ಸೋಚ್ ಬದಲೋ ಪಪ್ಪಾ….

ಸೋಚ್ ಬದಲೋ ಪಪ್ಪಾ….

ಇತ್ತ ಉತ್ತರಭಾರತದಲ್ಲಿ  ಭಾರತೀಯ ಜನತಾ ಪಕ್ಷದ ಶಾಸಕ ಹಾಗೂ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗೋಪಾಲ್ ಭಾರ್ಗವ ಅವರು ಬರೇಲಿ ಶಾಸಕ ರಾಜೇಶ್ ಮಿಶ್ರಾ ಉರ್ಫ್ ಪಪ್ಪೂ ಭರತೌಲ್ ಮಗಳು ಸಾಕ್ಷಿ ಮಿಶ್ರಾ ತನ್ನ ತಂದೆಯ ವಿರುದ್ಧ ಬಾಯಿ ತೆಗೆದದ್ದಕ್ಕೆ, ಮತ್ತು ಮಗಳೇ ತಂದೆಯ ವಿರುದ್ಧ ದಂಗೆ ಎದ್ದಿರುವ ಘಟನೆಗಳಿಂದ ಮುಂದೆ ಯಾರೂ ಹೆಂಗೂಸುಗಳನ್ನು ಹುಟ್ಟಿಸದಂತೆ ಜನರನ್ನು ಪ್ರೇರೇಪಿಸುತ್ತದೆ. ಮುಂಬರುವ ಮೂರು ವರ್ಷಗಳಲ್ಲಿ ಲಿಂಗಾನುಪಾತದಲ್ಲಿ ಭಯಂಕರ ಅಂತರವುಂಟಾಗುತ್ತದೆ, ಆಸ್ಪತ್ರೆಗಳಲ್ಲಿ ಕಾನೂನುಬಾಹಿರ ಭ್ರೂಣಹತ್ಯೆಯ ಧಂದೆಯೂ ಹೆಚ್ಚಾಗಬಹುದು ಎಂಬ ಭಯಂಕರವಾದ ಭವಿಷ್ಯವನ್ನೂ ಹೇಳಿದ್ದಾರೆ. ಯಾರೂ ಹೆಂಗೂಸುಗಳನ್ನು ಹುಟ್ಟಿಸಬೇಡಿ ಅಂತ ಫತ್ವಾ ಹೊರಡಿಸಿದರೂ ಅಚ್ಚರಿಯಿಲ್ಲ.  ಭ್ರೂಣ ಹತ್ಯೆಗಳನ್ನು ಪರೋಕ್ಷವಾಗಿ ಸಮರ್ಥಿಸುವ ಇವರೂ ಹುಟ್ಟಿದ್ದೂ ಹೆಣ್ಣಿನ ಗರ್ಭದಿಂದಲೇ ಅನ್ನುವುದನ್ನು ಮರೆತ ಪಾಖಂಡಿಗಳಿವರು.   

ಅತ್ತ ದಕ್ಷಿಣ ಭಾರತದಲ್ಲಿ ಕಾವಿಧಾರಿ ಸ್ವಾಮೀಜಿಯೊಬ್ಬ " ಮಾತು ಕೇಳದ ಹೆಣ್ಣುಮಕ್ಕಳ ಕಾಲು ಮುರಿಯಬೇಕು" ಎಂದು ಉಪದೇಶಿಸಿದ್ದಾನೆ. ದಯವೇ ಧರ್ಮದ ಮೂಲವೆಂಬುದನ್ನೇ ಮರೆತ ಇಂಥ ಮೂರ್ಖರಿಗೆ  ಧರ್ಮಪದವನ್ನು, ಗುರುಪದವಿಯನ್ನು ಕೊಟ್ಟು ಕೂರಿಸುವವರು ಇನ್ನಾದರೂ ಎಚ್ಚರಗೊಳ್ಳಬೇಕು.  ಸಮಾಜಕ್ಕೆ ಯಾವ ಒಳಿತನ್ನೂ ಮಾಡದ, ಜಾತಿವಾದವನ್ನು ಪೋಷಿಸುವ  ಇಂಥವರು ಯಾವ ಜಾತಿ ಯಾವ ಮತದಲ್ಲಿದ್ದರೂ ನಿಷ್ಪ್ರಯೋಜಕರೇ.  

