ಹೇಳಲೇ ಬೇಕಾದ ಕೆಲವು ಸಂಗತಿಗಳು

ಹೇಳಲೇ ಬೇಕಾದ ಕೆಲವು ಸಂಗತಿಗಳು

ಪ್ರಿಯ ಓದುಗರೇ,

ಈ ಸಲ ಕೆಲವು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ…

ಉಡುಪಿಯ ಪಲಿಮಾರು ಮಠದ ಯತಿಗೆ ಪಟ್ಟಾಭಿಷೇಕ , ಪಲಿಮಾರು ಉತ್ತರಾಧಿಕಾರಿ ವಿದ್ಯಾರಾಜೇಶ್ವರಶ್ರೀ ಎಂಬ ಐದು ಕಾಲಂ ಶೀರ್ಷಿಕೆ ಹೊತ್ತ ಸುದ್ದಿ ಇವತ್ತಿನ (13-5-2019)ಪತ್ರಿಕೆಗಳಲ್ಲಿ ಪ್ರಾಮುಖ್ಯ ಪಡೆದಿದೆ. ವೈದಿಕ ಸಂಪ್ರದಾಯದ ಒಂದು ಪಂಗಡಕ್ಕೆ ಸೇರಿದ ಜಾತಿಯ ಮಠದ ಉತ್ತರಾಧಿಕಾರಿ ಯಾರು, ಅವರ ಪಟ್ಟಾಭಿಷೇಕ ಯಾವಾಗ ನಡೆಯಿತು ಎನ್ನುವುದು ಜನಸಾಮಾನ್ಯರಿಗೆ ಸಂಬಂಧವೂ ಇಲ್ಲದ, ಅವರಿಗೆ ಬೇಕಾಗಿಯೇ ಇಲ್ಲದ ಸುದ್ದಿ.

ಬ್ರಾಹ್ಮಣರ ಒಂದು ಪಂಗಡ ಅಂದರೆ ದೇಶದ ಜನಸಂಖ್ಯೆಯಲ್ಲಿ ಏನೇನೂ ಅಲ್ಲ. ಬ್ರಾಹ್ಮಣರ ಜನಸಂಖ್ಯೆಯೇ ಹೆಚ್ಚೆಂದರೆ ಶೇ.3 ರಷ್ಟಿರಬೇಕಾದರೆ ಕರ್ನಾಟಕದ ಒಂದು ಪಂಗಡ ಅದರಲ್ಲೂ ಪಾಯಿಂಟ್ ಸೊನ್ನೆ, ಸೊನ್ನೆ, ಸೊನ್ನೆ…… ಹೀಗೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿರುವ ಲೆಕ್ಕಕ್ಕೇ ಇಲ್ಲದಷ್ಟು ಸಂಖ್ಯೆ ಹೊಂದಿರುವ  ಸಮುದಾಯಕ್ಕೆ ಸೇರಿದ ಮಠದ ಸ್ವಾಮಿಗೆ ಸಂಬಂಧಿಸಿದ ಸುದ್ದಿ ಯಾವ ರೀತಿಯಲ್ಲಿ ಸಮಾಜಕ್ಕೆ ಅಗತ್ಯವಿದೆ? ಒಂದು ಘಟನೆಯಾಗಿ ದಾಖಲಿಸಬೇಕೆಂದಿದ್ದರೂ ಸಿಂಗಲ್ ಕಾಲಂಗೂ ಯೋಗ್ಯವಲ್ಲದ ಸುದ್ದಿ.

