ದೇವರನು ಹುಡುಕುತ್ತಾ………

ದೇವರನು ಹುಡುಕುತ್ತಾ………

ಸುಮಾರು ನಾಲ್ಕು- ನಾಲ್ಕೂವರೆ ದಶಕಗಳ ಹಿಂದಿನ ದಿನಗಳವು. ಮನುಷ್ಯ – ಮನುಷ್ಯರ ನಡುವಿನ ಸಂಬಂಧಗಳಾಗಲೀ , ದೈವ – ಮನುಜರ ನಡುವಿನ ಸಂಬಂಧವಾಗಲೀ ಇಷ್ಟೊಂದು ಬಿಗಡಾಯಿಸದೇ ತಕ್ಕಮಟ್ಟಿಗಾದರೂ ಆಪ್ತವಾಗಿದ್ದ ಕಾಲವದು. ಅದರಲ್ಲೂ ದೈವ – ಮನುಜರ ಸಂಬಂಧವಂತೂ ಒಂದು ತೂಕ ಹೆಚ್ಚೇ ಇದ್ದ ನಮ್ಮ ಮನೆಯಲ್ಲಿ ನಮ್ಮ ದೈವದ ತಿಳಿವು ಪ್ರಾರಂಭವಾದದ್ದೇ ನಮ್ಮಜ್ಜಿಯ ಪೂಜಾ ಕಲಾಪಗಳಿಂದ. ನಾವು ಚಿಕ್ಕವರಿದ್ದಾಗ ನಮ್ಮಜ್ಜಿಗೆ ಸುಮಾರು ಅರವತ್ತೈದರ ಪ್ರಾಯ. ಅಜ್ಜ ಕಾಲವಾದ ಬಳಿಕ ಅಜ್ಜಿ ಸೂಡಿ ಪಟ್ಟದ್ದೇವರಿಂದ ದೀಕ್ಷೆ ಪಡೆದು ಮೂರೂ ಹೊತ್ತು ಜಪತಪಗಳಲ್ಲೇ ನಿರತವಾಗಿರುತ್ತಿದ್ದಳು. ಅಜ್ಜಿಯ ದಿನಚರಿ ನಸುಕಿನ ಐದರಿಂದಲೇ ಪ್ರಾರಂಭವಾಗುತ್ತಿತ್ತು. ನಸುಕಿನಲ್ಲಿ ಎದ್ದವಳೇ ದೇಹಬಾಧೆಗಳನ್ನೆಲ್ಲ ತೀರಿಸಿಕೊಂಡು ಮನೆಯನ್ನೆಲ್ಲ ಚೊಕ್ಕಗೊಳಿಸಿ ಪೂಜಾ ಸಾಮಗ್ರಿಗಳನ್ನು ಹುಣಸೆ ಹುಳಿ ಹಚ್ಚಿ ಥಳಥಳ ಹೊಳೆಯುವಂತೆ ತಿಕ್ಕುತ್ತಿದ್ದಳು. ನಂತರ ಸಕ್ಕರೆ ನಿದ್ದೆಯಲ್ಲಿದ್ದ  ನಮ್ಮನ್ನು ಎಬ್ಬಿಸಿ ಸ್ನಾನಕ್ಕೆ ಅಣಿಗೊಳಿಸುವಳು. ಬಳಿಕ ಅಜ್ಜಿಯ ಸರದಿ. ಅಜ್ಜಿಯ ಜಳಕ ಮುಗಿಯುವುದರೊಳಗೆ  ನಮ್ಮ ಮನೆಯ ಸಮೀಪದಲ್ಲಿರುವ ಬಾವಿಯಿಂದ ಮಡಿನೀರು, ಪತ್ರಿಯಜ್ಜನ ಮನೆಯಿಂದ ಔಡಲ ಎಲೆಯಲ್ಲಿ ಕಟ್ಟಿಕೊಡುವ ಹೂ – ಪತ್ರೆಗಳನ್ನು ತಂದು ದೇವರ ಜಗುಲಿಯ ಮುಂದಿಟ್ಟು ಚಕ್ಕಳ- ಬಕ್ಕಳ ಹಾಕಿ ಕುಳಿತುಕೊಳ್ಳಬೇಕಿತ್ತು. 

ಓಂಕಾರದಿಂದ ಪ್ರಾರಂಭವಾಗುವ ಅಜ್ಜಿಯ ಪೂಜೆ ವಚನವಾರಿಧಿಯಲಿ ಮುಳುಗೆದ್ದು , ಭೋರ್ಗರೆವ ತತ್ವಧಾರೆಯಲಿ  ಮಿಂದು, ಭಕ್ತಿಸರೋವರದಲ್ಲಿ ಪರಿಸಮಾಪ್ತಿಯಾಗುತ್ತಿತ್ತು!! ಏನಿಲ್ಲವೆಂದರೂ ಎರಡು ತಾಸಿಗೂ ಹೆಚ್ಚಿನ ಪೂಜಾವಧಿ. ಅಲ್ಲಿಯವರೆಗೂ ನಾವು ಆಕಳಿಸದೇ, ಕೆಮ್ಮದೇ, ಕಿಮಕ್ಕೆನ್ನದೇ ಕುಳಿತಿರಬೇಕು!! ಅಷ್ಟು ದೀರ್ಘ ಸಮಯದವರೆಗೂ ಸಾಂಗವಾಗಿ ಪೂಜಾ ಕಲಾಪಗಳನ್ನು ನಡೆಸುವ ಅಜ್ಜಿ ಮನದಣಿಯೇ ಹಾಡುತ್ತಿದ್ದಳು. ಅಜ್ಜಿಯ ದನಿ ಇಂಪಾಗಿತ್ತು, ಅವಳ ತತ್ವಪದಗಳನ್ನು ಕೇಳಲು ಖುಷಿಯೆನಿಸಿದರೂ ಅಜ್ಜಿ ಹಾಡುವ ಎರಡು ಪದಗಳು ಮಾತ್ರ ಮನಸ್ಸಿಗೆ ಅಸಾಧ್ಯ  ಕಿರಿಕಿರಿ ಹುಟ್ಟಿಸುತ್ತಿದ್ದವು! ಒಂದು ಪದದಲ್ಲಿ ಅಜ್ಜಿ ಮನುಷ್ಯರನ್ನು ಪದೇಪದೇ ‘ ಪ್ರಾಣಿ, ಪ್ರಾಣಿ ‘ ಎಂದು ಸಂಬೋಧಿಸುತ್ತಿದ್ದಳು.’ ಶಿವಾ ಎನ್ನೋ ಶಿವಾ ಎನ್ನೋ ಶಿವಾ ಎನ್ನೋ ಪ್ರಾಣಿ, ಶಿವಾ ಎನ್ನದಿದ್ದರೆ ನೀನೇನೂ ಕಾಣಿ, ಹೆಂಡತಿ ಮಕ್ಕಳು ಸಂಸಾರೋ ಪ್ರಾಣಿ, ನೀ ಹೋಗೋ ಕಾಲಕ್ಕ ಯಾರ್ಯಾರ ಕಾಣಿ, ಶಿವಾ ಎನ್ನೋ ಶಿವಾ ಎನ್ನೋ ಶಿವಾ ಎನ್ನೋ ಪ್ರಾಣಿ…., ‘ ಹೀಗೆ ಸಾಗುತ್ತಿತ್ತು ಅಜ್ಜಿಯ ಹಾಡು. ಪದದ ಸಾಲಿಗೊಮ್ಮೆ ಬರೀ ಪ್ರಾಣಿ ಪ್ರಾಣಿ!! ಮನುಷ್ಯರನ್ನು ಪ್ರಾಣಿಯೆಂದು ಸಂಬೋಧಿಸುವ ಪರಿಯೇ ಇರುಸು ಮುರುಸಿಗೀಡುಮಾಡುತ್ತಿತ್ತು. ಇನ್ನೊಂದು ಪದದಲ್ಲಿ ಅಜ್ಜಿ ದೇವರನ್ನು ಪುಟ್ಟ ಮಗುವಿನಂತೆ ಲಾಲಿಸಿ ಹಾಡುತ್ತಿದ್ದಳು. ‘ ಯಾರೇನಂದರು ನಿನಗ, ಸದ್ಗುರುನಾಥಾ ಯಾರೇನಂದರು ನಿನಗ . ಯಾರೇನಂದರು ನಿನಗ ಬಾರದ್ಯಾಕ ಹೋದ್ಯೋ ಮನಿಗೆ ಯಾರೇನಂದರು ನಿನಗ. ಆಡೀ ಆಡದಲಿರವಿ, ನೋಡಿ ನೋಡದಲಿರವಿ, ಕಾಡಿ ಕಾಡದಲಿರವಿ, ಬೇಡಿ ಬೇಡದಲಿರವಿ, ಯಾರೇನಂದರು ನಿನಗ……..’  ಹೀಗೆ. ‘ ಯಾಕ್ ಪುಟ್ಟಾ, ಏನಾಯ್ತೋ, ಯಾರು ಏನಂದ್ರಪ್ಪಿ ನಿನ್ಗ? ಯಾಕೋ ಮಾತಾಡವಲ್ಲಿ? ಯಾಕೋ ನನ್ನತ್ರ ಬರವಲ್ಲಿ……,’  ಹೀಗೆ ತಾಯಿ ಮಗುವನ್ನು ರಮಿಸುವ ತೆರದಿ ದೇವರನ್ನು ಭಾವಿಸುವ ಪರಿ ಅಚ್ಚರಿಯ ಜೊತೆಗೆ ಕಿರಿಕಿರಿ ಹುಟ್ಟಿಸುತ್ತಿತ್ತು. ದೇವರು ಈ ಜಗತ್ತಿನ ಸೃಷ್ಟಿಕರ್ತ, ಸರ್ವಶಕ್ತ. ಅಂತಹ ದೈವವನ್ನು ಅಸಹಾಯಕತೆಯ ಪ್ರತಿರೂಪವಾದ ಮಗುವಿನಂತೆ ಭಾವಿಸಿ ಹಾಡುತ್ತಾಳಲ್ಲಪ್ಪ ಈ ಅಜ್ಜಿ!! ಎನಿಸಿ ಅಜ್ಜಿಯ ಮೇಲೆ ಸಿಟ್ಟೂ ಬರುತ್ತಿತ್ತು. ಮಂಗಳಾರತಿ ಹೊತ್ತಿಗೆ ಕಡಕೋಳಜ್ಜನ  ‘ ಜ್ಞಾನಪೂರ್ಣಂ ಜಗಂಜ್ಯೋತಿ ನಿರ್ಮಲವಾದ ಮನವೇ ಕರ್ಪೂರದಾರುತಿ….. , ‘ ಪದವನ್ನು ರಾಗವಾಗಿ  ಹಾಡುತ್ತಿದ್ದಳು .ನಂತರ ಎಡೆಹಿಡಿವ ಸಮಯದಲ್ಲಿ ಶಿಶುನಾಳ ಶರೀಫಜ್ಜನ ‘ ಎಡಿಯ ಒಯ್ಯನು ಬಾರೆ ದೇವರಿಗೆಡಿಯ…..,’ ಹಾಡು ಹೇಳಿ ಪೂಜೆ ಮುಗಿಸುವ ಹೊತ್ತಿಗೆ ಸೂರ್ಯನ ಹೊಂಗಿರಣಗಳು ನಮ್ಮ ಅಂಗಳವನ್ನು ಚುಂಬಿಸುತ್ತಿದ್ದವು. ಪಡಸಾಲೆಯಲ್ಲಿ ಬಟ್ಟೆಗಳಿಗೆ ಇಸ್ತ್ರೀ ತಿಕ್ಕುತ್ತಿದ್ದ ಅಪ್ಪ ಅಜ್ಜಿಯ ಕೊನೆಯ ಎರಡು ಹಾಡುಗಳಿಗೆ ಹಣೆಹಣೆ ಚಚ್ಚಿಕೊಳ್ಳುತ್ತಿದ್ದ!! ಅಪ್ಪನ ವರ್ತನೆಯಿಂದ ನಾವು ಚಕಿತಗೊಳ್ಳುತ್ತಿದ್ದೆವು. ಅದಕ್ಕೆ ಕಾರಣ ತಿಳಿಯದು. ನಮಗೋ ಎಡಿಯ ಹಾಡು ಯಾವಾಗ ಬಂದೀತೋ ಎಂಬ ತವಕ. ಅದು ಮುಗಿಯುವುದೇ ತಡ ಚಂಗನೆ ಹಾರಿ ಎರಡೇ ಹೆಜ್ಜೆಯಲ್ಲಿ ಅಂಗಳದಲ್ಲಿರುತ್ತಿದ್ದೆವು!! 