ಹನ್ನೆರಡನೇ ಶತಮಾನ ಸಮಾಜದ ಎಲ್ಲಾ ವರ್ಗದ ಮಹಿಳೆಯರಿಗೆ ಸಮಾನತೆಯನ್ನು ನೀಡಿತ್ತು. ಕಾಯಕವೇ ಕೈಲಾಸ, ಅನ್ನ ದಾಸೋಹ ಇವೆರಡೂ ಬದುಕಿನ ಮಂತ್ರವಾಗಿದ್ದವು.  ಅಂದಿನ ಮಹಿಳೆಗೆ ಪ್ರಾಪ್ತವಾಗಿದ್ದ ಸ್ವಾತಂತ್ರ್ಯ ಸಮಾನತೆಗಳು ಇವತ್ತಿಗೂ ನಮ್ಮ ಕೈಗೆಟುಕದ ಹುಳಿ ದ್ರಾಕ್ಷಿಯಂತಾಗಿದೆ. ಹೆಣ್ಣು ಎಷ್ಟೇ ವಿದ್ಯಾವಂತಳಾಗಿರಲಿ, ಆರ್ಥಿಕವಾಗಿ ಎಷ್ಟೇ ಸಕ್ಷಮಳಿರಲಿ ಗಂಡಾಳಿಕೆ ಅವಳನ್ನು ತನ್ನ ಅಂಕೆಯಲ್ಲಿ ಇಟ್ಟು ಕೊಳ್ಳುವ ಎಲ್ಲಾ ವಿಧಾನಗಳನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿರುತ್ತದೆ.  

 ಈಗ ಸಾಕ್ಷಿ ಮಿಶ್ರಾಳ ಘಟನೆಯನ್ನೇ ನೋಡಿ....

ತನ್ನ ಜಾತಿಯಲ್ಲದ ಹೊರಗಿನ ವ್ಯಕ್ತಿಯನ್ನು ಮದುವೆಯಾದ ನಂತರ ತಂದೆಯಿಂದ ಜೀವಕ್ಕೆ ಬೆದರಿಕೆ ಇದೆ ಎಂದು ಉಲ್ಲೇಖಿಸಿ ಪೊಲೀಸ್ ರಕ್ಷಣೆ ಕೋರಿ ಕಳೆದ ವಾರ ಅಲಹಾಬಾದ್ ಹೈಕೋರ್ಟ್ ಗೆ ತೆರಳಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕರ ಪುತ್ರಿ ಸಾಕ್ಷಿ ಮಿಶ್ರಾ ಪತಿ ಅಜಿತೇಶನೊಂದಿಗೆ ಸೋಮವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವಕಾಶಕ್ಕಾಗಿಯೇ ಹೊಂಚಿದ್ದ ಅನಾಮಿಕ ಗೂಂಡಾಗಳು ಹೈಕೋರ್ಟ್ ಕೋಣೆಯ ಹೊರಗೆ ಅಜಿತೇಶನನ್ನು ಥಳಿಸಿದರು.  ಅಲಹಾಬಾದ್ ಹೈಕೋರ್ಟ್ ಇವರ ಮದುವೆಯನ್ನು ಮಾನ್ಯಗೊಳಿಸುತ್ತ ಅವರಿಬ್ಬರಿಗೂ ಸುರಕ್ಷತೆಯನ್ನು ಒದಗಿಸಿದೆ. ಸಾಕ್ಷಿ ಮಿಶ್ರಾಳ ತಂದೆ ಶಾಸಕ ರಾಜೇಶ್ ಮಿಶ್ರಾನನ್ನೂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.  

