"ಮಳಿಗಾಲ್ದಾಗ್ ಛತ್ರಿ ಬಿಡ್ಬಾರ್ದು... ಚಳಿಗಾಲ್ದಾಗ್ ಹೆಂಡ್ತಿ ಬಿಡ್ಬಾರ್ದು!"

ಏನಂತ್ ಹೇಳ್ಲೀ ಕಾಕಾರ್!, "ನನ್ನ್ ಬಾಳೆ ಎದ್ಕು ಬ್ಯಾಡಾಗೇತಿ... ನೋಡ್ರಿ"?. "ಮಳಿಗಾಲ್ದಾಗ್ ಛತ್ರಿ ಬಿಟ್ಟ್ ಜರ್ಕಿನ್ ಹಾಕ್ಕೊಂಡ್ ಮಳಿಗೆ ತೊಯ್ಸಿಗೊಂಡ್ ಓಡ್ಯಾಡೇನಿ"....! "ಚಳಿಗಾಲ್ದಾಗ್ ಹೆಂಡ್ತಿ ನನ್ನ ಒಬ್ಬಂಟಿಯಾಗಿ ಬಿಟ್ಟು ತವ್ರಮನಿಗೆ ಹೋಗ್ಯಾಳ"..?. "ಚಳಿಗಾಲ್ದಾಗ್ ರಾತ್ರಿ ಗದ..ಗದ ನಡ್ಗುವಂತ್ ಸ್ಥಿತಿ ಬಂದೈತಿ".....?.

ಹಲೊ...ಹಲೋ..., ಇತ್ತಾ ಕಡಿಂದ್ ಬಸಣ್ಣ ಮಾತಾಡೋದ್ರಿ... ಯಾವಂ.. ಬಸಪ್ಪ ಅಂದ್ರ್ಯಾ...? ಅದರಿ... ನಾ ಉಳ್ಳಾಗಡ್ಡಿ ಬಸಪ್ಪ ಮಾತಾಡೋದ್ರಿ..... ಕಾಕಾರ ಕೈಯಾಗ್ ಪೊನ್ ಕೊಡ್ರೀ...!

ಬಸಣ್ಣಾ ಅವ್ರೂ ಮನ್ಯಾಗ್ ಪೋನ್ ಚಾರ್ಚಿಗಿಟ್ಟು ಪ್ಯಾಟ್ಯಾಗ್ ಹೋಗ್ಯಾರ್ ತಮ್ಮಾ....?, "ಅವ್ರ ಬಂದ್ ಮ್ಯಾಲ್ ನಿ ಪೋನ್ ಮಾಡಿದ ಬಗ್ಗೆ ಹೇಳ್ತನಿ" ಎಂದು ಕಾಕಾನ  ಹೆಂಡ್ತಿ ಲಕ್ಷ್ಮವ್ವ ಉತ್ತರಿಸಿದಳು.

ಬಸಣ್ಣ : ಅವ್ವಾರ್ ಕಾಕಾರು ಯಾಕ್ ಪ್ಯಾಟ್ಯಾಗ್ ಹೋಗ್ಯಾರ್...?.

ಲಕ್ಷ್ಮವ್ವ : "ತಮ್ಮ ಮನ್ಯಾಗ್ ಅಡ್ಗಿಗೆ, ಸಾರ್ಗೆ ಉಳ್ಳಾಗಡ್ಡಿ ಇರ್ಲಿಲ್ಲಾ"?.  "ಅಡ್ಗಿ... ರುಚಿನ ಆಗಂಗಿಲ್ಲಾ !. ಇವ್ರು ನೋಡಿದ್ರ ಮೂರು ದಿವ್ಸ್‍ದಿಂದಾ ಮನ್ಯಾಗ ಉಣ್ಣಾಕ ವಲ್ರು"...?.  "ಉಳ್ಳಾಗಡ್ಡಿ ಇಲ್ದ ಅಡ್ಗಿ ಹೆಂಗ್ಯ ಪಾಡಾಕ್ಕತಿ ಹೇಳು"?.  " ನಾನು ಮನ್ಯಾಗ ಉಳ್ಳಾಗಡ್ಡಿ ಕಾಲಿ ಆಗ್ಯಾವು ಅಂತ್ ಹೇಳ್ದೆ", ಅದ್ಕ ಇವ್ರು "ಚೀಲಾ ತಾ ಇಲ್ಲೇ, ನಾ ಪ್ಯಾಟ್ಯಾಗ್ ಹೋಗಿ ಉಳ್ಳಾಗಡ್ಡಿ ತರ್ತನಿ" ಅಂತ್ ಈಗ ಪ್ಯಾಟ್ಯಾಗ್ ಹೋಗ್ಯಾರ ನೋಡು...!

ಬಸಣ್ಣ : ಅವ್ವಾರ "ಕಾಕಾರ್ನ್ಯಾಕ್ ಪ್ಯಾಟ್ಯಾಗ್ ಕಳ್ಸಾಕ್ ಹೋದ್ರೀ"...?. "ಮೊದ್ಲ ಅವ್ರು ಹಾರ್ಟಪೇಶೆಂಟ್ ಅದಾರ್"!. "ಪ್ಯಾಟ್ಯಾಗ್ ಉಳ್ಳಾಗಡ್ಡಿ ರೇಟ್ ಕೇಳಿ... ಇವ್ರು ಎದಿ ದಸಕ್ ಅಂದ್ರ ಏನಮಾಡೋದ್ರಿ"..?. ಮೊದ್ಲ ಅವ್ರ್ನ ಪ್ಯಾಟ್ಯಾಗಿಂದ್ ವಾಪಾಸ್ ಮನಿಗೆ ಕರ್ಸ್ರೀ...?.

