ತಾಯಿ ಮಗನ ಬಾಂಧವ್ಯ, ಹಳ್ಳಿ ಸೊಗಡಿನ ಹಾಸ್ಯ, ಮಾಸ್ ಸಾಹಸ ಸಿನಿಮಾ ಸಿಂಗ

ತಾಯಿ ಮಗನ ಬಾಂಧವ್ಯ, ಹಳ್ಳಿ ಸೊಗಡಿನ ಹಾಸ್ಯ, ಮಾಸ್ ಸಾಹಸ ಸಿನಿಮಾ ಸಿಂಗ

ಆಡಿಯೋ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮೂಡಿಸಿದ್ದ ‘ಸಿಂಗ’ ಸಿನಿಮಾ ಇಂದು ತೆರೆಕಂಡಿದೆ.

ತಾಯಿ ಮಗನ ಬಾಂಧವ್ಯ, ಹಳ್ಳಿ ಸೊಗಡಿನ ಹಾಸ್ಯ, ಮಾಸ್ ಸಾಹಸ ದೃಶ್ಯಗಳು ‘ಸಿಂಗ’ ಸಿನಿಮಾದಲ್ಲಿವೆ. ಜಾನಕಮ್ಮನ ಒಬ್ಬನೇ ಮುದ್ದಿನ ಮಗ ಸಿಂಗ. ತಂದೆಯಿಲ್ಲದ ಮಗನನ್ನು ಜಾನಕಮ್ಮ ಪ್ರೀತಿಯಿಂದ ಸಾಕಿರ್ತಾಳೆ. ಯಾರಿಗೂ ಹೆದರದ ಭಂಡ ಧೈರ್ಯ, ಕಷ್ಟಕ್ಕೆ ಕೈ ಜೋಡಿಸೋ  ಮನಸ್ಥಿತಿ ಈತನದ್ದು. ತಾಯಿ ಅಂದ್ರೆ ಮಗನಿಗೂ ಅಪಾರ ಪ್ರೀತಿ. ಕಿಂಚಿತ್ತೂ ನೋವಾದ್ರು ಸಹಿಸದ ಮಗ ಸಿಂಗ ಅದಾಗ್ಲೇ ಊರ ಉಸಾಬರಿಯಲ್ಲಿ ಸಾಕಷ್ಟು ಕೇಸ್ ಗಳನ್ನು ತನ್ನ ಮೈಮೇಲೆ ಎಳೆದುಕೊಂಡಿರ್ತಾನೆ.

ಎಲ್ಲ ಸಿನಿಮಾಗಳಂತೆ ಇಲ್ಲೂ ಕೂಡ ತಾಯಿಗೆ ಮಗನನ್ನು ಮದುವೆ ಮಾಡೋ ಆಸೆ. ಜಾನಕಮ್ಮನಿಗೆ ಸುಖ ದುಖಃಗಳಲ್ಲಿ ಭಾಗಿಯಾಗೋವ್ರು, ಸಿಂಗನ ಜತೆ ಇರೋವ್ರು ಅರುಣಾ ಬಾಲರಾಜ್ ಹಾಗೂ ಹಾವಳಿ ಶಿವರಾಜ್ ಕೆ.ಆರ್ ಪೇಟೆ.

ಕಷ್ಟ ಅಂತ ಬಂದ್ರೆ ನೆರವಾಗೋ ಸಿಂಗನಿಗೆ ವಿರೋಧಿಗಳು ಪದೇ ಪದೆ ಹುಟ್ಕೊತಿರ್ತಾರೆ. ಊರ ಜಾತ್ರೆಯಲ್ಲಿ ತಾಯಿ ಜಾನಕಮ್ಮನ ಕಣ್ಣಿಗೆ ಕಥಾನಾಯಕಿ ಗೀತಾ ಕಾಣಿಸ್ತಾಳೆ. ಸಿಂಗನಿಗೆ ಇದೇ ಹುಡುಗಿಯನ್ನು ತರಬೇಕು ಅಂತ ಜಾನಕಮ್ಮ ಆಸೆ ಪಡ್ತಾಳೆ. ಆಕೆಯನ್ನು ನೋಡಬೇಕು ಅಂದುಕೊಂಡಾಗಲೆಲ್ಲಾ ಅನಿರೀಕ್ಷಿತವಾಗಿ ಗೀತಾ ಸಿಕ್ತಿರ್ತಾಳೆ. ಸಿಂಗನಿಗೆ ಹಾವಳಿ ಸೇರಿದಂತೆ ಇನ್ನು ನಾಲ್ವರು ಸ್ನೇಹಿತರಿರ್ತಾರೆ.