ಕೋರ್ಟಿನ ಆವರಣದಲ್ಲಿಯೇ ಹಿಡಿದು ಥಳಿಸುವ ಗೂಂಡಾಗಳಿಗೆ ಕಾನೂನಿನ ಭಯವಿಲ್ಲವೆಂದರೆ ಹೊರಗಡೆ ಯಾವ ಸುರಕ್ಷೆಯನ್ನು ಪೋಲಿಸರು ನೀಡಬಲ್ಲರು? ಗೂಂಡಾಗಳ ಜೊತೆಗೆ ಪೋಲಿಸರು ಕೈಕೈ ಮಿಲಾಯಿಸಲಾರರೆಂಬ ಯಾವ ಭರವಸೆ ಉಳಿದಿದೆ?  ಜುಲೈ 4ರಂದು ದಲಿತ ಯುವಕ ಅಜಿತೇಶನನ್ನು  ಮದುವೆಯಾದ ಸಾಕ್ಷಿ ತನ್ನ ಶಾಸಕ ತಂದೆಯ ಕುರಿತು ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಫೇಸಬುಕ್ಕಿನಲ್ಲಿ, ಟ್ವಿಟರಿನಲ್ಲಿ ಅನೇಕ ಮನುವಾದಿಗಳು ಸಾಕ್ಷಿಯನ್ನು ಅವಾಚ್ಯ ಶಬ್ದಗಳಿಂದ ಹೀಗಳೆಯುತ್ತಿದ್ದಾರೆ. ಹಲವಾರು ಪರ ವಿರೋಧದ ಆಕ್ರಮಣಕಾರಿ ವಾಕ್ ವದಂತಿಗಳನ್ನು ಕೇಳುತ್ತಲೇ ಇದ್ದೇವೆ. 

ಅಜಿತೇಶನಿಗೆ ಈಗಾಗಲೇ ಒಂದು ಕಡೆ ಮದುವೆ ನಿಶ್ಚಯವಾಗಿತ್ತು, ಆ ಹೆಣ್ಣಿನ ಬಡ ತಂದೆ ಏಳು ಲಕ್ಷ ಸಾಲವನ್ನು ಮಾಡಿ ಅದ್ದೂರಿಯಿಂದ ನಿಶ್ಚಿತಾರ್ಥವನ್ನು ನೇರವೇರಿಸಿದ್ದರಂತೆ. ಆದರೆ ಅಜಿತೇಶನ ಕುಟುಂಬ ನಿಶ್ಚಿತಾರ್ಥವನ್ನು ಮುರಿದ ಬಗ್ಗೆ ಅಜಿತೇಶನೇ ಹೇಳಿಕೆ ಕೊಟ್ಟದ್ದನ್ನೂ ಹಿಂದಿ ಪತ್ರಿಕೆಗಳು ಪ್ರಕಟಿಸಿದ್ದವು.  ’ಉಂಡ ಮನೆಗೆ ದ್ರೋಹ ಬಗೆದ’ ಅಂತ ಕೆಲವರು ಜರಿದರು. ಸಾಕ್ಷಿ ತಂದೆಯ ವಿರುದ್ಧ ಹೇಳಿಕೆ ಕೊಟ್ಟಿದ್ದನ್ನು ಕೆಲವರು ಖಂಡಿಸಿ ಇಂಥ ಮಗಳಿರುವುದಕ್ಕಿಂತ ಹುಟ್ಟುವ ಮೊದಲೇ ಸಾಯಿಸಿಬಿಡಬೇಕು ಎಂದು ನಂಜನ್ನು ಕಾರಿದರು. ಸಾವಿರ ಬಾಯಿ, ಸಾವಿರ ಮತ. ತಲೆಗೊಂದರಂತೆ ಮಾತಾಡುತ್ತಲೆ ಇದ್ದಾರೆ.  

