ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮತ್ತು ಬಿಜೆಪಿ ನಾಯಕ ಸಂತೋಷ್  ಭೇಟಿ : ಸಮಾಜ ಪರಿವರ್ತನೆ ಸಮುದಾಯದ ಸ್ಪಷ್ಟೀಕರಣ

ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮತ್ತು ಬಿಜೆಪಿ ನಾಯಕ ಸಂತೋಷ್  ಭೇಟಿ : ಸಮಾಜ ಪರಿವರ್ತನೆ ಸಮುದಾಯದ ಸ್ಪಷ್ಟೀಕರಣ

ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಅವರು ಆರ್ ಎಸ್ ಎಸ್ ಹಿನ್ನೆಲೆಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ‘ಡೆಕ್ಕನ್ ನ್ಯೂಸ್‌’ ನಲ್ಲಿ ಪ್ರಕಟವಾದ ವರದಿ ಸಂಬಂಧ ಸಮಾಜ ಪರಿವರ್ತನೆ ಸಮುದಾಯ ಸ್ಪಷ್ಟೀಕರಣ ನೀಡಿದೆ. ಜಿಂದಾಲ್ ವಿರುದ್ಧದ ಹೋರಾಟದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ತಲುಪಿಸುವ ಮಾರ್ಗದಲ್ಲಿ ಬೆಂಗಳೂರಿನಲ್ಲಿರುವ ಬಿಜೆಪಿ ಪಕ್ಷದ ಕಚೇರಿಗೆ ಹೋಗಿದ್ದರು ಎಂದೂ ಅದು ಸ್ಪಷ್ಟೀಕರಣದಲ್ಲಿ ತಿಳಿಸಿದೆ.

ಎಸ್ ಆರ್ ಹಿರೇಮಠ್ ಅವರು 'ಆರ್ ಎಸ್ ಎಸ್ ಕಚೇರಿಗೆ ಭೇಟಿ ಕೊಟ್ಟಿಲ್ಲ' ಎಂದು ಸಮಾಜ ಪರಿವರ್ತನಾ ಸಮುದಾಯ ಲಿಖಿತ ಹೇಳಿಕೆಯಲ್ಲಿ ಸ್ಪಷ್ಟೀಕರಿಸಿದೆ. ಜಿಂದಾಲ್ ಕಂಪನಿಗೆ ಭೂಮಿ ನೀಡುವ ಕುರಿತು ರಾಜ್ಯ ಸರ್ಕಾರ ಕೈಗೊಂಡಿದ್ದ ನಿರ್ಧಾರದ ಕುರಿತು ಪ್ರತಿಪಕ್ಷ ಬಿಜೆಪಿ ಹೋರಾಟ ನಡೆಸುವ ಸುಳಿವು ನೀಡಿದ್ದರ ಬೆನ್ನಲ್ಲೇ ಎಸ್ ಆರ್ ಹಿರೇಮಠ್ ಅವರು ಬಿ ಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಈ ಕುರಿತು ಡೆಕ್ಕನ್ ನ್ಯೂಸ್ ವರದಿ ಮಾಡಿತ್ತು.

ಜಿಂದಾಲ್ ಗೆ ಭೂಮಿ ನೀಡಲು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಕುರಿತು ಸಮಾಜ ಪರಿವರ್ತನಾ ಸಮುದಾಯದ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ಸಭೆ ನಡೆಸಿದ್ದರು ಎಂದು ಸ್ಪಷ್ಟನೆಯಲ್ಲಿ ತಿಳಿಸಿರುವ ಸಮಾಜ ಪರಿವರ್ತನಾ ಸಮುದಾಯ, “ಹೋರಾಟದ ಕುರಿತು ಮನವರಿಕೆ ಮಾಡಿಕೊಡುವ ಭಾಗವಾಗಿ ಮಂಗಳವಾರದಂದು ಸುದ್ದಿಗೋಷ್ಠಿ ನಡೆಸಲಾಗಿತ್ತು. ಅಲ್ಲದೆ ಇದೇ ವಿಷಯದ ಪರವಾಗಿರುವ ಬಿಜೆಪಿ ಪಕ್ಷದ ಬೆಂಗಳೂರಿನಲ್ಲಿರುವ ಪ್ರಧಾನ ಕಚೇರಿಗೆ ಕರೆ ಮಾಡಿ  ರಾಜ್ಯಾಧ್ಯಕ್ಷರನ್ನು ಅಂದೇ ಭೇಟಿ ಮಾಡಲು ಸಮಯ ಕೇಳಿ ಮಲ್ಲಿಕಾರ್ಜುನ ಎಂಬುವರು ರಾಜ್ಯಾಧ್ಯಕ್ಷರ ಲಭ್ಯತೆ ಬಗ್ಗೆ ಖಚಿತಪಡಿಸಿಕೊಳ್ಳಲು ಪಕ್ಷದ ಕಾರ್ಯದರ್ಶಿ ರವಿಕುಮಾರ್ ಎಂಬುವರಿಗೆ ಕರೆ ಮಾಡಿದ್ದರು.

