ಸ್ವತಂತ್ರ ದೇಶದ ಗುಲಾಮಗಿರಿ  

ಸ್ವತಂತ್ರ ದೇಶದ ಗುಲಾಮಗಿರಿ  

ಮೊನ್ನೆ ನಮ್ಮ ಕಂಪನಿಯ ಹಿರಿಯನೊಬ್ಬ  ಹೇಳುತ್ತಿದ್ದ. ಈ ಕಾರ್ಮಿಕರಿಗೆ ಒಂದು ದಿನದ ರೊಟ್ಟಿಗಾಗುವಷ್ಟೇ ಕೂಲಿ ಕೊಡು ಅಂದರೆ ಮರುದಿನದ ರೊಟ್ಟಿಗಾಗಿ ದುಡಿಯಲು ಬಂದೇ ಬರ್ತಾನೆ. ಎರಡು ದಿನದ ರೊಟ್ಟಿಯನ್ನು ಒಂದೇ ದಿನ ಕೊಟ್ಟುಬಿಟ್ಟರೆ  ಆತ ನಿದ್ದೆ ಮಾಡ್ತಾನೆ. ಮತ್ತೆ ದುಡಿಸಿಕೊಳ್ಳುವ ಅಧಿಕಾರಿಗಳಿಗೆ ಎಷ್ಟು ಸಂಬಳ ಸವಲತ್ತು ಕೊಡಬೇಕೆಂದರೆ, ಅವನು ಒಳ್ಳೆ ರೀತಿಯಲ್ಲಿ ದುಡಿಸಿಕೊಳ್ಳುವಷ್ಟು “ 

ತಕ್ಷಣ  “ ಅನ್ನಭಾಗ್ಯ ಯೋಜನೆಯು  ಜನರನ್ನು ಸೋಮಾರಿಗಳನ್ನಾಗಿಸುತ್ತದೆ ಎಂದಿದ್ದ ನಮ್ಮ ಎಸ್.ಎಲ್.ಭೈರಪ್ಪ ನೆನಪಾದರು. ಬೈರಪ್ಪ ಒಬ್ಬರೇ ಅಲ್ಲ ಅನೇಕ ವಿಚಾರವಂತರೂ ಸಹ ಅನ್ನಭಾಗ್ಯದಿಂದ ಜನರು ಸೋಮಾರಿಗಳಾಗುತ್ತಾರೆ, ದುಡಿಯದೇ ಅಕ್ಕಿಯಾಕೆ ಕೊಡಬೇಕು? ಎಂದೆಲ್ಲ ಕಿಡಿಕಾರಿದ್ದು ನೆನಪಾಯಿತು.   

ಈಗ ಹಿರಿಯರ ಮಾತಿಗೆ ಬೆಚ್ಚಿ “ ಇದನ್ಯಾವ ಎಕನಾಮಿಸ್ಟ್ ಹೇಳಿದ್ದಾನೆ ಸರ್” ಎಂದು ಕೇಳಿದೆ. ಕಣ್ಣಮುಂದೆ ದಯನೀಯ ನೋಟದ, ನಿಸ್ತೇಜ ಕಣ್ಣುಗಳ ಕೃಶ ಶರೀರದ ಪುಷ್ಪಾ ನೆನಪಾದಳು. 

