ಸೋನಿಯಾ ಆಯ್ಕೆ : ಭಟ್ಟಂಗಿಗಳಿಗೆ ಮಣಿದ ಕಾಂಗ್ರೆಸ್ 

ಸೋನಿಯಾ ಆಯ್ಕೆ : ಭಟ್ಟಂಗಿಗಳಿಗೆ ಮಣಿದ ಕಾಂಗ್ರೆಸ್ 

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಪಕ್ಷವನ್ನು ಮತ್ತೆ ಸದೃಢವಾಗಿ ಕಟ್ಟುವ ಒಂದು ಉತ್ತಮ ಅವಕಾಶವನ್ನು ಈ ಪಕ್ಷ ವ್ಯರ್ಥ ಮಾಡಿತು.  ಕೆಲವು ವರ್ಷಗಳ ನಂತರ ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರಾಗಿ ದಿಕ್ಪಾಲಕರು ಆಯ್ಕೆ ಮಾಡಿದ್ದಾರೆಂದರೆ ಭಟ್ಟಂಗಿತನದಿಂದ ಈ ಪಕ್ಷ ಇನ್ನೂ ಮುಕ್ತವಾಗಿಲ್ಲ ಎಂಬುದೇ ಅರ್ಥ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದ ಪ್ರಮುಖ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕ ಮುಕುಲ್ ವಾಸ್ನಿಕ್, ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಸಚಿನ್ ಪೈಲಟ್ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿತ್ತು. ಜ್ಯೋತಿರಾದಿತ್ಯ ಮತ್ತು ಸಚಿನ್ ಹುಟ್ಟುವಾಗಲೇ ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಬೆಳೆದವರು, ವಿದೇಶದಲ್ಲೇ ಓದಿದವರು, ಈ ಯುವಕರಿಗೆ ಆದರ್ಶಗಳ ಕೊರತೆಯಂತೂ ಇರಲಿಲ್ಲ. ಈ ಇಬ್ಬರ ತಂದೆಯರೂ(ಮಾಧವರಾವ್ ಸಿಂಧ್ಯಾ ಮತ್ತು ರಾಜೇಶ್ ಪೈಲಟ್) ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಷ್ಟೇ ಆಗಿರಲಿಲ್ಲ, ಪ್ರಧಾನಿ ಪಟ್ಟಕ್ಕೆ ಸೂಕ್ತ ನಾಯಕರೂ ಆಗಿದ್ದರು. ಇವರಿಬ್ಬರ ಅಕಾಲಿಕ ಮರಣದಿಂದ ಪಕ್ಷಕ್ಕೇ ಭಾರೀ ನಷ್ಟವೇ ಆಯಿತು. ಆದರೆ ಅವರು ಬದುಕಿರುವಾಗಲೂ ಪ್ರಧಾನಿ ಪಟ್ಟದ ಕನಸು ಕಾಣುವುದೂ ಸಾಧ್ಯವಿರಲಿಲ್ಲ. ನೆಹರೂ ಕುಟುಂಬ ನಿಷ್ಠೆ ಹೆಸರಿನಲ್ಲಿ ಭಟ್ಟಂಗಿತನದ ಜತೆ ಭ್ರಷ್ಟರೂ ಆಗಿರುವ ಕೆಲವು ತಲೆಗಳಿಗೆ   ಪಕ್ಷಕ್ಕೆ ಹೊಸತೊಂದು ಆಯಾಮ ದೊರೆಯುವುದೂ ಬೇಕಿಲ್ಲ. ಅಂಥ ಒಂದು ರಿಸ್ಕ್ ತೆಗೆದುಕೊಳ್ಳುವುದಕ್ಕೂ ಈ ಮಂದಿ ಸಿದ್ಧರಿಲ್ಲ. ಅಧಿಕಾರ ಇದ್ದಾಗ ನೆಹರೂ ಕುಟುಂಬದ ಭಜನೆ ಮಾಡುತ್ತಾ ಸಾಧ್ಯವಾದಷ್ಟನ್ನೂ ಗೆಬರಿಕೊಳ್ಳುವುದು ಹೇಗೆಂಬುದರ ಬಗ್ಗೆಯೇ ಚಿಂತಿಸುವ ಇಂಥವರಿಗೆ ಪಕ್ಷವನ್ನು ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಕಟ್ಟಬೇಕೆಂಬ ಚಿಂತೆ ಎಳ್ಳಷ್ಟೂ ಕಾಡಿದಂತಿಲ್ಲ. ಈ ವ್ಯಕ್ತಿಗಳು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವಂಥ ಸ್ವಭಾವದವರಾಗಿರುವುದರಿಂದಾಗಿಯೇ ಅರ್ಜುನ್ ಸಿಂಗ್, ಶರದ್ ಪವಾರ್, ತಾರಿಖ್ ಅನ್ವರ್ ಗಳಂಥ ಅದೆಷ್ಟೋ ನಾಯಕರು ಪಕ್ಷ ತ್ಯಜಿಸಿ ತಮ್ಮ ದಾರಿ ನೋಡಿಕೊಂಡಿದ್ದೆಲ್ಲ  ಈಗ ಇತಿಹಾಸ. ಕುಟುಂಬ ನಿಷ್ಠೆ ಎಂಬುದು ಕೂಡ ಈ ಮಂದಿಗೆ ಮುಕ್ಕುವುದಕ್ಕೆ ಒಂದು ನೆಪ. ಈ ಕಾರಣದಿಂದಲೇ ಸಚಿನ್ ಅಥವಾ ಜ್ಯೋತಿರಾದಿತ್ಯ ಅಧ್ಯಕ್ಷರಾಗುವುದು ಇವರ್ಯಾರಿಗೂ ಇಷ್ಟವಿರಲಿಲ್ಲ. ಹುಟ್ಟು ಸಿರಿವಂತರಾಗಿರುವುದರಿಂದ ಜನಸಾಮಾನ್ಯರ ನಾಡಿ ಮಿಡಿತ ಇವರಿಬ್ಬರೂ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ವಿದೇಶಗಳಲ್ಲೇ ಓದಿರುವುದರಿಂದ ಸ್ಥಳೀಯರ ಮನಃಸ್ಥಿತಿ ಅರಿವಾಗುವುದಿಲ್ಲ, ಜನಸಾಮಾನ್ಯರ ಬಳಿಗೇ ಇವರು ಹೋಗುವುದೂ ಸಾಧ್ಯವಿಲ್ಲ ಎಂಬೆಲ್ಲ ಕಾಗಕ್ಕ ಗುಬ್ಬಕ್ಕ ಕತೆಗಳನ್ನು ಹೇಳಿ ಅಧ್ಯಕ್ಷ ಸ್ಥಾನ ತಪ್ಪಿಸುವಲ್ಲಿ ಭಟ್ಟಂಗಿಗಳೂ ಯಶಸ್ವಿಯಾಗಿಬಿಟ್ಟರು. 

ವಾಸ್ತವದಲ್ಲಿ ಸಚಿನ್ ಮತ್ತು ಜ್ಯೋತಿರಾದಿತ್ಯ ತಮ್ಮ ರಾಜ್ಯಗಳಲ್ಲಿ ಪಕ್ಷವನ್ನು ಸಂಘಟಿಸುವ ವಿಷಯದಲ್ಲಿ ಪ್ರಾಮಾಣಿಕವಾಗಿ, ಕ್ರಿಯಾಶೀಲವಾಗಿ ಪ್ರಯತ್ನಿಸಿದ ಮಾರ್ಗಗಳನ್ನು ನೋಡಿದರೆ ರಾಷ್ಟ್ರೀಯ ಮಟ್ಟದಲ್ಲಿ ಒಂದೊಳ್ಳೆ ಸವಾಲು ಎಸೆಯುವಂಥ ವ್ಯಕ್ತಿತ್ವ ಈ ಇಬ್ಬರಲ್ಲೂ ಇತ್ತು.ರಾಹುಲ್ ಗಾಂಧಿ ಗುರುತಿಸಿದ್ದ ಯುವ ಬಳಗದ ಪ್ರಮುಖ ಸದಸ್ಯರಾದ ಈ ಇಬ್ಬರೂ ನಾಯಕರು ಪಿತ್ರಾರ್ಜಿತವಾಗಿ ರಾಜಕೀಯಕ್ಕೆ ಬಂದಿದ್ದರೂ ಸಭ್ಯ ರಾಜಕಾರಣದಿಂದಾಗಿ ಸೋನಿಯಾ ಕುಟುಂಬಕ್ಕೆ ತಕ್ಕಂತೆ ಹೊಂದಿಕೊಳ್ಳುವಂತವರಾಗಿದ್ದರು. ಹಾಗೆ ನೋಡಿದರೆ ಭವಿಷ್ಯದ ದೃಷ್ಟಿಯಿಂದ ಈ ಇಬ್ಬರಲ್ಲಿ ಯಾರಾದರೂ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬಹುದಿತ್ತು.ಭಾರತೀಯರಲ್ಲಿ ಹೊಸ ಭರವಸೆ, ಹೊಸ ಕನಸು, ನಿರೀಕ್ಷೆಗಳನ್ನು ತುಂಬುವ ನಿಟ್ಟಿನಲ್ಲಿ ಒಂದು ಪ್ರಯತ್ನವನ್ನಾದರೂ ಮಾಡಬಹುದಿತ್ತು. 