ಆದರೆ ರಾಜ್ಯಾಧ್ಯಕ್ಷರು ಬಿಜೆಪಿ ರಾಜ್ಯ ಕಚೇರಿಯಲ್ಲಿ ಭೇಟಿಗೆ ಲಭ್ಯವಿಲ್ಲ ಎಂದು ತಿಳಿದ ನಂತರ ಪತ್ರವನ್ನು ಬಿಜೆಪಿ ಕಚೇರಿಗೆ ತಲುಪಿಸುವ ಉದ್ದೇಶದಿಂದ ಕಚೇರಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಎಸ್ ಆರ್ ಹಿರೇಮಠ್ ಮತ್ತು ಚಂದ್ರಶೇಖರ್ ಮೇಟಿ ಎಂಬುವರು ಇದ್ದರು. ಪಕ್ಷದ ಕಚೇರಿಗೆ ಪತ್ರ ತಲುಪಿದ್ದಕ್ಕೆ ಸ್ವೀಕೃತಿ ಪತ್ರ ನೀಡಲಿಲ್ಲ. ಹೀಗಾಗಿ ಎಸ್ ಆರ್ ಹಿರೇಮಠ್ ಅವರೇ ನೇರವಾಗಿ ಪಕ್ಷದ ಕಚೇರಿಗೆ ಭೇಟಿ ಕೊಟ್ಟಿದ್ದರಲ್ಲದೆ, ಪಕ್ಷದ ಮುಖಂಡರೊಬ್ಬರನ್ನು ಭೇಟಿ ಮಾಡಲು ಮುಂದಾದಾಗ ಆ ಸಂದರ್ಭದಲ್ಲಿ ಹಾಜರಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಜಂಟಿ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿಸಿದರು. 

ಈ ಮಾತುಕತೆ ವೇಳೆ ಸಂತೋಷ್ ಅವರಿಗೆ ಪತ್ರದಲ್ಲಿರುವಂತೆ ವಿವರಿಸಲಾಯಿತು. ಈ ವಿಚಾರದಲ್ಲಿ ಸರ್ಕಾರ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಸಂತೋಷ್ ಅವರು ಹೇಳಿದರು..ಅಲ್ಲದೆ, ನಾವು ಕೈಗಾರಿಕೆ ಅಭಿವೃದ್ಧಿ ವಿರೋಧಿಗಳಲ್ಲ, ಕಾನೂನು ಗಾಳಿಗೆ ತೂರಿ ಮಾಡುತ್ತಿರುವ ಅಕ್ರಮಗಳನ್ನು ವಿರೋಧಿಸುತ್ತಿದ್ದೇವೆ. ಆದ್ದರಿಂದ ಈ ಬಗ್ಗೆ ದನಿ ಎತ್ತಿರುವ ನಿಮ್ಮ ಪಕ್ಷದ ನಿಲುವು ಜನಪರವಾಗಿರಲಿ. ಈ ಬಗ್ಗೆ  ಚರ್ಚೆ ನಡೆಸಲು ಪಕ್ಷದ ರಾಜ್ಯಾಧ್ಯಕ್ಷರನ್ನು ಸಮಯ ನೀಡಲಿ ಎಂದು ಹೇಳಲಾಯಿತು. ಸುಮಾರು 15 ನಿಮಿಷ ಸೌಹಾರ್ದಯುತವಾಗಿ ಮಾತುಕತೆ ನಡೆಸಲಾಗಿದೆ ಎಂದು ಸ್ಪಷ್ಟನೆಯಲ್ಲಿ ವಿವರಿಸಲಾಗಿದೆ.

ಎಸ್ ಆರ್ ಹಿರೇಮಠ್ ಮತ್ತು ಸಂತೋಷ್ ಅವರ ಮಧ್ಯೆ ನಡೆದಿದ್ದ ಮಾತುಕತೆ ಸಂದರ್ಭದಲ್ಲೆ ಫೋಟೋವನ್ನು, ಎಸ್ ಆರ್ ಹಿರೇಮಠ್ ಅವರ ಸಹಮತಿಯೊಂದಿಗೆ ತೆಗೆಯಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.