ಬಿಹಾರದ ಪುಷ್ಪಾ ನಮ್ಮ ಕಂಪನಿಯಲ್ಲಿ ಕೆಲಸಮಾಡತೊಡಗಿ ಎರಡು ವರ್ಷಗಳಾದವು. ಅವಳಿಗೆ ನಾಲ್ಕು ಮಕ್ಕಳು. ಗಂಡನಿಗೆ ಎಂಥದ್ದೊ ಗಂಟುರೋಗವಂತೆ. ಸದಾಕಾಲ ನೋವು ನೋವು ಎನ್ನುವ ಅವನು ದುಡಿಯಲಾಗದ್ದಕ್ಕೆ ಈ ಪಾಪದ ಹೆಂಗಸು ದಿನಕ್ಕೆ ಹನ್ನೆರಡು ಗಂಟೆ ದುಡಿಯುತ್ತಿದ್ದಾಳೆ. ಬೆಳಗಿನ ಎಂಟುವರೆಗೆ ಬಂದು ಅಡ್ಮಿನ್ ಸಮುಚ್ಚಯದ ಬಾಗಿಲು ತೆರೆದು ಎಲ್ಲರ ಟೇಬಲ್ ಕುರ್ಚಿಗಳನ್ನು ಒರೆಸುವುದರಿಂದ ಶುರುವಾಗುವ ಅವಳ ಕೆಲಸ ಸಂಜೆ ನಾಲ್ಕೂವರೆವರೆಗೆ ಕಚೇರಿಯಲ್ಲಿ ಇರುತ್ತದೆ. ಊಟ ತಿಂಡಿ ಬಂದ ವಿಸಿಟರ್ಸಿಗೆಲ್ಲ ನೀರು ಚಹ ಹಂಚುವುದರಲ್ಲಿ ಕಳೆದರೆ ನಾಲ್ಕೂವರೆಯ ನಂತರ ಕಂಪನಿ ಮಾಲಿಕನ  ಸಂಬಂಧಿಯಾಗಿರುವ ಈ ಹಿರಿಯನ ಮನೆಯಲ್ಲಿ ರಾತ್ರಿ ಏಂಟೂವರೆವರೆಗೂ ಗಾಣದೆತ್ತಿನಂತೆ ದುಡಿಯುತ್ತಾಳೆ.   

ನಿತ್ಯವೂ ಈ ಹಿರಿಯನ ಹೆಂಡತಿಗೆ ಕರಾರುವಾಕ್ಕಾಗಿ ಒಂದು ತಾಸು  ಮಾಲೀಸು ಮಾಡಬೇಕು. ನಂತರ ಒಣಗಿದ ಬಟ್ಟೆಗಳಿಗೆ ಇಸ್ತ್ರಿ ಹಾಕಿ, ಉಳಿದವನ್ನು ಮಡಚಿಡುವುದರಿಂದ ರಾತ್ರಿಯೂಟಕ್ಕೆ ಬಿಸಿ ರೊಟ್ಟಿ ಮಾಡುವತನಕವೂ ಆ ಮುದುಕಿ ಹೇಳಿದ್ದೆಲ್ಲವನ್ನೂ ಮಾಡಿ ಮನೆಗೆ ಹೋಗುತ್ತಾಳೆ. ಒಂದಿನವೂ ಕೊಸಕೊಸ ಅಂತ ವಟಗುಡಿದ್ದನ್ನಾಗಲಿ, ತನ್ನ ದುಡಿತದ ಬಗ್ಗೆ ಸಿಗುವ ಸಂಬಳದ ಬಗ್ಗೆಯಾಗಲಿ ಯಾವ ಅಸಮಾಧಾನವನ್ನೂ ವ್ಯಕ್ತಪಡಿಸಿಲ್ಲ ಆಕೆ.  

ನ್ಯಾಯವಾಗಿ ತಾಸಿನ ಲೆಕ್ಕದಲ್ಲಿ ದುಡಿದರೂ ಅವಳಿಗೆ ನಾಲ್ಕು ತಾಸಿನ ದಿಹಾಡಿ ಒಂದು ತಿಂಗಳಿಗೆ ಸಾವಿರ ರುಪಾಯಿಗಳ ಮೇಲೆಯೇ ಸಿಗಬೇಕು. ಆದರೆ ಮಾಲಿಕ ಮುದುಕಿ ಕೊಡುವುದು ಬರೀ ಐನೂರು. ದುಡಿಸಿಕೊಳ್ಳುವ ದೊಡ್ಡ ಜನಗಳಿಗೆ ಸದಾ ಸೇವೆಗೈಯುವ ಗುಲಾಮರು ಬೇಕು. ಅವರು ಮಾಲೀಕರು, ಇವರು ಗುಲಾಮರು! ಇದು ದುಡಿಮೆಗಾರರ ಶ್ರಮಕ್ಕೆ ಬೆಲೆಕೊಡದ, ಗೌರವ ನೀಡದ “ಪವರ್ ಗೇಮ್. ಅಧಿಕಾರಯುಳ್ಳವರು, ಬಲವಂತರು ದುರ್ಬಲರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದೇ ತಮ್ಮ ಹಕ್ಕು ಎಂದುಕೊಳ್ಳುವ ಪವರ್ ಗೇಮ್!  ದುರ್ಬಲರಿಗೆ ಸರಿಯಾದ ಸಂಬಳಕೊಡದೇ ಬಳಸಿಕೊಳ್ಳುವ  ರೀತಿಯೇ ಅಮಾನವೀಯವಾದ ಆಧುನಿಕ ಗುಲಾಮಗಿರಿ ! ಒಂದರ್ಥದಲ್ಲಿ ನಮ್ಮ ನಮ್ಮ ದುಡಿಮೆ ಕ್ಷೇತ್ರದಲ್ಲಿ ನಾವೆಲ್ಲ ಆಧುನಿಕ ಗುಲಾಮರು. ಬಂಡವಾಳಶಾಹಿ ವ್ಯವಸ್ಥೆಯ ಎದುರಾಗಿ ಹೇಳುವ ಕೇಳುವ ಯಾವ ಸ್ವಾತಂತ್ರ್ಯ ನಮಗಿರುವುದಿಲ್ಲ.ದನಿಯೆತ್ತಿದವರು ಬೆಲೆ ತೆರೆಬೇಕಾಗುತ್ತದೆ. .   