ಇದೆಲ್ಲವುಗಳ ಆಚೆಗೆ ನಾವು ಯೋಚಿಸಬೇಕಾದ್ದು ಸಾಕ್ಷಿಯ ಮನಸ್ಥಿತಿಯ ಬಗ್ಗೆ. ಅಜಿತೇಶನ ಹಿನ್ನೆಲೆ ಬಗ್ಗೆ ಲವಲೇಶವೂ ವಿಚಲಿತಳಾಗದ ಸಾಕ್ಷಿ ಸುದ್ದಿಮನೆಯಲ್ಲಿ ಕಣ್ಣೀರುಗರೆದು - "ಅಪ್ಪಾ ನಿಮ್ಮ ವಿಚಾರಗಳನ್ನು ಬದಲಿಸಿಕೊಳ್ಳಿ, ಮಗ ಮತ್ತು ಮಗಳನ್ನು ಸಮಾನತೆಯಿಂದ ಕಾಣಿರಿ’ "ಸೋಚ ಬದಲೋ ಪಪ್ಪಾ" ಎನ್ನುವ ಸಾಕ್ಷಿಯ ಮಾತುಗಳನ್ನು ಕೇಳಿದವರಿಗೆ ಪುರುಷಾಧಿಪತ್ಯದ ಅಧಿಕಾರಶಾಹಿ ಕುಟುಂಬಗಳು ಈಗಲೂ ಹೆಣ್ಣುಮಕ್ಕಳನ್ನು ಗಂಡುಮಕ್ಕಳಿಗಿಂತ ಕಡೆಯಾಗಿ ಕಾಣುವುದು ನಿಚ್ಚಳವಾಗುತ್ತದೆ.

ಅಪ್ಪ ಶಾಸಕ !  ಸುಖ ಸಂಪತ್ತಿಗೆ ಯಾವ ಕೊರತೆಯೂ ಇರದ ಆ ಹೆಣ್ಣುಮಗಳು ಬಯಸುತ್ತಿದ್ದುದಾದರೂ ಏನನ್ನು ?  ಹಿಡಿ ಪ್ರೀತಿ, ಇಡಿಯಾದ ಅವಳ ಅಸ್ತಿತ್ವವನ್ನು, ವ್ಯಕ್ತಿತ್ವವನ್ನು ಗುರುತಿಸುವ ಗೌರವಿಸುವ ತನ್ನವರನ್ನು. ಅವಳೂ ಒಂದು ಸ್ವತಂತ್ರ ವ್ಯಕ್ತಿ, ಆಕೆಗೂ ತನ್ನದೇ ಆದ ಆಸೆಗಳಿವೆ, ಅಭಿರುಚಿಗಳಿವೆ, ವಿಚಾರಗಳಿವೆ, ಸಿದ್ಧಾಂತಗಳಿವೆ. ಆದರೆ ಮನೆಯಲ್ಲಿ ಗಂಡು ಮಗನಿಗೆ ಸಿಗುವ ಪ್ರಾಮುಖ್ಯತೆಯ ಅರ್ಧದಷ್ಟಾದರೂ ತಮಗೆ ಸಿಗಬೇಕೆನ್ನುವ, ಅದನ್ನು ಪಡೆಯುವುದು ತನ್ನ ಹಕ್ಕು ಎನ್ನುವ ಅರಿವು ಸಾಕ್ಷಿಗಿದೆ. ಮನೆಯಲ್ಲಿ ಆಕೆಯ ಸೋದರ ’ವಿಕ್ಕಿ’ಗೆ ಸಿಗುವ ಪ್ರಾಮುಖ್ಯತೆಯಾಗಲಿ, ಸವಲತ್ತುಗಳಾಗಲಿ ಆಕೆಗಿಲ್ಲ. ಸಾಕ್ಷಿಯ ಮಾತುಗಳಲ್ಲಿ ಈ ತಾರತಮ್ಯದ ಬಗ್ಗೆ ಅಸಮಾಧಾನವಿದೆ.  ವಂಶೋದ್ಧಾರಕ ಮಗ, ನಾಳಿನ ಭವಿಷ್ಯದ ರಾಜಕಾರಣಿ ಮಗನಿಗೆ ತಂದೆ ತಾಯಿ ಇಬ್ಬರೂ ಹಾಕುವ ಮಣೆಯಲ್ಲಿ ಹೆಣ್ಣುಮಕ್ಕಳನ್ನು ಕುಲಕ್ಕೆ ಎರವಾಗಿಸಿಯೇ ಇಟ್ಟು ನಡೆಸುವ ಕೊಳ್ಳುವ ಪಾಳೆಗಾರಿಕೆ ವ್ಯವಸ್ಥೆಯಿದೆ. 

