ಸ್ಕೈಲಾ' ಎಂಬ ಮಿಂಚುಹುಳುವಿನ ಸಾಹಸ ಪಯಣ..!

ಸ್ಕೈಲಾ' ಎಂಬ ಮಿಂಚುಹುಳುವಿನ ಸಾಹಸ ಪಯಣ..!

ಮಳೆಕಾಡಿನ ಕತ್ತಲ ಗುಹೆಯೊಂದರಲ್ಲಿ ಮಿಂಚುಹುಳುಗಳ ಕುಟುಂಬವೊಂದು ಸಂಸಾರಮಾಡಿಕೊಂಡಿತ್ತು. ಆ ಕುಂಟುಂಬದಲ್ಲಿ ಸ್ಕೈಲಾ ಒಬ್ಬಳೇ ಎಲ್ಲರಿಗಿಂತಾ ಸಣ್ಣವಳು. " ನೀನು ಸಣ್ಣವಳು.. ನಿನ್ನದೇ ಅತಿ ಕಡಿಮೆ ಬೆಳಕು.. ನೀನು ಯಾರಿಗೂ ಕಾಣಲ್ಲ" ಎಂದು  ಕುಟುಂಬದ ಇತರೆ ಹಿರಿಯ ಮಿಂಚುಹುಳುಗಳು ಅವಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದವು.

ಪ್ರತಿದಿನ ಗುಹೆಗೆ ಬಂದವರೆಲ್ಲಾ ಮಿಂಚುಹುಳುಗಳು ಬೀರುವ ಬೆಳಕನ್ನು ನೋಡಿ "ಆಕಾಶದಲ್ಲಿನ ತಾರೆಗಳಂತಿವೆ" ಎಂದು ಮೆಚ್ಚಿ ಹೇಳುತಿದದ್ದನ್ನು ಕೇಳಿ ಸ್ಕೈಲಾ ತನ್ನನ್ನು 'ತಾರೆ' ಎಂದೇ ಭಾವಿಸಿದ್ದಳು!

ಒಂದು ದಿನ ಒಬ್ಬ ಪುಟ್ಟ ಹುಡುಗ ಬಂದು ಕಿರಿಯ ತಾರೆಯೊಂದು ಕಣ್ಮರೆಯಾಗಿರುವುದನ್ನು ಕುರಿತು ಅವನ ಅಮ್ಮನಿಗೆ ಹೇಳುತಿದ್ದದ್ದನ್ನು ಕೇಳಿ ಸ್ಕೈಲಾ ಚಿಂತಾಕ್ರಾಂತಳಾದಳು! ಈ ಮಾತುಗಳನ್ನು ಆ ಪುಟ್ಟ ಹುಡುಗ ಸ್ಕೈಲಾ ಕುರಿತೇ ಹೇಳುತಿದ್ದಂತೆ ಭಾವಿಸಿದಳು. ಸ್ಕೈಲಾಗೆ ಬೇಸರವಾಗಿ ಬೇರೇನೂ ದಾರಿ ತೋಚದೆ ಅಲ್ಲಿಂದ ಓಡಿ ಹೋಗಲು ತೀರ್ಮಾನಿಸಿದಳು.