ಹೊಟ್ಟೆಪಾಡಿಗಾಗಿ ತಮ್ಮ ಮನೆ ಮಠ, ಮಕ್ಕಳು, ಮರಿಗಳನ್ನು ಅವರ ಪಾಡಿಗೆ ಬಿಟ್ಟು ಹಲ್ಲುಮುಡಿಕಚ್ಚಿಕೊಂಡು ಹಗಲಿರುಳೆನ್ನದೇ, ಭಾನುವಾರದ ರಜೆಯೂ ಇಲ್ಲದೇ ದುಡಿಯುವ ಪುಷ್ಪಾಳಂಥ ಕಾಯಕಜೀವಿಗೆ ನ್ಯಾಯವಾಗಿ ಸಲ್ಲಬೇಕಾದ ಸಂಬಳವನ್ನೂ ಕೊಡದ ದುಷ್ಟರು. ಸಾಧ್ಯವಾದಲ್ಲಿ ಇವರು ತಮ್ಮ ಅಂಡನ್ನೂ ತೊಳೆಸಿಕೊಂಡಾರು! ಇಡೀ ತಿಂಗಳು ದುಡಿಸಿಕೊಂಡು ಕೊನೆಯಲ್ಲಿ ಐನೂರು ರುಪಾಯಿಗಳನ್ನು ಕೈಯಲ್ಲಿಡುವ ಈ ಹಣಬಲವುಳ್ಳವರಿಗೆ ನೈತಿಕ ಲಜ್ಜೆಯೂ ಇರುವುದಿಲ್ಲ. ಆತ್ಮಸಾಕ್ಷಿ ಎಂಬುದು ಮೊದಲೇ ಸತ್ತಿರುತ್ತದೆ.  

ಇದೇ ಮಾತನ್ನು ಚರ್ಚಿಸುತ್ತ ಒಂದಿನ ಪುಷ್ಪಾಳಿಗೆ ಹೇಳುತ್ತಿದ್ದೆ. ಹೀಗೆ ಬಾಯಿಮುಚ್ಚಿಕೊಂಡಿದ್ದರೆ ಯಾರೂ ನಿನ್ನನ್ನು ಕೇಳುವುದಿಲ್ಲ. ಆ ಹಿರಿಯರಿಗೆ ಬಾಯಿಬಿಟ್ಟು ಕೇಳು. ಸಾವಿರ ರುಪಾಯಿಗಳನ್ನಾದರೂ ಕೊಡಿರಿ ಎಂದು” ಇದೇ ಹನ್ನೆರಡು ತಾಸುಗಳನ್ನು ಆಕೆ ಬೇರೆ ಕಂಪನಿಯಲ್ಲಿ ದುಡಿದಿದ್ದರೆ ಓವರ್ ಟೈಮ್ ಇತ್ಯಾದಿ ಸೇರಿ ಆಕೆಗೆ ತಿಂಗಳ ಸಂಬಳ ಹದಿನೈದು ಸಾವಿರವಾದರೂ ಆಗಿರುತ್ತಿತ್ತು, ಇಲ್ಲಿ  ಹನ್ನೆರಡು ತಾಸು ಕತ್ತೆಯಂತೆ ದುಡಿದರೂ ದುಡಿಸಿಕೊಳ್ಳುವ ವರ್ಗಕ್ಕೆ ದಯೆಯೆಂಬುದಾಗಲೀ ಮಾನವೀಯತೆಯಾಗಲಿ ಇಲ್ಲ. ಅವರ ಎದೆಯಲ್ಲಿನ ತೇವ ರುಪಾಯಿ ನೋಟುಗಳಲ್ಲೇ ಆರಿಹೋಗಿರುತ್ತದೆ. ತಮ್ಮ ಸ್ವಾರ್ಥಕ್ಕಾಗಿ ರಕ್ತಹೀರುವ ಜಿಗಣೆಗಳು ಇವರು. ನಿನ್ನ ದುಡಿತದ ಬೆಲೆ ಇದಲ್ಲ. ನಿನ್ನ ಮಕ್ಕಳು ಮರಿಗಳು ನಿನಗಾಗಿ ಕಾದುಕುಳಿತು . ರಾತ್ರಿ ನೀನು ಮನೆ ತಲುಪಿದಾಗ  ಮಲಗಿರುತ್ತವೆ.  ಕಷ್ಟದಿಂದ ಗಳಿಸಿದ್ದನ್ನು ಖುಷಿಯಾಗಿ ಮಕ್ಕಳೊಂದಿಗೆ ಕುಳಿತು ಉಣ್ಣಲಾಗದಿದ್ದರೆ ಯಾವ ಸುಖಕ್ಕೆ ಈ ದುಡಿತ ? ಯಾರಿಗಾಗಿ ಜೀವ ತೇಯುವುದು ಇಷ್ಟು. ನೀನೂ ನಮ್ಮಂತೆಯೆ ಎಂಟು ತಾಸು ಕೆಲಸ ಮಾಡಿ ಮನೆಗೆ ಹೋಗು ಅಂತ ಬುದ್ಧಿಹೇಳಿದರೂ ಇವಳು ನಕ್ಕು ಸುಮ್ಮನಾಗುತ್ತಿದ್ದಳು.

ಒಬ್ಬ ಚಾಡಿಕೋರ ಈ ಹಿರಿಯ ಮುದುಕನಿಗೆ ಪುಷ್ಪಾಳಿಗೆ ನಾನು ಕಲಿಸಿಕೊಡುತ್ತಿದ್ದೆನೆಂದು ಹೇಳಿಬಿಟ್ಟ. ಸಿಟ್ಟಿನಲ್ಲಿ ಕೆಂಪಾದ ಆ ಹಿರಿಯ ನನ್ನನ್ನು ಕರೆದು – ಬೇರೆಯವರ ಮನೆಯ ವಿಷಯದಲ್ಲಿ ಮೂಗುತೂರಿಸಬೇಡ, ಪುಷ್ಪಾಗೆ ಇದೆಲ್ಲ ಯಾಕೆ ಹೇಳಬೇಕಿತ್ತು “ ಅಂತೆನೋ ಅಂದ. ಸತ್ಯ ಹೇಳಲು ನನಗ್ಯಾವ ಭಯವೂ ಇದ್ದಿಲ್ಲ. ಒಬ್ಬರಿಗಾಗುವ ಅನ್ಯಾಯಕ್ಕೆ ಸ್ಪಂದಿಸದೇ ಹೋದರೆ ನನ್ನ ಆತ್ಮಸಾಕ್ಷಿಯೂ ನನ್ನನ್ನು ಕ್ಷಮಿಸುವುದಿಲ್ಲ ಎಂದು ನಿರ್ಧರಿಸಿ ಅವರಿಗೆ ವಿವರಿಸಿದೆ, 