ತಲೆಯೆತ್ತಿದರೆ ಶುಭ್ರ ಆಗಸದಲಿ ಮೆಲ್ಲನೆ ತೇಲುವ  ಬೆಳ್ಳಿ ಮೋಡಗಳು, ಅದರ ಕೆಳಗೆ ರೆಕ್ಕೆಬಿಚ್ಚಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿ – ಪಕ್ಷಿಗಳು, ಎಲ್ಲೆಡೆ ಚೆದುರಿದ ಹೊಂಬಿಸಿಲು, ಮೈ ಮನಕೆ ತಂಪುಣಿಸುವ ಸುಳಿಗಾಳಿ………,ಅದೊಂದು ಅದ್ಭುತ ಅನುಭೂತಿಗೆ  ಸಾಕ್ಷಿಯಾಗುತ್ತಿದ್ದವು!!

ನನಗೆ ದೇವರ ಬಗ್ಗೆ ಅದಮ್ಯ ಕುತೂಹಲ ಪ್ರಾರಂಭವಾದದ್ದು ಸುಮಾರು ಹತ್ತು- ಹನ್ನೊಂದನೆಯ  ವಯಸ್ಸಿನಲ್ಲಿ. ನಾನಾಗ ಐದನೆಯ ತರಗತಿಯಲ್ಲಿದ್ದೆ. ನಮ್ಮ ಓಣಿಯಲ್ಲಿ ನಾನಾ ರೀತಿಯ ಧಾರ್ಮಿಕ ಸಮುದಾಯದ ಜನ ವಾಸವಾಗಿದ್ದರು. ಅವರಲ್ಲಿ ಬಹಳಷ್ಟು ಹುಡುಗಿಯರು ನನ್ನ ಸಹಪಾಠಿಗಳೂ ಆಗಿದ್ದರು. ಸಾಮಾನ್ಯವಾಗಿ ಅವರೆಲ್ಲರ ಊಟ – ಉಡುಗೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಊಟದಲ್ಲಿ ಸಸ್ಯಾಹಾರ – ಮಾಂಸಾಹಾರ ಎಂಬ ಭೇದ ಬಿಟ್ಟರೆ ಮತ್ತಿನ್ಯಾವ ವ್ಯತ್ಯಾಸವೂ ಒಡೆದು ಕಾಣುತ್ತಿರಲಿಲ್ಲ. ಆದರೆ ಅವರು ಪೂಜಿಸುವ ದೇವರಲ್ಲಿ ಅಗಾಧವಾದ ವ್ಯತ್ಯಾಸವಿತ್ತು! ಜುಬೇದಾ, ನೂರಿ, ಮಮತಾಜ್ ‘ ಅಲ್ಲಾಹು ‘ ವನ್ನು ಸ್ಮರಿಸಿ ನಮಾಜ್ ಮಾಡಿದರೆ, ಮಾರ್ಗರೇಟ್, ರೋಮಿ, ಕೃಪಾ   ‘ ‘ಯೇಸು ‘ ವನ್ನು ಕುರಿತು ಪ್ರಾರ್ಥಿಸುತ್ತಿದ್ದರು.ಅವರ ಪೂಜಾ ವಿಧಾನವಾದರೋ ತೀರಾ ತೀರಾ ಸರಳ!! ಇನ್ನುಳಿದವರಲ್ಲಿ ಕೆಲವರು ಶಿವನನ್ನು ಪೂಜಿಸಿದರೆ, ಮತ್ತೆ ಕೆಲವರು ವಿಷ್ಣುವನ್ನು ಪೂಜಿಸುತ್ತಿದ್ದರು. ಮತ್ತೆ ನಮ್ಮ ಓಣಿಯ ದೊಡ್ಡ ಸಮುದಾಯವಾದ ನೇಕಾರರಲ್ಲಿ ಕೆಲವರು ಬನಶಂಕರಿಯನ್ನು ಪೂಜಿಸಿದರೆ ಕೆಲವರು ಮಾರ್ಕಂಡೇಯ -  ನೀಲಕಂಠನನ್ನು ಪೂಜಿಸುತ್ತಿದ್ದರು. ಊರಿನ ಅಂಚಿನಲ್ಲಿರುವ ಕೆಳವರ್ಗದ ಸಮುದಾಯ ದ್ಯಾಮವ್ವ, ದುರ್ಗಮ್ಮ, ಮಾರೆಮ್ಮ…, ಮೊದಲಾದ ಹೆಣ್ಣು ದೇವತೆಗಳನ್ನು ಪೂಜಿಸುತ್ತಿದ್ದರು. ಇವರೆಲ್ಲರ ಪೂಜಾ ವಿಧಾನಗಳಲ್ಲಿ ಮೇಲ್ನೋಟಕ್ಕೆ ಸಾಮ್ಯತೆ ಕಂಡು ಬಂದರೂ ಆಚಾರ – ವಿಚಾಗಳಲ್ಲಿ ಭಿನ್ನತೆ ಇದ್ದೇ ಇತ್ತು. ಹಾಗಾದರೆ ದೇವರು ಒಬ್ಬನೇ, ಅವನೇ ಈ ಜಗದ ಸೃಷ್ಟಿಕರ್ತ ಎಂದ ಗುರುಗಳ ಮಾತಿಗೆ ಅರ್ಥವೇನು?!! ಎಂದು ತಬ್ಬಿಬ್ಬಾಗುತ್ತಿತ್ತು!!  ಮನೆಯಲ್ಲಿ ಹಿರಿಯರನ್ನು ಕೇಳಲಿಕ್ಕೆ ಭಯ. ಕುತೂಹಲವನ್ನೋ ತಡೆಯಲಾಗುತ್ತಿಲ್ಲ. ನಾನು ನನ್ನ ಕುತೂಹಲವನ್ನು ತಣಿಸಿಕೊಳ್ಳಲು ಗೆಳತಿಯರೊಂದಿಗೆ ಮಸೀದಿ, ಚರ್ಚುಗಳಿಗೆ ಹೋಗತೊಡಗಿದೆ . ವಿಶಾಲವಾದ ಚರ್ಚಿನಲ್ಲಿ ಮಹಿಳೆಯರೂ , ಪುರುಷರೂ ಕುಳಿತುಕೊಳ್ಳಲು ಡೆಸ್ಕುಗಳನ್ನು ಹಾಕಿದ್ದರು. ಮುಂದೆ ತುಸು ಎತ್ತರದ ವೇದಿಕೆಯ ಮೇಲೆ ಪಾದ್ರಿಯೊಬ್ಬರು ಮೈಕ್ ಮುಂದೆ ನಿಂತು ಸ್ವಲ್ಪ ಸಮಯ ಪ್ರವಚನ ನೀಡಿದರು. ನಂತರ ಎಲ್ಲರೂ ಸಂಗೀತ ವಾದ್ಯಗಳ ಜೊತೆಗೆ ಸುಶ್ರಾವ್ಯವಾಗಿ ಯೇಸುವಿನ ಹಾಡುಗಳನ್ನು ಹಾಡಿ ಅವರವರ ಮನೆಗಳಿಗೆ ತೆರಳಿದರು. ವಿಶಾಲವಾದ ಮಸೀದಿಯಲ್ಲಿ ಒಬ್ಬ ಮುಲ್ಲಾರ ಮುಂದಾಳತ್ವದಲ್ಲಿ ಬರೀ ಪುರುಷರಷ್ಟೇ ನಮಾಜು ಮಾಡಿ ಅವರವರ ಮನೆ ದಾರಿ ಹಿಡಿದರು. ನನಗೆ ಇವರ ಪೂಜಾ ಕ್ರಮದ ತಲೆಬುಡ ಒಂದೂ ತಿಳಿಯಲಿಲ್ಲ, ಆದರೆ ಇವರ ಪೂಜಾ ವಿಧಾನ  ನಮ್ಮದಕ್ಕಿಂತ ತೀರಾ ಭಿನ್ನ ಮತ್ತು ಸರಳ ಎಂಬುದು ಮಾತ್ರ ಖಾತ್ರಿಯಾಯಿತು.