ಊರಿಗೆ ಹೊಸದಾಗಿ ಬಂದಿರೋ ಎಂಜಿನಿಯರ್ ಮಗಳು ಗೀತಾ ಮೇಲೆ ಅವರಿಗೂ ಹುಚ್ಚು ಪ್ರೀತಿ. ಆಕೆಯನ್ನು ಒಲಿಸಿಕೊಳ್ಳೋಕೆ ನಾನಾ ಸರ್ಕಸ್ ಗಳನ್ನು ಮಾಡ್ತಾರೆ. ಗೀತಾಳಿಗೆ ನೇರವಾಗಿ ಪ್ರೇಮಪತ್ರ ಕೊಡೋ ಧೈರ್ಯವಿಲ್ಲದ ಬ್ರಾಕೆಟ್ ಗ್ಯಾಂಗ್ ಅಂದ್ರೆ ಸಿಂಗನ ಫ್ರೆಂಡ್ಸ್ ಸಿಂಗನನ್ನೇ ಕನ್ವಿನ್ಸ್ ಮಾಡಿ ಲವ್ ಲೆಟರ್ ಕಳಿಸ್ತಾರೆ. ಚಾಲೆಂಜ್ ಗೆ ಮಣಿದು ಸಿಂಗ ಆ ಪ್ರೇಮಪತ್ರವನ್ನು ಗೀತಾಳಿಗೆ ನೀಡ್ತಾನೆ. ಸಿಂಗನಿಗೆ ಗೀತಾಳ ಮೇಲೆ ಯಾವುದೇ ಪ್ರೀತಿ ಇರೋಲ್ಲ. 

ಯಾವುದೇ ಹುಡುಗೀನಾ ತಾನು ಮದುವೆಯಾದ್ರೆ ಆಕೆ ಬದುಕು ಹಾಳಾಗತ್ತೆ ಅನ್ನೋ ಭಾವನೆ ಸಿಂಗನಿಗಿರುತ್ತೆ. ಆದ್ರೆ ಯಾರಿಗೂ ಸೋಲದ ಗೀತಾ, ಸಿಂಗನ ಒಳ್ಳೆಯ ಗುಣಕ್ಕೆ ಸೋಲ್ತಾಳೆ. ಅದು ಪ್ರೀತಿಯಾಗಿ ತಿರುಗುತ್ತೆ. ಆದ್ರೆ ಬೇರೆಯವ್ರ ಸಹಾಯಕ್ಕೆ ನಿಂತ ಸಿಂಗ ಪ್ರಭಾವಿ ರೌಡಿ, ರುದ್ರಣ್ಣನನ್ನು ಎದುರು ಹಾಕಿಕೊಳ್ತಾನೆ. ಸಿನಿಮಾ ಇಂಟರ್ವಲ್ ತಲುಪೋ ಹೊತ್ತಿಗೆ ಕಥಾನಾಯಕನಿಗೆ ರುದ್ರಣ್ಣನ ತಮ್ಮ ಅಟ್ಯಾಕ್ ಮಾಡ್ತಾನೆ. ಆ ಸಂದರ್ಭದಲ್ಲಿ ಜಾನಕಮ್ಮ, ಹಾವಳಿಗೆ ಗೀತಾ ನೆರವಾಗ್ತಾಳೆ. ಈ ವಿಚಾರ ತಿಳಿದ ಸಿಂಗನಿಗೆ ಗೀತಾ ಮೇಲೆ ಲವ್ ಆಗತ್ತೆ. ತಾಯಿಗೆ ತಾನು ಮುಂದೆ ಮಚ್ ಹಿಡಿಯೋದಿಲ್ಲ ಅಂತಲೂ ಪ್ರಮಾಣ ಮಾಡ್ತಾನೆ. ಹಾಗಾದ್ರೆ ಸಿಂಗ ನೆಮ್ಮದಿಯಾಗಿ ಬದುಕೋಕೆ ರೌಡಿಗಳು ಬಿಡ್ತಾರಾ..? ಗೀತಾ-ಸಿಂಗ ಒಂದಾಗ್ತಾರಾ..? ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳೋಕೆ ಹೋಗಿ, ಸಿಂಗ ಸಂಕಷ್ಟಕ್ಕೆ ಸಿಲುಕ್ತಾನಾ..? ಅನ್ನೋದೆ ಸಿನಿಮಾದ ಕಥೆ.