ಲಕ್ಷ್ಮವ್ವ :  ಯಾಕೋ ತಮ್ಮಾ.... "ಅಷ್ಟ್ ದುಬಾರ್ಯಾಗ್ಯಾವ್ ಉಳ್ಳಾಗಡ್ಡಿ"....?

ಬಸಣ್ಣ: "ಹೌದ್ರೀ...ಹೌದ್‍ಯವ್ವಾ, ಒಂದ್‍ಕೇಜಿಗೆ ಉಳ್ಳಾಗಡ್ಡಿ ರೇಟ್ ಬರೆ 180ರೂಪಾಯಿ  ಆಗೇತಿ ನೋಡ್ರೀ"..?. ಈಸರ್ಕಾರದವ್ರು ಉಳ್ಳಾಗಡ್ಡಿ ರೇಟ್ ಇಳ್ಳದ ಜನ್ರಬಾಯಿಗೆ ಗಡ್ಡಿನ ತಂದಿಟ್ಟಾರಾ ನೋಡ್ರೀ ಯವ್ವಾ"!.

ಲಕ್ಷ್ಮವ್ವ :  "ಇಷ್ಟ ದಿವ್ಸ್ ಸಂತ್ಗೆ ನಾನ್ ಹೊಕ್ಕಿದ್ದೇ ತಮ್ಮಾ, ವಾರಾ ಇವ್ರು ಸಂತಿಗೆ ಕೊಡೋದ ಎರ್ಡ್‍ನೂರು ರೂಪಾಯಿ"!. "ಅದ್ರಾಗ್ ಕಾಯಿಪಲ್ಲೆ, ಉಳ್ಳಾಗಡ್ಡಿ, ಬಳ್ಳೋಳ್ಳಿ, ಸೊಪ್ಪು, ಸೆದಿ ತರ್ಬೇಕು". "ಈ ಎರ್ಡನೋರು ರೂಪಾಯಿ ರೊಕ್ಕಾದಾಗ್ ಬರಿ ಉಳ್ಳಾಗಡ್ಡಿಗೆ ನೂರಾಎಂಬತ್ತ್ ರೂಪಾಯಿ ಹೋದ್ರ...! ಉಳ್ದ ಇಪ್ಪತ್ತ ರೂಪಾಯಿದ್ಗಾಗ ಏನ್ ಬರ್ತೈತಿ ಹೇಳೂ"....?. "ಅದ್ಕ,  ಉಳ್ಳಾಗಡ್ಡಿ ರೇಟ್ ಜಾಸ್ತಿ ಆಗಿದ್ದ್ಕ ಹೋದವಾರ್ ಬರಿ ಅರ್ಧಾಕೇಜಿ ಅಷ್ಟ ಉಳ್ಳಾಗಡ್ಡಿ ತಂದಿದ್ದೇ"...!, "ಅರ್ಧಾಕೇಜಿಗೆ ನಾಲ್ಕ ಉಳ್ಳಾಗಡ್ಡಿ ಬಂದಿದ್ವು' ಮೂರುದಿವ್ಸ್ಕ ಖಾಲಿಯಾಗಿದ್ದ್ವು, "ಉಳ್ಳಾಗಡ್ಡಿ ಇಲ್ದ್ ಸಾರು-ಪಲ್ಯೆ ಮಾಡಿದ್ಕ ಇವ್ರು ಮನ್ಯಾಗ್ ಉಂಡಿಲ್ಲಾ" !. "ಇವತ್ತ್ ಬೆಳಿಗ್ಗೆ ಉಳ್ಳಾಗಡ್ಡಿ ಇಲ್ದ್ ಬಳ್ಳೋಳ್ಳಿ ಹಾಕಿ ಉಪ್ಪಿಟ್ಟ್ ಮಾಡಿದ್ಕ ಇವ್ರು ಸೆಟಗೊಂಡ್ ಉಪ್ಪಿಟ್ಟ ತಿನ್ದ್ ಹಂಗ್ ನೀರ್ ಕುಡ್ದ್ ಕೈತೊಕ್ಕಂಡ್ ಉಳ್ಳಾಗಡ್ಡಿ ತರ್ತನೀ ಅಂತ್ ಪ್ಯಾಟ್ಯಾಗ್ ಹೋಗ್ಯಾರ್ ನೋಡ್ ತಮ್ಮಾ" !. ನೀನ್ ಹೊಗಿ ಅವ್ರ್ನ ಮನಿಗೆ ಕರ್ಕಂಡ್ ಬಾರೋಯಪ್ಪಾ.!

ಬಸಣ್ಣ: ಆತ ಬಿಡ್ರೀ ಅವ್ವಾರ್... "ಕಾಕಾರಿಗೂ ಸಂತ್ಯಾಗ್ ಕಾಯಿಪಲ್ಲೆ, ಉಳ್ಳಾಗಡ್ಡಿ, ಬಳ್ಳೋಳ್ಳಿ ರೇಟ್ ಹೆಚ್ಚಾಗೇತಿ ಅನ್ನೋದ್ ಗೊತ್ತಾಕ್ಕೈತಿ. ಗೊತ್ತಾಗ್ಲಿ ಬಿಡ್ರೀ"?.