ಸಾಕ್ಷಿಯ ರೋಸಿಹೋದ ಜೀವ ಬಂಡಾಯವೆದ್ದಿದ್ದರೆ ಅದು ಸಹಜವೇ. ಮನೆಗೆ ಬರು ಹೋಗುವ ಸಲುಗೆಯಿದ್ದ,  ಪ್ರೀತಿ ಹನಿಸಿದ ಅಜಿತೇಶನಲ್ಲಿ ಆಕೆಯ ಜೀವ ನೆಮ್ಮದಿ ಕಂಡಿರಬೇಕು.  ಪತ್ರಿಕೋದ್ಯಮವನ್ನು ಓದಿದ ಸಾಕ್ಷಿ ತನಗೆ ಬೇಕಿದ್ದ ಬದುಕನ್ನು ಆರಿಸಿಕೊಂಡಿದ್ದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದು ಪಾರಂಪರಿಕ ಪಾಳೆಯಗಾರರಿಗೆ, ಧರ್ಮದ ಠೇಕೇದಾರರಿಗೆ, ಸನಾತನಿಗಳಿಗೆ ಸಮ್ಮತವಿಲ್ಲ.

ಸಾಕ್ಷಿ ಮಾತಾಡಿದ ವಿಡಿಯೋವನ್ನು ಕೇಳಿದಾಗ ಅನ್ನಿಸಿದ್ದೆಂದರೆ, ಅಮ್ಮ ಹೊಡೆದಳೆಂದು ಅಪ್ಪನಲ್ಲಿ ಅಮ್ಮನ ಕಂಪ್ಲೇಂಟ್  ಹೇಳುವ ಮಗುವಿನಂತಿದೆ ಆಕೆಯ ರೋಧನೆ. ಅಪ್ಪ ಕೆಲಸಕ್ಕೆ ಹೊರಹೋದ ನಂತರ ಅಮ್ಮನ ಬಿಗಿಯಾದ ಶಾಸನ, ಕಠಿಣ ಧೋರಣೆಯ ಬಗ್ಗೆ ದೂರುತ್ತಾಳೆ, ತಾನು ಪತ್ರಿಕೋದ್ಯಮ ಓದಿದ ಕಾಲೇಜೂ ಬಹಳ ಸ್ಟ್ರಿಕ್ಟ್ ಆಗಿತ್ತು. ಮೊಬೈಲ್ ನ್ನು ಬಳಸುವಂತಿದ್ದಿಲ್ಲ ಅನ್ನುತ್ತಾಳೆ. ಮನೆಯಲ್ಲೂ ಅವಳ ಮೇಲೆ ಮೊಬೈಲ್ ಬಳಸದಂತೆ, ಫೇಸಬುಕ್ ಬಳಸದಂತೆ ಕಾವಲು, ಮನೆ ಎಂಬುದು ಮನೆಯಂತಿರದೇ ಖಾಪ್ ಪಂಚಾಯತಿಯಾದಾಗ ಸಾಕ್ಷಿಯಂತಹ ಮಕ್ಕಳು ಉಸಿರುಗಟ್ಟುವ ವಾತಾವರಣದಿಂದ ಸ್ವಚ್ಚಂದ ಆಕಾಶಕ್ಕಾಗಿ, ಬೀಸುವ ಗಾಳಿಗಾಗಿ, ನದಿಯಂತಹ ಪ್ರೀತಿಗಾಗಿ, ಕಕ್ಕುಲತೆಗಾಗಿ ಹಂಬಲಿಸುತ್ತಾರೆ. ಅವಳನ್ನು ಆಲಿಸುವ ಕಿವಿಗಳೂ, ಹೃದಯಗಳೂ ಮನೆಯಲ್ಲಿ ಇದ್ದಿಲ್ಲವೆನ್ನುವುದು ಆಕೆಯ ಮಾತುಗಳಲ್ಲಿ ವ್ಯಕ್ತವಾಗುತ್ತದೆ.