ಮುಕುಲ್ ವಾಸ್ನಿಕ್ ತಂದೆ ಕೂಡಾ ಸಂಸದರಾಗಿದ್ದವರು. ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾಗಿರುವ ಎನ್.ಎಸ್.ಯು.ಐ. ಅಧ್ಯಕ್ಷರಾಗಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ವಿವಿಧ ಹಂತಗಳಲ್ಲಿ ತೊಡಗಿಸಿಕೊಂಡಿದ್ದವರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದವರು. ಸಂಘಟನೆಯ ಆಳ, ಅಗಲ ಬಲ್ಲ ವಾಸ್ನಿಕ್ ಗಿದ್ದ  ಒಂದೇ ಕೊರತೆ ಎಂದರೆ ವರ್ಚಸ್ಸು. ಇಡೀ ದೇಶದಲ್ಲಿ ಪಕ್ಷವನ್ನು ಸಂಘಟಿಸುವಂಥ ಒಂದು ವರ್ಚಸ್ಸು ಅವರಿಗಿರಲಿಲ್ಲ. ಕಾಂಗ್ರೆಸ್ ನಂಥ ಮುಳುಗುತ್ತಿರುವ ಹಡಗನ್ನು ಮತ್ತೆ ತೇಲುವಂತೆ ಮಾಡಿ ಸರಿಯಾದ ದಿಕ್ಕಿನಲ್ಲಿ ಸಾಗಿಸುವ ಓರ್ವ ನಾಯಕನಾಗಿ ಒಪ್ಪಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಷಾ ಜೋಡಿಯ ಎದುರು ವಾಸ್ನಿಕ್ ಎಸೆಯಬಹುದಾಗಿದ್ದ ಯಾವುದೇ ಅಸ್ತ್ರ ಗುರಿ ಮುಟ್ಟೀತೆಂಬ ವಿಶ್ವಾಸ ಯಾರಲ್ಲೂ ಇರಲಿಲ್ಲ.

ಆದರೆ ಮಲ್ಲಿಕಾರ್ಜುನ ಖರ್ಗೆ ವಿಷಯ ಹಾಗಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷ ಸೇರಿ(1969) ಈಗ ಐವತ್ತು ವರ್ಷಗಳಾಗಿವೆ. ಪಕ್ಷವನ್ನು ತಳಮಟ್ಟದಿಂದ ಕಂಡಿರುವ ಖರ್ಗೆ ಕಾರ್ಮಿಕ ಸಂಘಟನೆಯ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದವರು. ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ರಾಜಕಾರಣದ ಪ್ರಭಾವ ಇರುವ ಕರ್ನಾಟಕದಲ್ಲಿ ತಮ್ಮದೇ ವರ್ಚಸ್ಸು ರೂಪಿಸಿಕೊಂಡಿದ್ದವರು. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದವರು.ವಿವಿಧ ಖಾತೆಗಳ ಸಚಿವರಾಗಿ ದಕ್ಷತೆ, ಕ್ರಿಯಾಶೀಲತೆ ಮೆರೆದವರು. ಕೇಂದ್ರದಲ್ಲೂ ರೈಲ್ವೇ ಸಚಿವರಾಗಿ, ಕಾರ್ಮಿಕ ಸಚಿವರಾಗಿ ಈ ಖಾತೆಗಳಿಗೆ ನ್ಯಾಯ ಸಲ್ಲಿಸಿದವರು. ಉರ್ದು ಭಾಷೆಯನ್ನು ಸುಲಲಿತವಾಗಿ ಮಾತನಾಡುವ ಕಾರಣದಿಂದ ಹಿಂದಿಯನ್ನೂ ಸುಲಭವಾಗಿ, ಸಮರ್ಥವಾಗಿ ಮಾತಾಡುವಂಥ ಜಾಣ್ಮೆ ಮತ್ತು ತಾಖತ್ತು ಇದ್ದಂಥ ವ್ಯಕ್ತಿತ್ವ.  