ಲಕ್ಷ್ಮವ್ವ: ಈಕಾ ಅವ್ರ ಬಂದ್ರು  ನೋಡು....., "ಯಾಕ್ರೀ ಉಳ್ಳಾಗಡ್ಡಿ ತರ್ತನೀ ಅಂತ್ ಪ್ಯಾಟ್ಯಾಗ್ ಹೋದರು ಖಾಲಿ ಚೀಲಾ ತಗೊಂಡ್ ಹಂಗ್ ಬಂದಿರಲ್ಲ... ಯಾಕ್"?.

ಕಾಕಾ: ಏನ್... ಮಾರಾಳ, ಪ್ಯಾಟ್ಯಾಗ್ ಇನ್ನು ಯಾರು ಅಂಗ್ಡಿನ್ ಹಚ್ಚಿಲ್ಲಾ...?. ಮಂಡಕ್ಕಿ ಬಾಬು ಒಬ್ನ ಅಂಗ್ಡಿ ಹಚ್ಚಿದ್ದಾ...! "ಲೇ..ತಮ್ಮಾ ಬಾಬು, ಉಳ್ಳಾಗಡ್ಡಿ ಹೆಂಗ್ ಕೇಜಿನೋ ಅಂದೆ, ಅವಾಂ ಬರ್ರೀ ಕಾಕಾರ್ ಬಾಳದಿವ್ಸದ್ ಮ್ಯಾಲ್ ಪ್ಯಾಟ್ಯಾಗ್ ಕಂಡ್ರೇಲ್ಲ...ಬರ್ರೀ..ಬರ್ರೀ..ಅಂದವ್ನ. ತಗೋಳ್ರೀ ಕಾಕಾರ್ ಮೊದ್ಲಿನ್ ಬೋಣ್ಗೀ  ನಿಮ್ದ್", ನಿನ್ನೆ "ನೂರಾಎಂಬತ್ತರೂಪಾಯ್ಕ್ ಒಂದ್ ಕೇಜಿ ಕೊಟ್ಟಿದ್ದೆ, "ನೀವು ಬಂದಿರಂತ್ ಇಪ್ಪತ್ತರೂಪಾಯಿ ಕಡ್ಮಿ ಮಾಡಿಕೊಡ್ತನಿ ತಗೋಳ್ರೀ ಅಂದ್". "ಉಳ್ಳಾಗಡ್ಡಿ ರೇಟ್ ಕೇಳಿ ನನ್ನ   ಎದಿ ದಸಕ್ಕಂತು"...!. "ಬ್ಯಾಡ್ ತಡಿಲೇ ತಮ್ಮಾ, ನಾ ಕಿಸೆದಾಗ್ ಅಷ್ಟ ರೊಕ್ಕಾ ಇಟಗೊಂಡ್ ಬಂದಿಲ್ಲಾ, ಕೀಸೆದಾಗ್ ಬರಿ ಐವತ್ತರೂಪಾಯಿ ಅಷ್ಟ ಅದಾವು, ಮನಿಗೆ ಹೋಗಿ ಬರ್ತನಿ ತಡಿ ಅಂದೆ". ಅದ್ಕ ಅವಾ ಈಗ ಉಳ್ಳಾಗಡ್ಡಿ ಒಯ್ರೀ ಅಂದ್, ನಾನು "ಬ್ಯಾರೇಕಡೆ ರೇಟು ಕಡ್ಮಿ ಇರ್ಬೇಕ್ ಅಂದ್ ಬ್ಯಾಡ ತಡಿ ಬಾಬು ಮನಗೆ ಹೋಗಿ ಬರ್ತನೀ ಅಂತ್ ಅವಸ್ರಲೇ ಮನಿಗೆ ಬಂದೆ ನೋಡು".

ಲಕ್ಷ್ಮವ್ವ:  ಉಳ್ಳಾಗಡ್ಡಿ  ಬಸಪ್ಪ ಪೋನ್ ಮಾಡ್ಯಾನ್ ನೋಡ್ರೀ.... ಹಿಡ್ರೀ... ಅಂತ ಮೊಬೈಲ್ನ್ ಕಾಕಾರಿಗೆ ನೀಡಿದ್ಲು...

ಎನ್ಪಾ ಬಸಣ್ಣಾ  ಏನ್ ನಿನ್ನ ಹಕಿಕತ್ತು..?.  ಇಲೇಕ್ಷನ್ ಮುಗದ್ಮ್ಯಾಕ್ ಆಸಾಮಿ ಪತ್ತೇನ್ ಇಲ್ಲಲ್ಲೋ.? ಎಲ್ಗೆ ಹೋಗಿದ್ದೀ....?. ಕಾಕಾರ್ ನಿಮ್ಮ ಮೊಬೈಲ್ಗೆ ರಿಂಗ್ ಮಾಡಿದ್ದೇ...., ಆದ್ರ ನಿಮ್ಮ ಪೋನ್ ಬಂದ್ ಆಗಿತ್ತು!. ಈಗ ಹಚ್ಚಿದ್ರ, "ಅವ್ವಾರು ಪ್ಯಾಟ್ಯಾಗ್ ಉಳ್ಳಾಗಡ್ಡಿ ತರಾಕ ಹೋಗ್ಯಾರ್ ನೋಡ್ಪಾ ನಿಮ್ಮ ಕಾಕಾರು ಅಂದ್ರು". "ಎಲ್ಲಾ ಪೋನಿನ್ಯಾಗ್ ಮಾತಾಡೋದೂ ಬ್ಯಾಡ್ ಕಾಕಾರ್.

