ಮೌನಕ್ಕೆ ಬಿಟ್ಟುಕೊಡೋಣ

ಮೌನಕ್ಕೆ ಬಿಟ್ಟುಕೊಡೋಣ

ಮೌನವನ್ನು ಮೌನಕ್ಕೇ ಬಿಟ್ಟುಕೊಡೋಣ

ನೆರಳುಗಳನ್ನು 

ಅದರುದ್ದ ಚಾಚುವುದು ಬೇಡ

 

ಅವೇ ನೆರಳುಗಳಿಂದ ಸದ್ದುಗಳು

ಹೊಮ್ಮಬಹುದು 

ಒಂದು ವಿಷಾದ ಗೀತೆ

ಸೈನಿಕರ ಬೀಗಲಿನಂಥ ಏನೋ ಒಂದು

ಇಲ್ಲವೇ

ನಲ್ಲಿಯ ಬಳಿಯ ಹೆಂಗಸರ ಜಗಳ

ಬ್ಯಾಂಡೇಜು ಬಿಚ್ಚುವಾಗ ನೋವಿನಲ್ಲಿ 

ಚೀರುವ ಮಗು

 

ಹೂವಿನ ಪಕಳೆಯಂಥ ಸ್ನಿಗ್ಧ ಮುಖ

ಅಲುಗಿಯೂ ಅಲುಗದ ಜೇನುತುಟಿ

ಎಂದೆಲ್ಲ ಚಿತ್ರಿಸುವ ರಮ್ಯತೆಯೂ ಬೇಡ

ಕನಸೊಡೆದಾಗ ಮೌನವೂ ಇರುವುದಿಲ್ಲ

 

ಮೌನವನ್ನು ಅದರದೇ ನಾದಕ್ಕೆ 

ಬಿಟ್ಟುಕೊಡೋಣ ಗೆಳೆಯ

ನೆರಳುಗಳ ಹಂಗಿರದೇ

 

ಪರಸ್ಪರ ಬೆರೆಯುವ ಬೇರಾಗುವ

ಬರೆಯುವ ಅಳಿಸುವ ಛಾಯೆಗಳು

ಕೇವಲ ಛಾಯೆಗಳ ನಡುವೆ

ಪ್ರಕ್ಷೇಪಗೊಳ್ಳುವ ನೆರಳು ಬೆಳಕಿನ

ಮುರುಕು ಚಿತ್ರ ಭಂಗಿತ ಬಿಕ್ಕುಗಳ

ಸಂದಿಯಲ್ಲಿ 

 

ಆಲಿಸುತ್ತ 

ಮೌನದ ಪಲುಕುಗಳ...