ಶಾಯರಿಗಳನ್ನು ಉರ್ದು ಭಾಷೆಯ ಏರಿಳಿತ ಒಂದಿಷ್ಟೂ ತಪ್ಪದೇ ಅದೇ ಬನಿಯಲ್ಲಿ ಮನಮುಟ್ಟುವಂತೆ ಹೇಳುವ ಸಾಮರ್ಥ್ಯ ಇರುವವರು. ಅವರಿಗೆ ಕವಿ ಹೃದಯದ ರಾಜಕಾರಣಿಯಂತೆ ಪೋಸು ಕೊಡುವುದು ಗೊತ್ತೇ ಇಲ್ಲ, ಅವರದೇನಿದ್ದರೂ ನಿಷ್ಠುರ ವಿಚಾರವಾದಿಯ ಶೈಲಿ. ಹೀಗಾಗಿಯೇ  2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದಾಗ ಅದರ ವಿರುದ್ಧ ಕಟುವಾಗಿ ಮಾತನಾಡುವುದು ಸಾಧ್ಯವಾಗಿತ್ತು. ಅವರ ಮಾತುಗಳೇ ಹಾಗೆ. ಗುರಿ ತಪ್ಪದ ಗುಂಡಿನ ಹಾಗೆ. ಸೋನಿಯಾ ಕನಸುಗಳ ಫಲವಾಗಿ ರೂಪುಗೊಂಡಿದ್ದ ಅನೇಕ ಯೋಜನೆಗಳ ಹೆಸರು ಬದಲಿಸಿ ತಮ್ಮದೇ ಕೊಡುಗೆ ಎಂಬಂತೆ ಮೋದಿ ಸರ್ಕಾರ ಬಿಂಬಿಸಲು ಮುಂದಾದಾಗ ಲೋಕಸಭೆಯಲ್ಲಿ “ನಮ್ಮ ಹೂರಣಕ್ಕೆ ನಿಮ್ಮ ಪ್ಯಾಕೇಜ್” ಎಂದು ಗೇಲಿ ಮಾಡುವುದೂ ಅವರಿಗೆ ಸಾಧ್ಯವಾಗಿತ್ತು. 

ಜಾತಿಯಿಂದಾಗಿಯೇ “ಮುಟ್ಟಿಸಿಕೊಳ್ಳದ”ವರಾಗಿದ್ದ ಖರ್ಗೆಯವನ್ನು ರಾಜಕೀಯವಾಗಿ ಮುಟ್ಟುವುದು ಅಷ್ಟು ಸುಲಭವಲ್ಲ ಎಂದು ನರೇಂದ್ರ ಮೋದಿ ಬಳಗಕ್ಕೆ ಗೊತ್ತಾಗಿದ್ದು  ಅವರ ಅವತ್ತಿನ ಬಿಸಿ ಮುಟ್ಟಿಸುವ ಭಾಷಣದಿಂದಲೇ. ಒಂದೊಂದು ಸಲವೂ ಲೋಕಸಭೆಯಲ್ಲಿ ಖರ್ಗೆ ಎದ್ದು ನಿಂತರೆ ಅವರ ಕರಾರುವಾಕ್ಕಾದ ಮಾತುಗಳಿಂದ ಎನ್ ಡಿ ಎ ಮಂದಿಯ ಬೆವರಿಳಿಸುವಂತೆ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಸಿದ್ಧಾಂತದ ನೆಲೆಯಲ್ಲಿಯೇ ಸಂಘ ಪರಿವಾರವನ್ನು ಬೆತ್ತಲುಗೊಳಿಸುವ ಸಾಮರ್ಥ್ಯ ಇರುವುದು ಖರ್ಗೆಗೆ ಮಾತ್ರ. ಅವರೆದುರು ಇನ್ನೆಲ್ಲ ಕಾಂಗ್ರೆಸ್ ನಾಯಕರು ಕುಬ್ಜರಂತೆ ಕಾಣುತ್ತಾರೆ. ಹೀಗಾಗಿಯೇ ನರೇಂದ್ರ ಮೋದಿ ಮತ್ತು ಅಮಿತ್ ಷಾ ಕಿಲಾಡಿ ಜೋಡಿ ಸೇರಿದಂತೆ ಸಂಘ ಪರಿವಾರಕ್ಕೆ ಇದ್ದ ಭಯ ಮಲ್ಲಿಕಾರ್ಜುನ ಖರ್ಗೆ ಬಗ್ಗೆಯೇ ಹೊರತು ಇನ್ಯಾರ ಬಗ್ಗೆಯೂ ಅಲ್ಲ. ಅದು ಖರ್ಗೆ ಅವರಿಗೆ ಅನುಭವ ಕೊಟ್ಟ ಕೊಡುಗೆ. ಅವರಿಗೂ ಎಪ್ಪತ್ತೈದು ವರ್ಷ ವಯಸ್ಸಾಗಿದೆ. ಆದರೆ ಅವರ ಪೈಲ್ವಾನನ ನಡಿಗೆಯ ಗತ್ತು, ಗಾಂಭೀರ್ಯ ಒಂದಿನಿತೂ ಕಡಿಮೆಯಾಗಿಲ್ಲ.  