ಆ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರಿಗಷ್ಟೇ ಅಗತ್ಯವಿರುವ ಈ ಸುದ್ದಿಯನ್ನು ಕನ್ನಡನಾಡಿನ ಓದುಗರೆಲ್ಲರಿಗೆ ನೀಡುವ ಮೂಲಕ ಅದೊಂದು ಐತಿಹಾಸಿಕ ಘಟನೆ ಎಂಬಂತೆ ಬಿಂಬಿಸುವುದು ಈ ಸಮಾಜಕ್ಕೆ ವೈದಿಕ ಪತ್ರಕರ್ತರು ಬಗೆಯಯವ ದ್ರೋಹ. ಈ ಹಿಂದೆಯೂ ವಿಶ್ವ ಹವ್ಯಕ ಸಮಾವೇಶ ಎಂಬ ಸುದ್ದಿ ಕೂಡ ಇದಕ್ಕಿಂತ ಹೆಚ್ಚಿನ ಮಹತ್ವ ಪಡೆದು ಪ್ರಕಟವಾಗಿತ್ತು. ಯಾರು ಸ್ವಾಮಿಯಾದರು, ಅವರ ಪೂರ್ವಾಶ್ರಮದ ಹೆಸರೇನಿತ್ತು, ಗಂಟೆ ಅಲ್ಲಾಡಿಸಿದರಾ, ಇನ್ಯಾವ ಸ್ವಾಮಿಗಳು ಭಾಗವಹಿಸಿದ್ದರು ಯಾರಿಗೆ ಬೇಕು? ಇದರಿಂದ ಈ ನಾಡಿಗಾದರೂ ಆಗುವ ಉಪಯೋಗವೇನು?

 

ಅಗಲಿದ ಗಣ್ಯರಿಗೆ ಸರ್ಕಾರಿ ಗೌರವದ ಅಂತ್ಯ ಸಂಸ್ಕಾರ ಬೇಕೆ? 

ಇತ್ತೀಚೆಗೆ ಮಾಸ್ಟರ್ ಹಿರಣ್ಣಯ್ಯ ನಿಧನರಾಗಿ ಅಂತ್ಯ ಸಂಸ್ಕಾರವೆಲ್ಲ ಮುಗಿದ ನಂತರ ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದ ಬಳಿ ಮಾಸ್ಟರ್ ಹಿರಣ್ಣಯ್ಯ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸದ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಯೊಂದಿಗೆ  ಬ್ರಾಹ್ಮಣರ ಒಂದು ಉಪಪಂಗಡದ ಗುಂಪಿನ ಸಂಘದಿಂದ ಪ್ರತಿಭಟನೆ ನಡೆಯಿತು. ಪಾರ್ಥಿವ ಶರೀರ ಎಂದರೂ ಹೆಣ, ಕಳೇಬರ ಎಂದರೂ ಹೆಣ ಅಥವಾ ಶವ. ಆದರೆ ಎಲ್ಲರೂ ಸಮಾನರು ಎಂದು ಹೇಳುವ ಈ ನೆಲದಲ್ಲಿ ಗಣ್ಯರ ಕಳೇಬರವನ್ನು ಪಾರ್ಥಿವ ಶರೀರ ಎಂದು ಅಭ್ಯಾಸ ಮಾಡಿಸಿರುವ ಪುರೋಹಿತಶಾಹಿ ಮಾಧ್ಯಮ ಅಸಮಾನತೆಯನ್ನು ಪೋಷಿಸುತ್ತಲೇ ಬಂದಿದೆ.