ಅಲ್ಲೆ ದ್ಯಾಮವ್ವನ್ ಕಟ್ಟ್ಗೆ ಬಂದ್ ಬಿಡ್ರೀ ಅಲ್ಲೆ ಮಾತಾಡೋಣ", ಅಂದ್ ಬಸಣ್ಣ ಪೋನ್ ಕಟ್ಟಮಾಡ್ದಾ.

ಸರಿ ಬಿಡ್ಪಾ ಅಲ್ಲೆ ಬರ್ತನೀ ಅಂದ್ ಕಾಕಾ. ಉಳ್ಳಾಗಡ್ಡಿತರಕಾ ಒಯ್ದಿದ್ದ ಚೀಲವನ್ನು ಪತ್ನಿಯ ಕೈಗಿಟ್ಟು ಹೊರಕ್ಕೆ ನಡ್ದ್.

ಬರ್ರೀ ಕಾಕಾರ್, "ಏನ್ ಚಳಿರಿ ಇದು!. ಕಂಬ್ಳಿ ಹೊತಗಂಡ್ರು ಚಳಿ ಹೋಗವಲ್ದ್ ನೋಡ್ರೀ"..!

ಚಳಿಗಾಲ್ ಅಂದ್ರ ಹಂಗೋ ತಮ್ಮಾ, ಅದ್ನ ಅನುಭವಿಸಬೇಕು!, ಅದ್ರ ಮಜಾನ ಬ್ಯಾರೇ..? ಹಿರೇರ್ ಹೇಳಿಲ್ಲನೂ, "ಮಳಿಗಾಲ್ದಾಗ್ ಛತ್ರಿ ಬಿಡ್ಬಾರ್ದು, ಚಳಿಗಾಲ್ದಾಗ್ ಹೆಂಡ್ತಿ ಬಿಡಬಾರು"ದ ಅಂತ್, ನಿಂದೇನು ಕತಿ....?.

ಏನಂತ್ ಹೇಳ್ಲೀ ಕಾಕಾರ್!, "ನನ್ನ್ ಬಾಳೆ ಎದ್ಕು ಬ್ಯಾಡಾಗೇತಿ... ನೋಡ್ರಿ"?. "ಮಳಿಗಾಲ್ದಾಗ್ ಛತ್ರಿ ಬಿಟ್ಟ್ ಜರ್ಕಿನ್ ಹಾಕ್ಕೊಂಡ್ ಮಳಿಗೆ ತೊಯ್ಸಿಗೊಂಡ್ ಓಡ್ಯಾಡೇನಿ"....!  "ಚಳಿಗಾಲ್ದಾಗ್ ಹೆಂಡ್ತಿ ನನ್ನ ಒಬ್ಬಂಟಿಯಾಗಿ ಬಿಟ್ಟು ತವ್ರಮನಿಗೆ ಹೋಗ್ಯಾಳ"..?. "ಚಳಿಗಾಲ್ದಾಗ್  ರಾತ್ರಿ ಗದ..ಗದ ನಡ್ಗುವಂತ್ ಸ್ಥಿತಿ ಬಂದೈತಿ".....?.

ಯಾಕೋ "ಹೆಂಡ್ತಿಕೂಡ್ ಮತ್ತ ಜಗ್ಳಾಮಾಡಿಕೊಂಡಿ" ?, ಕೋಡಿ. "ನೋಡ್ಲೇ ಗಂಡ-ಹೆಂಡ್ತಿ ಜಗ್ಳಾ ಉಂಡ ಮಲ್ಗಮಟಾ ಅಷ್ಟ ಇರ್ಬೇಕ್"!, "ಮತ್ತ ಮುಂದವರಿಬಾರ್ದು!. ಮುಂದವರ್ದ್ರ ಹಿಂಗ್ ಅನುಹುತಾ ಆಕ್ಕಾವು ನೋಡ್".

 "ಇಲ್ರೀ...ಅಂತಾ ಜಗ್ಳಾ ಏನಿಲ್ರೀ....ನಮ್ಮೂರು ದೇವ್ತಿ ಐತಲ್ರೀ, ಅದ್ಕ ದೀವ್ತಿ ಜಾತ್ರಿಗೆ ಬೀಗ್ರು-ಬಿಜ್ರನ್ ಕರ್ದು ಕುರಿಕಡ್ದ್ ಅವ್ರಿಗೆ ಉಣ್ಣಾಕ ಹಾಕೋಣು ಅಂದ್ಲು"!. ಅದ್ಕ ನಾನು "ಯಾಕ್ ದೇವ್ರು ಹುಗ್ಗಿ-ಹೋಳ್ಗಿ,ಕರಿಗೆಡ್ಬು, ಗೋದಿಹುಗ್ಗಿ ಬ್ಯಾಡಾ ಅಂತಾವನೂ"?. "ಏನ್ ಆ ದೇವ್ರ ಬಾಯಿ ಬರಿ ಬೆಲ್ಲದ ಅಡ್ಗಿ ರೂಚಿ ನೋಡಿ ಕಟ್ಟಹೋಗೆತಂತ್ ಕುರಿಕೇಳಾಕ ಹತ್ಯಾವನು ಅವು"?. "ನನ್ನ ಕಡಿಂದ್ ಅಷ್ಟ ರೊಕ್ಕಾ ಖರ್ಚಮಾಡಿ ಕುರಿ ತರಾಕ ಆಗಂಗಿಲ್ಲಾ ಅಂದೆ!", "ಅದ್ಕ ನಂಗು- ಅಕಿಗೂ ಮಾತಿಗೆ ಮಾತ ಬೆಳ್ದ ಆಕಿ ಸೆಟಗೊಂಡ್ ಇಂತಾ ತಂಡ್ಯಾಗ್ ನನ್ನ ಒಬ್ನ ಬಿಟ್ಟು ತವ್ರ ಮನಿಗೆ ಹೋಗ್ಯಾಳ ನೋಡ್ರೀ"..!