ದುರದೃಷ್ಟದ ಮತ್ತು ಬೇಸರದ ಸಂಗತಿ ಎಂದರೆ 2014 ರಿಂದ 2019 ರವರೆಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೂ ಮಾಧ್ಯಮಗಳು ಅವರನ್ನು ಬಿಂಬಿಸುವ ಪ್ರಾಮಾಣಿಕತೆ ತೋರಲಿಲ್ಲ.ಮಾಧ್ಯಮಗಳು ಖರ್ಗೆಯನ್ನು ಪ್ರಧಾನಿಯಾಗಿ ಬಿಂಬಿಸುವುದು ಬೇಕಿರಲಿಲ್ಲ. ಅವರೊಬ್ಬ ಸಮರ್ಥ ನಾಯಕ ಎಂದು ಬಿಂಬಿಸುವುದರ ಬಗ್ಗೆಯೂ ಭಂಡ ನಿರ್ಲಕ್ಷ್ಯ ಮೆರೆದವು. ಈ ಮಾಧ್ಯಮಗಳು ಮೋದಿ ಎದುರು ರಾಹುಲ್ ಇನ್ನೂ ಎಳಸು ಎಂದು ತೋರಿಸುವುದಕ್ಕೆ ಮಾತ್ರ ಕರ್ತವ್ಯವನ್ನು ಸೀಮಿತಗೊಳಿಸಿಕೊಂಡಿದ್ದವು.   

ಆದರೆ ಕಾಂಗ್ರೆಸ್ ಪಕ್ಷದ ಕೆಲವು ಮುದಿ ತಲೆಗಳಿಗೆ, ಅಧಿಕಾರ ವ್ಯಾಮೋಹದ ಮಂದಿಗೆ, ನೆಹರೂ ಕುಟುಂಬ ನಿಷ್ಠೆ ನೆಪದಲ್ಲಿ ಇನ್ನೊಬ್ಬ ಸಮರ್ಥನಿಗೆ ನಾಯಕತ್ವ ಸಿಗಬಾರದೆಂಬ ಅಸೂಯೆ ಇದ್ದವರಿಗೆ, ಮುಖ್ಯವಾಗಿ ಬಿಜೆಪಿಗಳಿಗೇ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗುವುದು ಇಷ್ಟವಿರಲಿಲ್ಲ. ಈ ಕಾರಣದಿಂದಲೇ ಮಲ್ಲಿಕಾರ್ಜುನ ಖರ್ಗೆ ಸಂಪತ್ತಿನ ಬಗ್ಗೆ ಉತ್ಪ್ರೇಕ್ಷೆಯ ವದಂತಿಗಳನ್ನು ತೇಲಿ ಬಿಡಲಾಯಿತು. ಬಿಜೆಪಿ ಆಸೆಯ ಬೆಂಕಿಗೆ ಕಾಂಗ್ರೆಸ್ಸಿಗರೇ ತುಪ್ಪ ಸುರಿದರು. ಕೊನೆಗೂ ಖರ್ಗೆ ಅಧ್ಯಕ್ಷರಾಗುವುದು ಸಾಧ್ಯವಾಗಲಿಲ್ಲ. ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ನರೇಂದ್ರ ಮೋದಿ ಮತ್ತು ಅಮಿತ್ ಷಾ. ಮಲ್ಲಿಕಾರ್ಜುನ ಖರ್ಗೆ ಕೇವಲ ದಲಿತ ಸಮುದಾಯದ ನಾಯಕರಾಗಿಲ್ಲ, ಅವರ ನಾಯಕತ್ವ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷದ ನಾಯಕರಷ್ಟೇ ಆಗಿರದೆ ರಾಷ್ಟ್ರೀಯ ನಾಯಕನ ಎಲ್ಲ ಲಕ್ಷಣಗಳನ್ನೂ ಸಂಸತ್ ನಲ್ಲಿ ತೋರಿದ್ದರೂ ಮತ್ತೆ ಮತ್ತೆ ವಂಚನೆಗೆ ಒಳಗಾಗುತ್ತಲೇ ಇದ್ದರು.