ಸ್ಕೈಲಾ ಬೆಳಗಾಗಲು ಕಾದಳು, ಯಾಕೆಂದರೆ ಬೆಳಗಿನಲ್ಲಿ ತಪ್ಪಿಸಿಕೊಳ್ಳುವುದು ಸುಲಭ, ತೀರ ಪ್ರಜ್ವಲಿಸುವ ತಾರೆಗಳೇ ಬೆಳಕಲ್ಲಿ ಕಾಣಲ್ಲ ಇನ್ನು ತನ್ನದೇನು ಮಹಾ..! ಎಂದು ಬೆಳಕರಿಯುತ್ತಿದ್ದಂತೆಯೇ ಗುಹೆಯಿಂದ ಮಳೆಕಾಡಿಗೆ ಹಾರಿದಳು. ಆದರೆ ಸ್ಕೈಲಾಗೆ ಎಲ್ಲಿಗೆ ಹೋಗಬೇಕೆಂದು      ತೋಚುತ್ತಿಲ್ಲ? ಕಾಡಿನ ಬೃಹತ್ ಮರಗಳೇ ದಿಗಿಲು ಹುಟ್ಟಿಸುವಂತಿವೆ! ತನ್ನ ಹೊಸಮನೆಯನ್ನು ಹುಡುಕಿಕೊಳ್ಳುವ ಮುನ್ನ ಅವಳಿಗೆ ತೀರಾ ನಿದ್ದೆ ಬರುತ್ತಿದ್ದರಿಂದ ಒಂದಷ್ಟು ನಿದ್ದೆ ಮಾಡಿ ನಂತರ ಪಯಣವನ್ನು ಮುಂದುವರೆಸೋಣ ಎಂದು ತೀರ್ಮಾನಿಸಿದಳು. ಗಾಡನಿದ್ದೆಯಲ್ಲಿದ್ದ ಅವಳಿಗೆ ತನ್ನ ಸುತ್ತ ಅನೇಕ ಪ್ರಾಣಿಗಳು ಸುತ್ತುವರೆದದ್ದು ತನ್ನ ಗಮನಕ್ಕೇ ಬರಲಿಲ್ಲ!  ಸ್ಕೈಲಾ ಕಣ್ಣು ತೆರೆದವಳೆ ಜೋರಾಗಿ ಕಿರುಚಿದಳು! ತಾನೆಂದೂ ಈ ರೀತಿಯ ಜೀವಿಗಳನ್ನು ನೋಡಿರಲಿಲ್ಲ!  ಸ್ಕೈಲಾ ತನ್ನ ಸುತ್ತಲಿನ ಪ್ರಾಣಿಗಳ ಮುಖಗಳನ್ನು ನಿಧಾನಕ್ಕೆ ನೋಡತೊಡಗಿದಳು.. ಆಶ್ಚರ್ಯ! ಅವು ಸ್ಕೈಲಾ ಕಡೆ ನೋಡಿ ಮುಗುಳ್ನಗುತಿದ್ದವು! ಸ್ಕೈಲಾಗೆ ಒಂದಷ್ಟು ದೈರ್ಯ ಬಂತು.


"ನೀನು ಎಂತಾ ಪ್ರಾಣಿ..?" ಅವು ಕುತೂಹಲದಿಂದ ಸ್ಕೈಲಾಳನ್ನು ಕೇಳಿದವು


"ನಾನು ಪ್ರಾಣಿಯಲ್ಲ.. ನಾನು ತಾರೆ, ನಕ್ಷತ್ರ.." ಎಂದು ಸ್ಕೈಲಾ ಹೇಳಿದಳು


"ನೀನು ತಾರೆಯಂತೆ ಕಾಣಲ್ಲವಲ್ಲ.." ಎಂದವು ಆ ಪ್ರಾಣಿಗಳು.


"ನಾನು ತಾರೆಯೇ.. ಕತ್ತಲಾಗುವವರೆಗೂ ತಾರೆಗಳು ಯಾರಿಗೂ ಕಾಣಲ್ಲವಲ್ಲ..?" ಎಂದ ಸ್ಕೈಲಾ ತಾನು ಮನೆ ಬಿಟ್ಟು ಓಡಿ ಬಂದ ಕತೆಯನ್ನು ಅಳುತ್ತಾ ಹೇಳತೊಡಗಿದಳು. ಅವು ಸ್ಕೈಲಾ ಮೇಲೆ ಕರುಣೆ ತೋರಿ ತಮ್ಮಷ್ಟಕ್ಕೆ ಸುಮ್ಮನಾದವು. ಇಡೀ ದಿನ ಸ್ಕೈಲಾ ತನ್ನ ಹೊಸ ಗೆಳೆಯರ ಜತೆ ಕಳೆದಳು.

ಅವರಲ್ಲಿ 'ಜೇಡ್' ಎಂಬ ಚಿಟ್ಟೆ, 'ಐಸೀ' ಎಂಬ ಜೇನು ನೊಣ, 'ಅರೊರ' ಎಂಬ ಬೆಂಕಿಹುಳು ಅವಳನ್ನು ಇಷ್ಟಪಡತೊಡಗಿದವು. ಇವುಗಳೊಂದಿಗೆ 'ಗ್ರೇಸಿ' ಎಂಬ ಹಾವುಹುಳು ಮತ್ತು 'ಲೆಕ್ಸಿ' ಎಂಬ ಲೇಡಿಬರ್ಡ್ ಜತೆಗೂಡಿದರು. ಸ್ಕೈಲಾಳ ಹೊಸ ಗೆಳೆಯರು "ಇತರೆ ಅನೇಕ ಪ್ರಾಣಿಗಳು ನಮ್ಮಷ್ಟು  ಗೆಳೆತನದಿಂದ ಇರಲ್ಲ..ಅವರಲ್ಲಿ ಕೆಲವರು ಅಪಾಯಕಾರಿಗಳು ಅವರ ಬಗ್ಗೆ ಎಚ್ಚರಿಕೆಯಿಂದ ಇರು.." ಎಂದು ಸ್ಕೈಲಾಗೆ ಮುನ್ನೆಚ್ಚರಿಕೆ ನೀಡಿದವು.

