ಅಕ್ರಮಗಳ ಸ್ವರ್ಗ ರಾಜ್ಯ ಸರ್ಕಾರಿ 'ಡಿ' ಗ್ರೂಪ್‌ ನೌಕರರ ಸಂಘ: ಬಡಾವಣೆಗಳ ನಿರ್ಮಾಣದಲ್ಲಿ ಮಾಡ್ತಾರೆ ನಿಯಮ ಭಂಗ!

ಅಕ್ರಮಗಳ ಸ್ವರ್ಗ ರಾಜ್ಯ ಸರ್ಕಾರಿ 'ಡಿ' ಗ್ರೂಪ್‌ ನೌಕರರ ಸಂಘ:  ಬಡಾವಣೆಗಳ ನಿರ್ಮಾಣದಲ್ಲಿ ಮಾಡ್ತಾರೆ ನಿಯಮ ಭಂಗ!

ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಇತರ ಉದ್ದೇಶದ ಸರ್ಕಾರಿ ನೌಕರರ ಸಂಘಗಳು ಅಕ್ರಮಗಳ ಸ್ವರ್ಗ. ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ಬಹುತೇಕ ಸಹಕಾರ ಸಂಘಗಳು ಈವರೆವಿಗೂ ಆರೋಪ ಮುಕ್ತವಾಗಿಲ್ಲ. ಮಧ್ಯೆ ಕರ್ನಾಟಕ ರಾಜ್ಯ ಸರ್ಕಾರಿ ಡಿ ಗ್ರೂಪ್ನೌಕರರ ಸಂಘವು ವಿವಿಧ ಆರೋಪಗಳಿಗೆ ಗುರಿಯಾಗಿದೆ. ಈ ಸಂಘ ಗಂಭೀರ ಆರೋಪ ಎದುರಿಸುತ್ತಿರುವ ಕಾರಣ ಸರ್ಕಾರ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸಿದೆ. ಈ ಕುರಿತು ಜಿ.ಮಹಂತೇಶ್ ವರದಿ.

 

ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿಕೊಳ್ಳುವ ನೌಕರರ ಸಂಘಗಳು ನಂತರ ಭೂ ಪರಿವರ್ತನೆಯನ್ನೂ ಮಾಡಿಸದೆ ಅಕ್ರಮವಾಗಿ ಬಡಾವಣೆ ನಿರ್ಮಿಸುತ್ತಿರುವ ಪ್ರಕರಣಗಳ ಸಂಖ್ಯೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೆಚ್ಚುತ್ತಲೇ ಇದೆ. ವಿಶೇಷವೆಂದರೆ ಇಂಥ ಪ್ರಕರಣಗಳಲ್ಲಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳದ್ದೇ ಮೇಲುಗೈ.

ಅಕ್ರಮ ಮತ್ತು ನಿಯಮಬಾಹಿರ ಚಟುವಟಿಕೆಗಳಲ್ಲಿ ಮುಳುಗೇಳುತ್ತಿರುವ ನೌಕರರ ಸಂಘಗಳ ವಿರುದ್ಧ ಸರ್ಕಾರ ಅತಿ ಕಡಿಮೆ ಪ್ರಕರಣಗಳಲ್ಲಿ ಕ್ರಮ ಕೈಗೊಂಡಿದೆ. ನೆಪಕ್ಕೆಂಬಂತೆ ಇಂತಹ ಸಂಘಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಸರ್ಕಾರವೂ ಕೈ ತೊಳೆದುಕೊಳ್ಳುತ್ತಿದೆ. ಇಂತಹ ಸಾಲಿಗೀಗ ಕರ್ನಾಟಕ ರಾಜ್ಯ 'ಡಿ' ಗ್ರೂಪ್ನೌಕರರ ಕೇಂದ್ರ ಸಂಘವೂ ಸೇರ್ಪಡೆಯಾಗಿದೆ.

ಬೆಂಗಳೂರಿನಲ್ಲಿ ಕೇಂದ್ರ ಸಂಘ ಹೊಂದಿರುವ ಕರ್ನಾಟಕ ರಾಜ್ಯ ಸರ್ಕಾರಿ 'ಡಿ' ಗ್ರೂಪ್ನೌಕರರ ಸಂಘ ಕಳೆದ 19 ವರ್ಷಗಳಿಂದಲೂ(2000ನೇ ಇಸವಿ) ಮಹಾಸಭೆ ನಡೆಸದೆಯೇ ಸುಳ್ಳು ನಡವಳಿಗಳನ್ನು ದಾಖಲಿಸಿದೆಯಲ್ಲದೆ, ಲೆಕ್ಕ ಪತ್ರಗಳನ್ನು ಪರಿಶೋಧನೆ ಮಾಡಿಸದೆ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಬೆಂಗಳೂರು ನಗರ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು, ಕರ್ನಾಟಕ ರಾಜ್ಯ ಸರ್ಕಾರಿ ಡಿ ಗ್ರೂಪ್ ನೌಕರರ ಸಂಘದಲ್ಲಿನ ಅಕ್ರಮಗಳು ಮತ್ತು ನಿಯಮಬಾಹಿರ ಚಟುವಟಿಕೆಗಳ ಕುರಿತು ಸಲ್ಲಿಸಿದ್ದ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಂಡಿದೆ.

ಬೆಂಗಳೂರಿನ ಗಿಡದಕೊನೇನಹಳ್ಳಿ ಗ್ರಾಮ ಹಾಗೂ ಶ್ರೀಗಂಧ ಕಾವಲ್ಗ್ರಾಮದಲ್ಲಿ ಸರ್ಕಾರದಿಂದ ಸಂಘ ಜಮೀನು ಮಂಜೂರು ಮಾಡಿಸಿಕೊಂಡಿತ್ತು. ಆದರೆ ಮಂಜೂರಾಗಿದ್ದ ಜಮೀನುಗಳನ್ನು ಭೂ ಪರಿವರ್ತನೆ ಮಾಡಿಸಿಕೊಳ್ಳದೆಯೇ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನೂ ಹಂಚಿಕೆ ಮಾಡಿದೆ. ಸಂಘದ ಅರ್ಹ ಸದಸ್ಯರಿಗಷ್ಟೇ ನಿವೇಶನಗಳನ್ನು ಹಂಚಿಕೆ ಮಾಡಬೇಕಿದ್ದ ಸಂಘ, ಸದಸ್ಯರಲ್ಲದವರಿಗೂ ನಿವೇಶನಗಳನ್ನು ಹಂಚಿಕೆ ಮಾಡಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರ ತನಿಖೆಯಿಂದ ಗೊತ್ತಾಗಿದೆ

ಅಲ್ಲದೆ, ಆರೋಪಗಳ ಕುರಿತು ಸಂಘದ ಪದಾಧಿಕಾರಿಗಳು ಯಾವುದೇ ರೀತಿಯ ಹೇಳಿಕೆಗಳು ಮತ್ತು ದಾಖಲೆಗಳನ್ನು ನೀಡಿಲ್ಲ. ಅಲ್ಲದೆ, ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಆರೋಪಗಳಿಗೆ ಸಂಬಂಧಿಸಿದಂತೆ ಲಿಖಿತ ಉತ್ತರವನ್ನು ನೀಡಿದ್ದಾರಾದರೂ ಸಮಂಜಸವಾದ ಸೂಕ್ತ ಸಮಜಾಯಿಷಿ ಮತ್ತು ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ಸಂಘದ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸಾಬೀತಾಗಿವೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಅಭಿಪ್ರಾಯ ಪಟ್ಟಿದ್ದಾರೆ.