1998 ರಿಂದ 2017 ರವರೆಗೆ ನಿರಂತರವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಈಗ ಮತ್ತೆ ಅಧ್ಯಕ್ಷ ಗಾದಿಗೆ ಏರಿದ್ದಾರೆ. ಅವರ ವಯಸ್ಸಿಗಿಂತ ಮುಖ್ಯವಾಗಿ ಕಾಡುತ್ತಿರುವ ಅನಾರೋಗ್ಯ ಹೆಚ್ಚು ಕ್ರಿಯಾಶೀಲವಾಗಿಡಲು ಅವಕಾಶ ನೀಡಲಾರದು. ಎರಡು ದಶಕಗಳ ಹಿಂದೆ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಸಂದರ್ಭಕ್ಕೂ ಈಗಕ್ಕೂ ಅಜಗಜಾಂತರವಿದೆ. ಆಗಿನ್ನೂ ಬಿಜೆಪಿ ಇಷ್ಟೊಂದು ಕುಲಗೆಟ್ಟಿರಲಿಲ್ಲ. ಸೋನಿಯಾ ಪ್ರದರ್ಶಿಸಿದ ಸಭ್ಯ ರಾಜಕಾರಣ ಹೊಸತೊಂದು ಅಲೆಯನ್ನೇ ಸೃಷ್ಟಿಸಿ ಎರಡು ಅವಧಿ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ನಡೆಸಿತ್ತು. ಈಗ ಮೋದಿ- ಷಾಗಳ ಆಡಳಿತದಲ್ಲಿ ಬಿಜೆಪಿ ರಾಜಕಾರಣದ ಎಲ್ಲ ನೀತಿ, ನಿಯತ್ತುಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ನಡೆಸುತ್ತಿರುವ ಮಾದರಿಯಿಂದಾಗಿ ಸಭ್ಯ ರಾಜಕಾರಣ ತಾತ್ಕಾಲಿಕವಾಗಿ ಬದಿಗೆ ಸರಿದಿದೆ. ಸೋನಿಯಾ, ರಾಹುಲ್, ಪ್ರಿಯಾಂಕಾ ಪ್ರದರ್ಶಿಸುವ ಜನಪರ ಮಾದರಿಗಿಂತ ಜನತೆಯನ್ನು ಸಮೂಹ ಸನ್ನಿಗೊಳಪಡಿಸುವ ಮಾದರಿ ಯಶಸ್ಸು ಕಂಡಿದೆ. ಸೋನಿಯಾ ಮತ್ತೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರೂ ಅವರ ಕನಸು, ಪ್ರಾಮಾಣಿಕತೆ, ಸಭ್ಯತೆ ಯಾವುದೂ ತಕ್ಷಣಕ್ಕೆ ಫಲ ಕೊಡುವುದಿಲ್ಲ. ಬೆತ್ತಲೆ ಇರುವವರ ರಾಜ್ಯದಲ್ಲಿ ಬಟ್ಟೆ ಧರಿಸಿದವನೇ ಹುಚ್ಚ ಎಂಬಂತೆ ಮೋದಿ ಮತ್ತು ಷಾ ಎದುರು ಸೋನಿಯಾ ಸಭ್ಯತೆ ನಗೆಪಾಟಲಿಗೀಡಾಗುವುದೇ ಹೆಚ್ಚು. ಅದಕ್ಕೇನಿದ್ದರೂ ಸಂಘ ಪರಿವಾರದ ಪಟ್ಟುಗಳನ್ನು ಸಡಿಲಿಸುವ ಪ್ರತಿತಂತ್ರಗಳು ಬೇಕು,.