ರಾಜ್ಯ ವಿಭಜನೆ : ಮುಂದಿನ ಗುರಿ ಪಶ್ಚಿಮ ಬಂಗಾಳ?

ರಾಜ್ಯ ವಿಭಜನೆ : ಮುಂದಿನ ಗುರಿ ಪಶ್ಚಿಮ ಬಂಗಾಳ?

ರಾಜ್ಯಗಳನ್ನು ಒಡೆಯುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಇಂಗ್ಲಿಷರೇ ಮಾದರಿ ಎಂಬಂತೆ ಕಾಣುತ್ತಿದೆ. ರಾಜಕೀಯ ಲೆಕ್ಕಾಚಾರಗಳ ಆಧಾರದಲ್ಲಿ ಈಗಾಗಲೇ ಜಮ್ಮು-ಕಾಶ್ಮೀರವನ್ನು ವಿಭಜನೆ ಮಾಡಿರುವ ಆಳುವ ಪ್ರಭುಗಳು ಪಶ್ಚಿಮ ಬಂಗಾಳದ ಬಲಿಷ್ಠ ನಾಯಕಿ ಮಮತಾ ಬ್ಯಾನರ್ಜಿ ಅವರ ಬೆನ್ನುಮೂಳೆ ಮುರಿಯಲು ಹೊರಟಂತೆ ಕಾಣುತ್ತಿದೆ ಎನ್ನುತ್ತಾರೆ ಜಿ.ಆರ್.ಸತ್ಯಲಿಂಗರಾಜು.  

ಜಮ್ಮು ಕಾಶ್ಮೀರದಂತೆಯೇ, ಪಶ್ಚಿಮ ಬಂಗಾಳವನ್ನ ಇಬ್ಬಾಗಿಸುವ ತಂತ್ರಕ್ಕೆ ಕೇಂದ್ರ ಸರ್ಕಾರ ಕೈ ಹಾಕಲಿದೆಯೇ ಎಂಬ ಪ್ರಶ್ನೆಗಳು ಥಕಥೈ ನರ್ತನಗೈಯುತ್ತಿವೆ.

ಡಾರ್ಜಿಲಿಂಗ್‍ನ ಸಂಸದರಿಗೆ ಪತ್ರ ಬರೆದಿರುವ ಗೃಹ ಸಚಿವ ಅಮಿತ್ ಷಾ ಅದರಲ್ಲಿ, `ಗೋರ್ಖಾಲ್ಯಾಂಡ್' ಎಂದು ಉಲ್ಲೇಖಿಸಿರುವುದೇ ಇಷ್ಟೆಲ್ಲ ಅನುಮಾನಗಳಿಗೆ ಕಾರಣವಾಗಿದೆ.

ಜಮ್ಮು ಕಾಶ್ಮೀರ ಮತ್ತು ಲಡಾಕ್ ವಿಭಜನೆ ಹಿಂದೆ ಅಲ್ಪಸಂಖ್ಯಾತರ ಬಾಹುಳ್ಯವನ್ನ ಇಬ್ಬಾಗಿಸುವ ಲೆಕ್ಕವಿದೆ ಎನ್ನುವಂತೆಯೇ, ಪಶ್ಚಿಮ ಬಂಗಾಳದಿಂದ ಗೋರ್ಖಾಲ್ಯಾಂಡ್ ವಿಭಜನೆಗೂ ಲೆಕ್ಕಾಚಾರಗಳಿವೆ. ಅತಿದೊಡ್ಡ ರಾಜ್ಯವಾಗಿ, ಹೆಚ್ಚು ಸಂಸತ್ ಸ್ಥಾನಗಳನ್ನ ಹೊಂದಿರುವ ಈ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‍ನ ಮಮತಾ ಬ್ಯಾನರ್ಜಿಯನ್ನ ಬಗ್ಗುಬಡಿಯಲು ಕಮಲ ಪಕ್ಷ ಯತ್ನ ಮಾಡುತ್ತಲೇ ಇದೆ. ಖುದ್ದಾಗಿ ನರೇಂದ್ರ ಮೋದಿಯೇ ಚುನಾವಣಾ ಸಮಯದಲ್ಲಿ ಟಿಎಂಸಿಯ ಅನೇಕಾನೇಕ ಶಾಸಕರು ನಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂದು ಹೇಳುವ ಮೂಲಕ ಆಪರೇಷನ್ ಕಮಲದಂಥ ಮಾರ್ಗಕ್ಕೆ ಮಣೆ ಹಾಕಿದ್ದನ್ನ ಇಲ್ಲಿ ನೆನೆಯಬಹುದು,

ಹಾಗೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದು ಬಹುತೇಕ ಖಚಿತವಾಗುತ್ತಿದೆ. ಬಲು ವರ್ಷಗಳಿಂದ ಇವೆರಡೂ ಪಕ್ಷ ಮೈತ್ರಿ ಕಳೆದುಕೊಂಡಿದ್ದವು, ಈಗ ಉಭಯ ಪಕ್ಕಕ್ಕೂ ಅಳಿವು ಉಳಿವಿನ ಪ್ರಶ್ನೆ ಎದುರಾಗಿರುವುದರಿಂದ ಜತೆಯಾಗುವುದು ಅನಿವಾರ್ಯವಾಗಿ ಬಿಟ್ಟಿದೆ. ಹೀಗಾದಾಗ ಬಂಗಾಳದ ಅಧಿಕಾರ ಬಿಜೆಪಿ ಕೈವಶ ಮಾಡಿಕೊಳ್ಳುವುದು ಸುಲಭವಲ್ಲ. ಹೀಗಾಗಿಯೇ `ಒಡೆದು ಆಳುವ ನೀತಿ'ಯನ್ನ ಇಲ್ಲೂ ಅಳವಡಿಸಬಹುದು ಎಂಬ ಬಿಸಿಬಿಸಿ ಚರ್ಚೆಗಳೆದ್ದಿವೆ.

ಹಾಗೆ ನೋಡಿದರೆ 1905 ರಲ್ಲೇ ವೈಸರಾಯ್ ಆಗಿದ್ದ ಲಾರ್ಡ್ ಕರ್ಜನ್ ಬಂಗಾಳವನ್ನ ಇಬ್ಬಾಗಿಸಿದ್ದ, ಅದು ಕೂಡ ಹಿಂದು ಮುಸ್ಲಿಂ ಜನಸಂಖ್ಯೆ ಆಧಾರದಲ್ಲಿನ ಒಡೆದು ಆಳುವ ನೀತಿಯಾಗಿತ್ತು. ಸ್ಚದೇಶಿ ಚಳವಳಿ ತೀವ್ರಗೊಂಡಿದ್ದರಿಂದಾಗಿ 1911 ರಲ್ಲಿ ಹಾರ್ಡಿಂಜ್ ಮತ್ತೆ ಈ ಪ್ರಾಂತ್ಯವನ್ನ ಒಗ್ಗೂಡಿಸಿದ್ದ.

1947 ರಲ್ಲಿ ಸ್ವಾತಂತ್ರ್ಯ ಬಂದಾಗ, ಬಂಗಾಳ ವಿಧಾನಸಭೆಯ ಗೊತ್ತುವಳಿ ಮೂಲಕ ಪಶ್ಚಿಮ ಮತ್ತು ಪೂರ್ವ ಬಂಗಾಳ ಎಂದು ವಿಭಜಿಸಿದ್ದು ಕೂಡ ಧರ್ಮದ ಆಧಾರದಲ್ಲಿ. ಪೂರ್ವ ಬಂಗಾಳ ಪಾಕಿಸ್ತಾನಕ್ಕೆ ಸೇರಿ, ಬಳಿಕ ಅದು ಬಾಂಗ್ಲಾದೇಶವಾಯಿತು. ಆ ಬಾಂಗ್ಲಾದಿಂದ ವಲಸಿಗರು ಹೆಚ್ಚೆಚ್ಚು ಬರುತ್ತಿದ್ದಾರೆ ಎಂಬುದು ಇವತ್ತಿಗೂ ಇರುವ ಸಮಸ್ಯೆ.