ಶಾಸಕನಾದ ತಂದೆ ಮತ್ತವನ ಬಾಲಬಡುಕರು ಏನನ್ನೂ ಮಾಡಬಹುದು ಎನ್ನುವ ವಾಸ್ತವದ ಬಗೆಗೆ ಅರಿವುಳ್ಳ  ಸಾಕ್ಷಿ ಸುರಕ್ಷತೆಗಾಗಿ ಹೈಕೋರ್ಟ್ ಮೊರೆ ಹೋಗಿದ್ದು ಸಮಯೋಚಿತವಾಗಿಯೇ ಇದೆ.  ಆಕೆಯ ವಿದ್ಯೆ ಕ್ಷಮತೆಗೆ ಬೆಲೆ ಕೊಟ್ಟಿದ್ದರೆ, ತುಸು ಅವಕಾಶ ಕೊಟ್ಟಿದ್ದರೆ ತಾನೂ ತಂದೆಯ ಸಾಮಾಜಿಕ ಕಾರ್ಯಗಳಲ್ಲಿ, ದೈನಂದಿನ ಆಗುಹೋಗುಗಳಲ್ಲಿ , ಕಛೇರಿಯ ಕಾರ್ಯಕಲಾಪಗಳಲ್ಲಿ ತಾನೂ ಕೈಜೋಡಿಸುತ್ತಿದ್ದೆ ಎನ್ನುವ ಅವಳ ಮಾತುಗಳು ನಾವೆಲ್ಲ ಅವಳಿರುವ ಕಟ್ಟುಪಾಡಿನ ಸಮಾಜವನ್ನು ಅರಿಯುವ ಅಗತ್ಯವನ್ನು ಹೇಳುತ್ತದೆ.  ಸಾಕ್ಷಿಯ ಮಾತುಗಳಲ್ಲಿ ಅಡಗಿದ ನೋವು, ಕಣ್ಣಿರು ಬಿಕ್ಕಳಿಕೆಯಲ್ಲಿ ವ್ಯಕ್ತವಾಗುವ ಆಕೆಯ ರೋಷದಲ್ಲಿ ನಾವು ಅರ್ಥಮಾಡಿಕೊಳ್ಳಬಹುದಾದ ಲಿಂಗತಾರತಾಮ್ಯ, ’ಜೆಂಡರ್ ರಾಜಕೀಯದ ಕತೆಯಿದೆ. 