ಕಟ್ಟಾ ಶಿವ ಭಕ್ತರಿಂದ ತುಂಬಿದ ನಮ್ಮ ಕುಟುಂಬದಲ್ಲಿ ಮನೆ ದೇವರನ್ನಾಗಿ ‘ ವೀರಭದ್ರ ‘ ನನ್ನು ಪೂಜಿಸುತ್ತಿದ್ದರು. ಶ್ರಾವಣ ಬಂತೆಂದರೆ ತೀರಿತು. ಮನೆಯಲ್ಲಿ, ದೇವಾಲಯಗಳಲ್ಲಿ ವೀರಭದ್ರ ದೇವರಿಗೆ ನಾನಾ ಬಗೆಯ ಪೂಜೆಯೇ ಪೂಜೆ! ತುಂಬಾ ಉಗ್ರ ದೇವರೆಂದು ಬಹಳಷ್ಟು ಮಡಿಹುಡಿ, ನೇಮನಿತ್ಯ ಮಾಡುತ್ತಿದ್ದರು. ವಿಶೇಷವೆಂದರೆ ಹೆಣ್ಣುಮಕ್ಕಳೂ ಪೂಜೆಯಲ್ಲಿ ಪಾಲ್ಗೊಳ್ಳುವುದು. ಮನೆಯಲ್ಲಿ ವಿವಾಹ ಕಾರ್ಯ ನಡೆದರೆ ಗುಗ್ಗಳವನ್ನು ಹೊಂಡಿಸುತ್ತಿದ್ದರು. ಕಾಶೀ ಕಟ್ಟಿದ ಪುರವಂತರು ವಿಶೇಷ ವೇಷಭೂಷಣ ಹೊತ್ತು, ಕಾಲಲ್ಲಿ ಜಂಗು ಧರಿಸಿ, ಕತ್ತಿ ಹಿರಿದು “ ಆಹಾಹಾ ವೀರಾ ಆಹಾಹಾ ರುದ್ರಾ…..,” ಎಂದು ಆರ್ಭಟಿಸುತ್ತ ರುದ್ರ ತಾಂಡವ ಲಯದಲ್ಲಿ ಧಿಗಿಧಿಗಿ ಕುಣಿಯುತ್ತಿದ್ದರೆ ಚಿಕ್ಕ ಮಕ್ಕಳ ಚಡ್ಡಿ ಒದ್ದೆಯಾಗುತ್ತಿತ್ತು!! ಆಗೆಲ್ಲಾ ನಾನಂತೂ ಅಮ್ಮನ ಹಿಂದೆ ಬಚ್ಚಿಟ್ಟುಕೊಂಡೇ ಗುಗ್ಗಳವನ್ನು ನೋಡುತ್ತಿದ್ದೆ!! ಯಾರಿಗಾದರೂ ಶಸ್ತ್ರ ಹಾಕುವಾಗ ಹೆದರಿ ಗಟ್ಟಿಯಾಗಿ ಕಣ್ಣುಮುಚ್ಚಿಕೊಳ್ಳುತ್ತಿದ್ದೆ! ಸ್ವತಃ ನಮ್ಮ ದೊಡ್ಡಪ್ಪನೇ ಕಾಶೀಕಟ್ಟಿ ಆರ್ಭಟಿಸಿದಾಗ ಮರುದಿನ ಅವರನ್ನು ಮಾತನಾಡಿಸುವುದಿರಲಿ, ನೋಡಲೂ ಭಯಪಡುತ್ತಿದ್ದೆ! ಸ್ವಭಾವತಃ ಶಾಂತ – ಮೃದು ಮನಸ್ಸಿನವರಾದ ಅಣ್ಣಂದಿರೂ ( ದೊಡ್ಡಪ್ಪನ ಮಕ್ಕಳು ) ಕಾಶಿಕಟ್ಟಿ ರೌದ್ರ ನರ್ತನ ಮಾಡುವಾಗ ಆಘಾತಗೊಳ್ಳುತ್ತಿದ್ದೆ!! ಇವೆಲ್ಲದರ ನಡುವೆ ದೈವ ಕಲ್ಪನೆ ಮೂಡುತ್ತಿದ್ದ ನನಗೆ ನನ್ನ ಗೆಳತಿಯರ ದೈವಭಕ್ತಿ, ಪೂಜಾಕ್ರಮ ಅಚ್ಚರಿ ಮೂಡಿಸುತ್ತಿತ್ತು! ಇದಕ್ಕಿಂತಲೂ ಅಚ್ಚರಿಯ ಸಂಗತಿಯೊಂದು ನಮ್ಮ ಮನೆಯಲ್ಲೇ ಗಮನಕ್ಕೆ ಬರತೊಡಗಿತು. ಅಪ್ಪ ಇಂಥ ಯಾವುದೇ  ಕಲಾಪಗಳಲ್ಲಿ ಪಾಲ್ಗೊಳ್ಳದಿರುವ ಸಂಗತಿ ಮನೆಯಲ್ಲಿ ಆಗಾಗ ಬಿಸಿ ವಾತಾವರಣಕ್ಕೆ ಕಾರಣವಾಗುತ್ತಿತ್ತು. ಅಪ್ಪ ಯಾವ ಗುಡಿಗುಂಡಾರಗಳಿಗೂ ಹೋಗುತ್ತಿರಲಿಲ್ಲ. ಯಾವುದೇ ಗುಗ್ಗಳ ಕಾರ್ಯದಲ್ಲೂ ಪಾಲ್ಗೊಳ್ಳುತ್ತಿರಲಿಲ್ಲ. ಅಷ್ಟು ಮಾತ್ರವಲ್ಲ, ಅಪ್ಪ ಪ್ರತಿದಿನ ಇಷ್ಟಲಿಂಗ ಪೂಜೆಯನ್ನೂ ಮಾಡಿಕೊಳ್ಳುತ್ತಿರಲಿಲ್ಲ!! ಅಪ್ಪನ ದೇವರನ್ನು ಅಮ್ಮನೇ ಜಗುಲಿಯ ಮೇಲಿಟ್ಟು