ಪಶ್ಚಿಮ ಬಂಗಾಳದ ಉತ್ತರ ಭಾಗದ ಬೆಟ್ಟಗಾಡು ಪ್ರದೇಶ ಆಡಳಿತಕ್ಕಾಗಿಯೇ, ಗೋರ್ಖಾಲ್ಯಾಂಡ್ ಪ್ರದೇಶದ ಆಡಳಿತ(ಜಿಟಿಎ)ವನ್ನ ಅಸ್ತಿತ್ವಕ್ಕೆ ತರಲಾಗಿತ್ತು. ಸ್ವತಂತ್ರ ರಾಜ್ಯ/ಕೇಂದ್ರಾಡಳಿತ ಪ್ರದೇಶವನ್ನಾಗಿಸಬೇಕೆಂಬ ಬೇಡಿಕೆಯನ್ನಿಟ್ಟು ಅಲ್ಲಿನ ಜನ ಹೋರಾಟ ಮಾಡುತ್ತಲೇ ಇದ್ದಾರೆ.  2011 ರಲ್ಲಿ ತೃಣಮೂಲ ಕಾಂಗ್ರೆಸ್, ಗೋರ್ಖಾ ಜನಮುಕ್ತಿ ಮೋರ್ಚಾ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಈ ಮೂರೂ ಪಕ್ಷಗಳು ಒಪ್ಪಂದ ಮಾಡಿಕೊಂಡು, ಗೋರ್ಖಾ ಲ್ಯಾಂಡ್ ಆಡಳಿತವನ್ನ ರದ್ದಾಗಿಸಿ, ಗೋರ್ಖಾ ಹಿಲ್ ಕೌನ್ಸಿಲ್‍ನ್ನ 2012ರಿಂದ ಅಸ್ತಿತ್ವಕ್ಕೆ ತಂದವು.  ಪಶ್ವಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ಜಿಲ್ಲೆಯ ಮಿರಿಕ್, ಸಿಲಿಗುರಿ ಎಂಬ ಉಪವಿಭಾಗಗಳು, ಕಲಿಂಪಾಂಗ್ ಜಿಲ್ಲೆಯ ಪ್ರದೇಶಗಳು ಇದರಲ್ಲಿ ಒಳಗೊಂಡಿವೆ. ಈ ಪ್ರದೇಶದವರು ತಮಗೆ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆಯನ್ನಿಟ್ಟುಕೊಂಡೇ ಬಂದಿದ್ದುದು ಜಮ್ಮು ಕಾಶ್ಮೀರದ ನಂತರ ತೀವ್ರತೆ ಪಡೆದುಕೊಂಡಿದೆ.

ಆಡಳಿತಾತ್ಮಕ ದೃಷ್ಟಿಯಿಂದ, ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆ ಕಾರಣದಿಂದ ರಾಜ್ಯ ಒಡೆಯುತ್ತೇವೆ ಎಂಬ ಸಬೂಬು ಹೇಳಿಕೊಂಡರೂ, ಪಶ್ಚಿಮ ಬಂಗಾಳದಲ್ಲಿನ ರಾಜಕೀಯ ಲಾಭ ಪಡೆಯಲು ಹಾಗು ಆ ರಾಜ್ಯದಲ್ಲಿ ಅಲ್ಪಸಂಖ್ಯಾತರ ಪ್ರಮಾಣವೂ ಹೆಚ್ಚುತ್ತಿರುವುದರ ಗುಣಾಕಾರ ಭಾಗಾಕಾರಗಳನ್ನ ಮಾಡಿಕೊಂಡೇ, ಅಮಿತ್ ಷಾ `ಗೋರ್ಖಾಲ್ಯಾಂಡ್' ಎಂಬುದನ್ನ ಉಲ್ಲೇಖಿಸಿದ್ದಾರೆಂಬ ಟೀಕೆಗಳು ಎದ್ದಿವೆ

ಗೋರ್ಖಾಲ್ಯಾಂಡ್ ಅಸ್ತಿತ್ವದಲ್ಲೇ ಇಲ್ಲ, ಈ ಪದ ಏಕೆ ಬಳಸಿದ್ದೀರಿ, ರಾಜ್ಯ ಒಡೆಯಲು ಹುನ್ನಾರವೇ ಎಂದು  ತೃಣಮೂಲ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗೈಯುತ್ತಿದೆ. ಅವರೇನು ಉತ್ತರ ಕೊಟ್ಟಿಲ್ಲ, ಬದಲಿಗೆ ರಾಜ್ಯ ವಿಭಜಿಸಿ, ಗೋರ್ಖಾಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ರಚಿಸಿ ಎಂಬ ಧ್ವನಿಗಳು ಹೆಚ್ಚಿವೆ.