ಇನ್ಯಾವ ದೇಶದಲ್ಲಿ ಗಣ್ಯರ ಕಳೇಬರ, ಹೆಣ ಅಥವಾ ಶವಕ್ಕೆ ಉಳಿದ ಶವಗಳಿಗಿಂತ ಭಿನ್ನ ಎಂದು ಧ್ವನಿಸುವ ಪದ ಬಳಕೆ ಇದೆಯೋ ನನಗೆ ಗೊತ್ತಿಲ್ಲ. ಅದಿರಲಿ. ಮಾಸ್ಟರ್ ಹಿರಣ್ಣಯ್ಯ ಅವರು ನಾಟಕದಲ್ಲಿ ಅಭಿನಯಿಸುತ್ತಿದ್ದರು ಎಂದು ನನಗೆ ಯಾವತ್ತೂ ಅನ್ನಿಸಿಲ್ಲ. ಅವರದು ಒನ್ ಮ್ಯಾನ್ ಷೋ. ಭಾಷಣವೇ ಬಂಡವಾಳ. ನಾಟಕಗಳಲ್ಲಿ ಬಯ್ಯುವುದಕ್ಕಷ್ಟೇ ಬಳಕೆಯಾಗುತ್ತಿದ್ದ ಬಾಯಿ ಅವರದು. ಹಾಗೆಂದು ಅವರಿಗೆ ಅಭಿಮಾನಿ ವರ್ಗವೇ ಇಲ್ಲ ಎಂದು ನಾನು ಹೇಳುತ್ತಿಲ್ಲ. ರಂಗಭೂಮಿಯಲ್ಲಿ ಮಾಸ್ಟರ್ ಹಿರಣ್ಣಯ್ಯ ಹೇಗೋ ಪತ್ರಿಕೋದ್ಯಮ,ಸುದ್ದಿ ವಾಹಿನಿ, ಚಲನಚಿತ್ರ ರಂಗದಲ್ಲೂ ಬೇರೆ ಬೇರೆ ಹೆಸರಿನಲ್ಲಿ ಮಾಸ್ಟರ್ ಹಿರಣ್ಣಯ್ಯಗಳಿದ್ದಾರೆ.

ಒಂದಲ್ಲ ಒಂದು ಕ್ಷೇತ್ರದಲ್ಲಿ ಹೆಸರು ಮಾಡಿ ಮೃತಪಟ್ಟವರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಎಂಬ ಪದ್ಧತಿ ಇದೆ. ಆದರೆ ಮಾಸ್ಟರ್ ಹಿರಣ್ಣಯ್ಯ ಅವರ ಕಳೇಬರಕ್ಕೆ ಈ ಭಾಗ್ಯ ಸಿಕ್ಕಲಿಲ್ಲ. ಅಂದ ಹಾಗೇ ಪಿ.ಲಂಕೇಶ್ ಅವರಿಗೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಗೌರವ ದೊರೆತಿರಲಿಲ್ಲ. ಸರ್ಕಾರಿ ಗೌರವ ಎಂದರೆ ಏನು? ಜನರಿಂದ ಗಳಿಸಿದ ಪ್ರೀತಿಗಿಂತ ದೊಡ್ಡದೇ? ಪತ್ರಿಕೆ, ಸುದ್ದಿ ವಾಹಿನಿಗಳಲ್ಲಿ ಒಂದು ಹೆಚ್ಚಿನ ವಾಕ್ಯ ಸೇರ್ಪಡೆಯಾಗಬಹುದಷ್ಟೇ? ಅದನ್ನು ಮೃತಪಟ್ಟವರಾರೂ ನಿರೀಕ್ಷಿಸುವುದು ಸಾಧ್ಯವಿಲ್ಲ.

ಬದುಕಿರುವಾಗ ಒಂದು ವೇಳೆ ಇಂಥ ಗೌರವ ತಮ್ಮ ಕಳೇಬರಕ್ಕೆ ಸಿಗಲಿ ಎಂದು ಆಶಿಸಿರುವ ಸಾಧ್ಯತೆ ಮಾತ್ರ ಇರುತ್ತದೆ.ಸರ್ಕಾರಿ ಗೌರವ ಸಿಗಲಿ, ಸಿಗದಿರಲಿ ಒಬ್ಬ ವ್ಯಕ್ತಿ ಜನಮಾನಸದಲ್ಲಿ ಉಳಿಯುವುದು  ಆತನ ಅಥವಾ ಆಕೆಯ ಅಸಾಮಾನ್ಯ ಸಾಧನೆಯಿಂದಷ್ಟೇ ಹೊರತು ಯಾವುದೇ ಪ್ರಶಸ್ತಿ, ಸನ್ಮಾನ ಅಥವಾ ಸರ್ಕಾರಿ ಗೌರವದ ಅಂತ್ಯ ಸಂಸ್ಕಾರದಿಂದಲ್ಲ. ಅದೂ ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳೇ ಹೆಚ್ಚಿರುವ ಈ ವ್ಯವಸ್ಥೆಯಲ್ಲಿ ಮೃತರ ಕುಟುಂಬದವರು ಅಂಥ ಗೌರವವನ್ನೂ ತಿರಸ್ಕರಿಸುವಂತಾಗಬೇಕು.

