಾಗಿ ಭಾವಿಸುವುದೂ ಇಲ್ಲ. ಆದರೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಸಂದರ್ಭದಲ್ಲಿ ನಿರ್ಲಕ್ಷ್ಯ ಧೋರಣೆಯಂತೆ ಕಾಂಗ್ರೆಸ್ ನಾಯಕರು ನಡೆದುಕೊಳ್ಳುತ್ತಿರುವುದು ಸರಿಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.