ಹೌದು ನಾನು ಹೇಳಿದ್ದು ನಿಜ.  ಮೊಟ್ಟಮೊದಲಿಗೆ ಆಕೆ ಕಂಪನಿಯ ನೌಕರಳು. ನಿಮ್ಮ ಮನೆಗೆಲಸದವಳಲ್ಲ. ರಜೆಯನ್ನೂ ಕೊಡದೇ ಇಷ್ಟೆಲ್ಲ ದುಡಿಸಿ ಐನೂರು ಕೊಡ್ತಿರಲ್ಲಾ ನೀವು ಯಾವ ಜಮಾನಾದಲ್ಲಿದ್ದೀರಿ ? ಎರಡನೆಯದಾಗಿ ಇಡಿ ತಿಂಗಳು ಮನೆಗೆಲಸ, ಮಾಲಿಶಿಗೆ ಹೊರಗಿನ ಒಬ್ಬ  ಆಳನ್ನು ಇಟ್ಟುಕೊಳ್ಳಿ ಆಗ ಅವರ ಮಾರ್ಕೆಟ್ ವ್ಯಾಲ್ಯೂ ನಿಮಗೆ ತಿಳಿಯುತ್ತದೆ. ಮೂರನೆಯದಾಗಿ ನೀವು ಆಕೆಗೆ ಕೆಲಸ ಕೊಟ್ಟಿರಬಹುದು. ಅದು ನಿಮ್ಮ ಒಳ್ಳೆಯತನ. ಹಾಗಂತ ಆ ಉಪಕಾರ ಸ್ಮರಣೆಯಲ್ಲಿ ಆಕೆಯಿಂದ ನಿಮ್ಮ ಬಿಟ್ಟಿಸೇವೆ ಮಾಡಿಸಿಕೊಳ್ಳುವ ನಿಮಗೆ ಸ್ವಲ್ಪವಾದರೂ ಮಾನವೀಯತೆ ಇರಬೇಕು.. ಇಡೀ ತಿಂಗಳಿಗೆ ಐನೂರು ಕೊಡ್ತಿರಲ್ಲ ಅಂತ ಮರುಪ್ರಶ್ನೆ ಹಾಕಿದಾಗ ಆತನಿಗೆ ಸಿಟ್ಟುಬಂದರೂ ಯಾಕೋ ಮತ್ತೆ ವಾದಿಸಲಿಲ್ಲ. ಮುಂದೆ ಪುಷ್ಪಾಳಿಗೆ ತಾಸಿನ ಲೆಕ್ಕದಲ್ಲಿ ದಿಹಾಡಿ  ಸಿಗತೊಡಗಿತು. 

ನಮ್ಮ ಸುತ್ತಲಿನ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಅಸಮಾನತೆಯ ಕಂದರವನ್ನು ಹಿಗ್ಗಿಸುತ್ತಲೇ ಇದೆ. ಅನಕ್ಷರಸ್ಥರು, ವ್ಯಾವಹಾರಿಕವಾಗಿ ಬುದ್ಧಿ ಇರದವರು, ಬಾಯಿಸತ್ತವರನ್ನು, ದನಿ ಇಲ್ಲದವರನ್ನು ದಬಾಯಿಸಿ ದಬ್ಬಾಳಿಕೆಯನ್ನು ನಡೆಸುತ್ತದೆ ಯಜಮಾನ್ಯಲೋಕ. ನಿರಂತರವಾಗಿ ಶೋಷಣೆಗೊಳಗಾಗುತ್ತಲೇ ಇರುವ ದನಿಯಿಲ್ಲದ ಅಸಂಖ್ಯ ಮಹಿಳೆ ಮತ್ತು ಪುರುಷರನ್ನು ನೋಡುತ್ತಲೇ ಇರುತ್ತೇನೆ. ದೇವರು ಕೊಟ್ಟರೂ ಪೂಜಾರಿ ಕೊಡ ಅನ್ನುವಂತೆ ಸರಕಾರ ಘೋಷಿಸಿರುವ ಸಂಬಳವನ್ನೂ ಮಾಲಿಕ ಮತ್ತು ಮದ್ಯದ ಗುತ್ತಿಗೆದಾರರು ಸೇರಿ ತಿಂದು ಶ್ರಮಿಕರ ಕೈಗೆ ಒಂದಿಷ್ಟು ಚೆಲ್ಲುತ್ತಾರೆ. ಪಾಪದ ಶ್ರಮಿಕರಿಗೆ ಪ್ರಶ್ನೆಗಳನ್ನು ಕೇಳುವ ವಾದಿಸುವ ತಿಳಿವಳಿಕೆಯೂ ಇರುವುದಿಲ್ಲ ಕೆಲವರಲ್ಲಿ. ಕಾರ್ಖಾನೆಗಳಲ್ಲಿ ಪ್ರಾಣ ಕಳೆದುಕೊಂಡರೂ ಮಾಲಿಕ ಸುರಕ್ಷಿತ ಯಾಕೆಂದರೆ ಶ್ರಮಿಕರೆಲ್ಲ ಹೊರಗುತ್ತಿಗೆಯವರು. ಕಂಪನಿಯ ಯಾವ ನಿಯಮಗಳು ಅವರಿಗೆ ಲಾಗೂ ಆಗುವುದಿಲ್ಲ. ಪಿಎಫ್, ವಿಮೆ, ಗ್ರಾಚ್ಯುಟಿಯಂಥ ಯಾವ ಸೌಲಭ್ಯ, ಸುರಕ್ಷತೆಗಳಿಗೂ ಹಕ್ಕುದಾರರಲ್ಲ.  ಕೇವಲ ಗುತ್ತಿಗೆದಾರನ ಕೈಯ್ಯಾಳುಗಳು.  