 

ಅಯೋಗ್ಯ ನಾಯಕರು, ಅಸಹಾಯಕ ಪ್ರಜೆಗಳು

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಬಾರದು ಎಂಬ ಒಂದೇ ಉದ್ದೇಶದಿಂದ ಮೈತ್ರಿ ಸಾಧಿಸಿದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಿಘಂಟಿನಲ್ಲಿ ಮೈತ್ರಿ ಧರ್ಮಕ್ಕೆ ಅರ್ಥವೇ ಇದ್ದಂತಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು, ಬೇಷರತ್ ಬೆಂಬಲ ಕೊಡುತ್ತೇವೆ ಎಂದು ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದು ಕಾಂಗ್ರೆಸ್ ಪಕ್ಷ. ಹಾಗೆ ಕೈಗೊಂಡ ನಿರ್ಧಾರಕ್ಕೆ ತಕ್ಕಂತೆ ನಡೆದುಕೊಳ್ಳುವುದೂ ಆ ಪಕ್ಷದ ನಾಯಕರ ಕರ್ತವ್ಯ. ಕುಮಾರಸ್ವಾಮಿಯನ್ನೇ ಮುಂದುವರಿಸಿದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಬಹಿರಂಗ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಕೆಲವರಿಗೆ ಸಿದ್ದರಾಮಯ್ಯ ಕೂಡ ಬುದ್ಧಿ ಮಾತು ಹೇಳುತ್ತಿಲ್ಲ. ಈ ಕೆಲವರು ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಹೇಳುತ್ತಿರುವುದು ಕೂಡ ಸಿದ್ದರಾಮಯ್ಯನವರ ಕಿವಿಗಳಿಗೆ ಇಂಪಾಗಿ ಕೇಳುತ್ತಿರಬೇಕು.

ಹೀಗಾಗಿ ಅದನ್ನು ತಡೆಯುವ ಗೋಜಿಗೆ ಅವರು ಹೋಗುತ್ತಿಲ್ಲ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಹೇಳುತ್ತಿರುವವರೆಲ್ಲ ಸಚಿವ ಸ್ಥಾನ ಸಿಗದೇ ಬೇಸತ್ತಿರುವವರು, ಅಧಿಕಾರ ಸಿಕ್ಕರೂ ಒಳ್ಳೆಯ ಸ್ಥಾನಮಾನ ಇಲ್ಲ ಎಂದು ಕೊರಗುತ್ತಿರುವವರೇ ಹೊರತು ಬೇರೆ ಯಾರೂ ಇಲ್ಲ. ಇದನ್ನೆಲ್ಲ ನೋಡಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕೂಡ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡಿದ್ದರೆ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಹಾಗೆ ನೋಡಿದರೆ ಎಚ್.ವಿಶ್ವನಾಥ್ ಎಲ್ಲ ರೀತಿಯಲ್ಲೂ ಸಿದ್ದರಾಮಯ್ಯ ಅವರಿಗಿಂತ ಉತ್ತಮ ಮನುಷ್ಯ. ಸರಳ, ಸಜ್ಜನಿಕೆಯ ವಿಶ್ವನಾಥ್ ಅವರಲ್ಲಿ ಅಹಂಕಾರಕ್ಕೆ ಜಾಗವೇ ಇಲ್ಲ,ಸಾಂಸ್ಕೃತಿಕ, ಸಾಹಿತ್ಯಿಕ ಅಭಿರುಚಿ ಇರುವ ಮನುಷ್ಯ ವಿಶ್ವನಾಥ್ ಒಳ್ಳೆಯ ಗಾಯಕರು ಕೂಡ. ಈಗಾಗಲೇ ರಾಜಕೀಯ ಬದುಕಿಗೆ ಸಂಬಂಧಿಸಿದ ಎರಡು ಪುಸ್ತಕಗಳನ್ನೂ ಬರೆದಿದ್ದಾರೆ. ಅಪಾರ ಧೈರ್ಯವೂ ಇರುವ ಮನುಷ್ಯ. ಈ ವಿಷಯದಲ್ಲಿ ಸಿದ್ದರಾಮಯ್ಯ ತದ್ವಿರುದ್ಧ. ಠೇಂಕಾರ ಪ್ರದರ್ಶನಕ್ಕೇ ಹೆಚ್ಚು ಒತ್ತು. ಮಾತಿನಲ್ಲಿ ಸೌಜನ್ಯ, ಸಹನೆ ಯಾವುದೂ ಇಲ್ಲ. ಸಾಹಿತ್ಯ, ಸಾಂಸ್ಕೃತಿಕ ಲಕ್ಷಣಗಳು ಎಳ್ಳಷ್ಟೂ ಕಾಣುವುದಿಲ್ಲ.

ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ತೋರಿದ ನಿರ್ಲಕ್ಷ್ಯದ ಕಾರಣದಿಂದಲೇ ವಿಶ್ವನಾಥ್ ಪಕ್ಷಾಂತರ ಮಾಡಿದರು. ಅವರಿಗೆ ಬೇರೆ ಆಯ್ಕೆಗಳಿರಲಿಲ್ಲ ನಿಜ. ದೇವೇಗೌಡರ ಕುಟುಂಬ ರಾಜಕಾರಣ ಗೊತ್ತಿದ್ದೂ ಅಲ್ಲಿ ಯಾವ ರೀತಿಯಲ್ಲಿ ತಮ್ಮ ನಿಲುವಿಗೆ ಬೆಂಬಲ ಸಿಗಬಹುದೆಂದು ನಿರೀಕ್ಷಿಸಿದರೋ ಗೊತ್ತಿಲ್ಲ. ಸ್ವಲ್ಪ ಸಮಯವಾದರೂ ಕಾಂಗ್ರೆಸ್‌ ನಲ್ಲೇ ಮೌನವ್ರತಕ್ಕೆ ಶರಣಾಗಬೇಕಿತ್ತು. ಕಾಲದ ನಿರ್ಧಾರದಲ್ಲಿ ಏನಾಗುತ್ತದೋ ಹೇಳಲಾಗುವುದಿಲ್ಲ. ವಿಶ್ವನಾಥ್ ತರಹದ ವ್ಯಕ್ತಿಗಳು ದೇವೇಗೌಡ, ಕುಮಾರಸ್ವಾಮಿ ಹೇಳಿಕೊಟ್ಟಂತೆ ಮಾತಾಡುವವರಲ್ಲ. ಅವರು ತಮಗನ್ನಿಸಿದ್ದನ್ನೇ ಹೇಳಿರುತ್ತಾರೆ. ಸ್ವಂತ ಮೆದುಳು, ಬೆನ್ನುಮೂಳೆ ಇರುವ ಮನುಷ್ಯರ್ಯಾರೂ ಇತರರ ತುತ್ತೂರಿಗಳಾಗಿರುವುದಿಲ್ಲ.  

