ಸ್ವಾತಂತ್ರ್ಯೋತ್ಸವದಿಂದ ಸ್ಟಾರ್ ಕನ್ನಡಿಗನ ಹಾಡಿನ ಜಾತ್ರೆ!

ಸ್ವಾತಂತ್ರ್ಯೋತ್ಸವದಿಂದ ಸ್ಟಾರ್ ಕನ್ನಡಿಗನ ಹಾಡಿನ ಜಾತ್ರೆ!

ಸಿನಿಮಾದಲ್ಲೊಂದು ಸಿನಿಮಾ ತೋರಿಸುವುದು ನೋಡುಗರ ಪ್ರಕಾರ ಸುಲಭ. ಆದರೆ ತಯಾರಕರ ದೃಷ್ಟಿಯಿಂದ ಅದೊಂದು ಸವಾಲಿನ ಕೆಲಸ. ಅಂತಹುದೇ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿ ಬೋಲೋ ಕನ್ನಡಿಗಾ ಕೀ ಜೈ, ಇದು ಕನ್ನಡಿಗರ ಕಥೆ ಎಂಬ ಟ್ಯಾಗ್ ಲೈನ್ ನಲ್ಲಿ ಸಿನಿಮಾ ರೆಡಿಯಾಗಿದೆ. ಹೊಸಬರ ತಾರಾಗಣ ಹೊಂದಿರುವ  ಸಿನಿಮಾದ ಹೆಸರು ಸ್ಟಾರ್ ಕನ್ನಡಿಗ. 

ಸಿನಿಮಾದಲ್ಲಿ ಯುವಕರ ಟೀಮ್ ಒಂದು ಸಿನಿಮಾ ಮಾಡಲು ಸಿದ್ಧತೆಯಲ್ಲಿದ್ದಾಗ ಅವರಿಗೆ ಓರ್ವ ಹುಡುಗಿಯ ಪರಿಚಯವಾಗುತ್ತದೆ. ಇದು ಅವರ ಕೆಲಸಕ್ಕೆ ಕೊಂಚ ಬ್ರೇಕ್ ಕೊಟ್ಟು ಪ್ರೀತಿ, ಪ್ರೇಮ, ಪ್ರಣಯದ ಸ್ಪೆಷಲ್ ಕ್ಲಾಸಿನಲ್ಲಿ ಮಿಂದೇಳುವಂತೆ ಮಾಡುತ್ತದೆ. ಅಂತಿಮವಾಗಿ ಫುಟ್ ಪಾತ್ ನಲ್ಲಿ ಸಿಕ್ಕ ಪ್ರೀತಿಯೋ ಇಲ್ಲ ಬದುಕಿನ ಕಥೆಯೋ ಎಂಬ ಕನ್ ಪ್ಯೂಷನ್ ನಲ್ಲಿದ್ದವರಿಗೆ ಅಂತಿಮವಾಗಿ ಸಿಕ್ಕ ಉತ್ತರವೇನು ಎಂಬುದನ್ನು ಸ್ಟಾರ್ ಕನ್ನಡಿಗ ಚಿತ್ರದಲ್ಲಿ ಮನರಂಜನಾತ್ಮಕವಾಗಿ ಅದಕ್ಕೆ ತಕ್ಕ ಸಂದೇಶದ ಜತೆಗೆ ತೋರಿಸಲಾಗಿದೆ. ಇನ್ನು ಪೋಸ್ಟರ್ ನಲ್ಲಿ ಪವರ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ರಾಕಿಂಗ್ ಸ್ಟಾರ್. ಎಲ್ಲಾ ಸ್ಟಾರ್ ಈ ಸ್ಟಾರ್ ಹಿಂದೇನೇ. ಗಾಂಧಿನಗರದ ಗಲ್ಲಿಗೂ ಜನರ ದಿಲ್ಲಿಗೂ ಈ ಸ್ಟಾರ್ ಸೂಪರ್ ಸ್ಟಾರ್ ಎಂಬ ಸಾಲುಗಳು ಸಿನಿಮಾದಲ್ಲಿ ಹೇಗೆ ನಿರೂಪಿಸಲ್ಪಟ್ಟಿವೆ ಎಂಬುದು ಮಾತ್ರ ರಹಸ್ಯವಾಗಿ ಉಳಿದಿದ್ದು ಅದಕ್ಕೆ ಉತ್ತರವನ್ನು ನೇರವಾಗಿ ಸಿನಿಮಾದಲ್ಲಿ ಪಡೆಯಬೇಕೆಂಬುದು ನಿರ್ದೇಶಕರ ಅಂಬೋಣ. 

ಸಿನಿಮಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ಗುರುತಿಸಿಕೊಂಡಿದ್ದ ವಿ.ಆರ್. ಮಂಜುನಾಥ್ ಸ್ಟಾರ್ ಕನ್ನಡಿಗ ಚಿತ್ರದ ಮೂಲಕ ನಿದೇಶಕನ ಪಟ್ಟವನ್ನು ಅಲಂಕರಿಸಿದ್ದಾರೆ. ವಿಶೇಷವೆಂದರೆ ಮಂಜುನಾಥ್ ನಿರ್ದೇಶನದ ನಾಯಕನಾಗಿಯೂ ಸ್ಟಾರ್ ಕನ್ನಡಿಗದಲ್ಲಿ ಅಬ್ಬರಿಸಲಿದ್ದಾರೆ. ಇನ್ನು ಇವರ ಕನಸಿಗೆ ಗೆಳೆಯರಾದ ಚೆನ್ನೀರ, ಹರೀಶ್ ಜೋಗಿ, ಅರುಣ್ ಕುಮಾರ್, ಭೈರವ, ಲಕ್ಷ್ಮೀ, ಮತ್ತು ಪ್ರಭು ಆರ್ಥಿಕ ಇಂಧನವನ್ನು ಒದಗಿಸುವ ಮೂಲಕ ಸಾಥ್ ಕೊಟ್ಟಿದ್ದಾರೆ.

ಮಂಜುನಾಥ್ ಗೆ ನಾಯಕಿಯಾಗಿ ಶಾಲಿನಿ ಭಟ್ ನಟಿಸಿದ್ದು, ಆಕೆಯದು ಆಟೋ ಚಾಲಕಿಯ ಪಾತ್ರವಂತೆ. ಉಳಿದಂತೆ ಸಿನಿಮಾದಲ್ಲಿನ ಸಿನಿಮಾದ ನಿರ್ಮಾಪಕರಾಗಿ ರಾಕ್ ಲೈನ್ ಸುಧಾಕರ್, ಆಟೋ ಮಾಲೀಕನಾಗಿ ಕೋಬ್ರಾ ನಾಗರಾಜ್, ಹೊಸ ಪ್ರತಿಭೆಗಳಾದ ಕಿರಣ್, ರೋಹಿತ್, ಕೆವಿನ್ ಇತರರು ನಟಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ವಿಶೇಷವಾಗಿ ಆಗಸ್ಟ್ 15ರಿಂದ ಸ್ಟಾರ್ ಕನ್ನಡಿಗ ಬಿಡುಗಡೆಗೆ ಪೂರ್ವ ಪ್ರಚಾರವೆಂಬಂತೆ ಚಿತ್ರದ ಒಂದೊಂದೇ ಹಾಡುಗಳನ್ನು ಬಿಡುಗಡೆಗೊಳಿಸಲಿದೆ.