ಪೂಜಿಸುತ್ತಿದ್ದಳು. ಅಪ್ಪನ ಕರಡಿಗೆ ಯಾವಾಗಲೂ ದೇವರ ಮನೆಯಲ್ಲಿನ ಗೂಟಕ್ಕೆ ನೇತಾಡುತ್ತಿರುತ್ತಿತ್ತು!! ಅಮ್ಮನಿಗೆ ಇದೊಂದು ನುಂಗಲಾರದ ತುತ್ತಾಯಿತು. ಅಜ್ಜಿ ಅಸಹನೆಯಿಂದ ಸಿಡುಕುತ್ತಿದ್ದಳು. ಅಪ್ಪ ಮಾತ್ರ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ತನ್ನ ಲೋಕದಲ್ಲಿ ತಾನಿದ್ದ.  ಬೆಳಿಗ್ಗೆಯೇ ಮಿಲ್ಲಿಗೆ ಹೋದರೆ ತಿರುಗಿ ಬರುವುದು ಮಧ್ಯಾಹ್ನದ ನಂತರವೇ. ಬಂದವನೇ ಜಳಕ, ಊಟದ ಕಲಾಪಗಳನ್ನು ಮುಗಿಸಿ,  ಒಂದು ಅರ್ಧಗಂಟೆ ವಿಶ್ರಮಿಸಿಕೊಂಡು ಗರಿಗರಿಯಾದ ಅಂಗಿ, ಪೈಜಾಮ್ ತೊಟ್ಟು ಬೆಟಗೇರಿಯ  ಅಂಚಿನಲ್ಲಿರುವ ಕಿತ್ತೂರು ಚನ್ನಮ್ಮ ಉದ್ಯಾನವನದ ಮಧ್ಯೆ  ವಿರಾಜಮಾನವಾಗಿರುವ ವಾಚನಾಲಯಕ್ಕೆ ಹೋಗುತ್ತಿದ್ದ, ಜೊತೆಗೆ ನನ್ನನ್ನೂ ಕರೆದೊಯ್ಯುತ್ತಿದ್ದ. ಲೈಬ್ರರಿಯಲ್ಲಿ ಮಕ್ಕಳಿಗಾಗೇ ಮೀಸಲಿರುವ ಟೇಬಲ್ ಕುರ್ಚಿಯ ಬಳಿ ಕರೆದೊಯ್ದು ಚಿಣ್ಣರಿಗಾಗೇ ಇಟ್ಟ ಪುಸ್ತಕಗಳನ್ನು ಟೇಬಲ್ ಮೇಲೆ ಹರಡಿ “ ಇಲ್ಲಿ ಕುಂತು ಓದು “ ಎಂದು ನುಡಿದು ತಾನು ದಪ್ಪದಪ್ಪ ಪುಸ್ತಕಗಳಲ್ಲಿ ಕಳೆದು ಹೋಗುತ್ತಿದ್ದ. ಅಪ್ಪ ಓದಿನಲ್ಲಿ ಎಷ್ಟು ತನ್ಮಯನಾಗಿರುತ್ತಿದ್ದನೆಂದರೆ ಅವನ ಮೇಲೆ ಹಾವು, ಚೇಳುಗಳು ಹರಿದಾಡಿದರೂ ಖಬರು ಇರದಷ್ಟು!! ಮನೆಯಲ್ಲಿ ಅಜ್ಜಿ “ ಇಂವಾ ಆ ಸುಡುಗಾಡ ಲೈಬ್ರಿಗೆ ಹೋಗಿ  ಕೆಟ್ಟಾ “  ಎಂದು ಗೋಳಾಡುತ್ತಿದ್ದಳು. ಆಗೆಲ್ಲಾ ಅವ್ವ ಮೌನಿ……..,

ಅಜ್ಜಿ ಸವದತ್ತಿ ಎಲ್ಲಮ್ಮನ ಕಟ್ಟಾ ಭಕ್ತೆಯಾಗಿದ್ದಳು. ಸೀಗೆ ಹುಣ್ಣಿಮೆಯಿಂದ ಭಾರತ ಹುಣ್ಣಿಮೆಯವರೆಗೆ ವರ್ಷದಲ್ಲಿ ಐದು ಹುಣ್ಣಿಮೆ ತಪ್ಪದೆ ಎಲ್ಲಮ್ಮನ ಗುಡ್ಡಕ್ಕೆ ಹೋಗಿ ಬರುತ್ತಿದ್ದಳು. ಅಲ್ಲದೇ ಗದುಗಿನ ಹೃದಯ ಭಾಗದಲ್ಲಿರುವ ತೋಂಟದಾರ್ಯ ಮಠದಲ್ಲಿ ಪ್ರತಿ ಸೋಮವಾರ ನಡೆಯುವ ಶಿವಾನುಭವ ಗೋಷ್ಠಿಗೂ ಹೋಗುತ್ತಿದ್ದಳು.ನನ್ನನ್ನೂ ತಪ್ಪದೇ ಕರೆದೊಯ್ಯುತ್ತಿದ್ದಳು. ತೋಂಟದಾರ್ಯ ಮಠದಲ್ಲಿ ಹಿಂದಿನ ಸ್ವಾಮಿಗಳ ಗದ್ದುಗೆ ಮಾತ್ರ ಇತ್ತು. ಅದನ್ನೇ ತುಂಬಾ ಸರಳವಾಗಿ ಪೂಜಿಸುತ್ತಿದ್ದರು. ಅಲ್ಲಿ ಮತ್ತೆ ಯಾವ ಮೂರ್ತಿ ಪೂಜೆಯೂ ಇರಲಿಲ್ಲ. ಗದ್ದುಗೆಯ ಹಿಂದೆ ಗುರುಮಠವಿತ್ತು. ಅಲ್ಲಿಯೇ ಸ್ವಾಮಿಗಳ ವಾಸ್ತವ್ಯ. ಗದ್ದುಗೆಯ ಮುಂದೆ ವಿಶಾಲವಾದ ಅಂಗಳವಿತ್ತು. ಅಲ್ಲಿಯೇ ಶಿವಾನುಭವಗೋಷ್ಠಿ ನಡೆಯುತ್ತಿತ್ತು. ಅಂಗಳದ ತುಂಬಾ ಜನರು ಕಿಕ್ಕಿರಿದು ತುಂಬಿರುತ್ತಿದ್ದರು. ವಚನ ಸಾಹಿತ್ಯದ ಬಗ್ಗೆ ಪ್ರವಚನಗಳಾಗುತ್ತಿದ್ದವು. ಶೂನ್ಯ ಸಂಪಾದನೆಗಳ ಬಗ್ಗೆ ತುಂಬಾ ರಸವತ್ತಾಗಿ ಹೇಳುತ್ತಿದ್ದರು. ಎಷ್ಟೋ ವಚನಗಳಲ್ಲಿ ದೇವಾಲಯಕ್ಕೆ , ಮೂರ್ತಿಪೂಜೆಗೆ ಪ್ರಾಶಸ್ತ್ಯವೇ ಇರಲಿಲ್ಲ!! ಅದನ್ನೆಲ್ಲಾ ತುಂಬಾ ಆಸಕ್ತಿಯಿಂದ ಕೇಳುವ ಅಜ್ಜಿ ಮತ್ತೆ ಮತ್ತೆ ದೇವಾಲಯಗಳಿಗೆ ಎಡತಾಕುತ್ತಿದ್ದಳು!! ಅಜ್ಜಿ ಮಾತ್ರವಲ್ಲ , ಉಳಿದ ಬಹಳಷ್ಟು ಮಂದಿಯ ಕತೆಯೂ ಇದೇ ಆಗಿತ್ತು! ನಾನು ಗೊಂದಲಕ್ಕೆ ಬೀಳುತ್ತಿದ್ದೆ. ಯಾಕೆ ಹೀಗೆ? ಎನಿಸುತ್ತಿತ್ತು. ಇದರ ಬಗ್ಗೆ ವಿವರವಾಗಿ ಕೇಳಬೇಕೆನಿಸುತ್ತಿತ್ತು. ಆದರೆ ಯಾರನ್ನು ಕೇಳುವುದು?  ಅವ್ವನಿಗೆ ಕೇಳಲು ಭಯ! ಅವಳಿಗೆ ಮೊದಲೇ ನಾನು ಅಪ್ಪನೊಂದಿಗೆ ಲೈಬ್ರರಿಗೆ ಹೋಗುವ ವಿಷಯಕ್ಕೆ ಸಿಟ್ಟಿತ್ತು.  “ಮನ್ಯಾಗಿದ್ದು ಕಸಾ, ಮುಸುರಿ, ಒಗ್ಯಾಣಾ ಮಾಡೂದ್ಬಿಟ್ಟು, ಅಡಿಗಿ – ಪಡಿಗಿ, ಹಾಡು – ಹಸೆ ಕಲಿಯೂದ್ಬಿಟ್ಟು ಹೋಕ್ಕಾಳಲ್ಲೆ. ನಾಳೆ ನಿನ್ನ ಗಂಡನ ಮನ್ಯಾಗ ನಮಗ ತಿನ್ನಟ ಬಾಯಾಗ ಇಡ್ತಾರಾ…………”,ಹೀಗೆ ಸಾಗುತ್ತಿತ್ತು ಅವ್ವನ ವರಾತ.  ಅವ್ವ ನಾನು ಲೈಬ್ರರಿಗೆ ಹೋಗದಂತೆ ತಡೆಯಲು ಹರಸಾಹಸ ಪಡುತ್ತಿದ್ದಳು. ನಾನಾದರೋ ಲೈಬ್ರರಿಯಲ್ಲಿನ ಚಂದಮಾಮ, ಬಾಲಮಿತ್ರ, ಬಾಲವಿಜ್ಞಾನ, ವಿಜ್ಞಾನ ಪ್ರಪಂಚ…, ಮುಂತಾದವುಗಳ ರುಚಿಹತ್ತಿ ಸಂಜೆ ಅಪ್ಪ ಬರುವುದನ್ನೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ! ಹೀಗಿರುವಾಗ ಈ ವಿಷಯದ ಬಗ್ಗೆ ಅವಳನ್ನು ಕೇಳಿದರೆ ಎಡವಟ್ಟಾಗುವುದಂತೂ ಖಾತ್ರಿಯೆನಿಸಿತು. ಇನ್ನು ಅಪ್ಪ ಮಾತ್ರ ನನಗೆ ಒದಗಬಲ್ಲವನು. ಹಾಗಾಗಿ ಮರುದಿನ ಎಂದಿನಂತೆ ಲೈಬ್ರರಿಗೆ ಹೊರಟಾಗ ಕೇಳಿದೆ “ ಅಪ್ಪಾ, ಅಜ್ಜಿ ಪೂಜೆ ಮಾಡೂಮುಂದ ಹಾಡೂ ಒಂದ ಹಾಡನ್ಯಾಗ ಮನಷ್ಯಾರ್ನ ಪ್ರಾಣಿ ಪ್ರಾಣಿ ಅಂತಾಳಲ್ಲ ಯಾಕ? ಮನಷ್ಯಾರ ಬ್ಯಾರೆ, ಪ್ರಾಣಿಗೋಳ ಬ್ಯಾರೆ ಹೌದಿಲ್ಲೊ? ಮತ್ಯಾಕ ಅಜ್ಜಿ ಹಂಗ ಕರಿಯೂದು? “ ನನ್ನ ಮಾತಿಗೆ ಅಪ್ಪ ಚಕಿತಗೊಂಡ. ಕ್ಷಣಕಾಲ ನನ್ನನ್ನು ದಿಟ್ಟಿಸಿ ನಸುನಕ್ಕು ತಲೆ ಸವರುತ್ತ ನುಡಿದ “  ಮನಷ್ಯಾರು ಪ್ರಾಣಿಕಿಂತ ಬ್ಯಾರೆ ಹೌದು ಪುಟ್ಟಿ, ಆದ್ರ ಹಿಂದ ಒಂದು ಕಾಲ್ದಾಗ ಪ್ರಾಣಿಗಳಾಗಿದ್ದವ್ರ. ‘ ಮಂಗನಿಂದ ಮಾನವ ‘ ಅನ್ನೂ ಮಾತು ಕೇಳಿಯಿಲ್ಲ ನೀನು? ಪ್ರಜ್ಞೆ ಅನ್ನೂದು ಹುಟ್ಟಿ ಮನಷ್ಯಾರು ಪ್ರಾಣಿಗಳಿಗಿಂತ ಬ್ಯಾರೆ ಆದ್ರೂ ಇನ್ನೂ ಪ್ರಾಣಿ ಗುಣ ಉಳುಕೊಂಡ ಬಿಟ್ಟಾವು. ಅಷ್ಟ ಅಲ್ಲ, ಪ್ರಾಣಿಗೋಳು ಆಹಾರ, ವಸತಿ, ಸಂತಾನೋತ್ಪತ್ತಿ ಸಲುವಾಗಿ ಮಾತ್ರ ಪರಸ್ಪರ ಸ್ಪರ್ಧೆ, ಸಿಟ್ಟು, ಆಕ್ರಮಣಶೀಲತೆ ತೋರಸ್ತಾವು. ಆದ್ರ ಮನಷ್ಯಾರ ಕತೀನ ಬ್ಯಾರೆ ಐತಿ. ಮನಷ್ಯಾ ಜೀವನದ ಅವಶ್ಯಕತೆಗನ್ನ ಪೂರೈಸ್ಕೊಂಡ ಮ್ಯಾಲ ತೆಪ್ಪಗ ಇರೂದ ಬಿಟ್ಟು ಸ್ವಾರ್ಥಿಯಾದ. ದುರಾಸೆ – ಲಂಪಟತನಕ್ಕ ಬಿದ್ದ. ಬೆಕ್ಕಿನ ಹಿಂದಿನ ಬಾಲದ್ಹಂಗ ಇವುಗಳ ಹಿಂದ ಕಾಮ ಕ್ರೋಧಾದಿ ಅರಿಷಡ್ವರ್ಗಗಳು ಅವುನ್ನ ಬೆನ್ನ ಬಿದ್ವು!! ಇದರಿಂದಾಗಿ ತಾನೂ ಹಾಳಾಗಾಕತ್ತ. ತನ್ನ ಸುತ್ತಲಿರೋ ಸಮಾಜ, ಪರಿಸರ……. , ಎಲ್ಲಾನೂ ಹಾಳಮಾಡಾಕುಂತ. ಪ್ರಾಣಿಗಳಿಗಿಂತ ಕಡೆಯಾಗಿ ಹೋದ. ಇದನ್ನ ಕಂಡ ಶರಣರು ‘ ಪ್ರಾಣಿಕಿಂತ ಕಡೆಯಾಗಿ ಬದುಕಬ್ಯಾಡ್ರಪ್ಪ, ಒಂಚೂರು ಮನುಷ್ಯತ್ವ ಇಟ್ಗೊಂಡು ಬದಕ್ರಿ. ಶಿವನ್ನ ಧ್ಯಾನ ಮಾಡಿ ಅರಿಷಡ್ವರ್ಗಗಳಿಂದ ಮುಕ್ತರಾಗಿ ಚಂದಂಗ ಬಾಳೆಮಾಡ್ರಿ’ ಅಂತ ಪದಾ ಕಟ್ಟಿ ಹಾಡಿದ್ರು. ಅಷ್ಟ ಅಲ್ಲ, ಅವ್ರು ತಾವು ಹಾಡಿದಂಗ ಬದುಕಿದ್ರು. ಅವ ಹಾಡ ನಿಮ್ಮಜ್ಜಿ ಹಾಡೂದು.” ಅಪ್ಪ ದೀರ್ಘ ವಿವರಣೆ ನೀಡಿದ! ಅಪ್ಪನ ವಿವರಣೆ ಕೇಳಿ ಅಚ್ಚರಿಯಾಯಿತು. ನನಗೆ ಕಿರಿಕಿರಿ ತಂದ ಅಜ್ಜಿಯ ಹಾಡಿನ ಹಿಂದೆ ಇಷ್ಟೊಂದು ಸಂಗತಿಗಳಿವೆಯೆ? ಎಂದು ವಿಸ್ಮಯವಾಯಿತು! ಇಷ್ಟೆಲ್ಲಾ ವಿವರಣೆ ಕೇಳಿದ ಮೇಲೆ ಇನ್ನೊಂದು ಪ್ರಶ್ನೆಯನ್ನು ಕೇಳಲೋ ಬೇಡವೋ ಎಂಬ ಅನುಮಾನದಲ್ಲಿದ್ದವಳಿಗೆ ಅಪ್ಪ “ ಮತ್ತೇನು ಪುಟ್ಟೀ? “ ಎಂದು ಪ್ರಶ್ನಿಸಿದ. “ ಅದು…..