ಇತ್ತ ಕಾಂಗ್ರೆಸ್ಸಿಗರ ಆಟಕ್ಕೆ ಬೇಸತ್ತ ಕುಮಾರಸ್ವಾಮಿ ಕೊಡಗಿನ ಇಬ್ಬನಿಯಲ್ಲಿ ರಾಜಕೀಯವಾಗಿ ಕರಗಿಹೋಗಲು ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿದ್ದಾರೆ. ಕಾಂಗ್ರೆಸ್ಸಿಗರೇನೋ ಬೇಷರತ್ ಬೆಂಬಲ ಎಂದು ಹೇಳಿದ್ದರೂ ಮೈತ್ರಿ ಸರ್ಕಾರದ ಮುಖ್ಯಸ್ಥನಾಗಿ ಕುಮಾರಸ್ವಾಮಿ ಎರಡೂ ಪಕ್ಷಗಳ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗಬೇಕಿತ್ತು. ಇದರಲ್ಲಿ ಅವರು ವಿಫಲರಾಗಿರುವುದೇ ಭಿನ್ನಾಭಿಪ್ರಾಯದ ಕಂದಕ ಇನ್ನಷ್ಟು ಅಗಲವಾಗುವುದಕ್ಕೆ ಕಾರಣವಾಯಿತು. 

ಇನ್ನು ಬಿಜೆಪಿಯವರು ಮಾಡುತ್ತಿರುವುದಾದರೂ ಏನು?  ಕಾಂಗ್ರೆಸ್‌ ಪಕ್ಷದ ಇಪ್ಪತ್ತು ಶಾಸಕರು ನಮ್ಮ ಜತೆ ಬರಲಿದ್ದಾರೆ, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸರ್ಕಾರ ಉರುಳಿ ತಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬಹುದು. ಅವರೀಗ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಇರಿಸಿಕೊಂಡಿದ್ದಾರೆ. ಮೂರೂ ಪಕ್ಷಗಳಿಗೆ ಬಹುಮತ ಇಲ್ಲ ನಿಜ. ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡ ಮೈತ್ರಿಯನ್ನು ಉಳಿಸಿ ಮುಂದುವರಿಸುವ ಮನೋಭಾವ ಎರಡೂ ಪಕ್ಷಗಳ ನಾಯಕರಲ್ಲಿಲ್ಲ. ಒಂದು ತತ್ವಕ್ಕೆ ಬದ್ಧರಾಗಿ ತ್ಯಾಗ ಮಾಡುವ ಗುಣ ಯಾವುದೇ ಶಾಸಕನಲ್ಲಿ ಕಾಣುತ್ತಿಲ್ಲ. ಅದಕ್ಕೆ ಕಾರಣ ಆಯ್ಕೆಯಾಗುತ್ತಿರುವ ಶಾಸಕರ ವ್ಯಾಪಾರಿ ಬುದ್ಧಿ. ತಮಗೆ ಲಾಭವಾಗದ ಯಾವುದೇ ಸರ್ಕಾರವೂ ಇಂಥವರಿಗೆ ಪಥ್ಯವಾಗುವುದಿಲ್ಲ. ಹೀಗಾಗಿಯೇ ಈ ಕ್ಷಣ ಕೋಮುವಾದಿಯಾದವನು ಮರುಕ್ಷಣವೇ ಕೋಮು ಸಾಮರಸ್ಯದ ಹರಿಕಾರನಾಗಿಬಿಡುತ್ತಾನೆ. ಜಾತ್ಯತೀತ ಎಂದು ಬೊಗಳೆಬಿಟ್ಟವನು ಕೋಮುವಾದಿಯಾಗಿಬಿಡುತ್ತಾನೆ. ಯಾವುದೇ ನಿಲುವು, ಸಿದ್ಧಾಂತ, ಸಹನೆ ಇಲ್ಲದ ಜನ ಪ್ರತಿನಿಧಿಗಳಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ತಮ್ಮ ಜಾತಿಗೇ ಮತ ನೀಡುವ, ಹಣಕ್ಕಾಗಿ ಮತ ನೀಡುವ ಜನರಿಂದಾಗಿ ನೆಮ್ಮದಿಯ ಬದುಕನ್ನಷ್ಟೇ ಬಯಸುವ ಜನಸಾಮಾನ್ಯರು ಅಸಹಾಯಕರಾಗಿದ್ದಾರೆ.

                                                                                                                                                          -ಟಿ.ಕೆ.ತ್ಯಾಗರಾಜ್ 

                                                                                                                                                  ಪ್ರಧಾನ ಸಂಪಾದಕ