ಸಂಘ ಪರಿವಾರ ದೇಶಕ್ಕೆ, ಪ್ರಜಾಸತ್ತಾತ್ಮಕ ವ್ಯವಸ್ಥೆಗೆ, ಜಾತ್ಯತೀತ ನಿಲುವಿಗೆ, ಕೋಮು ಸಾಮರಸ್ಯಕ್ಕೆ, ಬಹುಸಂಸ್ಕೃತಿಗೆ, ಸಹಬಾಳ್ವೆಗೆ ಎಸಗುತ್ತಿರುವ ದ್ರೋಹವನ್ನು ಮನಮುಟ್ಟುವಂತೆ ಬಿಚ್ಚಿಡುವವರು ಬೇಕು.ಉದ್ಯಮಿಗಳ ಎದುರು ಜನಸಾಮಾನ್ಯರು ಕಾಲ ಕಸಕ್ಕಿಂತ ಕಡೆಯಾಗಿರುವುದನ್ನು ತರ್ಕಬದ್ಧವಾಗಿ ಮಂಡಿಸುವವರು ಬೇಕು. ಸಾರ್ವಜಿನಿಕ ವಲಯದ ಉದ್ಯಮಗಳನ್ನು ಒಂದೊಂದಾಗಿ ಕೊಲ್ಲುತ್ತಾ ಉದ್ಯಮಿಗಳ ಸಂಪತ್ತು ಹೆಚ್ಚಿಸುತ್ತಿರುವ ಸಂಚನ್ನು ಬಯಲು ಮಾಡುವವರು ಬೇಕು. ಕೋಮುವಾದ ಮತ್ತು ಪ್ರಗತಿಪರ ಹೋರಾಟದ ನಡುವೆ ನಿಜಕ್ಕೂ ನೆಮ್ಮದಿಯ ವಾತಾವರಣ ರೂಪಿಸುವ ನಾಯಕತ್ವ ಬೇಕು. ಕಾಂಗ್ರೆಸ್ ಪಕ್ಷದಿಂದ ಒಂದು ತಾತ್ವಿಕ ಮತ್ತು ಭಾರತೀಯ ಸಮಾಜಕ್ಕೆ ನಿಷ್ಠವಾದ ಹೋರಾಟ ಮಾತ್ರ ಅದನ್ನು ಸಾಧ್ಯವಾಗಿಸಬಹುದು. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮಾತ್ರ ಇಂಥ ಶಕ್ತಿ, ಸಾಮರ್ಥ್ಯಗಳನ್ನು ಕಾಣಬಹುದಾಗಿದೆ. ಖರ್ಗೆಯಂಥವರೇ ಆಯ್ಕೆಯಾಗಬೇಕೆಂದರೆ ಪಕ್ಷದ ಇತರ ನಾಯಕರೂ ತ್ಯಾಗದ ಮನೋಭಾವನೆ ಪ್ರದರ್ಶಿಸುವಂತಾಗಬೇಕು. ಅಂಥ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಪ್ರಜಾಸತ್ತಾತ್ಮಕವಾಗಿ ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಮತ್ತೆ ಇನ್ನಷ್ಟು ಶಕ್ತಿಶಾಲಿಯಾಗಿ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು. ಕೋಮುವ್ಯಾಧಿಗಳಿಗೆ ಪರ್ಯಾಯವೇ ಇಲ್ಲದಂಥ ಭಾರತವನ್ನು ಕಲ್ಪಿಸಿಕೊಳ್ಳಿ. ಬಹು ಚಿಂತನೆಗಳ ನೆಲೆಬೀಡಾಗಿರುವ ಭಾರತ ಬೌದ್ಧಿಕವಾಗಿಯೂ ಮರುಭೂಮಿಯಾದೀತು. ಅಂಥ ದಿನ ಬಾರದಿರಲಿ.