ಹೋಗ್ಲಿ ಬಿಡೋ ಪಾಪಾ...! ನಾಲ್ಕ ದಿವ್ಸ ತವ್ರಮನ್ಯಾಗ್ ಇದ್ದ ಬರ್ಲಿ ಬಿಡೋ.... ಇಲ್ಲೆ ನಿನ್ನ ಕಾಟಾ ಸಹ್ಸಿಕೊಂಡ್ ಅಕಿಗೂ ಸಾಕಾಗಿರ್ರಬೇಕು?, ಪೋನ್ ಮಾಡಬೇಕಿತ್ತು....!.

ಪೋನ್ ಮಾಡಿದ್ದೇ, "ಆಕಿ ನಾ... ಹೇಳಿದ್ದೂ ಏನ್ ಮಾಡಿದ್ರಿ?, ಅದ್ನ ಮೊದ್ಲ ಹೇಳಿ"್ರ. "ಜಾತ್ರಿಗೆ ಕುರಿ ತರ್ತನೀ ಅಂದ್ರ ಮನಿಗೆ ಬರ್ತನಿ, ಇಲ್ಲಾಂದ್ರ ತವ್ರ ಮನ್ಯಾಗ್ ಇದ್ದ ಜಾತ್ರಿ ಮೂಗ್ದಮ್ಯಾಕ್ ಊರ್ಗೆ ಬರ್ತನಿ ಅಂತ್ ಹೇಳಿದ್ಲೂ".

ಅಲ್ಲೋ ಬಸಣ್ಣಾ "ಜಾತ್ರಿ-ಹಬ್ಬಾ ಹರದಿನದೋಳ್ಗ ನಿ ಕಂಡ್ ಕಂಡ್ ಊರ್ಗೆ ಹೋಗಿ ಕಂಟಮಟಾ ಬಿಗ್ದ ಬರ್ತದೀ"..! ಈಗ ನಿಮ್ಮೂರಾಗ್ ಜಾತ್ರಿ ನಡ್ಯಾಕ್ ಹತ್ತೇತಿ...., "ಒಂದ್ ಕುರಿ ಕಡ್ದ ಊಣ್ಣಾಕ ಹಾಕ್ಸಲ್ಲ....!, ನಿನ್ನ ಹೆಂಡ್ತಿ ಹೇಳಾದ್ರಾಗೂ ಕರೆ ಐತಿ"..?.

ಏನ್ ಕರೆನೋ... ಏನೋ?. ಅಲ್ರೀ "ಕಾಕಾರ್ ಕುರಿ ಅಂದ್ರ ಸಾಮಾನ್ಯ ಅಂತ್ ತಿಳ್ಕಂಡಿರೇನೂ"?. "ಇಪ್ಪತ್ತಸಾವ್ರಾ ಬರಿ ಕುರಿಗೆ ಬೇಕು'!. ಮುಂದ್ "25ಕೆಜಿ ಸಣ್ಣಕ್ಕಿ, 200 ರೊಟ್ಟಿ ಬೇಕು", "ರೊಕ್ಕಾ ಕೊಡ್ತನಿ ಅಂದ್ರೂ ಜ್ವಾಳ ನೋಡಿದ್ರ ಪ್ಯಾಟ್ಯಾಗ್ ಸಿಗವಲ್ವು"!. "ಎಂಟ್‍ಪಡಿ ಹಿಟ್ಟಿನ್ ರೊಟ್ಟಿ ಸೂಡ್ಸಬೇಕು"!, "ಉಳ್ಳಾಗಡ್ಡಿ ರೇಟ್ ನೋಡಿದ್ರ ಕೆಜಿಗೆ 180ರೂಪಾಯಿ ಆಗ್ಯಾವು"!. "ಮಸಾಲಿ ಪದಾರ್ಥದು ಬೆಲೆನೂ ದಾಬಾರಿ ಆಗ್ಯಾವು"!. "ಇಂತಾ ದುಬಾರಿ ಕಾಲ್ದಾಗ್ ಕುರಿಕಡ್ದ್ ಜಾತ್ರಿ ಮಾಡೋದು ಅಂದ್ರ ಹೆಂಗ್ಯರೀ"?. "ನಲವತ್ತಸಾವ್ರ ರೊಕ್ಕಾ ಬೇಕ್ರೀ ಕಾಕಾ!. ನಿಮ್ಮ ಮನ್ಯಾಗ್ ಉಳ್ಳಾಗಡ್ಡಿ ರಾದ್ದಾಂತ್ ನೋಡೀದ್ರಿಲ್ಲ.... ಹಂಗ್ ನಮ್ಮ ಮನಿ ಬಾಳೇವು ಆಗೇತಿ"!.