ಅಜ್ಜಿ ಇನ್ನೊಂದು ಹಾಡಿನ್ಯಾಗ ದೇವ್ರನ್ನ ಸಣ್ಣ ಮಕ್ಕಳಂಗ ಪೂಸಿಹೊಡಕೊಂತ ಹಾಡತಾಳಲ್ಲ?!! ದೇವ್ರೇನ್ ಸಣ್ಣ ಪಾಪುನ? “  ಅಳುಕುತ್ತಲೇ ಕೇಳಿದ ಪ್ರಶ್ನೆಗೆ ಅಪ್ಪ ಗಹಗಹಿಸಿ ನಕ್ಕ. ಕೆನ್ನೆ ತಟ್ಟಿ “ ನಂಪುಟ್ಟಿ ತಲ್ಯಾಗ ಬಾಳಬಾಳ ವಿಚಾರಾ ಬರಾಕತ್ತಾವಲ್ಲ!! “ ಎಂದು  ಕಣ್ಣರಳಿಸಿ “ ಇದ್ರಾಗೇನ್ ತಪ್ಪ ಕಂಡಿ ಪುಟ್ಟಿ? ಮಕ್ಕಳು ದೇವ್ರಿದ್ದಂಗ. ಮಕ್ಕಳ ಮನಸ್ಸಿನ್ಯಾಗ ‘ ನಾನು – ನಂದು ‘ ಅನ್ನೂ ಪ್ರಜ್ಞೆ ಹುಟ್ಟೂಮಟಾ ಅವು ದೇವ್ರ ಸಮಾನ. ಕಾರಣ ಇಲ್ದ ಆನಂದ ಪಡತಾವು, ಎಲ್ಲಾರ್ನೂ ಒಂದ ರೀತಿ ನೋಡತಾವು. ಯಾವದ ಸ್ವಾರ್ಥ – ಕಪಟ ಆ ಮಕ್ಕಳ ಮನಸ್ಸಿನ್ಯಾಗ ಇರೂದಿಲ್ಲ. ನಾನು – ನಂದು ಅನ್ನೂ ಪ್ರಜ್ಞೆ ಯಾವಾಗ ಆ ಮಕ್ಕಳ ಮನಸ್ಸಿನ್ಯಾಗ ಹುಟ್ಟಿತೋ ಆವಾಗ ಮನುಷ್ಯಾರ ಲೆಕ್ಕದಾಗ ಜಮಾ ಆಕ್ಕಾವು!! ಅದಕ ನಿಮ್ಮಜ್ಜಿ ದೇವ್ರು – ಮಕ್ಕಳು ಒಂದ ಅಂದ್ಕೊಂಡು ಹಾಡಿರ್ತಾಳಾ.” ಅಪ್ಪನ ವಿವರಣೆ ಸರಿ ಎನಿಸಿತು. ಆದರೆ ಅಪ್ಪ ಅಂದು ಅಜ್ಜಿ ಪೂಜೆಯ ಕೊನೆಗೆ ಹಾಡಿದ ಎರಡು ಹಾಡುಗಳಿಗೆ ಹಣೆ ಚಚ್ಚಿಕೊಂಡದ್ದೇಕೆ? ಎಂದು ತಿಳಿಯಲಿಲ್ಲ. “ ಮತ್ತ ಅವತ್ತು ಅಜ್ಜಿ ಪೂಜೆ ಮಾಡಬೇಕಾರ ಹಾಡಿದ್ಲಲ್ಲ ಕಡೇ ಎರಡ ಹಾಡು, ಕಡಕೋಳಜ್ಜ- ಶರೀಫಜ್ಜನ ಹಾಡು, ಆ ಹಾಡುಗೂಳ್ಗೆ ಯಾಕಪ್ಪಾ ನೀನು ಹಣಿಹಣಿ ಬಡಕೊಂಡಿ?!” ನನ್ನ ಪ್ರಶ್ನೆಗೆ ಅಪ್ಪ ಚಕಿತಗೊಂಡ. “ ಏನೆಲ್ಲಾ ಗಮನಸ್ತಿ ಪುಟ್ಟಾ ನೀನು!!” ಎಂದು ಮೃದುವಾಗಿ ಕೆನ್ನೆ ಹಿಂಡುತ್ತ ನುಡಿದ   “ನಿಮ್ಮಜ್ಜಿ ಹಾಡೋ ಆ ಎರಡ ಹಾಡುಗಳ ಆಶಯ ಭಾಳ ಸರಳದ ಪುಟ್ಟಾ, ಮನುಷ್ಯಾ ತನ್ನ ಅಂತರಂಗವನ್ನ ಶುದ್ಧವಾಗಿಟ್ಕೊಂಡು, ನೈತಿಕ ಎಚ್ಚರದಿಂದ ಬದಕಿದ್ರ ಅದ ದೇವ್ರ ಪೂಜೆ ಅಂತ ಹೇಳ್ತಾರಾ ಆ ಇಬ್ರೂ ಅಜ್ಜಾರು. ಆದ್ರ ನಿಮ್ಮಜ್ಜಿ ಹೂವಾ– ಪತ್ರಿ, ಧೂಪಾ- ದೀಪಾ, ಹಾಡು – ಹಸೆ, ಮಡಿ – ಹುಡಿ – ಎಡಿ……, ಅಂತ ನೂರಾ ಎಂಟ ರಗಳಿ ಹಚ್ಗೊಂಡು ಎರಡ ತಾಸಗಟ್ಟಲೆ ಪೂಜಿ ಮಾಡಿ, ಕಡೀಕ ಆ ಹಾಡ ಹಾಡೀದ್ರ ಆಭಾಸ ಅನಸ್ತು. ಅದ್ಕ ಹಂಗ ಮಾಡ್ದೆ.” ಸ್ವಲ್ಪ ಹೊತ್ತು  ಮೌನವಾಗಿ ಸ್ವಗತದಲ್ಲೆಂಬಂತೆ ಮತ್ತೆ ಹೇಳಿದ “ ಆದ್ರೂ ನಾ ಹಂಗ ಮಾಡಬಾರ್ದಾಗಿತ್ತು ಪುಟ್ಟಾ, ದೇವ್ರ ಪೂಜೆ ವಿಷಯದಾಗ ಯಾರ್ಯಾರ ಸ್ವಾತಂತ್ರ್ಯ ಅವ್ರಿಗೆ ಇದ್ದ ಇರತೈತಿ. ಅದನ್ನ ಟೀಕೆ – ಟಪ್ಪಣಿ ಮಾಡೂದು ಸರಿಯಲ್ಲ, ನೀ ಇದನ್ನ ಮನಸ್ಸನ್ಯಾಗಿಂದ ತಗದ ಹಾಕಿಬಿಡು “ ಎನ್ನುತ್ತ ವಾಚನಾಲಯದ ಒಳಹೊಕ್ಕ.