ಮದ್ಯಾನ್ಹದ ನಂತರ ಜೇಡ್ "ನಾವಿಬ್ಬರೂ  ಮರದ ಎತ್ತರಕ್ಕೂ ಮೀರಿ ಮೇಲಕ್ಕೆ  ಹಾರೋಣ ಬರ್ತೀಯ..?" ಎಂದು ಕೇಳಿತು, ಸ್ಕೈಲಾಗೆ ಇದು ಖುಷಿಯ ವಿಷಯ ಎನಿಸಿ ಸೈ ಎಂದು ಜೇಡ್ ಬೆನ್ನೇರಿತು, ಅವರಿಬ್ಬರು ಮರಗಿಡಗಳಿಗಿಂತಲೂ ಎತ್ತರಕ್ಕೆ ಹಾರಿ ನಕ್ಷತ್ರಗಳನ್ನು ಹತ್ತಿರದಿಂದ ನೋಡತೊಡಗಿದರು. ಅವು ಎಷ್ಟು ಎತ್ತರಕ್ಕೆ ಹಾರಿದ್ದವೆಂದರೆ ಅಲ್ಲಿ ಎರಡು ಪುಟ್ಟ ಹಕ್ಕಿಗಳನ್ನು ಮಾತ್ರ ಕಂಡರು. "ಈ ಹಕ್ಕಿಗಳು ನನ್ನ ಸ್ನೇಹಿತರು.. ಇವುಗಳ ಹೆಸರು 'ಹನ್ನಾ' ಮತ್ತು 'ಲೋಚಿ' ಅವು ತಮ್ಮ ಮಕ್ಕಳಿಗಾಗಿ ಗೂಡು ಕಟ್ಟುವ ಪ್ರಕ್ರಿಯೆಯಲ್ಲಿವೆ.." ಎಂದು ಜೇಡ್ ಹೇಳಿತು.

ಇವನ್ನೆಲ್ಲಾ ಕಂಡು ಸ್ಕೈಲಾಗೆ ತನ್ನ ಮನೆ, ಅಣ್ಣಂದಿರು, ಅಕ್ಕಂದಿರು ಎಲ್ಲಾ ನೆನಪಾಗಿ ಅವರನ್ನೆಲ್ಲಾ ಬಿಟ್ಟುಬಂದ ದುಖಃ ಇಮ್ಮಳಿಸಿತು. ಅವಳ ದುಖಃ ಮತ್ತು ಹೋಮ್ ಸಿಕ್ ಅನ್ನು ಅರ್ಥಮಾಡಿಕೊಂಡ ಜೇಡ್ "ಯೊಚಿಸಬೇಡ.. ನಾನು ನಿನಗೆ ಮನೆಗೆ ಹಿಂತಿರುಗಲು ಸಹಾಯ ಮಾಡುತ್ತೇನೆ.. 'ಮೊಂಟೇ' ಎಂಬ  ಚಿಕ್ಕ ಬಾವುಲಿ ನನಗೆ ಪರಿಚಯವಿದೆ. ಅದು ಅತಿ ಎತ್ತರಕ್ಕೆ ಹಾರಬಲ್ಲದು, ಅದೇನು ದೂರದಲ್ಲಿಲ್ಲ.. ಇಲ್ಲೇ ಎಲ್ಲೋ ಇರುತ್ತೆ,  ಹುಡುಕೋಣ, ಅದರ ಸಹಾಯ ಪಡೆಯೋಣ" ಎಂದು ಜೇಡ್ ದೈರ್ಯತುಂಬಿತು.