ಹೌದೋ....ನಿ ಹೇಳೋದ್ರಾಗೂ ಕರೆ ಐತಿ!, ಹೆಂಡ್ತಿಮಾತ್‍ಕೇಳು, ರೊಕ್ಕಾನು ಉಳ್ಸು. "ಯಾರ್ನಾದ್ರು ಸರಿಪಾಲಿನಂಗ್ ಸೇರ್ಸಿಕೊಂಡು ಇಬ್ರ-ಮೂವರು ಸೇರಿಕೊಂಡು ಕುರಿ ತಂಬರ್ರಿ!", "ಸರಿಪಾಲಾ ಮಾಡಿಕೊಂಡ್ ಸಮ್ನಾಗಿ ಹಂಚಿಗೊಂಡು ರೇಷನ್‍ಅಕ್ಕಿ, ತೊಗ್ರಿ ಬ್ಯಾಳಿ, ಎಣ್ಣಿ ಹೆಂಗೂ ಸಿಗ್ತಾವು" ಅವ್ನ ತಂದ್ ಅನ್ನಾಮಾಡ್ಸಿ ಉಣ್ಣಾಕ ಹಾಕಿದ್ರ ಮುಗಿತಲ್ಲ....?"

ಕಾಕಾರ್ "ಯಾವ್ ಕಾಲ್ದಾಗ್ ಅದೀರಿ ನೀವು"!, "ಇದು ಸಿದ್ದ್ರಾಮಣ್ಣನ್ ಕಾಲಲ್ರೀ ಇದು, ಡೊಡ್ಡರಾಮಣ್ಣನ ಕಾಲಾ ಇದು"!.

"ಈ ದೊಡ್ಡರಾಮಣ್ಣ ಯಾರೋ"?

ಏ..ಅದರೀ, "ಬೈಇಲೇಕ್ಷನ್ ಒಳ್ಗ 12 ಸೀಟ್ ಗೆದ್ದ್ ನಾ ಸಿದ್ದ್ರಾಮಣ್ಣನಕಿಂತಾ ದೊಡ್ಡಾವಾಂ, ನಾ ಡೊಡ್ಡರಾಮಣ್ಣ ಅಂತ್ ಬಿಳಿ ಮೀಸಿ ತಿರ್ಯಾವರಲ್ರೀ ಯಡೆಯೋರ್ಸಪ್ಪ"!, ಅವ್ರ ಕಾಲ ಇದು!. "ರೇಷನ್ ಅಂಗ್ಡ್ಯಾಗ್ ಹೆಚ್ಗಿ ಅಕ್ಕಿ ಕೊಡೋದು ಬಂದ್ ಮಡ್ಯಾರ್?".  "ತಲಾ 7ಕೆಜಿ ಅಕ್ಕಿ ಕೊಡಾಕ್ ಹತ್ಯಾರ್"!, ಇನ್ನ "ಸರ್ಕಾರಕ್ಕ್ ಹೊರಿ ಆಕ್ಕೈತಿ ಅಂತ್, ರೇಷನ್ ಅಂಗ್ಡ್ಯಾಗ್ ತೊಗ್ರಿ ಬ್ಯಾಳಿ, ಅಡ್ಗಿ ಎಣ್ಣಿ, ಸಕ್ರಿ ಕೊಡೋದು ಬಂದ್ ಮಾಡ್ಯಾರ್ ನೋಡ್ರಿ"?.

"ಯಡೆಯೂರ್ಸಪ್ಪಗ ಏನಾಗೇತಂತ್ ದಾಡಿ"?. "ಬಡ್ವರು ತಿನ್ನೋ ಅನ್ನದಮ್ಯಾಗ್ ಅವಂದ್ಯಾಕಂತಪಾ ಕಣು"್ಣ?, "ಅವಾ ಏನ್ ಅವ್ನ ಮನಿಂದಾ ತರ್ತಾನಂತ್ ಇವ್ನೇಲಾ"್ಲ!.  "ಸರ್ಕಾರದ ರೊಕ್ಕಾದಾಗ ಬಡ್ವರಿಗೆ ಇವ್ನೇನೆಲ್ಲಾ ಕೋಡೋದ ನಿಲ್ಸಾಕ ಅವ್ಗ ಯಾರ್ ಹೇಳ್ಯಾರಂತ್"?. "ಸಿದ್ದ್ರಾಮಣ್ಣ ಮುಖ್ಯಮಂತ್ರಿ ಆಗಿದ್ದವೇಳ್ಯಾದಗ ಅವ್ರೇನ್ ಮನ್ಯಾಗ ನೋಟ್ ಪ್ರಿಂಟ್ ಮಾಡ್ತಿದ್ದರಂತನೂ"...!.

ಯಾರ್ ಯಾಕ ಹೇಳ್ತಾರಿ!, "ಅಕ್ಕಿ, ಎಣ್ಣಿ, ಬ್ಯಾಳಿ ಕೊಡೋದ್ರಿಂದಾ ಸರ್ಕಾರಕ್ಕ ಸಿಕ್ಕಾಪಟ್ಟೆ ಹೊರಿ ಬಿಳ್ತತಿ ಅಂತ್ ಈರೇಷನ್ ಅಂಗ್ಡಿ ಒಳ್ಗಿನ ಅಕ್ಕಿ,ಬ್ಯಾಳಿ, ಎಣ್ಣಿನ ಜನ್ರು ಹೊರ್ಗಡೆ ಮಾರಿಕೊಳ್ಳ್ತಾರಂತ್"!, "ಅಕ್ಕಿ ದುರುಪಯೋಗ ಆಗಾಕ ಹತ್ಯಾವು", "ಇವ್ನೆಲ್ಲಾ ಪುಕ್ಕಟ್ ಕೊಡಾಕ್ ನಾ ಏನ್ ನೋಟ್ ಪ್ರಿಂಟ್ ಮಾಡೋ ಮಷಿನ್ ಇಟ್ಟಿಲ್ಲಾ ಅಂತ್ ಇವ್ನೆಲ್ಲಾ ಬಂದ್ ಮಾಡಾಕಾ ಹೊಂಟಾರಂತ್  ನೋಡ್ರೀ?. "ಒಟ್ಟಿನ್ಯಾಗ್ ಬಡ್ವುರು ತಿನ್ನೋಅನ್ನಕ್ಕ ಕಲ್ಲಹಾಕಾಕ್ ಹೊಂಟಾರ್ ಇವ್ರು ಅನ್ನೂದು  ಖಾತ್ರಿಯಾತ್ ಕಾಕಾರ್"!. "ಅಕ್ಕಿ ಬದ್ಲು ರೇಷನ್ ಅಂಗ್ಡಾಗ್ ಉಳ್ಳಾಗಡ್ಡಿನ್ ಕೊಟ್ರ ಚಲೋಆಕೈತಿ ನೋಡಿ"ರ?.