ಇತ್ತೀಚೆಗೆ ಅಲಿಗಢದ ನಮ್ಮ ಕೋಲೀಗ್ ಒಬ್ಬನ ನೆಂಟರ ಮಗಳ ಮದುವೆಯಾಯ್ತು. ಗಂಡಿನವರು ಹದಿನೆಂಟು ಲಕ್ಷ ಬೇಡಿದರು. ಜೊತೆಗೆ ವರದಕ್ಷಿಣೆಯ ರೂಪದಲ್ಲಿ ಗಂಡಿಗೆ ಬೇಕಾದ ಸಾಮಾನುಗಳ ಪಟ್ಟಿ ಮತ್ತು ಅವು ಯಾವ್ಯಾವ ಬ್ರ್ಯಾಂಡಿನವುಗಳಾಗಿರಬೇಕೆಂಬ ತಾಕೀತು ಬೇರೆ. ನಮ್ಮ ಕೋಲೀಗ್ ತಂದೆ ಶಾಲಾ ಶಿಕ್ಷಕರಾಗಿದ್ದು ಈ ಮದುವೆಯನ್ನು ಪ್ರತಿಭಟಿಸಿ ಮದುವೆಗೆ ಹೋಗಲಿಲ್ಲ. 

ಆ ಹುಡುಗಿಗೆ ಸಿಟ್ಟು ಬರಲಿಲ್ಲವೇ ? ಯಾಕೆ ಮದುವೆಯನ್ನು ಆ ಹುಡುಗನನ್ನು ವಿರೋಧಿಸಲಿಲ್ಲ ಆ ಹುಡುಗಿ ಅಂತ ಕೇಳಿದರೆ ಉತ್ತರ ನನ್ನನ್ನು ಬೆಚ್ಚಿಬೀಳಿಸಿತು.  ಮದುವೆಯಾಗುವವಳಿಗೆ ಅಪ್ಪ ಕೊಡಲು ತಯಾರಿದ್ದರೆ ಕೊಡಲಿ, ನಾಳೆ ಆ ಹಣದ ಒಡತಿ ತಾನೇ ಅಲ್ಲವೇ ? ಎನ್ನುವ ಯೋಚನೆ. ನಾಳೆ ಎನ್ನುವ ಭವಿಷ್ಯವನ್ನು ಕಂಡವರಾರು ? ಆ ಹಣ ಅವಳಿಗೆ ನೆಮ್ಮದಿಯನ್ನು ತರುತ್ತದೋ ಇಲ್ಲ ಇನ್ನಷ್ಟು ದುರಾಸೆಯನ್ನು ಹುಟ್ಟಿಸಿ ಯಾತನೆಯನ್ನು ಕೊಡುತ್ತದೋ ಗೊತ್ತಿಲ್ಲ.

ಎಷ್ಟೋ ಯುವತಿಯರು ವರದಕ್ಷಿಣೆಯನ್ನು ವಿರೋಧಿಸಿ, ಮದುವೆ ಮಂಟಪದಲ್ಲಿಯೇ ಗಂಡನ್ನು ನಿರಾಕರಿಸಿ ಚಪ್ಪರದಿಂದ (’ಬಾರಾತ್’ ) ಬೀಗರ ದಂಡನ್ನು ಓಡಿಸಿದ ಉದಾಹರಣೆಗಳಲ್ಲಿ ಇಂತಹ ಮನಸ್ಥಿತಿಯ ಹೆಣ್ಣುಮಕ್ಕಳೂ ಇದ್ದಾರೆ. ಗಂಡಾಳಿಕೆ  ಸಮಾಜ ಬಯಸುವುದು ತಾವು ಹೇಳಿದಂತೆ ಕೇಳುವ ಮಗಳನ್ನು.  ಅಕಸ್ಮಾತ್ ಆಕೆ ಪ್ರೀತಿಸಿ ಮದುವೆ ಆಗುವ ತಪ್ಪನ್ನು ಮಾಡಿದಲ್ಲಿ ಅಂಥವಳನ್ನು ಕೊಂದರೂ ತಪ್ಪೇನಿಲ್ಲ. ಕುಟುಂಬದ ಗೌರವ ಮುಖ್ಯ ಎನ್ನುವ ಮನುವಾದಿಗಳಿಗೆ ಸಾಕ್ಷಿಯಂಥ ದಿಟ್ಟ, ಸರಿ ತಪ್ಪಿನ್ನು ಅಳೆಯಬಲ್ಲ ಹೆಂಗೂಸುಗಳು ಬೇಡ. 