ಜೇಡ್ ತನ್ನ ಬೆನ್ನಮೇಲೆ ಸ್ಕೈಲಾಳನ್ನು ಕೂರಿಸಿಕೊಂಡು ಮತ್ತೆ ಮಳೆಕಾಡಿಗೆ ಹೊತ್ತು ತರುವಲ್ಲಿ ಜೇಡ್ ಸುಸ್ತಾಗಿಹೋಗಿತ್ತು. ಆದ್ದರಿಂದ ಒಂದಷ್ಟು ಕಾಲ ವಿಶ್ರಾಂತಿ ಪಡೆಯಲು ತೀರ್ಮಾನಿಸಿ ವಿಶ್ರಾಂತಿ ಪಡೆದವು.

ಅವೆರಡೂ ವಿಶ್ರಾಂತಿ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಜೇಡ್ ಕಿರುಚಿತು "ಓ 'ಹೆಫಿ' ಬರ್ತಿದೆ.. ಅದು ನೀರಾವು, ಅದು ನಮ್ಮನ್ನು ನುಂಗಿಬಿಡುತ್ತೆ.. ಬೇಗ ಹೋಗೋಣ.." ಎಂದು ಜೇಡ್ ತನ್ನ ಬೆನ್ನಿಗೆ ಸ್ಕೈಲಾಳನ್ನು ಏರಿಸಿಕೊಂಡು ಹೆಫಿಗೆ ಸಿಗದಂತೆ ಹಾರಿತು..! ಸ್ವಲ್ಪ ಸಮಯ ಹಾರಿದ ನಂತರ ಅವು ಒಂದು ಕತ್ತಲಗುಹೆಯನ್ನು ತಲುಪಿದವು "ಮಾಂಟೇ ಇಲ್ಲೇ  ಎಲ್ಲೋ ಇರುತ್ತಾನೆ.." ಎಂದು ಜೇಡ್ ಎನ್ನುವಷ್ಟರಲ್ಲಿ ಸ್ಕೈಲಾಗೆ ಅವಳ ಅಣ್ಣ 'ವಿಲ್'ನ ದ್ವನಿ ಕೇಳುತ್ತದೆ! "ಸ್ಕೈಲಾ ಎಲ್ಲಿಗೆ ಹೋಗಿಬಿಟ್ಟಿದ್ದೆ..? ನನ್ನ ಪ್ರೀತಿಯ ತಂಗಿ ಮತ್ತು ಮುದ್ದು ಮಿಂಚುಹುಳುವಾದ ನಿನ್ನನ್ನು ಎಲ್ಲೆಲ್ಲಾ ಹುಡುಕಿದೆವು.." ಎಂದು ವಿಲ್ ಹೇಳುವಷ್ಟರಲ್ಲಿ ಸ್ಕೈಲಾ "ಏನು ಹೇಳ್ತಿದ್ದೀಯ..? ನಾನು ಮಿಂಚುಹುಳು ಅಲ್ಲ.. ನಾನು ನಕ್ಷತ್ರ, ಮಿನುಗುತಾರೆ..!" ಎಂದಳು. "ಹೋ.. ನಿಜ.. ನಮ್ಮ ಪಾಲಿಗೆ ನೀನು ನಕ್ಷತ್ರವೇ.. ನಮ್ಮ ಕುಟುಂಬದ ಮಿನುಗುತಾರೆ ನೀನು.." ಎಂದು ಅಣ್ಣ ಸ್ಕೈಲಾಳನ್ನು ಅಪ್ಪಿಕೊಳುತ್ತಾನೆ. ಈ ಮಾತು ಕೇಳಿ ಸ್ಕೈಲಾಗೆ ತೀರ ಖುಷಿಯಾಗುತ್ತದೆ. ಇನ್ನೆಂದೂ ಮನೆ ಬಿಟ್ಟು ಹೋಗಲ್ಲ ಎಂದು ತನ್ನ ಕುಟುಂಬದವರಿಗೆ ಮಾತು ಕೊಡುತ್ತಾಳೆ.

ಸ್ಕೈಲಾ ತನ್ನ ಅಕ್ಕಂದಿರು ಮತ್ತು ಅಣ್ಣಂದಿರಿಗೆ ದಿನನಿತ್ಯ ತನ್ನ ಸಾಹಸ ಪಯಣದ ಕತೆಗಳನ್ನು ಹೇಳುತ್ತಾ ರಂಜಿಸುತ್ತಾಳೆ.