ಹೌದೋ, "ಅಕ್ಕಿ ಕೊಡಾಕ್ ಒದ್ದಾಡೋರು, ಮುಂದ ಉಳ್ಳಾಗಡ್ಡಿ ಕೊಡ್ತಾರ್ ಇವ್ರು"!. ಅದ್ನೆಲ್ಲಾ ಬಿಡು ಉಳ್ಳಾಗಡ್ಡಿ ರೇಟ್ ಇಷ್ಟ ಹೆಚ್ಗಿ ಆಗೇತಲ,್ಲ ನಿನ್ನ ಅಡ್ಡ ಹೆಸ್ರು ಉಳ್ಳಾಗಡ್ಡಿ ಅಂತ್ ಐತಿ!, "ಯಾಕ್ ನೀನ್ ಒಂದ್ ಉಳ್ಳಾಗಡ್ಡಿ ಅಂಗ್ಡಿ ತಗಿಬಾರ್ದೂ"..?.

"ತಗಿಬಹೂದ್ರಿ...., ಆದ್ರ ನಿಮ್ಮಂತಾ ಉದ್ರಿ ಗಿರಾಕಿಗಳ್ದ ಹೆದ್ರೀಕಿ ನನ್ಗ"!. ಅದ್ಕ "ಉಳ್ಳಾಗಡ್ಡಿ ಸಹ್ವಾಸ ಬ್ಯಾಡ್ ಅಂತ್ ನಮ್ಮ ಅಪ್ಪನ ಕಾಲ್ಕ ಉಳ್ಳಾಗಡ್ಡಿ ವ್ಯಾಪಾರ ಕೈಬಿಟ್ಟಿವ್ರೀ.. ಕಾಕಾ". ಇಗ ಏನ್ಮಾಡ್ಲಿ ಕಾಕಾರ್. ನನ್ನ ಮನಿ ಸಮಸ್ಯೆ ಹೆಂಗ್ಯ ಬಗಿ ಹರ್ಸಿಕೊಳ್ಲಿ..?.

ಅಲ್ಲೋ...  ನಿನ್ನ ಹೆಂಡ್ತಿಗೆ ಪೋನ್ ಮಾಡು, "ಆತ್ ನಿ ಹೇಳ್ದಂಗ್ ಆಗ್ಲಿ ಮಾರಾಳ ಬಾ, ಗುರುವಾರ ಸಂತಿಯೋಳ್ಗ ಕುರಿ ತರ್ತನಿ   ಅಂತ್ ಹೇಳೂ. ನಿನ್ನ ಎಲ್ಲಾ ಸಮಸ್ಯೆನೂ ಬಗಿಹರಿತ್ಯಾವು"!.

ಆಗ್ಲಿ ಕಾಕಾ ನೀವು ಅಂದಂಗ್ ಮಾಡ್ತನಿ, ಕಾಕಾ  "ನಿರ್ಭಯಾ ಗ್ಯಾಂಗ್ ರೇಪ್ ಪ್ರಕರ್ಣದಾಗ ಅಪರಾಧಿಗಳಿಗೆ ಗಲ್ಲ ಹಾಕಾಕ್   ಮನ್ಷ್ಯಾರ್ ಸಿಗವಲ್ರಂತ್‍ಹೌದನ್ರೀ"..?.

ಹೌದೋ ತಮ್ಮ ಹೌದು.... "ಗಲ್ಗೆ ಹಾಕೋರು ಸಿಕ್ಕ ತಕ್ಷ್ಣಾ ರೇಪ್ ಪ್ರಕರ್ಣದಾಗ ಇರೋರನ್ನ ಗಲ್ಲಿಗೆ ಹಾಕ್ತಾರ ನೋಡು". ಅಂದಂಗ್   "ಸಿದ್ದ್ರಾಮಣ್ಣ್ಗ ಹಾರ್ಟ ಆಪರೇಷನ್ ಆಗೇತಂತಲ್ಲರೀ ಈಗ ಹೆಂಗ್ಯ ಅದಾರಿ ಅವ್ರು"!.

ಅರಾಮ ಅದಾರೋ ತಮ್ಮಾ, "ಸಿದ್ದ್ರಾಮಣ್ಣ್ಗ  ಎನು ಆಗೋದಿಲ್ಲ ಬಿಡೋ"?. "ಲೋಕಸಭೆ ಒಳ್ಗ ಮತ್ತೇನ್ಪಾ ನಿಮ್ಮ ಪಾರ್ಟಿಪ್ಲಸ್ ಹುಡ್ಗಂದ್ ಗದಾ"? .