ನಮ್ಮ ದೇಶದಲ್ಲಿ ಮಾತ್ರ ಆರ್ಥಿಕ ಅಸಮಾನತೆ ,ಗುಲಾಮಗಿರಿ ಇಲ್ಲ. ಅನೇಕ ಮುಂದುವರಿದ ದೇಶಗಳಲ್ಲಿಯೂ ”ಆಧುನಿಕ ಗುಲಾಮಗಿರಿ’ ಎಂಬ ಹೊಸ ರೂಪದಲ್ಲಿದೆ.   

ಇನ್ನು ಸಾಕ್ಷರತೆಯ ಬಗ್ಗೆ ಈಗಲೂ ದೇಶದಲ್ಲಿ ಹೆಮ್ಮೆಪಡುವ ಅಂಕಿಅಂಶಗಳ ಪಟ್ಟಿಯೇ ಇರಬಹುದು. ಆದರೆ ವಾಸ್ತವ ನೆಲೆಯಲ್ಲಿ ವಿಶಾಲವಾದ ಉತ್ತರಪ್ರದೇಶದಂಥ ದೊಡ್ಡ ರಾಜ್ಯದಲ್ಲಿ ಅನಕ್ಷರತೆ, ಅಜ್ಞಾನ, ಪಾಳೆಗಾರಿಕೆ, ಜಾತಿವಾದ, ಬಡತನ ಢಾಳಾಗಿ ಕಣ್ಣಿಗೆ ರಾಚುತ್ತದೆ. ಬಸ್ಸುಗಳ ಹೆಸರುಗಳನ್ನು ಓದಲುಬಾರದವರಿದ್ಡಾರೆ, ಕಂಡಕ್ಟರ್ ಊರಿನ ಹೆಸರು ಹಿಡಿದು ಕೂಗಿದಾಗಲೆ ಓಡಿಬಂದು ಹತ್ತುವ ಪ್ರೌಢರಿದ್ಡಾರೆ.  ಇನ್ನೂ ಹೆಬ್ಬಟ್ಟು ಒತ್ತುವ ಯುವಕರಿದ್ದಾರೆ.  ಹೆಸರು ಬರೆಯಲು ಬಂದರೆ ಸಾಕು ತಾವು ಕಲಿತಿದ್ದೇವೆ ಎನ್ನುವ ಜನರಿದ್ದಾರೆ.

ಒಮ್ಮೆ ಆಟೋದಲ್ಲಿ ಒಬ್ಬ ಹುಡುಗ  ಹತ್ತುರುಪಾಯಿ ಇದ್ದರೆ ಕೊಡಿ ಅಂತ ಎಲ್ಲರಲ್ಲೂ ಇಸಿದುಕೊಂಡ, ಏನೋ ಚೇಂಜ್ ಬೇಕಿದ್ದೀತು ಅಂತ ನಾನೂ ಕೊಟ್ಟೆ. ಕೊನೆಗೆ ಯಾರೋ ಗಲಾಟೆ ಮಾಡತೊಡಗಿದಾಗ ನಾನು ಆ ಹುಡುಗನಿಗೆ ಈ ಕಿತಾಪತಿ ಯಾಕಪ್ಪಾ ಬೇಕಿತ್ತು’ ಅಂತೇನೋ ಕೇಳಿದ್ದಕ್ಕೆ ಆತ ಆಂಟಿ, ಮೈ ಪಢಾ ಲಿಕ್ಕಾ ಹೂಂ, ನಾನೂ ಕಲಿತವನಿದ್ದೇನೆ, ಅನಪಢ ಗಂವಾರನೇನಲ್ಲಾ ಎಂದ. ಎಷ್ಟು ಓದಿದ್ದೀಯಪಾ, ಅಂದೆ. ಗ್ಯಾರಂವಿ ಪಾಸ್ ಹೂಂ, ( ಇಲ್ಲಿ ಪಿಯುಸಿ ಬದಲು 11,12 ನೇ ಇರುತ್ತೆ) ಎಂದು  ಹೆಮ್ಮೆಯಿಂದ ಹೇಳಿಕೊಂಡ.  ಇನ್ನೂ ಓದುವುದು ಬಹಳಷ್ಟಿದೆ. ಓದಿಕೋ, ಇಲ್ಲಿಗೆ ಓದು ಮುಗಿಯಲಿಲ್ಲ, ಮುಗಿಸಲೂಬೇಡ ಎಂದು ಲೆಕ್ಚರ್ ಕೊಟ್ಟೆ.       

ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಹಿಂಸಾಚಾರ, ನಿರಾಶ್ರಿತರ ಪುನರ್ವಸತಿ, ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗಲೂ ಕೆಲವೇ ವರ್ಗಗಳನ್ನು ಹೊರತುಪಡಿಸಿ ದೇಶದ ಬಹುತೇಕ ಜನ ಕಡುಬಡತನದಲ್ಲಿಯೇ ಇದ್ದರು. ಸ್ವಾತಂತ್ರ್ಯ  ಸಿಕ್ಕ 72 ಸಂವತ್ಸರಗಳ ನಂತರವೂ ನನ್ನ ಕಾಲದವರ ನೂರಾರು ತಲ್ಲಣಗಳಿಗೆ ನೂರಾರು ಪ್ರಶ್ನೆಗಳಿಗೆ ಸಿಗುವ ಉತ್ತರಗಳು ಬಹಳ ಹತಾಶೆಗೊಳಿಸುವಂಥವುಗಳು. ಆಧುನಿಕ ಭಾರತ, ನ್ಯೂ ಇಂಡಿಯಾದ ಭ್ರಮಾಲೋಕದಲ್ಲಿ ಜೀವಂತವಾಗಿರುವ  ಭ್ರಷ್ಟಾಚಾರ, ಅಸಹಿಷ್ಣುತೆ, ಕೋಮುವಾದ, ಜಾತಿವಾದ , ಫ್ಯಾಸಿಸಂನಂಥ ಸಮಾಜಕಂಟಕ, ಜೀವವಿರೋಧಿ ವಾತಾವರಣ ನಮ್ಮ ಸುತ್ತಮುತ್ತಲೇ ದಟ್ಟವಾಗಿ ಹಬ್ಬುತ್ತಿರುವಾಗ ’ಆಧುನಿಕ ಗುಲಾಮಗಿರಿ” ಎಂಬ ಸೂಕ್ಷ್ಮಾಣು ನಮ್ಮ ಸಮಾಜಕ್ಕಂಟಿಕೊಂಡಿದೆ. ನಮ್ಮ ಸಮಾಜ ರಚನೆಯಲ್ಲಿಯೇ ಆಳವಾಗಿ ಬೇರೂರಿರುವ ಪುರುಷಕೇಂದ್ರಿತ ನೋಟ, ಆರ್ಥಿಕ, ಸಾಮಾಜಿಕ ಅಸಮಾನತೆ, ಲಿಂಗತಾರತಮ್ಯ ವೇತನದಲ್ಲಿ ತಾರತಮ್ಯದಂಥ ಪಿಡುಗುಗಳು ಇನ್ನೂ ತೊಲಗಿಲ್ಲ. ಕೆಲವರು ಗುಲಾಮಗಿರಿಯ ವಿರೋಧದ ದನಿಯಾಗುತ್ತಾರೆ  ಕೆಲವರು ನೋಡಿ ಕಣ್ಣಿದ್ದೂ ಕುರುಡರಂತೆ ಸುಮ್ಮನಾಗುತ್ತಾರೆ. ಸರಕಾರಗಳು ಬರುತ್ತವೆ ಹೋಗುತ್ತವೆ ಆದರೆ ಸಾಮಾನ್ಯ ಜನರ ಬದುಕಿನಲ್ಲಿ ವಿಶೇಷವಾದ ಚಮತ್ಕಾರಗಳೇನೂ ಘಟಿಸುವುದಿಲ್ಲ.ಅವ್ಯವಸ್ಥೆ ಅರಾಜಕತೆ ಮಾತ್ರ ಬದಲಾಗುವುದಿಲ್ಲ. ಪುಷ್ಪಾಳಂತಹ ಶ್ರಮಿಕರಿಗೆ ಸಂಬಳ ಕೊಡದೇ ದುಡಿಸಿಕೊಳ್ಳುವವರೂ ಬದಲಾಗುವುದಿಲ್ಲ.