Kerry L coughran ಎಂಬ ಮಕ್ಕಳ ಕತೆಗಾರ ಬರೆದ, ಮೇಲಿನ ಸುಂದರ ಕತೆಯನ್ನು ಓದುತ್ತಾ ಬ್ರಿಸ್ಬೇನಿನ ದಕ್ಷಿಣಕ್ಕೆ ಲಾಂಗ್ ಡ್ರೈವ್ ಹೊರಟಿದ್ದೆವು. ಮೌಂಟ್ ಟಾಂಬೊರೈನ್ ಎಂಬ ಮಳೆಕಾಡಿನಲ್ಲಿರುವ 'ಗ್ಲೋ ವರ್ಮ್ ಕೇವ್ಸ್' ನಲ್ಲಿರುವ ಮಿಂಚುಹುಳುಗಳನ್ನು ಬೆಟ್ಟಿಯಾಗುವುದು ನಮ್ಮ ಇಂದಿನ ಕಾರ್ಯಕ್ರಮದ ಮುಖ್ಯ ಬಾಗವಾಗಿತ್ತು. ಈ ಮದ್ಯೆ ಇಂಗ್ಲೀಷಿನಲ್ಲಿ gಟoತಿ ತಿoಡಿm ಎಂದು ಕರೆಯಲಾಗುವ ಇವನ್ನು ಕನ್ನಡದಲ್ಲಿ 'ಮಿಂಚುಹುಳು' ಅನ್ನಬೇಕೋ ಅಥವಾ 'ಮಿಣುಕುಹುಳು' ಎನ್ನಬೇಕೋ ಎಂಬ ಗೊಂದಲ ಕಾಡಿತು! ನನಗೆ ತಕ್ಷಣಕ್ಕೆ ನೆನಪಾಗಿದ್ದು ಕನ್ನಡ ಶಬ್ದಕೋಶದ ನಡೆದಾಡುವ ನಿಘಂಟು ನಮ್ಮ ಕೆ.ವಿ.ಎನ್.!  ತಕ್ಷಣ ಅವರಿಗೆ ಮೆಸೇಜ್ ಮಾಡಿದೆ. "ಎರಡೂ ಒಂದೇ. ನನ್ನ ತಿಳುವಳಿಕೆಯಂತೆ ಮಿಣುಕು ಹುಳು ಜನರ ಮಾತಿನಲ್ಲಿದೆ. ಮಿಂಚು ಹುಳು ಹೊಸ ಪದ..‌. ಹೇಗಿದ್ದೀರಿ?" ಎಂದು ಡಾ. ಕೆ.ವಿ.ನಾರಾಯಣ್ ರವರು ತಕ್ಷಣ ಉತ್ತರಿಸಿ ಕಾಳಜಿ ತೋರಿದರು. ನನ್ನ ಗೊಂದಲ ಪರಿಹಾರವಾಯಿತು. ಅವರಿಗೆ ಕೃತಜ್ಙತೆ ಹೇಳಿ ಪಯಣ ಮುಂದುವರೆಸಿದೆ.

ಆ ಸುಂದರ ಲಾಂಗ್ ಡ್ರೈವ್ ನಡುವೆ ಒಂದಷ್ಟು ವೈನರಿಗಳು ಸಿಕ್ಕವು. ಅಲ್ಲಿ ಸಿಕ್ಕಸಿಕ್ಕ ಚಿತ್ರವಿಚಿತ್ರ ರುಚಿ ಮತ್ತು ಗಮಲಿನ ವೈನ್ ಗಳನ್ನು ಮೂಸುತ್ತಾ, ರುಚಿ ನೋಡುತ್ತಾ ಕೊಂಚ ಮತ್ತೇರಿಸಿಕೊಂಡ ನಮ್ಮ ಪಯಣ ಮುಂದುವರೆಯಿತು.