"ಏನ್ರೀ ಅದು ಪಾರ್ಟಿಪ್ಲಸ್‍ಹುಡ್ಗ ಅಂದ್ರ ಯಾರ್ರೀ...?, ಯಾವ್ದೋ ಗುಳ್ಗಿ ಹೆಸ್ರ ಇದ್ದಂಗ್ ಐತಲ್ರೀ...ಇದು"?.

 "ಗುಳ್ಗಿ ಹೆಸ್ರು ಅಲ್ಲಲೇ ಎಪ್ಪಾ ಇದು!, ನಿಮ್ಮ ರಾಹುಲ್‍ಗಾಂಧಿ ಬಗ್ಗೆ ನಾ ಹೇಳಿದ್ದು"...?.

 "ಹಂಗ್  ಬಿಡ್ಸಿ ಹೇಳ್ರೀ... ನೀವು ಹಿಂಗ್ ಒಗ್ಟಿನ್ಯಾಗ್ ಹೇಳಿದ್ರ ಹೆಂಗ್ಯ"?. 

 "ಬಾಯಿಬಿಟ್ರ ಬಣ್ಣಗೇಡು ಅನ್ನೋಹಂಗ್ ನಿಮ್ಮ ರಾಹುಲ್‍ಗಾಂಧಿ ಬಾಯಿಬಿಟ್ರ ಅಲ್ಲೆ ಏನರ್ ಒಂದ್ ಇಲ್ಲದ್ ಸಮಸ್ಯೆ ಕಾಂಗ್ರೆಸ್ ಗಿಡದಹಂಗ್ ಪುಸಕ್ಕನ್ ಹುಟಿಗೆಂಡ್ ಬಿಡತೈತಿ".?. "ದಿಲ್ಲಿ ಒಳ್ಗ  ರಾಹುಲ್‍ಗಾಂಧಿ ದೇಶದೊಳ್ಗ ನಡ್ದಿರೋ ಅತ್ಯಾಚಾರಗಳ ಬಗ್ಗೆ ಹೇಳೋ ಮಾತಿನ ಭರದೊಳ್ಗ ರೇಪ್ ಇನ್ ಇಂಡಿಯಾ ಅಂತ್ ಪದಾ ಬಳ್ಕೆಮಾಡಿದ್ದ್ಕ", "ಆಡಳಿತ ಪಕ್ಷದವ್ರು ಇದ ಮಾತನ್ನು ಇಟಗೊಂಡ್ ಸದ್ನಾನ ಕದ್ನಾ ಮಾಡಿಬಿಟ್ಟಾರ್"?.

ಅಲ್ರೀ.., "ಪೌರತ್ವಕಾಯ್ದೆ ವೀರೋಧ್ಸಿ ದೇಶಾನ ಹೊತ್ತಿಉರ್ಯಾಕ್ ಹತ್ತೇತಿ"!, "ಹತ್ತಿರೋ ಬೆಂಕಿನ ಹೆಂಗ್ಯ ಆರ್ಸಬೇಕು ಅನ್ನೊ ಕಬರ್ ಇಲ್ದನ್  ಇವ್ರು, ಈ ರಾಹುಲ್‍ಗಾಂಧಿಮಾತಿನ ಬಗ್ಗೆ ಚರ್ಚೆ ಮಾಡ್ಯಾಕ್ ಹತ್ಯಾರ ಅಂದ್ರ ಏನ್ ಹೇಳ್ಬೇಕ್ ಇವ್ರಗೆ"?. "ಊರ್ಗೆ, ದೇಶಕ್ಕ ಬೆಂಕಿ ಬಿದ್ದ ಹೊತ್ತಿನ್ಯಾಗ್ ಆ ಬೆಂಕಿನ ಹೆಂಗ್ಯ ಆರ್ಸಬೇಕು ಅನ್ನೋದ ಬಿಟ್ಟು, ಚಳಿ ಐತಿಅಂತ್ ಈಉರಿಯೋ ಬೆಂಕ್ಯಾಗ್  ಮೈಕಾಯ್ಸಿಕೊಂಡ್ರು" ಅನ್ನೋಹಂಗ್ "ಈಜವಾಬ್ದಾರಿ ಇರೋ ಜನಾ ದಿಲ್ಯಾಗ ಚಳಿ ಬಾಳೈತಿ ಅಂತ್ ದೇಶಕ್ಕ ಬೆಂಕಿಬಿದ್ದಹೊತ್ತಿನ್ಯಾಗ್ ತಮ್ಮ ಮೈಕಾಯ್ಸಿಕೊಳ್ಳಾಕ ಹತ್ಯಾರಲ್ಲ"?. ಏನ್ ಹೇಳ್ಬೇಕ್ ಇವ್ರಗೆ. ಹಾಳಾಗಿ ಹೋಗ್ಲಿ ನಡ್ರೀ ಅತ್ಲಾಗ್!. "ಚಳಿ ಹೆಚ್ಗೀ ಆಗೇತಿ, ಗಂಗಮ್ಮನ ಅಂಗ್ಡಿಗೆ ಹೋಗಿ ಮಿರ್ಚಿ-ಮಂಡಕ್ಕಿ ತಿಂದ್, ಚಾ ಕುಡೇನ್ ನಡ್ರೀ... ಎನ್ನುತ್ತಾ ಕಾಕಾ-ಬಸಣ್ಣ ಚಾ ಅಂಗ್ಡಿ ಕಡೆಗೆ ನಡೆದರು.