ಸಿಂಗನಾಗಿ ಚಿರಂಜೀವಿ ಸರ್ಜಾ, ಗೀತಾ ಪಾತ್ರದಲ್ಲಿ ಅದಿತಿ ಪ್ರಭುದೇವ, ಜಾನಕಮ್ಮಳಾಗಿ ತಾರಾ ಅನುರಾಧಾ, ಹಾವಳಿಯಾಗಿ ಶಿವರಾಜ್ ಕೆ.ಆರ್ ಪೇಟೆ, ರುದ್ರಣ್ಣನಾಗಿ ರವಿಶಂಕರ್, ಅರುಣಾ ಬಾಲರಾಜ್, ಬಿ ಸುರೇಶ್ ಇನ್ನಿತರ ಕಲಾವಿದರು ಅಭಿನಯಿಸಿದ್ದಾರೆ.

ಮಗನಿಗಾಗಿ ಮಿಡಿಯೋ ತಾಯಿಯೇ ಸಿನಿಮಾದ ಕೇಂದ್ರ ವಾಗುತ್ತಾಳೆ. ತಾಯಿ ಮಗನ ಬಾಂಧವ್ಯಕ್ಕೂ ಮೀರಿ ಹೊಸತೇನು ಸಿನಿಮಾದಲ್ಲಿ ಇಲ್ಲ. ಹಳ್ಳಿ ಸೊಗಡಿನ, ಮಧ್ಯಮ ವರ್ಗದ ಒಬ್ಬ ಗೃಹಿಣಿಯಾಗಿ ತಾರಾ ಅದ್ಭುತವಾಗಿ ಅಭಿನಯಿಸಿದ್ದಾರೆ.

 ಕೆಲ ಸೀನ್ ಗಳಲ್ಲಿ ಮುಖದ ಹಾವ ಭಾವದೊಂದಿಗೆ ಪಾತ್ರವನ್ನು ಜೀವಿಸಿದ್ದಾರೆ. ಕ್ಲೈಮ್ಯಾಕ್ ನಲ್ಲಿ ಅರುಣಾ ಬಾಲರಾಜ್ ಹಾಗೂ ತಾರಾ ಅಭಿನಯ ವಿಶೇಷವಾಗಿದೆ. ಹಾಡುಗಳಲ್ಲಿ ಅದಿತಿ ಇಷ್ಟವಾಗ್ತಾರೆ. ಸ್ನೇಹಿತನಾಗಿ ಶಿವರಾಜ್ ಕೆ. ಆರ್ ಪಾತ್ರ ಸೊಗಸಾಗಿದೆ.  ರವಿಶಂಕರ್ ಅವ್ರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.  ಸಿನಿಮಾದಲ್ಲಿ ಸಹಜವಾಗಿ ಕಾಮಿಡಿ ದೃಶ್ಯಗಳು ಬಂದಂತೆ ಅಷ್ಟಾಗಿ ಕಾಣಿಸೋದಿಲ್ಲ. ನಗಿಸೋಕಂತಲೇ ಕೆಲ ದೃಶ್ಯಗಳನ್ನು ಹುಟ್ಟುಹಾಕಲಾಗಿದೆ. ಕಥೆ ಹೇಳುವಾಗ ನಿರ್ದೇಶಕರು ಹೊಸರೀತಿಯ ಪ್ರಯತ್ನಗಳನ್ನು ಮಾಡಬಹುದಿತ್ತು ಅನಿಸುತ್ತೆ. ಸಂಗೀತದ ವಿಚಾರಕ್ಕೆ ಬಂದ್ರೆ ‘ಶಾನೆ ಟಾಪ್ ಆಗವ್ಳೇ, ವಾಟ್ ಆ ಬ್ಯೂಟಿಫುಲ್’ ಹಾಡುಗಳು ಚೆನ್ನಾಗಿವೆ. ವಿಜಯ್ ಪ್ರಕಾಶ್, ನವೀನ್ ಸಜ್ಜು, ಮೇಘನಾ ರಾಜ್ ಗಾಯನ ಹಿಡಿಸುತ್ತೆ. ಡ್ಯಾನ್ಸ್ ಮಾಡುವಾಗ ಹಿರೋಗೆ ಇನ್ನು ಸ್ವಲ್ಪ ಎನರ್ಜಿ ಇರಬೇಕಿತ್ತು. ಮಾಸ್ ಸಿನಿಮಾಗಳನ್ನು ಇಷ್ಟಪಡುವವರು ಸಿನಿಮಾ ನೋಡಬಹುದು.