ಟಾಂಬುರೈನ್ ಮಳೆಕಾಡು ಅತ್ಯಂತ ಹರಿದ್ವರ್ಣವಾಗಿದೆ, ಹಸಿರಿನಿಂದ ದಟ್ಟವಾಗಿದೆ, ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡಿನಲ್ಲಿರುವ ಈ ಕಾಡು ಅಗಾದವಾದ ಕಣಿವೆಗಳು, ಜಲಪಾತಗಳಿಂದ ಕೂಡಿದ್ದು ಸದಾ ಹಸಿರಿನಿಂದ ಕಂಗೊಳಿಸುತ್ತಾ ಶ್ರೀಮಂತವಾಗಿದೆ. ಇಲ್ಲಿ ಮಿಂಚುಹುಳುಗಳು ಹೇರಳವಾಗಿದ್ದು ಇವನ್ನು ಒಂದು ಪುಟ್ಟ ಮಾನವ ನಿರ್ಮಿತ ಗುಹೆಯಲ್ಲಿ ಸಂಗ್ರಹಿಸಿದ್ದಾರೆ. ಇದು ಮಾನವ ನಿರ್ಮಿತ ಗುಹೆ ಆದರೂ ಈ ಗುಹೆ ತೀರಾ ನೈಸರ್ಗಿಕವಾಗಿದ್ದು ಕಾಡಿನಲ್ಲೇ ಹುಟ್ಟಿ ಕಾಡಿನಲ್ಲೇ ಕರಗಿಹೋದಂತಿದೆ!

ಮಿಂಚುಹುಳುಗಳ ಲೋಕವನ್ನು ವೀಕ್ಷಿಸಲು ಹೋಗುವವರಿಗೆ ಒಂದಷ್ಟು ಮುನ್ನೆಚ್ಚರಿಕೆಗಳನ್ನು ನೀಡಿ, ಈ ಮಿಂಚುಹುಳುಗಳ ಬಗ್ಗೆ ಒಂದು ಪುಟ್ಟ ವಿಡಿಯೋ ತೋರಿಸಿ ನಮಗೆ ಈ ಮಿಣುಕುಜೀವಿಗಳ ಬಗ್ಗೆ ಒಂದಷ್ಟು ಜ್ನಾನಾರ್ಜನೆ ಮಾಡಿಸಿ. ಯಾವ ಕಾರಣಕ್ಕೂ ನಮ್ಮಿಂದ ಶಬ್ದ ಮತ್ತು ಬೆಳಕು ಹೊರಹೊಮ್ಮದಂತೆ ಎಚ್ಚರಿಸಿ ಮಿಂಚು ಹುಳುಗಳ ಗುಹೆಯೊಳಕ್ಕೆ ಕರೆದೊಯ್ಯುತ್ತಾರೆ. 

ಆ ಪುಟ್ಟ ಕತ್ತಲು ಗುಹೆ ಹೊಕ್ಕು ನಾವು ಕಣ್ಣು ತೆರೆಯುತ್ತಿದ್ದಂತೆ ನಮ್ಮನ್ನು ಆಕಾಶವೇ ಆವರಿಸಿಕೊಂಡಂತೆ! ನಕ್ಷತ್ರಗಳೇ ಸುತ್ತುವರೆದಂತೆ ಬಾಸವಾಗುತ್ತದೆ! ಗೋಡೆಗೆ ಅಂಟಿಕೊಂಡ ಮಿಣುಕುಹುಳುಗಳು ನಮಗೆ ಸೌರವ್ಯೂಹದಲ್ಲಿರುವ ಅಸಂಖ್ಯಾತ ಮಿನುಗುವ ತಾರೆಗಳಂತೆ ಕಾಣುತ್ತವೆ! ನಮಗೆ ಮಾಹಿತಿಯಂತೆ ಆ ಪುಟ್ಟ ಗುಹೆಯಲ್ಲಿ ಎಂಟು ಸಾವಿರಕ್ಕೂ ಮೀರಿದ ಮಿಣುಕುಹುಳುಗಳಿದ್ದವು. ಅವಕ್ಕೆ ಬೇಕಾದ ಪರಿಸರ, ಆಹಾರ ಮತ್ತು ಕತ್ತಲೆಯನ್ನು ಅಲ್ಲಿ ವ್ಯವಸ್ಥಾಪಿಸಲಾಗಿತ್ತು. ಅದೊಂದು ಅವಿಸ್ಮರಣೀಯ ಅನುಭವ!! ನಾವು ಚಿಕ್ಕಂದಿನಲ್ಲಿ ನಮ್ಮ ಹೊಲಗದ್ದೆಗಳ ಬಳಿ ನೋಡಿದ ಮಿಣುಕು ಹುಳುಗಳು, ಅವನ್ನು ಹಿಡಿದು ಬೆಂಕಿಪೊಟ್ಟಣಕ್ಕೆ ಹಾಕಲು ಮಾಡುತ್ತಿದ್ದ ಸರ್ಕಸ್ಸುಗಳೆಲ್ಲಾ ನೆನಪಿನ ಬುತ್ತಿಯಿಂದ ಬಿಚ್ಚಿಕೊಂಡವು. ಹಿಂದೊಮ್ಮೆ ಬಿಳಿಗಿರಿರಂಗನ ಬೆಟ್ಟದಲ್ಲಿನ ಸೋಲಿಗರ ಹಾಡಿಗಳನ್ನು ಸುತ್ತಾಡುವಾಗ ಸಂಜೆ ನಮ್ಮನ್ನು ಸುತ್ತುವರಿದ ಮಿಣುಕುಹುಳುಗಳನ್ನು ಕಷ್ಟಪಟ್ಟು ಹಿಡಿದು ಅಲ್ಲೇ ಸಿಕ್ಕ ಬಾಟಲಿಯೊಂದರಲ್ಲಿ ಹಾಕಿಟ್ಟಿದ್ದೆ. ಅವು ರಾತ್ರಿಯೆಲ್ಲಾ ಬಾಟಲಿಯಲ್ಲೇ ಮಿನುಗುತಿದ್ದವು. ಬೆಳಿಗ್ಗೆ ಊರಿಗೆ ಕೊಂಡೋಗಿ ಮನೆಯಲ್ಲಿ ಬಿಟ್ಟು ಮನೆತುಂಬಾ ಮಿನುಗುವುದನ್ನು ನೋಡೋಣ ಎಂದು‌ ಆಸೆಪಟ್ಟಿದ್ದೆ. ಆದರೆ ಬೆಳಗಾಗುವಷ್ಟರಲ್ಲಿ ಅವೆಲ್ಲಾ ಸತ್ತು ಅವುಗಳಲ್ಲಿನ ಬೆಳಕಿನ ಮಿಂಚು ಮಾಯವಾಗಿತ್ತು! ಅಷ್ಟು ಹುಳುಗಳನ್ನು ನನ್ನ ಅತಿಯಾಸೆ ಮತ್ತು ಸ್ವಾರ್ಥಕ್ಕಾಗಿ ಕೊಂದ ಗಿಲ್ಟ್ ಬಹಳ ದಿನ ಕಾಡಿತ್ತು.