ಸುಪ್ರಿಂ ಕೊರ್ಟ್ ಹೆಣ್ಣುಮಕ್ಕಳಿಗೆ ಅವರ ಆಯ್ಕೆಯ ಹಕ್ಕನ್ನು ನೀಡಿದೆ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ಅವರು ಆಯ್ಕೆಯ ಮದುವೆಯಾಗುವ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟರೂ ಸಮಾಜ ಕೊಡಲು ತಯಾರಿಲ್ಲ. 

ಈಗಲೂ ಉತ್ತರಪ್ರದೇಶ ರಾಜಸ್ಥಾನದ ಖಾಪ್ ಪಂಚಾಯತಿಗಳು ತಾವು ಮಾಡಿದ್ದೇ ಸೈ, ಅದೇ ದೇಶದ ಸರ್ವೋಚ್ಚ ನ್ಯಾಯಾಲಯವೆಂದು ಮೀಸೆ ತಿರುವಿಕೊಂಡು ಮೆರೆಯುತ್ತಾರೆ.  ಆಂಧ್ರಪ್ರದೇಶದಲ್ಲಿ ಮಹಿಳೆಯರ ಉಡುವ ’ನೈಟಿಯನ್ನು ಖಂಡಿಸಿ, ತೊಡುವ ಸಮಯವನ್ನು ನಿಗದಿ ಪಡಿಸಿ ಅದನ್ನು ಮೀರುವ  ಹೆಣ್ಣುಮಕ್ಕಳಿಗೆ ದಂಡ ವಿಧಿಸಿದಂತೆ ಈ ಖಾಪ್ ಗಳು ಜೀನ್ಸ್ ತೊಡಬಾರದು, ಮೊಬೈಲ್ ಬಳಸಬಾರದು, ಹುಡುಗರೊಂದಿಗೆ ಬೆರೆಯಬಾರದು, ಒಂದೇ ಗೋತ್ರದವರನ್ನು ಮದುವೆ ಆಗಬಾರದು, ಪ್ರೇಮಿಸಿದ ತಪ್ಪಿಗೆ ಹೆತ್ತ ಕರುಳ ಕುಡಿಗಳನ್ನು ಕೊಲ್ಲಲೂ ಹೇಸದವರಿವರು. ಮರ್ಯಾದಾ ಹತ್ಯೆ"ಯನ್ನು  ಕುಟುಂಬ ಗೌರವಕ್ಕಾಗಿ ಮಾಡಿದ್ದು ಎಂದು ಸಮರ್ಥಿಸಿಕೊಳ್ಳುವ ಖಾಪ್ ಹಲವು ಕಾಯಿದೆ ಕಟ್ಟಳೆಗಳನ್ನು ಹೆಣ್ಣುಮಕ್ಕಳ ಮೇಲೆ ವಿಧಿಸಿದೆ..   

ಹೆಣ್ಣು ಭ್ರೂಣವನ್ನು ಬೆಳೆಯಲು ಬಿಡಬಾರದು ಎನ್ನುವವರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕಿದೆ. ಭ್ರೂಣಹತ್ಯೆಗೆ ಗೋ ಅಹೆಡ್ ಸನ್ನಿವೇಶವನ್ನು ಸೃಷ್ಟಿಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.  “ನಿನ್ನ ವಿಚಾರಗಳನ್ನು ಬದಲಿಸಿಕೋ ಅಪ್ಪಾ,  ಸೋಚ್ ಬದಲೋ ಪಪ್ಪಾ, ವಿಕ್ಕಿಯನ್ನು ನೋಡುವಂತೆಯೇ ನಮ್ಮನ್ನೂ ನೋಡು ಪಪ್ಪಾ, ಎನ್ನುವ ಹೆಣ್ಣುಮಗಳೊಬ್ಬಳು ಮನೆ ಮನೆಗೂ ಬೇಕಿದ್ದಾಳೆ.