ಈ ಕಾರಣಕ್ಕೆ ಕೈಗಟುಕುವ ದೂರದಲ್ಲಿದ್ದರೂ ಮುಟ್ಟಬೇಕೆಂದು ಎಷ್ಟೇ‌ ಟೆಂಪ್ಟ್ ಆಗುತಿದ್ದರೂ ಒಂದೇ ಒಂದು ಮಿಣುಕುಹುಳುವಿನ ಕಡೆ ಅಪ್ಪಿತಪ್ಪಿಯೂ ಕೈಚಾಚಲಿಲ್ಲ! (ಹಾಗೇನಾದರೂ ಕೈಚಾಚುವ 'ಸಾಹಸ' ತೋರಿದ್ದರೆ ನಾನೀಗ ಆಸ್ಟ್ರೇಲಿಯಾ ಜೈಲಿನಲ್ಲಿ ಮುದ್ದೆ ಅಲ್ಲ.. ಒಣ ಬ್ರೆಡ್ ಮುರೀತಾ ಬಂಧನದಲ್ಲಿರುತ್ತಿದ್ದೆ ಎಂಬುದೂ ನಿಜ)

ಮಿಣುಕುಹುಳುಗಳನ್ನು ನೋಡುವಂತಹ ಕಾಡುಗಳು ನ್ಯೂಸಿಲ್ಯಾಂಡ್ ನಲ್ಲಿ ಇನ್ನೂ ಹೇರಳವಾಗಿವೆ ಎಂಬ ವಿಷಯ ತಿಳಿಯಿತು. ನಾನು ನ್ಯೂಸಿಲ್ಯಾಂಡಿನ ಪಕ್ಕದಲ್ಲೇ ಇದ್ದೆ ಆದರೆ ಹೋಗುವ ಅನುಕೂಲ ಇರಲಿಲ್ಲ. ಒಮ್ಮೆ ನ್ಯೂಸಿಲ್ಯಾಂಡಿನಲ್ಲಿರುವ ಮಿಂಚು ಹುಳುಗಳ ಲೋಕವನ್ನು ಹೊಕ್ಕು ಬರಬೇಕೆಂಬ ಆಸೆಯಂತೂ ಹೆಮ್ಮರವಾಗಿದೆ....